ಗುಲ್ವಾಡಿ ವೆಂಕಟರಾವ್

ಗುಲ್ವಾಡಿ ವೆಂಕಟರಾವ್(1844-1907). ಕನ್ನಡದಲ್ಲಿ ಆದ್ಯ ಸ್ವತಂತ್ರ ಸಾಮಾಜಿಕ ಕಾದಂಬರಿಕಾರ.

ಬಾಲ್ಯ ಮತ್ತು ಜೀವನ

ಬದಲಾಯಿಸಿ

ಇಂದಿನ ಉಡುಪಿ ಜಿಲ್ಲೆಕುಂದಾಪುರಗುಲ್ವಾಡಿ ಈತನ ಹುಟ್ಟೂರು. ಮನೆತನ ಸಾರಸ್ವತ ಬ್ರಾಹ್ಮಣರದು. ಬಿ.ಎ. ಪದವೀಧರನಾಗಿ ಗುಲ್ವಾಡಿ ಪೋಲಿಸ್ ಖಾತೆಯನ್ನು ಸೇರಿದ. ಈತನದು ಆ ವೃತ್ತಿಗೆ ತಕ್ಕ ಭೀಮಕಾಯ, ಗಂಭೀರ ಮುಖಮುದ್ರೆ. ಪೋಲಿಸ್ ಕೆಲಸದಿಂದ ನಿವೃತ್ತನಾದ ಮೇಲೆ ಸಾಹಿತ್ಯ ರಚನೆಯಲ್ಲಿ ತೊಡಗಿದ. ಈತನ ಮೊದಲ ಕಾದಂಬರಿ ಇಂದಿರಾಬಾಯಿ ಅಥವಾ ಸದ್ಧರ್ಮ ವಿಜಯ (1898), ಭಾಗೀರಥಿ(1900), ಸೀಮಂತಿನೀ(1907) -ಇವು ಇತರ ಕಾದಂಬರಿಗಳು. ಲಾಡುಪ್ರಿಯಾಚಾರ್ಯ ಎಂಬುದು ವಿಡಂಬನಾತ್ಮಕ ಬರೆಹ. ಈತ ಮಿತ್ರೋದಯವೆಂಬ ಪತ್ರಿಕೆಯನ್ನು ನಡೆಸುತ್ತಿದ್ದುದಾಗಿಯೂ ತಿಳಿಯುತ್ತದೆ.

ಸಾಮಾಜಿಕ ಕಾರ್ಯ

ಬದಲಾಯಿಸಿ

ಗುಲ್ವಾಡಿ ಬಾಳಿದ ಕಾಲದಲ್ಲಿ ಭಾರತೀಯ ಸಮಾಜ ಸನಾತನ ಆವರಣದಿಂದ ಹೊರಬಿದ್ದು, ಪಾಶ್ಚಾತ್ಯ ನಾಗರಿಕತೆಯತ್ತ ಸಾಗುತ್ತಿತ್ತು. ಈ ಘರ್ಷಣೆಯಲ್ಲಿ ಈ ಲೇಖಕನದು ಮಧ್ಯಮಾರ್ಗ. ಸನಾತನ ಧರ್ಮದಲ್ಲಿ, ಗುರುಪೀಠಗಳಲ್ಲಿ ಈತನಿಗೆ ಅಚಲನಿಷ್ಠೆಯಿತ್ತೆಂಬುದೇನೋ ನಿಜ. ಆ ಮನೋಭಾವದಿಂದಲೇ ಈತ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯವನ್ನು ಕೈಕೊಂಡದ್ದಿದೆ. ಆದರೆ ಪ್ರಾಮಾಣಿಕತೆಯೇ ಜೀವನದ ಉಸಿರಾಗಿದ್ದ ಈತನಿಗೆ ಹಲವು ಗುರುಪೀಠಗಳ ಡಂಭಾಚಾರ ಸರಿಬರಲಿಲ್ಲ. ಹೊಸ ಶಿಕ್ಷಣದ ಪುರಸ್ಕರ್ತನಾಗಿ ಈತ ಹಲವು ಶಿಕ್ಷಣ ಮಂದಿರಗಳನ್ನು ಪುನರುಜ್ಜೀವನಗೊಳಿಸಿದ. ಸ್ತ್ರೀಯರ ಏಳ್ಗೆ ಮುಂತಾದ ವಿಷಯಗಳಲ್ಲಿ ಈತನಿಗೆ ಸಹಜವಾದ ಕಳಕಳಿ ಇತ್ತು.

ಸಾಹಿತ್ಯ

ಬದಲಾಯಿಸಿ

ಹಳತು ಹೊಸತರ ಸಂಘರ್ಷ ಇಂದಿರಾಬಾಯಿ ಎಂಬ ಕಾದಂಬರಿಯಲ್ಲಿ ಚಿತ್ರಿತವಾಗಿದೆ. ಪೋಲಿಸ್ ಖಾತೆಯಲ್ಲಿದ್ದಾಗಿನ ಲೋಕಾನುಭವ ಇಲ್ಲಿ ಸಾಹಿತ್ಯವಾಗಿ ರೂಪುಗೊಂಡಿದೆ. ಇಂದಿರೆಯ ತಂದೆ ತಾಯಿಗಳು ಸ್ವಾರ್ಥಪರರು. ತಮಗೆ ಆಗದವರನ್ನು ವಿಷಹಾಕಿ ಕೊಲ್ಲಿಸುವುದಕ್ಕೂ ಹೇಸರು. ಒಬ್ಬ ವ್ಯಸನಿಯೊಡನೆ ಮಗಳ ಮದುವೆ ಮಾಡಿಸಿದ್ದರ ಫಲವಾಗಿ ಇಂದಿರೆ ಬಾಲವಿಧವೆಯಾಗಿ ಅಮೃತರಾಯನೆಂಬುವನ ಆಶ್ರಯದಲ್ಲಿ ನಿಲ್ಲುತ್ತಾಳೆ. ಆತನ ಪೋಷಣೆಯಲ್ಲಿ ಆಕೆಯೂ ಭಾಸ್ಕರನೆಂಬ ಅನಾಥ ಹುಡುಗನೊಬ್ಬನೂ ವಿದ್ಯೆ ಕಲಿಯುತ್ತಾರೆ. ಕೊನೆಗೆ ಭಾಸ್ಕರನೊಡನೆ ಇಂದಿರೆಯ ಮರುಮದುವೆಯಾಗುತ್ತದೆ. ಈ ಸಂಬಂಧದಿಂದ ನಿಜವಾದ ಸದ್ಧರ್ಮದ ವಿಜಯವಾಯಿತೆಂದು ತೋರಿಸಲಾಗಿದೆ. ಕಥೆಯಲ್ಲಿನ ಘಟನೆಗಳು ವಾಸ್ತವಾಂಶದಿಂದ ಕೂಡಿದುವಾಗಿದ್ದು ಯಾವ ದೃಷ್ಟಿಯಿಂದ ನೋಡಿದರೂ ಕಾದಂಬರಿ ಆಧುನಿಕ ಸಮಾಜದ ಕಥನವೆನ್ನಿಸಿಕೊಳ್ಳುತ್ತದೆ. ಈ ಕಾದಂಬರಿಯ ಗುಣವನ್ನು ಮೆಚ್ಚಿ, ದಕ್ಷಿಣ ಕನ್ನಡದಲ್ಲಿ ಜಿಲ್ಲಾಧಿಕಾರಿಯಾಗಿದ್ದ ಕೌಚ್ ಮನ್ ಎಂಬಾತ ಇದನ್ನು ಇಂಗ್ಲಿಷಿಗೆ ಭಾಷಾಂತರಿಸಿ ಪ್ರಕಟಿಸಿದ್ದಾನೆ.ಕನ್ನಡದಿಂದ ಇಂಗ್ಲೀಷ್ ಗೆ ಅನುವಾದ ಪ್ರಥಮ ಸಾಹಿತ್ಯ ಕೃತಿ.

ಉಲ್ಲೇಖಗಳು

ಬದಲಾಯಿಸಿ

.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: