ಗುಹಾ ವಾಸ್ತುಶಿಲ್ಪ

ಕಲ್ಲು ಬಂಡೆಗಳಿಂದ ಕೂಡಿದ ಬೆಟ್ಟಗಳಲ್ಲಿ ಸ್ವಾಭಾವಿಕ ವಾಗಿಯೋ ಇಲ್ಲ ಮಾನವ ನಿರ್ಮಿತವಾಗಿಯೋ ಬಂಡೆಗಳ ಒಳಗಡೆ ಇರುವ ಸ್ಥಳವೇ ಗುಹೆ. ದೊಡ್ಡ ಬಂಡೆಯ ಅಥವಾ ಬೆಟ್ಟದ ಕಡಿದಾದ ಮುಖದಲ್ಲಿ ಒಳಭಾಗಕ್ಕೆ ತೋರುವ ಆವರಣವನ್ನೂ ಗುಹೆ ಎನ್ನುವರು. ವಾಸ್ತು ಎಂಬ ಪದ ಮಾನವನಿರ್ಮಿತ ಕೃತಿಗಳಿಗೆ ಮೀಸಲಾಗಿರುವುದರಿಂದ ಗುಹಾ ವಾಸ್ತು ಸಹ ಕೃತಕ ರಚನೆಗಳಿಗೆ ಮಾತ್ರ ಅನ್ವಯಿಸುತ್ತದೆ. ತಂತ್ರ ಮತ್ತು ಉದ್ದಿಶ್ಯದಲ್ಲಿ ಗುಹಾವಾಸ್ತುವನ್ನೇ ಹೋಲುವ ಕೆಲವು ಕೃತಿಗಳನ್ನು, ಅವು ಸ್ವರೂಪದಲ್ಲಿ ಒಳ ಆವರಣವುಳ್ಳ ಗುಹೆಗಳನ್ನು ಹೋಲದಿದ್ದರೂ ಇದೇ ಪದದ ಚೌಕಟ್ಟಿನಲ್ಲಿ ಅಳವಡಿಸುವುದು ಕಲಾ ಇತಿಹಾಸತಜ್ಞರ ರೂಢಿ. ಈ ವಿಸ್ತೃತ ಅರ್ಥವನ್ನು ಒಳಗೊಳ್ಳುವಂತೆ ಗುಹಾ ವಾಸ್ತ್ತುವೆಂದರೆ ಶಿಲೆಯಲ್ಲಿ ಕಂಡರಿಸಿದ ವಾಸ್ತು ಎಂದು ಪರ್ಯಾಯವಾಗಿ ಪರಿಗಣಿಸುವ ವಾಡಿಕೆ ಈಚೆಗೆ ಬೆಳೆದಿದೆ.

ಗುಹಾ ವಾಸ್ತು ರಚನಾತಂತ್ರ ಕಟ್ಟಡ ರಚನಾತಂತ್ರಕ್ಕೆ ವ್ಯತಿರಿಕ್ತವಾದದ್ದು. ಕಟ್ಟಡ ನಿರ್ಮಾಣದಲ್ಲಿ ಬಿಡಿ ವಸ್ತುಗಳನ್ನು ಪೂರ್ವ ನಿಷ್ಕರ್ಷಿತ ವಿನ್ಯಾಸದಲ್ಲಿ ಜೋಡಿಸಿ ಒಂದು ಇಡೀ ರಚನೆಯನ್ನಾಗಿಸುವ ತಂತ್ರವಿದ್ದರೆ, ಗುಹಾ ವಾಸ್ತುವಿನಲ್ಲಿ ಇಡಿಯಾದ ಒಂದು ಬಂಡೆಯನ್ನು ಛೇದಿಸಿ ಆವರಣವನ್ನು ಸೃಷ್ಟಿಸುವುದು ಪದ್ಧತಿ. ಮೊದಲನೆಯದರ ಮೂಲಸೂತ್ರ ಸಂಕಲನ, ಎರಡನೆಯದರದು ವ್ಯವಕಲನ. ಗುಹಾ ವಾಸ್ತು ಈ ದೃಷ್ಟಿಯಿಂದ ಶಿಲ್ಪತಂತ್ರಕ್ಕೆ ಸಮೀಪವಾಗಿದೆ. ಛೇದನ ಕ್ರಿಯೆ ಎರಡರಲ್ಲೂ ಸಾಮಾನ್ಯ. ಆದರೆ ಶಿಲ್ಪದಲ್ಲಿ ಈ ಕ್ರಿಯೆಯ ಪರಿಣಾಮ ಘನ; ಗುಹಾ ವಾಸ್ತುವಿನಲ್ಲಿ ಇದು ಶೂನ್ಯಾವರಣ. ಈ ವಿಕೃತ ಸಂಬಂಧದಿಂದಾಗಿ ಗುಹಾ ವಾಸ್ತುವನ್ನು ಋಣವಸ್ತು ಅಥವಾ ಋಣಶಿಲ್ಪ ಎಂದು ಕರೆಯುವುದು ರೂಢಿ.

ಗುಹಾ ವಾಸ್ತು ಕೃತಿಗಳಲ್ಲಿ ಇತರ ವಾಸ್ತುಗಳಲ್ಲಿರುವಂತೆಯೇ ಒಳ ಆವರಣವಿದ್ದರೂ ಮುಮ್ಮುಖವೊಂದನ್ನು ಬಿಟ್ಟು ಬೇರೆ ಹೊರಮೈಯ ಅಭಾವವಿರುವುದರಿಂದ, ಶಿಲ್ಪಾಲಂಕರಣವೆಲ್ಲ ಒಳ ಮತ್ತು ಮುಮ್ಮುಖಗಳಿಗಷ್ಟೇ ಸೀಮಿತವಾಗುತ್ತದೆ. ಈ ಶಿಲ್ಪಗಳು ಗುಹಾ ವಾಸ್ತುವಿನ ಮುಖ್ಯ ಉದ್ದಿಶ್ಯವಾದ ಒಳ ಆವರಣಕ್ಕೆ ಬಾಧೆಯಾಗದಂತೆ ಇರಬೇಕಾಗಿರುವುದರಿಂದ, ಗುಹಾ ವಾಸ್ತುವಿನಲ್ಲಿ ಶಿಲ್ಪವಿದ್ದರೆ ಅದು ಅಲಂಕರಣವಾಗಿ ಸಹಯೋಗಿಯಾಗಿ ಮಾತ್ರ ಇರುತ್ತದೆ.

ಗುಹೆಗಳು ಶಿಲಾಯುಗದ ಕಾಲದಿಂದಲೇ ಮಾನವನ ವಾಸಸ್ಥಾನಗಳಾಗಿದ್ದರೂ ಈ ರೂಢಿಗೂ ಗುಹಾ ವಾಸ್ತುವಿಗೂ ಯಾವ ಸಂಬಂಧವೂ ಇಲ್ಲ. ಗುಹಾ ವಾಸ್ತುವನ್ನು ರಚಿಸಲು ಗಟ್ಟಿಕಲ್ಲನ್ನು ಛೇದಿಸಬೇಕಾದರೆ ಲೋಹದ ಆಯುಧಗಳು ಆವಶ್ಯಕವಾಗುತ್ತವೆ. ಲೋಹದ ಜ್ಞಾನ ಬೆಳೆದದ್ದು ಮಾನವನ ಇತಿಹಾಸದಲ್ಲಿ ಕೇವಲ ಸು.5,000 ವರ್ಷಗಳ ಹಿಂದೆ; ಆ ಹೊತ್ತಿಗೆ ಮಾನವ ಸಮಾಜದ ವ್ಯವಸ್ಥೆ ಶಿಲಾಯುಗದ ಸ್ಥಿತಿಯಿಂದ ಬಹಳಷ್ಟು ಬದಲಾಗಿ ಗ್ರಾಮ ಮತ್ತು ನಗರಗಳು ಬೆಳೆದಿದ್ದು, ಗುಹಾವಾಸ ಪದ್ಧತಿ ನಾಗರಿಕ ಸಮಾಜದಲ್ಲಿ ತೊರೆದುಹೋಗಿದ್ದಿತಲ್ಲದೆ, ನವಸಮಾಜವ್ಯವಸ್ಥೆಗೆ ಅನುಕೂಲವಾಗುವ ಅನೇಕ ರೀತಿಯ ಹೊಸ ವಾಸ್ತು ಪದ್ಧತಿಗಳು ಬಳಕೆಗೆ ಬಂದಿದ್ದುವು. ಸಹಜವಾಗಿ ಈ ಕಾಲದಲ್ಲಿ ಪ್ರಾರಂಭವಾದ ಗುಹಾ ವಾಸ್ತುವೂ ರೂಪ, ಉದ್ದಿಶ್ಯಗಳಲ್ಲಿ ತತ್ಕಾಲೀನ ರಚನಾವಾಸ್ತುವನ್ನೇ ಅನುಸರಿಸುತ್ತದೆ.

ಪ್ರಪಂಚ

ಬದಲಾಯಿಸಿ

ಈಜಿಪ್ಟ್‌ ದೇಶದಲ್ಲಿ ಸುಲಭವಾಗಿ ಕೊರೆಯಲು ಅನುಕೂಲವಾದ ಬಂಡೆಗಳು ಇದ್ದು, ಲೋಹದ ಉಪಯೋಗವೂ ಬಹು ಮುಂಚೆ ಹರಡಿದ್ದುದರಿಂದ ಪ್ರಪಂಚದ ಮೊಟ್ಟಮೊದಲ ಗುಹಾ ವಾಸ್ತು ಕೃತಿಗಳೆಲ್ಲ ಈ ದೇಶದಲ್ಲಿ ಇವೆ. ಈ ಪ್ರಾಚೀನ ಕೃತಿಗಳೆಲ್ಲ ಸಮಾಧಿಗಳು. ತತ್ಪೂರ್ವ ನಾಗರಿಕ ಸಮಾಜದಲ್ಲಿ ಛೇದನದಿಂದ ನಿರ್ಮಿಸಲಾದ ಆವರಣದ ಉಪಯೋಗ ಶವಸಂಸ್ಕಾರಕ್ಕೆ ಮಾತ್ರ ಮೀಸಲಾಗಿತ್ತು. ಹೆಣ ಹೂಳಲು ಗಟ್ಟಿ ನೆಲದಲ್ಲಿ ಹಳ್ಳಗಳನ್ನು ತೋಡುತ್ತಿದ್ದ ಪದ್ಧತಿ ನ್ಯೂಬಿಯ, ಫಯೂಮ್ ಮುಂತಾದೆಡೆಗಳಲ್ಲಿ ಪ್ರ.ಶ.ಪು. 4ನೆಯ ಸಹಸ್ರಮಾನದಲ್ಲೆ ಇತ್ತು. ಈ ಛೇದಿತ ಶವಗುಳಿಗಳೇ ಈಜಿಪ್ಟಿನ ಗುಹಾ ವಾಸ್ತುವಿನ ಮೊದಲ ಘಟ್ಟವಾಗಿರಬಹುದೆಂದು ಈ ಎರಡೂ ರೀತಿಯವುಗಳ ಉದ್ದಿಶ್ಯ ಶವಸಂಸ್ಕಾರವೇ ಆಗಿರುವುದರಿಂದ ಊಹಿಸಬಹುದಾಗಿದೆ. ಗುಹಾ ವಾಸ್ತು ರಚನೆ ಸಾಮಾನ್ಯ ಸಮಾಧಿಗಳಿಗಿಂತ ಹೆಚ್ಚು ಶ್ರಮದಾಯಕವೂ ಅಧಿಕ ವೆಚ್ಚದ್ದೂ ಆದ್ದರಿಂದ ಇಂಥ ಕೃತಿಗಳು ರಾಜನ ಅಥವಾ ಶ್ರೀಮಂತ ಆಸ್ಥಾನಿಕರ ಸ್ವತ್ತಾಗಿದ್ದುವು. ಜೊತೆಗೆ ಮೃತನಾದವನು ಬದುಕಿದ್ದಾಗ ಇಹದಲ್ಲಿ ಅನುಭವಿಸುತ್ತಿದ್ದ ಸಮಸ್ತ ಅನುಕೂಲಗಳೂ ಇಲ್ಲಿಯ ರೀತಿಯ ವಾಸಸ್ಥಾನವೂ ಮರಣಾನಂತರವೂ ಅವನಿಗೆ ಬೇಕಾಗುತ್ತವೆ ಎಂಬ, ತತ್ಕಾಲೀನ ಈಜಿಪ್ಟಿನಲ್ಲಿ ಹರಡಿದ್ದ, ಮರಣೋತ್ತರ ಸ್ಥಿತಿಯನ್ನು ಕುರಿತು, ನಂಬಿಕೆಗಳು ಗುಹಾ ವಾಸ್ತುರಚನೆಯನ್ನು ಪ್ರೋತ್ಸಾಹಿಸಿದವು. ಈ ಸಂಪ್ರದಾಯ ಪ್ರ್ರ.ಶ.ಪು.ಸು.6ನೆಯ ಶತಮಾನದವರೆಗೂ ಅಲ್ಲಿ ನಡೆದು ಬಂದದ್ದಲ್ಲದೆ, ಇದರ ಪ್ರಭಾವ ಸುತ್ತಲಿನ ದೇಶಗಳಿಗೂ ಹರಡಿ ಗುಹಾ ವಾಸ್ತು ರಚನೆಗೆ ಉತ್ತೇಜನ ದೊರೆಯಿತು. ಆಫ್ರಿಕ ಮತ್ತು ಏಷ್ಯದ ಹಲವೆಡೆಗಳಲ್ಲಿ ಈ ಗುಹಾ ವಾಸ್ತು ಸಂಪ್ರದಾಯ ಪ್ರ್ರ.ಶ. 16-17ನೆಯ ಶತಮಾನದವರೆಗೂ ನಡೆದು ಬಂತು. ಆದರೆ ಕ್ರಮೇಣ ಗುಹಾ ವಾಸ್ತು ಸಮಾಧಿಗಳಿಗಷ್ಟೇ ಮೀಸಲಾಗದೆ, ದೇಶ ಕಾಲ ಪ್ರಭಾವದಿಂದಾಗಿ ಇತರ ಅನೇಕ ಧಾರ್ಮಿಕ ಅವಶ್ಯಕತೆಗಳಿಗೂ ಬಳಕೆಯಾಯಿತು.

ಗುಹಾ ವಾಸ್ತುವಿನಲ್ಲಿ ಅತ್ಯಂತ ಪ್ರಾಚೀನವಾದ ಕೃತಿ (ಪ್ರ್ರ.ಶ.ಪು.ಸು.2500) ನೈಲ್ ನದಿಯ ಕೆಳಕಣಿವೆಯಲ್ಲಿ ಮೆದುಮ್ ಎಂಬಲ್ಲಿದೆ. ಇದು ಅತೆತ್ ಎಂಬ ರಾಜ್ಯಾಧಿಕಾರಿಯ ಸಮಾಧಿ. ಇದರ ವಿನ್ಯಾಸ ಶಿಲುಬೆಯಾಕಾರದಲ್ಲಿದೆ. ಒಂದು ನೇರ ಸುರಂಗವೂ ಅದನ್ನು ಮಧ್ಯದಲ್ಲಿ ಕತ್ತರಿಸುವ ಅಡ್ಡವಾದ ಕೋಚು ಅಂಕಣವೂ ಇವೆ. ಶವಕೋಣೆ ಪ್ರವೇಶದ್ವಾರದ ನೇರ ಎದುರಿನಲ್ಲಿ ಹಿಂಗೋಡೆಯಲ್ಲಿದೆ. ಈ ಸಮಾಧಿ ವಿನ್ಯಾಸದಲ್ಲಿ ಸರಳವೂ ಗಾತ್ರದಲ್ಲಿ ಚಿಕ್ಕದೂ ಆಗಿರುವುದಲ್ಲದೆ, ನೈಲ್ ಮುಖಜಭೂಮಿಯ ಬೃಹತ್ ಪಿರಮಿಡ್ಡುಗಳು ಅಥವಾ ಬೃಹತ್ ದೇವಾಲಯಗಳ ಅಡಿಯಲ್ಲಿರುವ ಭೂಗತ ಸಮಾಧಿ ಕೋಣೆಗಳ ವಿನ್ಯಾಸವನ್ನು ಸ್ವಲ್ಪಮಟ್ಟಿಗೆ ಹೋಲುತ್ತದೆ. ಈ ಸಮಾಧಿಯಲ್ಲಿ ಅಲಂಕರಣವಿಲ್ಲ. ಆದರೆ ಆ ಸುಮಾರಿನಲ್ಲೆ ಶಿಲ್ಪಾಲಂಕರಣವೂ ಪ್ರಾರಂಭವಾಗಿರ ಬೇಕೆಂಬುದರ ಕುರುಹು ಗೀಜ ಬಳಿಯಲ್ಲಿರುವ ರಾಣಿ 3ನೆಯ ಮೆರೆಸಂಖಳ ಸಮಾಧಿಯ ಭಾಗವಾಗಿರುವ, ಶಿಲೆಯಿಂದ ಕಂಡರಿಸಿದ ಕೋಣೆಯ ಶಿಲ್ಪಗಳೆಂದು ತಿಳಿಯುತ್ತದೆ.

ಈಜಿಪ್ಟಿನ ಹೆಚ್ಚಿನ ಗುಹಾ ಸಮಾಧಿಗಳು ಮೇಲಣ ಈಜಿಪ್ಟ್‌ ಪ್ರದೇಶದಲ್ಲಿವೆ. ಇವು ಬಹುವಾಗಿ ಅಲ್ಲಿಯ ಮಾಗಣೆಗಾರರವು (ಪ್ರಾಂತಾಧಿಕಾರಿಗಳು). ಹಳೆಯ ರಾಜ್ಯ ಕಾಲದ ಗುಹಾವಾಸ್ತುವಿನ ಉದಾಹರಣೆಗಳಾಗಿ ಎಲ್ ಬೆರ್ಷೇ ಮತ್ತು ಎಲ್ ಷೀಕ್ ಸ ಇದ್ ನ ಸಮಾಧಿಗಳನ್ನು ಹೆಸರಿಸಬಹುದು. ಇವು ಪ್ರ್ರ.ಶ.ಪು. 2300ರ ಸುಮಾರಿನಲ್ಲಿ ಈಜಿಪ್ಟಿನ 15ನೆಯ ಮಾಗಣೆಯಲ್ಲಿ ಆಳುತ್ತಿದ್ದವರ ಸಮಾಧಿಗಳು. ಇವು ಮೂಲವಿನ್ಯಾಸದಲ್ಲಿ ಮೆದುಮ್ ಸಮಾಧಿಯನ್ನೇ ಹೋಲುತ್ತವೆಯಾದರೂ ಈ ಕಾಲಕ್ಕೆ ಅಲ್ಪಸ್ವಲ್ಪ ಬದಲಾವಣೆಗಳೂ ರೂಢಿಗೆ ಬಂದಿದ್ದುವು. ಇದೇ ಮೂಲ ವಿನ್ಯಾಸವೇ ಮತ್ತಷ್ಟು ಬದಲಾವಣೆಗಳೊಡನೆ ಮಧ್ಯಕಾಲದ (ಪ್ರ್ರ.ಶ.ಪು.2000-1200) ಗುಹಾ ವಾಸ್ತು ಕೃತಿಗಳಲ್ಲೂ ಕಂಡುಬರುತ್ತದೆ. ಆದರೆ ಈ ಕಾಲದಲ್ಲಿ ಬರಿಯ ಸುರಂಗದ ಬದಲು, ಕಂಬಗಳ ಸಾಲುಗಳನ್ನೂ ಅನೇಕ ಸಣ್ಣ ಕೋಣೆಗಳನ್ನೂ ಅಳವಡಿಸುವ ಪದ್ಧತಿ ಸಾಮಾನ್ಯವಾಗಿತ್ತಲ್ಲದೆ ಈ ಸಮಾಧಿಗಳು ಗಾತ್ರದಲ್ಲೂ ದೊಡ್ಡವಾಗಿರುತ್ತಿದ್ದವು. ಮಧ್ಯ ಕಾಲದ ಅನೇಕ ಗುಹಾ ಸಮಾಧಿಗಳು, ಬೇನೀ ಹಸನ್, ದೀರ್ ಎಲ್ ಬಹರಿ, ಆಸ್ಯೂತ್ ಮುಂತಾದೆಡೆಗಳಲ್ಲಿವೆ. ಬೇನೀ ಹಸನ್ನಲ್ಲಿ ಪಖ್ತ್‌ ದೇವತೆಗಾಗಿ ಮಾಡಿದ ಒಂದು ಗುಹಾ ದೇವಾಲಯವೂ ಇದೆ. ಈ ಕಾಲದ ಸಮಾಧಿಗಳು ಮತ್ತು ದೇವಾಲಯಗಳಲ್ಲಿ ವರ್ಣಚಿತ್ರಾಲಂಕರಣ ಮತ್ತು ಶಿಲ್ಪಾಲಂಕರಣ ವಿಶೇಷವಾಗಿ ಕಂಡುಬರುತ್ತವೆ.

ಬಿಬನ್ ಎಲ್ ಮುಲುಕ್ನಲ್ಲಿರುವ 1ನೆಯ ಸೆಟಿ ದೊರೆಯ ಕಾಲದ ಸಮಾಧಿ (ಪ್ರ್ರ.ಶ.ಪು.ಸು. 1250), ಬೇನೀ ಹಸನ್ ಮತ್ತು ದೀರ್ ಎಲ್ ಬಹರಿಗಳಲ್ಲಿರುವ ಈ ಕಾಲದ ಸಮಾಧಿಗಳು ಉತ್ತಮ ಶಿಲ್ಪಕ್ಕೆ ಪ್ರಸಿದ್ಧವಾಗಿವೆ. ಇವುಗಳಲ್ಲಿ ತತ್ಕಾಲೀನ ದೇವರುಗಳು, ಧಾರ್ಮಿಕ ದೃಶ್ಯಗಳೇ ಅಲ್ಲದೆ, ಮೃತರ ಮತ್ತು ಅವರ ಸಂಬಂಧಿಕರ ಮೂರ್ತಿಗಳು, ಆ ವ್ಯಕ್ತಿಗಳ ಸ್ವಂತ ಸಾಧನೆಗಳು ಮುಂತಾದುವೆಲ್ಲ ಶಿಲ್ಪಿತವಾಗಿವೆ. ಇಲ್ಲಿಯ ಕೆಲವು ಶಿಲ್ಪಗಳ ಜೊತೆಯಲ್ಲಿ ಶಿಲಾಶಾಸನಗಳೂ ಇದ್ದು, ಇವು ಚರಿತ್ರೆಯ ಪುನರ್ರಚನೆಗೆ ಬಹು ಉಪಯುಕ್ತವಾಗಿವೆ.

ಇದೇ ವಾಸ್ತುಶಿಲ್ಪ ಸಂಪ್ರದಾಯ ನವಪ್ರಭುತ್ವ ಕಾಲದಲ್ಲೂ (ಪ್ರ್ರ.ಶ.ಪು.ಸು. 1200-1000) ಮುಂದುವರಿಯಿತು. ಶಿಲ್ಪದ ದೃಷ್ಟಿಯಿಂದ, 18ನೆಯ ರಾಜವಂಶದ ಅರಸರ ದಿಗ್ವಿಜಯಗಳನ್ನು ರೂಪಿಸಿರುವ ದೀರ್ ಎಲ್ ಬಹರಿಯಲ್ಲಿರುವ ರಾಣಿ ಹ್ಯಾಷ್ಪೆಸೂತ್ಳ ಸಮಾಧಿ ಬಹಳ ಮುಖ್ಯವಾದದ್ದು. ಆದರೆ ಇದು ಭಾಗಶಃ ಗುಹೆ, ಮುಂಭಾಗವೆಲ್ಲ ಕಟ್ಟಡ. ಈಜಿಪ್ಟಿನ ಗುಹಾ ವಾಸ್ತು ಸಂಪ್ರದಾಯದ ಮೇರುಕೃತಿ ಅಬು ಸಿಂಬೆಲ್ನಲ್ಲಿರುವ 2ನೆಯ ರ್ಯಾಮ್ಸೆಸ್ ದೊರೆಯ ದೇವಾಲಯ. ಇದು ಗುಹಾ ದೇವಾಲಯಗಳಲ್ಲಿ ಅತಿ ದೊಡ್ಡದು. ಅಲ್ಲದೆ, ಮುಂಭಾಗದಲ್ಲಿ ಬೃಹದಾಕಾರದ ರಾಜರ ಮೂರ್ತಿಗಳಿಂದಲೂ ಒಳಗೆ ಕಲಾತ್ಮಕವೂ ಚರಿತ್ರೆಯ ದೃಷ್ಟಿಯಿಂದ ಅಮೂಲ್ಯವೂ ಆದ ಶಿಲ್ಪಗಳಿಂದಲೂ ಅಲಂಕೃತವಾಗಿದೆ ಅಬುಸಿಂಬೆಲ್. ಗೆಬೆಲ್ ಸಿಲ್ಸಿಲೇಯ ಗುಹಾ ದೇವಾಲಯಗಳೂ ಥೀಬ್ಸ್‌ ಪ್ರದೇಶದಲ್ಲಿರುವ ಮುನ್ನೂರಕ್ಕೂ ಹೆಚ್ಚು ರಾಜ್ಯಾಧಿಕಾರಿಗಳ ಸಮಾಧಿಗಳೂ ಇದೇ ಕಾಲಕ್ಕೆ ಸೇರಿದವು.

ಈಜಿಪ್ಟಿನ ನವಪ್ರಭುತ್ವದ ಅವನತಿಯ ಅನಂತರ ಆ ದೇಶದ ಆಳ್ವಿಕೆ ಪರದೇಶದವರ ಕೈಸೇರಿದ್ದರಿಂದ ಗುಹಾ ವಾಸ್ತು ಸಂಪ್ರದಾಯ ಕೆಲಕಾಲ ಕಡಿದು ಹೋಯಿತು. ಆದರೆ ಪುನಃ ಅಲ್ಲಿಯ 26ನೆಯ ರಾಜವಂಶದ ಕಾಲದಲ್ಲಿ (ಪ್ರ್ರ.ಶ.ಪು.663-525) ಥೀಬ್ಸ್‌ ಪ್ರದೇಶದಲ್ಲಿ ಕೆಲವು ಗುಹಾ ಸಮಾಧಿಗಳನ್ನು ಕೊರೆಯಲಾಯಿತು. ಆದರೆ ಇವು ಚಿಕ್ಕವೂ ಅನುಕರಣೆಗಳೂ ಆಗಿದ್ದು, ಈಜಿಪ್ಟಿನ ಗುಹಾ ವಾಸ್ತು ಸಂಪ್ರದಾಯದ ಅವನತಿಯನ್ನು ಸೂಚಿಸುತ್ತವೆ.

ಮೆಡಿಟರೇನಿಯನ್ ಪ್ರದೇಶ ಮತ್ತು ಪಶ್ಚಿಮ ಏಷ್ಯ

ಬದಲಾಯಿಸಿ

ಮೆಡಿಟರೇನಿಯನ್ ಸಮುದ್ರದ ದ್ವೀಪಗಳಲ್ಲೂ ಸುತ್ತಲಿನ ಪ್ರದೇಶಗಳಲ್ಲೂ ಈಜಿಪ್ಟಿನಲ್ಲಿದ್ದಂಥ ಮರಣೋತ್ತರ ಸ್ಥಿತಿಯನ್ನು ಕುರಿತ ನಂಬಿಕೆಗಳು ಅಲ್ಪಸಲ್ಪ ವ್ಯತ್ಯಾಸದೊಡನೆ ಹರಡಿದ್ದಂತೆ ಕಾಣುತ್ತದೆ. ಇವು ಗುಹಾ ವಾಸ್ತುವಿನ ಬೆಳೆವಣಿಗೆಗೆ ಸಹಕಾರಿಯಾಗಿದ್ದರೂ ಪ್ರಾಯಶಃ ಅಲ್ಲಿಯ ಭೌಗೋಳಿಕ ಪರಿಸ್ಥಿತಿಯಿಂದಾಗಿ ಉತ್ತಮ ಗುಹಾ ವಾಸ್ತುಕೃತಿಗಳೇನೂ ಕಂಡುಬರುವುದಿಲ್ಲ. ಕ್ರೀಟ್ ದ್ವೀಪದಲ್ಲಿ ಪ್ರ್ರ.ಶ.ಪು. 1700-1400ರ ಕಾಲದಲ್ಲಿ ನೆಲದ ಮಟ್ಟಕ್ಕಿಂತ ಕೆಳಗೆ ಬಂಡೆಗಳಲ್ಲಿ ದುಂಡು ಕೋಣೆಗಳನ್ನು ಕೊರೆದು ಅವಕ್ಕೆ ನೇರವಾದ ತೆರೆದ ಹಾದಿಯನ್ನು ರೂಪಿಸಿ ಸಮಾಧಿಗಳನ್ನು ನಿರ್ಮಿಸುವ ರೂಢಿ ಬೆಳೆಯಿತು. ಇವನ್ನು ಥೋಲೋಸ್ ಸಮಾಧಿಗಳೆಂದು ಕರೆಯುತ್ತಾರೆ. ಇವು ಭಾಗಶಃ ಶಿಲೆಯಲ್ಲಿ ಕಂಡರಿಸಿದ ಕೃತಿಗಳಾಗಿದ್ದರೂ ಗುಹಾ ವಾಸ್ತುವೆಂದೆಸಿನಿಕೊಳ್ಳುವುದಿಲ್ಲ. ಆದರೆ ಇದೇ ಸಂಪ್ರದಾಯದ ವ್ಯತ್ಯಸ್ತ ರೂಪದಲ್ಲಿ ನಾಸಸ್ನಲ್ಲಿ ಪ್ರಸಿದ್ಧ ಅರಮನೆಯ ದಕ್ಷಿಣದಲ್ಲಿ ಒಂದು ರಾಜಸಮಾಧಿಯಿದೆ. ಇದರಲ್ಲಿ ಗೋರಿ ಕೋಣೆ ಮಾತ್ರ ಪೂರ್ಣವಾಗಿ ಗುಹಾರೂಪದ್ದು. ಇತರ ಭಾಗಗಳು ಶಿಲೆಯಲ್ಲಿ ಕೊರೆದವಾದರೂ ಗೋಡೆ ಮತ್ತು ಚಾವಣಿಗಳನ್ನೂ ರಚಿಸಲಾಗಿದೆ. ಥೋಲೋಸ್ ರೀತಿಯ ಸಮಾಧಿಗಳು ಪ್ರ್ರ.ಶ.ಪು.ದ ಪ್ರಾರಂಭದವರೆಗೂ ಕ್ರೀಟ್ನಲ್ಲಿ ಬಳಕೆಯಲ್ಲಿದ್ದುವಲ್ಲದೆ ಇದೇ ರೀತಿಯವು ಗ್ರೀಸಿನಲ್ಲಿ ಸಹ ಮೈಸೀನಿಯನ್ ಸಂಸ್ಕೃತಿಯ ಕಾಲದಲ್ಲಿ ಕಂಡುಬರುತ್ತವೆ. ಇಟಲಿಯ ಎಟ್ರೂರಿಯ ಪ್ರದೇಶದಲ್ಲೂ ಅನೇಕ ಭೂಗರ್ಭ ಗುಹಾಸಮಾಧಿಗಳಿವೆ. ಇವು ಪ್ರ್ರ.ಶ.ಪು. ಸು.6-3ನೆಯ ಶತಮಾನಕ್ಕೆ ಸೇರಿದವು. ಇವು ವಿನ್ಯಾಸದಲ್ಲಿ ಸಮಕಾಲೀನ ವಾಸ್ತುವನ್ನೇ ಅನುಕರಿಸುತ್ತವೆ. ಇವುಗಳ ಒಳಗೆ ಉತ್ತಮ ವರ್ಣಗಳಿದ್ದುವಲ್ಲದೆ, ಮೃತನ ಉಪಯೋಗಕ್ಕಾಗಿ ಅವಶ್ಯಕ ವ್ಯವಸ್ಥೆಗಳನ್ನೂ ಮಾಡಲಾಗಿರುತ್ತಿತ್ತು.

ಇಟಲಿಯ ರೋಮ್ ಮತ್ತು ಸುತ್ತಣ ಪ್ರದೇಶದಲ್ಲಿ ಅನೇಕ ಸುರಂಗ ಸಮಾಧಿಗಳು ಇವೆ. ಭೂಗರ್ಭದಲ್ಲಿ ಕಿಮೀಗಟ್ಟಲೆ ಅಂಕುಡೊಂಕಾಗಿ ಹರಡುವ ಸುರಂಗಗಳನ್ನು ತೋಡಿ, ಅವುಗಳ ಪಕ್ಕದಲ್ಲಿ ಗೋಡೆಗಳಲ್ಲಿ ಸಣ್ಣ ಕೋಷ್ಠಗಳನ್ನು ನಿರ್ಮಿಸಿ, ಶವ ಅಥವಾ ಶವಾವಶೇಷ ಗಳನ್ನು ಸಂಸ್ಕರಿಸಲಾಗುತ್ತಿತ್ತು. ಇಂಥ ಸುರಂಗ ಸಮಾಧಿಗಳು ಒಂದು ಕುಟುಂಬ ಅಥವಾ ಜನಾಂಗಕ್ಕೆ ಮೀಸಲಾಗಿರುತ್ತಿದ್ದವು. ಬಂಡೆಯಲ್ಲಿ ಕೊರೆದ ಈ ಸುರಂಗಗಳಲ್ಲಿ ಹೆಚ್ಚಿನ ವಾಸ್ತು ಅಂಶಗಳಾಗಲೀ ಶಿಲ್ಪಾಲಂಕರಣವಾಗಲೀ ಕಂಡುಬರುವುದಿಲ್ಲ. ಈ ರೀತಿಯ ಸುರಂಗ ಸಮಾಧಿಗಳು ಮೆಡಿಟರೇನಿಯನ್ ಸಮುದ್ರದ ಆಗ್ನೇಯ ದಂಡೆಯ ಫಿನಿಷಿಯ ಮತ್ತು ಸುತ್ತಣ ಪ್ರದೇಶಗಳಲ್ಲಿ ಪ್ರ್ರ.ಶ.ಪು.1ನೆಯ ಸಹಸ್ರಮಾನದಲ್ಲೇ ಪ್ರಚಲಿತವಾಗಿದ್ದ ಗುಹಾಸಮಾಧಿಗಳಿಂದ ರೂಢಿಗತವಾದಂತೆ ಕಾಣುತ್ತದೆ. ಈ ಕಾಲದ ಹಲವು ಗುಹಾಸಮಾಧಿಗಳು ಇಸ್ರೇಲಿನ ಬೆತ್ಶಿಯರಿಂ ಎಂಬಲ್ಲಿ ಕಂಡುಬಂದಿವೆ. ಬೆಟ್ಟದ ಇಳಿಜಾರಿನಲ್ಲಿ ತೋಡಲಾದ ಈ ಸುರಂಗ ಸಮಾಧಿಗಳಲ್ಲಿ ಸಾಮಾನ್ಯವಾಗಿ ಒಂದೇ ಒಂದು ನೇರ ಸುರಂಗದಂಥ ಗುಹೆಯಿದ್ದು ಅದರ ಪಕ್ಕದ ಗೋಡೆಗಳಲ್ಲಿ ಶವಗೂಡುಗಳಿರುತ್ತವೆ. ಇಸ್ರೇಲಿನ ಫಿನಿಷಿಯ ಕರಾವಳಿಯಲ್ಲಿರುವ ಎಲ್ಜಿಬ್ ಎಂಬಲ್ಲಿ ಪ್ರ್ರ.ಶ.ಪು.8ನೆಯ ಶತಮಾನದ ಗುಹಾ ಸಮಾಧಿಗಳೂ ಜೋರ್ಡಾನ್ ನದಿ ಕಣಿವೆಯ ಹಜೋರ್ ಎಂಬಲ್ಲಿ ಭೂಗರ್ಭ ಸುರಂಗ ಸಮಾಧಿಗಳು ಹಾಗೂ ಗುಹಾ ಸಮಾಧಿಗಳೂ ಬೆಳಕಿಗೆ ಬಂದಿವೆ. ಹಜೋರ್ನ ಸುರಂಗ ಸಮಾಧಿಗಳು ಪ್ರ್ರ.ಶ.ಪು.1500ರ ಸುಮಾರಿನವೆಂದು ಊಹಿಸಲಾಗಿದೆ. ಇದರ ಮುಂಭಾಗದಲ್ಲಿ ಎರಡು ಕಂಬಗಳಲ್ಲದೆ ಒಳಗೆ ವಿಶಾಲವಾದ ಹಜಾರವಿದೆ. ಇದು ಪ್ರ್ರ.ಶ.ಪು.9ನೆಯ ಶತಮಾನದ್ದು.

ಮೆಡಿಟರೇನಿಯನ್ ಸಮುದ್ರಕ್ಕೆ ಹೊಂದಿಕೊಂಡಂತಿರುವ ತುರ್ಕಿ ದೇಶದ ಪಶ್ಚಿಮ ಭಾಗದಲ್ಲೂ (ಏಷ್ಯ ಮೈನರ್) ಗುಹಾ ವಾಸ್ತು ಶಿಲ್ಪನಿರ್ಮಾಣಗಳಿವೆ. ಇಲ್ಲಿಯ ಫ್ರಿಜಿಯ ಪ್ರದೇಶದ ಎಸ್ಕಿಷೆಹಿರ್, ಅಘ್ಯೋನ್, ಕರಹಿಸಾರ್, ಅಸರ್ಲ್‌ನ್ ಕಾಯ, ಯಾಜಿಲಿಕಾಯ ಮುಂತಾದೆಡೆಗಳಲ್ಲಿರುವ ಕೃತಿಗಳು ಪ್ರಸಿದ್ಧವಾದವು. ಇಲ್ಲಿಯ ಗುಹಾವಾಸ್ತು ನಿರ್ಮಾಣಗಳು ಪ್ರ್ರ.ಶ.ಪು.6-ಪ್ರ್ರ.ಶ. 3ನೆಯ ಶತಮಾನ ಕಾಲಕ್ಕೆ ಸೇರಿದವು. ಫ್ರಿಜಿಯದ ನಿರ್ಮಾಣಗಳಲ್ಲಿ ಸಮಾಧಿಗಳಲ್ಲದೆ ದೇವಾಲಯಗಳೂ ಇವೆ. ಇವೆಲ್ಲದರಲ್ಲೂ ಮುಮ್ಮುಖ ಮಾತ್ರವೇ ವಿಶಾಲವಾಗಿ ಸುಂದರವಾಗಿ ಕೊರೆಯಲಾಗಿದ್ದು ಒಳ ಆವರಣ ಕೇವಲ ಸಮಾಧಿ ಕೋಣೆ ಅಥವಾ ಚಿಕ್ಕ ದೇವಕೋಷ್ಠಕ್ಕೆ ಸೀಮಿತವಾಗಿರುತ್ತದೆ. ಫ್ರಿಜಿಯದ ಸಮಾಧಿಗಳು ಸ್ವರೂಪದಲ್ಲಿ ಲಿಸಿಯ ಪ್ರದೇಶದ ಮರದ ಕಟ್ಟಡಗಳನ್ನು ಅನುಕರಿಸುತ್ತವೆಯೆಂದು ವಿದ್ವಾಂಸರ ಅಭಿಪ್ರಾಯ. ಇವುಗಳಲ್ಲಿ ಮಟ್ಟ ಚಾವಣಿಯವು, ಇಪ್ಪಾರು ಚಾವಣಿಯವು ಮತ್ತು ಗ್ರೀಕ್ ಸ್ತಂಭರೀತಿಗಳನ್ನು ಅನುಕರಿಸಿರುವಂತಹವು ಎಂದು ಮೂರು ಬಗೆಗಳಿದ್ದು ಈ ಬಗೆಗಳು ಕಾಲಾನುಕ್ರಮವಾಗಿ ಮೇಲೆ ಸೂಚಿಸಿರುವ ಕ್ರಮದಲ್ಲೇ ಬಳಕೆಗೆ ಬಂದಂತೆ ತೋರುತ್ತದೆ. ಹೆಚ್ಚಿನವು ಎರಡನೆಯ ಬಗೆಗೆ ಸೇರಿದವು. ಬುಯುಕ್ ಅಸರ್ಟ್‌ನ್ ತಾಷ್ ಮತ್ತು ದಿಲಿಕಿ ತಾಷ್ನ ಸಮಾಧಿಗಳು ಮೊದಲನೆಯ ಬಗೆಗೆ ಉದಾಹರಣೆಗಳು. ಅಲ್ಲದೆ ಇವು ಅತ್ಯಂತ ಪ್ರಾಚೀನವಾದವು. ಯಾಜಿಲಿಕಾಯದ ಸಮಾಧಿ ಎರಡನೆಯ ಬಗೆಯದು. ಕಲೆಕಪಿ (ಪ್ರ್ರ.ಶ.ಪು.5ನೆಯ ಶತಮಾನ) ಮತ್ತು ಕಸ್ತಮೊನು (ಪ್ರ್ರ.ಶ.ಪು.4ನೆಯ ಶತಮಾನ) ಮೂರನೆಯ ವರ್ಗದ ಮೊದಲ ನಿರ್ಮಾಣಗಳು. ಇದೇ ಪ್ರದೇಶದಲ್ಲಿರುವ ಸೋಲನ್ ಎಂಬವನ ಸಮಾಧಿ ರೋಮನ್ ಸಾಮ್ರಾಜ್ಯ ಕಾಲಕ್ಕೆ ಸೇರಿದ್ದು, ಇದನ್ನು ಮೂರನೆಯ ಬಗೆಯಲ್ಲಿ ಸುಮಾರು ಕೊನೆಯ ನಿರ್ಮಾಣ ಎಂದು ಪರಿಗಣಿಸಬಹುದು. ಫ್ರಿಜಿಯದ ಸಮಾಧಿಗಳ ಮುಮ್ಮುಖ ಅಲಂಕರಣದಲ್ಲಿ ಗ್ರೀಕ್ ಅಲ್ಲದೆ ಅಖಮೇನಿಯನ್ ಮತ್ತು ಹಿಟೈಟ್ ಶಿಲ್ಪ ಸಂಪ್ರದಾಯದ ಪ್ರಭಾವವೂ ಕಂಡುಬರುತ್ತದೆ.

ಇಲ್ಲಿಯ ದೇವಾಗಾರಗಳೂ ಸಮಾಧಿಗಳಂತೆಯೇ ಕಾಣುತ್ತವೆ. ಆದರೆ ಇಲ್ಲಿ ಸಮಾಧಿ ಕೋಣೆಯ ಬದಲು ವಿಗ್ರಹ ಅಥವಾ ಪವಿತ್ರ ವಸ್ತುವನ್ನಿಡುವ ಕೋಷ್ಠವಿರುತ್ತದೆ. ಈ ದೇವಾಗಾರಗಳಲ್ಲಿ ಬಹಳ ಮುಖ್ಯವಾದವು ಆಸರ್ಟ್‌ನ್ ಕಾಯ (ಪ್ರ್ರ.ಶ.ಪು.6ನೆಯ ಶತಮಾನ), ಯಾಜಿಲಿಕಾಯ, ಬಹ್ಷಿಸ್ (ಪ್ರ್ರ.ಶ.ಪು.5ನೆಯ ಶತಮಾನ)-ಈ ಸ್ಥಳಗಳಲ್ಲಿವೆ. ಇಂಥ ದೇವಾಗಾರಗಳು ಪ್ರ್ರ.ಶ.ಪು.6-5ನೆಯ ಶತಮಾನಗಳಲ್ಲಷ್ಟೇ ಪ್ರಚಲಿತವಾಗಿದ್ದುವು. ಅರೆಜಸ್ಟಿಸ್ ಎಂಬಲ್ಲಿಯ ದೇವಾಲಯದಲ್ಲಿ ಸಿಬೆಲೀ ದೇವತೆಯ ಒಂದು ಸುಂದರ ಮೂರ್ತಿಯಿದೆ. ಇವಲ್ಲದೆ ಬಂಡೆಯಲ್ಲಿ ಮೆಟ್ಟಲುಗಳನ್ನು ಕಡಿದು ಮೇಲೆ ಸಿಂಹಾಸನದಂತೆ ವೇದಿಕೆಯನ್ನು ನಿರ್ಮಿಸಿರುವ ತೆರೆದ ದೇವಾಗಾರಗಳೂ ಫ್ರಿಜಿಯ ಪ್ರದೇಶದಲ್ಲಿದ್ದವು. ಇಂಥ ಒಂದು ಉತ್ತಮ ವಾಸ್ತುನಿರ್ಮಾಣ ಮೈದಾಸ್ ನಗರದಲ್ಲಿ ಇದೆ. ಇದು ಹಿಂದೆ ಸಿಬೆಲೀ ದೇವತೆಗಾಗಿ ಮೀಸಲಾಗಿತ್ತು.

ಫ್ರಿಜಿಯದ ಪಕ್ಕದ ಲಿಸಿಯ ಮತ್ತು ಕಾರಿಯ ಪ್ರದೇಶಗಳಲ್ಲಿ ಸಹ ಬಂಡೆಯಲ್ಲಿ ಕೊರೆದ ಕೆಲವು ನಿರ್ಮಾಣಗಳಿವೆ. ಆದರೆ ಇವು ರಚನಾನಿರ್ಮಾಣಗಳಂತೆಯೇ ಹೊರಮೈಯನ್ನೂ ಪೂರ್ಣವಾಗಿ ಕೊರೆದು ಮಾಡಿದವಾದ್ದರಿಂದ ಗುಹೆಗಳೆನಿಸಿಕೊಳ್ಳುವುದಿಲ್ಲ. ಇವೆಲ್ಲ ಸಮಾಧಿಗಳು. ಲಿಸಿಯದ ಇಂಥ ಮತ್ತು ಕಾರಿಯದ ಇದಿಮಗಳಲ್ಲಿ ಈ ವಾಸ್ತುರೀತಿಯ ಒಳ್ಳೆಯ ಉದಾಹರಣೆಗಳಿವೆ.

ಸಿರಿಯದ ಉತ್ತರ ಗಡಿಯಲ್ಲಿರುವ ಅಸರ್ಟ್‌ನ್ ತಾಷ್ನಲ್ಲೂ ಫ್ರಿಜಿಯದ ರೀತಿಯ ಒಂದು ಸಮಾಧಿಯಿದೆ. ಪಶ್ಚಿಮ ಏಷ್ಯದ ಇರಾಕ್ ಪ್ರದೇಶದ ಶಿರಿ ಮಲಿಕ್ತದಲ್ಲಿ ಅಸ್ಸೀರಿಯನ್ ದೊರೆಯೊಬ್ಬ ದೇವ ಚಿಹ್ನೆಗಳೆದುರು ಪ್ರಾರ್ಥಿಸುತ್ತಿರುವ ಮತ್ತು ಮಲ್ತಾಯ್ ಎಂಬಲ್ಲಿ ಸೆನ್ನಾಚೆರಿಬ್ ದೊರೆ ಇದೇ ರೀತಿ ಪ್ರಾರ್ಥನೆ ಸಲ್ಲಿಸುತ್ತಿರುವ ಶಿಲ್ಪಗಳು ಮತ್ತು ಅಲ್ಲಿಯ ಕುರ್ದಿಸ್ತಾನ ಪ್ರದೇಶದಲ್ಲಿರುವ, ಪ್ರ್ರ.ಶ.ಪು.6ನೆಯ ಶತಮಾನದ ಒಂದೆರಡು ಗುಹಾ ಸಮಾಧಿಗಳು-ಇವನ್ನು ಬಿಟ್ಟರೆ ಆ ದೇಶದಲ್ಲಿ ಹೆಚ್ಚಿನ ಗುಹಾ ವಾಸ್ತು ಶಿಲ್ಪಗಳಿಲ್ಲ. ಜೋರ್ಡಾನಿನ ಪೆಟ್ರ ಮತ್ತು ಅರೇಬಿಯದ ಹೆಜ್ರಾಫ್‍ಗಳಲ್ಲಿ ಕೇವಲ ಒಂದು ಹಜಾರ ಮಾತ್ರ ಇರುವ ಗುಹಾದೇವಾಲಯಗಳಿವೆ. ಇವು ಇಸ್ಲಾಂ ಧರ್ಮಕ್ಕೆ ಹಿಂದಿದ್ದ ಸ್ಥಳೀಯ ಅರಬ್ಬಿ ಧರ್ಮಪಂಥಗಳ ದೇವಾಲಯಗಳೆಂದೂ ಪ್ರಾಯಶಃ ಪ್ರ್ರ.ಶ.ಪು.2-1ನೆಯ ಶತಮಾನದವೆಂದೂ ಊಹಿಸಲಾಗಿದೆ. ಇರಾನ್ ದೇಶದ ಅಜ಼ರ್ಬೈಜಾನ್ ಪ್ರಾಂತ ಫಖ್ರಕ, ಕರ್ದಿಸ್ತಾನ್ ವಿಭಾಗದಲ್ಲಿರುವ ದುಕ್ಕಾನ್-ಇ-ದಾವೂದ್, ಕೆರ್ಮನ್ ಷಾ ಪ್ರದೇಶದಲ್ಲಿರುವ ಸಖ್ನ-ಇಲ್ಲಿ ಮಿಡಿಯ ರಾಜ್ಯದ ಕಾಲದ (ಪ್ರ್ರ.ಶ.ಪು.7-6ನೆಯ ಶತಮಾನ) ಗುಹಾಸಮಾಧಿಗಳಿವೆ. ಫಖ್ರಕದ ಗುಹೆಯ ಮುಂಭಾಗದಲ್ಲಿ ಎರಡು ಕಂಬಗಳಿಂದೆತ್ತಿದ ವರಾಂಡವೂ ಅದರ ಹಿಂದೆ ಮೂರು ಕಂಬಗಳಿರುವ ಸಮಾಧಿ ಕೋಣೆಯೂ ಇದ್ದು ಇದರಲ್ಲಿ ಮೂರು ಸಮಾಧಿಗಳಿವೆ. ದುಕ್ಕಾನ್-ಇ-ದಾವೂದ್ ಮತ್ತು ಸಖ್ನದ ಗುಹೆಗಳು ಕೂಡ ವಿನ್ಯಾಸದಲ್ಲಿ ಸ್ಥೂಲವಾಗಿ ಮೇಲಿನ ರೀತಿಯಿವೆ. ದುಕ್ಕಾನ್-ಇ-ದಾವೂದ್, ಕೀಲ್-ಇ-ದಾವೂದ್ ಎಂದು ಕರೆಯುವ ಧಾರ್ಮಿಕ ಶಿಲ್ಪಗಳಿರುವ ಭಿತ್ತಿ, ಸಖ್ನದ ಗುಹೆಯ ಮೇಲಿರುವ ಅಹುರ್ಮಜ್ದನ ಚಿಹ್ನೆ ಇವು ಉತ್ತಮ ಶಿಲ್ಪಗಳೆಂದು ಪರಿಗಣಿತವಾಗಿವೆ.

ಪರ್ಷಿಯನ್ ಸಾಮ್ರಾಜ್ಯ ಕಾಲಕ್ಕೆ ಸೇರಿದ ಬಹುಮುಖ್ಯವಾದ ಗುಹಾ ವಾಸ್ತು ನಿರ್ಮಾಣಗಳು ಇರಾನಿನ ಪರ್ಸೆಪಲಿಸ್ ಬಳಿ ಇವೆ. ಇವುಗಳಲ್ಲಿ ಅತ್ಯಂತ ಹಳೆಯವು ನಕ್ಷೆ-ಇ-ರಸ್ತುಂ ಎಂಬಲ್ಲಿವೆ. ಇವು 1ನೆಯ ಡೇರಿಯಸ್ (ಪ್ರ್ರ.ಶ.ಪು.521-485), 1ನೆಯ ಜ಼ರ್ಕೀಸ್ (ಪ್ರ್ರ.ಶ.ಪು.485-465), 1ನೆಯ ಆರ್ಟಗ್ಸರ್ಕ್‌ಸೀಸ್ (ಪ್ರ್ರ.ಶ.ಪು.465-424) ಮತ್ತು 2ನೆಯ ಡೇರಿಯಸ್ (ಪ್ರ್ರ.ಶ.ಪು.424-405) ದೊರೆಗಳ ಸಮಾಧಿಗಳು. ಈ ಸಮಾಧಿಗಳಲ್ಲಿ ಶಿಲುಬೆಯಾಕಾರದಲ್ಲಿ ಕೊರೆದ ವಿಶಾಲವಾದ ಮುಮ್ಮುಖವಿದ್ದು ಮುಂದಿನ ಅಡ್ಡಪಟ್ಟಿಯಲ್ಲಿ ಪರ್ಸೆಪಲಿಸ್ ರೀತಿಯವೆಂದು ಕರೆಯುವ ನಾಲ್ಕು ಕಂಬಗಳಿಂದ ಎತ್ತಿದ ವರಾಂಡವೂ ಅದರ ಹಿಂದೆ ಸಮಾಧಿಕೋಣೆಯೂ ಇರುತ್ತವೆ. 1ನೆಯ ಡೇರಿಯಸನ ಸಮಾಧಿಯ ಮೇಲೆ ಅಹುರ್ಮಜ್ದ ದೇವತೆಯ ಚಿಹ್ನೆಯೂ ರಾಜನ ಸಿಂಹಾಸನವೂ ಸದೆಬಡಿದ ರಾಷ್ಟ್ರಗಳಿಂದ ಎತ್ತಿಹಿಡಿಯಲ್ಪಟ್ಟಂತೆ ಕೆತ್ತಲ್ಪಟ್ಟಿವೆ. ಪರ್ಸೆಪಲಿಸ್ ಬಳಿಯಲ್ಲೇ ಕೂಹ್-ಎ-ರಹ್ಮತ್ ಬೆಟ್ಟದ ಬುಡದಲ್ಲಿ ಮುಂದಿನ ಪರ್ಷಿಯನ್ ಚಕ್ರಾಧಿಪತಿಗಳಾದ 2ನೆಯ ಆರ್ಟಗ್ಸರ್ಕ್‌ಸೀಸ್ (ಪ್ರ್ರ.ಶ.ಪು.404-359) ಮತ್ತು 3ನೆಯ ಆರ್ಟಗ್ಸರ್ಕ್‌ಸೀಸ್‌ರ (ಪ್ರ್ರ.ಶ.ಪು.359-338) ಸಮಾಧಿಗಳಿವೆ. ಇವು ವಿನ್ಯಾಸದಲ್ಲಿ ನಕ್ಷ್-ಎ-ರುಸ್ತುಮ್ ಸಮಾಧಿಗಳನ್ನೇ ಹೋಲುತ್ತವೆ. ಇವುಗಳಲ್ಲಿ ಈ ದೊರೆಗಳು ಅಹರ್ಮಜ್ದ ದೇವತೆಯನ್ನು ಪೂಜಿಸುವ ಉತ್ತಮ ಉಬ್ಬುಶಿಲ್ಪಗಳಿವೆ. ಪ್ರ್ರ.ಶ. 4-5ನೆಯ ಶತಮಾನಕ್ಕೆ ಸೇರಿದ ಸಸ್ಸೌನೀಯ ಅರಸರ ಶಿಲ್ಪಗಳನ್ನೊಳಗೊಂಡ ಭಿತ್ತಿಗಳು ಮತ್ತು ಗುಹೆಗಳು ಇರಾನಿನ ತಖ್ತ್‌-ಎ-ಜಮಷಿದ್ ಎಂಬಲ್ಲಿವೆ.

ಭಾರತದ ಪ್ರಭಾವ

ಬದಲಾಯಿಸಿ

ಈಜಿಪ್ಟ್‌, ಪಶ್ಚಿಮ ಏಷ್ಯ ಮತ್ತು ಮೆಡಿಟರೇನಿಯನ್ ಪ್ರದೇಶಗಳಲ್ಲಿ ಹರಡಿದ್ದ ಗುಹಾ ವಾಸ್ತು ಹೆಚ್ಚು ಮಟ್ಟಿಗೆ ಸಮಾಧಿವಾಸ್ತು ಎಂಬುದು ಮೇಲಿನ ಉದಾಹರಣೆಗಳಿಂದ ವ್ಯಕ್ತವಾಗುತ್ತದೆ. ಇವುಗಳಲ್ಲಿ ಕೆಲವು ದೇವಾಗಾರಗಳಾ ಗಿದ್ದರೂ ಅಂಥವುಗಳ ಸಂಖ್ಯೆ ಅತ್ಯಲ್ಪ. ಆದರೆ ಗುಹಾವಾಸ್ತು ಪ್ರಕಾರ ಪ್ರ್ರ.ಶ.ಪು.3ನೆಯ ಶತಮಾನದಲ್ಲಿ ಭಾರತದಲ್ಲಿ ಪ್ರಚಲಿತವಾದ ಮೇಲೆ ಅದರ ಸ್ವರೂಪ ಮತ್ತು ಉದ್ದಿಶ್ಯಗಳೇ ಬದಲಾದವು. ಇದರ ಸಮಾಧಿ ಸಂಬಂಧ ಕ್ಷೀಣವಾಗಿ ಗುಹಾವಾಸ್ತುವಿನಲ್ಲಿ ಸ್ಥಳೀಯ ರಚನಾ ವಾಸ್ತುಸ್ವರೂಪವನ್ನು ಅಳವಡಿಸಿ ಕೊಂಡು ಈ ನಿರ್ಮಾಣಗಳು ಹೆಚ್ಚಾಗಿ ದೇವಾಗಾರಗಳಾಗಿಯೋ, ಭಿಕ್ಷು-ಸಂನ್ಯಾಸಿಗಳ ವಾಸಸ್ಥಾನಗಳಾಗಿಯೋ ವಿಜೃಂಭಿಸುತ್ತವೆ. ಈ ಹೊಸ ಸ್ವರೂಪದ ಗುಹಾ ವಾಸ್ತುಶಿಲ್ಪ ಭಾರತೀಯ ಸಂಸ್ಕೃತಿಯ, ಅದರಲ್ಲೂ ಬೌದ್ಧಧರ್ಮದ ಪ್ರಭಾವಕ್ಕೆ ಒಳಗಾದ ಹಲವು ದೇಶಗಳಲ್ಲಿ ಹರಡಿತು.

ಆಫ್ಘಾನಿಸ್ತಾನ

ಬದಲಾಯಿಸಿ

ಆಫ್ಘಾನಿಸ್ತಾನದಲ್ಲಿ ಸು.20ಕ್ಕೂ ಹೆಚ್ಚು ಸ್ಥಳಗಳಲ್ಲಿ ಬೌದ್ಧ ಗುಹಾ ವಾಸ್ತು ಶಿಲ್ಪದ ಅವಶೇಷಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ದರುತಾ, ಕುಂದುಜ಼್, ಹೈಬಕ್ ಮತ್ತು ಬಾಮಿಯನ್ ಮುಖ್ಯವಾದವು. ದರುತದಲ್ಲಿ ಹಲವು ಬೌದ್ಧ ಸಂಘಾರಾಮಗಳನ್ನು ಬೆಟ್ಟದ ತಪ್ಪಲಿನಲ್ಲಿ ಕಡಿಯಲಾಗಿದೆಯಲ್ಲದೆ ಇಲ್ಲಿ ಕೆಲವು ಸ್ತೂಪಗಳೂ ಇವೆ. ಕುಂದುeóïನಲ್ಲಿಯೂ ಒಂದು ವಿಶಾಲವಾದ ವಿಹಾರವಿದೆ. ಇಲ್ಲಿ ಭಿಕ್ಷುಗಳು ವಾಸಿಸುವ ಕೋಣೆಗಳು ಚಚ್ಚೌಕವಾಗಿದ್ದರೂ ಚಾವಣಿ ಮಾತ್ರ ಗುಮ್ಮಟಾಕಾರದಲ್ಲಿರುವುದು ವಿಶೇಷ. ಬೆಟ್ಟದಲ್ಲಿ ಕಡೆದ ಸು.24ಮೀ ವ್ಯಾಸದ ಸ್ತೂಪವೊಂದು ಹೈಬಕ್ನಲ್ಲಿ ಇದೆ. ಇದರ ಬಳಿಯೇ ಅರ್ಧ ಕೆತ್ತಿ ಬಿಟ್ಟಿರುವ ಇನ್ನೊಂದು ವಿಶಾಲವಾದ ವಿಹಾರವೂ ಸಮೀಪದಲ್ಲಿ ಕೆಲವು ಚೈತ್ಯಾಗಾರಗಳೂ ಇವೆ. ಇಲ್ಲಿಯ ಇನ್ನೊಂದು ಗುಹೆಯಲ್ಲಿ ಬೌದ್ಧಭಿಕ್ಷುಗಳ ವಾಸಕ್ಕಾಗಿ ಮಾಡಿದ ವಿಹಾರದಲ್ಲಿ ದೊಡ್ಡ ಹಜಾರವೂ ಸುತ್ತಲೂ ಕೋಣೆಗಳೂ ಅಲ್ಲದೆ ಒಳಗೆ ಬುದ್ಧ ಮೂರ್ತಿಯುಳ್ಳ ಒಂದು ಗರ್ಭಗುಡಿಯೂ ಇದೆ. ಇಲ್ಲಿಯ ಕಂಬಗಳು ಅರೆ ಅಯೋನಿಕ್ ಶೈಲಿಯಲ್ಲಿರುವುವಲ್ಲದೆ ಗರ್ಭಗುಡಿಯ ಮೇಲಿನ ಚಾವಣಿ ಸಣ್ಣ ಅರೆಕಮಾನುಗಳ ಮೇಲೆತ್ತಿದ ಗುಮ್ಮಟದಂತಿದ್ದು ಈ ವಾಸ್ತುವಿನ್ಯಾಸದಲ್ಲಿ ಸಸ್ಸೌನೀಯ ಪ್ರಭಾವವನ್ನು ಕಾಣಬಹುದಾಗಿದೆ. ಈ ವಿಹಾರ ಪ್ರ.ಶ.4-5ನೆಯ ಶತಮಾನದ್ದು. ಬಾಮಿಯನ್ ಪ್ರಪಂಚ ಪ್ರಸಿದ್ಧವಾದ ಕಲಾಕೇಂದ್ರ. ಇಲ್ಲೂ ಹಲವು ಸಂಘಾರಾಮಗಳೂ ಶಿಲ್ಪಿತ ಚೈತ್ಯಾಲಯಗಳೂ ಇವೆ. ಆದರೆ ಕಡಿದಾದ ಬಂಡೆಯಲ್ಲಿ ಉಬ್ಬುಶಿಲ್ಪದಂತೆ ಕಡೆದಿರುವ ಎರಡು ಬೃಹತ್ ಬೌದ್ಧ ಮೂರ್ತಿಗಳು ಇಲ್ಲಿಯವುಗಳಲ್ಲಿ ಬಹುಮುಖ್ಯವಾದವು. ಇವು ಪ್ರಪಂಚಲ್ಲೇ ಅತಿ ಎತ್ತರದ ಪ್ರತಿಮೆಗಳೆಂದು ಪ್ರಸಿದ್ಧವಾಗಿವೆೆ. ದೊಡ್ಡ ಬುದ್ಧನ ಪ್ರತಿಮೆ 53.34ಮೀ ಎತ್ತರವೂ ಚಿಕ್ಕದು 36.57ಮೀ ಎತ್ತರವೂ ಇವೆ. ಶಿಲ್ಪನಿರೂಪಣೆಯಲ್ಲಿ ಗುಪ್ತ, ಸಸ್ಸೌನೀಯ ಮತ್ತು ಇರಾನಿ ಶಿಲ್ಪಗಳ ಪ್ರಭಾವ ಕಂಡುಬರುವುದರಿಂದ ಇವು 4-5ನೆಯ ಶತಮಾನದವುಗಳೆಂದು ಊಹಿಸಲಾಗಿದೆ. ಇತ್ತೀಚೆಗೆ ಇಸ್ಲಾಂ ಉಗ್ರವಾದಿಗಳು ಈ ಎರಡೂ ಬುದ್ಧ ವಿಗ್ರಹಗಳನ್ನು ನಾಶ ಮಾಡಿದ್ದುಂಟು. ಆಫ್ಘಾನಿಸ್ತಾನದ ಗುಹಾವಾಸ್ತುಶಿಲ್ಪದ ಅಧ್ಯಯನ ಹೆಚ್ಚು ನಡೆದಿಲ್ಲ. ಆದರೂ ಈಗ ಸಿಗುವ ಮಾಹಿತಿಗಳಿಂದ ಈ ಸಂಪ್ರದಾಯ ಪ್ರ್ರ.ಶ.ಪು.1 ರಿಂದ ಪ್ರ್ರ.ಶ.5-6ನೆಯ ಶತಮಾನಗಳವರೆಗೂ ನಡೆದು ಬಂತು ಎಂದು ಹೇಳಬಹುದು.

ಮಧ್ಯ ಏಷ್ಯ

ಬದಲಾಯಿಸಿ

ಮಧ್ಯ ಏಷ್ಯದ ಈಗಿನ ಖೋಟಾನ್ ಪ್ರದೇಶದಲ್ಲಿ ಅನೇಕ ಬೌದ್ಧ ಗುಹಾಲಯಗಳು 4-8ನೆಯ ಶತಮಾನಗಳ ಅವಧಿಯಲ್ಲಿ ಸ್ಥಳೀಯ ರಾಜರಿಂದ ನಿರ್ಮಿತವಾದುವು. ಕಿಜ಼ಿಲ್ ಮತ್ತು ಕುಂತುರದ ಬೌದ್ಧಾಲಯಗಳು ಶಿಲ್ಪ ಮತ್ತು ಭಿತ್ತಿ ಚಿತ್ರಗಳಿಗೆ ಹೆಸರಾಗಿವೆ. ಇವೆಲ್ಲದರಲ್ಲಿಯೂ ಬೌದ್ಧ ಸಂಘಾರಾಮಗಳೂ ಚೈತ್ಯಾಲಯಗಳೂ ಇವೆ. ಮುಂದೆ ಒಂದು ಮೊಗಸಾಲೆ, ಹಿಂದೆ ಒಂದೋ ಎರಡೇ ಕೋಣೆಗಳುಳ್ಳ ಚೈತ್ಯಾಲಯಗಳು ಸಾಮಾನ್ಯ. ಇವಕ್ಕೆ ಅರೆಪೀಪಾಯಿಯ ಅಥವಾ ಗುಮ್ಮಟದ ಆಕಾರದ ಚಾವಣಿ ಇರುತ್ತದೆ. ಇಲ್ಲಿಯ ಶಿಲ್ಪದ ವಸ್ತು ಪುರ್ಣವಾಗಿ ಭಾರತೀಯ ಮಹಾಯಾನ ಬೌದ್ಧಧರ್ಮಕ್ಕೆ ಸಂಬಂಧಿಸಿದ್ದಾದರೂ ನಿರೂಪಣೆಯಲ್ಲಿ ಇರಾನಿ, ಸಸ್ಸೌನಿ ಮತ್ತು ಚೀನಿ ಶೈಲಿಗಳ ಮಿಶ್ರಣ ಕಂಡುಬರುತ್ತದೆ.

ಚೀನ ದೇಶಕ್ಕೆ ಮಹಾಯಾನ ಬೌದ್ಧಪಂಥ ಪ್ರವೇಶಿಸಿದ ಕಾಲದಿಂದ ಅದಕ್ಕೆ ಪೋಷಣೆ ಮತ್ತು ಪ್ರೋತ್ಸಾಹ ಮುಂದುವರಿದವರೆಗೂ ಅಲ್ಲಿ ಅಸಂಖ್ಯಾತ ಬೌದ್ಧ ಗುಹಾಲಯಗಳು ನಿರ್ಮಿತವಾದವು. ಗುಹಾಲಯಗಳ ಸಂಖ್ಯಾಬಾಹುಳ್ಯದಲ್ಲಿ ಚೀನ ಭಾರತವನ್ನು ಮೀರಿಸುತ್ತದೆ. ಆದರೆ ಭಾರತದಲ್ಲಿರುವಷ್ಟು ವೈವಿಧ್ಯ ಇಲ್ಲಿ ಕಾಣುವುದಿಲ್ಲ. ಭಾರತದ ಗುಹಾ ವಾಸ್ತು ಶಿಲ್ಪ ಕಾಲಕಾಲಕ್ಕೆ ಹೊಸ ವಸ್ತು, ಭಾವ ವಿನ್ಯಾಸಗಳ ಅಳವಡಿಕೆಯಿಂದಾಗಿ ವಿಕಾಸ ಹೊಂದಿದೆ. ಆದರೆ ಚೀನದ ಕೃತಿಗಳು ಬಹುಮಟ್ಟಿಗೆ ಸಂಪ್ರದಾಯ ಬದ್ಧವಾಗಿ ಅನುಕರಣಾತ್ಮಕವಾಗಿಯೇ ಮುಂದುವರಿದವು.

ಚೀನದ ಮೊದಲ ಗುಹಾಲಯಗಳು ಕಾನ್ಸೂ ಪ್ರಾಂತದಲ್ಲಿ ಇವೆ. ಪಕ್ಕದ ಮಧ್ಯ ಏಷ್ಯದ ಬೌದ್ಧಾಲಯಗಳೇ ಇಲ್ಲಿಯವಕ್ಕೂ ಮಾದರಿ. ಸ್ಥಳೀಯ ಸಾಹಿತ್ಯಕ ಆಧಾರಗಳ ಪ್ರಕಾರ ಪ್ರ್ರ.ಶ. 4ನೆಯ ಶತಮಾನದಲ್ಲೆ ಇಲ್ಲಿ ಗುಹಾನಿರ್ಮಾಣ ಪ್ರಾರಂಭವಾಯಿತೆಂದು ತಿಳಿದರೂ ಇದುವರೆಗೆ ಸಿಕ್ಕಿರುವ ಕೃತಿಗಳಲ್ಲಿ ಯಾವುವೂ 5ನೆಯ ಶತಮಾನಕ್ಕೆ ಮುಂಚಿನವಲ್ಲ. ಕಾನ್ಸೂವಿನ ಒಂದು ಮುಖ್ಯ ಗುಹಾವಾಸ್ತು ಕೇಂದ್ರ ತುನ್ಹ್ವಾಂಗ್. ಈ ಒಂದೇ ಸ್ಥಳದಲ್ಲಿ ಸು.480 ಗುಹೆಗಳಿವೆ. ಅತ್ಯಂತ ಪ್ರಾಚೀನವಾದವು ವೇ ರಾಜವಂಶದ ಕಾಲಕ್ಕೆ (4-6ನೆಯ ಶತಮಾನಗಳು) ಸೇರಿದವು. ಇತ್ತೀಚಿನವೆಂದರೆ ಯು ಆನ್ ಅರಸರ (13-14ನೆಯ ಶತಮಾನಗಳು) ಕಾಲದವು. ಹೆಚ್ಚಿನವು ಟಾಂಗ್ (618-707) ಮತ್ತು ಸುಂಗ್ (960-1126) ರಾಜವಂಶಗಳ ಕಾಲದವು. ತುನ್ ಹ್ವಾಂಗ್ನ ಗುಹೆಗಳ ವಿನ್ಯಾಸ ಬಹು ಸರಳ. ದೇವಾಲಯಗಳಲ್ಲಿ ಹಲವು ಭಿಕ್ಷು ಕೋಣೆಗಳಿವೆ. ದೇವಗೃಹ ಮತ್ತು ಭಿಕ್ಷು ಕೋಣೆಗಳು ಜೊತೆಯಾಗಿ ಇರುವುದೇ ಹೆಚ್ಚು. ಇಲ್ಲಿಯ ಗುಹೆಗಳು ತಮ್ಮ ವಾಸ್ತುರೂಪಕ್ಕಿಂತಲೂ ಇವುಗಳಲ್ಲಿರುವ ಶಿಲ್ಪಗಳು ಮತ್ತು ವರ್ಣಚಿತ್ರಗಳಿಂದ ಹೆಚ್ಚು ಹೆಸರಾಗಿವೆ. ಇಲ್ಲಿಯ ಶಿಲ್ಪಗಳಲ್ಲಿ ಮಹಾಯಾನ ಬೌದ್ಧಪಂಥದ ಮೂರ್ತಿಗಳಾದ ವಿವಿಧ ರೀತಿಯ ಬುದ್ಧÀ ಅವಲೋಕಿತೇಶ್ವರ ಮತ್ತು ಉಪದೇವತೆಗಳ ಮೂರ್ತಿಗಳು ಕಂಡುಬರುತ್ತವೆ. ಕಾನ್ಸೂ ಪ್ರಾಂತದ ಯು-ಲಿನ್-ಕು, ತೀನ್-ತಿ-ಷಾನ್, ಯುಂಗ್-ಚಿಂಗ್, ಮೇ-ಚಿ-ಷಾನ್ಗಳಲ್ಲೂ ಗುಹಾಲಯಗಳಿವೆ. ಮೇ-ಚಿ-ಷಾನ್ನ ಕೆಲವು ಚೈತ್ಯಾಲಯಗಳು ಸು. 5ನೆಯ ಶತಮಾನಕ್ಕೆ ಸೇರಿದವು. ತೀನ್-ಷಾನ್ನ ಒಂದು ಬಂಡೆಯಲ್ಲಿರುವ 25.90ಮೀ ಎತ್ತರದ ಕುಳಿತ ಬುದ್ಧಮೂರ್ತಿ, ಯುಂಗ್-ಚಿಂಗ್ ನಲ್ಲಿರುವ ಅನೇಕ ಸೂಪ್ತಗಳ ಉಬ್ಬು ಶಿಲ್ಪಗಳು ಮತ್ತು 24.38ಮೀ ಎತ್ತರದ ಬುದ್ಧ ಮೂರ್ತಿ ಹೆಸರಾಂತ ಶಿಲ್ಪಗಳು. ಮಂಚೂರಿಯ ಪ್ರಾಂತದ ವನ್-ಪೊ-ತಾಂಗ್ನಲ್ಲೂ ವೇ ರಾಜವಂಶದ ಕಾಲದ ಪ್ರಾಚೀನ ಗುಹಾ ವಾಸ್ತುಕೃತಿಗಳಿವೆ.

ಷಾನ್ಸೀ ಪ್ರಾಂತದಲ್ಲಿರುವ ಯುನ್ ಕಾಂಗ್ನಲ್ಲಿ ಸು.40 ಗುಹೆಗಳಿವೆ. ಈ ಗುಹೆಗಳಲ್ಲಿಯ ರಚನಾತಂತ್ರ ಬಾಮಿಯನವನ್ನು ಅನುಸರಿಸುತ್ತದೆ. 16.76ಮೀ ಎತ್ತರವಿರುವ ಇಲ್ಲಿಯ ಒಂದು ಆಸೀನ ಬುದ್ಧ ಮೂರ್ತಿ ಸುಂದರ ಶಿಲ್ಪ. ತಿಯೆನ್-ಲುಂಗ್-ಷಾನ್ನ ಕೆಲವು ಗುಹೆಗಳಲ್ಲಿ ಮನಸೆಳೆಯುವಂಥ ಅಪ್ಸರೆಯರ ಉಬ್ಬು ಶಿಲ್ಪಗಳಿವೆ. ಷಾನ್-ತುಂಗ್ ಪ್ರಾಂತದ ಚಿಯೆನ್-ಪೊ-ಯೈ ಎಂಬಲ್ಲಿಯ ಒಂದು ದೊಡ್ಡ ಬಂಡೆ ಸಹಸ್ರ ಬುದ್ಧರ ಬಂಡೆ ಎಂದು ಹೆಸರಾಗಿದೆ. ಇಲ್ಲಿ ಐದು ಗುಹೆಗಳೂ ಸು. 70 ಕ್ಕೂ ಹೆಚ್ಚು ಮೂರ್ತಿ ಕೋಷ್ಠಗಳೂ ಇವೆ. 618ರಲ್ಲಿ ಮಾಡಿದ ಎರಡನೆಯ ಗುಹೆಯಲ್ಲಿರುವ ಬುದ್ಧ ತ್ರಿಮೂರ್ತಿಗಳ ವಿಗ್ರಹಗಳು (ಬುದ್ಧ, ಅಮಿತಾಭ ಮತ್ತು ಶಾಕ್ಯಮುನಿ) ಉತ್ತಮ ಶಿಲ್ಪಗಳು.

ಸಿಂಕಿಯಾಂಗ್ ಪ್ರಾಂತದ ಕೂಚದ ಗುಹೆಗಳು ಸಣ್ಣವಾದರೂ ಭಿತ್ತಿಗಳ ಮೇಲಿರುವ ವರ್ಣಚಿತ್ರಗಳಿಂದಾಗಿ ಗಮನಾರ್ಹವಾದವು. ಇದೇ ಪ್ರಾಂತದ ತತ್ಸು ಎಂಬಲ್ಲಿ 195ಮೀ ಉದ್ದ ಮತ್ತು 19.5ಮೀ ಎತ್ತರದ ವಿಶಾಲ ಬಂಡೆಯ ಮೈಯಲ್ಲಿ ಬುದ್ಧನ ಜೀವನ ಕಥೆಗಳು, ಪರಿನಿರ್ವಾಣ, ಜಾತಕಕಥೆಗಳು ಮುಂತಾದ ಅಸಂಖ್ಯಾತ ಶಿಲ್ಪಗಳನ್ನು ಕಂಡರಿಸಲಾಗಿದೆ. ಕೆಲವಕ್ಕೆ ವಿವರಣಾತ್ಮಕ ಶಾಸನಗಳೂ ಇವೆ.

ಹೋಪೇ ಪ್ರಾಂತ್ಯದ ಗುಹಾ ವಾಸ್ತು ಕೇಂದ್ರಗಳಲ್ಲಿ ಸಿಯಾಂಗ್-ತಂಗ್-ಷಾನ್ ಮುಖ್ಯವಾದದ್ದು. ಇಲ್ಲಿಯ 6ನೆಯ ಶತಮಾನದ ಶಿಲ್ಪಗಳು ಜೀವಭರಿತವಾಗಿರುವಂತೆ ಕಾಣುವ ಶ್ರೇಷ್ಠ ಶಿಲ್ಪಗಳು. ಇವನ್ನು ಬಂಡೆಯಲ್ಲಿ ಉಬ್ಬುಶಿಲ್ಪದಂತೆ ಕಡೆದಿದ್ದರೂ ಪೂರ್ಣ ಶಿಲ್ಪದಂತೆಯೇ ಇವು ಬಹಳ ಮೇಲೆದ್ದಿವೆ. ಇವುಗಳಲ್ಲಿ ಮೂರನೆಯ ಗುಹೆಯಲ್ಲಿರುವ ಬುದ್ಧಮೂರ್ತಿ ಸಮೂಹ ಹೆಚ್ಚು ಹೆಸರಾಗಿದೆ. ಈ ಶಿಲ್ಪದಲ್ಲಿ ಮಧ್ಯದಲ್ಲಿ ಬುದ್ಧ, ಎರಡೂ ಕಡೆ ಇಬ್ಬರು ಲೋಹನ್ರು (ಬೋಧಿಸತ್ತ್ವ) ಮತ್ತು ಇಬ್ಬರು ಪ್ರತ್ಯೇಕ ಬುದ್ಧರನ್ನು ಕೆತ್ತಲಾಗಿದೆ. 16ನೆಯ ಶತಮಾನದ ಕೆಲವು ಗುಹೆಗಳೂ ಇಲ್ಲಿವೆ.

ಹೋನಾನ್ ಪ್ರಾಂತದ ಹಲವು ಸ್ಥಳಗಳಲ್ಲಿರುವ ಗುಹೆಗಳು ಶ್ರೇಷ್ಠ ಶಿಲ್ಪಗಳಿಗೂ ನಾಜೂಕಿನ ವಾಸ್ತುನಿರೂಪಣೆಗೂ ಪ್ರಸಿದ್ಧವಾಗಿವೆ. ಲಂಗ್-ಮೇನ್ನಲ್ಲಿ ಯೀ ನದಿಯ ಎರಡೂ ಕಡೆಗಳ ಕಡಿದಾದ ದಡಗಳಲ್ಲಿ ಗುಹೆಗಳನ್ನು ಕಲಾತ್ಮಕವಾಗಿ ಕಡಿಯಲಾಗಿದೆ. ಈ ಗುಹೆಗಳು 5-8ನೆಯ ಶತಮಾನಗಳ ಕಾಲಕ್ಕೆ ಸೇರಿದವು. ಇಲ್ಲಿಯ ಕುನ್ವಂಗ್ ಗುಹೆ (493-525) ಆಯಾಕಾರವಾಗಿದ್ದರೂ ಇದಕ್ಕೆ ಪೀಪಾಯಿಯ ಆಕಾರದ ಚಾವಣಿ ಇದೆ. ಇಲ್ಲಿಯ ಪಿನ್ಯಂಗ್ ಗುಹೆಯಲ್ಲಿ (523) ಇಕ್ಕೆಲಗಳಲ್ಲಿ ಆನಂದ-ಮಹಾಕಶ್ಯಪ ಮತ್ತು ಇಬ್ಬರು ಬೋಧಿಸತ್ವರನ್ನು ಹೊಂದಿರುವ ಬುದ್ಧಮೂರ್ತಿಯೂ ಬೌದ್ಧತ್ರಿಮೂರ್ತಿಗಳ ವಿಗ್ರಹಗಳೂ ಚೀನದ ವೇ ಶಿಲ್ಪ ಸಂಪ್ರದಾಯದ ಉತ್ತಮ ಉದಾಹರಣೆಗಳೆಂದು ಪರಿಗಣಿತ ವಾಗಿವೆಯಲ್ಲದೆ, ಇವೇ ಜಪಾನಿನ ತೋರಿ ಶಿಲ್ಪ ಸಂಪ್ರದಾಯಕ್ಕೆ ಮೂಲ ಮಾದರಿಗಳನ್ನು ಒದಗಿಸಿದುವೆಂದು ತಿಳಿಯಲಾಗಿದೆ. ಲುಂಗ್-ಮೇನ್ನ ಇತರ ಗುಹೆಗಳಲ್ಲಿರುವ ಹಾರುತ್ತಿರುವ ಅಪ್ಸರೆಯರಿಂದ ಸುತ್ತುವರಿದ ಕಮಲಪುಷ್ಪ (520) ಮತ್ತು 15ಮೀ ಎತ್ತರದ ವೈರೋಚನನ ವಿಗ್ರಹ (ಸು.675) ಬಹು ಪರಿಣಾಮಕಾರಿ ಶಿಲ್ಪಕೃತಿಗಳು.

ಚೀನದಲ್ಲಿ ಬೌದ್ಧರಲ್ಲದೆ ತಾವೊ ಸಂಪ್ರದಾಯದವರು ಸಹ ಗುಹಾವಾಸ್ತು ರೀತಿಯನ್ನು ಅಪರೂಪವಾಗಿ ಬಳಸಿಕೊಂಡಿದ್ದಾರೆ. ಷಾನ್ಸೀ ಪ್ರಾಂತದ ಲುಂಗ್-ಷಾನ್ನಲ್ಲಿ 1234 -39ರಲ್ಲಿ ಕೊರೆಯಲಾದ ಎರಡು ಗುಹೆಗಳು ತಾವೋ ಧರ್ಮೀಯರದು. ಇವುಗಳಲ್ಲಿ ಆ ಸಂಪ್ರದಾಯದ ಪೌರಾಣಿಕ ವ್ಯಕ್ತಿಗಳಾದ ಷೇನ್-ನುಂಗ್, ಹ್ವಾಂಗ್-ತಿ ಮತ್ತು ಪು-ಹ್ನಿ ಇವರ ವಿಗ್ರಹಗಳಿವೆ. ಸಿಂಕಿಯಾಂಗ್ ಪ್ರಾಂತದ ತತ್ಸುವಿನಲ್ಲೂ ತಾವೋ ಸಂಪ್ರದಾಯದವರ ಶಿಲ್ಪಗಳೂ, ಚೈತ್ಯಾಲಯಗಳು, ವಿಹಾರಗಳೂ ಇವೆ.

ಶ್ರೀಲಂಕ, ಕಾಂಬೋಡಿಯ: ಶ್ರೀಲಂಕದಲ್ಲಿ ಪ್ರ್ರ.ಶ.ಪು. 3ನೆಯ ಶತಮಾನದಲ್ಲೇ ಬೌದ್ಧಧರ್ಮ ಪಸರಿಸಿ ಇಂದಿಗೂ ಅಲ್ಲಿಯ ಪ್ರಧಾನ ಧರ್ಮವಾಗಿರುವುದಾದರೂ ಅಲ್ಲಿ ಹೆಚ್ಚಿನ ಗುಹಾ ವಾಸ್ತುಕೃತಿಗಳಿಲ್ಲ. ಇದು ಕೊರೆಯಲು ಕಠಿಣವಾದ ಗಟ್ಟಿ ಬಂಡೆಗಳ ಪ್ರದೇಶವಾಗಿರುವುದೇ ಇದಕ್ಕೆ ಕಾರಣವಿರಬಹುದು. ಪ್ರ್ರ.ಶ.ಪು.3-2ನೆಯ ಶತಮಾನಕ್ಕೆ ಸೇರಿದ ಕೆಲವು ಭಿಕ್ಷು ವಾಸ ಗುಹೆಗಳು ಶಾಸನ ಸಹಿತ ಇಲ್ಲಿ ಕಂಡುಬಂದಿವೆಯಾದರೂ ಇವು ವಾಸ್ತುಶಿಲ್ಪ ದೃಷ್ಟಿಯಿಂದ ಮುಖ್ಯವಾದುವಲ್ಲ. ಇವೆಲ್ಲ ಸಾಮಾನ್ಯವಾಗಿ ಸ್ವಾಭಾವಿಕ ಗುಹೆಗಳು. ಭಿಕ್ಷುಗಳ ಮಂಚಗಳು ಮತ್ತು ಸ್ವಲ್ಪಮಟ್ಟಿಗೆ ಚಾವಣಿಯನ್ನು ಮಾತ್ರ ಕೆತ್ತಲಾಗಿದೆ. ಸಿಂಹಳದ ಗುಹಾ ವಾಸ್ತುವಿನಲ್ಲಿ ಮುಖ್ಯವಾದದ್ದು ಒಂದನೆಯ ಪರಾಕ್ರಮ ಬಾಹುವಿನ ಆಳಿಕೆಯಲ್ಲಿ (12ನೆಯ ಶತಮಾನ) ಪೊಲೊನ್ನರುವ ಬಳಿ ಕೊರೆಯಲಾಗಿರುವ ಗಲ್ ವಿಹಾರ. ಇಲ್ಲಿ ಎರಡು ಆಸೀನವಾದ ಒಂದು ನಿಂತಿರುವ ಮತ್ತು ಮತ್ತೊಂದು ಮಲಗಿರುವ ಬುದ್ಧಮೂರ್ತಿಗಳನ್ನು ಕೆತ್ತಲಾಗಿದೆ. ವೆಲಿಗಮ ಮತ್ತು ಇಸುರುಮುನಿಯ ಎಂಬಲ್ಲೂ ಶಿಲೆಯಲ್ಲಿ ಕಂಡರಿಸಿದ ಕೆಲವು ಶಿಲ್ಪಗಳಿವೆ.

ಬೌದ್ಧಧರ್ಮ ಹರಡಿದ್ದ ಕಾಂಬೋಡಿಯ ದೇಶದಲ್ಲೂ ಈ ವಾಸ್ತುಶಿಲ್ಪ ಸಂಪ್ರದಾಯ ಸ್ವಲ್ಪ ಮಟ್ಟಿಗೆ ಪ್ರಚಲಿತವಾಗಿತ್ತು. ಅಲ್ಲಿಯ ಪನಾಮ್ ಕುಲೇನ್ ಎಂಬಲ್ಲಿ ಹಲವು ಭಿಕ್ಷುಗೃಹಗಳೂ ಶಿಲ್ಪಗಳೂ ಶಾಸನಗಳೂ ಇವೆ ಎಂಬ ಹೇಳಿಕೆಯಿದ್ದರೂ ಇವುಗಳ ಬಗ್ಗೆ ಹೆಚ್ಚು ಅಧ್ಯಯನ ನಡೆದಿಲ್ಲ.

ಇಥಿಯೋಪಿಯ

ಬದಲಾಯಿಸಿ

ಗುಹಾ ವಾಸ್ತು ಸಂಪ್ರದಾಯದ ಕೆಲವು ಕುತೂಹಲಕರ ಕೃತಿಗಳು ಇಲ್ಲಿವೆ. ಇವೆಲ್ಲ ಕ್ರೈಸ್ತಧರ್ಮಕ್ಕೆ ಸಂಬಂಧಿಸಿದವು. ಉತ್ತರ ಇಥಿಯೋಪಿಯದ ವೆಕ್ರೊ, ಅಂಬ ಮೈಕೆಲ್, ಮುಗ್ಗ, ದಾವೆಂತ್ ಎಂಬ ಸ್ಥಳಗಳಲ್ಲಿ ಗುಹಾ ಇಗರ್ಜಿಗಳಿವೆ. ಇವುಗಳಲ್ಲಿ ಸಾಮಾನ್ಯವಾಗಿ ಕಂಬಗಳುಳ್ಳ ಅಥವಾ ಇಲ್ಲದಿರುವ ಒಂದು ಹಜಾರವಷ್ಟೇ ಇರುತ್ತದೆ. ಇವುಗಳ ಕಾಲನಿಷ್ಕರ್ಷೆ ಕಷ್ಟ. ಆದರೆ 8-12ನೆಯ ಶತಮಾನಗಳವಾಗಿರಬಹುದೆಂದು ಊಹಿಸಲಾಗಿದೆ. ಈ ಗುಹಾ ಇಗರ್ಜಿಗಳಿಂದಲೇ ಸ್ಫೂರ್ತಿಗೊಂಡು ಬೆಳೆದ ಪೂರ್ಣವಾಗಿ ಶಿಲೆಯಲ್ಲಿ ಕೊರೆದ ಅನೇಕ ಇಗರ್ಜಿಗಳು ಲಾಲಿಬಾಲ, ದಾರಸ್ಗೆ, ಆಬ್ರಹ, ಆಸ್ಟೇನ ಮುಂತಾದೆಡೆಗಳಲ್ಲಿವೆ. ಲಾಲಿಬಾಲ ಒಂದರಲ್ಲೇ ಹತ್ತು ಇಗರ್ಜಿಗಳಿವೆ. ಇವೆಲ್ಲ ಸ್ಥಳೀಯ ಕ್ರೈಸ್ತಸಂತ ಮತ್ತು ದೊರೆ ಲಾಲಿಬಾಲ (12ನೆಯ ಶತಮಾನ) ಕಟ್ಟಿಸಿದವೆಂದು ನಂಬಿಕೆ. ಇವುಗಳಲ್ಲಿ ಇಗರ್ಜಿಗಳಲ್ಲಿ ಸಾಮಾನ್ಯವಾಗಿರುವಂತೆ ಪ್ರಾರ್ಥನಾ ಹಜಾರ, ಪವಿತ್ರ ಕೋಷ್ಠ ಅಥವಾ ವೇದಿಕೆ ಮತ್ತು ಪಕ್ಕ ಹಜಾರಗಳು ಇರುತ್ತವೆ. ಲಾಲಿಬಾಲದ ಗಿಯೋರ್ಗಿಸ್ ಇಗರ್ಜಿಯ ತಳವಿನ್ಯಾಸ ಸಮಾನ ಅಳತೆ ತೋಳುಗಳುಳ್ಳ ಗ್ರೀಕ್ ಶಿಲುಬೆಯ ಆಕಾರದಲ್ಲಿವೆ. ಇವುಗಳ ಮೇಲ್ಚಾವಣಿಯೂ ಕಲ್ಲಿನ ಬಂಡೆಯೇ ಆದರೂ ಒಳಗೆ ಮರದ ಭಾಗಗಳನ್ನು ಆಲಂಕಾರಿಕವಾಗಿ ಅಳವಡಿಸಿರುವುದೂ ಉಂಟು. ಇಂಥ ಕೆಲವು ಇಗರ್ಜಿಗಳಲ್ಲಿ ವರ್ಣಚಿತ್ರ ಗಳೂ ಇವೆ. ಪ್ರ್ರ.ಶ.6-10ನೆಯ ಶತಮಾನಗಳ ನಡುವೆ ಕೊರೆಯಲಾಗಿರುವ ದಾಬ್ರ ದಾಮ್ಮೊದಲ್ಲಿಯ ಕ್ರೈಸ್ತ ಇಗರ್ಜಿ ಇಥಿಯೋಪಿಯದ ಮುಖ್ಯ ವಾಸ್ತುಕೃತಿಗಳಲ್ಲೊಂದು. ಇದರ ತಳ ವಿನ್ಯಾಸ ಸಿರಿಯದ ಬ್ಯಾಸಿಲಿಕಗಳಂತೆ ಮಧ್ಯ ಮತ್ತು ಪಕ್ಕ ಹಜಾರಗಳು. ಮಧ್ಯ ಹಜಾರದ ಹಿಂದೆ ಅರೆವೃತ್ತಾಕಾರದ ಒಳನಡೆ ಇವೆ. ಇದು ಎರಡು ಅಂತಸ್ತುಗಳಲ್ಲಿದೆ. ಮೊದಲ ಅಂತಸ್ತಿನಲ್ಲಿ ಕ್ರೈಸ್ತ ಗುರುಗಳಿಗಾಗಿ ಕೋಣೆಗಳಿವೆ. ದಾಬ್ರ ದಾಮ್ಮೊದ ಈ ವಿಹಾರದಲ್ಲಿ ಉತ್ತಮ ಅಲಂಕರಣ ಶಿಲ್ಪಗಳು ಸಹ ಇವೆ. ಇಥಿಯೋಪಿಯದ ರಾಜಧಾನಿಯಾದ ಆಡಿಸ್ ಆಬಾಬದಲ್ಲೂ ಶಿಲೆಯಲ್ಲಿ ಕೊರೆದ ಒಂದು ಇಗರ್ಜಿ ಇದೆ. ಆದರೆ ಈಗ ಇದು ಬಹು ಶಿಥಿಲಾವಸ್ಥೆಯಲ್ಲಿದೆ. ಇಲ್ಲಿಂದ ಸು.32 ಕಿಮೀ ಪಶ್ಚಿಮದಲ್ಲಿರುವ ಆಡದಿ ಮರ್ಯಾಮ್ ಇಗರ್ಜಿ ಭೂಗರ್ಭದಲ್ಲಿ ಕೊರೆಯಲಾಗಿರುವ ಒಂದು ಗುಹೆ. ಇದನ್ನು ಲಾಲಿಬಾಲದ ಕಾಲದ ಅನಂತರ ಮತ್ತು 16ನೆಯ ಶತಮಾನಕ್ಕೆ ಮುಂಚೆ ಯಾವುದೋ ಕಾಲದಲ್ಲಿ ಕೊರೆದಿರಬೇಕೆಂದು ಊಹಿಸಲಾಗಿದೆ.

ಭಾರತದ ಗುಹಾ ವಾಸ್ತು-ಶಿಲ್ಪ ಇತಿಹಾಸ ಪ್ರಾರಂಭವಾಗುವುದು ಪ್ರ.ಶ.ಪು. 3ನೆಯ ಶತಮಾನದಲ್ಲಿ, ಮೌರ್ಯ ಸಾಮ್ರಾಟ ಅಶೋಕನ ಕಾಲದಲ್ಲಿ ಬಿಹಾರ ರಾಜ್ಯದ ಗಯ ಬಳಿ ಇರುವ ಬರಾಬರ್ ಬೆಟ್ಟಗಳಲ್ಲಿ ಏಳು ಗುಹೆಗಳು ಇವೆ. ಹಾಗೆಯೇ ಸಮೀಪದ ರಾಜಗಿರ್ (ಪ್ರಾಚೀನ ಮಗಧ ಸಾಮ್ರಾಜ್ಯದ ರಾಜಧಾನಿ ರಾಜಗೃಹ) ಬಳಿಯ ಬೆಟ್ಟಗಳಲ್ಲಿ ನಾಲ್ಕು ಗುಹೆಗಳಿವೆ. ಇವುಗಳ ಮೂರು ಗುಹೆಗಳಲ್ಲಿ ಅಶೋಕನ ಶಾಸನಗಳೂ ಒಂದರಲ್ಲಿ ಅವನ ಮೊಮ್ಮಗ ದಶರಥನ ಶಾಸನವೂ ಇದ್ದು, ಇವುಗಳ ಕಾಲದ ಬಗ್ಗೆ ಖಚಿತ ಮಾಹಿತಿಯನ್ನು ಒದಗಿಸುತ್ತವೆ. ಇವೆಲ್ಲ ಬಹಳ ಚಿಕ್ಕವೂ ಸಾಮಾನ್ಯ ಸ್ವರೂಪದವೂ ಆಗಿದ್ದು, ಭಾರತದ ಗುಹಾ ವಾಸ್ತುಶಿಲ್ಪದ ಆರಂಭ ಹಂತವನ್ನು ಸೂಚಿಸುತ್ತವೆ.

ಬರಾಬರ್ ಬೆಟ್ಟಗಳಲ್ಲಿರುವ 2 ಗುಹೆಗಳು ಗುಹಾ ವಾಸ್ತು-ಶಿಲ್ಪ ಇತಿಹಾಸದ ದೃಷ್ಟಿಯಿಂದ ಗಮನಾರ್ಹ. ಮೊದಲನೆಯದು ಸುಧಾಮ ಗುಹೆ. ಎತ್ತರದ ಬಂಡೆಯೊಂದರಲ್ಲಿ ಸು.1.21 ಮೀ ಅಗಲ, 1.82 ಮೀ ಎತ್ತರದ ಆಯಾಕಾರದ ಒಂದು ದ್ವಾರವನ್ನು ಕೊರೆದು, ಅದರ ಒಳಗೆ ಸು. 10 ಮೀ ಉದ್ದ, 3.64 ಮೀ ಅಗಲದ ಆಯಾಕಾರದ ಒಂದು ದೊಡ್ಡ ಕೋಣೆಯನ್ನೂ ಅದರ ಒಂದು ಪಕ್ಕದ ಕೊನೆಯಲ್ಲಿ ವೃತ್ತಾಕಾರದ ಒಂದು ಕೋಣೆಯನ್ನೂ ನಿರ್ಮಿಸಲಾಗಿದೆ. ದೊಡ್ಡ ಕೋಣೆಯ ಮೇಲ್ಭಾಗವನ್ನು ಅರ್ಧ ಕಮಾನಿನಾಕೃತಿಯಲ್ಲೂ ವೃತ್ತಾಕಾರದ ಕೋಣೆಯ ಮೇಲ್ಭಾಗವನ್ನು ಅರ್ಧ ಗೋಳಾಕಾರದಲ್ಲೂ ಕೆತ್ತಿ ಛತ್ತನ್ನು ರೂಪಿಸಲಾಗಿದೆ. ಲೋಮಸ ಋಷಿ ಗುಹೆ ಎಂದು ಕರೆಯಲಾಗುವ ಇನ್ನೊಂದರ ವಿನ್ಯಾಸ ಸಹ ಇದೇ ರೀತಿಯಲ್ಲೇ ಇದೆ. ಆದರೆ ಒಳ ಹೋಗುವ ದ್ವಾರದ ಮುಂಬದಿಯ ಚೈತ್ಯ ಕಮಾನಿನಾಕೃತಿಯಲ್ಲಿದ್ದು, ಸುಂದರ ಅಲಂಕರಣದಿಂದ ಕೂಡಿದೆ.

ಶಿಲಾಶಿಲ್ಪದ ತಂತ್ರಗಾರಿಕೆ ಪರ್ಷಿಯ ದೇಶದಲ್ಲಿ ಪ್ರಚಲಿತವಾಗಿದ್ದು ಅಲ್ಲಿಂದ ಭಾರತಕ್ಕೆ ಬಂತೆಂಬುದು ಇತಿಹಾಸಜ್ಞರ ಅಭಿಪ್ರಾಯ (ಆದರೆ ಕೇರಳ-ಕರ್ನಾಟಕದ ಕಡಲ ತೀರದ ಪ್ರದೇಶದಲ್ಲಿ ಪ್ರ.ಶ.ಪು. ಸು.5-4 ಶತಮಾನಗಳಲ್ಲಿ ಬೃಹತ್ ಶಿಲಾ ಸಂಸ್ಕೃತಿಯ ಜಂಬಿಟ್ಟಿಗೆಯ ಶಿಲಾ ಸಮತಟ್ಟಿನಲ್ಲಿ ಕೊರೆದು ಸೃಷ್ಟಿಸಿದ ಬಾಗಿಲು ಚೌಕಟ್ಟು ಸಹಿತ ಅರ್ಧ ಗೋಲಾಕೃತಿಯ ಹಲವಾರು ನೆಲಮಾಳಿಗೆಗಳಿವೆ. ಕೆಲವು ಎರಡು ನಾಲ್ಕು ಕೋಣೆಗಳಿಂದಲೂ ಕೂಡಿವೆ. ಇದಕ್ಕೂ ಪೂರ್ವದಲ್ಲಿ ಆದಿ ಹರಪ್ಪ ನಾಗರಿಕತೆಯ ನೆಲೆಯಾದ ಧೋಲಾವೀರದಲ್ಲಿ ಮಳೆಯ ನೀರನ್ನು ಸಂಗ್ರಹಿಸಲು ಕೆಂಪು ಮರಳು ಕಲ್ಲಿನ ಸಮತಟ್ಟಿನಲ್ಲಿ ಕೊರೆದು ಮಾಡಿದ ದೊಡ್ಡ ದೊಡ್ಡ ತೊಟ್ಟಿಗಳಿದ್ದುದು ಬೆಳಕಿಗೆ ಬಂದಿವೆ. ಈ ತಂತ್ರಜ್ಞಾನ ಪರಂಪರೆ ಮೌರ್ಯ ಚಕ್ರವರ್ತಿ ಅಶೋಕನ ಕಾಲದಲ್ಲಿಯೂ ಸುಧಾರಿತಗೊಂಡು ಮುಂದುವರೆದಿರುವ ಸಾಧ್ಯತೆ ಇದೆ). ಆದರೆ ಪರ್ಷಿಯ ದೇಶ ಹಾಗೂ ಇತರ ಪಶ್ಚಿಮ ಏಷ್ಯ ಪ್ರದೇಶದಲ್ಲಿ ಗುಹಾ ವಾಸ್ತು ಮೃತರಿಗೆ ಸಂಬಂಧಪಟ್ಟಂತೆ ಮಾತ್ರ ಉಪಯೋಗವಾಗುತ್ತಿತ್ತು. ಭಾರತದ ಈ ಮೊದಲ ಗುಹೆಗಳು ಧಾರ್ಮಿಕ ಆಚರಣೆಗೆ ಸಂಬಂಧಿಸಿದವು. ಹೆಚ್ಚಿನವೆಲ್ಲ ಪ್ರ.ಶ.ಪು. ಕಾಲದಲ್ಲಿ ಪ್ರಚಲಿತವಾಗಿದ್ದ ಚೈತ್ಯಾಲಯದ ಮಾದರಿಯಲ್ಲಿದ್ದು, ಬಹುಶಃ ಇವು ಬೌದ್ಧ ಅಥವಾ ಇನ್ನಾವುದೋ ಧರ್ಮಕ್ಕೆ ಸಂಬಂಧಿಸಿದ ಪುಜಾಗೃಹವಾಗಿರಬಹುದು. ಸುಧಾಮ ಗುಹೆಯನ್ನು ಅಶೋಕ ಆಜೀವಿಕರಿಗೆ ಮಾಡಿಸಿಕೊಟ್ಟನೆಂದು ಅಲ್ಲಿರುವ ಅವನ ಶಾಸನ ತಿಳಿಸುತ್ತದೆ.

ಮೌರ್ಯ ಸಾಮ್ರಾಜ್ಯದ ಸ್ಥಾಪನೆಯೊಡನೆ ಒದಗಿ ಬಂದ ಶಾಂತ ರಾಜಕೀಯ ಪರಿಸ್ಥಿತಿ, ವ್ಯಾಪಾರಿಗಳ ಅಭಿವೃದ್ಧಿ, ಇವುಗಳ ಜೊತೆಗೆ ಜೈನ-ಬೌದ್ಧ ಧರ್ಮಗಳು ಭಾರತಾದ್ಯಂತ ಹಬ್ಬಲು ದೊರಕಿದ ಅವಕಾಶ, ಇವುಗಳಿಂದಾಗಿ ಉತ್ತರ ಭಾರತದ ಅದರಲ್ಲೂ ಮಗಧ ಪ್ರದೇಶದ ಅನೇಕ ರೀತಿ ನೀತಿ ಆಚಾರಗಳು ಭಾರತಾದ್ಯಂತ ಹರಡಲಾರಂಭಿಸಿದವು. ಇದರ ಜೊತೆಯಲ್ಲೇ ಗುಹಾ ವಾಸ್ತು-ಶಿಲ್ಪ ಸಹ ಭಾರತದ ವಿವಿದೆಡೆಗಳಲ್ಲಿ ಕಾಣಿಸಿಕೊಂಡಿತು. ತಮಿಳುನಾಡಿನ ಮಧುರೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕಂಡು ಬರುವ ಚಿಕ್ಕ ಗುಹೆಗಳು ಪ್ರ.ಶ.ಪು. 2ನೆಯ ಶತಮಾನದವಾಗಿದ್ದು.

ಪ್ರಾರಂಭಿಕ ಘಟ್ಟವನ್ನು ಸೂಚಿಸುತ್ತವೆ. ಇವುಗಳಲ್ಲಿ ಸಾಮಾನ್ಯವಾಗಿ ಒಂದು ಸ್ವಾಭಾವಿಕ ಗುಹೆಯನ್ನೇ ಉಪಯೋಗಿಸಿಕೊಂಡು ಹಿಂಭಾಗದಲ್ಲಿ ಒಬ್ಬರು ಮಲಗಬಹುದಾದ ಒಂದು ಶೈಯ್ಯಾಸನವನ್ನು ನಿರ್ಮಿಸಿ ತೆರೆದ ಮುಂಭಾಗದಲ್ಲಿ ಛತ್ತಿನ ಮೇಲೆ ಸ್ವಲ್ಪ ಮಟ್ಟ ಮಾಡಿರಲಾಗುತ್ತದೆ. ಇವುಗಳ ಜೊತೆಯಲ್ಲಿ ದೊರಕಿರುವ ಕೆಲವು ಶಾಸನಗಳಿಂದ ಇವು ಜೈನ ಸಂನ್ಯಾಸಿಗಳ ವಸತಿಗಾಗಿ ಮಾಡಿದವು ಎಂದು ತಿಳಿಯುತ್ತದೆ. ಹಾಗೆಯೇ ಒರಿಸ್ಸದ ಭುವನೇಶ್ವರದ ಸಮೀಪದಲ್ಲೇ ಇರುವ ಉದಯಗಿರಿ-ಖಂಡಗಿರಿ ಬೆಟ್ಟಗಳಲ್ಲಿ ಕೆಲವು ಗುಹೆಗಳನ್ನು ನಿರ್ಮಿಸಲಾಗಿದ್ದು, ಇವುಗಳ ಮುಂಭಾಗದಲ್ಲಿ ಒಂದು ತೆರೆದ ಹಜಾರ, ಒಳಗೆ ನಾಲ್ಕಾರು ಕೋಣೆಗಳನ್ನು ಕೊರೆಯಲಾಗಿದೆ. ಕೆಲವು ಗುಹೆಗಳಲ್ಲಿ ಹಜಾರದ ಭಾಗದಲ್ಲಿ ಬಾಗಿಲವಾಡದ ಸುತ್ತ ಶಿಲ್ಪಗಳನ್ನು ಕೆತ್ತಲಾಗಿದೆ. ಈ ಗುಹಾ ಸಮೂಹದಲ್ಲಿರುವ ರಾಣಿಗುಂಫ, ಅನಂತಗುಂಫ, ಹಾಥಿಗುಂಫ ಇವು ಪ್ರಸಿದ್ಧವಾಗಿವೆ. ಹಾಥಿಗುಂಫದಲ್ಲಿ ದೊರಕಿರುವ ಶಾಸನವೊಂದರ ಆಧಾರದಿಂದ ಹಾಗೂ ಇದರ ಸಾಂದರ್ಭಿಕ ಸಾಕ್ಷ್ಯಗಳಿಂದ ಈ ಗುಹಾ ಸಮೂಹ ಜೈನ ಯತಿಗಳಿಗಾಗಿ ನಿರ್ಮಿಸಲ್ಪಟ್ಟಿರಬೇಕು ಎಂದು ತರ್ಕಿಸಲಾಗಿದೆ. ಇವುಗಳ ರಚನೆಯ ಕಾಲ ಪ್ರ.ಶ.ಪು.ಸು 2ನೆಯ ಶತಮಾನದಿಂದ 1ನೆಯ ಶತಮಾನದವೆನ್ನಲಾಗಿದೆ.

ಗುಹಾ ದೇವಾಲಯಗಳಿಗೆ ಅತ್ಯಂತ ಪ್ರಸಿದ್ಧವಾಗಿರುವುದು ಪಶ್ಚಿಮ ಭಾರತ, ಅದರಲ್ಲೂ ಮಹಾರಾಷ್ಟ್ರದ ಪಶ್ಚಿಮ ಭಾಗದಲ್ಲಿ ಹಬ್ಬಿರುವ ಸಹ್ಯಾದ್ರಿ ಪರ್ವತ ಶ್ರೇಣಿ ಮತ್ತು ಅದರ ಕಿರುಬೆಟ್ಟಗಳ ಪ್ರದೇಶ. ಪಶ್ಚಿಮ ಭಾರತ ಅಶೋಕನ ಸಾಮ್ರಾಜ್ಯದ ಭಾಗವಾಗಿತ್ತು ಎಂಬುದು ಮುಂಬಯಿ ಬಳಿಯ ಸೋಪಾರದಲ್ಲಿ ದೊರಕಿರುವ ಅವನ ಶಾಸನಗಳಿಂದಷ್ಟೇ ಅಲ್ಲದೆ, ಅಶೋಕನು ಬೌದ್ಧಧರ್ಮ ಪ್ರಚಾರಕ್ಕಾಗಿ ಈ ಪ್ರದೇಶಕ್ಕೆ ಬೌದ್ಧ ಭಿಕ್ಷುಗಳನ್ನು ಕಳುಹಿಸಿದ್ದ ನೆಂಬುದಕ್ಕೂ ಸಾಕ್ಷ್ಯಾಧಾರಗಳಿವೆ. ಸಹಜವಾಗಿ, ಅಶೋಕನು ಗಯ ಪ್ರದೇಶದಲ್ಲಿ ಪ್ರಾರಂಭಿಸಿದ ಗುಹಾ ವಾಸ್ತುಶಿಲ್ಪ ಕಲೆ ಸಹ ಬಹು ಮುಂಚೆಯೇ ಇಲ್ಲಿಗೂ ಹರಡಿತು. ಈ ಪ್ರದೇಶದಲ್ಲಿ ಹಬ್ಬಿರುವ ಕರಿವರ್ಣದ ಶಿಲೆಯ ಬೆಟ್ಟಗಳು ಗುಹಾ ವಾಸ್ತುಶಿಲ್ಪ ಇಲ್ಲಿ ವಿಶಿಷ್ಟ ರೀತಿಯಲ್ಲಿ ಬೆಳೆಯುವುದಕ್ಕೆ ಕಾರಣವಾಯಿತು. ಈ ಪ್ರದೇಶದಲ್ಲಿ ಸು. 60ಕ್ಕೂ ಹೆಚ್ಚು ಗುಹಾ ವಾಸ್ತುಕೇಂದ್ರಗಳು ಇದ್ದು ಒಟ್ಟಾರೆಯಾಗಿ ಸು. 1000 ಕ್ಕೂ ಹೆಚ್ಚು ಗುಹಾ ವಾಸ್ತುಶಿಲ್ಪ ಕೃತಿಗಳು ಕಂಡುಬರುತ್ತವೆ.

ಹೊಸ ವಾಸ್ತು ಸಂಪ್ರದಾಯದ ಅಳವಡಿಕೆಯ ಮೊದಲ ಪ್ರಯೋಗಗಳು ಎನ್ನಬಹುದಾದ ಚಿಕ್ಕ ಚಿಕ್ಕ ವಾಸ್ತು ರಚನೆಗಳು ಮುಂಬಯಿ ಬಳಿಯ ಜೀವದನ್ ವಿಹಾರ, ಕನ್ಹೇರಿ, ಪುಣೆ ಜಿಲ್ಲೆಯಲ್ಲಿರುವ ಭಾಜ, ಜುನ್ನರ್ ಇತ್ಯಾದೆಡೆಗಳಲ್ಲಿವೆ. ಪ್ರ.ಶ.ಪು. 2ನೆಯ ಶತಮಾನದ ಪ್ರಾರಂಭದ ಆಸುಪಾಸಿಗೆ ಸೇರಿದ ಇವೆಲ್ಲ ಬೌದ್ಧಧರ್ಮಕ್ಕೆ ಸಂಬಂಧಿಸಿದವು. ಪ್ರಾರಂಭದ ಘಟ್ಟದಲ್ಲಿ ಬೌದ್ಧ ಭಿಕ್ಷುಗಳ ಆಚರಣೆಯಲ್ಲಿ ಇದ್ದ ವಸ್ಸಾವಾಸ (ವರ್ಷಾವಾಸ) ಸಂಪ್ರದಾಯಕ್ಕೆ ಅನುಕೂಲವಾಗುವಂತೆ ರಚಿತವಾದವು. ಬೌದ್ಧ ಭಿಕ್ಷುಗಳು ವರ್ಷಾಕಾಲದ ಅಂದರೆ ಮಳೆಗಾಲದ ನಾಲ್ಕು ತಿಂಗಳ ಕಾಲ ಒಂದೇ ಪ್ರದೇಶದಲ್ಲಿ ನೆಲೆಸಿರಬೇಕು ಎಂಬುದು ಈ ಸಂಪ್ರದಾಯದ ಆಚರಣೆ. ಇದಕ್ಕಾಗಿ ಬುದ್ಧನ ಕಾಲದಲ್ಲಿಯೇ ವಿಹಾರಗಳ ರಚನೆ ಪ್ರಾರಂಭವಾಗಿತ್ತು. ಈ ಪ್ರದೇಶದಲ್ಲಿ ಕಾಣಬರುವ ಗುಹಾ ವಾಸ್ತು ಸಮುದಾಯಗಳು ಬೌದ್ಧ ವಿಹಾರಗಳೇ. ಅತ್ಯಂತ ಪ್ರಾಚೀನ ವಿಹಾರ ಕೇಂದ್ರಗಳಲ್ಲಿ ಚಿಕ್ಕ ಚಿಕ್ಕ ಕೋಣೆಗಳನ್ನು ಸಾಲಾಗಿ ಬೆಟ್ಟದ ಬದಿಯಲ್ಲಿ ಕೊರೆದಿದ್ದು ಅವುಗಳ ಉದ್ದೇಶ ಬೌದ್ಧ ಭಿಕ್ಷುಗಳು ಮಳೆಯಿಂದ ರಕ್ಷಣೆ ಪಡೆಯಲು ಸಾಧ್ಯವಾಗುವುದಕ್ಕಷ್ಟೇ ಸೀಮಿತವಾಗಿದೆ. ಒಂದೆರಡು ಕಡೆಗಳಲ್ಲಿ ಭಿಕ್ಷುಗಳ ಪೂಜಾ ಅವಶ್ಯಕತೆಗಳಿಗಾಗಿ ಚಿಕ್ಕ ಸ್ತೂಪಗಳುಳ್ಳ ಚೈತ್ಯಾಲಯಗಳೂ ಇವೆ. ಯಾವ ನಾಜೂಕಿನ ಅಲಂಕರಣವಾಗಲಿ ಇವುಗಳಲ್ಲಿ ಇರುವುದಿಲ್ಲ. ಆದರೆ ಈ ಚೈತ್ಯಾಲಯಗಳು ಅಂದಿನ ದಿನಗಳಲ್ಲಿ ಉತ್ತರ ಭಾರತದಲ್ಲಿ ಪ್ರಚಲಿತವಾಗಿದ್ದ ಚೈತ್ಯಗಳ ವಿನ್ಯಾಸ ಮತ್ತು ಸ್ವರೂಪದ ಅನುಕರಣೆಗಳೇ ಆಗಿದ್ದವು. ಭಾಜದಲ್ಲಿರುವ ಅತಿ ಪ್ರಾಚೀನ ಗುಹೆ ಸು. 1.80 ಮೀ ವ್ಯಾಸದ ವೃತ್ತಾಕಾರದ ಕೋಣೆಯಾಗಿದ್ದು ಅದರ ಮಧ್ಯದಲ್ಲಿ ಒಂದು ಚಿಕ್ಕ ಸ್ತೂಪವನ್ನು ಕೆತ್ತಲಾಗಿದೆ. ಹಾಗೆಯೇ ಕನ್ಹೇರಿಯಲ್ಲಿರುವ ಅತಿ ಪ್ರಾಚೀನ ಗುಹೆ 3.8 ಮೀ ಅಗಲದ ಚೌಕಾಕಾರವಾಗಿದ್ದು, ಅದರ ಒಂದು ಕೊನೆಯಲ್ಲಿ ಸರಳಾಕಾರದ ಸ್ತೂಪವನ್ನು ಕೆತ್ತಲಾಗಿದೆ. ಜುನ್ನರ್ ಮತ್ತು ಜೀವದನ್ ವಿಹಾರಗಳಲ್ಲಿ ಬೌದ್ಧ ಭಿಕ್ಷುಗಳ ವರ್ಷಾವಾಸಕ್ಕಾಗಿ ಬಹು ಚಿಕ್ಕದಾದ (ಸು. 1.8 ಮೀ, 2.1 ಮೀ) ಆಯಾಕಾರದ ಕೋಣೆಗಳನ್ನು ನಿರ್ಮಿಸಲಾಗಿದೆ. ಚಿಕ್ಕವೂ ಸರಳವೂ ಆಗಿರುವ ಈ ಕಟ್ಟಡಗಳು ಸಹಜವಾಗಿ ಹೊಸ ತಂತ್ರಜ್ಞಾನದ ಅಳವಡಿಕೆಯ ಪ್ರಾರಂಭಿಕ ಹೆಜ್ಜೆಗಳು.

ಉತ್ತರ ಭಾರತದಲ್ಲಿ ಪ್ರಚಲಿತವಾಗಿದ್ದ ಮರದ ಕಟ್ಟಡಗಳ ಸಂಪ್ರದಾಯವನ್ನು ನಿರೂಪಿಸುವ ಅತ್ಯಂತ ಪ್ರಾಚೀನ ಗುಹಾ ವಾಸ್ತು ಕೃತಿಗಳು ಪುಣೆ ಜಿಲ್ಲೆಯ ಭಾಜ, ಕೊಂಡಾನೆ, ಔರಂಗಬಾದ್ ಜಿಲ್ಲೆಯ ಅಜಂತ ಮತ್ತು ಪೀತಲ್ಖೋರಾಗಳಲ್ಲಿ ಇವೆ. ಇವುಗಳಲ್ಲೆಲ್ಲ ವಾಸ್ತು ಇತಿಹಾಸಕಾರರಲ್ಲಿ ವಿಶೇಷ ಗಮನ ಸೆಳೆದಿರುವುದು ಭಾಜಾದಲ್ಲಿರುವ ಚೈತ್ಯಾಲಯ. ಸು.17.70 ಮೀ ಉದ್ದ, 11.70 ಮೀ ಅಗಲವಿರುವ ಗಜಪೃಷ್ಠಾಕೃತಿಯ ತಳವಿನ್ಯಾಸ ಇರುವ ಈ ಚೈತ್ಯಾಲಯದ ಒಳ ಎತ್ತರ 9ಮೀ ಹಜಾರದ ಮಧ್ಯಭಾಗ ಆಯಾಕಾರವಿದ್ದು ಅದರ ಎರಡೂ ಕಡೆ ಕಂಬಸಾಲು ಮತ್ತು ಕಂಬ ಸಾಲಿಗೂ ಪಕ್ಕದ ಗೋಡೆಗಳಿಗೂ ಮಧ್ಯೆ ಪಕ್ಷಪಥ ಇದ್ದು ಇವೆಲ್ಲ ಹಿಂಭಾಗದಲ್ಲಿ ಅರ್ಧ ವೃತ್ತವಿನ್ಯಾಸದಲ್ಲಿ ಸೇರುತ್ತವೆ. ಮಧ್ಯದ ಹಜಾರದ ಹಿಂಬದಿಯಲ್ಲಿ ಸರಳ ಆಕಾರದ 3.6 ಮೀ ವ್ಯಾಸ ಮತ್ತು ಸುಮಾರು ಅಷ್ಟೇ ಎತ್ತರದ ಬೃಹತ್ ಸ್ತೂಪ ಇದೆ. ಭಾಜದ ಚೈತ್ಯ ಗೃಹದ ವಾಸ್ತು ವೈಶಿಷ್ಟ್ಯವೆಂದರೆ, ಇದು ಪ್ರಾಚೀನ ಮರದ ಕಟ್ಟಡಗಳ ಪ್ರಾಮಾಣಿಕ ಅನುಕರಣೆ. ಆದರೆ ಇಲ್ಲಿಯ ಶಿಲ್ಪಿಗಳು ಶಿಲಾ ಮಾಧ್ಯಮದ ವೈಶಿಷ್ಟ್ಯ, ಗುಹಾ ವಾಸ್ತು ತಂತ್ರಜ್ಞಾನದ ಮಿತಿ-ಸಾಧ್ಯತೆಗಳನ್ನು ಅರ್ಥಮಾಡಿಕೊಂಡು ಪರಿಣಿತರಾಗುತ್ತಿದ್ದಂತೆ, ಅನಂತರದ ಕಾಲದಲ್ಲಿ ಮರದ ರಚನೆಗಳ ಅನುಕರಣೆಯನ್ನು ಕ್ರಮೇಣ ಕೈಬಿಡಲಾಯಿತು. ಹೀಗೆ ಬೆಳೆಯುತ್ತಿದ್ದ ಗುಹಾಲಯಗಳ ರಚನಾ ಇತಿಹಾಸವನ್ನು ಅನುಕ್ರಮವಾಗಿ ಪಶ್ಚಿಮ ಭಾರತ ಪ್ರದೇಶದ ಅಜಂತದ ಹತ್ತನೆಯ ಗುಹೆ, ಪೀತಲ್ಖೋರಾ, ಕೊಂಡಾನೆ ಇಲ್ಲಿರುವ ಚೈತ್ಯಾಲಯಗಳು ಅನಂತರ ಅಜಂತದ ಒಂಬತ್ತನೆಯ ಗುಹೆ, ಬೇಡ್ಸ ಮತ್ತು ಕಾರ್ಲೆ ಚೈತ್ಯಾಲಯಗಳು, ಕನ್ಹೇರಿಯ ಚೈತ್ಯಾಲಯ ಇವುಗಳಲ್ಲಿ ಗುರ್ತಿಸ ಬಹುದು. ಈ ಘಟ್ಟಗಳಲ್ಲಿ ಇಲ್ಲಿಯ ವಾತಾವರಣ, ಅವಶ್ಯಕತೆಗಳಿಗೆ ಹೊಂದಿ ಕೊಳ್ಳುವಂತೆ ಹೊಸ ಮಾರ್ಪಾಡುಗಳಾದವು. ಉದಾಹರಣೆಗೆ ಭಾಜ, ಪೀತಲ್ಖೋರ ಇತ್ಯಾದಿ ಆರಂಭ ನಿರ್ಮಿತ ಚೈತ್ಯಾಲಯದಲ್ಲಿ ತೆರೆದ ಮುಂಭಾಗ ಇರುತ್ತಿತ್ತು. ಆದರೆ, ಅಜಂತ ಒಂಬತ್ತನೆಯ ಗುಹೆಯಲ್ಲಿ ಚೈತ್ಯಾಲಯದ ಮುಂಭಾಗದಲ್ಲಿ ಒಂದು ಅಡ್ಡ ಗೋಡೆಯನ್ನು ನಿರ್ಮಿಸಿ ಅದರಲ್ಲಿ ಮಧ್ಯದ ಬಾಗಿಲನ್ನು ಎರಡೂ ಪಕ್ಕಗಳಲ್ಲಿ ಚಿಕ್ಕ ಬಾಗಿಲನ್ನೂ ನಿರ್ಮಿಸಲಾಗಿದೆ. ಅದೇ ಮುಂದೆ ಬಂದ ಬೇಡ್ಸ ಚೈತ್ಯಾಲಯದಲ್ಲಿ ಈ ಘಟಕಗಳ ಮುಂದೆ ಎರಡು ದೊಡ್ಡ ಕಂಬಗಳು ಮತ್ತು ಎರಡು ಅರೆಗಂಬಗಳ ಮೇಲೆ ಎತ್ತಿದಂತೆ ಇರುವ ಎತ್ತರವಾದ ಮುಂಚಾವಡಿಯನ್ನು ನಿರ್ಮಿಸಲಾಗಿದೆ. ಇದಕ್ಕೆ ಮುಂದಿನ ಕಾರ್ಲೆ ಚೈತ್ಯಾಲಯದಲ್ಲಿ ಇದರ ಮುಂಭಾಗದಲ್ಲಿ ಸಹ ಇನ್ನೊಂದು ಗೋಡೆಯನ್ನು ತೆರೆಯಂತೆ ನಿರ್ಮಿಸಲಾಗಿದೆ. ಅಲ್ಲದೆ ಬೇಡ್ಸ ಮತ್ತು ಕಾರ್ಲೆ ಚೈತ್ಯಾಲಯಗಳಲ್ಲಿ ಕುಂಭಪೀಠ ಅಷ್ಟಕೋನಾಕೃತಿಯ ಕಂಬ ಮೇಲೆ ಪದ್ಮದಳಗಳಿಂದ ಅಲಂಕೃತವಾದ ಕುಂಭ ಅದರ ಮೇಲೆ ಆನೆ ಅಥವಾ ಕುದುರೆಯ ಸವಾರಿಯಲ್ಲಿರುವ ದಂಪತಿಗಳು ಇತ್ಯಾದಿಗಳನ್ನು ಒಳಗೊಂಡಿರುವ ಹೊಸ ಮಾದರಿಯ ಕಂಬಗಳು ಮೊಟ್ಟಮೊದಲು ಕಾಣಬರುತ್ತವೆ. ಹೀಗೆ ಬೆಳೆದಿರುವ ಪಶ್ಚಿಮ ಭಾರತದ ಗುಹಾ ವಾಸ್ತು-ಶಿಲ್ಪದ ಸರಣಿಯಲ್ಲಿ ಪ್ರಪಂಚ ಪ್ರಸಿದ್ಧವಾಗಿರುವುದು ಕಾರ್ಲೆಯ ಚೈತ್ಯಾಲಯ. 36 ಮೀ ಉದ್ದ, 24.0 ಮೀ ಅಗಲ, 18.0 ಮೀ ಎತ್ತರವಿರುವ ಈ ಗುಹಾಲಯ ಗಜ ಪೃಷ್ಠಾಕಾರದ ವಿನ್ಯಾಸದಲ್ಲಿದ್ದು ಒಳ ಆವರಣವನ್ನು ಎರಡು ಕಂಬ ಸಾಲುಗಳಿಂದ ಮಧ್ಯದ ಹಜಾರ ಮತ್ತು ಎರಡು ಪಕ್ಕಗಳಲ್ಲಿ ಕಿರಿದಾದ ಪಕ್ಷಪಥವನ್ನಾಗಿ ವಿಂಗಡಿಸಲಾಗಿದೆ. ಈ ಕಂಬ ಸಾಲುಗಳು ಹಿಂಭಾಗದಲ್ಲಿ ಗಜ ಪೃಷ್ಠಾಕಾರ ವಿನ್ಯಾಸದಲ್ಲೇ ಕೂಡಿಕೊಳ್ಳುತ್ತವೆ. ಮಧ್ಯ ಹಜಾರದ ಹಿಂಭಾಗದಲ್ಲಿ ಎತ್ತರವಾದ ಶಿಲಾ ಸ್ತೂಪವನ್ನು ಕಂಡರಿಸಲಾಗಿದೆ. ಮೇಲ್ಛಾವಣಿ ಕಮಾನು ಆಕೃತಿಯಲ್ಲಿ ಇದ್ದು ಅಲ್ಲಿ ಕಮಾನು ಆಕೃತಿಯಲ್ಲೇ ಬಾಗುವ ಮರದ ಜಂತಿಗಳನ್ನು ಅಳವಡಿಸ ಲಾಗಿದೆ. ಕುಂಭಪೀಠ, ಅಷ್ಟಕೋನಾಕೃತಿಯ ಕಂಬದ ಮೇಲೆ ಪುನಃ ಕುಂಭ, ಮತ್ತು ಆನೆಯ ಮೇಲೆ ಕುಳಿತ ದಂಪತಿ ಶಿಲ್ಪಗಳಿಂದ ಅಲಂಕೃತವಾಗಿದ್ದು ಇಲ್ಲಿಯ ಒಟ್ಟಾರೆ ದೃಶ್ಯ ಮನಮೋಹಕವಾಗಿದೆ. ಸ್ತೂಪದ ಮೇಲೆ ಸು. 2 ಸಾವಿರದಷ್ಟು ವರ್ಷಗಳ ಹಿಂದೆಯೇ ನಿಲ್ಲಿಸಿದ್ದ ಮರದ ಛತ್ರಿ ಇನ್ನೂ ಇದೆ. ಮುಂಭಾಗದಲ್ಲಿ ಅಶೋಕ ಸ್ತಂಭದ ರೀತಿಯ ಸು.12.0 ಮೀ ಎತ್ತರದ ಎರಡು ಸ್ತಂಭಗಳನ್ನು ಎರಡೂ ಪಕ್ಕಗಳಲ್ಲಿ ರೂಪಿಸಲಾಗಿದೆ. ಈ ಚೈತ್ಯಾಲಯವನ್ನು ಇದು ಜಂಬೂ ದ್ವೀಪದಲ್ಲೇ ಉತ್ತಮವಾದುದು ಎಂದು ಇದರಲ್ಲಿಯ ಆ ಕಾಲದ ಒಂದು ಶಾಸನ ವರ್ಣಿಸುತ್ತದೆ. ಈ ಗುಹಾಲಯವನ್ನು ಮಾಡಿಸಿದವನು ವೈಜಯಂತಿಯ (ಕರ್ನಾಟಕ ಉತ್ತರ ಕನ್ನಡ ಜಿಲ್ಲೆಯ ಬನವಾಸಿ) ಶ್ರೇಷ್ಠಿ ಭೂತಪಾಲ ಎಂಬುವವನು. ಕಾಲ ಪ್ರ.ಶ.ಪು.1ನೆಯ ಶತಮಾನದ ಆರಂಭ.

ಚೈತ್ಯಾಲಯಗಳ ರೀತಿಯಲ್ಲೇ ಭಿಕ್ಷುಗಳ ಆವಾಸಗಳಾಗಿ ರೂಪಿಸುತ್ತಿದ್ದ ಲೇಣಗಳಲ್ಲಿ ಸಹ ಹೊಸ ವಿನ್ಯಾಸಗಳ ಅಳವಡಿಕೆಯನ್ನು ಕ್ರಮೇಣ ಕಾಣಬಹುದು. ನಾಸಿಕದಲ್ಲಿರುವ ಪ್ರ.ಶ.ಪು 2ನೆಯ ಶತಮಾನದ ಆದಿಭಾಗಕ್ಕೆ ಸೇರಿದ ಗೌತಮೀಪುತ್ರ ಸಾತಕರ್ಣಿಯ ಲೇಣ ಈ ಬೆಳೆವಣಿಗೆಗಳಲ್ಲಿ ಗುರ್ತಿಸಬಹುದಾದ ಒಂದು ಮುಖ್ಯ ಘಟ್ಟವನ್ನು ಸೂಚಿಸುತ್ತದೆ. ಇದರ ವಿಶೇಷವೆಂದರೆ ಇದು ವಿನ್ಯಾಸದಲ್ಲಿ, ಆಕಾರದಲ್ಲಿ ಬಹಳ ನಿಖರವಾಗಿ ಕಂಡರಿಸಲಾಗಿರುವ ಬೃಹತ್ ಲೇಣ. ಚುತುಶ್ಯಾಲೆಯ ಮಾದರಿಯ ಈ ಲೇಣದ ಒಳ ಹಜಾರದಲ್ಲಿ ಹಿಂಬದಿಯ ಗೋಡೆಯ ಮೇಲೆ ಒಂದು ಸ್ತೂಪದ ಅರೆ ಉಬ್ಬು ಶಿಲ್ಪ ಸಹ ಕಂಡುಬರುತ್ತದೆ. ಈ ಹಿಂದೆ ಭಿಕ್ಷುಗಳ ವಸತಿ (ಲೇಣ) ಮತ್ತು ಪೂಜಾಗೃಹ (ಚೈತ್ಯಾಲಯ) ಇವು ಬೇರೆ ಬೇರೆಯಾಗಿ ಇರುತ್ತಿದ್ದರೆ ಈ ಗೌತಮೀಪುತ್ರ ಗುಹೆಯಲ್ಲಿ ಲೇಣದ ಒಳಗೆ ಪೂಜಾಸ್ಥಾನವನ್ನು ನಿರ್ಮಿಸಿರುವುದು ಒಂದು ವೈಶಿಷ್ಟ್ಯ. ಹೀಗೆ ಪ್ರಾರಂಭವಾದ ಕ್ರಮ ಮುಂದೆ ಅಜಂತ, ಎಲ್ಲೋರ ಇತ್ಯಾದೆಡೆಗಳಲ್ಲಿ ವಿಶಿಷ್ಟ ರೂಪವನ್ನು ತಾಳಿವೆ.

ಪಶ್ಚಿಮ ಭಾರತದ ಪ್ರದೇಶವಲ್ಲದೆ ಇದೇ ರೀತಿಯ ಪ್ರಾಚೀನ ಮಾದರಿಯ ಚೈತ್ಯಾಲಯ ಲೇಣ ವಿಹಾರಗಳು ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿರುವ ಗುಂಟುಪಲ್ಲಿಯಲ್ಲಿ ಸಹ ಕಂಡುಬಂದಿವೆ. ಆದರೆ ಇವೆಲ್ಲ ಪರಿಮಾಣದಲ್ಲಾಗಲೀ ಸೌಂದರ್ಯದಲ್ಲಾಗಲೀ ಪಶ್ಚಿಮ ಭಾರತದ ಗುಹಾಲಯಗಳಿಗೆ ಸರಿಸಾಟಿಯಾಗಿ ನಿಲ್ಲುವಂತಹವಲ್ಲ. ಆದರೆ ಗುಜರಾತ್ನ ಜುನಾಗಡ್ನಲ್ಲಿ 30ಕ್ಕೂ ಹೆಚ್ಚು ಗುಹಾಲಯಗಳು ಬೇರೆ ಬೇರೆ ಗುಂಪುಗಳಲ್ಲಿವೆ. ಕೆಲವು ಲೇಣಗಳು ವಿನ್ಯಾಸಾಲಂಕರಣಗಳಲ್ಲಿ, ಮಹಾರಾಷ್ಟ್ರದ ಗುಹಾಲಯಗಳಿಗಿಂತ ಸ್ವಲ್ಪ ಭಿನ್ನವಾಗಿವೆ. ತಲಾಜ ಗುಂಪಿನಲ್ಲಿ ಎರಡು ಅಂತಸ್ತುಳ್ಳ ಒಂದು ಬೃಹತ್ ಲೇಣ ಇದೆ. ಇವೆಲ್ಲ 2-3 ನೆಯ ಶತಮಾನದಲ್ಲಿ ಶಕ ಕ್ಷತ್ರಪರ ಕಾಲದಲ್ಲಿ ರಚನೆಯಾದವು.

ಪಶ್ಚಿಮ ಭಾರತದ ಬೌದ್ಧ ಗುಹಾಲಯವನ್ನು ಹೀನಯಾನ ಮತ್ತು ಮಹಾಯಾನ ಗುಹೆಗಳೆಂದು ವಿಂಗಡಿಸಿ ಹೀನಯಾನ ಗುಹೆಗಳು ಪ್ರ.ಶ.ಪು. 2-1ನೆಯ ಶತಮಾನದಿಂದ 2-3 ನೆಯ ಶತಮಾನದವರೆವಿಗೂ ಮುಂದೆ ಕೆಲವು ಶತಮಾನಗಳ ಅನಂತರ ಅಂದರೆ 4-7 ನೆಯ ಶತಮಾನಗಳಲ್ಲಿ ಮಹಾಯಾನ ಗುಹೆಗಳು ರಚಿತವಾದವೆಂದೂ ಹೀನಯಾನ ಗುಹೆಗಳಲ್ಲಿ ಬುದ್ಧನ ವಿಗ್ರಹಗಳನ್ನು ಮಾಡುವ ಸಂಪ್ರದಾಯ ಇರಲಿಲ್ಲವೆಂದು ಮಹಾಯಾನ ಗುಹೆಗಳಲ್ಲಿ ಬುದ್ಧ ಅವಲೋಕಿತೇಶ್ವರ ಇತ್ಯಾದಿ ಅನೇಕ ದೇವ ದೇವತೆಗಳ ವಿಗ್ರಹಗಳು ಕಾಣುವವೆಂದು ಸಾಮಾನ್ಯವಾಗಿ ತಿಳಿಯಲಾಗಿತ್ತು. ಆದರೆ ಪಶ್ಚಿಮ ಭಾರತದ ಗುಹಾ ಬೆಳೆವಣಿಗೆಯನ್ನು ಆಳವಾಗಿ ಅವಲೋಕಿಸಿದಾಗ ಈ ರೀತಿಯ ವಿಂಗಡಣೆಯಾಗಲೀ ಗುಹಾ ಸಂಪ್ರದಾಯದಲ್ಲಿ ಕೆಲವು ಶತಮಾನಗಳ ವಿಚ್ಛಿನ್ನತೆ ಇತ್ತೆಂಬುದಾಗಲೀ ಸರಿಯಲ್ಲ ಎಂದು ಕಂಡುಬರುವುದು. 1-2ನೆಯ ಶತಮಾನದ ಹೊತ್ತಿಗಾಗಲೇ ಭಾರತದ ಇತರೆಡೆಗಳಲ್ಲಿ ಕಂಡುಬರುವಂತೆ ಇಲ್ಲಿಯೂ ಬುದ್ಧ ವಿಗ್ರಹ ರೂಪಣೆ ಪ್ರಾರಂಭಿಕವಾಗಿರಬೇಕು ಎಂಬುದಕ್ಕೆ ಕನ್ಹೇರಿಯ ಚೈತ್ಯಾಲಯದಲ್ಲಿ ಇರುವ ಒಂದು ಚಿಕ್ಕ ಬುದ್ಧ ವಿಗ್ರಹ ಸಾಕ್ಷಿಯಾಗಿದೆ.

5-6ನೆಯ ಶತಮಾನದ ಹೊತ್ತಿನಲ್ಲಿ ರಚಿತವಾದ ಅಜಂತ ಸಮೀಪದ ಹರಿಶ್ಚಂದ್ರಗಢ, ಮಧ್ಯಪ್ರದೇಶದ ಬಾಘ್ ಗುಹೆಗಳು ಮುಂದೆ 7-8ನೆಯ ಶತಮಾನದಲ್ಲೂ ಮುಂದುವರೆಯುವ ಎಲ್ಲೋರದ ಮತ್ತು ಔರಂಗಾಬಾದ್ನ ಕೆಲವು ಗುಹೆಗಳು ಬೌದ್ಧ ಗುಹಾ ವಾಸ್ತು ಶಿಲ್ಪದ ಮುನ್ನಡೆಯನ್ನು ಸೂಚಿಸುತ್ತವೆ. ಅಜಂತದ ಗುಹೆಗಳಲ್ಲಿ ಮುಂದೆ ಮೊಗಸಾಲೆ, ಮಧ್ಯದಲ್ಲಿ ಹಜಾರ, ಹಿಂಭಾಗದಲ್ಲಿ ಬುದ್ಧ ವಿಗ್ರಹವಿರುವ ಗರ್ಭಗೃಹ, ಹಜಾರದ ಹಿಂಭಾಗ ಮತ್ತು ಪಕ್ಕದ ಗೋಡೆಗಳಲ್ಲಿ ಮಾಡಿರುವ ಭಿಕ್ಷುಗಳ ವಸತಿ ಕೋಣೆಗಳು ಇರುವುದು ಸಾಮಾನ್ಯ. ಆದರೆ ಅಜಂತ ಪ್ರಸಿದ್ಧವಾಗಿರುವುದು ಅಲ್ಲಿಯ ಶಿಲ್ಪಕಲೆ ಹಾಗೂ ಕೆಲವು ಗುಹೆಗಳಲ್ಲಿ ಇರುವ ಅಪೂರ್ವ ಸುಂದರ ಭಿತ್ತಿ ವರ್ಣಚಿತ್ರಗಳಿಂದ. ಅದರಲ್ಲೂ ಅಜಂತದ 1, 2 ಮತ್ತು 17 ನೆಯ ಗುಹೆಗಳಲ್ಲಿ ಮನಮೋಹಕವಾದ ಭಿತ್ತಿ ಚಿತ್ರಗಳು ಉಳಿದುಬಂದಿವೆ. ಇವುಗಳಲ್ಲಿ ಬುದ್ಧನ ಜೀವನ ಮತ್ತು ಜಾತಕ ಕಥೆಗಳ ನಿರೂಪಣೆ ಇವೆ. ಇವೆಲ್ಲ 5-6 ನೆಯ ಶತಮಾನಕ್ಕೆ ಸೇರಿದವು. ಇದೇ ಕಾಲಕ್ಕೆ ಸೇರಿದ ಅಜಂತಾದ 16ನೆಯ ಗುಹೆ ಹಳೆಯ ಸಂಪ್ರದಾಯದ ಗಜಪೃಷ್ಠಾಕಾರದ ವಿನ್ಯಾಸ ಹಾಗೂ ಕಮಾನಿನಾಕೃತಿಯ ಛತ್ತು ಇತ್ಯಾದಿಗಳನ್ನು ಒಳಗೊಂಡಿದೆ. ಆದರೆ ಮಧ್ಯದ ಹಜಾರದ ಹಿಂಬದಿಯಲ್ಲಿರುವ ಸ್ತೂಪದ ಮೇಲೆ ಬುದ್ಧನ ವಿಗ್ರಹವನ್ನು ಕೆತ್ತಲಾಗಿದೆ. ಸ್ತೂಪ ಕಂಬಗಳು ಮೇಲ್ಛಾವಣಿ ಮುಂಭಾಗ ಮೊಗಸಾಲೆ ಈ ಎಲ್ಲ ಭಾಗಗಳು ಶಿಲ್ಪಭರಿತವಾಗಿದ್ದು ಚೈತ್ಯಾಲಯ ಭವ್ಯವಾಗಿ ಕಾಣುತ್ತದೆ. ಮಧ್ಯ ಪ್ರದೇಶದ ಬಾಘ್ ಗುಹೆಗಳು ಸಹ ಸುಮಾರು ಇದೇ ಕಾಲದವು. ಅವು ಬಹು ಶಿಥಿಲವಾಗಿದ್ದರೂ ಇಲ್ಲಿ ಉಳಿದುಬಂದಿರುವ ಭಿತ್ತಿಚಿತ್ರಗಳಿಗಾಗಿ ಪ್ರಸಿದ್ಧವಾಗಿವೆ. ಸು.7-8ನೆಯ ಶತಮಾನಕ್ಕೆ ಸೇರುವ ಎಲ್ಲೋರದ ಬೌದ್ಧಾಲಯಗಳು ಅಲಂಕರಣಕ್ಕಿಂತ ಹೆಚ್ಚಾಗಿ ಅವುಗಳ ಪರಿಮಾಣದಿಂದ ಗಮನ ಸೆಳೆಯುತ್ತವೆ. ಅಲ್ಲಿಯ ದೋತಲ್, ತೀನ್ತಲ್ ಗುಹೆಗಳು 2-3 ಅಂತಸ್ತುಗಳನ್ನು ಹೊಂದಿದ್ದು ಸು. 36 ಮೀ ವಿಸ್ತಾರವಾಗಿಯೂ ಸು. 21 ಮೀ ಎತ್ತರವಾಗಿಯೂ ಇವೆ. ಆದರೆ ಇವುಗಳಲ್ಲಿ ಹೆಚ್ಚು ಶಿಲ್ಪಾಲಂಕರಣ ಇರುವುದಿಲ್ಲ. ಎಲ್ಲೋರದಲ್ಲಿರುವ ವಿಶ್ವಕರ್ಮ ಗುಹೆ (10 ನೆಯ ಸಂಖ್ಯೆಯ ಗುಹೆ) ಒಂದು ಚೈತ್ಯಾಲಯ. 8ನೆಯ ಶತಮಾನಕ್ಕೆ ಸೇರಿದ ಈ ಚೈತ್ಯಾಲಯ ಪಶ್ಚಿಮ ಭಾರತದ ಚೈತ್ಯಾಲಯದ ನಿರ್ಮಾಣದ ಕೊನೆಯ ಸೃಷ್ಟಿ. ಔರಂಗಾಬಾದ್ ಸಮೀಪದ ಬೆಟ್ಟದ ಮೇಲೆ ಸುಮಾರು ಪ್ರಸಕ್ತಶಕಾರಂಭದ ಕೆಲವು ಗುಹೆಗಳಲ್ಲದೆ, ಸು. 7-8ನೆಯ ಶತಮಾನದಲ್ಲಿ ರಚಿತವಾದ ಕೆಲವು ಗುಹಾಲಯಗಳು ಇವೆ. ಅನೇಕ ದೇವದೇವತೆಗಳ ಶಿಲ್ಪಗಳಿರುವ ಇವು ವಜ್ರಯಾನ ಬೌದ್ಧಪಂಥಕ್ಕೆ ಸಂಬಂಧಿಸಿದವು ಎಂದು ತಿಳಿಯುತ್ತದೆ.

ಪ್ರಾಚೀನ ಕಾಲದಲ್ಲಿ ಬೌದ್ಧ-ಜೈನ ಪಂಥಗಳು ಗುಹಾ ವಾಸ್ತುಕಲೆಯನ್ನು ಬೆಳೆಸಿದ್ದು, ವಿಶೇಷವಾಗಿ ಆ ಪಂಥದ ಭಿಕ್ಷು, ಯತಿಗಳ ನಿವಾಸಸ್ಥಾನಗಳ ರಚನೆಯಲ್ಲಿ. ಆದರೆ ಕಾಲ ಕ್ರಮೇಣ ಅವು ಧಾರ್ಮಿಕ ಕೇಂದ್ರಗಳಾಗಿ, ಪುಜಾ ಸ್ಥಾನಗಳಾಗಿ ಕೂಡ ಬದಲಾವಣೆಗೊಂಡವು.

ಹಿಂದು ಪಂಥಕ್ಕೆ ಸಂಬಂಧಪಟ್ಟಂತೆ ಸಹ ಕಾಲಕ್ರಮೇಣ ಗುಹಾದೇವಾಲಯಗಳು ರಚಿತವಾಗಲಾರಂಭಿಸಿದವು. ಈಗ ತಿಳಿದಿರುವಂತೆ ಅಂಥ ಅತ್ಯಂತ ಪ್ರಾಚೀನ ಹಿಂದು ಗುಹಾ ದೇವಾಲಯ ಮಧ್ಯಪ್ರದೇಶದ ಭೂಪಾಲ್ನಿಂದ ಸು. 60 ಕಿಮೀ ದೂರದಲ್ಲಿರುವ ಉದಯಗಿರಿ ಎಂಬಲ್ಲಿದೆ. ಶಾಸನಗಳ ಪ್ರಕಾರ ಈ ವೈಷ್ಣವ ದೇವಾಲಯದ ನಿರ್ಮಾಣ 4ನೆಯ ಶತಮಾನದಲ್ಲಿ ಗುಪ್ತ ಸಾಮ್ರಾಜ್ಯದ 2ನೆಯ ಚಂದ್ರಗುಪ್ತ ಕಟ್ಟಿಸಿದ್ದು. ಸಾಲಾಗಿ ಕೆಲವು ಕೋಣೆಗಳನ್ನು ಕೆತ್ತಲಾಗಿದ್ದು ಗೋಡೆಗಳ ಮೇಲೆ ವಿಷ್ಣು, ನರಸಿಂಹ, ತ್ರಿವಿಕ್ರಮ, ವರಾಹ ಮೊದಲಾದ ಅವತಾರಗಳನ್ನೂ ದ್ವಾರಪಾಲಕ ಇತ್ಯಾದಿ ಶಿಲ್ಪಗಳನ್ನೂ ಕೆತ್ತಲಾಗಿದೆ.

ಪ್ರಾಚೀನ ಹಿಂದು ದೇವಾಲಯಗಳಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿರುವುದು ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಗುಹಾ ದೇವಾಲಯಗಳು ವಿಶಾಲವೂ ಸುಂದರವೂ ಆದ ಇವೆಲ್ಲ ಬಾದಾಮಿ ಚಳುಕ್ಯರ ಕಾಲದ 6ನೆಯ ಶತಮಾನದ ರಚನೆಗಳು. ಇವುಗಳಲ್ಲಿ ಬಹು ಪ್ರಾಚೀನವಾದುದು ಐಹೊಳೆಯಲ್ಲಿರುವ ರಾವಳಫಡಿ ಗುಹೆ. ಇದು ಚಿಕ್ಕ ಗುಹೆಯಾಗಿದ್ದರೂ ದಕ್ಷಿಣ ಭಾರತದಲ್ಲಿ ಹಿಂದು ಗುಹಾ ದೇವಾಲಯ ರಚನೆಯ ಪ್ರಥಮ ಪ್ರಯತ್ನ. ಇಲ್ಲಿ ಹಿಂಗೋಡೆಯ ಮೇಲೆ ನೆಲದಿಂದ ಚಾವಣಿಯ ವರೆಗೂ (2.70 ಮೀ) ಹಬ್ಬಿನಿಂತಿರುವ ನಟರಾಜ ವಿಗ್ರಹ ಬಹು ಪ್ರಭಾವಶಾಲಿ ಶಿಲ್ಪ. ಆದರೆ ಹೆಚ್ಚು ಪ್ರಸಿದ್ಧವಾಗಿರುವುವು ಇಲ್ಲಿಯ ಚಳುಕ್ಯರ ರಾಜಧಾನಿಯಾಗಿದ್ದ ಬಾದಾಮಿಯಲ್ಲಿರುವ ಮೇಣ ಬಸ್ತಿಗಳು.

ಊರಿನ ದಕ್ಷಿಣದ ಬೆಟ್ಟದ ಬೆನ್ನಲ್ಲಿ ನಾಲ್ಕು ಗುಹೆಗಳನ್ನು ಕೊರೆದು ನಿರ್ಮಿಸಲಾಗಿದೆ. ವಿನ್ಯಾಸದಲ್ಲಿ ದೊಡ್ಡ ಮಂಟಪದ ಮಾದರಿಯಲ್ಲಿ ಇವೆ. ಮುಂಭಾಗದಲ್ಲಿ ಬಾಗಿಲಾಗಲೀ ತೆರೆ ಗೋಡೆಗಳಾಗಲೀ ಇಲ್ಲ. ಮುಂಭಾಗದಲ್ಲಿ ಮೊಗಸಾಲೆ, ಅದರ ಹಿಂದೆ ಅನೇಕ ಕಂಬಗಳುಳ್ಳ ಆಯಾಕಾರದ ಸಭಾಂಗಣ, ಹಿಂಬದಿಯ ಗೋಡೆಯಲ್ಲಿ ಒಂದು ಚಿಕ್ಕ ಗರ್ಭಗೃಹ ಇವೆ. ಈ ನಾಲ್ಕರಲ್ಲಿ ಮೊದಲನೆಯದು ಶೈವ, ಎರಡು ಮೂರನೆಯದು ವೈಷ್ಣವ, ನಾಲ್ಕನೆಯದು ಜೈನ ದೇವಾಲಯ. ಈ ನಾಲ್ಕು ಗುಹೆಗಳಲ್ಲಿ ಭವ್ಯ ಶಿಲ್ಪಗಳಿವೆ. ಪ್ರಮಾಣ, ಭಾವ, ಸೌಂದರ್ಯ ಎಲ್ಲವೂ ಮೇಳೈಸಿ ಆಯಾ ದೇವತೆಗಳ ಸ್ವಭಾವ ಇತಿವೃತ್ತವನ್ನು ಪರಿಣಾಮಕಾರಿಯಾಗಿ ನಿರೂಪಿಸುತ್ತವೆ. ಒಂದನೆಯ ಗುಹೆಯ ಮುಂಭಾಗದಲ್ಲಿರುವ 18 ಕೈಗಳ ನಟರಾಜಮೂರ್ತಿ ಒಂದು ಗಮನಾರ್ಹ ಶಿಲ್ಪ. ಮೂರನೆಯ ಗುಹೆಯಲ್ಲಿರುವ ನರಸಿಂಹ, ವರಾಹ ಇತ್ಯಾದಿ ಬೃಹತ್ ಶಿಲ್ಪಗಳು ದಕ್ಷಿಣ ಭಾರತದ ಹಿಂದುಮೂರ್ತಿ ಶಿಲ್ಪಗಳ ಪ್ರಥಮ ನಿರ್ಮಾಣ ವೆನಿಸುತ್ತವೆ. ನಾಲ್ಕನೆಯದಾದ ಜೈನ ಗುಹೆ ಸಹ ಅದೇ ರೀತಿಯಲ್ಲಿ ಶಿಲ್ಪಾಲಂಕೃತವಾಗಿವೆ. ಇಲ್ಲಿ ಮಹಾವೀರ, ಬಾಹುಬಲಿ, ತೀರ್ಥಂಕರರು, ಯಕ್ಷಯಕ್ಷಿಯರು ಇವುಗಳ ಸಮೂಹವೇ ಇದೆ. ಇವು ಸಹ ದಕ್ಷಿಣ ಭಾರತದಲ್ಲಿ ಜೈನಮೂರ್ತಿ ಶಿಲ್ಪದ ಪ್ರಥಮ ನಿರ್ಮಾಣವೆನ್ನಬಹುದು. ಮೂರನೆಯ ಗುಹೆಯಲ್ಲಿರುವ ಒಂದು ಶಾಸನದಿಂದ ಇದನ್ನು ಬಾದಾಮಿ ಚಳುಕ್ಯ ರಾಜ ಮಂಗಳೇಶ 578ರಲ್ಲಿ ನಿರ್ಮಿಸಿದನೆಂದು ಸ್ಪಷ್ಟವಾಗಿ ತಿಳಿಯುತ್ತದೆ. ಮೊದಲ ಎರಡು ಗುಹೆಗಳು ಇದಕ್ಕಿಂತ ಸ್ವಲ್ಪ ಪ್ರಾಚೀನ. ಜೈನ ಗುಹಾಲಯ ಅನಂತರದ್ದು. ದಕ್ಷಿಣ ಭಾರತದಲ್ಲಿ ಬಾದಾಮಿಯಲ್ಲಿ ಪ್ರಾರಂಭವಾದ ಹಿಂದು ಗುಹಾ ದೇವಾಲಯಗಳ ನಿರ್ಮಾಣ ಅದೇ ಬಾದಾಮಿ ಚಳುಕ್ಯರ ಆಳಿಕೆಗೆ ಒಳಪಟ್ಟಿದ್ದ ಮಹಾರಾಷ್ಟ್ರ ಪ್ರದೇಶದಲ್ಲಿ ಹೆಚ್ಚು ನಿರ್ಮಾಣಕ್ಕೆ ಕಾರಣವಾಯಿತು. ಇವುಗಳಲ್ಲಿ ಮುಖ್ಯವಾಗಿ ಹೆಸರಿಸ ಬೇಕಾದುದು ಮುಂಬಯಿ ಬಳಿಯ ಎಲಿಫೆಂಟ ದ್ವೀಪದಲ್ಲಿ ಇರುವ ಗುಹಾಲಯಗಳು ಮತ್ತು ಅಲ್ಲಿಯ ತ್ರಿಮುಖ ಬೃಹತ್ ಮಹೇಶಮೂರ್ತಿಯ ಮುಖ್ಯ ಗುಹೆ. ಇದು ಕೇವಲ ಒಂದು ವಾಸ್ತುಕೃತಿಯಲ್ಲ. ನೆರಳು-ಬೆಳಕುಗಳ ಸಂಯೋಜನೆಯನ್ನು ಪರಿಣಾಮಕಾರಿಯಾಗಿ ಸಾಧಿಸುವ ವಿನ್ಯಾಸ. ಬೃಹತ್ತಾದರೂ ಕಲಾತ್ಮಕವಾಗಿ ಅರ್ಥಪೂರ್ಣವಾಗಿ ಭಿತ್ತಿಯಂಕರಣಗಳಲ್ಲಿ ನಿರ್ಮಿಸಿರುವ ಪೌರಾಣಿಕ ಕಥಾ ಶಿಲ್ಪಗಳು, ಶಕ್ತಿಶಾಲಿ ದ್ವಾರಪಾಲಕ ವಿಗ್ರಹಗಳು, ತ್ರಿಮುಖೀ ಮಹೇಶ ಶಿಲ್ಪದ ಒಂದೊಂದು ಮುಖವೂ ಸತ್ವ ರಜಸ್ ತಮೋಗುಣಗಳನ್ನು ಬಿಂಬಿಸುತ್ತಿದ್ದು ಒಟ್ಟಾರೆಯಾಗಿ ಇದು ಶಿವನ ಸರ್ವತತ್ವಾತ್ಮಕ ಸ್ವರೂಪವನ್ನು ನಿರೂಪಿಸುವ ಅಪರೂಪ ಸುಂದರ ಶಿಲ್ಪ. ಈ ಗುಹಾ ದೇವಾಲಯ ಲಕುಲೀಶ ಶೈವಪಂಥದ ರೀತ್ಯಾ ಶಿವನ ಗುಣ ವೈಭವಗಳನ್ನು ನಿರೂಪಿಸುವ ಒಬ್ಬ ತಪಸ್ವಿ ಶಿಲ್ಪಿಯ ಅದ್ಭುತ ರಚನೆ. ಈ ಗುಹಾಲಯ ನಿರ್ಮಾಣ ಕಾಲದ ಬಗ್ಗೆ ಭಿನ್ನ ಅಭಿಪ್ರಾಯಗಳು ಇದ್ದರೂ ಇದು ಗುಹಾವಾಸ್ತುಶಿಲ್ಪದ ಬೆಳೆವಣಿಗೆಯ ದೃಷ್ಟಿಯಲ್ಲಿ ನೋಡಿದರೆ ಬಹುಶಃ 7ನೆಯ ಶತಮಾನದಲ್ಲಿ ರಚಿತವಾಗಿರಬೇಕು. ಗುಣಮಟ್ಟದಲ್ಲಿ ಇದಕ್ಕೆ ಸಾಟಿಯಾಗದಿದ್ದರೂ ಇದೇ ಮುಂಬಯಿಯಲ್ಲಿರುವ ಜೋಗೇಶ್ವರಿ ಈ ಕಾಲ ಘಟ್ಟಕ್ಕೆ ಸೇರಿದುದು.

ಹಿಂದು ಗುಹಾ ದೇವಾಲಯಗಳ ಬೃಹದ್ ರಚನೆಗಳು ಮತ್ತು ಹೊಸ ರೀತಿಯ ಪ್ರಯೋಗಗಳು ಕಂಡು ಬರುವುದು ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿರುವ ಎಲ್ಲೋರದಲ್ಲಿ. ಇವೆಲ್ಲ ರಾಷ್ಟ್ರಕೂಟರ ಕಾಲದ 8-9 ನೆಯ ಶತಮಾನದ ರಚನೆಗಳು. ಈ ಎಲ್ಲ ರಚನೆಗಳಲ್ಲೂ ಒಂದಲ್ಲ ಒಂದು ರೀತಿಯ ನಾವೀನ್ಯತೆಯನ್ನು ಕಂಡರಿಸುವ ಪ್ರಯೋಗಗಳು ಕಾಣುತ್ತವೆ. ಇಲ್ಲಿಯ ರಾಮೇಶ್ವರ, ಡೂಮರ್ ಲೇಣ, ಸೀತಾಸಹಾನಿ ಇತ್ಯಾದಿಗಳು ಒಳ ಆವರಣ ಮಾತ್ರ ಇರುವ ಗುಹೆಗಳಂತೆ ಕೆತ್ತಲಾಗಿದ್ದರೂ ಇವು ಸ್ಪಷ್ಟವಾಗಿ ಗರ್ಭಗುಡಿ, ಸಭಾಂಗಣ, ಮೊಗಸಾಲೆ ಇವೆಲ್ಲವುಗಳನ್ನೊಳಗೊಂಡ

ದೇವಾಲಯದಂತೆ ನಿರ್ದಿಷ್ಟ ರೀತಿಯಲ್ಲಿ ರಚನೆಗೊಂಡಿವೆ. ಈ ಎಲ್ಲ ದೇವಾಲಯಗಳಲ್ಲೂ ಬೃಹದಾಕಾರದ ಶೃಂಗಾರ ವೀರಾದಿ ನಾನಾ ರಸಗಳನ್ನು ಶಕ್ತಿಯುತವಾಗಿ ಪ್ರತಿಬಿಂಬಿಸುವ ಶಿವನ ಲೀಲೆಗಳು, ನಟರಾಜ, ವಿಷ್ಣುವಿನ ದಶಾವತಾರ, ಗಣೇಶ, ದುರ್ಗ, ಗಂಗಾ ಯಮುನಾ ಇತ್ಯಾದಿ ದೇವತಾ ಶಿಲ್ಪಗಳು ಕಂಡುಬರುತ್ತವೆ.

ಎಲ್ಲೋರದ ಹಿಂದು ದೇವಾಲಯಗಳಲ್ಲಿ ಬೃಹತ್ ಆದುದೂ ವಿಶಿಷ್ಟವಾದುದೂ ಇಲ್ಲಿಯ ಕೈಲಾಸ ದೇವಾಲಯ. ಇದರ ವೈಶಿಷ್ಟ್ಯ ಇರುವುದು ವಿನ್ಯಾಸ ಮತ್ತು ನಿರೂಪಣೆಯಲ್ಲಿ ಕಂಡುಬರುವ ನವನವೀನ ಕಲ್ಪನಾ ವಿಲಾಸದಲ್ಲಿ. ಇಲ್ಲಿ ಮಧ್ಯದಲ್ಲಿ ಸು. 45 ಮೀ ಉದ್ದ 24.0 ಮೀ ಅಗಲವಿರುವ ಬೊಡ್ಡೆ ಮಧ್ಯಭಾಗದಲ್ಲಿ ಉಳಿಯುವಂತೆ ಇದರ ಎರಡು ಪಕ್ಕಗಳಲ್ಲಿ ಸು. 81 ಮೀ ಉದ್ದ 12 ಮೀ ಅಗಲದ ಬೃಹತ್ತಾದ ಬಾವಿಯಂತಿರುವ ಕುಳಿಗಳನ್ನು ಬೆಟ್ಟದ ನೆತ್ತಿಯಿಂದ 32.10 ಮೀ ಆಳದವರೆಗೆ ತೋಡಿದ್ದಾರೆ. ಇದೇ ರೀತಿ ಹಿಂಭಾಗದಲ್ಲಿ ಇವೆರಡನ್ನೂ ಕೂಡಿಸುವಂತೆ ಸು. 45 ಮೀ ಉದ್ದ, 12.0 ಮೀ ಅಗಲದ ಕುಳಿಯನ್ನು ತೋಡಲಾಗಿದೆ. ಇವುಗಳ ಮಧ್ಯದಲ್ಲಿ ಇರುವ ಬಂಡೆಯನ್ನೇ ದೇವಾಲಯವನ್ನಾಗಿ ಕೆತ್ತಿದ್ದಾರೆ. ಇದು ಹಿಂದಿನ ಒಳ ಆವರಣ ಮಾತ್ರ ಇರುವ ಗುಹಾಲಯವಾಗಿರದೆ, ಇದರಲ್ಲಿ ಒಳ-ಹೊರ ಎಲ್ಲ ಭಾಗಗಳೂ ಶಿಲಾ ಕಟ್ಟಡ ರಚನಾ ಶೈಲಿಯಲ್ಲಿ ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯದಂತೆ ನಿರ್ಮಾಣವಾಗಿವೆ. ಇದನ್ನು ಗುಹಾ ವಾಸ್ತು-ಶಿಲ್ಪ ಎಂಬುವುದಕ್ಕಿಂತ ಏಕಶಿಲಾವಾಸ್ತು ಎಂದು ಕರೆಯುವುದು ಸಮಂಜಸವೆನಿಸುತ್ತದೆ (ಈ ರೀತಿಯ ಏಕಶಿಲಾ ವಾಸ್ತುವಿನ ಮೊದಲ ಕಿರು ಪ್ರಯೋಗಗಳು 5ನೆಯ ಶತಮಾನದಲ್ಲೇ ವಿದರ್ಭ ಪ್ರದೇಶದಲ್ಲಿ ವಾಕಾಟಕ ಅರಸನ ಕಾಲದಲ್ಲಿ ನಡೆದಿತ್ತು ಎಂದು ಈಚಿನ ಸಂಶೋಧನೆಯಿಂದ ತಿಳಿಯುತ್ತದೆ). ಇದರಲ್ಲೂ ಎರಡು ಅಂತಸ್ತುಗಳನ್ನು ಮಾಡಲಾಗಿದ್ದು ಮೇಲಿನ ಅಂತಸ್ತಿನಲ್ಲಿ ಗರ್ಭಗೃಹ, ಅಂತರಾಳ, ಸಭಾಂಗಣ, ನಂದಿಮಂಟಪ ಎಲ್ಲವನ್ನು ಕೊರೆದು ನಿರ್ಮಿಸಿರುವುದಲ್ಲದೆ ಗರ್ಭಗುಡಿಯ ಮೇಲೆ ದೊಡ್ಡ ಶಿಖರವನ್ನು ಹಾಗೂ ಸುತ್ತಲಿನ ಪರಿವಾರ ದೇವತೆಗಳ ಗುಡಿಗಳ ಮೇಲೆ ಕೂಟ ಶಿಖರಗಳನ್ನು ಕಡೆದಿದ್ದಾರೆ. ರಾಷ್ಟ್ರಕೂಟ ಅರಸ ಒಂದನೆಯ ಕೃಷ್ಣ ಇದರ ಸೃಷ್ಟಿಗೆ ಕಾರಣ. ಈ ದೇವಾಲಯ ಶಿಲ್ಪಗಳಿಂದ ಅಲಂಕೃತವಾಗಿದ್ದು ಪ್ರಪಂಚದ ವಾಸ್ತು ಇತಿಹಾಸದಲ್ಲಿ ಒಂದು ವಿಶಿಷ್ಟ ಸ್ಥಾನ ಪಡೆದುಕೊಂಡಿದೆ.

ಇದೇ ರೀತಿಯಲ್ಲಿ ಎಲ್ಲೋರದಲ್ಲಿ ಇರುವ ನಾಲ್ಕು ಜೈನ ದೇವಾಲಯಗಳು ಸಹ ವಿನ್ಯಾಸ ಮತ್ತು ಶಿಲ್ಪಾಲಂಕಾರಗಳಿಂದ ಮನಮೋಹಕವಾಗಿವೆ. ಇವೂ ರಾಷ್ಟ್ರಕೂಟರ ಕಾಲದಲ್ಲಿ ಸು 9-10 ನೆಯ ಶತಮಾನದಲ್ಲಿ ನಿರ್ಮಾಣವಾದವು.

ಪಶ್ಚಿಮ ಭಾರತದ ಗುಹಾ ವಾಸ್ತುಶಿಲ್ಪ ಕೇಂದ್ರಗಳಲ್ಲಿ ಎಲ್ಲೋರವೇ ಮುಖ್ಯವಾದ ಕೊನೆಯ ಸಾಹಸ. ಅನಂತರ ಕೆಲವು ಚಿಕ್ಕಪುಟ್ಟ ಕೇಂದ್ರಗಳಲ್ಲಿ ಈ ಕಾರ್ಯ ಸು. 12-13ನೆಯ ಶತಮಾನದವರೆಗೆ ಮುಂದುವರೆದಿದ್ದರೂ ವಿಶೇಷವಾಗಿ ಯಾವುದೂ ಎದ್ದು ಕಾಣುವುದಿಲ್ಲ. ಆದರೂ ಪುಣೆ ನಗರದ ಮಧ್ಯದಲ್ಲೇ ಇರುವ ಪಾತಾಳೇಶ್ವರ, ಉಸ್ಮಾನಾಬಾದ್ ಜಿಲ್ಲೆಯ ಧಾರಾಸಿಂಹ, ಔರಂಗಾಬಾದ್ಜಿಲ್ಲೆಯ ಅಂಕೈ ತಂಕೈಯ ಜೈನ ದೇವಾಲಯ ಈ ಘಟ್ಟದ ಗುಹಾ ದೇವಾಲಯಗಳ ವಾಸ್ತುವಿನ ಪ್ರತಿನಿಧಿಯಾಗಿವೆ ಎಂದು ಸೂಚಿಸಬಹುದು.

7-8ನೆಯ ಶತಮಾನಗಳಲ್ಲಿ ತಮಿಳುನಾಡಿನ ತೊಂಡೈನಾಡು ಪ್ರದೇಶದಲ್ಲಿ ಗುಹಾ ವಾಸ್ತು-ಶಿಲ್ಪ ಹಾಗೂ ಏಕಶಿಲಾವಾಸ್ತು ರಚನೆಗಳು ಕಾಂಚಿಯ ಪಲ್ಲವರ ಪೋಷಣೆಯಲ್ಲಿ ಪ್ರಾರಂಭವಾದವು. ಇವುಗಳಲ್ಲಿ ಅತ್ಯಂತ ಪ್ರಸಿದ್ಧವಾದದ್ದು ಚೆನ್ನೈಯಿಂದ ಸು. 40ಕಿಮೀ ದಕ್ಷಿಣಕ್ಕಿರುವ ಮಹಾಬಲಿಪುರಂ. ಇದು ಪಲ್ಲವರ ಕಾಲದಲ್ಲಿ ಒಂದು ಮುಖ್ಯ ಸಮುದ್ರ ಬಂದರಾಗಿತ್ತು. ಇಲ್ಲಿಯ ಕಣ ಶಿಲೆಯ ಬೃಹತ್ ಬಂಡೆಗಳಲ್ಲಿ ಅನೇಕ ಗುಹಾಲಯಗಳನ್ನು ಕೊರೆದಿದ್ದಾರೆ. ಈ ಗುಹಾಲಯಗಳಲ್ಲಿ ಹೆಚ್ಚಿನವೆಲ್ಲ ಮುಂಭಾಗ ತೆರೆದಂತಿದ್ದು ಮುಂದುಗಡೆ ಮಾತ್ರ ಒಂದು ಕಂಬ ಸಾಲು ಇರುವ ಆಯಾಕಾರದ ಮಂಟಪಗಳು. ಇದರ ಹಿಂಬದಿಯಲ್ಲಿ ಗರ್ಭಗೃಹವಿದೆ. ಪರಿಮಾಣ, ವಿನ್ಯಾಸ ಮತ್ತು ಶಿಲ್ಪಗಳಲ್ಲಿ ಸ್ವಲ್ಪ ಸ್ವಲ್ಪ ವ್ಯತ್ಯಾಸಗಳು ಮಾತ್ರ ಕಂಡುಬಂದರೂ ಈ ಗುಹೆಗಳನ್ನು ಮಹೇಂದ್ರವರ್ಮ ಶೈಲಿ, ರಾಜಸಿಂಹ ಶೈಲಿ ಹೀಗೆ ವಾಸ್ತುಶಾಸ್ತ್ರಜ್ಞರು ವಿಂಗಡಿಸುತ್ತಾರೆ. ಇವುಗಳಲ್ಲಿ ಮಹಿಷಾಸುರಮರ್ದಿನಿ ಗುಹೆ, ರಾಮಾನುಜ ಗುಹೆ, ತ್ರಿಮೂರ್ತಿ ಗುಹೆ ಇವು ಗಮನಾರ್ಹವಾಗಿವೆ. ಹಾಗೆಯೇ ತಿರುಚಿರಾಪಳ್ಳಿಯಲ್ಲಿರುವ ಗಣೇಶ ಗುಹೆ, ಮಹಾಬಲಿಪುರಂ ಸಮೀಪದಲ್ಲೇ ಇರುವ ದಳವನೂರು, ಸಾಳುವಂಕುಪ್ಪಂ ಗುಹೆಗಳು ಪ್ರಸಿದ್ಧವಾಗಿವೆ. ಸಾಳುವಂಕುಪ್ಪಂ ಗುಹಾ ಮುಂಭಾಗ ಹುಲಿಯ ತೆರೆದ ಬಾಯಿಯಂತೆ ನಿರ್ಮಿಸಲಾಗಿದೆ. ಮಹಾಬಲಿಪುರಂ ಮತ್ತಷ್ಟು ಪ್ರಸಿದ್ಧವಾಗಿರುವುದು ಅಲ್ಲಿಯ ರಥಗಳಿಂದ. ಪಂಚಪಾಂಡವರ ಹೆಸರಲ್ಲಿರುವ ಧರ್ಮರಾಯ ರಥ, ಭೀಮರಥ, ಅರ್ಜುನರಥ, ನಕುಲಸಹದೇವ ರಥ ಹಾಗೂ ದ್ರೌಪದಿಯ ರಥ ಒಂದೇ ಗುಂಪಿನಲ್ಲಿವೆ. ಇವೆಲ್ಲ ಏಕಶಿಲಾವಾಸ್ತುವಿನ ರಚನೆಗಳು. ಎಲ್ಲದರಲ್ಲೂ ಹೊರಮೈಯನ್ನು ಸ್ಪಷ್ಟವಾಗಿ ದೇವಾಲಯ ರೀತಿಯಲ್ಲಿ ಕಡೆದಿದ್ದರೂ ಇವುಗಳಲ್ಲಿ ಉಪಯೋಗಿಸಬಹುದಾದ ಒಳ ಆವರಣ ಇಲ್ಲ. ವಾಸ್ತುರಚನಾರೀತಿಯಲ್ಲಿ ಚೌಕ, ಆಯಾ ಇತ್ಯಾದಿ ರೀತಿಯ ಶಿಖರಗಳನ್ನು ಹೊಂದಿದ್ದು ಪ್ರತಿಯೊಂದೂ ಒಂದಕ್ಕಿಂತ ಒಂದು ಭಿನ್ನವಾಗಿವೆ. ಒಂದೊಂದೂ ಆ ಕಾಲದಲ್ಲಿ ಪ್ರಚಲಿತವಾಗಿದ್ದ ದೇವಾಲಯ ವಾಸ್ತುರೀತಿಗಳ ಮಾದರಿಯಂತೆ ಕಾಣುತ್ತವೆ. ಈ ಪಂಚಪಾಂಡವ ರಥಗಳಲ್ಲದೆ ಇನ್ನು ಎರಡು ರಥಗಳು ಸಹ ಮಹಾಬಲಿಪುರಂನಲ್ಲಿ ಇವೆ. ಇದಲ್ಲದೆ ಮಹಾಬಲಿಪುರಂನಲ್ಲಿರುವ ಬಂiÀÄಲ ಬಂಡೆಯ ಮೇಲಿನ ಗಂಗಾವತರಣ ಮತ್ತು ಗೋವರ್ಧನಗಿರಿಧಾರಿಯ ಉಬ್ಬುಶಿಲ್ಪಗಳು ಬೃಹತ್ ರಚನೆಗಳೂ ಆಕರ್ಷಕವಾಗಿವೆ.

ತೊಂಡೈನಾಡಿನಲ್ಲಿ ಪ್ರಾರಂಭವಾದ ಗುಹಾವಾಸ್ತುಶೈಲಿ ಮುಂದೆ ಪಾಂಡ್ಯನಾಡಿನಲ್ಲಿ ಪ್ರಚಾರಕ್ಕೆ ಬಂದಿತು. ಮಧುರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಹಲವು ಗುಹಾ ಹಾಗೂ ಏಕಶಿಲಾದೇವಾಲಯಗಳು ಇವೆ. ಇವುಗಳಲ್ಲಿ ಪುದುಕೋಟೈ ಬಳಿ ಇರುವ ಸಿತ್ತನವಾಸಲ್ ಗುಹೆ ಸು. 7-8 ನೆಯ ಶತಮಾನದ್ದು. ಇದು ಸರಳ ರಚನೆಯಾಗಿದ್ದು ಇದರ ಗೋಡೆಗಳ ಮೇಲೆ ಆ ಕಾಲದ ವರ್ಣಚಿತ್ರಗಳು ಇನ್ನೂ ಉಳಿದು ಬಂದಿವೆ. ಮಧುರೆ ಪ್ರದೇಶದ ಕಳುಗುಮಲೈ ಎಂಬಲ್ಲಿರುವ ವೇಟ್ಟುವನ್ ಕೋಯಿಲ್ ಪಾಂಡ್ಯ ಮಂಡಲದ ಏಕಶಿಲಾ ವಾಸ್ತುವಿಗೆ ಒಳ್ಳೆಯ ಉದಾಹರಣೆ. ದ್ರಾವಿಡ ಶೈಲಿಯ ದೇವಾಲಯಗಳಂತೆ ಇದನ್ನು ಕಡೆದಿದ್ದರೂ, ಇದರಲ್ಲಿ ಎಲ್ಲೋರಾದ ಕೈಲಾಸದ ರಚನಾ ಪ್ರಭಾವವನ್ನು ಗುರುತಿಸಬಹುದು.

ಗುಹಾ ವಾಸ್ತು-ಶಿಲ್ಪ ರಚನೆಗೆ ಆಶ್ರಯವಾದದ್ದು ಶಿಲಾಶ್ರೇಣಿಗಳು ಹಬ್ಬಿರುವ ಭೂಪ್ರದೇಶ. ಅದರಲ್ಲೂ ಸುಲಭವಾಗಿ ಕೊರೆಯಬಹುದಾದ ಹಾಗೂ ಶಾಶ್ವತವಾಗಿ ಉಳಿದುಬರಬಲ್ಲ ಶಿಲಾವರ್ಗಗಳಲ್ಲಿ ಈ ಪ್ರಯತ್ನಗಳು ಕಾಣುತ್ತವೆ. ಈ ದೃಷ್ಟಿಯಿಂದ ನೋಡಿದರೆ ಸಹಜವಾಗಿ ಇಡೀ ಉತ್ತರ ಭಾರತ ಗುಹಾ ವಾಸ್ತು ರಚನೆಗೆ ತಕ್ಕುದಲ್ಲ. ಆದ್ದರಿಂದ ಈ ಪ್ರದೇಶದಲ್ಲಿ ಗುಹಾ ವಾಸ್ತು-ಶಿಲ್ಪ ರಚನೆಗಳು ಕಂಡುಬರುವುದಿಲ್ಲ. ಹೀಗಿದ್ದರೂ ಹಿಮಾಲಯದ ಗಡವಾಲ್ ಮತ್ತು ಹಿಮಾಚಲ ಪ್ರದೇಶದ ಭಾಗಗಳಲ್ಲಿ ಕೆಲವು ಪ್ರಯತ್ನಗಳು ನಡೆದಿದ್ದರೂ ಅಲ್ಲಿಯ ಶಿಲೆ ಬಹಳ ಶಿಥಿಲವಾದದ್ದರಿಂದ ಯಾವುವೂ ಸರಿಯಾಗಿ ಉಳಿದುಬಂದಿಲ್ಲ. ಉತ್ತರ ಭಾರತದಲ್ಲಿ ವಿಶಿಷ್ಟವಾಗಿ ಎದ್ದು ಕಾಣುವ ಒಂದು ಗುಂಪು ರಾಜಸ್ತಾನದಲ್ಲಿ ಕೋಟ ನಗರದಿಂದ ಸು. 125 ಕಿಮೀ ದಕ್ಷಿಣದಲ್ಲಿರುವ ಧಮ್ನಾರ್ ಎಂಬಲ್ಲಿದೆ. ಇವು ಎರಡು ಕಾಲ ಘಟ್ಟಗಳಲ್ಲಿ ರಚಿತವಾದವು. ಮೊದಲನೆಯ ಗುಂಪು ಬೌದ್ಧ, ಸು. 3-7 ನೆಯ ಶತಮಾನಕ್ಕೆ ಸೇರಿದವು. ಎರಡನೆಯದು ಎಲ್ಲೋರದ ಕೈಲಾಸದ ಮಾದರಿಯಲ್ಲೇ ಕಂಡರಿಸಲಾಗಿರುವ ವಿಷ್ಣು ದೇವಾಲಯ. ಇದು ಎಲ್ಲೋರದಷ್ಟು ದೊಡ್ಡದಲ್ಲವಾದರೂ ರಚನಾ ತಂತ್ರದಲ್ಲಿ ಅದನ್ನೇ ಹೋಲುತ್ತದೆ. ಆದರೆ ಇಲ್ಲಿಯ ದೇವಾಲಯ ಉತ್ತರ ಭಾರತದ ರೇಖಾನಾಗರದ ರೀತಿಯದು ಕಾಲ ಸು.10ನೆಯ ಶತಮಾನ. ಮಧ್ಯ ಪ್ರದೇಶದ ಗ್ವಾಲಿಯರ್ ನಗರದಲ್ಲೇ ಇರುವ ಬೆಟ್ಟದಲ್ಲಿ ಕೆಲವು ಗುಹಾಲಯಗಳಿವೆ. ಇವು ವಿಶೇಷವಾದ ವಾಸ್ತುರಚನೆಗಳಾಗಿರದೆ ಬಂಡೆಯಲ್ಲಿ ಕೊರೆದ ಸಾಮಾನ್ಯ ಆವರಣಗಳು. ಇವೆಲ್ಲ ಜೈನ ಸು. 8-15ನೆಯ ಶತಮಾನಕ್ಕೆ ಸೇರುವ ಈ ಗುಹೆಗಳಲ್ಲಿ ಅನೇಕ ತೀರ್ಥಂಕರರ ವಿಗ್ರಹಗಳನ್ನು ಕೆತ್ತಲಾಗಿದೆ. ಈ ಶಿಲಾ ಕೆತ್ತನೆಗಳಲ್ಲಿ ಗಮನ ಸೆಳೆಯುವಂತಹದು ಗ್ವಾಲಿಯರ್ ಕೋಟೆಯ ಉರ್ಬೈದ್ವಾರದ ಬಳಿ ಬಂಡೆಯ ಮೇಲೆ ಕೆತ್ತಿರುವ 17.10 ಮೀ ಎತ್ತರದ ಆದಿನಾಥ ತೀರ್ಥಂಕರನ ಉಬ್ಬು ಶಿಲ್ಪ.

ಗುಹಾ ವಾಸ್ತು-ಶಿಲ್ಪ ಸಂಪ್ರದಾಯದ ಈ ಅಂತಿಮಘಟ್ಟ ಸು. 12-13ನೆಯ ಶತಮಾನ ಎಂದು ಹೇಳಬಹುದು. ಆದರೆ ಈ ಅನಂತರದ ಕಾಲದಲ್ಲೂ ಇತ್ತೀಚೆಗೆ 18-19ನೆಯ ಶತಮಾನದವರೆಗೂ ಬಂಡೆಗಳನ್ನು ಕೊರೆದು ಆವರಣಗಳಲ್ಲಿ ನಿರ್ಮಿಸುವ ಕೆಲಸ ಕರ್ನಾಟಕ, ತಮಿಳುನಾಡು, ಆಂಧ್ರ ಈ ಪ್ರದೇಶಗಳಲ್ಲಿ ಅಲ್ಲಲ್ಲಿ ಕಂಡು ಬರುವುದುಂಟು. ಆದರೆ ಇವುಗಳು ವಿನ್ಯಾಸದಲ್ಲಾಗಲಿ, ಸೌಂದರ್ಯದಲ್ಲಾಗಲಿ ಯಾವ ವೈಶಿಷ್ಟ್ಯ ಇಲ್ಲದ ಬಹಳ ಸರಳ ಅಥವಾ ಅರೆಬರೆ ರಚನೆಗಳು. ಇಂಥ ರಚನೆಗಳು ಕರ್ನಾಟಕದ ಗವಿ ರಂಗಾಪುರ, ಆಂಧ್ರದ ಸಿಂಗರಾಯಕೊಂಡ ಮೊದಲಾದೆಡೆ ಕಾಣುತ್ತವೆ.