ಗಿರಿಧರ ಕವಿರಾಯ
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
18ನೆಯ ಶತಮಾನದ ಒಬ್ಬ ಹಿಂದಿ ಕವಿ. ಈತನ ಜೀವನ ವಿಷಯ ಹೆಚ್ಚಾಗಿ ಉಪಲಬ್ಧವಿಲ್ಲ. ಶಿವಸಿಂಹ ಸೇಂಗರನ ಪ್ರಕಾರ ಈತ ಹುಟ್ಟಿದ್ದು 1713ರಲ್ಲಿ. ಈತ ಭಾಟಕವಿಯಾಗಿದ್ದು ಅವಧಿ ಭಾಷೆಯಲ್ಲಿ ಕಾವ್ಯ ರಚಿಸಿದ್ದರಿಂದ ಅವಧ (ಅಯೋಧ್ಯೆ) ಪ್ರದೇಶದವನಿರಬಹುದೆಂದು ಹೇಳಬಹುದು. ಈತ ಅನೇಕ ಕುಂಡಲಿಯಗಳನ್ನು (ಆರು ಪಂಕ್ತಿಗಳ ಪದ್ಯ) ರಚಿಸಿದ್ದಾನೆ. ಈತನ ವಿಷಯದಲ್ಲಿ ಒಂದು ಕಥೆ ಪ್ರಚಲಿತವಿದೆ-
ಗಿರಿಧರನ ಮನೆಯ ಪಕ್ಕದಲ್ಲಿ ಒಬ್ಬ ಬಡಗಿ ವಿಚಿತ್ರವಾದ ಒಂದು ಮಂಚ ತಯಾರಿಸಿದ. ಯಾರಾದರೂ ಆ ಮಂಚದ ಮೇಲೆ ಕುಳಿತರೆಂದರೆ ಅದರ ಕಾಲುಗಳಿಗೆ ಅಳವಡಿಸಿದ್ದ ಗಾಳಿಚಕ್ಕೆಗಳು (ಬೀಸಣಿಗೆ) ತಮ್ಮಷ್ಟಕ್ಕೆ ತಾವೇ ತಿರುಗುತ್ತಿದ್ದುವು. ಇದನ್ನು ರಾಜನಿಗೆ ಕೊಡಲಾಯಿತು. ಇದೇ ತರಹದ ಇನ್ನೊಂದನ್ನು ಮಾಡಲು ರಾಜ ಬಡಗಿಗೆ ಆಜ್ಞೆಮಾಡಿದ. ಇದನ್ನು ತಯಾರಿಸಲು ಗಿರಿಧರನ ಅಂಗಳದಲ್ಲಿದ್ದ ಬೋರಿ ಮರ ಬೇಕೆಂದು ರಾಜನನ್ನು ಬಡಗಿ ಕೇಳಿದ. ಈ ಬೋರಿ ಮರವನ್ನು ಕಡಿಯಬಾರದಾಗಿ ರಾಜನಿಗೆ ವಿನಂತಿಸಿದರೂ ಪ್ರಯೋಜನವಾಗಲಿಲ್ಲ. ಆಗ ಸಪತ್ನೀಕನಾಗಿ ಗಿರಿಧರ ಆ ರಾಜ್ಯವನ್ನು ಬಿಟ್ಟು ಹೊರಟ. ಹೊರಟವನು ಭಾರತದಲ್ಲೆಲ್ಲ ಸಂಚರಿಸಿದ. ಈ ಸಮಯದಲ್ಲಿ ಪತಿಪತ್ನಿಯರು ಕುಂಡಲಿಯಗಳನ್ನು ರಚಿಸಿದರು ಎಂದು ಪ್ರತೀತಿ. ಸಾಈ ಎಂಬ ಶಬ್ದಪ್ರಯೋಗಿಸಿದ ಕುಂಡಲಿಯಗಳು ಆತನ ಹೆಂಡತಿ ರಚಿಸಿದುವು. ಈಕೆಯ ಪದ್ಯಗಳು ಸುಮಾರು ನಾಲ್ಕುನೂರ ಎಪ್ಪತ್ತೈದು. ಬಹುಮಟ್ಟಿಗೆ ಅವು ಕುಂಡಲಿಯಗಳೇ ಆಗಿವೆ.
ದೈನಂದಿನ ಜೀವನದಲ್ಲಿಯ ಮಹತ್ತ್ವದ ಘಟನೆಗಳನ್ನು ಸರಳವಾಗಿ ತನ್ನ ಕಾವ್ಯಗಳಲ್ಲಿ ನಿರೂಪಿಸಿರುವುದರಿಂದ ಉತ್ತರಭಾರತದ ಹಿಂದಿ ಜನರಲ್ಲಿ ಈತನ ಕುಂಡಲಿಯಗಳು ತುಂಬ ಬಳಕೆಯಲ್ಲಿವೆ. ಜನ ಆಗಿ ಹೋದ ವಿಷಯಗಳನ್ನು ಮರೆತು ಬಿಟ್ಟು ತಮ್ಮ ಭವಿಷ್ಯ ಜೀವನವನ್ನು ಸುಧಾರಿಸಲೆತ್ನಿಸಬೇಕು ಎಂಬುದು ಈತನ ಕಾವ್ಯಗಳಲ್ಲಿನ ದೃಷ್ಟಿ. ಕಾವ್ಯಗುಣವನ್ನು ಅರಸುವವರಿಗೂ ಈತನ ಕಾವ್ಯಗಳಲ್ಲಿ ಸ್ವಾರಸ್ಯ ಕಂಡುಬರುತ್ತದೆ.