ಇಂದು ನಾವು ಕಾಣುತ್ತಿರುವ ಗುಂಡಿಗೆಯ ಅನೇಕ ರೋಗಗಳು ಪ್ರಾಚೀನ ಕಾಲದಿಂದಲೂ ಇದ್ದವೆಂಬ ಅಂಶ ಈಜಿಪ್ಟಿನಲ್ಲಿ ಸುಗಂಧದ್ರವ್ಯಗಳಿಂದ ಕಾಯ್ದಿರಿಸಿದ ಶವಗಳ ಪರಿಶೀಲನೆಯಿಂದ ದೃಢಪಡುತ್ತದೆ. ಗುಂಡಿಗೆಯ ಬಗ್ಗೆ ಮತ್ತು ಅದರ ಕಾರ್ಯವೈಪರೀತ್ಯಗಳ ಬಗ್ಗೆ ಗ್ರೀಕರಲ್ಲಿ ತಿಳಿವಳಿಕೆಯಿದ್ದರೂ ಅನಂತರದ ಅನೇಕ ಶತಮಾನಗಳಲ್ಲಿ ಈ ವಿಷಯದಲ್ಲಿ ಅಜ್ಞಾನವೇ ಇದ್ದಿತು. ಭಾರತದಲ್ಲಿ ಎರಡು ಸಹಸ್ರ ವರ್ಷಗಳಷ್ಟು ಪ್ರಾಚೀನವಾದ ಅಥರ್ವವೇದದಲ್ಲಿನ ಶ್ಲೋಕಗಳಲ್ಲಿ ಗುಂಡಿಗೆಯ ರೋಗಗಳು ಮತ್ತು ಅವುಗಳ ನಿವಾರಣೆಗೆ ಅನುಪಾನ ಕ್ರಮದ ಬಗ್ಗೆ ಉಲ್ಲೇಖ ಉಂಟು. 1628ರಲ್ಲಿ ವಿಲಿಯಂ ಹಾರ್ವೆ ರಕ್ತಪರಿಚಲನ ಕ್ರಮವನ್ನು ಪ್ರಾಣಿಗಳಲ್ಲಿ ಖಚಿತವಾಗಿ ಪ್ರಕಟಪಡಿಸಿದ ಮೇಲೆಯೇ ಗುಂಡಿಗೆಯ ಬಗ್ಗೆ ಯೋಗ್ಯ ತಿಳಿವಳಿಕೆ ಮೂಡಿ ಬಂದು ಹೊಸ ಶೋಧಗಳಿಗೆ ಹೆಚ್ಚಿನ ಚಾಲನೆ ದೊರೆತದ್ದು. 19ನೆಯ ಶತಮಾನದಲ್ಲಿ ಬಳಕೆಗೆ ಬಂದ ಎದೆದರ್ಶಕ, ರಕ್ತ ಒತ್ತಡಮಾಪಕ ಮತ್ತು ಎಕ್ಸ್ ಕಿರಣ ಚಿತ್ರ ಮತ್ತು 20ನೆಯ ಶತಮಾನದಲ್ಲಿ ಬಳಕೆಗೆ ತರಲಾದ ಗುಂಡಿಗೆಯ ವಿದ್ಯುತ್ ಚಿತ್ರಕ, ಗುಂಡಿಗೆ ಪ್ರತಿಧ್ವನಿ ಚಿತ್ರಕ, ಗುಂಡಿಗೆಯೊಳಗೆ ನಳಿಕೆ ತೂರಿಕೆ, ಹಾಗು ರಕ್ತನಾಳ ಚಿತ್ರಣ ಗುಂಡಿಗೆ ಫುಪ್ಫುಸ ಯಂತ್ರ ಮತ್ತು ಹೃದಯದ ಮೇಲೆ ಶಸ್ತ್ರಚಿಕಿತ್ಸಾ ವಿಧಾನಗಳು ಗುಂಡಿಗೆಯ ರೋಗಗಳು ಬಗ್ಗೆ ಹೆಚ್ಚು ಅರಿವನ್ನು ಉಂಟು ಮಾಡಿವೆ. ಗುಂಡಿಗೆ ಮತ್ತು ಅದರೊಡನೆ ನೇರ ಸಂಬಂಧವಿರುವ ರಕ್ತನಾಳಗಳ ಕಾರ್ಯದಲ್ಲಿ ಬದಲಾವಣೆಯಾದಾಗ ಮನುಷ್ಯ ಗುಂಡಿಗೆಯ ರೋಗದಿಂದ ಪೀಡಿತನಾಗುತ್ತಾನೆ. ಇಂದಿನ ನಾಗರಿಕ ಜಗತ್ತಿನಲ್ಲಿ ಗುಂಡಿಗೆಯ ರೋಗದಿಂದ ನರಳುವವರ ಸಂಖ್ಯೆ ಹೆಚ್ಚುತ್ತಿದ್ದು, ಅದರಿಂದಾಗಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಿದೆ. ಗುಂಡಿಗೆಯ ರೋಗಗಳಲ್ಲಿ ಬಹುಪಾಲು ರೋಗಗಳು ನಮ್ಮ ದೇಹದ ಬೆಳೆವಣಿಗೆಯ ಕಾಲದಲ್ಲಿ ಲಭ್ಯವಾಗುತ್ತವೆ. ಕೆಲವು ಹುಟ್ಟಿನೊಡನೆಯೇ ಬರಬಹುದು. ಅದರಿಂದಾಗಿ ಗುಂಡಿಗೆಯ ರೋಗಗಳನ್ನು ಹುಟ್ಟು (ಆಜನ್ಮ) ಮತ್ತು ಅರ್ಜಿತ ಗುಂಡಿಗೆಯ ರೋಗಗಳೆಂದು ವಿಂಗಡಿಸಲಾಗಿದೆ. ಗುಂಡಿಗೆಯ ಅರ್ಜಿತ ರೋಗಗಳಲ್ಲಿ ಕೀಲುವಾತ ಸಂಬಂಧವಾದ ಹೃದಯರೋಗ, ಜೀವಾಣುಕೃತ ಹೃದಯರೋಗ, ಏರಿದ ರಕ್ತ ಒತ್ತಡ, ಗುಂಡಿಗೆ ನಾಳರೋಗ, ಫುಪ್ಪುಸ ಗುಂಡಿಗೆರೋಗ ಮತ್ತು ಇತರ ಕಾರಣಗಳಿಂದ ಬರುವ ಗುಂಡಿಗೆರೋಗಗಳಿವೆ. ಗುಂಡಿಗೆಯ ಚಟುವಟಿಕೆಯಲ್ಲಿ ವ್ಯತ್ಯಾಸ ಉಂಟಾದಾಗ ಮನುಷ್ಯ ಗುಂಡಿಗೆ ರೋಗವನ್ನು ಪಡೆಯುತ್ತಾನೆ. ರೋಗ ತನ್ನ ಇರುವಿಕೆಯನ್ನು ವಿಶಿಷ್ಟ ಲಕ್ಷಣಗಳ ಮೂಲಕ ಪ್ರಕಟಪಡಿಸುತ್ತದೆ. ಆದರೂ ಕೆಲವು ಬಾರಿ ಅದು ಯಾವುದೇ ಲಕ್ಷಣಗಳನ್ನು ತೋರ್ಪಡಿಸದೆ ಇರಬಹುದು. ಪ್ರಾಸಂಗಿಕವಾಗಿ ನಡೆಸುವ ವೈದ್ಯಕೀಯ ಪರೀಕ್ಷೆಯ ಕಾಲದಲ್ಲಿ ಗುಂಡಿಗೆಯಲ್ಲಿ ಮರ್ಮರ ಶಬ್ದ ಇಲ್ಲವೆ ದೊಡ್ಡದಾದ ಗುಂಡಿಗೆ ಇರುವುದನ್ನು ಅರಿಯಬಹುದು. ಉಬ್ಬಸ, ಎದೆನೋವು, ಎದೆ ಬಡಿದುಕೊಳ್ಳುವಿಕೆ, ಆಯಾಸ, ಕಾಲುಬಾವು ಕೆಮ್ಮು - ಈ ಪ್ರಮುಖ ಲಕ್ಷಣಗಳ ಮೂಲಕ ಗುಂಡಿಗೆರೋಗ ಪ್ರಕಟವಾಗುತ್ತದೆ. ಗುಂಡಿಗೆಯ ರೋಗದ ಇರುವಿಕೆಯನ್ನು ರೋಗದ ಇತಿಹಾಸ, ದೈಹಿಕ ಪರೀಕ್ಷೆ ಮತ್ತು ಹೃದಯ ಪರೀಕ್ಷೆಯ ಮೂಲಕ ತಿಳಿದುಕೊಳ್ಳಬಹುದು. ರಕ್ತ ಒತ್ತಡಮಾಪನ, ಕಣ್ಜಾಲದರ್ಶನ, ಎಕ್ಸ್ ಕಿರಣ ಪರೀಕ್ಷೆ ಮತ್ತು ಗುಂಡಿಗೆಯ ವಿದ್ಯುಚ್ಚಿತ್ರಣ ಗುಂಡಿಗೆ ಪ್ರತಿಧ್ವನಿ ಚಿತ್ರಣ ಇವು ರೋಗದ ಇರುವಿಕೆಯನ್ನು ದೃಢಪಡಿಸುತ್ತವೆ. ಕೆಲವು ವಿಶಿಷ್ಟ ರೋಗಗಳಲ್ಲಿ ಗುಂಡಿಗೆಯ ವಿವಿಧ ಭಾಗಗಳಲ್ಲಿ ನಳಿಕೆಯೊಂದನ್ನು ಸೇರಿಸಿ ಅಲ್ಲಿನ ರಕ್ತದ ಒತ್ತಡ ಮತ್ತು ಆಕ್ಸಿಜನ್ನಿನ ಪ್ರಮಾಣವನ್ನು ಮತ್ತು ರಕ್ತನಾಳ ಮತ್ತು ಹೃದಯದ ಚಿತ್ರಣವನ್ನು ತಿಳಿದುಕೊಳ್ಳಬಹುದು.


ಗುಂಡಿಗೆಯ ಆಜನ್ಮ ರೋಗಗಳು

ಬದಲಾಯಿಸಿ

ತಾಯಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಗುಂಡಿಗೆಯ ಅಂಗರಚನೆಯಲ್ಲಿ ತೋರಿಬರುವ ವಿಕೃತಿಯಿಂದಾಗಿ ಗುಂಡಿಗೆಯ ಆಜನ್ಮ ರೋಗಗಳು ತಲೆದೋರುತ್ತವೆ. ಗುಂಡಿಗೆಯನ್ನು ಎಡ ಬಲ ಎಂದು ವಿಂಗಡಿಸುವ ಮಧ್ಯದ ತೆರೆಯ ಬೆಳೆವಣಿಗೆ ಸಮರ್ಪಕವಾಗಿ ಆಗದೆ ರಂಧ್ರವೇರ್ಪಟ್ಟು ಎರಡು ಹೃತ್ಕರ್ಣ ಮತ್ತು ಹೃತ್ಕುಕ್ಷಿಗಳ ಮಧ್ಯೆ ಸಂಪರ್ಕವನ್ನು ಕಲ್ಪಿಸಬಹುದು. ಗುಂಡಿಗೆಯಿಂದ ಹೊರಹೊಮ್ಮುವ ಮಹಾಪಧಮನಿ ಮತ್ತು ಫುಪ್ಫುಸ ಅಪಧಮನಿಗಳ ಮಧ್ಯೆ ರಂಧ್ರ ಉಂಟಾಗಿ ಆಕ್ಸಿಜನ್ಯುಕ್ತ ಮತ್ತು ಆಕ್ಸಿಜನ್ವಿರಳರಕ್ತಗಳ ಸೇರ್ಪಡೆಯಾಗಬಹುದು. ಮಹಾಪಧಮನಿ ಮತ್ತು ಪುಪ್ಫುಸ ಅಪಧಮನಿಗಳೊಡನೆ ಸಂಪರ್ಕವನ್ನು ಉಂಟು ಮಾಡುವ ನಾಳ ಶಿಶು ಜನ್ಮತಳೆದ ಕೆಲದಿವಸಗಳಲ್ಲಿ ಮುಚ್ಚಲ್ಪಡದಿದ್ದರೆ ಇಲ್ಲವೆ ಮಹಾಪಧಮನಿ ತನ್ನ ಮಾರ್ಗ ಮಧ್ಯದಲ್ಲಿ ಕಿರಿದಾಗಿದ್ದರೆ ಗುಂಡಿಗೆಯ ರೋಗ ಉಂಟಾಗುತ್ತದೆ. ಈ ರೋಗಗಳ ತೀವ್ರತೆ ವಿವಿಧ ಮಟ್ಟಗಳದು. ಸ್ಥಳಪಲ್ಲಟಗೊಂಡು ಬಲಗಡೆಯಿರುವ ಗುಂಡಿಗೆ ಯಾವುದೇ ಲಕ್ಷಣಗಳನ್ನು ತೋರಿಸದೇ ಇರುತ್ತದೆ. ಆದರೆ ಸ್ಥಳಪಲ್ಲಟಗೊಂಡ ಮಹಾರಕ್ತನಾಳಗಳು ಜೀವದ ಉಳಿವಿಗೇ ಮಾರಕವಾಗಿ ಪರಿಣಮಿಸುತ್ತವೆ. ಗುಂಡಿಗೆಯ ಆಜನ್ಮರೋಗಗಳು ತಮ್ಮ ಲಕ್ಷಣಗಳನ್ನು ಚಿಕ್ಕ ವಯಸ್ಸಿನಲ್ಲಿ ತೋರ್ಪಡಿಸುತ್ತವೆ. ಏದುಸಿರು, ದೈಹಿಕ ದುರ್ಬಲತೆ, ಅಸಮರ್ಪಕ ಬೆಳೆವಣಿಗೆ, ಕೆಮ್ಮು ಮತ್ತು ನೀಲಿ ಛಾಯೆಯ ಚರ್ಮ ಇವೇ ಮುಂತಾದವು ಪ್ರಮುಖ ಲಕ್ಷಣಗಳು. ಕೃತಕ ರೀತಿಯಿಂದ ಆಕ್ಸಿಜನ್ನನ್ನು ಪೂರೈಕೆ ಮಾಡುವ ಗುಂಡಿಗೆ ಫುಪ್ಪುಸ ಯಂತ್ರ ಮತ್ತು ತೆರೆದ ಹೃದಯ ಚಿಕಿತ್ಸೆಯ ಮೂಲಕ ಗುಂಡಿಗೆಯಲ್ಲಿ ತೋರಿಬರುವ ವಿಕೃತಿಗಳನ್ನು ಸರಿಪಡಿಸಬಹುದಾಗಿದೆ.


ಕೀಲುವಾತ ಸಂಬಂಧದ ಗುಂಡಿಗೆರೋಗ

ಆರ್ಜಿತ ಗುಂಡಿಗೆರೋಗಗಳಲ್ಲಿ ಕೀಲುವಾತ ಸಂಬಂಧದ ರೋಗ ಪ್ರಮುಖವಾದುದು. ಉಸಿರುನಾಳದ ಮೇಲ್ಭಾಗ ಅಥವಾ ಗಂಟಲಿನಲ್ಲಿ ಬೆಳೆವಣಿಗೆ ಹೊಂದುವ ಸ್ಟ್ರೆಪ್ಟೋಕಾಕಸ್ ಅಣುಜೀವಿಯ ವಿರುದ್ಧ ದೇಹದಲ್ಲಿ ತೋರಿಬರುವ ಪ್ರತಿಕ್ರಿಯೆಯ ಫಲವಾಗಿ ಜ್ವರ, ಒಗ್ಗದಿಕೆಯ ರೂಪದಲ್ಲಿ 5 ರಿಂದ 15 ವರ್ಷದ ಎಳೆಯರಲ್ಲಿ ತೋರಿಬರುವುದು. ಒಗ್ಗದಿಕೆಯ ಪ್ರಭಾವ ಗುಂಡಿಗೆಯ ವಿವಿಧ ಪದರಗಳ ಮತ್ತು ಕವಾಟಗಳ ಮೇಲೆ ಬೀರಲ್ಪಟ್ಟು ಅಲ್ಲಿ ಊತ ಉಂಟಾಗುವುದು. ಕಾಲ ಕಳೆದಂತೆ ಕವಾಟಗಳು ಬಿರುಸಾಗಿ ಅವುಗಳ ಅಂಚು ಸೇರಿಕೊಂಡು ಗುಂಡಿಗೆಯಲ್ಲಿ ರಕ್ತ ಹರಿದುಹೋಗುವ ಮಾರ್ಗವನ್ನು ಕಿರಿದುಗೊಳಿಸುತ್ತವೆ, ಇಲ್ಲವೆ ಕವಾಟಗಳು ಮುರುಟಿಕೊಂಡು ಗುಂಡಿಗೆಯ ಸಂಕುಚನ ಕಾರ್ಯ ಜರಗುವಾಗ ಅವು ಸಂಪೂರ್ಣವಾಗಿ ಮುಚ್ಚದೆ ಮುಂದೆ ಹರಿದು ಹೋಗುತ್ತಿದ್ದ ರಕ್ತ ಹಿಂದಕ್ಕೆ ಪ್ರವಹಿಸುವಂತೆ ಮಾಡುತ್ತದೆ. ಈ ಲಕ್ಷಣಗಳು ಹೃದಯದ ಎಡಭಾಗದಲ್ಲಿರುವ ದ್ವಿದಳ ಕವಾಟ ಮತ್ತು ಮಹಾಪಧಮನಿ ಅರೆಚಂದ್ರಾಕಾರ ಕವಾಟದಲ್ಲಿ ಸಾಮಾನ್ಯವಾಗಿ ತೋರಿಬರುತ್ತವೆ. ಕಿರಿದುಗೊಂಡ ಕವಾಟ ಮತ್ತು ಅವುಗಳ ಅಸಮರ್ಪಕ ಕ್ರಿಯೆಯಿಂದಾಗಿ ಗುಂಡಿಗೆಯ ಕಾರ್ಯ ಅಸಮರ್ಪಕವಾಗುವುದು. ದಿನ ಕಳೆದಂತೆ ಅದು ದೇಹದ ವಿವಿಧ ಅಂಗಭಾಗಗಳಿಗೆ ರಕ್ತವನ್ನು ಪೂರೈಸಲು ಅಸಮರ್ಥವಾಗಿ ಗುಂಡಿಗೆ ಸೋಲುವಿಕೆಯ ಲಕ್ಷಣಗಳನ್ನು ತೋರ್ಪಡಿಸುವುದು. ಹೃದಯ ಪರೀಕ್ಷೆ ಮಾಡಿ ಎದೆಯನ್ನು ಆಲಿಸಿದಾಗ ಮರ್ಮರ ಶಬ್ದಗಳು ಕೇಳಿಬರುತ್ತವೆ. ಎಳೆಯ ವಯಸ್ಸಿನಲ್ಲಿಯೇ ಈ ರೋಗದಿಂದ ಬಳಲಿ ಸಾವನ್ನಪ್ಪುವವರ ಸಂಖ್ಯೆ ಭಾರತದಲ್ಲಿ ಅಧಿಕವಾಗಿದೆ. ದಂಡಾಣು ಜೀವಿಗಳು ದೇಹದಲ್ಲಿ ಒಗ್ಗದಿಕೆಯನ್ನು ಉಂಟು ಮಾಡಿ ಗುಂಡಿಗೆಯನ್ನು ರೋಗಯುಕ್ತವಾಗಿ ಮಾಡುತ್ತವಾದ್ದರಿಂದ ಶೀತಸ್ರಾವ ಜ್ವರವನ್ನು ತೋರ್ಪಡಿಸುವ ಮಕ್ಕಳಿಗೆ ವಿಶ್ರಾಂತಿ, ಸ್ಯಾಲಿಸಿಲೇಟ್ ಎಂಬ ಔಷಧಿ, ದೀರ್ಘಾವಧಿ ಕಾಲ ಪೆನಿಸಿಲಿನ್ ಮುಂತಾದವನ್ನು ಒದಗಿಸಿ ಜೀವಾಣುಗಳ ಬೆಳೆವಣಿಗೆಯನ್ನು ತಪ್ಪಿಸಿ ದೇಹದಲ್ಲಿ ಈ ಒಗ್ಗದಿಕೆಯನ್ನು ಹಿಡಿತದಲ್ಲಿ ತರಬಹುದು. ಗುಂಡಿಗೆಯ ರೋಗವಿರುವ ವ್ಯಕ್ತಿ ಗುಂಡಿಗೆಯ ಸೋಲುವಿಕೆ, ರೋಗಾಣುಗಳ ಬೆಳೆವಣಿಗೆಯಿಂದ ಹೃದಯದ ಒಳಪೊರೆಯುರಿಯೂತ, ರಕ್ತಕರಣೆ ತುಣುಕುಗಳು ಸಡಿಲಗೊಂಡು ದೂರಪ್ರದೇಶಗಳಿಗೆ ಹೋಗಿ ರಕ್ತಪರಿಚಲನೆಗೆ ಅಡ್ಡಿ ಇವುಗಳಿಂದ ಮಡಿಯುವ ಸಂಭಾವ್ಯತೆ ಅಧಿಕ. ಈ ತೊಡಕುಗಳು ಗೋಚರಿಸಿದಾಗ ರೋಗಿಯನ್ನು ಚಿಕಿತ್ಸೆಗೆ ಒಳಪಡಿಸಿ ರೋಗವನ್ನು ಹಿಡಿತದಲ್ಲಿ ತಂದು ಕಿರಿದಾದ ಕವಾಟವನ್ನು ಶಸ್ತ್ರಚಿಕಿತ್ಸೆಯಿಂದ ವಿಶಾಲಗೊಳಿಸಬೇಕು. ಇಲ್ಲವೆ ಅಸಮರ್ಥ ಕವಾಟಗಳ ಬದಲು ಕೃತಕ ಕವಾಟಗಳನ್ನು ಅಳವಡಿಸಬೇಕು.


ಏರಿದ ರಕ್ತದೊತ್ತಡ

ನಾಗರಿಕ ಜಗತ್ತಿನ ಕಷ್ಟತರವಾದ ಜೀವನ ಸಾಗಿಸುತ್ತಿರುವ ಅನೇಕರು ಏರಿದ ರಕ್ತದೊತ್ತಡದಿಂದ ಬಳಲುತ್ತಿರುವರು. ಈ ವ್ಯಾಧಿಯಿಂದ ಅನೇಕ ಮಧ್ಯವಯಸ್ಕರು ಸಾವಿಗೀಡಾಗುತ್ತಿದ್ದಾರೆ. ರಕ್ತದೊತ್ತಡ ಸಕಾರಣವಾಗಿ ಇಲ್ಲವೆ ಯಾವ ಕಾರಣವೂ ಗೋಚರಕ್ಕೆ ಬರದೆ ಹೆಚ್ಚಬಹುದು. ಮೂತ್ರಜನಕಾಂಗದ ಊತ, ಅದರ ರಕ್ತಪುರೈಕೆಗೆ ಅಡ್ಡಿ, ರೋಗಾಣುಗಳ ಸೋಂಕಿನಿಂದುಂಟಾದ ಮೂತ್ರಜನಕಾಂಗದ ರೋಗಗಳು, ಕಿರಿದಾದ ಮಹಾಪಧಮನಿ, ಸುಪ್ರರೀನಲ್ ಗ್ರಂಥಿಯ ವೈಪರೀತ್ಯ, ಗುರಾಣಿಕಗ್ರಂಥಿಯ ಕಾರ್ಯ ವೈಷಮ್ಯ ಮತ್ತು ಗರ್ಭಿಣಿಯರಲ್ಲಿ ಕೆಲವು ವೇಳೆ ಕಾಣಬರುವ ನಂಜು ಇವೇ ಮುಂತಾದವು ರಕ್ತದೊತ್ತಡವನ್ನು ಹೆಚ್ಚಿಸಬಲ್ಲವು. ಈ ತೆರನಾದ ಕಾರಣಗಳು ಕೆಲವು ಜನರಲ್ಲಿ ಮಾತ್ರ ಕಾಣಸಿಗುತ್ತವೆ. ಶೇ. 90 ರಷ್ಟು ರೋಗಿಗಳಲ್ಲಿ ತಿಳಿದುಕೊಳ್ಳಬಹುದಾದ ಕಾರಣ ದೊರೆಯುವುದೇ ಇಲ್ಲ. ಅವರು ಸಾಮಾನ್ಯವಾಗಿ ಮಧ್ಯ ವಯಸ್ಕರು. ಏರಿದ ರಕ್ತದೊತ್ತಡದ ಇರುವಿಕೆ ಅನೇಕರಲ್ಲಿ ಆಕಸ್ಮಿಕವಾಗಿ ಗುರುತಿಸಲ್ಪಡುವುದು. ಬಹುಮಂದಿಗೆ ಇದು ಇದ್ದರೂ ಪ್ರಕಟಿತವಾಗಿ ಯಾವುದೇ ಲಕ್ಷಣಗಳು ವೇದ್ಯವಾಗದಿರಬಹುದು. ಅಂಥವರಲ್ಲಿ ವೈದ್ಯ ಒತ್ತಡ ಹೆಚ್ಚಿರುವುದನ್ನು ತಿಳಿಸಿ ಅದರ ಬಗ್ಗೆ ಹೆದರಿಕೆಯನ್ನು ಉಂಟುಮಾಡಿ ಒತ್ತಡದ ಇನ್ನೂ ಹೆಚ್ಚು ಏರಿಕೆಗೆ ಕಾರಣನಾಗಲೂಬಹುದು. ಇನ್ನೂ ಕೆಲವರು ತಲೆನೋವು, ತಲೆಸುತ್ತು, ಉಬ್ಬಸದಂಥ ಲಕ್ಷಣಗಳನ್ನು ತೋರ್ಪಡಿಸುತ್ತಾರೆ. ಏರಿದ ರಕ್ತದೊತ್ತಡ ತನ್ನ ಪ್ರಭಾವವನ್ನು ಮೂತ್ರಜನಕಾಂಗ ಮತ್ತು ಗುಂಡಿಗೆಯ ಎಡಭಾಗದ ಮೇಲೆ ಬೀರಿ ಅವುಗಳ ಚಟುವಟಿಕೆಗಳಲ್ಲಿ ವ್ಯತ್ಯಾಸವನ್ನು ಉಂಟುಮಾಡುತ್ತದೆ. ಮಿದುಳಿನಲ್ಲಿ ರಕ್ತಸ್ರಾವವನ್ನು ಉಂಟುಮಾಡಿ ಸಾವಿಗೆ ಕಾರಣವಾಗಲೂಬಹುದು. ಏರಿದ ರಕ್ತದೊತ್ತಡವನ್ನು ಸಾಮಾನ್ಯ, ಮಧ್ಯಮ ಮತ್ತು ಪ್ರಬಲವೆಂದು ವಿಭಾಗಿಸಲಾಗಿದೆ. ಸಕಾರಣವಾಗಿ ರಕ್ತದೊತ್ತಡ ಏರಿದ್ದಲ್ಲಿ ಅದು ಮೂಲಭೂತ ಕಾರಣದ ಚಿಕಿತ್ಸೆಗೆ ಮಣಿಯುತ್ತದೆ. ಅನೇಕರಲ್ಲಿ ಏರಿಕೆಯ ಕಾರಣ ತಿಳಿಯದ್ದರಿಂದ ಅದನ್ನು ಇಳಿಸುವ ಔಷಧಿಗಳ ಉಪಯೋಗದಿಂದ (ಮೂತ್ರವರ್ಧಕಗಳು ಬೀಟಾತಡೆಗಳು, ಕಾಲ್ಸಿಯಂ ವಿರೋಧಿವಸ್ತುಗಳು ಆಂಜಿಯೊಟೆನ್ಸಿನ್ ಬದಲಿಸುವ ಕಿಣ್ವ ನಿರೋಧಕಗಳು) ಅದನ್ನು ಕೆಳಕ್ಕಿಳಿಸಿ, ರಕ್ತನಾಳಗಳ ಮೇಲೆ ಉಂಟಾಗುವ ಹಾನಿಯನ್ನು ಕಡಿಮೆ ಮಾಡಬೇಕು.


ಗುಂಡಿಗೆ ಅಪಧಮನಿ (ಕರೋನರಿ ಆರ್ಟರಿ) ಗಡಸಾಗುವುದರಿಂದ ತಲೆದೋರುವ ರೋಗಗಳು

ಗಡಸಾಗುವಿಕೆಯ ಪರಿಣಾಮವಾಗಿ ಗುಂಡಿಗೆಗೆ ರಕ್ತ ಪೂರೈಕೆ ಮಾಡುವ ಗುಂಡಿಗೆ ಅಪಧಮನಿಗಳ ಗಾತ್ರ ಕಿರಿದಾಗಿ ಗುಂಡಿಗೆಗೆ ರಕ್ತ ಪೂರೈಕೆ ಸ್ವಲ್ಪ ಮಟ್ಟಿಗೆ ಇಲ್ಲವೆ ಸಂಪುರ್ಣವಾಗಿ ತಾತ್ಕಾಲಿಕವಾಗಿ ಅಥವಾ ಬಹುಕಾಲಿಕವಾಗಿ ನಿಲುಗಡೆಗೆ ಬರಬಹುದು. ಇದು ಅತಿ ಅಪಾಯಕರ ಪರಿಸ್ಥಿತಿ. ಗುಂಡಿಗೆ ಅಪಧಮನಿಗಳ ಒಳಪದರಿನಲ್ಲಿ ಶೇಖರವಾಗುವ ಸ್ನಿಗ್ಧಪದಾರ್ಥಗಳ ಫಲವಾಗಿ ಅವುಗಳ ಗಾತ್ರ ಅಲ್ಲಲ್ಲಿ ಕಿರಿದಾಗುವುದು. ಒಳಪದರು ಮೃದುತ್ವವನ್ನು ಕಳೆದುಕೊಂಡು ಒರಟಾಗುವುದು. ಇದರಿಂದಾಗಿ ರಕ್ತಪರಿಚಲನೆ ಸ್ಥಗಿತಗೊಳ್ಳುವ ಸನ್ನಿವೇಶಗಳು ವಿಪುಲವಾಗಿವೆ. ವಯಸ್ಸಾದಂತೆ ಇಂಥ ಬದಲಾವಣೆ ದೇಹದ ಎಲ್ಲ ಭಾಗದ ರಕ್ತನಾಳಗಳಲ್ಲೂ ನಡೆಯುತ್ತಲೇ ಇರುತ್ತದೆ. ಗುಂಡಿಗೆ ಅಪಧಮನಿಯ ರಕ್ತ ಪರಿಚಲನೆ ತಾತ್ಕಾಲಿಕವಾಗಿ ತೀರ ಕಡಿಮೆಯಾದಾಗ ಅದು ಗುಂಡಿಗೆ ನೋವು ಅಥವಾ ಗುಂಡಿಗೆ ಅಪಧಮನಿಯ ತೀವ್ರ ಅರಕ್ತತೆಯ ರೂಪದಲ್ಲಿ ತೋರಿಬರುತ್ತದೆ. ಇಲ್ಲವೆ ಅಲ್ಲಿ ರಕ್ತಕರಣೆಗೊಂಡು ಶಾಶ್ವತವಾಗಿ ರಕ್ತಪರಿಚಲನೆಯ ನಿಲುಗಡೆ ಉಂಟಾಗಿ ಹೃದಯಾಘಾತದ ಲಕ್ಷಣಗಳನ್ನು ತೋರ್ಪಡಿಸುತ್ತದೆ. ದೈಹಿಕ ಶ್ರಮ ಹೆಚ್ಚಿದಾಗ ಗುಂಡಿಗೆನೋವು ಎದೆಯ ಮಧ್ಯಭಾಗದಲ್ಲಿ ಪ್ರಕಟಗೊಳ್ಳುತ್ತದೆ. ರಕ್ತಪುರೈಕೆಯ ಕೊರತೆಯಿಂದಾಗಿ ಗುಂಡಿಗೆಯ ಸ್ನಾಯುವಿಗೆ ಬೇಕಾದಷ್ಟು ಆಕ್ಸಿಜನ್ ದೊರೆಯುವುದಿಲ್ಲವಾದ್ದರಿಂದ ಈ ಕ್ಷಣಿಕನೋವು ತಲೆದೋರುವುದು. ವಿಶ್ರಾಂತಿಯ ಬಳಿಕ ಅದು ಮಾಯವಾಗುವುದು. ನೈಟ್ರೋಗ್ಲ್ಲಿಸರೀನ್ ಮಾತ್ರೆಯ ಸೇವನೆಯಿಂದ ನೋವು ಕೂಡಲೇ ಶಮನವಾಗುತ್ತದೆ. ರೋಗ ಬಲಿತಂತೆ ನೋವು ಅನುಭವವಾಗುವ ಅವಧಿ ಹೆಚ್ಚುತ್ತದೆ. ಮೊದಮೊದಲು ಶ್ರಮವಾದಾಗ ಬರುತ್ತಿದ್ದ ನೋವು ಈಗ ವಿಶ್ರಾಂತಿಸುತ್ತಿರುವಾಗಲೂ ಬರುತ್ತದೆ. ಅದು ಗುಂಡಿಗೆ ಅಪಧಮನಿಯ ತೀವ್ರ ಅರಕ್ತತೆಯ ಲಕ್ಷಣವಾಗಿದ್ದು ಮುಂದೆ ಬರಬಹುದಾದ ಹೃದಯಾಘಾತಕ್ಕೆ ನಾಂದಿಯಾಗಿ ಪರಿಣಮಿಸುವುದು. ಆಗ್ಗೆ ಕಟ್ಟುನಿಟ್ಟಿನ ವಿಶ್ರಾಂತಿ ಮತ್ತು ದೀರ್ಘಾವಧಿ ಕಾಲ ಕಿರುಫಲಕ ಅಂಟಿಕೆ ಪ್ರತಿರೋಧಕ ಕರಣೆರೋಧಕ ಔಷಧಿಗಳ ಸೇವನೆಯನ್ನು ಮಾಡುವುದರಿಂದ ಹೃದಯಾಘಾತವನ್ನು ತಡೆಗಟ್ಟುವುದು ಸಾಧ್ಯ. ಹೃದಯಾಘಾತದಲ್ಲಿ ಗುಂಡಿಗೆಯ ಒಂದು ಭಾಗಕ್ಕೆ ರಕ್ತ ಪರಿಚಲನೆಯಲ್ಲಿ ಸಂಪೂರ್ಣ ತಡೆಯುಂಟಾಗಿ ಅದು ನಿರ್ಜೀವವಾಗುವುದು. ನೋವು ರೋಗದ ಪ್ರಮುಖ ಲಕ್ಷಣ. ಅದು ಎದೆಯ ಮಧ್ಯ ತೋರಿ ಬಂದು ದೀರ್ಘಕಾಲ ಶಮನ ಹೊಂದದೆ ಇರುವುದು. ಆವೇಳೆ ದೇಹ ಬೆವರಿ ಬಿಳಿಚಿಕೊಳ್ಳುತ್ತದೆ. ನೋವಿನ ಕರಾಳ ಹಿಡಿತದೊಡನೆ ರಕ್ತಪರಿಚಲನೆಯ ಕುಸಿಯುವಿಕೆ ಅಥವಾ ಗುಂಡಿಗೆಯ ಸೋಲುವಿಕೆ ಲಕ್ಷಣಗಳು ಪ್ರಕಟವಾಗುತ್ತವೆ. ಈ ರೋಗದ ಇರುವಿಕೆಯನ್ನು ಗುಂಡಿಗೆಯ ವಿದ್ಯುತ್ ಹೃದಯ ಚಿತ್ರಣ (ಎಲೆಕ್ಟ್ರೊಕಾರ್ಡಿಯೋಗ್ರಾಂ - ಇಸಿಜಿ) ಕ್ರಿಯಟಿನ್ - ಕಿನೇಸ್-ಎಂಬಿ ಎಂಬ ಕಿಣ್ವ ಮತ್ತು ಟ್ರೊಪೊನಿನ್ ಟಿ ಮತ್ತು ಐ ಎಂಬ ಹೃದಯಕ್ಕೆ ನಿರ್ದಿಷ್ಟವಾದ ಪ್ರೋಟಿನ್ಗಳ ಏರಿಕೆ ಇರುವುದರಿಂದ ಖಚಿತಪಡಿಸುತ್ತದೆ. ರೋಗಿ ಮರಳಿ ಚೇತರಿಸಿಕೊಳ್ಳಲು ವಿಶ್ರಾಂತಿ, ನೋವನ್ನು ಶಮನಗೊಳಿಸುವ ಔಷಧಿಗಳು (ಮಾರ್ಫಿಯಾ, ಪೆಥೆಡೀನ್) ಸೇವನೆ ಕಿರುಫಲಕಗಳು ಒಗ್ಗೂಡದಂತೆ ಆಸ್ಪಿರಿನ್ ಕೊಡಬೇಕು. ಆರಕ್ತಗೊಂಡ ಹೃದಯ ಸ್ನಾಯುವಿಗೆ ಪುನಃ ರಕ್ತಪ್ರವಾಹ ಉಂಟಾಗುವಂತೆ ರಕ್ತ ಕರಣೆಯನ್ನು ಭಗ್ನಗೊಳಿಸುವ (ಥಾಂಬೊಲೈಸಿನ್) ಮತ್ತು ರಕ್ತಕರಣೆ ರೋಧಕಗಳನ್ನು ಬೀಟಾತಡೆ ಮತ್ತು ನೈಟ್ರೆಟ್ಗಳನ್ನು ಕೊಡಬೇಕು. ನಂತರ ಆಂಜೀಯೋಪ್ಲಾಸ್ಟಿ ಅಥವಾ ಬದಲಿ ರಕ್ತನಾಳ ನಾಟಿಯ ಅವಶ್ಯಕತೆಯನ್ನು ನಿರ್ಧರಿಸಲಾಗುತ್ತದೆ.


ಫುಪ್ಫುಸ ಗುಂಡಿಗೆಯ ರೋಗ

ದೀರ್ಘಕಾಲ ಧೂಮಪಾನ ಮಾಡುವ ವ್ಯಕ್ತಿಯಲ್ಲಿ ಶ್ವಾಸನಾಳದಲ್ಲಿನ ಶ್ಲೇಷ್ಮಗ್ರಂಥಿಗಳ ಸಂಖ್ಯೆ ಅಪರಿಮಿತವಾಗಿ ಅಲ್ಲಿ ಹೆಚ್ಚು ಶ್ಲೇಷ್ಮ ಉತ್ಪಾದನೆಯಾಗಿ ಹೊರಬರುತ್ತದೆ. ಇದು ಕೆಮ್ಮಿನ ರೂಪದಲ್ಲಿ ಪ್ರಕಟಗೊಂಡು ವರ್ಷ ವರ್ಷ ಬೆಳೆದು ಶ್ವಾಸನಾಳದ ಕವಲುಗಳನ್ನು ಕಿರಿದುಗೊಳಿಸಿ ಉಸಿರು ಒಳಹೋಗದಂತೆ ಮಾಡುವುದು. ಅಲ್ಲಿ ಜೀವಾಣುಗಳ ಬೆಳೆವಣಿಗೆಗೂ ಸಹಾಯಕ ವಾಗುತ್ತದೆ. ಇದರ ಫಲವಾಗಿ ಶ್ವಾಸನಾಳದ ಕವಲುಗಳು ಮತ್ತು ಅವಕ್ಕೆ ಸಂಪರ್ಕ ಪಡೆದ ರಕ್ತನಾಳಗಳಲ್ಲಿ ಅವ್ಯವಸ್ಥೆ ಉಂಟಾಗಿ ರಕ್ತ ಪರಿಚಲನೆಗೆ ತಡೆ ಉಂಟಾಗುತ್ತದೆ. ಆ ಪ್ರದೇಶದಲ್ಲಿ ರಕ್ತಪರಿಚಲನೆಯನ್ನು ಮುಂದುವರಿಸಲು ಬಲ ಹೃತ್ಕುಕ್ಷಿ ಶ್ರಮದಿಂದ ಕೆಲಸ ಮಾಡಬೇಕಾಗುವುದು. ಕ್ರಮೇಣ ಅದು, ದುರ್ಬಲಗೊಂಡು ಸೋತುಹೋಗುತ್ತದೆ. ಆ ಕಾಲದಲ್ಲಿ ಉಬ್ಬಸ, ಕಾಲುಬಾವು ಪ್ರಕಟಗೊಳ್ಳುತ್ತದೆ. ರೋಗ ಬೆಳೆವಣಿಗೆಗೊಳ್ಳದಂತೆ ತಡೆಗಟ್ಟುವಲ್ಲಿ ಧೂಮಪಾನ ನಿರೋಧವೇ ಮುಖ್ಯವಾದದ್ದು. ಚಿಕಿತ್ಸೆಯಿಂದ ಗುಂಡಿಗೆಯ ಸೋಲುವಿಕೆಯ ಲಕ್ಷಣವನ್ನು ಮತ್ತು ಜೀವಾಣುಗಳ ಬೆಳೆವಣಿಗೆಯನ್ನು ತಡೆಗಟ್ಟಬಹುದೇ ವಿನಾ ಘಾತಗೊಂಡ ಶ್ವಾಸನಾಳ ಮತ್ತು ರಕ್ತನಾಳಗಳನ್ನು ಮರಳಿ ಆರೋಗ್ಯಸ್ಥಿತಿಗೆ ತರಲು ಸಾಧ್ಯವಿಲ್ಲ.


ಇತರ ಹೃದಯ ರೋಗಗಳು

ಬದಲಾಯಿಸಿ

ಇವುಗಳಲ್ಲಿ ಜೀವಾಣುವಿನಿಂದ ಗುಂಡಿಗೆಯ ಒಳಪೊರೆಯ ಊತ, ಫರಂಗಿ ರೋಗ, ಗುರಾಣಿಕ ಗ್ರಂಥಿಯ ರೋಗಗಳು, ಆಹಾರಸತ್ತ್ವದ ಕೊರತೆ, ಗುಂಡಿಗೆ ಮೇಲುಪೊರೆಯ ರೋಗಗಳು, ರಕ್ತಹೀನತೆ, ಮಾನಸಿಕ ಅಸ್ಥಿರತೆ ಮತ್ತು ಬಡಿತದ ವೈಪರೀತ್ಯಗಳು ಮುಖ್ಯವಾದವು.


ಜೀವಾಣುವಿನಿಂದ ಗುಂಡಿಗೆಯ ಒಳಪೊರೆಯ ಊತ

ಕೀಲುವಾತ ಸಂಬಂಧವಾದ ಹೃದಯರೋಗ ಮತ್ತು ಆಜನ್ಮ ಹೃದಯರೋಗಗಳಿಂದಾಗಿ ಉಂಟಾಗಿರುವ ವಿಕೃತ ಕವಾಟಗಳು ಮತ್ತು ರಂಧ್ರಗಳು ಸ್ಟ್ರೆಪ್ಟೊಕಾಕಸ್ ವಿರಿಡನ್ಸ್ ಮತ್ತಿತರ ಅಣುಜೀವಿಗಳ ಬೆಳೆವಣಿಗೆಗೆ ಆಸ್ಪದ ಮಾಡಿಕೊಡುತ್ತವೆ. ಈ ರೋಗವನ್ನು ಪೆನಿಸಿಲಿನ್ ಜೀವಾಣು ನಿರೋಧಕವನ್ನು ಕೂಡಲೇ ಹೆಚ್ಚು ಮೊತ್ತದಲ್ಲಿ ದೀರ್ಘಕಾಲ ಕೊಡುವುದರಿಂದ ಹಿಡಿತದಲ್ಲಿ ತರಬಹುದು.


ಫರಂಗಿ ರೋಗ

ಫರಂಗಿ ರೋಗದ ಬೆಳೆವಣಿಗೆಯ ತೃತೀಯ ಹಂತದಲ್ಲಿ ಗುಂಡಿಗೆ ರೋಗಿಷ್ಠವಾಗಬಹುದು. ಎಡಹೃತ್ಕುಕ್ಷಿಯಿಂದ ಉಗಮಿಸುವ ಮಹಾಪಧಮನಿಯ ರೋಗಕ್ಕೆ ಬಲಿಯಾಗುವುದು. ಅಲ್ಲಿ ಉಂಟಾಗುವ ಅವ್ಯವಸ್ಥೆಯ ಫಲವಾಗಿ ಮಹಾಪಧಮನಿ ಹಿಗ್ಗಬಹುದು (ಡೈಲೇಟ್). ಹೀಗೆ ಹಿಗ್ಗಿದ ರಕ್ತನಾಳ ಒಡೆದು ರಕ್ತಸ್ರಾವವನ್ನು ಉಂಟು ಮಾಡಿ ವ್ಯಕ್ತಿಯ ಸಾವಿಗೆ ಕಾರಣವಾಗಬಹುದು. ಈ ಹಿಗ್ಗುವಿಕೆಯಿಂದ ಅರೆಚಂದ್ರಾಕಾರದ ಕವಾಟದ ದಳಗಳು ಮುರುಟಿಕೊಂಡು ಗುಂಡಿಗೆಯ ಸಂಕುಚನಕ್ರಿಯೆಯಲ್ಲಿ ಮಹಾಪಧಮನಿಯನ್ನು ಮುಚ್ಚಲು ಅಸಮರ್ಥವಾಗಿ ಒತ್ತಳ್ಳಿದ ರಕ್ತ ಮರಳಿ ಹರಿದು ಬರುವಂತೆ ಮಾಡುತ್ತವೆ. ಮಹಾಪಧಮನಿಯ ಆದಿಭಾಗದಲ್ಲಿಯೇ ಗುಂಡಿಗೆಯ ಅಪಧಮನಿಗಳು ಉದ್ಭವಗೊಳ್ಳುವ ಪ್ರದೇಶ ಉಂಟು. ರೋಗದ ಫಲವಾಗಿ ಈ ಅಪಧಮನಿಗಳ ದ್ವಾರಗಳು ಕಿರಿದುಗೊಂಡು ಮುಚ್ಚಿಹೋಗುವ ಸಂಭಾವ್ಯತೆಗಳು ವಿಪುಲವಾಗಿವೆ.


ಗುರಾಣಿಕ ಗ್ರಂಥಿಯ (ಥೈರಾಯಿಡ್ ಗ್ಲ್ಯಾಂಡ್) ರೋಗಗಳು

ಗುರಾಣಿಕ ಗ್ರಂಥಿ ಸಿದ್ಧಪಡಿಸುವ ರಸ ಥೈರಾಕ್ಸಿನ್, ಇದರ ಸ್ರಾವ ಹೆಚ್ಚಾದಾಗ ಇಲ್ಲವೆ ಕಡಿಮೆಯಾದಾಗ ಅದು ಗುಂಡಿಗೆಯ ಮೇಲೆ ಪರಿಣಾಮ ಬೀರಬಲ್ಲದು.


ಆಹಾರಸತ್ತ್ವದ ಕೊರತೆ ಮತ್ತು ರಕ್ತಹೀನತೆ

ರಕ್ತಹೀನತೆ ಉಂಟಾದಾಗ ದೇಹದಲ್ಲಿ ಆಕ್ಸಿಜನ್ನಿನ ಪುರೈಕೆಯನ್ನು ಕಾಯ್ದುಕೊಳ್ಳುವ ಪ್ರಯತ್ನದಲ್ಲಿ ಗುಂಡಿಗೆ ಹೆಚ್ಚು ಬಾರಿ ಸಂಕುಚನಗೊಳ್ಳಬೇಕಾಗುವುದು. ಅದರಿಂದಾಗಿ ಗುಂಡಿಗೆ ಹಿಗ್ಗುವುದು. ಕಬ್ಬಿಣದ ಅಂಶವಿರುವ ರಕ್ತವರ್ಧಕ ರೋಗಕ್ಕೆ ಮದ್ದು. ಜೀವಾತು ಬಿ - 1ರ ಅಭಾವ ಉಂಟಾದಾಗ ಸಹ ದೇಹದಲ್ಲಿ ಜಲಸಂಚಯನವಾಗಿ ಗುಂಡಿಗೆ ದೊಡ್ಡದಾಗಿ ಸೋಲುವಿಕೆಯ ಲಕ್ಷಣಗಳನ್ನು ತೋರಿಸುವುದು.


ಗುಂಡಿಗೆಯ ಮೇಲುಪೊರೆ ರೋಗಗಳು

ಗುಂಡಿಗೆಯ ಸುತ್ತ ಇರುವ ಮೇಲು ಪೊರೆ ಶೀತಸ್ರಾವ, ಕ್ಷಯಜೀವಾಣು. ಕೀವು ಉತ್ಪಾದಕ ಜೀವಾಣುಗಳ ಬೆಳೆವಣಿಗೆ ಮುಂತಾದವುಗಳಿಂದ ಊತಗೊಂಡು ಅಲ್ಲಿ ಜಲಸಂಚಯನವಾಗಬಹುದು. ಹೃದಯಾಘಾತದ ಅನಂತರವೂ ಇಲ್ಲಿ ಊತ ತೋರಿಬರಬಲ್ಲದು.


ಮಾನಸಿಕ ಅಸ್ಥಿರತೆ

ಮಾನಸಿಕ ಅಸ್ಥಿರತೆಯಿಂದ ಗುಂಡಿಗೆಯ ಕಾರ್ಯ ಅಸಮರ್ಪಕವಾಗಿರುವುದರ ಬಗ್ಗೆ ಅನೇಕರಲ್ಲಿ ಆತಂಕ ಮೂಡಿಬಂದು ಅವರು ರೋಗಿಷ್ಠರಾಗುತ್ತಾರೆ. ಆದರೆ, ಪರೀಕ್ಷೆ ಮಾಡುವಾಗ ಗುಂಡಿಗೆಯ ಕಾರ್ಯದಲ್ಲಿ ಯಾವುದೇ ತೊಡಕು ಕಂಡುಬರುವುದಿಲ್ಲ.


ಬಡಿತದ ವೈಪರೀತ್ಯಗಳು

ಸಾಮಾನ್ಯವಾಗಿ ಗಡಿಯಾರದ ರೀತಿಯಲ್ಲಿ ಕ್ರಮವಾಗಿ ಗುಂಡಿಗೆ ನಿರಂತರವಾಗಿ ಬಡಿಯುತ್ತಿರುವುದು. ಯಾವುದೇ ತೆರನಾದ ಹೃದಯರೋಗದಲ್ಲಿ ಬಡಿತದ ಗತಿ ವಿಕೃತವಾಗಬಹುದು. ಕೆಲವು ಬಾರಿ ರೋಗವಿಲ್ಲದೆ ತಾತ್ಕಾಲಿಕವಾಗಿ ಬಡಿತದ ವಿಕೃತಿ ತೋರಿರಬಹುದು. ಬಡಿತದ ವೈಪರೀತ್ಯಗಳು ವಿವಿಧ ರೀತಿಯವುಗಳಾಗಿವೆ. ಆಗಾಗ್ಗೆ ಕಾಣಿಸಿಕೊಂಡು ಗುಂಡಿಗೆ ಬಡಿತ 150ರಿಂದ 200ರ ವರೆಗೆ ಏರಬಹುದು. ಇಲ್ಲವೆ ಜೀವಕ್ಕೆ ಮಾರಕವಾಗಿ 300ಕ್ಕೆ ಏರಿ ಪಟಪಟನೆ ಬಿಡುವಿಲ್ಲದೆ ಬಡಿದುಕೊಳ್ಳಬಹುದು. ಈ ವೈಪರೀತ್ಯಗಳು ದೇಹದ ರಕ್ತಪುರೈಕೆಯಲ್ಲಿ ತೀವ್ರ ಏರಿಳಿತಗಳನ್ನು ಉಂಟುಮಾಡುತ್ತವೆ. ಹೃದಯರೋಗದಿಂದ ಹೃದಯಸ್ಪಂದನದ ಅಲೆಯ ಮಾರ್ಗದಲ್ಲಿ ತಡೆಯುಂಟಾಗಬಹುದು. ಆಗ ಹೃತ್ಕರ್ಣ ಮತ್ತು ಹೃತ್ಕುಕ್ಷಿಯ ಆಕುಂಚನದಲ್ಲಿ ಏರುಪೇರಾಗುತ್ತದೆ. ಮಿದುಳಿನ ರಕ್ತಪುರೈಕೆಗೆ ಕ್ಷಣಿಕವಾಗಿ ತಡೆ ಉಂಟಾಗಬಹುದು.


ಗುಂಡಿಗೆಯ ಸೋಲುವಿಕೆ

ಗುಂಡಿಗೆ ತನ್ನ ಕಾರ್ಯವನ್ನು ಸಮರ್ಪಕವಾಗಿ ಮಾಡಲು ಶಕ್ತಿಗುಂದಿ, ದೇಹದ ಬೇರೆ ಬೇರೆ ಅಂಗಗಳಿಗೆ ಅವಶ್ಯಕತೆ ಬೇಕಾದಂತೆ ರಕ್ತ ಪೂರೈಕೆಯನ್ನು ಮಾಡಲು ಅಸಮರ್ಥವಾದಾಗ ಸೋಲುತ್ತದೆ. ಹೃದಯ ಪರೀಕ್ಷೆ ಮಾಡಿದಾಗ ರೋಗದಿಂದಾದ ವಿಕೃತಿ ಗೋಚರವಾಗುತ್ತದೆ. ಪ್ರಾರಂಭದಲ್ಲಿ ದೇಹದ ಜೀವಕೋಶಗಳಿಗೆ ಬೇಕಾಗುವ ಆಕ್ಸಿಜನ್ನನ್ನು ಪುರೈಸಲು ಗುಂಡಿಗೆ ಹೆಚ್ಚು ಬಾರಿ ಬಡಿಯುತ್ತದೆ ಮತ್ತು ಹೀಚಿ ದೊಡ್ಡದಾಗುತ್ತದೆ. ಅನಂತರ ಅದು ಶಕ್ತಿ ಗುಂದಿ ದೇಹದ ಬೇಡಿಕೆಯನ್ನು ಪೂರೈಸಲು ಅಸಮರ್ಥವಾಗುತ್ತದೆ. ಆಗ ರೋಗಿಯಲ್ಲಿ ಏದುಸಿರು, ಉಬ್ಬಸ, ಕಾಲಿನಲ್ಲಿ ಬಾವು, ಮೂತ್ರದ ಇಳುವರಿ, ಕತ್ತಿನ ಅಭಿಧಮನಿಗಳ ಹಿಗ್ಗುವಿಕೆ ಮುಂತಾದ ಸೋಲುವಿಕೆಯ ಲಕ್ಷಣಗಳು ಪ್ರಕಟವಾಗುತ್ತವೆ. ಇವು ಏಕಾಏಕಿಯಾಗಿ ಇಲ್ಲವೆ ನಿಧಾನವಾಗಿ ಪ್ರಕಟಗೊಳ್ಳಬಹುದು. ಈ ಲಕ್ಷಣಗಳನ್ನು ವಿಶ್ರಾಂತಿ ಪಡೆಯುವುದರಿಂದ ಮತ್ತು ಸೂಕ್ತ ಔಷಧಿಗಳ ಸೇವನೆಯಿಂದ ಉಪಶಮನಗೊಳಿಸಬಹುದು.


ಗುಂಡಿಕೆಯೊಳಕ್ಕೆ ನಳಿಕೆತೂರಿಕೆ (ಕ್ಯಾಥೀಟರೈಸೇಷನ್)

ಸೂಕ್ತಗಾತ್ರದ ರಬ್ಬರ್ ಇಲ್ಲವೇ ಪ್ಲಾಸ್ಟಿಕ್ಕಿನ ತೆಳುವಾದ ಬಳುಕುವ ನಳಿಕೆಯನ್ನು ತೊಡೆಬಲ ಮೊಣಕೈಯಲ್ಲಿನ ಅಥವಾ ಅಭಿಧಮನಿಯನ್ನು (ವೇನ್) ಗಾಯಮಾಡಿ ಅದರೊಳಕ್ಕೆ ಹೊಗಿಸಿ ಕ್ರಮೇಣ ಮೇಲೆ ಮೇಲೆ ತಳ್ಳುತ್ತ ಮುಂದುವರಿದಂತೆ ನಳಿಕೆಯ ಕೊನೆ ಗುಂಡಿಗೆಯ ಬಲಭಾಗವನ್ನು ತಲಪುತ್ತದೆ. ಗುಂಡಿಗೆಯನ್ನು ಯಾವುದೇ ಬಾಹ್ಯವಸ್ತು ಸ್ಪರ್ಶಿಸುವುದು ಕೂಡ ಪ್ರಾಣಾಂತಿಕವೇ ಆಗಬಹುದು ಎಂದು ವೈದ್ಯರು ಭಾವಿಸಿದ್ದ ಕಾಲದಲ್ಲಿ ಸ್ವತಃ ತನ್ನ ಮೇಲೆಯೇ ಈ ಪ್ರಯೋಗವನ್ನು ಮಾಡಿ (1929) ಇದರ ಯಶಸ್ಸನ್ನು ಸಾರಿದವ ಜರ್ಮನಿಯ ವೈದ್ಯವಿಜ್ಞಾನಿ ವರ್ನರ್ ಫಾರ್ಸ್ ಮನ್. ಫಾರ್ಸ್ಮನ್, ವರ್ನರ್, ಥಿಯೋಡೊರ್ ಆಟೋ ಇಡೀ ಪ್ರಯೋಗವನ್ನು ಎಕ್ಸ್ ಕಿರಣ ಚಿತ್ರದಿಂದ ಕಾಣುವುದು ಸಾಧ್ಯ. ಗುಂಡಿಗೆಯ ಬಲಭಾಗದಿಂದ ನೇರವಾಗಿ ರಕ್ತದ ಮಾದರಿಯನ್ನು ಪರೀಕ್ಷೆಯ ಸಲುವಾಗಿ ಹೊರತೆಗೆಯಲು, ಗುಂಡಿಗೆ ಇಲ್ಲವೆ ಅದರ ದೊಡ್ಡ ರಕ್ತನಾಳದೊಳಗಿನ ರಕ್ತಪರಿಚಲನೆಯದರ ಹಾಗೂ ರಕ್ತದ ಒತ್ತಡವನ್ನು ಅಳೆಯಲು, ಗುಂಡಿಗೆ, ಪುಪ್ಫುಸ ಮತ್ತಿತರ ಅಂಗಗಳ ಕ್ರಿಯೆಯನ್ನು ತಿಳಿಯಲು ನಳಿಕೆತೂರಿಕೆಯ ವಿಧಾನವನ್ನು ಬಳಸುವುದುಂಟು. ಗುಂಡಿಗೆಯ ಶಸ್ತ್ರಕ್ರಿಯೆ ಮಾಡುವ ಮೊದಲು ಅದರ ಪರೀಕ್ಷೆಯನ್ನು ತೊಡೆಯ ಧಮನಿಯ ಮೂಲಕ ನಳಿಕೆತೂರಿಕೆಯ ವಿಧಾನದಿಂದ ಕೂಡ ಮಾಡಬೇಕಾಗುತ್ತದೆ. ನಳಿಕೆತೂರಿಕೆಯಿಂದ ವ್ಯಕ್ತಿಗೆ ಅಪಾಯವಿಲ್ಲ, ನೋವಿಲ್ಲವೆಂದು ಗೊತ್ತಾದ ಬಳಿಕ ಈ ವಿಧಾನ ಬಹುವಾಗಿ ಬಳಕೆಗೆ ಬಂದಿದೆ. ಚಿಕಿತ್ಸೆಯಲ್ಲಿ ರಕ್ತರಸ (ಪ್ಲಾಸ್ಮ) ಇಲ್ಲವೇ ಪೂರ್ತಿ ರಕ್ತವನ್ನು ಕೊಡುವುದರ ಪರಿಣಾಮಗಳನ್ನು ಈ ವಿಧಾನದಿಂದ ಎರಡನೆಯ ಮಹಾಯುದ್ಧ ಕಾಲದಲ್ಲಿ ಕಂಡುಕೊಳ್ಳಲಾಯಿತು. ಹುಟ್ಟಿನಿಂದ ಬಂದ ಗುಂಡಿಗೆಯ ಊನಗಳನ್ನು, ತೀರ ಕಿರಿದಾಗಿರುವ ಸಾಗುದಾರಿಗಳನ್ನು ಮತ್ತು ಗುಂಡಿಗೆಯಲ್ಲಿ ಅಸಹಜ ಕಂಡಿಗಳಿರುವುದನ್ನು ಕಂಡುಹಿಡಿಯಲು ಈ ವಿಧಾನ ಹೆಚ್ಚು ಬಳಕೆಯಲ್ಲಿದೆ. ಕಿರೀಟಕಧಮನಿಯಲ್ಲಿ ರಕ್ತ ಪ್ರವಾಹಕ್ಕೆ ತಡೆಯಿರುವ ಸ್ಥಳ ಮತ್ತು ಅದರ ವ್ಯಾಪಕತೆಯನ್ನು ಅಯೊಡೀನ್ಯುಕ್ತ ಅಪಾರಕ ವಸ್ತುವನ್ನು ನೀಡಿ ತಿಳಿದುಕೊಳ್ಳಬಹುದು. ಈ ಬಗೆಯ ಪರೀಕ್ಷೆ ಹೃದಯಾಘಾತದನಂತರ ಹೊರಗಿನಿಂದ ಯಾವುದೇ ವಸ್ತುವನ್ನು ಸೇರಿಸದೆ ಮಾಡುವ ಪರೀಕ್ಷೆಗಳು ಹೃದಯಕ್ಕೆ ಪೆಟ್ಟು ಬಿದ್ದು ಅದು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ನಿರ್ಧರಿಸಲ್ಪಟ್ಟನಂತರ ಕೈಕೊಳ್ಳಲಾಗುತ್ತದೆ. ಅದು ನಂತರ ಕೈಕೊಳ್ಳಬಹುದಾದ ಆಂಜಿಯೋಪ್ಲಾಸ್ಟಿ, ಇಲ್ಲವೆ ಸ್ಟೆಂಟ್ ಸೇರ್ಪಡೆಗೆ, ಅಥವಾ ಆ ರಕ್ತಗೊಂಡ ಹೃದಯಸ್ನಾಯುವಿಗೆ ರಕ್ತಪೂರೈಕೆಮಾಡಲು ರಕ್ತ ನಾಳನಾಟಿಮಾಡಿ ರಕ್ತಪ್ರವಾಹಕ್ಕೆ ಬದಲಿ ಮಾರ್ಗರಚನೆಯ ಶಸ್ತ್ರಕ್ರಿಯೆಗೆ ಉಪಯುಕ್ತಕರವಾಗುವುದು.