ಗೀಗರ್ - ಮುಲ್ಲರ್ ಗುಣಕ

(ಗುಣಕ, ಗೀಗರ್ - ಮುಲ್ಲರ್ ಇಂದ ಪುನರ್ನಿರ್ದೇಶಿತ)

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಅಯಾನೀಕರಿಸುವ ವಿಕಿರಣವನ್ನು (ಅಯನೈಸಿಂಗ್ ರೇಡಿಯೇಷನ್) ಅಳತೆ ಮಾಡುವ ಒಂದು ಉಪಕರಣ (ಗೀಗರ್- ಮುಲ್ಲರ್ ಕೌಂಟರ್). ಸಂಕ್ಷೇಪವಾಗಿ ಜಿಎಂ ಗುಣಕ ಇಲ್ಲವೇ ಗೀಗರ್ ಗುಣಕ ಎಂದು ಹೇಳುವುದುಂಟು. ವಿಕಿರಣ ಪಟುತ್ವವನ್ನು (ರೇಡಿಯೋ ಆ್ಯಕ್ಟಿವಿಟಿ) ಪತ್ತೆ ಮಾಡುವಲ್ಲಿ ಇದರ ಪಾತ್ರ ಬಲು ಮುಖ್ಯ. ವೇಗವಾಗಿ ಚಲಿಸುವ ವಿದ್ಯುದಾವಿಷ್ಟಕಣ (ಚಾರ್ಜ್ಡ್ ಪಾರ್ಟಿಕಲ್) ಅನಿಲಗಳ ಮೂಲಕ ಹಾದುಹೋದಾಗ ಉಂಟಾಗುವ ಆಘಾತಗಳನ್ನು ಎಲೆಕ್ಟ್ರಾನಿಕ್ ಆವರ್ತಕಗಳಿಂದ ಗುರ್ತಿಸಿ ಎಣಿಸಬಹುದಾದ ಸಾಧ್ಯತೆಯ ಮೇಲೆ ಗುಣಕಗಳು ರಚಿನೆಗೊಂಡಿವೆ. ಸಾಮಾನ್ಯವಾಗಿ ಗುಣಕಗಳಲ್ಲಿ, ಕಡಿಮೆ ಒತ್ತಡದಲ್ಲಿರುವ ಆರ್ಗಾನ್ ಅಥವಾ ಯಾವುದಾರೂ ಒಂದು ಹ್ಯಾಲೋಜೆನ್ನಿನಿಂದ ತುಂಬಿದ ಗಾಜಿನ ಕೊಳವೆಯಲ್ಲಿ ಕೊಳವೆಯ ಒಳಪದರಕ್ಕೆ ಸೇರಿದಂತೆ ವರ್ತುಲ ಸ್ತಂಭಾಕೃತಿಯ, ತಾಮ್ರ ಅಥವಾ ಅಲ್ಯೂಮಿನಿಯಮಿನ ಋಣ ವಿದ್ಯುತ್ ಧ್ರುವವೂ (ಕ್ಯಾಥೋಡ್) ಋಣ ವಿದ್ಯುತ್ ಧ್ರುವದ ಅಕ್ಷದಲ್ಲಿ ಹಾದು ಹೋಗುವ ಟಂಗ್ಸ್ಟನ್ ತಂತಿಯ ಧನವಿದ್ಯುತ್ ಧ್ರುವವೂ (ಆ್ಯನೋಡ್) ಇರುತ್ತವೆ. ಸುಮಾರು 1000 ವೋಲ್ಟುಗಳಷ್ಟು ವಿಭವದಲ್ಲಿ (ಪೊಟೆನ್ಶಿಯಲ್) ಆ್ಯನೋಡ್ನ್ನು ಇಟ್ಟು ಯಾವುದಾದರೂ ಒಂದು ವಿದ್ಯುದಾವಿಷ್ಟಕಣವನ್ನು ಗುಣಕದಲ್ಲಿ ಕಳುಹಿಸಿದಾಗ ಅದು ಅನಿಲದ ಅಣುಗಳೊಡನೆ ಘರ್ಷಿಸಿ ಅವನ್ನು ಅಯಾನೀಕೃತ ಕಣಗಳನ್ನಾಗಿ ಮಾರ್ಪಡಿಸುತ್ತದೆ. ಆ್ಯನೋಡ್ ಹೆಚ್ಚಿನ ವಿಭವದಲ್ಲಿರುವುದರಿಂದ ಎಲೆಕ್ಟ್ರಾನುಗಳು ಹೆಚ್ಚಿನ ಶಕ್ತಿಯನ್ನು ರೂಢಿಸಿಕೊಂಡು ಟಂಗ್ಸ್ಟನ್ ತಂತಿಯನ್ನು ತಲಪುವ ಮುಂಚೆ ಮತ್ತೆ ಅನಿಲದ ಅಣುಗಳೊಡನೆ ಅನುಕ್ರಮ ಘರ್ಷಣೆಯಿಂದ ಎಲೆಕ್ಟ್ರಾನುಗಳ ಪ್ರವಾಹವನ್ನೇ ಉಂಟು ಮಾಡುತ್ತವೆ. ಎಲೆಕ್ಟ್ರಾನ್ ಸಮೂಹಗಳಿಂದಾದ ವಿದ್ಯುದಾಘಾತ ಗಳನ್ನು ಪ್ರವರ್ಧಿಸಿ (ಆ್ಯಂಪ್ಲಿ ಫೈ) ಅವನ್ನು ವಿದ್ಯುದ್ಯಂತ್ರಗಳಿಂದ ದಾಖಲೆ ಮಾಡಬಹುದು ಅಥವಾ ಧ್ವನಿವರ್ಧಕಗಳಲ್ಲಿ ಶಬ್ದದ ರೂಪದಲ್ಲಿ ಅಲಿಸಬಹುದು.


ಗುಣಕಗಳ ಪರಿಣಾಮ, ಅವುಗಳಲ್ಲಿ ಉಪಯೋಗಿಬೇಕಾದ ಲೋಹ, ತುಂಬಿರ ಬೇಕಾದ ಅನಿಲ ಮುಂತಾದವು ಆ ಗುಣಕಗಳನ್ನು ಉಪಯೋಗಿಸುವ ರೀತಿಯ ಅನುಕೂಲಕ್ಕೆ ಸಂಬಂಧಪಟ್ಟಿರುತ್ತವೆ. ಆ್ಯನೋಡಿನಲ್ಲಿಡಬೇಕಾದ ವಿಭವ ನಿರ್ದಿಷ್ಟ ಗುಣಕದ ವಿಶೇಷ ಲಕ್ಷಣಗಳನ್ನು ಅವಲಂಬಿಸಿ ರುತ್ತದೆ. ಯಾವುದಾದರೂ ಒಂದು ಗುಣಕದ ಘಟನಾವಳಿಗಳ ಎಣಿಕೆಯ ವೇಗವನ್ನು (ಚಿತ್ರ 2ರಲ್ಲಿ Oy ಅಕ್ಷ) ವಿಭವದ (Ox ಅಕ್ಷ) ಎದುರಾಗಿ ಗ್ರಾಫ್ ತಯಾರಿಸಿದರೆ ಚಿತ್ರದಲ್ಲಿರು ವಂತೆ ರೇಖೆ ಬರುತ್ತದೆ. A ಜಾಗದ ವಿಭವಕ್ಕೆ ದೇಹಲೀ ವಿಭವ (ಥ್ರೆಶೋಲ್ಡ್‌ ಪೊಟೆನ್ಶಿಯಲ್) ಎಂದೂ B ಭಾಗಕ್ಕೆ ಪೀಠ ವಿಭವ (ಪ್ಲ್ಯಾಟೂ ಪೊಟಿನ್ಶಿಯಲ್) ಎಂದೂ ಹೆಸರು. ಗುಣಕದ ದಕ್ಷತಮ ಕಾರ್ಯ ಸಾಮಥರ್ಯ್‌ ಪೀಠ ವಿಭವರೇಖೆಯ ಸಂವಾದಿಯಾಗಿರುವ ವಿಭವದಲ್ಲಿ ಇರುತ್ತದೆ.


ಗುಣಕಗಳನ್ನು ಕೈಗಾರಿಕೆಗಳಲ್ಲಿ, ಔಷಧ ವೈದ್ಯದಲ್ಲಿ, ಖನಿಜ ಪರಿಶೋಧನೆಯಲ್ಲಿ ಮತ್ತು ವೈಜ್ಞಾನಿಕ ಸಂಶೋಧನೆಗಳಲ್ಲಿ ಬಹಳವಾಗಿ ಉಪಯೋಗಿಸುತ್ತಾರೆ.