ಗುಪ್ತರ ವಾಸ್ತು ಮತ್ತು ಶಿಲ್ಪಕಲೆ

ಗುಪ್ತರ ಕಾಲದಲ್ಲಿ ಅನೇಕ ದೇವಾಲಯಗಳು ನಿರ್ಮಾಣವಾದ ಬಗ್ಗೆ ಶಾಸನಗಳು ಉಲ್ಲೇಖಿಸುತ್ತವೆ. ಆದರೆ ದೇಗುಲ ವಾಸ್ತು ಉದಾಹರಣೆಗಳು ಉತ್ತರ ಭಾರತದ ಕೆಲವೆಡೆ ಮಾತ್ರ ಉಳಿದುಬಂದಿವೆ. ಇವಾವುದನ್ನೂ ಗುಪ್ತ ಅರಸರ ನೇರ ಪ್ರೋತ್ಸಾಹದಿಂದ ರಚಿತವಾದುದೆಂಬುದಾಗಿ ಗುರುತಿಸುವಂತಿಲ್ಲ. ಇವು ಇಟ್ಟಿಗೆ ಇಲ್ಲವೆ ಶಿಲೆಯಿಂದ ನಿರ್ಮಿತವಾಗಿವೆ. ಕಲ್ಲಿನ ನಿಕ್ಷೇಪಗಳ ಕೊರತೆಯಿರುವ ಮಧ್ಯದೇಶದಲ್ಲಿ (ಉತ್ತರ ಪ್ರದೇಶ ಮತ್ತು ಅದಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ) ಇಟ್ಟಿಗೆಯ ದೇಗುಲಗಳು ನಿರ್ಮಾಣವಾದವು. ಇವುಗಳಲ್ಲಿ ಕೆಲವೇ ಕೆಲವು ಮಾತ್ರ ಉಳಿದಿವೆ. ಸಾಮ್ರಾಜ್ಯದ ದಕ್ಷಿಣ ಭಾಗದಲ್ಲಿ ಶಿಲಾನಿಕ್ಷೇಪಗಳು ಸಮೃದ್ಧವಾಗಿವೆ. ಆದುದರಿಂದ ಈ ಪ್ರದೇಶದಲ್ಲಿ ಕೆಲವು ಶಿಲಾ ದೇಗುಲ ವಾಸ್ತು ಉದಾಹರಣೆಗಳು ಲಭ್ಯವಾಗಿವೆ. ಆದರೆ ಇವುಗಳಲ್ಲಿ ಗುಪ್ತರ ಕಾಲದ ಉತ್ತರಾರ್ಧದ ಉದಾಹರಣೆಗಳೇ ಹೆಚ್ಚು. ಕಟ್ಟಡ ಅಥವಾ ರಚನ ವಾಸ್ತುವಿಗೆ ಈ ಕಾಲದಲ್ಲಿ ಪ್ರಾಧಾನ್ಯ ಬಂದು ದೇಗುಲಗಳಿಗೆ ಶಿಲಾಮಾಧ್ಯಮದ ಬಳಕೆ ಹೆಚ್ಚಾಯಿತು. ಹೀಗಾಗಿ ಮುಂಚಿನ ಕಟ್ಟಿಗೆಯ ವಾಸ್ತುವಿನ ಉದಾಹರಣೆಗಳ ಅನುಕರಣೆಯ ಬದಲು ವಾಸ್ತು ಶಿಲ್ಪಗಳು ದೃಡತೆ, ಪ್ರಮಾಣ ಮತ್ತು ಸಮತೋಲನದ ಸಮಸ್ಯೆಗಳ ಬಗ್ಗೆ ಹೆಚ್ಚು ಲಕ್ಷ್ಯವಹಿಸಿದ್ದು ಕಾಣುತ್ತದೆ.


ಗುಪ್ತರ ಕಾಲದ ದೇವಾಲಯಗಳು ಸ್ವರೂಪದಲ್ಲಿ ವೈವಿಧ್ಯಮಯವಾಗಿವೆ. ಈಗ ಉಳಿದುಬಂದಿರುವ ತೀರ ಸರಳ ಮತ್ತು ಜನಪ್ರಿಯ ರೀತಿಯ ದೇಗುಲಗಳಿಗೆ ಚೌಕ ವಿನ್ಯಾಸವುಳ್ಳ, ಸಮತಟ್ಟಾದ ಚಾವಣಿಯುಳ್ಳ ಗರ್ಭಗೃಹವಿದೆ. ಇದಕ್ಕೆ ಅಂಟಿಕೊಂಡಂತೆ ಮುಂದುಗಡೆ ಚಿಕ್ಕಗಾತ್ರದ ಕುಳ್ಳಗಿನ ತೆರೆದ ಮುಖಮಂಟಪವಿದೆ. ಗರ್ಭಗೃಹಕ್ಕೆ ಮುಖಮಂಟಪದ ಮೂಲಕ ಒಂದೇ ಪ್ರವೇಶವಿದ್ದು ಕಿಂಡಿಗಳಿರುವುದಿಲ್ಲ. ಮುಖಮಂಟಪದ ಕಂಬದ ಕೆಳಭಾಗ ಚೌಕವೂ ಅಲಂಕಾರರಹಿತವೂ ಆಗಿದ್ದು ಪೀಠದ ಅಭಾಸ ನೀಡುತ್ತದೆ. 8 ಇಲ್ಲವೇ 16 ಮುಖಗಳಿರುವ ಕಂಬದ ಕಾಂಡಭಾಗ ದುಂಡಗಿನ ದಂಡದಂತಹ ರೂಪು ಪಡೆದಿದೆ. ಕಾಂಡದ ಮೇಲ್ಗಡೆ ಘಟಪಲ್ಲವ ಅಲಂಕರಣವಿದ್ದು ಅದರ ಮೇಲಿರುವ ಗುರುತರ ಫಲಕ ಸಿಂಹಬೋದಿಗೆಯನ್ನು ಹೊತ್ತಿರುತ್ತದೆ. ಮುಖಮಂಟಪದ ಮುಖದಲ್ಲಿರುವ ನಾಲ್ಕು ಕಂಬಗಳ ಸಾಲಿನಲ್ಲಿ ಮಧ್ಯದ ಜೋಡಿಯ ನಡುವಿನ ಅಂತರ ಪಾಶರ್ವ್‌ದ ಜೋಡಿಗಳ ನಡುವಿನ ಅಂತರಕ್ಕಿಂತ ಹೆಚ್ಚಾಗಿರುತ್ತದೆ. ಸಾಲಂಕೃತ ದ್ವಾರಬಂಧದ ಮೇಲ್ಗಡೆ ಉತ್ತರಾಂಗವಿರುತ್ತದೆ. ಇಂತಹ ಸರಳ ವಿನ್ಯಾಸದ ವಾಸ್ತುವಿನಿಂದ ಕ್ರಮೇಣ ಭಾರತೀಯ ದೇಗುಲವಾಸ್ತು ಸಂಕೀರ್ಣರೂಪದ್ದಾಗಿ ಅಭಿವೃದ್ಧಿಹೊಂದಿದೆ. ಎತ್ತರವಾದ ಜಗತಿ, ಪ್ರದಕ್ಷಿಣಾಪಥದ ಸೇರ್ಪಡೆ ಮತ್ತು ಶಿಖರ ರಚನೆಗಳು ಮೊದಲ ಮಾರ್ಪಾಡುಗಳು. ಅನಂತರದ ಬೆಳೆವಣಿಗೆಯಲ್ಲಿ ಮೂಲ ದೇಗುಲದ ಸುತ್ತ ಉಪದೇಗುಲಗಳನ್ನು ರಚಿಸಲಾಗಿದೆ.


ಗುಪ್ತರ ಕಾಲದ ದೇಗುಲಗಳ ಬಹು ಅಲಂಕೃತ ಭಾಗವೆಂದರೆ ದ್ವಾರಬಂಧ. ಇದು ರೋಮನ್ (ಲ್ಯಾಟಿನ್) ಲಿಪಿಯ ಟಿ ಆಕಾರದಲ್ಲಿರುವುದು ಸಾಮಾನ್ಯ. ದ್ವಾರಬಂಧದ ಭುಜಗಳನ್ನು ಅನೇಕ ಶಾಖೆಗಳಾಗಿ ಅಲಂಕರಿಸಿದೆ. ಪ್ರಾಣಿ, ಹೂಬಳ್ಳಿ, ಮಿಥುನ, ಗಣ, ದೇವತೆಗಳ ಸಾಲುಗಳು ಶಾಖೆಗಳ ಅಲಂಕರಣಕ್ಕೆ ಬಳಕೆಯಾಗಿವೆ. ದ್ವಾರಬಂಧದ ಮೇಲ್ಭಾಗದ ಪಾಶರ್ವ್‌ಗಳಲ್ಲಿ ಇಲ್ಲವೇ ಭುಜಗಳ ಕೆಳ (ಪೇದ್ಯಾ) ಭಾಗದಲ್ಲಿ ಗಂಗಾ ಮತ್ತು ಯಮುನಾ ನದೀದೇವತೆಗಳ ವಿಗ್ರಹಗಳಿರುವುದು ಸಾಮಾನ್ಯವಾಗಿ ಈ ಕಾಲದ ದೇವಾಲಯಗಳ ವಿಶೇಷ, ಲಲಾಟದಲ್ಲಿ ದೇವತೆಯ ಬಿಂಬವನ್ನು ಅಳವಡಿಸಲಾಗಿರುತ್ತದೆ. ದೇಗುಲಗಳ ಸುತ್ತ ಬಿಡಿಯಾಗಿ ದೊರೆತಿರುವ ಜಾಲಂಧ್ರಗಳು, ಪ್ರನಾಲಗಳು, ಆಮಲಕಗಳು, ಅಲಂಕಾರಪುರಿತ ವಾಸ್ತುಭಾಗಗಳು ಶುದ್ಧ ಗುಪ್ತ ಶೈಲಿಯ ಅಲಂಕಾರ ವಿನ್ಯಾಸದ ಪ್ರಮುಖ ಲಕ್ಷಣಗಳು. ಕೆಲವು ದೇವಾಲಯಗಳ ಗೋಡೆಗಳಲ್ಲಿ ಮಾತ್ರ ಕೋಷ್ಠಗಳಿದ್ದು ಇವು ದೊಡ್ಡ ಗಾತ್ರದ ದೇವತಾ ಶಿಲ್ಪಗಳನ್ನೊಳಗೊಂಡಿವೆ. ಇವುಗಳಲ್ಲಿ ಟಿ ಆಕಾರದ ದ್ವಾರಬಂಧ, ದ್ವಾರಬಂಧದ ಭುಜಗಳನ್ನು ಶಾಖೆಗಳಾಗಿ ಅಲಂಕರಿಸುವ ಪದ್ಧತಿ, ಹೂ-ಎಲೆ-ಬಳ್ಳಿಗಳ ವಿನ್ಯಾಸ, ಚೌಕಖಾನೆಗಳ ವಿನ್ಯಾಸಕ್ರಮ ಮುಂತಾದ ಹಲವು ಅಂಶಗಳ ಮೂಲವನ್ನು ಕುಷಾಣಕಾಲೀನ ಮಥುರ ಮತ್ತು ಗಾಂಧಾರ ಶಿಲ್ಪ ಪರಂಪರೆಯಲ್ಲಿ ಕಾಣಬಹುದು.


ಈ ಹಿನ್ನೆಲೆಯಲ್ಲಿ ಗುಪ್ತರ ಕಾಲದ ದೇಗುಲಗಳನ್ನು ಮೂರು ಗುಂಪುಗಳಾಗಿ ವರ್ಗೀಕರಿಸಬಹುದು:

  1. ಸಮತಟ್ಟಾದ ಚಾವಣಿಯುಳ್ಳ, ಚೌಕ ಗರ್ಭಗೃಹವಿರುವ, ಚಿಕ್ಕ ಮುಖಮಂಟಪವನ್ನೊಳಗೊಂಡ ದೇಗುಲಗಳು. ಇದಕ್ಕೆ ಸಾಂಚಿಯ 17ನೆಯ ಗುಡಿ ಮತ್ತು ತಿಗಾವದ ಕಂಕಾಲೀದೇವಿ ಗುಡಿ ಉದಾಹರಣೆಗಳು.
  2. ಗರ್ಭಗೃಹದ ಸುತ್ತ ಪ್ರದಕ್ಷಿಣಾಪಥ ವಿರುವ ದೇಗುಲಗಳು. ಇದಕ್ಕೆ ನಾಚ್ನಾ ಕುಠಾರದ ಪಾರ್ವತಿ ದೇವಾಲಯ ಹಾಗೂ ಭೂಮರಾದ ಶಿವ ದೇವಾಲಯ ಒಳ್ಳೆಯ ಉದಾಹರಣೆಗಳು.