ಗುಂತಗೋಳ ಪಾಳೆಯಗಾರರು

೧೪೯೧-೧೯೪೮. ಮೂಲತಃ ಕಂಚಿಯಿಂದ ಬಂದ ಇವರು ಬಿಜಾಪುರದ ಆದಿಲ್ಶಾಹಿಗಳ ಆಡಳಿತಾವಧಿಯಲ್ಲಿ (೧೪೮೯-೧೬೮೬) ಒಂದು ಸಂಸ್ಥಾನವನ್ನು ಸ್ಥಾಪಿಸಿ ಬ್ರಿಟಿಷ್ ಮತ್ತು ಹೈದರಾಬಾದ್ ನಿಜಾಮರ ದಬ್ಬಾಳಿಕೆಯ ಮಧ್ಯೆ ಸಮರ್ಥವಾಗಿ ಆಳಿಕೆ ನಡೆಸಿದ್ದರು. ಗುಂತಗೋಳವು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನಿಂದ ೩೦ ಕಿಮೀ ದೂರದಲ್ಲಿದೆ.

ಇತಿಹಾಸ ಬದಲಾಯಿಸಿ

ಇವರ ಮೊದಲ ರಾಜಧಾನಿ ಜಲದುರ್ಗ. ಅನಂತರ ಗುಂತಗೋಳಕ್ಕೆ ಬಂದು ನೆಲೆಸಿದರು. ಈ ಸ್ಥಳೀಯ ಪ್ರಭುಗಳ ಮೂಲಪುರುಷ ಕಾಳಭೈರವನಾಯಕ. ಇವನ ಅನಂತರ ಅಮರಪ್ಪನಾಯಕ, ಬಸಪ್ಪನಾಯಕ, ಶ್ರೀನಿವಾಸನಾಯಕ, ರಾಯಪ್ಪನಾಯಕ, ನರಸಿಂಹನಾಯಕ ಆಳಿಕೆ ಮಾಡಿದರು. ಇವರಿಗೆ ಬಹರಿಬಹಾದ್ದೂರ್, ನಾಯಕಾಚಾರ್ಯ, ಮಹಾನಾಯಕ ಎಂಬ ಬಿರುದುಗಳನ್ನು ಆದಿಲ್ಶಾಹಿಗಳು ನೀಡಿದ್ದರು. ಇವರ ಆಡಳಿತಕ್ಕೆ ಸು. ೧೩೦ ಹಳ್ಳಿಗಳು ಸೇರಿದ್ದವು. ಪಾಟೀಲ, ಕುಲಕರ್ಣಿ, ನಾಡಗೌಡ, ದೇಸಾಯಿ ಎಂಬ ಅಧಿಕಾರಿಗಳು ಸ್ಥಳೀಯ ಆಡಳಿತವನ್ನು ನಿರ್ವಹಿಸುತ್ತಿದ್ದರು. ಇವರಲ್ಲಿ ಕಾಲಾಪುರದ ನಾಡಗೌಡರು, ನೀರಲಕೇರಿಯ ನಾಡಗೌಡರು, ಬೆಲ್ಲದ ಮರಡಿಯ ದೇಸಾಯಿಗಳು ಪ್ರಮುಖರಾಗಿದ್ದರು.

ಕೊಡುಗೆ ಬದಲಾಯಿಸಿ

ಇವರ ಕುಲದೇವರು ಕಂಚಿಯ ಏಕಾಮ್ರೇಶ್ವರ. ಆರಾಧ್ಯದೈವ ಗೋನಾವಾಟ್ಲದ ವೇಣುಗೋಪಾಲ. ಇವರ ರಾಜಗುರುಗಳು ದೇವರಭೂಪುರದ ಜಗದಂಡ ಮಹಾಸ್ವಾಮಿಗಳು. ಚಿತ್ತರಗಿ ಇಳಕಲ್ಲು ಮಹಾಂತಸ್ವಾಮಿಗಳ ಮಠ, ಶ್ರೀ ಹಿರೇಮಠ, ಶ್ರೀಕಿದ್ಮತಿಮಠಗಳಿಗೆ ಭಕ್ತರಾಗಿದ್ದರು. ರಾಜಾ ರಾಯಪ್ಪನಾಯಕ ಆಧ್ಯಾತ್ಮಿಕ ಪುರುಷನೂ ನರಸಿಂಹನಾಯಕ ಕಲಾಪ್ರೇಮಿಯೂ ಅಮರೇಶ್ವರ ಕಲಾ ಸಂಘವನ್ನು ಹುಟ್ಟು ಹಾಕಿದ. ಇವನ ಆಸ್ಥಾನದಲ್ಲಿ ಬಸಣ್ಣ ಜಾವೂರ ಎಂಬ ಪ್ರಸಿದ್ಧ ರಂಗ ಕಲಾವಿದನಿದ್ದ. ಅಮರೇಶ್ವರ, ಗೋನವಾಟ್ಲದ ಗೋಪಾಲಸ್ವಾಮಿ, ಮಾಳಗುಂಡಮ್ಮ, ವೀರಯೋಧ, ಕಾಳಭೈರವ, ಶರಣ ಗಂಗಪ್ಪಯ್ಯ ಮೊದಲಾದ ದೇವಾಲಯಗಳನ್ನು, ಅಮರೇಶ್ವರ ಬಾವಿ, ದರ್ಬಾರ ಬಾವಿ, ರಾಜರ ಕೆರೆ, ಗಿರಿಸೀಮೆ ಕೆರೆಗಳನ್ನು ನಿರ್ಮಿಸಿದ. ಇವನ ಸುಸಜ್ಜಿತವಾದ ಅರಮನೆಯನ್ನು ಗುಂತಗೋಳದಲ್ಲಿ ಇಂದಿಗೂ ಕಾಣಬಹುದು. ಈ ಪ್ರಭುಗಳು ಕೋಟೆಯನ್ನು ನಿರ್ಮಿಸಿದ್ದರು. ಕೋಟೆಯ ಕಾವಲುಗಾರನ ಹೆಂಡತಿ ಮಾಳಗುಂಡಮ್ಮಳೆಂಬ ಮಹಿಳೆ ಸಂಸ್ಥಾನದ ರಕ್ಷಣೆಗಾಗಿ ಹೋರಾಡಿ ಮಡಿದ ಕತೆ ಜನಪದ ಸಾಹಿತ್ಯದಲ್ಲಿ ಜನಜನಿತವಾಗಿದೆ. ಈ ವಂಶಸ್ಥರು ಗುಡಗುಂಟಿ, ಗುಂತಗೋಳದಲ್ಲಿ ಇಂದಿಗೂ ನೆಲೆಸಿದ್ದಾರೆ.


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: