ಸಾಮಾನ್ಯ ಆಸಕ್ತಿ, ಉದ್ದೇಶಗಳನ್ನು ಹೊಂದಿದ್ದು ಅವಕ್ಕಾಗಿ ಒಟ್ಟಾಗಿ ಕಾರ್ಯನಿರತವಾಗಬಲ್ಲ ಜನಸಮೂಹಕ್ಕೆ ಸಮಾಜಶಾಸ್ತ್ರದಲ್ಲಿ ಈ ಹೆಸರಿದೆ (ಗ್ರೂಪ್ಸ್‌). ನಾವು ಹೆಚ್ಚು ಕಡಿಮೆ ನಮ್ಮ ಇಡೀ ಆಯುಷ್ಯವನ್ನು ಗುಂಪುಗಳಲ್ಲಿಯೇ ಕಳೆಯುತ್ತೇವೆ. ಕುಟುಂಬದಲ್ಲಿ ಹುಟ್ಟಿ, ಬಳಗ, ನೆರೆಹೊರೆ, ಆಟದ ಗುಂಪು, ವಿದ್ಯಾಲಯ, ಮಠ, ವೃತ್ತಿ ಗುಂಪುಗಳು, ರಾಜಕೀಯ ಪಕ್ಷ ಮುಂತಾದ ಗುಂಪುಗಳನ್ನು ಸೇರುತ್ತ, ಕಟ್ಟುತ್ತ ಜೀವಿಸುತ್ತೇವೆ. ಈ ಗುಂಪುಗಳು ಅಸಂಖ್ಯ. ರಚನೆ ಮತ್ತು ಕ್ರಿಯೆಗಳಲ್ಲೂ ಇವು ಭಿನ್ನವಾಗಿವೆ. ವ್ಯಕ್ತಿಜೀವನದ ಮೇಲೆ ಇವು ಬೀರುವ ಪ್ರಭಾವದಲ್ಲಿಯೂ ಅಂತರವಿದೆ. ಈ ಬಗೆಗಿನ ಶಾಸ್ತ್ರೀಯ ಅಭ್ಯಾಸವನ್ನು ಸಮಾಜವಿಜ್ಞಾನಿಗಳು ಮಾಡುತ್ತಿದ್ದಾರೆ. ಇಲ್ಲಿ ಸಾಮಾಜಿಕವಾಗಿ ಅವುಗಳ ರಚನೆ ಮತ್ತು ಮನಶ್ಯಾಸ್ತ್ರರೀತ್ಯ ಅವುಗಳ ವರ್ತನೆಗಳ ಬಗ್ಗೆ ವಿವೇಚಿಸಿದೆ.

ಸಾಮಾಜಿಕ ಪ್ರಕಾರಗಳು, ಸಮಷ್ಟಿಗಳು ಮತ್ತು ಸಾಮಾಜಿಕ ಗುಂಪುಗಳು

ಬದಲಾಯಿಸಿ

ಗುಂಪು ಅಥವಾ ಸಮೂಹದ ವ್ಯಾಖ್ಯೆಯ ಬಗ್ಗೆ ಒಮ್ಮತವಿಲ್ಲ. ಒಬ್ಬರಿಗಿಂತ ಹೆಚ್ಚು ಜನರನ್ನು ಇದು ಸೂಚಿಸುತ್ತದೆ - ಎಂಬುದು ಮಾತ್ರ ನಿರ್ವಿವಾದವಾದ ಅಂಶ. ಸಮಾಜವಿಜ್ಞಾನಿ ಸ್ಮಾಲ್ ಹೇಳುವಂತೆ ಗುಂಪು ಎಂಬುದು ಸಮಾಜವಿಜ್ಞಾನಿಗಳು ಬಳಸುವ ಅತಿಸಾಮಾನ್ಯವಾದ ಮತ್ತು ವರ್ಣರಹಿತವಾದ ಶಬ್ದ. ಅನೇಕ ರೀತಿಯ ಮಾನವ ಸಮುಚ್ಚಯಗಳಿಗೆ ಇದನ್ನು ಅನ್ವಯಿಸಲಾಗುತ್ತದೆ. ಹಲವು ಸಂದರ್ಭಗಳಲ್ಲಿ ನಾವು ಕೆಲವು ಸಮಾನ ಗುಣವಿಶೇಷಗಳಿರುವ ಜನರನ್ನು ಗುಂಪುಗಳೆಂದು ಕರೆಯುತ್ತೇವೆ. ಉದಾಹರಣೆಗೆ ಮುದುಕರು, ಕಪ್ಪುವರ್ಣದವರು, ಗ್ರಾಮವಾಸಿಗಳು, ಪದವೀಧರರು, ಆದಾಯತೆರಿಗೆ ಕೊಡುವವರು, ಕ್ರಿಕೆಟ್ ಅಭಿಮಾನಿಗಳು, ವಿವಾಹಿತರು, ಚಪ್ಪಟೆ ಮೂಗಿನವರು ಇತ್ಯಾದಿ. ಇವರೆಲ್ಲ ಬೇರೆ ಬೇರೆ ಪ್ರಕಾರಗಳಿಗೆ ಸೇರಿದವರು. ಎಲ್ಲ ಮುದುಕರೂ ಅಥವಾ ಎಲ್ಲ ವಿವಾಹಿತರೂ ಅಥವಾ ಎಲ್ಲ ಚಪ್ಪಟೆ ಮೂಗಿನವರು ಒಂದೇ ಗುಂಪಿಗೆ ಸೇರಿದ ಸದಸ್ಯರಲ್ಲ. ಸಾಮಾಜಿಕ ಗುಂಪುಗಳಿಗೆ ಅವಶ್ಯವಾದ ಸಾಮಾನ್ಯ ಉದ್ದೇಶ, ಪರಸ್ಪರ ಸಂಬಂಧ, ಮಾನಸಿಕ ಸಂಪರ್ಕಗಳು ಇಲ್ಲದಿರುವುದರಿಂದ ಅವನ್ನು ಗುಂಪುಗಳು ಎನ್ನಲಾಗದು. ಅವು ಕೇವಲ ಸಾಮಾಜಿಕ ಪ್ರಕಾರಗಳು. ಅವು ಎಂದಾದರೊಮ್ಮೆ ಸಾಮಾನ್ಯ ಆಸಕ್ತಿಯನ್ನು ಹೊಂದಿ ಸಂಘಟಿತವಾಗಿ ಸಾಮಾಜಿಕ ಗುಂಪುಗಳಾಗಬಹುದು.

ವ್ಯಕ್ತಿಗಳು ಅನೇಕ ಸಂದರ್ಭಗಳಲ್ಲಿ ಭೌಗೋಳಿಕವಾಗಿ ಒಬ್ಬರಿಗೊಬ್ಬರು ಹತ್ತಿರ ಇರುವುದುಂಟು. ರೈಲು ನಿಲ್ದಾಣದಲ್ಲಿ ನೂರಾರು ಜನ ಒಂದೆಡೆ ಸೇರುತ್ತಾರೆ. ಅಷ್ಟರಿಂದಲೇ ಅದೊಂದು ಸಾಮಾಜಿಕ ಗುಂಪು ಆಗಲಾರದು. ಆದರೆ ಅದೊಂದು ಗುಂಪಾಗಿ ಪರಿವರ್ತನೆಗೊಳ್ಳಲು ಹೆಚ್ಚು ಹೊತ್ತು ಬೇಕಿಲ್ಲ. ಒಬ್ಬಿಬ್ಬರು ಜಗಳವಾಡಿದರೆನ್ನಿ. ಉಳಿದವರು ಹೇಳುತ್ತ, ಕೇಳುತ್ತ, ಕೈಕಾಲು ಬಾಯಿಗಳನ್ನು ಅಲುಗಾಡಿಸುತ್ತ ಕೂಡಿಕೊಳ್ಳುತ್ತಲೇ ಅದೊಂದು ಅಲ್ಪಾಯುವಾದ ಸಾಮಾಜಿಕ ಗುಂಪಾಗುವುದು. ಹಾಗೆಯೇ ಬೀದಿಗಳಲ್ಲಿ, ಮೂಲೆಗಳಲ್ಲಿ ಸಣ್ಣದೊಡ್ಡ ಸಮುದಾಯಗಳಲ್ಲಿ, ಪ್ರದೇಶಗಳಲ್ಲಿ, ರಾಷ್ಟ್ರಗಳಲ್ಲಿ ಇರುವ ಜನರೆಲ್ಲ ಗುಂಪುಗಳಲ್ಲ, ಕೇವಲ ಸಮಷ್ಟಿಗಳು. ಈ ಸಮಷ್ಟಿಗಳಲ್ಲಿ ಅಂತರ್ಗತವಾಗಿ ಕುಟುಂಬಗಳು, ಒಡನಾಡಿ ಗುಂಪುಗಳು, ಕಾರ್ಮಿಕ ಸಂಘಗಳು, ಪ್ರೇಕ್ಷಕ ವೃಂದದವರು, ಸೈನ್ಯ, ರಾಜಕೀಯ ಪಕ್ಷಗಳೇ ಮೊದಲಾದ ಅನೇಕ ಸಾಮಾಜಿಕ ಗುಂಪುಗಳಿರುತ್ತವೆ.

ಹಾಗಾದರೆ ಸಾಮಾಜಿಕ ಗುಂಪುಗಳೆಂಬ ಸಂಕಲನಗಳು ಯಾವುವು? ಪರಸ್ಪರ ಅಂತರಕ್ರಿಯೆಯಲ್ಲಿರುವ ಇಬ್ಬರು ಅಥವಾ ಹೆಚ್ಚು ಜನರ ಸಂಕಲನವೇ ಗುಂಪು ಎನ್ನಬಹುದು. ಸಮಾಜಶಾಸ್ತ್ರಜ್ಞರಾದ ರಾಬರ್ಟ್ ಮೆಕಾಯ್ವರ್ ಹೇಳುವಂತೆ ಪರಸ್ಪರ ಸಾಮಾಜಿಕ ಸಂಬಂಧಗಳಿಂದ ಬಿಗಿಯಲ್ಪಟ್ಟ ವ್ಯಕ್ತಿಗಳ ಸಂಕಲನಕ್ಕೆ ಸಾಮಾಜಿಕ ಗುಂಪು ಎಂಬ ಹೆಸರು ಸಲ್ಲುತ್ತದೆ. ಯುಬಾಂಕನ ಪ್ರಕಾರ ಮಾನಸಿಕ ಸಂಪರ್ಕದ ಮೂಲಕ ಪರಸ್ಪರ ಪ್ರಭಾವ ಬೀರುವ ಇಬ್ಬರು ಅಥವಾ ಹೆಚ್ಚು ಜನರಿದ್ದರೆ ಅದು ಗುಂಪು. ಬೋಗಾರ್ಡಸ್ ಕೊಟ್ಟ ವ್ಯಾಖ್ಯೆ ಹೀಗಿದೆ: ಸಾಮಾನ್ಯ ಉದ್ದೇಶಗಳನ್ನುಳ್ಳ, ಪರಸ್ಪರ ಪ್ರಚೋದಿಸುವ, ಸಮನಿಷ್ಠೆಯನ್ನು ಹೊಂದಿದ, ಒಂದೇ ತೆರನಾದ ಚಟುವಟಿಕೆಗಳಲ್ಲಿ ಪಾಲುಗೊಳ್ಳುತ್ತಿರುವ ಇಬ್ಬರು ಅಥವಾ ಹೆಚ್ಚು ಜನರನ್ನು ಗುಂಪೆನ್ನಬಹುದು; ಒಟ್ಟಿನಲ್ಲಿ, ಸಾಮಾಜಿಕ ಗುಂಪುಗಳಾಗಲು ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳು ಪರಸ್ಪರ ಸಾಮಾಜಿಕ ಸಂಬಂಧಗಳನ್ನು ಹೊಂದಿರಬೇಕು. ಭೌತಿಕ ಸಾಮೀಪ್ಯ ಬೇಕಾಗಿಲ್ಲ. ಆದರೆ ಮಾನಸಿಕ ಸಂಪರ್ಕವಿರಬೇಕು. ಕಿಂಚಿತ್ತಾದರೂ ಸದಸ್ಯತ್ವ ಹಾಗೂ ಪ್ರಭೇದದ ಅರಿವು ಹೊಂದಿರಬೇಕು; ಸಮಾನ ಉದ್ದೇಶ ಮತ್ತು ಒಮ್ಮನಸ್ಸು ಇರಬೇಕು. ಈ ಎಲ್ಲ ಲಕ್ಷಣಗಳು ಎಲ್ಲ ಗುಂಪುಗಳಲ್ಲಿ ಒಂದೇ ಸಮನಾಗಿ ಇರುವುದಿಲ್ಲ. ಹಾಗೆಂದೇ ಗುಂಪುಗಳ ಸ್ವರೂಪ, ರಚನೆ ಮತ್ತು ಕಾರ್ಯಗಳಲ್ಲಿ ವೈವಿಧ್ಯ ಕಂಡುಬರುತ್ತದೆ.

ಗುಂಪಿನ ಹುಟ್ಟು

ಬದಲಾಯಿಸಿ

ಗುಂಪುಗಳು ಹುಟ್ಟುವುದೇಕೆ ಎಂಬ ಪ್ರಶ್ನೆಯನ್ನು ಚಿಂತಕರು ಇಂದಿಗೂ ಸಮರ್ಪಕವಾಗಿ ಉತ್ತರಿಸಿಲ್ಲ. ಹಿಂದಿನ ಸಮಾಜಶಾಸ್ತ್ರಜ್ಞರು ಗುಂಪುಕಟ್ಟುವುದಕ್ಕೆ ನಮ್ಮಲ್ಲಿರುವ ಯೂಥ ಪ್ರವೃತ್ತಿಯೇ ಮೂಲವೆಂದು ನಂಬಿದ್ದರು. ಆ ಮೂಲಪ್ರವೃತ್ತಿಯನ್ನು ಕಂಡವರಿಲ್ಲ. ತಿಳಿಯದ ಕಾರಣವೊಂದಕ್ಕೆ ನಾಮಕರಣ ಮಾಡಿದಂತಾಯಿತು ಅಷ್ಟೆ. ಕೆಲವರ ಪ್ರಕಾರ ಗುಂಪಿನ ಸೃಷ್ಟಿ ಆಕಸ್ಮಿಕ. ಒಮ್ಮೆ ಅದು ಹುಟ್ಟಿತೋ ಅದರಿಂದ ನಮ್ಮ ಅಸ್ಥಿತ್ವಕ್ಕೆ ಲಾಭವಿದೆಯೆಂದು ಗೋಚರಿಸಿ ನಾವು ಸಮೂಹ ಜೀವನವನ್ನು ಮುಂದುವರೆಸಿಕೊಂಡು ಬಂದೆವು. ಇನ್ನು ಕೆಲವರ ಪ್ರಕಾರ ಸಮೂಹ ಜೀವನ ಮಾನವನ ಅನುಭವದಿಂದ ಬಂದುದು. ಅದು ಕಲಿತ ಗುಣ. ಸೊರೊಕಿನ್ ಮತ್ತಿತರ ಲೇಖಕರು ಸಮೂಹರಚನೆಗೆ ಕಾರಣವಾದ ಕೆಲವು ಅಂಶಗಳನ್ನು ಗುರುತಿಸಿದ್ದಾರೆ. ಅವುಗಳಲ್ಲಿ ರಕ್ತಸಂಬಂಧ, ವಿವಾಹ, ಸಮಾನ ಧರ್ಮ ಮತ್ತು ಸಂಸ್ಕಾರಗಳು, ಭಾಷೆ, ಕಟ್ಟಳೆಗಳು, ಭೌಗೋಳಿಕ ಕಾರಣಗಳು, ಪ್ರಭೇದದ ಅರಿವು, ಆರ್ಥಿಕ ಅಗತ್ಯಗಳು, ಸಾಮಾನ್ಯ ವೈರಿ ಮತ್ತು ಸಂಕಟಗಳಿಂದ ಸಂರಕ್ಷಣೆ, ಸಮಾನ ಅನುಭವ - ಇವು ಕೆಲವು. ಗುಂಪುಗಳ ಹುಟ್ಟಿನ ಬಗ್ಗೆ ಇನ್ನೂ ಒಂದು ವಿವಾದವಿದೆ. ಮಾನವರ ಮೊದಲ ಗುಂಪು ಯಾವುದು? ಬಣವೇ? ತಂಡವೇ? ಕುಟುಂಬವೇ? ಸಮಾಜವಿಜ್ಞಾನಿಗಳು ಈ ಪ್ರಶ್ನೆಗೆ ಇನ್ನೂ ಉತ್ತರಿಸಿಲ್ಲ. ಅನೇಕರು ಕುಟುಂಬವೇ ಆದಿಮ ಗುಂಪೆಂದು ನಂಬುತ್ತಾರೆ.

ಮಹತ್ತ್ವ

ಬದಲಾಯಿಸಿ

ನಮ್ಮ ದೈಹಿಕ ಮತ್ತು ಮಾನಸಿಕ ಆವಶ್ಯಕತೆಗಳನ್ನು ಪೂರೈಸಿಕೊಳ್ಳಲು ಗುಂಪುಗಳು ಬೇಕು. ಗುಂಪುಗೂಡುವಿಕೆ ಮೂಲಪ್ರವೃತ್ತಿಯಿಂದ ಬಂದಿರಲಿ ಅಥವಾ ಸಮಾಜಜನ್ಯವಿರಲಿ, ಅದು ಅನಿವಾರ್ಯ. ನಮ್ಮ ವಿಘ್ನಗಳಿಗೆ ಸಂಕಟಗಳಿಗೆ ಗುಂಪಿನಿಂದಲೇ ಪರಿಹಾರ ಸಾಧ್ಯ. ಏಕಾಕಿಯಾಗಿ ಬಾಳುವುದು ಒಂದು ಶಿಕ್ಷೆ ಎಂದು ಎಲ್ಲ ಸಮಾಜಗಳೂ ಭಾವಿಸುತ್ತವೆ. ನಮ್ಮ ಮೌಲ್ಯಗಳೂ ಒಳಿತು ಕೆಡಕುಗಳೂ ವ್ಯಕ್ತಿತ್ವದ ಹಾಸುಹೊಕ್ಕಗಳೂ ಗುಂಪಿನಿಂದಲೇ ಬರುತ್ತವೆ. ವ್ಯಕ್ತಿಗಳ ನಿಯಂತ್ರಣವೂ ಗುಂಪಿನ ಕೆಲಸ. ವಿವಿಧ ರೀತಿಯ ಗುಂಪುಗಳು ವ್ಯಕ್ತಿ ಮತ್ತು ವಿಸ್ತೃತ ಸಮಾಜದ ನಡುವೆ ಇರುವ ಕೊಂಡಿಗಳಂತಿವೆ. ಭಾವನಾತ್ಮಕ ಸ್ಥಿರತೆಯೂ ಗುಂಪುಗಳ ಕಾಣಿಕೆ. ಕುಟುಂಬದಂಥ ಆತ್ಮೀಯ ಗುಂಪುಗಳಿಲ್ಲದೆ ಮಕ್ಕಳು ದಾರಿ ತಪ್ಪುವುದನ್ನು ನೋಡಿದಾಗ ಈ ಮಾತಿನ ಅರ್ಥವಾಗುತ್ತದೆ. ಗುಂಪುಗಳಿಂದಲೇ ನಮ್ಮ ಅನೇಕ ಮಾನಸಿಕ ತೊಡಕುಗಳಿಗೂ ರೋಗಗಳಿಗೂ ಚಿಕಿತ್ಸೆ ಸಿಕ್ಕುವುದೆಂದು ನಾವೀಗ ತಿಳಿದಿದ್ದೇವೆ. ಅಪರಾಧ ನಿವಾರಣಾ ಕೇಂದ್ರಗಳಲ್ಲಿ ತಪ್ಪಿತಸ್ಥರನ್ನು ಆತ್ಮೀಯ ವೃಂದಗಳಲ್ಲಿ ತೊಡಗಿಸುವುದನ್ನು ನಾವು ಕಾಣುತ್ತೇವೆ. ದುಶ್ಚಟಗಳನ್ನು ಬಿಡಿಸುವಾಗ, ಮಾನಸಿಕ ರೋಗಗಳನ್ನು ನಿವಾರಿಸುವಾಗ ವೃಂದಗತ ಉಪಚಾರ ನೀಡುತ್ತಾರೆ. ಹೀಗೆ ಮಾನವನ ಮಾನವೀಕರಣಕ್ಕೆ ಗುಂಪುಗಳು ಅತ್ಯವಶ್ಯವಾಗಿವೆ.

ಗುಂಪುಗಳ ವರ್ಗೀಕರಣ

ಬದಲಾಯಿಸಿ

ಗುಂಪುಗಳನ್ನು ವಿವಿಧ ರೀತಿಗಳಲ್ಲಿ ವರ್ಗೀಕರಿಸುವುದು ಸಾಧ್ಯ. ಸದ್ಯಕ್ಕಂತೂ ಜೀವಶಾಸ್ತ್ರದಲ್ಲಿ ದೊರೆಯುವಂಥ ಸರ್ವಸಾಮಾನ್ಯವಾದ ಯಾವ ಒಂದು ವರ್ಗೀಕರಣವೂ ಲಭ್ಯವಿಲ್ಲ. ಗುಂಪುಗಳ ಗಾತ್ರವನ್ನು ಆಧರಿಸಿ ಜಾರ್ಜ್ ಸಿಮೆಲ್ ಎಂಬಾತ ದ್ವಯಗಳು, ತ್ರಯಗಳು, ವಿಸ್ತೃತ ಗುಂಪುಗಳು - ಎಂದು ವರ್ಗೀಕರಿಸಿದರೆ, ಜಾರ್ಜ ಮೆಕಾಯ್ವರ್ ಅವುಗಳ ಸಂಘಟನೆಯನ್ನು ಲಕ್ಷಿಸಿ ಸಂಘಟಿತ ಮತ್ತು ಅಸಂಘಟಿತ ಗುಂಪುಗಳೆಂದು ವಿಭಜಿಸುತ್ತಾನೆ. ಚಾರ್ಲ್ಸ್ ಹಾರ್ಟನ್ ಕೂಲೆ ವ್ಯಕ್ತಿಗಳ ನಡುವಿನ ಸಂಬಂಧಗಳನ್ನು ಆಧರಿಸಿ ಕುಟುಂಬ ಮುಂತಾದ ಕೆಲವನ್ನು ಪ್ರಾಥಮಿಕ ಗುಂಪುಗಳೆಂದೂ ಪಕ್ಷ, ಕಾರ್ಮಿಕ ಸಂಘಗಳಂಥ ಗುಂಪುಗಳನ್ನು ಮಾಧ್ಯಮಿಕ ಗುಂಪುಗಳೆಂದೂ ಕರೆದಿದ್ದಾನೆ. ನಾವು, ನಮ್ಮವರು ಎಂಬ ಆತ್ಮೀಯ ಭಾವನೆಯಿಂದ ಕೂಡಿದ ಗುಂಪುಗಳನ್ನು ವಿಲಿಯಮ್ ಗ್ರಹಾಮ್ ಸಮ್ನರ್ ಒಳಗುಂಪುಗಳೆಂದು ಕರೆದು, ಪರಕೀಯವೆಂದು ನಾವು ನೋಡುವ ಗುಂಪುಗಳನ್ನು ಹೊರಗುಂಪುಗಳೆಂದು ಕರೆದಿದ್ದಾನೆ. ಜನಸಂದಣಿ, ಪ್ರೇಕ್ಷಕ ವೃಂದಗಳಂಥ ಗುಂಪುಗಳನ್ನು ನೆರೆದ ಗುಂಪುಗಳೆಂದು ಕರೆಯುವುದಿದೆ. ಸಾರ್ವಜನಿಕರು ಚದರಿದ ಗುಂಪು, ಕಾಲಾವಧಿಯ ದೃಷ್ಟಿಯಿಂದ ಕೆಲವು ಶಾಶ್ವತ ಗುಂಪುಗಳಾದರೆ ಮತ್ತೆ ಕೆಲವು ಅಲ್ಪಕಾಲಿಕ ಗುಂಪುಗಳು. ಕೆಲವು ಗುಂಪುಗಳು ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ವರ್ಗೀಕರಣದಲ್ಲಿ ಸಿಕ್ಕಿಯಾವು. ಉದಾಹರಣೆಗೆ ಜನಸಂದಣಿ ಅಸಂಘಟಿತ ಗುಂಪು ಹೇಗೋ ಹಾಗೆಯೇ ಅಶಾಶ್ವತ ಗುಂಪೂ ಹೌದು, ನೆರೆದ ಗುಂಪೂ ಹೌದು, ಮುಖ್ಯವಾದ ಕೆಲವು ಪ್ರಭೇದಗಳನ್ನು ಮಾತ್ರ ಇಲ್ಲಿ ನೋಡಬಹುದು.

ದ್ವಯಗಳು

ಬದಲಾಯಿಸಿ

ಇಬ್ಬರೇ ಸದಸ್ಯರಿರುವ ದ್ವಯಗಳು (ಜೋಡಿಗಳು; ಜೊತೆ ಗುಂಪುಗಳು) ನಮಗೆ ಸುಪರಿಚಿತವಾದ ಗುಂಪುಗಳು. ಜರ್ಮನ್ ಸಮಾಜವಿಜ್ಞಾನಿ ಸಿಮೆಲ್ ಇಂಥ ಚಿಕ್ಕ ಗುಂಪುಗಳ ಅಭ್ಯಾಸಕ್ಕೆ ಶ್ರೀಕಾರ ಹಾಕಿದ. ಪ್ರಸಂಗವಶಾತ್ ಎಲ್ಲೋ ಒಮ್ಮೆ ಸಂಧಿಸುವ, ಸಂಭಾಷಿಸುವ ಇಬ್ಬರು ಮಾತ್ರ ಜೋಡಿಯಲ್ಲ. ಅದೇ ನಿರಂತರವಾಗಿ ಸಂಪರ್ಕ ಹೊಂದಿದ, ಆತ್ಮೀಯ ಸಂಬಂಧವುಳ್ಳ ಇಬ್ಬರು ಮಾತ್ರ ಜೋಡಿಯಾಗುತ್ತಾರೆ. ವಿವಾಹಿತ ದಂಪತಿಗಳು, ಆತ್ಮೀಯ ಗೆಳೆಯರಿಬ್ಬರು, ತಾಯಿ - ಮಗ, ತಂದೆ - ಮಗ, ಪ್ರೇಮಿಗಳು, ವೃತ್ತಿಯಲ್ಲಿ ಅಥವಾ ವ್ಯಾಪಾರದಲ್ಲಿ ಪಾಲುಗಾರರು ಮುಂತಾದ ಜೋಡಿಗುಂಪುಗಳನ್ನು ನಾವು ಕಾಣುತ್ತೇವೆ. ಪರಸ್ಪರ ಪೂರಕವಾದ ಆಸಕ್ತಿಗಳ ಪ್ರೇರಣೆಯಿಂದ, ನಿರಂತರ ಸಾಹಚರ್ಯದ ಬಲದಿಂದ ಜೋಡಿಗುಂಪು ಹುಟ್ಟುತ್ತದೆ; ಮುಂದುವರಿಯುತ್ತದೆ. ಜೋಡಿಯ ಒಬ್ಬರು ಇಲ್ಲವಾದಾಗ ಅದು ನಿಲ್ಲುತ್ತದೆ. ಒಮ್ಮೊಮ್ಮೆ ಮೂರನೆಯ ವ್ಯಕ್ತಿ ಮಧ್ಯ ಪ್ರವೇಶಿಸಿದಾಗಲೂ ಜೋಡಿಗೆ ಚ್ಯುತಿ ಬಂದಂತೆಯೇ ಸರಿ. ಆತ್ಮೀಯವಾದ ಸಂಬಂಧವಿರುವುದರಿಂದ ವ್ಯಕ್ತಿತ್ವದ ಮೇಲೆ ಪರಸ್ಪರ ಪ್ರಭಾವ ಇಲ್ಲಿ ಅತ್ಯಂತ ಹೆಚ್ಚು. ಹಾಗೆಯೇ ಈ ಸಂಬಂಧಗಳು ಕೆಟ್ಟರೆ ಉಂಟಾಗುವ ಕಹಿಯೂ ಹೆಚ್ಚು. ಈ ಜೋಡಿಗಳ ಹುಟ್ಟನ್ನೂ ಮುಕ್ತಾಯವನ್ನೂ ಸಮಾಜ ನಿಯಂತ್ರಿಸುವುದಿದೆ. ಉದಾಹರಣೆಗೆ ವಿವಾಹಿತರ ಜೋಡಿಯಾಗಲಿ ವ್ಯಾಪಾರದ ಪಾಲುಗಾರರಾಗಲೀ ಬೇರೆಯಾಗುವುದನ್ನು ನಾವು ನಿಯಮಬದ್ಧಗೊಳಿಸಿದ್ದೇವೆ. ಮ್ಯಾಲಿನಾಫ್ಸ್ಕಿಯ ಪ್ರಕಾರ ಕೆಲವು ಆದಿವಾಸಿ ಸಮಾಜಗಳಲ್ಲಿ ಕುಲಾವಿನಿಮಯ ಪದ್ಧತಿಯಂತೆ ಯಾರು ಯಾರ ಜೋಡಿಯಾಗಬೇಕೆಂಬುದನ್ನು ವಿಧಿಸುತ್ತಾರೆ.

ತ್ರಯಗಳು

ಬದಲಾಯಿಸಿ

ಜೋಡಿಯಂತೆಯೇ ಸ್ವಾರಸ್ಯಕರವಾದ ಇನ್ನೊಂದು ಪ್ರಕಾರ, ಮೂವರ ಈ ಗುಂಪಿನಲ್ಲಿ ಜೋಡಿಯ ಐಕ್ಯ ಅಸಂಭವ. ಜಾರ್ಜ ಸಿಮೆಲ್ ಹೇಳುವಂತೆ ಇಲ್ಲಿ ಮೂವರಲ್ಲಿ ಒಬ್ಬ ಮಧ್ಯಸ್ಥಿಕೆ ವಹಿಸಬಹುದು. ಸಮತೋಲ ಕಾಯುವ ಕೆಲಸ ಮಾಡಬಹುದು. ಅಥವಾ ಉಳಿದಿಬ್ಬರನ್ನು ಸದಾ ದೂರ ಇಡುವ ಪ್ರಯತ್ನ ಮಾಡಬಹುದು. ಅಲ್ಲದೆ, ಮೂವರಲ್ಲಿ ಒಬ್ಬ ಹೊರಗುಳಿದರೂ ಇಬ್ಬರ ಜೋಡಿ ಗುಂಪು ಉಳಿಯಲು ಸಾಧ್ಯವಿರುವುದರಿಂದ ಮುಕ್ಕೂಟದ ಮೂವರೂ ಐಕಮತ್ಯದಿಂದಿರುವುದು ಅತ್ಯಾವಶ್ಯಕವೆಂದೇನೂ ಅಲ್ಲ. ಹೀಗಾಗಿ ತ್ರಯಗಳು ಹೆಚ್ಚಾಗಿ ಒಬ್ಬನ ವಿರುದ್ಧವಿರುವ ಇಬ್ಬರ ತಾತ್ಪೂರ್ತಿಕ ಒಕ್ಕೂಟಗಳು. ಜೋಡಿಗಳಲ್ಲಿ ಮುಕ್ಕೂಟಗಳಿಗಿಂತ ಐಕ್ಯವೂ ಕಾರ್ಯಸಾಧನೆಯೂ ಚೆನ್ನಾಗಿ ಸಾಧ್ಯವೆಂದು ವಿವಿಧ ಪ್ರಯೋಗಗಳಿಂದ ಕಂಡುಬಂದಿದೆ. ಆದರೆ ತ್ರಯಗಳು ಚರ್ಚೆ, ಪರಾಮರ್ಶೆ, ಜಾಗರೂಕತೆಗಳಲ್ಲಿ ಮಿಗಿಲು. ಪ್ರಾಯಶಃ ಇದಕ್ಕಾಗಿಯೇ ಮೂವರು ಸದಸ್ಯರಿರುವ ಸಮಿತಿಗಳಿರುವುದೇ ಹೆಚ್ಚು.

ಪ್ರಾಥಮಿಕ ಗುಂಪುಗಳು

ಬದಲಾಯಿಸಿ

ಗುಂಪುಗಳ ವರ್ಗೀಕರಣದಲ್ಲಿ ಅತಿ ಹೆಚ್ಚು ಪ್ರಸಿದ್ಧವಾದ ಹಾಗೂ ಅರ್ಥವತ್ತಾದ ವರ್ಗೀಕರಣವೆಂದರೆ ಪ್ರಾಥಮಿಕ ಮತ್ತು ಮಾಧ್ಯಮಿಕ ಗುಂಪುಗಳೆಂಬುದು. ಪ್ರಾಥಮಿಕ ಗುಂಪುಗಳ ಕಲ್ಪನೆಯನ್ನು ಸಮಾಜಶಾಸ್ತ್ರೀಯ ಬರೆಹಗಳಲ್ಲಿ ಮೊದಲಿಗೆ ತಂದವ ಚಾಲ್ರ್ಸ್‌ ಹಾರ್ಟನ್ ಕೂಲೆ. ಆತನೇ ಹೇಳಿದಂತೆ ಅವು ಅನ್ಯೋನ್ಯವಾದ, ಮುಖಾಮುಖಿ ಸಂಬಂಧವುಳ್ಳ ಮತ್ತು ಸಹಕಾರ ಲಕ್ಷಣಗಳಿಂದ ಕೂಡಿದ ಗುಂಪುಗಳು. ಕುಟುಂಬ, ಮಕ್ಕಳ ಆಟದ ಗುಂಪು, ನೆರೆಹೊರೆ, ಹಿರಿಯರ ಸಮುದಾಯಗಳು ಇಂಥ ಗುಂಪುಗಳೆಂದು ಆತ ಹೇಳಿದ್ದಾನೆ. ಒಟ್ಟೊಟ್ಟಿಗೇ ಇರುವ, ಆತ್ಮೀಯ ಸಂಬಂಧಗಳನ್ನು ಹೊಂದಿದ ಸಹಪಾಠಿಗಳು, ಸಹವರ್ತಿಗಳು, ಕಾರ್ಖಾನೆ, ಕಚೇರಿ, ಸೈನ್ಯ, ಶಾಲೆ, ಕ್ಲಬ್ಬುಗಳಲ್ಲಿ ಕಾಣುವ ಆತ್ಮೀಯ ಗೆಳೆಯರ ಚಿಕ್ಕ ಗುಂಪುಗಳೂ ಇಂಥವೇ. ಅವು ಅನೇಕ ದೃಷ್ಟಿಗಳಿಂದ ಪ್ರಾಥಮಿಕವಾದರೂ ವ್ಯಕ್ತಿಯ ಸಾಮಾಜಿಕ ಸ್ವಭಾವ ಹಾಗೂ ಆದರ್ಶಗಳನ್ನೂ ರೂಪಿಸುವಲ್ಲಿ ಅತ್ಯಂತ ಮಹತ್ತ್ವ ಪಡೆದಿವೆ. ಇಲ್ಲಿನ ನಿರಂತರವಾದ ಅನ್ಯೋನ್ಯ ಸಹವಾಸಗಳಿಂದ ವ್ಯಕ್ತಿಗಳು ಒಬ್ಬರಿಗೊಬ್ಬರು ಬೆಸೆಯಲ್ಪಡುತ್ತಾರೆ. ಕೂಲೆ ಹೇಳಿದಂತೆ ನಾವು ಎಂಬ ತಾದಾತ್ಮ್ಯ ಭಾವನೆ ಈ ಗುಂಪುಗಳಲ್ಲಿ ಇರುತ್ತವೆ. ಪ್ರೇಮ, ಅನುಕಂಪ ಮತ್ತು ಸಹಕಾರ ಭಾವನೆ ಇಲ್ಲಿನ ಪ್ರಮುಖ ಲಕ್ಷಣಗಳು. ಕುಟುಂಬ ಮೊದಲುಗೊಂಡು ಈ ಎಲ್ಲ ಗುಂಪುಗಳೂ ಚಿಕ್ಕ ಗಾತ್ರದವು. ಇದರಿಂದಾಗಿ ಸದಸ್ಯರ ನಡುವೆ ನಿರಂತರವಾದ ಮುಖಾಮುಖಿ ಸಂಬಂಧ ಸಾಧ್ಯ. ತೀರ ಆತ್ಮೀಯರಾದ ವೈಯಕ್ತಿಕ ಸಂಬಂಧಗಳು ಬೆಳೆಯುತ್ತವೆ. ಸಮೋದ್ದೇಶಗಳು ಸಾಧ್ಯ. ಸಂಬಂಧಗಳು ಲಾಭಕ್ಕಾಗಿ ಹೆಣೆದುಕೊಂಡವುಗಳಲ್ಲ; ಸ್ವಾಭಾವಿಕವಾಗಿ, ನಿಃಸ್ವಾರ್ಥವಾಗಿ ಬಂದವು. ಯಾವುದೇ ಕಾರ್ಯ ನಿಮಿತ್ತ ಅಷ್ಟರಮಟ್ಟಿಗೆ ಮಾತ್ರ ಸದಸ್ಯರಾಗುವುದು ಇಲ್ಲಿ ಸಾಧ್ಯವಿಲ್ಲ. ನಮ್ಮನ್ನು ನಾವು ಇಡಿಯಾಗಿ ಇಲ್ಲಿ ತೊಡಗಿಸಿಕೊಳ್ಳುತ್ತೇವೆ. ಕುಟುಂಬವೆಂಬ ಅತಿ ಮಹತ್ತ್ವದ ಪ್ರಾಥಮಿಕ ಸಮೂಹದಲ್ಲಿ ಹುಟ್ಟಿ ಬಾಳಿನುದ್ದಕ್ಕೂ ಅನೇಕ ಪ್ರಾಥಮಿಕ ಸಮೂಹಗಳಿಂದ ಪ್ರಭಾವಿತರಾಗುತ್ತೇವೆ. ನಮ್ಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಅವು ಅನುಪಮ. ಹಾಗೆಂದೇ ಕೂಲೆ ಅವನ್ನು ಮಾನವನ ಸ್ವಭಾವದ ಸಂಪೋಷಣ ಸ್ಥಾನಗಳೆಂದು ಕರೆದಿದ್ದಾನೆ.

ಹಿಂದೆ ಪ್ರಾಥಮಿಕ ಗುಂಪುಗಳೆಂದರೆ ಸಮಾಜೀಕರಣದ ದೀಕ್ಷೆ ಕೊಡುವ ಕುಟುಂಬ. ಗೆಳೆಯರ ಆಟದ ಗುಂಪುಗಳಂಥ ಚಿಕ್ಕ ಗುಂಪುಗಳೆಂದು ತಿಳಿಯಲಾಗುತ್ತಿತ್ತು. ಆದರೆ ಮುಂದೆ ಅನೇಕ ಸಮಾಜವಿಜ್ಞಾನಿಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ಕಂಡುಬರುವ ಇಂಥ ಗುಂಪುಗಳನ್ನು ಗುರುತಿಸಿದ್ದಾರೆ. ಉದಾಹರಣೆಗೆ, ಎಲ್ಟನ್ ಮೇಯೊ ಮತ್ತು ಸಂಗಡಿಗರು ಬೃಹತ್ ವಿದ್ಯುತ್ ಕಂಪನಿ ಕೆಲಸಗಾರರಲ್ಲಿ ಈ ಪುಟ್ಟ ಗುಂಪುಗಳನ್ನು ಗುರುತಿಸಿ ಅವು ಹೇಗೆ ಉತ್ಪಾದನೆಯನ್ನು ನಿಯಂತ್ರಿಸುತ್ತವೆಂದು ತಿಳಿಸಿದ್ದಾರೆ. ವಿಲಿಯಂ ಹ್ವೈಟ್ ಅವರು ಬಾಸ್ಟನ್ ನಗರದ ಬೀದಿ ಮೂಲೆಯ ಎಳೆಯರ ಗುಂಪನ್ನು ಅಭ್ಯಾಸ ಮಾಡಿದ್ದಾರೆ. ಹಾಗೆಯೇ ಸ್ಟೌಫರ್ ಮತ್ತಿತರರು ಅಮೆರಿಕೆಯ ಯೋಧರಲ್ಲಿರುವ ಕೆಳಗುಂಪುಗಳ ಮಹತ್ತ್ವವನ್ನು ತಿಳಿಸಿದ್ದಾರೆ. ಹೀಗೆ ಚಿಕ್ಕಗಾತ್ರದ, ನಿರಂತರವಾದ ಆತ್ಮೀಯ ಸಂಬಂಧದ ಈ ಗುಂಪುಗಳು ಸಾರ್ವತ್ರಿಕವಾಗಿವೆ ಮತ್ತು ಅತ್ಯವಶ್ಯಕವಾಗಿದೆ. ನಗರೀಕರಣ, ಯಾಂತ್ರೀಕರಣ, ಔದ್ಯೋಗೀಕರಣದೊಂದಿಗೆ ಬೃಹತ್ ಸಮೂಹಗಳು ಬೆಳೆದು ಪ್ರಾಥಮಿಕ ಸಮೂಹಗಳು ಕಣ್ಮರೆಯಾಗುತ್ತಿವೆಯೆಂದು ಅನೇಕರು ಹೇಳಿದ್ದಾರೆ. ಹಿಂದೊಮ್ಮೆ ಪ್ರಭಾವಶಾಲಿಯಾಗಿದ್ದ ಕುಟುಂಬ, ನೆರೆಹೊರೆ, ಆಟದ ಗುಂಪುಗಳು ತಮ್ಮ ಮಹತ್ತ್ವ ಕಳೆದುಕೊಳ್ಳುತ್ತಿವೆ. ಎಂಬ ಹೆದರಿಕೆಯೂ ಇದೆ. ಆದರೆ ಒಂದೇ ಸಮನಾಗಿ ವೃದ್ಧಿಗೊಳ್ಳುತ್ತಿರುವ ಮಾಧ್ಯಮಿಕ ಗುಂಪುಗಳ ಒಡಲಿನಲ್ಲೇ ಹೊಸಹೊಸ ಪ್ರಾಥಮಿಕ ಗುಂಪುಗಳು ಹುಟ್ಟುತ್ತಿವೆಯೆಂದು ಇತ್ತೀಚಿನ ಲೇಖಕರು ನಂಬಿದ್ದಾರೆ.

ಮಾಧ್ಯಮಿಕ ಗುಂಪುಗಳು

ಬದಲಾಯಿಸಿ

ಮಾಧ್ಯಮಿಕ ಗುಂಪುಗಳನ್ನು ವರ್ಣಿಸುವ ಒಂದು ಸುಲಭ ಉಪಾಯವೆಂದರೆ ಅವನ್ನು ಪ್ರಾಥಮಿಕ ಗುಂಪುಗಳಿಗೆ ವ್ಯತಿರಿಕ್ತವಾದ ಲಕ್ಷಣಗಳುಳ್ಳ ಗುಂಪುಗಳೆಂದು ಹೇಳುವುದು, ವ್ಯಾಪಾರೀ ಸಂಘಟನೆಗಳು, ಬೃಹತ್ ರಾಜಕೀಯ ಪಕ್ಷಗಳು, ಕಾರ್ಮಿಕರ ಸಂಘ, ನಗರಗಳು ಬೇರೆ ಬೇರೆ ವೃತ್ತಿಯವರ ರಾಷ್ಟ್ರಿಯ ಸಂಘಟನೆಗಳು, ಏಣಿಶ್ರೇಣಿಗಳಿಂದ ಹಾಗೂ ಬಿಗುವಾದ ನಿಯಮಗಳಿಂದ ಕೂಡಿದ ಸೈನ್ಯ ಮತ್ತಿತರ ಗುಂಪುಗಳು ಮಾಧ್ಯಮಿಕ ಗುಂಪುಗಳು ಕೂಲೆ ಅವನ್ನು ಹೆಸರಿಸಿಲ್ಲವಾದರೂ ಅನಂತರದ ಲೇಖಕರು ಅವುಗಳ ಲಕ್ಷಣಗಳನ್ನು ತಿಳಿಸಿದ್ದಾರೆ. ದೊಡ್ಡ ಗಾತ್ರ, ಆಕಸ್ಮಿಕ ಮತ್ತು ಔಪಚಾರಿಕ ಸಂಬಂಧಗಳು, ಔಪಚಾರಿಕ ರಚನೆ, ಪರೋಕ್ಷ ಸಂಪರ್ಕ, ಉದ್ದೇಶಸಾಧನೆಗೆಂದೇ ಕಟ್ಟಿದ ಬಿಗುವು, ನಿಯಂತ್ರಣ ಇವು ಕೆಲವು ಲಕ್ಷಣಗಳು. ಸದಸ್ಯರ ನಡುವೆ ನಿರಂತರವಾದ ಮುಖಾಮುಖಿಯಾದ ಸಂಬಂಧಗಳಿಲ್ಲದೆ ಇರುವುದರಿಂದ ಅನ್ಯೋನ್ಯತೆ ಬೆಳೆಯುವುದು ದುಸ್ಸಾಧ್ಯ. ಹತ್ತಾರು ವರ್ಷಗಳ ತನಕ ಸದಸ್ಯರಾಗಿದ್ದರೂ ಒಬ್ಬರನ್ನೊಬ್ಬರು ನೋಡದಿರುವುದಿದೆ. ಇಲ್ಲಿ ಕೊಟ್ಟಷ್ಟೇ ಕೆಲಸ: ಒಪ್ಪಿಸಿದಷ್ಟೇ ಹೊಣೆಗಾರಿಕೆ. ವಿಶೇಷ ಆಸಕ್ತಿಗಳನ್ನು ಪೂರೈಸಲು ಬುದ್ಧಿಪೂರ್ವಕವಾಗಿ ಕಟ್ಟಿದ ವ್ಯವಸ್ಥೆಗಳೇ ಹೆಚ್ಚು ವ್ಯಕ್ತಿಗಳು ಇಲ್ಲಿ ಪೂರ್ಣವಾಗಿ ತೊಡಗಿಕೊಳ್ಳುವುದಿಲ್ಲ: ಅಷ್ಟಿಷ್ಟೇ ಮಾತ್ರ. ವ್ಯಕ್ತಿತ್ವದ ಪೂರ್ಣವಿಕಾಸ ಇಲ್ಲಿ ಅಸಾಧ್ಯ. ಆದರೆ ಕಾರ್ಯಸಾಧನೆಗೆ ಬೇಕಾದ ಕಾರ್ಯಕ್ಷಮತೆ, ಸುವ್ಯವಸ್ಥೆ ಮಾಧ್ಯಮಿಕ ಸಮೂಹಗಳಲ್ಲಿ ಮಾತ್ರ ಇರುತ್ತದೆ. ಆಧುನಿಕ ಜಗತ್ತಿನಲ್ಲಿ ಅವು ಬಹಳ ಮಹತ್ತ್ವ ಪಡೆದಿದೆ.

ಒಳಗುಂಪು

ಬದಲಾಯಿಸಿ

ವಿಲಿಯಮ್ ಗ್ರಹಾಮ್ ಸಮ್ನರ್ ತನ್ನ ಲೋಕಾಚಾರಗಳನ್ನು ಕುರಿತ ಗ್ರಂಥದಲ್ಲಿ ಒಳಗುಂಪುಗಳೂ (ಸ್ವಜನರು) ಮತ್ತು ಹೊರಗುಂಪುಗಳು ಎಂಬ ವಿಭೇದಗಳನ್ನು ಹೇಳಿದ್ದಾನೆ. ಆತ ಹೇಳುವಂತೆ ಸದಸ್ಯರ ದೃಷ್ಟಿಯಲ್ಲಿ ಗುಂಪುಗಳಲ್ಲಿ ಎರಡೇ ಎರಡು ವಿಧಗಳು. ನಾವು ನಮ್ಮವರು. ಸ್ವಜನ ಸ್ವಕೀಯರು, ಇರುವ ಒಳಗುಂಪೊಂದು: ಆ ಜನ, ಪರಜನ, ಪರಕೀಯರು ಇರುವ ಹೊರಗುಂಪೊಂದು. ತಮ್ಮ ಕುಟುಂಬ, ಶಾಲೆ, ನೆರೆಹೊರೆ, ಆಟದ ಗುಂಪು, ಊರು, ಧರ್ಮ ಪಕ್ಷ, ಜಾತಿಗಳು ಅವರಿಗೆ ಒಳಗುಂಪುಗಳು ಕನ್ನಡಿಗರಿಗೆ ಉಳಿದೆಲ್ಲ ಕನ್ನಡಿಗರು ಒಳಗುಂಪುಗಳು. ಮಿಕ್ಕವರು ಹೊರಗಿನವರು. ಹಾಗೆಯೇ ಹಿಂದೂ ಧರ್ಮಾನುಯಾಯಿಗಳಿಗೆ ತಮ್ಮ ಧರ್ಮ ಬಾಂಧವರು ಒಳ ಗುಂಪಿಗೆ ಸೇರಿದವರು; ಉಳಿದ ಧರ್ಮಗಳ ಜನರು ಹೊರಗುಂಪಿನವರು. ಸ್ವಜನರ ಬಗ್ಗೆ ಸದಸ್ಯರಿಗೆ ಅಭಿಮಾನ, ಅಕ್ಕರೆ, ಸಹಾನುಭೂತಿ, ಸಹಕಾರ, ವಿಶ್ವಾಸ, ನಿಷ್ಟೆ, ವಿಧೇಯತೆ ಮತ್ತು ಸಾಮರಸ್ಯದ ಭಾವನೆಗಳಿರುತ್ತದೆ. ತಮ್ಮ ಭಾಷೆಯೇ ಇಂಪಾದ ಭಾಷೆಯೆಂದೂ ತಮ್ಮ ದೇವರುಗಳೇ ಸರ್ವಶ್ರೇಷ್ಠರೆಂದೂ ಅಭಿಮಾನ ಪಡುವುದು ಸಾಮಾನ್ಯ ದೇಶಭಕ್ತಿಯ ಗೀತೆಗಳೂ ರಾಷ್ಟ್ರಧ್ವಜವೂ, ಸ್ಥಳಪುರಾಣಗಳೂ, ವೀರರ ಕಥೆಗಳೂ, ಪವಿತ್ರ ಸಂಕೇತಗಳೂ ಸ್ವಜನಾಭಿಮಾನದ ದ್ಯೋತಕಗಳು. ಒಳಗುಂಪಿಗೆ ಹೊರಗಿನವರು ಸುಲಭವಾಗಿ ಸೇರಲಾರರು. ಪ್ರವೇಶಕ್ಕೆ ಅನೇಕ ನಿರ್ಬಂಧನೆಗಳಿವೆ. ಕುಲ, ಜಾತಿ, ವೃತ್ತಿ, ಅಭಿರುಚಿ, ಧರ್ಮ, ಭಾಷೆ, ರಾಷ್ಟ್ರೀಯತೆ ಮುಂತಾದ ಆಧಾರಗಳ ಮೇಲೆ ಒಳಗುಂಪಿನವರಾಗುತ್ತಾರೆ. ಸದಸ್ಯರಲ್ಲಿ ತಮ್ಮ ಗುಂಪಿನ ರಕ್ಷಣೆ ತಮ್ಮ ಹೊಣೆಯೆಂಬ ಭಾವನೆಯೂ ಹಾಗೆಯೇ ತಮ್ಮ ರಕ್ಷಣೆ ಗುಂಪಿನ ಹೊಣೆ ಎಂಬ ಭಾವನೆಯೂ ಇರುತ್ತದೆ. ಅವರು ಆಪತ್ಕಾಲದಲ್ಲಿ ಒಳಗುಂಪಿಗಾಗಿ ಯಾವ ತ್ಯಾಗಕ್ಕೂ ಸಿದ್ಧ. ಹಾಗೆಯೇ ಶತ್ರುಗಳ ವಿರುದ್ಧ ಅವರು ತೋರುವ ವರ್ತನೆಯೂ ಕ್ಷಮ್ಯ. ಸ್ವಜನರ ಬಗೆಗಿನ ಅಭಿಮಾನ ಕೆಲವೊಮ್ಮೆ ಅತಿರೇಕಕ್ಕೆ ಹೋಗುವುದಿದೆ. ಈ ಸ್ವಜನ ದುರಭಿಮಾನವೇ ಯುದ್ಧಗಳಿಗೂ ಬೇರೆ ರೀತಿಯ ಸಂಘರ್ಷಣೆಗಳಿಗೂ ಮೂಲವಾಗಬಹುದು. ವಾಸ್ತವಿಕ ಅಥವಾ ಕಾಲ್ಪನಿಕ ಗಂಡಾಂತರಗಳು ಬಂದಾಗಲೆಲ್ಲ ಈ ಒಳಗುಂಪಿನ ಭಾವನೆ ಜಾಗ್ರತವಾಗಿ ಗುಂಪಿನ ಐಕಮತ್ಯ ಬಲಿಯುವುದನ್ನು ಕಾಣುತ್ತೇವೆ.

ಹೊರಗುಂಪು

ಬದಲಾಯಿಸಿ

ನಾವು ಸದಸ್ಯರಲ್ಲದ ಗುಂಪುಗಳೆಲ್ಲ ನಮಗೆ ಹೊರಗುಂಪುಗಳು (ಪರರು) ನಾವು ಸದಸ್ಯರಲ್ಲದ ಕ್ಲಬ್ಬು, ನೆರೆಹೊರೆ, ನಗರ, ದೇಶಗಳ ಜನ ನಮಗೆ ಪರಕೀಯರು, ಈ ಗುಂಪುಗಳ ಬಗ್ಗೆ ನಾವು ಕೆಲವೊಮ್ಮೆ ಅನಾಸ್ಥೆ, ಅಸಡ್ಡೆಗಳಿಂದ ನೋಡಿದರೆ, ಕೆಲವೊಮ್ಮೆ ಸ್ಪರ್ಧೆ, ಜುಗುಪ್ಸೆ ಹಾಗೂ ಸಂಘರ್ಷದ ಭಾವನೆಗಳನ್ನು ಹೊಂದಿರುತ್ತೇವೆ. ಹೊರಗುಂಪಿನವರ ಆಚಾರವಿಚಾರಗಳು ದೇವರುಗಳು ತುಂಬ ವಿಚಿತ್ರವಾಗಿ ಕಂಡರೆ ಆಶ್ಚರ್ಯವಿಲ್ಲ. ಕೆಲವೊಮ್ಮೆ ಅವು ಅರ್ಥಹೀನ, ಅನಾಗರಿಕ ಇಲ್ಲವೆ ಕ್ರೂರ ಎನ್ನಿಸಲೂಬಹುದು. ಹೊರಗುಂಪಿನ ಸದಸ್ಯರನ್ನು ವ್ಯಕ್ತಿಗಳೆಂದು ಪರಿಗಣಿಸುವ ಗೋಜಿಗೆ ನಾವು ಹೋಗುವುದಿಲ್ಲ. ಅವರೆಲ್ಲರೂ ಒಟ್ಟಿನಲ್ಲಿ ಒಂದೇ ರೀತಿಯ ಜನ ಎಂಬುದೇ ನಮ್ಮ ಭಾವನೆ. ಒಟ್ಟಿನಲ್ಲಿ ಎಲ್ಲ ಆಂಗ್ಲರೂ ನಗೆಗಾರಿಕೆ ತಿಳಿಯದ ಗೊಡ್ಡುಗಳು; ಪಾಶ್ಚಾತ್ಯರ ದೃಷ್ಟಿಯಲ್ಲಿ ಎಲ್ಲ ಭಾರತೀಯರೂ ಸಂಪ್ರದಾಯ ಶರಣರು; ಬಿಳಿಯರಿಗೆ ಎಲ್ಲ ನೀಗ್ರೊ ಜನರೂ ಮೈಗಳ್ಳರು. ಸುದೈವದಿಂದ ನಾವು ಏಕಕಾಲಕ್ಕೆ ಅನೇಕ ಒಳ ಹಾಗೂ ಹೊರ ಗುಂಪುಗಳಿಗೆ ಸೇರಿರುತ್ತೇವೆ. ಒಬ್ಬ ಭಾರತೀಯನಿಗೆ ಉಳಿದ ಭಾರತೀಯರೆಲ್ಲ ಒಂದು ದೃಷ್ಟಿಯಿಂದ ಒಳಗುಂಪಿನವರು. ಅವರಲ್ಲಿ ಕೆಲವರು ಬೇರೆ ಧರ್ಮಕ್ಕೆ, ಭಾಷೆಗೆ, ಇಲ್ಲವೆ ಜಾತಿಗೆ ಸೇರಿರುವುದರಿಂದ ಹೊರಗಿನವರೂ ಹೌದು. ಇದರಿಂದಾಗಿ ಯಾವ ಗುಂಪು ನಮ್ಮ ನಿಷ್ಠೆಯನ್ನು ನೂರಕ್ಕೆ ನೂರು ಸಂಪೂರ್ಣವಾಗಿ ಪಡೆಯಲಾರದು.

ಸಮಸ್ತರ ಮತ್ತು ಲಂಬಸ್ತರ ಗುಂಪುಗಳು

ಬದಲಾಯಿಸಿ

ಸಮಾಜಶಾಸ್ತ್ರಜ್ಞ ಪಿಟಿರಿಮ್ ಸೊರೊಕಿನ್ ಸಮಾಜ ವ್ಯವಸ್ಥೆಯ ಎರಡು ಪ್ರಭೇದಗಳನ್ನು ವಿವೇಚಿಸಿದ್ದಾನೆ. ಬೃಹತ್ ಸಮಾಜವನ್ನು ಉದ್ದವಾಗಿ ಸೀಳುವುದು ಸಾಧ್ಯ ಎಂದು ಊಹಿಸೋಣ. ಆಗ ವಿಶಾಲವೂ ಸರ್ವಾಂಗೀಣವೂ ಆದ ರಾಷ್ಟ್ರಗಳೂ ಧಾರ್ಮಿಕ ಗುಂಪುಗಳೂ ರಾಜಕೀಯ ಪಕ್ಷಗಳೂ ಕುಲನಿಷ್ಟೆ ವರ್ಗಗಳೂ ಕಾಣುತ್ತದೆ. ಇಂಥ ರಾಷ್ಟ್ರಗಳಲ್ಲಿ, ಪಕ್ಷಗಳಲ್ಲಿ ಮತ್ತಿತರ ಗುಂಪುಗಳಲ್ಲಿ ವಿವಿಧ ವೃತ್ತಿಗಳಿಗೆ, ಅಂತಸ್ತುಗಳಿಗೆ, ವರಮಾನ, ವಯೋಮಾನ, ದರ್ಜೆಗಳಿಗೆ ಸೇರಿದ ಜನರಿರುತ್ತಾರೆ. ಹೀಗೆ ಮೇಲು ಕೆಳಗಿನ ಸ್ತರಗಳಿಂದ ಕೂಡಿದ ಜನರಿರುವ ಈ ಗುಂಪುಗಳನ್ನು ಸೊರೊಕಿನ್ ಲಂಬಸ್ತರ ಅಥವಾ ಊರ್ಧ್ವಮುಖಿ (ವರ್ಟಿಕಲ್ ಗ್ರೂಪ್ಸ್‌) ಗುಂಪುಗಳೆಂದು ಕರೆದಿದ್ದಾನೆ. ಅನೇಕ ಸಮಸ್ತರ ಗುಂಪುಗಳನ್ನು ವಿಷಮಸ್ತರ ಗುಂಪುಗಳೆಂದೂ ಕರೆಯಬಹುದು.

ಸಮಾಜರಚನೆಯನ್ನು ಅಡ್ಡ ಸೀಳಿ ನೋಡುವಾಗ ಬೇರೆಬೇರೆ ಸಮತಲ ಗುಂಪುಗಳನ್ನು ಕಾಣಬಹುದು. ಒಂದೇತೆರನಾದ ಆದಾಯವಿರುವ ಸಾವಿರಾರು ಜನರಿದ್ದಾರೆ. ಒಂದೇ ವೃತಿಗೆ ಸೇರಿದ ಲಕ್ಷಾವಧಿ ಜನರಿದ್ದಾರೆ. ಸಮಾನ ಅಂತಸ್ತುಗಳಿಗೆ ಸೇರಿದ ಜನರ ಗುಂಪುಗಳಿವೆ. ಇವನ್ನು ಸಮತಲ ಅಥವಾ ಸಮಸ್ತರ ಗುಂಪುಗಳೆಂದು (ಹಾರಿಜಾಂಟಲ್ ಗ್ರೂಪ್) ಕರೆಯಬಹುದು. ಆರ್ಥಿಕ ವರ್ಗಗಳು, ಸಾಮಾಜಿಕ ಶ್ರೇಣಿಗಳು ಇಂಥ ಗುಂಪುಗಳು, ಒಂದೇ ವೃತ್ತಿ ಆದಾಯ, ಅಂತಸ್ತು ಇರುವ ಜನರೆಲ್ಲ ಸಮಯ ಬಂದಾಗಲೆಲ್ಲ ಸುಸಂಘಟಿತವಾಗಿ ತಮ್ಮ ಆಸ್ಥೆಗಳನ್ನು ಸಂರಕ್ಷಿಸಿಕೊಳ್ಳುವುದನ್ನು ನೋಡುತ್ತೇವೆ.

ಜನಸಂದಣಿ

ಬದಲಾಯಿಸಿ

ಸಮಾಜ ವಿಜ್ಞಾನಿಗಳ, ರಾಜಕಾರಣಿಗಳ, ಆಡಳಿತಗಾರರ ಹಾಗೂ ಸಾಮಾನ್ಯ ಪ್ರಜೆಗಳ ಗಮನವನ್ನು ಸೆಳೆಯುವ ಇನ್ನೊಂದು ಗುಂಪೆಂದರೆ ಜನಸಂದಣಿ. ಹತ್ತಾರು ಜನರಿಂದ ಹಿಡಿದು ಸಾವಿರಗಟ್ಟಲೆ ಜನರು ಒಂದೆಡೆ ಸೇರಿ ಯಾವುದಾದರೊಂದು ವಸ್ತು ಅಥವಾ ಸನ್ನಿವೇಶದ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತ ಕೆಲಕಾಲದ ಮಟ್ಟಿಗೆ ಪರಸ್ಪರ ಪ್ರಚೋದಿಸುತ್ತಿದ್ದರೆ ಅದು ಜನಸಂದಣಿಯಾಗುತ್ತದೆ. ಅದು ಅಲ್ಪಾಯುವೂ ಹೆಚ್ಚುಕಡಿಮೆ ಅಸಂಘಟಿತವೂ ಆಗಿರುವ ಗುಂಪು, ಒಂದಿಷ್ಟು ಜನ ಒಂದೇ ಕಡೆಯಲ್ಲಿ ಕೂಡಿದರೆ ಸಂದಣಿಯಾಗುವುದಿಲ್ಲ. ಅದು ಸಮಷ್ಟಿ. ಬಸ್ಸಿನಲ್ಲಿ ಕುಳಿತ ಪ್ರಯಾಣಿಕರು, ಪಾರ್ಕಿನಲ್ಲಿ ಚದರಿ ಕುಳಿತು ವಿರಮಿಸುತ್ತಿರುವ ಜನ, ಬೀದಿಯ ಅಂಚಿನಲ್ಲಿ ತಮ್ಮಷ್ಟಕ್ಕೆ ತಾವು ಓಡಾಡುವ ದಾರಿಹೋಕರು ಸಂದಣಿಯಲ್ಲ. ಎಲ್ಲರನ್ನು ಪ್ರಚೋದಿಸುವ ಸಾಮಾನ್ಯ ವಸ್ತು ಇಲ್ಲಿಲ್ಲ. ಅಂತರಕ್ರಿಯೆಗಳೂ ಇಲ್ಲವೆನ್ನಿಸುವ ಮಟ್ಟಿಗೆ ಅತ್ಯಲ್ಪ. ಆದರೆ ಇಂಥ ಸಮಷ್ಟಿಗಳೇ ಏನಾದರೊಂದು ನೆವದಿಂದಾಗಿ ಕ್ಷಣಾರ್ಧದಲ್ಲಿ ಸಂದಣಿಗಳಾಗುವುದಿದೆ. ಜನಸಂದಣಿಗೆ ನಿಶ್ಚಿತ ಗಾತ್ರವಿಲ್ಲ. ಆದರೂ ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರುವುದೂ ಜನಸಂದಣಿಯ ಭೌತಿಕ ಲಕ್ಷಣಗಳು. ಕಾಲಾವಧಿಯ ದೃಷ್ಟಿಯಿಂದ ಅದು ಕ್ಷಣಿಕವಾದ ಗುಂಪು ಹೌದು. ಈಗಿರುವ ಸದಸ್ಯರು ಅರೆಗಳಿಗೆಯೊಳಗೆ ಇಲ್ಲದಿರುವುದರಿಂದ ಅದಕ್ಕೆ ಭೂತ ಭವಿಷ್ಯತ್ತುಗಳೆರಡೂ ಇಲ್ಲ. ಸಂದಣಿಯನ್ನು ಸೇರಲೂ ಬಿಡಲೂ ಹೆಚ್ಚಿನ ನಿಯಮಗಳಿಲ್ಲ. ಏಣಿಶ್ರೇಣಿಯ ವ್ಯವಸ್ಥೆಯಿಲ್ಲ. ಸರ್ವಮಾನ್ಯವಾದ ನಾಯಕತ್ವವಿಲ್ಲ. ಎಲ್ಲ ರೀತಿಯ ಜನ ನುಗ್ಗಿಕೊಳ್ಳಬಹುದು. ಹೆಗಲಿಗೆ ಹೆಗಲು ತಿಕ್ಕಿದರೂ ಒಬ್ಬರ ಪರಿಚಯ ಇನ್ನೊಬ್ಬರಿಗೆ ಇರಲಿಕ್ಕಿಲ್ಲ. ಎಲ್ಲರೂ ನಾವು ಸಾವಿರದಲ್ಲಿ ಒಬ್ಬರು ಎಂಬ ಅನಾಮಧೇಯತ್ವವನ್ನು ಪಡೆಯುತ್ತಾರೆ. ಉಳಿದವರಂತೆ ಕೂಗುವುದು, ಓಡುವುದು ಮುಂತಾಗಿ ವರ್ತಿಸುತ್ತ ಸಮಾನ ಲಕ್ಷಣಗಳನ್ನು ಹೊಂದುತ್ತಾರೆ. ಭಾವೋದ್ರೇಕವು ಇಲ್ಲಿಯ ಒಂದು ಮುಖ್ಯ ಲಕ್ಷಣ. ಕೆಲವೊಮ್ಮೆ ಮುಷ್ಕರ, ಮೆರವಣಿಗೆ, ಮತಪ್ರದರ್ಶನಗಳಲ್ಲಿ ಆಗುವಂತೆ ಭಾವೋದ್ರೇಕದಿಂದ ಕೆರಳಿದ ಜನ ವಿಧ್ವಂಸಕ ಕಾರ್ಯಗಳಲ್ಲಿ ನಿರತರಾಗುತ್ತಾರೆ. ಆಗ ಅದು ದೊಂಬಿ ಗುಂಪು ಎನ್ನಿಸಿಕೊಳ್ಳುತ್ತದೆ. ಅಸಂಖ್ಯ ಜನರ ಬೆಂಬಲ ಇರುವುದರಿಂದ ತಮ್ಮನ್ನು ಯಾರೂ ಕೆಣಕಲಾರರು ಎಂಬ ಧೈರ್ಯವೂ ಸಾವಿರ ಸಾವಿರ ಸಂಖ್ಯೆಯ ತಾವು ತಪ್ಪು ಮಾಡಲಾರೆವು ಎಂಬ ಭರವಸೆಯೂ ಜನಸಂದಣಿಗಳ ಶಕ್ತಿಯ ಮೂಲ, ಜನಸಂದಣಿಯ ಅಭ್ಯಾಸಕ್ಕೆ ಶ್ರೀಕಾರ ಹಾಕಿದ ಫ್ರೆಂಚ್ ಚಿಂತಕನಾದ ಗಸ್ಟಾವ್ ಲೆ ಬಾನ್ ಅವನ್ನು ವಿನಾಶಕಾರಿ ಹಾಗೂ ನೀತಿಹೀನ ಎಂದು ಅಭಿಪ್ರಾಯಪಟ್ಟಿದ್ದರೂ ಅವು ಹಾಗಿರಬೇಕೆಂದೇನೂ ಇಲ್ಲ. ಕೆಡುಕು ಮಾಡದ, ಶಾಂತರೀತಿಯಲ್ಲಿ ವರ್ತಿಸುವ ನೂರಾರು ವಿಧದ ಸಂದಣಿಗಳಿವೆ. ವೀರರನ್ನು ಸ್ವಾಗತಿಸುವ, ವಿಜಯವನ್ನು ಆಚರಿಸುವ, ಹಬ್ಬಹುಣ್ಣಿಮೆಗಳಲ್ಲಿ ಪಾಲುಗೊಳ್ಳುವ, ತಮ್ಮ ಸಂತೋಷವನ್ನು ವ್ಯಕ್ತಗೊಳಿಸಲು ನೆರೆವ ಸಂದಣಿಗಳೂ ಕಡಿಮೆಯಿಲ್ಲ.

ಸಂದಣಿಗಳಲ್ಲಿ ನಾವು ಅನೇಕ ವಿಧಗಳನ್ನು ಗುರುತಿಸಬಹುದು. ಕೆಲವು ಆಕಸ್ಮಿಕ ಸಂದಣಿಗಳು (ಕ್ಯಾಷುಅಲ್ ಕ್ರೌಡ್ಸ್‌). ದೈನಂದಿನ ಜೀವನದ ಯಾವುದೇ ಘಟನೆ ಆಕಸ್ಮಿಕವಾಗಿ ಅನೇಕ ಜನರನ್ನು ಒಂದೆಡೆಗೆ ತರಬಹುದು. ಬೀದಿಯಲ್ಲಿ ಜಗಳವಾಡುವುದಾಗಲಿ ರೈಲು ಹಳಿ ತಪ್ಪುವುದಾಗಲಿ ಅಥವಾ ಬೇರೊಂದು ಘಟನೆಯಾಗಲಿ ನೂರಾರು ಜನರನ್ನು ಹತ್ತಿರ ತರುತ್ತದೆ. ಕೆಲವು ಸಾಂಪ್ರದಾಯಿಕ ಸಂದಣಿಗಳು (ಕನ್ವೆನ್ಷನಲ್ ಕ್ರೌಡ್ಸ್‌) ಪ್ರೇಕ್ಷಕ ವೃಂದಗಳಂತೆ ಹೆಚ್ಚು ವ್ಯವಸ್ಥಿತವಾಗಿವೆ. ಇವಲ್ಲದೆ ಭಾವನೆಗಳನ್ನು ವ್ಯಕ್ತಗೊಳಿಸುವ (ಎಕ್ಸ್‌ಪ್ರೆಸಿವ್) ಜನಸಂದಣಿಗಳೂ ಇವೆ. ಇವುಗಳಲ್ಲಿ ಜನರು ತಮ್ಮ ಸಂತೋಷ, ಭಯ, ಉತ್ಸಾಹ, ಭಕ್ತಿ ಮೊದಲಾದ ಭಾವನೆಗಳನ್ನು ತೋಡಿಕೊಳ್ಳುತ್ತಾರೆ. ಭಜನೆ ಮಾಡುವುದು, ಕುಣಿಯುವುದು, ಹಾಡುವುದು, ಕೈಬೀಸುವುದು ಮುಂತಾದವುಗಳ ಮೂಲಕ ಇದು ನಡೆಯುತ್ತದೆ. ಮತ್ತೆ ಕೆಲವು ಕೋಪೋದ್ರಿಕ್ತ ಸಂದಣಿಗಳು. ಥಳಿಸುವ, ಹಿಂಸೆ ಕೊಡುವ, ಲೂಟಿ ಮಾಡುವ, ಬೆಂಕಿ ಹಚ್ಚುವ ಇಂಥ ಗುಂಪುಗಳನ್ನು ಕ್ರಿಯಾಶೀಲ (ಆಕ್ಟಿವ್) ಗುಂಪುಗಳೆಂದು ದೊಂಬಿಗುಂಪುಗಳೆಂದೂ (ಮಾಬ್) ಕರೆಯುತ್ತಾರೆ.

ಜನಸಂದಣಿಗಳಲ್ಲಿ ವ್ಯಕ್ತಿಗಳ ವರ್ತನೆ ಬೇರೆ ಸನ್ನಿವೇಶಗಳಲ್ಲಿನ ವರ್ತನೆಗಿಂತ ಭಿನ್ನವಾದುದೆಂದು ಅನೇಕರು ಗುರುತಿಸಿದ್ದಾರೆ. ಈ ವಿಪರೀತ ವರ್ತನೆಗೆ ಕಾರಣಗಳೇನೆಂದು ಕೆದಕಿದ್ದಾರೆ. ಗಸ್ಟಾವ್ ಲೆ-ಬಾನ್ ಜನಸಂದಣಿಯಲ್ಲಿ ವ್ಯಕ್ತಿಗಳ ಮನಸ್ಸಿಗಿಂತ ಭಿನ್ನವಾದ ಸಾಮೂಹಿಕ ಮನಸ್ಸು ಉದ್ಭವಿಸುವುದೇ ಕಾರಣವೆಂದು ಪ್ರತಿಪಾದಿಸಿದ್ದಾರೆ. ಅವನ ಪ್ರಕಾರ ಜನಸಂದಣಿಯ ಸದಸ್ಯರು ಅಮಿತ ಶಕ್ತಿಯ ಭಾವನೆ, ಭಯನಿವೃತ್ತಿ, ಹೆಚ್ಚಿನ ಸೂಚ್ಯತೆ ಹಾಗೂ ಅನುಕರಣಗಳ ಸಹಾಯದಿಂದ ವಿಪರೀತ ವರ್ತನೆಯಲ್ಲಿ ತೊಡಗುತ್ತಾರೆ. ಆಲ್ಪೋರ್ಟ್ ಮೊದಲಾದ ಅನಂತರದ ಲೇಖಕರು ಈ ಸಾಮೂಹಿಕ ಮನಸ್ಸಿನ ಸಿದ್ಧಾಂತವನ್ನು ಖಂಡಿಸಿ ಬರೆದಿದ್ದಾರೆ.

ಪ್ರೇಕ್ಷಕ ವೃಂದ

ಬದಲಾಯಿಸಿ

ಇದು ಜನಸಂದಣಿಯಿಂದ ಸ್ವಲ್ಪ ಭಿನ್ನವಾದ ಇನ್ನೊಂದು ಅಶಾಶ್ವತ ಗುಂಪು. ಭಾಷಣ, ಸಂಗೀತ, ಕೀರ್ತನೆ, ಧಾರ್ಮಿಕ ಪ್ರವಚನ ಮುಂತಾದುವನ್ನು ಕೇಳಲು ಒಂದೆಡೆಗೆ ಕಲೆತ ಜನರೂ ನರ್ತನ, ನಾಟಕ, ಜಾದೂ ಆಟಗಳನ್ನು ನೋಡಲು ಕಲೆತ ಜನರೂ ಪ್ರೇಕ್ಷಕ ವೃಂದಕ್ಕೆ ಸೇರಿದವರು. ಗೊತ್ತಾದ ಜಾಗದಲ್ಲಿ, ಗೊತ್ತಾದ ಕಾಲದಲ್ಲಿ ಅವರು ಕೂಡುತ್ತಾರೆ. ಅವರೆಲ್ಲರನ್ನೂ ಪ್ರಚೋದಿಸುವ ಒಂದು ವ್ಯಕ್ತಿ, ವಸ್ತು ಅಥವಾ ಸನ್ನಿವೇಶ ಕೇಂದ್ರಬಿಂದುವಾಗಿರುತ್ತದೆ. ಸದಸ್ಯರೆಲ್ಲ ಈ ಬಿಂದುವಿನ ಕಡೆಗೆ ಗಮನ ಕೊಡುತ್ತಾರೆಯೇ ವಿನಾ ಉಳಿದ ಸದಸ್ಯರ ಕಡೆಗಲ್ಲ. ಗಂಟೆ ಬಾರಿಸುವುದು, ಪರದೆ ಎಳೆಯುವುದು, ದೀಪವಾರಿಸುವುದು, ವೇದಿಕೆ ಸಿದ್ಧಪಡಿಸುವುದು ಮುಂತಾದ ಚಟುವಟಿಕೆಗಳಿಂದ ಸದಸ್ಯರ ಗಮನ ಆಕಡೆಗೆ ಆಕರ್ಷಿತವಾಗುತ್ತದೆ. ಪ್ರೇಕ್ಷಕ ವೃಂದದಲ್ಲಿ ಸದಸ್ಯರು ಅನುಸರಿಸಬೇಕಾದ ನೀತಿನಿಯಮಾವಳಿಗಳು ಇವೆ. ಜನಸಂದಣಿಗಳಂತೆ ಇವು ಅಸ್ಥಿರವಿದ್ದರೂ ಅಸಂಘಟಿತವಿದ್ದರೂ ಇಲ್ಲಿ ಸಂಪ್ರದಾಯದ ಅಂಶವಿದೆ. ಸಭೆಯನ್ನು ಪ್ರವೇಶಿಸುವುದು ಅಥವಾ ಸಭೆಯಿಂದ ಹೊರಬರುವುದು, ಕುಳಿತುಕೊಳ್ಳುವುದು ಅಥವಾ ಎದ್ದು ನಿಲ್ಲುವುದು, ಕೈಚಪ್ಪಾಳೆ ತಟ್ಟುವುದು ಅಥವಾ ಪ್ರಶ್ನೆ ಕೇಳುವುದು ಎಲ್ಲವೂ ಕ್ರಮಬದ್ಧ. ಹಾಗೆಂದೇ ಕೆಲವರು ಇಂಥ ಗುಂಪುಗಳನ್ನು ಸಾಂಪ್ರದಾಯಿಕ ಜನಸಂದಣಿಗಳೆಂದು ಕರೆದಿದ್ದಾರೆ. ಪ್ರೇಕ್ಷಕ ವೃಂದಗಳ ಇನ್ನೊಂದು ಲಕ್ಷಣವೆಂದರೆ ಭೌತಿಕ ಸಾಮೀಪ್ಯ. ಪ್ರೇಕ್ಷಕರಾಗಲು ಒಂದೆಡೆ ಕೂಡಲೇಬೇಕು. ರೇಡಿಯೋ ಕೇಳುವ ಚದರಿದ ಶ್ರೋತೃವರ್ಗ ಅಥವಾ ಟೆಲಿವಿಷನ್ ನೋಡುತ್ತಿರುವ ಜಗತ್ತಿನ ಲಕ್ಷಾವಧಿ ಜನರು ಪ್ರೇಕ್ಷಕರಲ್ಲ. ಅವರನ್ನು ಸಾರ್ವಜನಿಕರು ಎನ್ನಬಹುದು ಅಷ್ಟೆ. ಪ್ರೇಕ್ಷಕ ವೃಂದಗಳಲ್ಲಿಯೂ ವೈವಿಧ್ಯವಿದೆ. ಕೆಲವು ಮಾಹಿತಿ ಬಯಸುವ ವೃಂದಗಳಾದರೆ ಮತ್ತೆ ಕೆಲವು ಮನೋರಂಜನೆ ಬಯಸುವ ವೃಂದಗಳು. ಇನ್ನು ಕೆಲವು ಗುಂಪುಗಳಲ್ಲಿ ಸದಸ್ಯರನ್ನು ಬೇರೊಂದು ಧರ್ಮಕ್ಕೆ ಸೇರಲು ಅಥವಾ ಬೇರೊಂದು ವಿಚಾರ ಇಲ್ಲವೆ ಆದರ್ಶವನ್ನು ಒಪ್ಪಲು ಮನವೊಲಿಸುವ ಪ್ರಯತ್ನ ನಡೆಯುತ್ತದೆ. ಪಾದ್ರಿಯ ಉಪದೇಶ, ಮುಂದಾಳುವಿನವಾದ, ಹಿರಿಯರ ಹಿತವಚನ ಮುಂತಾದುವನ್ನು ಕೇಳುವ ಈ ಗುಂಪುಗಳನ್ನು ಪರಿವರ್ತನೆಗೆ ಪಕ್ಕಾಗುತ್ತಿರುವ ವೃಂದಗಳೆನ್ನಬಹುದು. ಪ್ರೇಕ್ಷಕ ವೃಂದಗಳಲ್ಲಿ ಶಾಂತ ರೀತಿಯಿಂದ ಕೇಳುವ ನೋಡುವ ಜಡಗುಂಪುಗಳೂ ಇವೆ; ಸಂಪ್ರದಾಯಕ್ಕೆ ಗೌರವ ನೀಡಲು ಹಾಗೂ ಹೆಚ್ಚು ಕ್ರಿಯಾಶೀಲವಾಗಿ ವರ್ತಿಸುವ ಪಟುಗುಂಪುಗಳೂ ಇವೆ.

ದೊಂಬಿ ಗುಂಪುಗಳು

ಬದಲಾಯಿಸಿ

ಜನಸಂದಣಿಗಳಲ್ಲಿ ಕೆಲವು ಹೆಚ್ಚು ತೀವ್ರಗತಿಯ ಅಂತರ ಕ್ರಿಯೆಗಳಿಂದ ಕೂಡಿದ್ದು ಕ್ರಿಯಾಶೀಲವಾಗಿರುತ್ತವೆ. ಬೇರೆ ಸಂದಣಿಗಳಂತೆ ಅವು ಅಲ್ಪಾಯುವಾಗಿದ್ದರೂ ಒಮ್ಮೊಮ್ಮೆ ಮಾತ್ರ ಸೇರಿ ಮಾಯವಾಗುವಂಥ ಗುಂಪುಗಳಾಗಿದ್ದರೂ ಅಲ್ಲಿನ ಸದಸ್ಯರ ಭಾವನೆಗಳು ತೀಕ್ಷ್ಣವಾಗಿದ್ದು ಪರಸ್ಪರ ಅಂತರಕ್ರಿಯೆಗಳು ತೀವ್ರವಾಗಿರುತ್ತವೆ. ವರ್ಗಕಲಹ, ರಾಜಕೀಯ ಸಂಘರ್ಷ, ಕಾರ್ಮಿಕರ ಜಗಳ, ಜನಾಂಗದ್ವೇಷ ಮುಂತಾದ ಕಾರಣಗಳಿಗಾಗಿ ಇಂಥ ದೊಂಬಿಗಳು ಹುಟ್ಟುತ್ತವೆ. ಹಾಗೆ ನೋಡಿದರೆ, ಅನೇಕ ಸಲ ಮೊದ ಮೊದಲು ಆಕಸ್ಮಿಕವಾಗಿ ಕೂಡಿದ ಜನರು ಇಲ್ಲವೆ ಸಾಂಪ್ರದಾಯಿಕವಾಗಿ ಸೇರಿದ ಜನರು ಮುಂದೆ ದೊಂಬಿಗುಂಪಾಗಿ ಮಾರ್ಪಡಲೂಬಹುದು. ಆಗ ನಾವು ಮತ್ತು ಅವರು ಎಂಬ ಭಾವನೆಗಳು ತೀವ್ರಗತಿಯಿಂದ ಹುಟ್ಟಿಕೊಳ್ಳುತ್ತವೆ. ಸ್ನೇಹಿತರು ಯಾರು, ವೈರಿಗಳು ಯಾರು ಎಂದು ನಿರ್ಣಯವಾಗುತ್ತದೆ. ದೊಂಬಿ ಗುಂಪುಗಳಲ್ಲಿ ತಪ್ಪು ಒಪ್ಪುಗಳ ಚರ್ಚೆ ಅಸಾಧ್ಯ. ಆಲೋಚನೆಗೆ ವ್ಯವಧಾನವಿಲ್ಲ. ಎಲ್ಲ ವ್ಯಕ್ತಿಗಳೂ ತಮ್ಮ ಸ್ವತಂತ್ರವಾದ ಅಸ್ತಿತ್ವವನ್ನು ಕಳೆದುಕೊಂಡು ಅನಾಮಧೇಯರಾಗುತ್ತಾರೆ. ಗುಂಪಿನಲ್ಲಿ ಪೂರ್ಣವಾಗಿ ತಾದಾತ್ಮ್ಯ ಹೊಂದುತ್ತಾರೆ. ಅವರಿಗೆ ಕೆಲವು ವ್ಯಕ್ತಿಗಳು ಇಲ್ಲವೆ ವಸ್ತುಗಳು ಇಲ್ಲವೆ ಗುಂಪುಗಳು ಆಕ್ರಮಣದ ಕೇಂದ್ರಗಳಾಗುತ್ತವೆ. ಉಲ್ಬಣಿಸಿದ ಭಾವೋದ್ರೇಕದಿಂದ ಜನ ವರ್ತಿಸುತ್ತಾರೆ. ಕಲ್ಲು ತೂರುವುದು, ಕೊಳ್ಳೆ ಹೊಡೆಯುವುದು, ಬೆಂಕಿ ಹಚ್ಚುವುದು, ಥಳಿಸುವುದು ಇತ್ಯಾದಿ ಹಿಂಸಾತ್ಮಕ ಕಾರ್ಯಗಳಲ್ಲಿ ತೊಡಗುತ್ತಾರೆ. ತತ್ಕಾಲಕ್ಕೆ ದೊಂಬಿ ಗುಂಪಿಗೊಬ್ಬ ನಾಯಕನಿರಬಹುದು. ಆತ ಎಲ್ಲ ಜನರ ಗಮನ ಆಕ್ರಮಣದ ಕಡೆಗೆ ಕೇಂದ್ರೀಕೃತವಾಗುವಂತೆ ನೋಡಿಕೊಳ್ಳುತ್ತಾನೆ. ದೊಂಬಿಗುಂಪನ್ನು ಚದರಿಸಬೇಕಾದರೆ ಈ ನಾಯಕನನ್ನು ಗುಂಪಿನಿಂದ ಬೇರ್ಪಡಿಸುತ್ತಾರೆ. ಇಲ್ಲವೆ ಜನರ ಗಮನ ಬೇರೆ ಕಡೆಗೆ ಹರಿಯುವಂತೆ ಮಾಡುತ್ತಾರೆ ಎಂಬುದು ಸರ್ವವಿದಿತವಾದ ವಿಷಯ. ಗಾಳಿಸುದ್ದಿ, ಕಟ್ಟುಕತೆಗಳು, ವದಂತಿಗಳು ದೊಂಬಿಗುಂಪುಗಳಲ್ಲಿ ಮಹತ್ತ್ವದ ಪಾತ್ರ ವಹಿಸುತ್ತವೆ. ಮುಷ್ಕರ, ಪಿಕೆಟಿಂಗ್, ಮತಪ್ರದರ್ಶನ, ಮೆರವಣಿಗೆ, ಕಪ್ಪುಬಾವುಟ ತೋರಿಸುವುದು ಹೀಗೆ ಪ್ರಾರಂಭವಾಗುವ ಕಾರ್ಮಿಕರ, ಮತ್ತಿತರರ ಗುಂಪುಗಳು ನಮಗೆ ಪರಿಚಿತವಾದ ದೊಂಬಿಗುಂಪುಗಳು. ಈಚೆಗೆ ಜನಾಂಗೀಣ ದೊಂಬಿಗುಂಪುಗಳು ಮತ್ತು ಯುವಜನರ ದೊಂಬಿಗುಂಪುಗಳು ಕೂಡ ಹೆಚ್ಚುತ್ತಿರುವುದನ್ನು ನೋಡುತ್ತೇವೆ. ಇವುಗಳ ಮೂಲ ಎಲ್ಲಿ ಎಂದು ಹೇಳುವುದು ಕಷ್ಟ. ಮಾರ್ಟಿನ್ ಹೇಳುವಂತೆ ನಾವೆಲ್ಲ ತಾತ್ಕಾಲಿಕವಾಗಿ ಸಾಮೂಹಿಕವಾಗಿ ಹುಚ್ಚರಾಗುವುದರ ಪರಿಣಾಮವೇ ದೊಂಬಿಗುಂಪು. ಏನಾದರೂ ಹೊಸತು ಬೇಕೆಂಬ ಹಂಬಲಕ್ಕಾಗಿ, ಏಕತಾನ ಮೀರುವುದಕ್ಕಾಗಿ, ನಮ್ಮಲ್ಲಿ ಅದುಮಿ ಹಿಡಿದಿಟ್ಟಿರುವ ಭಯ, ರಾಗ ದ್ವೇಷಗಳನ್ನು ಹೊರಗೆಡಹುವುದಕ್ಕಾಗಿ ಹೀಗೆ ಬಗೆ ಬಗೆಯ ಸಾಮೂಹಿಕ ಉನ್ಮಾದದಲ್ಲಿ ಪಾಲುಗೊಳ್ಳುತ್ತೇವೆ. ಸಾಮಾಜಿಕ ಬದಲಾವಣೆ ಮತ್ತು ಅಶಾಂತಿಯ ಕಾಲದಲ್ಲಿ ದೊಂಬಿಗುಂಪುಗಳಿಗೆ ಅವಕಾಶ ಹೆಚ್ಚು.

ಪಲಾಯನ ಗುಂಪುಗಳು

ಬದಲಾಯಿಸಿ

ಭೂಕಂಪ, ನೆರೆಹಾವಳಿ, ಬೆಂಕಿ ಹೊತ್ತಿಕೊಳ್ಳುವುದು, ಬಾಂಬ್ ದಾಳಿ, ವೈರಿಗಳ ಆಕ್ರಮಣ ಮುಂತಾದ ಆಕಸ್ಮಿಕಗಳಲ್ಲಿ ಹಾಗೂ ಸಂಕಟಗಳಲ್ಲಿ ಜನ ತಮ್ಮ ಮಾನಸಿಕ ಸ್ಥೈರ್ಯವನ್ನು ಕಳೆದುಕೊಳ್ಳುವುದನ್ನೂ ಕೈಕಾಲು ಕಳೆದುಕೊಂಡವರಂತೆ ವರ್ತಿಸುವುದನ್ನೂ ದಿಙ್ಮೂಢರಂತೆ ಅಳುವುದನ್ನೂ, ಪಲಾಯನ ಮಾಡುವುದನ್ನೂ ನಾವು ನೋಡಿದ್ದೇವೆ. ಇಂಥ ಗುಂಪುಗಳನ್ನು ಪಲಾಯನ ಗುಂಪುಗಳೆಂದೂ ಭಯಗ್ರಸ್ತ ಜನಸಂದಣಿಗಳೆಂದೂ ಕರೆಯುತ್ತಾರೆ. ದೊಂಬಿಗುಂಪುಗಳಂತೆ ಇವು ಕೂಡ ಕ್ರಿಯಾಶೀಲ ಸಂದಣಿಗಳು. ಆದರೆ ಕೋಪೋದ್ರಿಕ್ತವಾದ ದೊಂಬಿಗುಂಪುಗಳಲ್ಲಿ ಜನರು ವಿಧ್ವಂಸಕ ಕೃತ್ಯಗಳಿಗೆ ಮುನ್ನುಗ್ಗಿದರೆ ಪಲಾಯನ ಗುಂಪುಗಳಲ್ಲಿ ಸ್ವರಕ್ಷಣೆಗಾಗಿ ಚಲ್ಲಾಪಿಲ್ಲಿಯಗಿ ಓಡುತ್ತಾರೆ. ದೊಂಬಿಗುಂಪುಗಳಲ್ಲಿ ಜನ ತಮ್ಮ ಸ್ವಂತ ಅಸ್ತಿತ್ವವನ್ನು ಸಂಪೂರ್ಣವಾಗಿ ಮರೆತರೆ ಪಲಾಯನ ಗುಂಪುಗಳಲ್ಲಿ ಸ್ವಂತ ರಕ್ಷಣೆಗಾಗಿ ಉಳಿದ ಎಲ್ಲರನ್ನೂ ಮರೆಯುತ್ತಾರೆ. ದೇಶ ಬಿಟ್ಟು ಓಡಿಬರುವ ನಿರಾಶ್ರಿತರು ಮಕ್ಕಳು ಮರಿಗಳನ್ನೂ ಬಂಧುಗಳನ್ನೂ ಬಿಟ್ಟು ಜೀವದಾಸೆಯಿಂದ ಓಡಿಬರುವುದನ್ನು ನೋಡಿದ್ದೇವೆ. ಸಮಾಜ ವಿಜ್ಞಾನಿಗಳು ಚೆನ್ನಾಗಿ ವಿಶ್ಲೇಷಿಸಿದ ಒಂದು ಪಲಾಯನ ಗುಂಪಿನ ಉದಾಹರಣೆಯೆಂದರೆ ಕ್ಯಾಂಟ್ರಿಲ್ ಮತ್ತು ಸಂಗಡಿಗರು 1938ರಲ್ಲಿ ಅಮೆರಿಕೆಯಲ್ಲಿ ನಡೆಸಿದ ಪ್ರಯೋಗ. ಆರ್ಸನ್ ವೆಲ್ಸ್‌ ಎಂಬ ಪ್ರಸಿದ್ಧ ನಟ ಅಭಿನಯಿಸಿದ ಮಂಗಳ ಲೋಕದಿಂದ ಆಕ್ರಮಣ ಎಂಬ ನಾಟಕವನ್ನು ರೇಡಿಯೋದಿಂದ ಬಿತ್ತರಿಸಲಾಯಿತು. ಅದು ನಾಟಕದಂತೆ ಇರದೆ ವೀಕ್ಷಕ ವಿವರಣೆಯಂತೆ ಇದ್ದುದರಿಂದ ಜನ ಅದನ್ನು ಮಂಗಳ ಲೋಕದವರ ನಿಜವಾದ ಆಕ್ರಮಣವೆಂದು ನಂಬಿ ಭಯಗ್ರಸ್ತರಾಗಿ ವರ್ತಿಸಿದರು. ಸಾವಿರಾರು ಜನ ರಸ್ತೆಗಳಲ್ಲಿ ನೆರೆದರು; ಪೋಲಿಸ್ ಕಚೇರಿಗಳಿಂದ ಮಾಹಿತಿ ಕೇಳಿದರು; ಕೈಗೆ ಸಿಕ್ಕ ಕಾರುಗಳಲ್ಲಿ ಕೂತು ಪಲಾಯನ ಮಾಡಿದರು; ಚರ್ಚುಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು; ಅತ್ತರು. ಒಟ್ಟಿನಲ್ಲಿ ಪಲಾಯನ ಗುಂಪುಗಳಲ್ಲಿ ಸುವ್ಯವಸ್ಥಿತ ಜೀವನಕ್ಕೆ ಬೇಕಾದ ವಿವೇಚನೆ ಮತ್ತು ಹತೋಟಿಗಳು ಇರುವುದಿಲ್ಲ.

ಸಾರ್ವಜನಿಕರು

ಬದಲಾಯಿಸಿ

ಸಾರ್ವಜನಿಕರೆಂದರೆ ಸಮಾಜದ ಪ್ರತಿಯೊಬ್ಬರೂ ಎಂದು ಅರ್ಥವಲ್ಲ. ಅದು ಯಾವುದಾದರೊಂದು ಸಮಾನ ಆಸಕ್ತಿಯನ್ನು ಉಳ್ಳ ಜನರ ಅಸಂಘಟಿತ ಮತ್ತು ಚದರಿದ ಗುಂಪು. ಸಾಮಾನ್ಯವಾಗಿ ವಿವಾದಾಸ್ಪದ ವಿಷಯವೊಂದಕ್ಕೆ ಸಂಬಂಧಿಸಿದಂತೆ ಇರುವ ಅನೇಕ ವ್ಯಕ್ತಿಗಳ ಚದರಿದ ಮತ್ತು ಅಸಂಘಟಿತ ಸಂಕಲನಕ್ಕೆ ಸಾರ್ವಜನಿಕರು ಎನ್ನಬಹುದು. ಇಲ್ಲಿ ಸುಸಂಘಟಿತವಾದ ಗುಂಪಿನ ರಚನೆಯಿಲ್ಲ; ಅಧಿಕಾರಿಗಳಿಲ್ಲ; ಏಣಿಶ್ರೇಣಿಯಿಲ್ಲ. ಜನಸಂದಣಿಯಲ್ಲಿರುವಂತೆ ವ್ಯಕ್ತಿಗಳು ಒಂದೆಡೆಗೆ ಸೇರಿರುವುದಿಲ್ಲ. ಒಬ್ಬ ದೇಶದ ಒಂದು ಮೂಲೆಯಲ್ಲಿದ್ದರೆ ಇನ್ನೊಬ್ಬ ನೂರಾರು ಮೈಲಿಗಳ ದೂರದ ಮತ್ತೊಂದು ಮೂಲೆಯಲ್ಲಿ ಇರಬಹುದು. ಅವರ ನಡುವಿನ ಸಂಪರ್ಕ ತೀರ ಅತ್ಯಲ್ಪ; ಇರುವಷ್ಟು ಸಂಪರ್ಕ ಕೂಡ ಪರೋಕ್ಷವಾದುದು. ಸಾರ್ವಜನಿಕ ಸಂಪರ್ಕದ ಮಾಧ್ಯಮಗಳಾದ ರೇಡಿಯೊ, ಟೆಲಿವಿಷನ್, ವಾರ್ತಾಪತ್ರಿಕೆಗಳ ಮೂಲಕವೇ ಅವರು ತಮ್ಮ ಸಮಾನ ಆಸಕ್ತಿಗಳನ್ನು ಗುರುತಿಸಿಕೊಳ್ಳುತ್ತಾರೆ. ಆ ಕಾರಣದಿಂದಲೇ ಗ್ಯಾಬ್ರಿಯೆಲ್ ತಾರ್ಡ್ ಎಂಬಾತ ಸಾರ್ವಜನಿಕರು ಮುದ್ರಣಾಲಯದ ಸೃಷ್ಟಿಗಳೆಂದು ಕರೆದಿದ್ದಾನೆ. ಸಾರ್ವಜನಿಕರು ಹೆಚ್ಚು ಕಡಿಮೆ ಜನಸಂದಣಿಯಂತೆಯೇ ವರ್ತಿಸುತ್ತಾರೆ. ಆದರೂ ಈ ಎರಡು ಗುಂಪುಗಳ ನಡುವೆ ಕೆಲವು ಭೇದಗಳಿವೆ. ಭಾವೋದ್ವೇಗ, ಚಂಚಲತೆಗಳಂಥ ಗುಣಗಳಿದ್ದರೂ ಸಾರ್ವಜನಿಕರಲ್ಲಿ ವಾದಮಂಡನೆ, ಚರ್ಚೆ, ವಿವೇಚನೆ, ಭಿನ್ನಾಭಿಪ್ರಾಯಗಳಿಗೆ ಸಾಕಷ್ಟು ಅವಕಾಶವಿದೆ. ಜನಸಂದಣಿಯಲ್ಲಿ ಇದು ಸಾಧ್ಯವಿಲ್ಲ. ಅಲ್ಲಿ ಮನಸ್ಸಿಗೆ ಅವೇಗ ಹೆಚ್ಚು; ರಭಸ ಹೆಚ್ಚು. ಇದಲ್ಲದೆ ನಾವು ಏಕಕಾಲಕ್ಕೆ ಅನೇಕ ಸಾರ್ವಜನಿಕ ಗುಂಪುಗಳಿಗೆ ಸೇರುವ ಸಾಧ್ಯತೆ ಇದೆ. ಆದರೆ ಒಮ್ಮೆಗೆ ಒಂದೇ ಜನಸಂದಣಿಯನ್ನು ಸೇರಲು ಮಾತ್ರ ಸಾಧ್ಯ. ನಮ್ಮ ಆಸ್ಥೆಗಳು ಬೆಳೆಯುತ್ತಿರುವ ಹಾಗೆಯೇ ನಾವು ಅನೇಕ ಸಾರ್ವಜನಿಕರ ಗುಂಪುಗಳ ಸದಸ್ಯರಾಗುತ್ತೇವೆ. ಯುದ್ಧ ತೆರಿಗೆ, ಸಾರ್ವಜನಿಕ ಆರೋಗ್ಯ, ಬೆಲೆನಿಯಂತ್ರಣ, ಚಂದ್ರಲೋಕ ಯಾತ್ರೆ, ನದಿಗಳ ನೀರಿನ ಹಂಚಿಕೆ, ರಾಜ್ಯಗಳ ಪುನರ್ಘಟನೆ -ಹೀಗೆ ಅನೇಕ ಸಾರ್ವಜನಿಕ ವಿಚಾರಗಳು ತತ್ಸಂಬಂಧದ ಸಾರ್ವಜನಿಕರನ್ನು ಸೃಷ್ಟಿಸುತ್ತವೆ. ಒಟ್ಟಿನಲ್ಲಿ ಸಾರ್ವಜನಿಕರೆಂದರೆ ಸಾರ್ವಜನಿಕ ವಿಚಾರವೊಂದರ ಸುತ್ತ ಇರುವ ಜನರ ಗುಂಪು. ಸಾರ್ವಜನಿಕ ಸಂಪರ್ಕ ಮಾಧ್ಯಮಗಳಿಂದ ಈ ಗುಂಪು ಹೆಣೆಯಲ್ಪಟ್ಟಿದೆ. ಇಲ್ಲಿ ಚರ್ಚೆ ವಿವೇಚನೆಗಳಿಗೆ ಹೆಚ್ಚು ಅವಕಾಶವಿದೆ. ಪ್ರಜಾಪ್ರಭುತ್ವದಲ್ಲಿ ಈ ಗುಂಪುಗಳು ಬಹಳ ಮಹತ್ತ್ವ ಪಡೆದಿವೆ. ಈಗ ಅಭಿಪ್ರಾಯಗಳು ಒಂದು ಚಿಕ್ಕ ಸಮುದಾಯಕ್ಕಷ್ಟೇ ಸೀಮಿತವಾಗದೆ ವಿಶ್ವವ್ಯಾಪ್ತಿಯಾಗುತ್ತಿವೆ. ಮುದ್ರಣಾಲಯ ಮತ್ತು ಸಾರ್ವಜನಿಕ ಸಂಪರ್ಕ ಮಾಧ್ಯಮಗಳು ಬೆಳೆದಂತೆಲ್ಲ ಸಾರ್ವಜನಿಕರ ಗುಂಪುಗಳು ವಿಸ್ತಾರವಾಗುತ್ತಲೂ ವೈವಿಧ್ಯಮಯವಾಗುತ್ತಲೂ ಇವೆ. ಇವರ ಅಭಿಪ್ರಾಯವೇ ಉದ್ದಿಮೆಯೊಂದನ್ನು ಉಳಿಸಬಹುದು ಅಥವಾ ಅಳಿಸಬಹುದು. ಯುದ್ಧದ ಕಿಡಿ ಹೊತ್ತಿಸಬಹುದು ಅಥವಾ ಸರಕಾರವೊಂದನ್ನು ಉರುಳಿಸಬಹುದು.

ಜನಸ್ತೋಮಗಳು

ಬದಲಾಯಿಸಿ

ಜನಸಂದಣಿಗಳಂತಿರುವ, ಆದರೆ ಕೆಲವು ಸಂಗತಿಗಳಲ್ಲಿ ಅವುಗಳಿಗಿಂತ ಭಿನ್ನವಾಗಿರುವ, ಕೆಲವು ಸಂಕಲನಗಳನ್ನು ಜನಸ್ತೋಮಗಳೆಂದು ಕರೆಯುತ್ತಾರೆ. ಅನೇಕ ಜನ ಒಂದು ಸಾಮಾನ್ಯವಾದ ಪ್ರಚೋದಕ ವಸ್ತುವಿನ ಬಗೆಗೆ ಒಂದೇ ರೀತಿಯಲ್ಲಿ ವ್ಯಕ್ತಿಗತವಾಗಿ ವರ್ತಿಸುತ್ತಾರೆ. ಉದಾಹರಣೆಗೆ, ಎಲ್ಲೋ ಒಂದೆಡೆ ಧಾರಾಳವಾಗಿ ವಜ್ರವೋ ಚಿನ್ನವೋ, ಪುಕ್ಕಟೆ ಭೂಮಿಯೋ ಸಿಗುತ್ತದೆಂದು ವಂದತಿ ಹಬ್ಬಿ ಲಕ್ಷಗಟ್ಟಲೆ ಜನ ಉಳಿದವರ ಹಾಗೆ ಅವುಗಳ ಬೆನ್ನು ಹತ್ತಿ ಓಡಿಹೋದದ್ದನ್ನು, ವಿಚಿತ್ರವಾಗಿ ವರ್ತಿಸಿದ್ದನ್ನು ಕೇಳಿದ್ದೇವೆ. ಹಾಗೆಯೇ ತಾತ್ಕಾಲಿಕ ಫ್ಯಾಷನ್ನುಗಳನ್ನು ವಿಚಿತ್ರ ಪದ್ಧತಿಗಳನ್ನು ಇತರರಂತೆ ಅನುಸರಿಸುವ ಸಾವಿರಾರು ಜನರಿದ್ದಾರೆ. ಇತರರು ದೇಶ ಬಿಟ್ಟರೆಂದು ತಾವೂ ಬಿಡುವ ಜನರಾಶಿಗಳಿವೆ. ಇತರರಂತೆ ಸುದ್ದಿಗಳಿಗೆ ಕಾಯುವ ಲಕ್ಷಗಟ್ಟಲೆ ಜನರಿದ್ದಾರೆ. ಇವರೆಲ್ಲ ಒಂದು ಸುಸಂಘಟಿತ ಗುಂಪಿಗೆ ಸೇರಿದ ಜನರಲ್ಲ. ಇವರು ಬೇರೆ ಬೇರೆ ವರ್ಗಗಳಿಗೆ ಹಾಗೂ ಸಾಂಸ್ಕೃತಿಕ ಮಟ್ಟಗಳಿಗೆ ಸೇರಿದವರು. ಇವರು ಪರಸ್ಪರ ಸಂಪರ್ಕ ಹೊಂದಿರುವುದಿಲ್ಲ. ಅನಾಮಧೇಯರಾಗಿದ್ದು, ಒಬ್ಬರಿಗೊಬ್ಬರು ಅಪರಿಚಿತರಾಗಿದ್ದು, ತಮ್ಮಷ್ಟಕ್ಕೆ ನಾವು ಸಮಾನರೀತಿಯಿಂದ ವರ್ತಿಸುತ್ತಾರೆ. ಇವರು ಜನಸಂದಣೀಯ ವ್ಯಕ್ತಿಗಳಂತೆ ಏಕತ್ರವಿರುವುದಿಲ್ಲ. ಸಾಮೂಹಿಕವಾಗಿ ವರ್ತಿಸುವುದೂ ಇಲ್ಲ. ಒಬ್ಬ ವ್ಯಕ್ತಿ ಇನ್ನೊಬ್ಬನಿಗೆ ಯಾವುದೇ ರೀತಿಯಿಂದ ಅಂಟಿಕೊಂಡಿಲ್ಲ. ಅವನಿಗೆ ನಿಶ್ಚಿತ ಅಂತಸ್ತು ಪಾತ್ರಗಳಿಲ್ಲ. ಆತ ಪ್ರತ್ಯೇಕಿತ, ಅನಾಮಧೇಯ, ಹೀಗಾಗಿ ತನ್ನಷ್ಟಕ್ಕೆ ನಾನು ವರ್ತಿಸಲು ಸ್ವತಂತ್ರ. ನಗರೀಕರಣ ಮತ್ತು ಔದ್ಯೋಗೀಕರಣದೊಡನೆ ಬಂದ ಸಾಮಾಜಿಕ ಸನ್ನಿವೇಶಗಳಲ್ಲಿ ಜನಸ್ತೋಮಗಳು ಬೆಳೆದಿವೆಯೆಂದು ಹೇಳುತ್ತಾರೆ. ರೇಡಿಯೊ, ಟೆಲಿವಿಷನ್, ಚಲನಚಿತ್ರಗಳು, ಹೊಸ ವಿದ್ಯಾಕ್ರಮಗಳು, ಪ್ರಚಾರ ಸಾಧನಗಳು, ವಲಸೆಗಳು, ದೊಡ್ಡದೊಡ್ಡ ಕಾರ್ಖಾನೆಗಳು, ಬೀದಿಗಳು ನಮ್ಮನ್ನು ಚಿಕ್ಕ ಪರಿಚಿತ ಲೋಕಗಳಿಂದ ವಿಶಾಲವಾದ ಅಪರಿಚಿತ ಲೋಕಗಳತ್ತ ಒಯ್ಯುತ್ತಿವೆಯೆಂದೂ ನಾವು ಹತ್ತಿರದ ಕುಟುಂಬ, ನೆರೆಹೊರೆಗಳಂಥ ಸಾಮುದಾಯಿಕ ಸನ್ನಿವೇಶಗಳನ್ನು ಬಿಟ್ಟು ಬೃಹತ್ ಸಂಘಟನೆಗಳನ್ನು ಸೇರುತ್ತಿರುವೆವೆಂದೂ ಫರ್ಡಿನೆಂಡ್ ಟೊನ್ನೀಸ್ ಮತ್ತು ಅನಂತರದ ಲೇಖಕರು ಹೇಳುತ್ತ ಬಂದಿದ್ದಾರೆ. ಇವರಲ್ಲಿ ಅನೇಕರ ಪ್ರಕಾರ (ಅ) ಜನಸ್ತೋಮಗಳು ಹೆಚ್ಚುತ್ತಿವೆ; (ಆ) ಹಿಂದಿನ ಸ್ಥಳೀಯ ಗುಂಪುಗಳು ಧಾರ್ಮಿಕ ಹಾಗೂ ಕುಲನಿಷ್ಠ ಗುಂಪುಗಳು ಮಾಯವಾಗುತ್ತಿವೆ; (ಇ) ಸಂಘಟನೆ ಪ್ರಬಲವಾಗುತ್ತಿದೆ; (ಈ) ರಾಷ್ಟ್ರೀಯ ಮಾರುಕಟ್ಟೆ, ರಾಷ್ಟ್ರೀಯ ಚುನಾವಣೆ ಮುಂತಾಗಿ ನಮ್ಮ ಸಾಮಾಜಿಕ ವಲಯಗಳು ವಿಸ್ತರಿಸುತ್ತಿವೆ; (ಉ) ಸಾರ್ವಜನಿಕ ಸಂಪರ್ಕ ಮಾಧ್ಯಮಗಳು ಮಹತ್ತ್ವ ಪಡೆಯುತ್ತಿವೆ.