ಗುಜರಾತ್ ವಿದ್ಯಾಪೀಠ


ಗುಜರಾತ್ ವಿದ್ಯಾಪೀಠ - 1920ರಲ್ಲಿ ಗಾಂಧೀಜಿ ಅಹಮದಾಬಾದಿನಲ್ಲಿ ಆರಂಭಿಸಿದ ರಾಷ್ಟ್ರೀಯ ವಿದ್ಯಾಸಂಸ್ಥೆ. ನಾಡಿನಲ್ಲಿ ಅಸಹಕಾರ ಚಳವಳಿ ನಡೆಯುತ್ತಿದ್ದಾಗ ಹೋರಾಟದಲ್ಲಿ ಭಾಗವಹಿಸಲು ಶಿಸ್ತಿನ ಯುವಜರನ್ನು ಸಿದ್ಧಪಡಿಸುವ ಕಾರ್ಯವನ್ನು ಈ ಸಂಸ್ಥೆ ಕೈಗೊಂಡಿತ್ತು.

ಗುಜರಾತ್ ವಿದ್ಯಾಪೀಠ
Gujarat Vidyapith
ಸ್ಥಾಪನೆOctober 18, 1920
ಪ್ರಕಾರಸಾರ್ವಜನಿಕ ವಿಶ್ವವಿದ್ಯಾಲಯ
ಕುಲಪತಿಗಳುಇಲಾ ಭಟ್
ಉಪಕುಲಪತಿಗಳುಅನಾಮಿಕ್ ಷಾ
ಸ್ಥಳಅಹಮದಾಬಾದ್, ಗುಜರಾತ್, ಭಾರತ
ಆವರಣನಗರ ಪ್ರದೇಶ
ಅಂತರಜಾಲ ತಾಣwww.gujaratvidyapith.org


ಗಾಂಧೀಜಿಯವರ ಆದರ್ಶದಂತೆ ನಾಡಿನ ಪುನರುಜ್ಜೀವನಕ್ಕಾಗಿ ದುಡಿಯಬಲ್ಲ ದಕ್ಷರೂ ಶೀಲಸಂಪನ್ನರೂ ಪ್ರಾಜ್ಞರೂ ಸುಶಿಕ್ಷಿತರೂ ಆದ ಯುವಜನರನ್ನು ರೂಪಿಸುವುದು ಈ ವಿದ್ಯಾಪೀಠದ ಮುಖ್ಯ ಉದ್ದೇಶ.

ಸತ್ಯ ಮತ್ತು ಅಹಿಂಸೆಯ ಮಾರ್ಗದಲ್ಲಿ ಅಧ್ಯಾಪಕರೂ ಆಡಳಿತ ಮಂಡಳಿಯವರೂ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅಸ್ಪೃಶ್ಯತೆಯ ನಿವಾರಣೆ, ನೂಲುವುದು, ನೇಯುವುದು, ಗ್ರಾಮಾಭಿವೃದ್ಧಿ, ಶ್ರಮದಾನ, ಮಾತೃಭಾಷೆಗೆ ಪ್ರಾಮುಖ್ಯ, ಧರ್ಮಸಹಿಷ್ಣುತೆ, ದೈಹಿಕ ಶಿಕ್ಷಣ ಮುಂತಾದ ಅಂಶಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ.

ಇತಿಹಾಸ

ಬದಲಾಯಿಸಿ

1932ರಲ್ಲಿ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಇದನ್ನು ಕಾನೂನು ಬಾಹಿರಸಂಸ್ಥೆಯೆಂದು ಅಂದಿನ ಸರ್ಕಾರ ಘೋಷಿಸಿತು. 1935ರಲ್ಲಿ ಮತ್ತೆ ಈ ಸಂಸ್ಥೆ ತನ್ನ ಕಾರ್ಯವನ್ನು ಆರಂಭಿಸಿದರೂ ಕ್ವಿಟ್ ಇಂಡಿಯ ಚಳವಳಿಯಲ್ಲಿ ಭಾಗವಹಿಸುವುದಕ್ಕಾಗಿ 1942ರಲ್ಲಿದನ್ನು ಮುಚ್ಚಲಾಯಿತು. ಆಮೇಲೆ 1945ರಲ್ಲಿದು ಪುನಃಚೇತನಗೊಂಡಿತು. 1947ರಲ್ಲಿ ಇದರ ವತಿಯಲ್ಲಿ ಮಹದೇವದೇಸಾಯ್ ಸಮಾಜಸೇವಾ ಕಾಲೇಜು ಆರಂಭವಾಯಿತು. 1963ರಲ್ಲಿ ಪಾರ್ಲಿಮೆಂಟು ಇದನ್ನು ರಾಷ್ಟ್ರೀಯ ಪ್ರಾಮುಖ್ಯವುಳ್ಳ ವಿದ್ಯಾಸಂಸ್ಥೆಯೆಂದು ಘೋಷಿಸಿ ಪದವಿ ನೀಡುವ ಅಧಿಕಾರವಿತ್ತು, ಪರಿಗಣಿತ ವಿಶ್ವವಿದ್ಯಾಲಯವನ್ನಾಗಿ ಅಂಗೀಕರಿಸಿತು. ಗಾಂಧೀಜಿ ಅಜೀವಪರ್ಯಂತ ಇದರ ಕುಲಪತಿಗಳಾಗಿದ್ದರು. ಅನಂತರ ಬಾಬು ರಾಜೇಂದ್ರ ಪ್ರಸಾದರು ಕುಲಪತಿಗಳಾದರು. ಅನಂತರ ಇದರ ಕುಲಪತಿ ಮುರಾರ್ಜಿ ದೇಸಾಯಿ.


ಪಠ್ಯಕ್ರಮ

ಬದಲಾಯಿಸಿ

1930ರವರೆಗೆ ಈ ಸಂಸ್ಥೆಯಲ್ಲಿ ಗುಜರಾತಿ, ಮರಾಠಿ, ಬಂಗಾಳಿ, ಸಂಸ್ಕ್ರತ , ಇಂಗ್ಲಿಷ್, ಪರ್ಷಿಯನ್ ಮೊದಲಾದ ಭಾಷೆಗಳಲ್ಲೂ ಇಂಡಾಲಜಿ, ಸಮಾಜ ವಿಜ್ಞಾನಗಳು. ಔಷಧನಿರ್ಮಾಣಶಾಸ್ತ್ರ. ತತ್ತ್ವಶಾಸ್ತ್ರ. ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ವಾಣಿಜ್ಯಶಾಸ್ತ್ರ, ಮುಂತಾದ ಶಾಸ್ತ್ರಗಳಲ್ಲೂ ಪದವಿಮಟ್ಟದ ಶಿಕ್ಷಣಕ್ಕೆ ಅವಕಾಶವಿತ್ತು. 1947ರ ಅನಂತರ ಸ್ನಾತಕೋತ್ತರ ತರಗತಿಗಳನ್ನು ತೆರೆಯಲಾಯಿತು. ಗಾಂಧೀತತ್ತ್ವ, ಅರ್ಥಶಾಸ್ತ್ರ, ಶಿಕ್ಷಣ, ಭಾಷೆ ಮತ್ತು ಸಾಹಿತ್ಯ, ಭಾರತೀಯ ಸಂಸ್ಕೃತಿ-ಈ ವಿಶೇಷ ವಿಷಯಗಳನ್ನು ಪಠ್ಯಕ್ರಮದಲ್ಲಿ ಸೇರಿಸಿಕೊಳ್ಳಲಾಗಿದೆ. ಶಿಕ್ಷಣ ಮಾಧ್ಯಮ ಗುಜರಾತಿ.

ಏಕ ಘಟಕ ವಸತಿ ವಿಶ್ವವಿದ್ಯಾಲಯವಾದ್ದರಿಂದ ಇದಕ್ಕೆ ಸೇರಿದಂತೆ ಯಾವ ಅಂಗೀಕೃತ ಕಾಲೇಜುಗಳೂ ಇಲ್ಲ. ಇಲ್ಲಿಂದ ಹೊರಬಂದ ಪದವೀಧರರು ಗುಜರಾತಿನ 200 ಗ್ರಾಮಗಳಲ್ಲಿ ಏರ್ಪಡಿಸಿರುವ ಆಶ್ರಮಪಾಠಶಾಲೆಗಳಲ್ಲೂ ಇತರ ಸಂಸ್ಥೆಗಳಲ್ಲೂ ಕೆಲಸ ಮಾಡುತ್ತಿದ್ದಾರೆ. ಈಗ ಈ ವಿಶ್ವವಿದ್ಯಾಲಯ ಶಿಶುವಿಹಾರದಿಂದ ಸ್ನಾತಕೋತ್ತರ ತರಗತಿಗಳ ಎಲ್ಲ ಮಟ್ಟದ ಶಿಕ್ಷಣ ಸಂಸ್ಥೆಗಳನ್ನೂ ಅಂತರ್ಗತಗೊಳಿಸಿಕೊಂಡು ಕೆಲಸ ಮಾಡುತ್ತಿದೆ. 1970ರಲ್ಲಿ ಈ ಸಂಸ್ಥೆ ಸುವರ್ಣಮಹೋತ್ಸವವನ್ನು ಆಚರಿಸಿತು.

ಉಲ್ಲೇಖಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: