ಯೂಲ್ಸ್ ಗಿಲೆರೊನ್
(ಗಿಲೆರೊನ್, ಯೂಲ್ಸ್ ಇಂದ ಪುನರ್ನಿರ್ದೇಶಿತ)
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಗಿಲೆರೊನ್, ಯೂಲ್ಸ್ 1854-1926. ಸ್ವಿಟ್ಜರ್ಲೆಂಡಿನ ಒಬ್ಬ ಪ್ರಮುಖ ಭಾಷಾವಿಜ್ಞಾನಿ. ಹುಟ್ಟಿದ್ದು ಸ್ವಿಟ್ಜರ್ಲೆಂಡಿನ ನೂವೆವಿಲ್ ಎಂಬಲ್ಲಿ. ವಿದ್ಯಾಭ್ಯಾಸ ಮಾಡಿದ್ದು ಬಾಸೆಲ್ ಮತ್ತು ಪ್ಯಾರಿಸ್ಗಳಲ್ಲಿ. ಚಿಕ್ಕಂದಿನಿಂದಲೂ ಭಾಷಶಾಸ್ತ್ರದ ಬಗ್ಗೆ ತುಂಬ ಆಸಕ್ತಿ ಇತ್ತಾಗಿ ಅಲ್ಲಿನ ಕೆಲವು ಉಪ ಭಾಷೆಗಳನ್ನು ಅಧ್ಯಯನ ಮಾಡತೊಡಗಿದ. ಅಧ್ಯಾಪಕನಾಗಿದ್ದುಕೊಂಡು ನವ ವೈಯಾಕರಣಿಗಳ ಎಲ್ಲ ಬರೆಹಗಳನ್ನು ಆಳವಾಗಿ ಅಭ್ಯಸಿಸಿದ. ಪ್ರಮುಖ ಭಾಷಾವಿಜ್ಞಾನಿ ಜಿ.ಐ. ಓಸ್ಕಾಲಿ ಹಾಕಿಕೊಟ್ಟ ಮಾರ್ಗದಲ್ಲಿ ಮುಂದುವರಿದು ಫ್ರಾನ್ಸಿನ ಎಲ್ಲ ಉಪಭಾಷೆಗಳನ್ನು ಅತಿ ವೈಜ್ಞಾನಿಕವಾಗಿ ಅಭ್ಯಸಿಸುವ ಸಾಹಸಕ್ಕೆ ಕೈಹಾಕಿ "ಉಪಭಾಷಾ ವಿಜ್ಞಾನದ ಪಿತಾಮಹ"ನೆಂಬ ಹೆಸರಿಗೆ ಭಾಜನನಾದ.
ಗಿಲೆರೊನ್, ಯೂಲ್ಸ್ ನ ಸಾಧನೆ
ಬದಲಾಯಿಸಿ- ಹತ್ತೊಂಬತ್ತನೆಯ ಶತಮಾನದ ಅಂತ್ಯಭಾಗದಲ್ಲಿ, ಭಾಷಿಕ ಭೂಗೋಳದ ಬಗ್ಗೆ ಆಳವಾದ ಸಂಶೋಧನೆ ನಡೆಸಿದವರಲ್ಲಿ ಈತ ಮುಖ್ಯನಾದವ. ಇದೇ ಸಮಯದಲ್ಲಿ ಜರ್ಮನಿ ಮತ್ತು ಇಟಲಿಯ ಅನೇಕ ವಿದ್ವಾಂಸರು ಉಪಭಾಷಾ ಅಧ್ಯಯನವನ್ನು ಕೈಗೊಂಡಿದ್ದರು. 1876 ರಲ್ಲಿ ಜರ್ಮನಿಯ ಖ್ಯಾತ ಉಪಭಾಷಾವಿಜ್ಞಾನಿ ಜಾರ್ಜ್ ವೆಂಕರ್ ರಾಇನ್ ಪ್ರದೇಶದ ಕೆಲವು ಉಪಭಾಷೆಗಳನ್ನು ಅಭ್ಯಸಿಸಲಾರಂಭಿಸಿದ್ದ. ಇವನು ಸಂಗ್ರಹಿಸಿದ ಸಾಮಾಗ್ರಿಯನ್ನೇ ಉಪಯೋಗಿಸಿಕೊಂಡು ಯುದ್ ಮತ್ತು ಯೂಬರ್ಗ್ ಎಂಬ ವಿದ್ವಾಂಸರು ಕೆಲವು ಉಪಭಾಷಾನಕ್ಷೆಗಳನ್ನು ತಯಾರಿಸಿ ಪ್ರಕಟಿಸಿದ್ದರು. *1895 ರ ಹೊತ್ತಿಗೆ ರೀಡ್, ಫಿಶರ್ ಮುಂತಾದ ಭಾಷಾವಿಜ್ಞಾನಿಗಳು ಈ ಕಾರ್ಯದಲ್ಲಿ ಸಾಕಷ್ಟು ಜಯಶೀಲರೆನಿಸಿಕೊಂಡಿದ್ದ ಸಮಯದಲ್ಲಿ ಗಿಲೊರೆನ್ ಫ್ರಾನ್ಸಿನ ಎಲ್ಲ ಉಪಭಾಷೆಗಳನ್ನೂ ಆಳವಾಗಿ ಅಭ್ಯಸಿಸುವ ಯೋಜನೆಯನ್ನು ಕೈಗೊಂಡು ಎ. ಎಡ್ಮಾಂಟ್ ಎಂಬ ಧ್ವನಿವಿಜ್ಞಾನಿಯ ಸಹಾಯ ದಿಂದ ಫ್ರಾನ್ಸಿನ ಸುಮಾರು 639 ಕ್ಕೂ ಹೆಚ್ಚು ಸ್ಥಳಗಳ ಉಪಭಾಷಾ ಸಾಮಗ್ರಿಯನ್ನು ಸಂಗ್ರಹಿಸಿದ. 1896 ರಲ್ಲಿ ಆರಂಭಗೊಂಡ ಈ ಕಾರ್ಯ 1900 ರ ಹೊತ್ತಿಗೆ ಮುಗಿಯಿತು.
- ಹೀಗೆ ಸಂಗ್ರಹಿತವಾದ 2000 ಪದಗಳನ್ನೂ ವಾಕ್ಯಗಳನ್ನೂ ಗಿಲೆರೊನ್ ತನ್ನ ಮಿತ್ರ ಎಡ್ಮಾಂಟ್ನ ಸಹಾಯದಿಂದ ಆಳವಾಗಿ, ಅತಿ ವೈಜ್ಞಾನಿಕವಾಗಿ ಪರೀಶೀಲಿಸಿ, ವಿಶ್ಲೇಷಿಸಿ 1902-1908 ರ ಹೊತ್ತಿಗೆ ಫ್ರಾನ್ಸಿನ ಉಪಭಾಷಾನಕ್ಷೆಯೊಂದನ್ನು ಪ್ರಕಟಿಸಿದ. ಈ ನಕ್ಷೆಯ ಜೊತೆಗೆ ಗಿಲೆರೊನ್ ಇನ್ನೂ ಅನೇಕ ಗ್ರಂಥ ಹಾಗೂ ಲೇಖನಗಳನ್ನು ಬರೆದು ಪ್ರಕಟಿಸಿದ್ದಾನೆ ಇವನು ಫ್ರೆಂಚ್ ಭಾಷೆಯ ವ್ಯುತ್ಪತ್ತಿ ಕೋಶದ ನಿರ್ಮಾಣಕ್ಕೆ ಸಾಕಷ್ಟು ತಳಹದಿಯನ್ನು ಹಾಕಿಕೊಟ್ಟ.
- ಪದ ಮತ್ತು ವಸ್ತುಗಳ ನಡುವಿನ ಸಂಬಂಧವನ್ನು ಈತ ವಿವೇಚಿಸಿದ್ದಾನಲ್ಲದೆ ಧ್ವನಿ ಮತ್ತು ಲಿಪಿಗಳ ಇರುವ ಸಂಬಂಧವನ್ನು ಚರ್ಚಿಸುತ್ತ ನವ ವೈಯಾಕರಣಿಗಳ ಕೆಲವು ವಿಚಾರಗಳನ್ನು ಪ್ರಶ್ನಿಸಿದ್ದಾನೆ. ಧ್ವನಿ ಬದಲಾವಣೆಯಲ್ಲಿ ವ್ಯಕ್ತಿ ಪಾತ್ರವೇ ವಿಶಿಷ್ಟವಾದದು ಎಂಬುದು ಇವನ ಮತವಾದರೂ ಕೆಲವು ರಾಜಕೀಯ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಸನ್ನಿವೇಶಗಳೂ ಕಾರಣವಾಗುತ್ತವೆ. ಎಂಬುದನ್ನು ಈತ ಸಮರ್ಥಿಸಿದ್ದಾನೆ.
- ಪ್ರತಿಯೊಂದು ಪದಕ್ಕೂ ತನ್ನದೇ ಆದ ಇತಿಹಾಸವಿರುತ್ತದೆ-ಎಂಬುದನ್ನು ಸಂಪೂರ್ಣವಾಗಿ ಒಪ್ಪಿಕೊಂಡು ಅದನ್ನು ಸವಿಸ್ತಾರವಾಗಿ ಚರ್ಚಿಸಿದ್ದಾನೆ. ಆಗಿನ ಕಾಲದ ಭಾಷಾವಿಜ್ಞಾನ ಕ್ಷೇತ್ರದಲ್ಲಿ ನವ ವೈಯಾಕರಣಿಗಳು ಧ್ವನಿ ನಿಯಮಗಳನ್ನು ಅಪವಾದರಹಿತವೆಂದು ಹೇಳುತ್ತಿರುವುದನ್ನು ಸಕಾರಣವಾಗಿ ಖಂಡಿಸಿದ್ದಾನೆ. ಇವನ ಫ್ರಾನ್ಸ್ ಉಪ ಭಾಷಾನಕ್ಷೆ ಯಂತೂ ಈಗಲೂ ತುಂಬ ಉಪಯುಕ್ತವೆನಿಸಿಕೊಂಡಿದೆ. ಗಿಲೆರೋನನ ಮರಣಾನಂತರ ಶಿಷ್ಯರು ಅವನ ಅನೇಕ ವಿಚಾರಗಳನ್ನು ಪ್ರಚಾರಕ್ಕೆ ತಂದರು.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: