ಗುಜರಾತ್ ಕದನ
1848-49ರಲ್ಲಿ ನಡೆದ ಎರಡನೆಯ ಸಿಖ್-ಇಂಗ್ಲಿಷ್ ಯುದ್ಧದ ಪ್ರಮುಖ ಮತ್ತು ಕೊನೆಯ ಕದನ.
ಹಿನ್ನೆಲೆ
ಬದಲಾಯಿಸಿಸಿಕ್ಖರು ಸಂಘಟಿತರಾಗಿ ಇಂಗ್ಲಿಷರನ್ನು ಪಂಜಾಬಿನಿಂದ ಹೊಡೆದೋಡಿಸುವ ಪಣತೊಟ್ಟಿದ್ದರು. ಹ್ಯೂಗಾಫನ ನೇತೃತ್ವದಲ್ಲಿ ಬ್ರಿಟಿಷರ ಸೈನ್ಯ ಚೀನಾಬ್ ನದಿಯನ್ನು ದಾಟಿ ಸಿಕ್ಖರ ಮೇಲೆ ಧಾಳಿ ಮಾಡಿತು. ಸಿಕ್ಖರು ಚಿಲಿಯನ್ವಾಲ ಬಳಿ ಸಂಘಟಿತರಾಗಿ ಭೀಕರವಾಗಿ ಹೋರಾಡಿದರು. ಬ್ರಿಟಿಷರು ಅಂತಿಮವಾಗಿ ಜಯಗಳಿಸಿದರೂ ಅಪಾರ ಸಾವು ನೋವು ನಷ್ಟ ಅನುಭವಿಸಿದರು.
ಈ ನಷ್ಟದ ಸುದ್ದಿ ಈಸ್ಟ್ ಇಂಡಿಯ ಕಂಪನಿಯ ನಿರ್ದೇಶಕರಿಗೆ ಮುಟ್ಟಿದಾಗ ಅವರು ಇದಕ್ಕೆಲ್ಲ ಹ್ಯೂ ಗಾಫನೇ ಜವಾಬ್ದಾರನೆಂದು ನಿರ್ಧರಿಸಿ, ಅವನ ಬದಲು ಚಾರ್ಲ್ಸ್ ನೇಪಿಯರನನ್ನು ಸೇನಾಪತಿಯಾಗಿ ನೇಮಿಸಿದರು. ಆದರೆ ಆತ ಭಾರತಕ್ಕೆ ಬರುವ ಮೊದಲೇ ಗಾಫ್ ಸಿಕ್ಖರನ್ನೂ ಅವರ ಮಿತ್ರರಾಗಿದ್ದ ಆಫ್ಘನರನ್ನೂ ಚೀನಾಬ್ ನದಿಯ ಬಳಿಯ ಗುಜರಾತ್ ಎಂಬ ಸ್ಥಳದಲ್ಲಿ ಸಂಪೂರ್ಣವಾಗಿ ಸೋಲಿಸಿದ. ಚಿಲಿಯನ್ವಾಲ ಕದನದ ಅನಂತರ ಸಿಕ್ಖರು ಆಘ್ಘನ್ ಸೇನೆಯೊಡನೆ ಗುಜರಾತಿನ ಬಳಿ ತಂಗಿದ್ದರು.
ಕದನ
ಬದಲಾಯಿಸಿ1849ರ ಫೆಬ್ರವರಿ 21ರಂದು ನಡೆದ ಗುಜರಾತ್ ಕದನದಲ್ಲಿ ಬ್ರಿಟಿಷರು ಅತ್ಯಲ್ಪಕಾಲದಲ್ಲಿ ಸಿಕ್ಖರನ್ನೂ ಆಫ್ಘನರನ್ನೂ ಸೋಲಿಸಿದರು. ಈ ಕದನದಲ್ಲಿ ಪಿರಂಗಿಗಳ ಪಾತ್ರವೇ ಮುಖ್ಯವಾಗಿದ್ದುದರಿಂದ ಇದನ್ನು ಫಿರಂಗಿ ಕದನವೆಂದು ಇತಿಹಾಸಕಾರರು ಕರೆದಿದ್ದಾರೆ.
ಗುಜರಾತ್ ಯುದ್ಧದಲ್ಲಿ ಸುಮಾರು 50,000 ಸಿಕ್ಖರು ಭಾಗವಹಿಸಿದ್ದರು. ಆದರೆ ಬ್ರಿಟಿಷ್ ಸೇನಾಪತಿ ಗಾಫ್ ಮೊದಲು ಗುಜರಾತಿನ ಪೂರ್ಣ ಪರಿಚಯ ಮಾಡಿಕೊಂಡು ಸಿಕ್ಖರ ಸೇನಾ ಶಿಬಿರಗಳನ್ನು ಗುರ್ತಿಸಿಕೊಂಡು, ತನ್ನ ಕಡೆಯ ಫಿರಂಗಿ ಪಡೆಯನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿ, ಸಿಕ್ಖರ ಬತೇರಿಗಳನ್ನು ಸ್ತಬ್ಧಗೊಳಿಸಿ ಅನಂತರ ಸಿಕ್ಖರನ್ನು ಸೆದೆಬಡಿಯಲು ಕಾಲಾಳು ಪಡೆಯನ್ನು ಉಪಯೋಗಿಸಿದ. ಗಾಫನ ಚಾಕಚಕ್ಯವನ್ನು ನೋಡಿ ಧೃತಿಗೆಟ್ಟ ಸಿಕ್ಖರನ್ನು ಝೀಲಂ ನದಿ ಯವರೆಗೂ ಅಟ್ಟಿಸಿಕೊಂಡು ಹೋಗಿ ಅವರನ್ನು ಸದೆಬಡಿದ. ಸಿಕ್ಖರು ಅತ್ಯುತ್ತಮ ಧೈರ್ಯಸಾಹಸಗಳಿಂದ ಹೋರಾಡಿದರು. ಅವರ ಕಡೆ ದಕ್ಷ ನಾಯಕತ್ವ ಇಲ್ಲದಿದ್ದುದು ಸೋಲಿಗೆ ಕಾರಣವಾಯಿತು. ಯಾವ ಸೇನೆಯೂ ಅಷ್ಟರಮಟ್ಟಿಗೆ ಹೋರಾಡಲಾರದು. ನಾಯಕತ್ವದ ಅಷ್ಟೊಂದು ಕೊರತೆಯನ್ನೂ ಹೊಂದಿರಲಾರದು ಎಂದು ಮಾಲಿಸನ್ ಅಭಿಪ್ರಾಯಪಟ್ಟಿದ್ದಾನೆ. ಅವರು ಮತ್ತೆ ಬ್ರಿಟಿಷರನ್ನು ಎದುರಿಸುವ ಚೈತನ್ಯವನ್ನು ಸಂಪೂರ್ಣವಾಗಿ ಕಳೆದುಕೊಂಡರು. ಬ್ರಿಟಿಷರ ಕಡೆ ಕೇವಲ 69 ಸೈನಿಕರು ಸತ್ತು, 670 ಸೈನಿಕರು ಗಾಯಗೊಂಡರು.
ಗುಜರಾತ್ ಕದನದ ಅನಂತರ, 1849ರ ಮಾರ್ಚ್ 12ರಂದು, ಷೇರ್ಸಿಂಗ್, ಫತ್ತರ್ಸಿಂಗ್ ಮೊದಲಾದ ಸಿಖ್ ನಾಯಕರು ಮತ್ತು ಯೋಧರು ಬ್ರಿಟಿಷರಿಗೆ ಶರಣಾಗತರಾದರು. ದೋಸ್ತ್ ಮಹಮ್ಮದನ ನಾಯಕತ್ವದಲ್ಲಿದ್ದ ಆಫ್ಘನರನ್ನು ಬ್ರಿಟಿಷರು ಖೈಬರ್ ಕಣಿವೆಯ ಕಡೆಗೆ ಓಡಿಸಿದರು. ಪಂಜಾಬು ಬ್ರಿಟಿಷರ ಆಡಳಿತಕ್ಕೊಳಪಟ್ಟಿದೆಯೆಂದು 1849ರ ಮಾರ್ಚ್ 30ರಂದು ಘೋಷಿಸಲಾಯಿತು.
ಮಹತ್ವ
ಬದಲಾಯಿಸಿಬ್ರಿಟಿಷರು ಭಾರತದಲ್ಲಿ ನಡೆಸಿದ ಯುದ್ಧಕಾರ್ಯಾಚರಣೆಗಳ ಚರಿತ್ರೆಯಲ್ಲಿ ಗುಜರಾತ್ ಕದನ ಸ್ಮರಣೀಯವೆಂದೂ ಆ ಸಂದರ್ಭದ ಮಹತ್ತ್ವ ಮತ್ತು ಆ ಸಮರದ ಅಂತ್ಯ ಈ ಎರಡು ದೃಷ್ಟಿಗಳಿಂದಲೂ ಇದನ್ನು ನೆನಪಿನಲ್ಲಿಡಬೇಕೆಂದು ಗವರ್ನರ್-ಜನರಲ್ ಡಾಲ್ ಹೌಸಿ ಹೇಳಿದ.