ನೆಲಮಂಗಲ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ದಕ್ಷಿಣ ಕಾಶಿ ಎಂದೇ ಪ್ರಖ್ಯಾತವಾಗಿರುವ ಶಿವಗಂಗೆಯಲ್ಲಿ ಮಂಗಳವಾರ (ಜ. 14) ಪ್ರತಿ ವರ್ಷದಂತೆ ಗಿರಿಜಾ ಕಲ್ಯಾಣ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.ಶಿವಶಕ್ತಿಯರ ಆರಾಧನಾ ಕ್ಷೇತ್ರವಾದ ಶಿವಗಂಗೆ,ವೀರಶೈವ, ವೀರವೈಷ್ಣವ, ಜೈನ, ಬೌದ್ಧರ, ಶಕ್ತಿವಿಶಿಷ್ಟಾದ್ವೈತ, ಅದ್ವೈತ ಶಕ್ತಿ, ವಿಶಿಷ್ಟಾದ್ವೈತ ಸಿದ್ಧಾಂತಗಳ ಸಮನ್ವಯ ಕ್ಷೇತ್ರವಿದು. ಸಮುದ್ರ ಮಟ್ಟದಿಂದ 4.547 ಅಡಿ ಎತ್ತರದಲ್ಲಿ ಇರುವ ಬೆಟ್ಟದ ತುತ್ತತುದಿಯಲ್ಲಿ ಮಕರ ಸಂಕ್ರಾಂತಿಯ ಪರ್ವದಿನ ಕುಂಭಿ ಮೇಲಿನ ತೀರ್ಥಕಂಬದ ಬುಡದಲ್ಲಿ ಗಂಗೋತ್ಪತ್ತಿಯಾಗುತ್ತದೆ. ಆ ಗಂಗೆಯಿಂದಲೇ ಮುಡಿಯಲ್ಲಿ ಗಂಗೆಯನ್ನು ಧರಿಸಿದ ಶಿವಗಂಗೆಯ ಗಂಗಾಧರೇಶ್ವರನಿಗೆ ಧಾರಾ ಮಹೋತ್ಸವ ನಡೆಯುತ್ತದೆ.ಇದು ಇಲ್ಲಿನ ವಿಶೇಷತೆಯಾದರೆ, ಬೆಟ್ಟದ ಗುಹಾಂತರ ದೇವಾಲಯದ ವೃತ್ತಾಕಾರದ ಪಾಣಿಬಟ್ಟಲಿನ ಮೇಲಿನ ಲಿಂಗವೇ ಗಂಗಾಧರೇಶ್ವರ. ಇದು ಉದ್ಭವ ಲಿಂಗವೆಂದು ಹೇಳಲಾಗುತ್ತಿದೆ. ಆ ಲಿಂಗದ ಮೇಲೆ ತುಪ್ಪದ ಅಭಿಷೇಕ ಮಾಡಿದರೆ ಬೆಣ್ಣೆಯಾಗಿ ಪರಿವರ್ತನೆಯಾಗುತ್ತದೆ. ಇಲ್ಲಿಗೆ ಆಗಮಿಸುವ ಭಕ್ತರು, ಚಾರಣಪ್ರಿಯರು ತುಪ್ಪ ತಂದು ಗಾಂಗಾಧರೇಶ್ವರನಿಗೆ ಆ ತುಪ್ಪದಿಂದಲೇ ಅಭಿಷೇಕ ಮಾಡಿಸಿ ಬೆಣ್ಣೆ ಪ್ರಸಾದವನ್ನು ಪಡೆಯುತ್ತಾರೆ. ಶಿವಲಿಂಗದ ಎದುರು ನಂದಿ ವಿಗ್ರಹವಿದೆ.ದೇವಾಲಯದ ಎಡಭಾಗದಲ್ಲಿ ಪ್ರಸನ್ನ ಪಾರ್ವತಿ ದೇವಾಲಯ, ಮುಂಭಾಗದಲ್ಲಿ ಕೆಂಪೇಗೌಡರ ಖಜಾನೆಯ ಗುಹೆಯಿದೆ. ಅನೇಕ ಪ್ರಾಣಿ–ಪಕ್ಷಿ, ಹೂಲತೆಗಳ ಸುಂದರವಾದ ಉಬ್ಬು ಚಿತ್ರಗಳನ್ನು ಗಾರೇಕಚ್ಚಿನಿಂದ ಮಾಡಲಾಗಿದೆ. ಸ್ವಲ್ಪ ದೂರದಲ್ಲಿಯೇ ಸುಂದರ ಕೆತ್ತನೆಯ ಏಕಶಿಲಾ ಸ್ತಂಭಗಳಿಂದ ನಿರ್ಮಾಣವಾದ ಕೆಂಪೇಗೌಡರ ಹಜಾರ, ಕಲ್ಯಾಣ ಮಂಟಪ, ಸಪ್ತ ಮಾತೃಕೆಯರ ಅಷ್ಟದಿಕ್ಪಾಲಕರ ನವಗ್ರಹ ವಿಗ್ರಹಗಳನ್ನು ನೋಡುವುದೇ ಒಂದು ಭಾಗ್ಯವಾಗಿದೆ.

ಗಿರಿಜಾ ಕಲ್ಯಾಣ

ತೀರ್ಥ ಬದಲಾಯಿಸಿ

ಒಳಕಲ್ಲು ತೀರ್ಥ: ಏಕಶಿಲಾ ಗುಹಾಂತರ ಮಲೆಯ ವೀರಭದ್ರ ದೇವಾಲಯದ ಹಿಂಬದಿಯ ನೈರುತ್ಯದಲ್ಲಿ ಒಳಕಲ್ಲು ತೀರ್ಥವಿದೆ. ಇಲ್ಲಿಯ ವಿಶೇಷವೆಂದರೆ ಒಳಕಲ್ಲು ರೂಪದಲ್ಲಿರುವ ರಂಧ್ರಕ್ಕೆ ಕೈಹಾಕಿದರೆ ಕೆಲವರಿಗೆ ಮಾತ್ರ ತೀರ್ಥ ಲಭ್ಯವಾಗುತ್ತದೆ. ಅದು ಪುಣ್ಯಶಾಲಿಗಳಿಗೆ ಸಿಗುತ್ತದೆ ಎಂಬ ನಂಬಿಕೆ ಇದೆ. ಆದರೆ, ನೀರಿನ ಹರಿವಿನ ಅಲೆಗಳು ಮೇಲೆ ಬಂದಾಗ ಕೈಹಾಕಿದವರಿಗೆ ನೀರು ಸಿಗುತ್ತದೆಂಬುದು ವಾಸ್ತವ.

ನೂರೆಂಟು ಶಿವಲಿಂಗ: ಅಗಸ್ತ್ಯರು ಇಲ್ಲಿ ತಪಸ್ಸನ್ನು ಮಾಡಿ ಸ್ಥಾಪಿಸಿದ್ದು ಅಗಸ್ತ್ಯ ತೀರ್ಥ. ಅದರ ಸುತ್ತ ನೂರೆಂಟು ಶಿವಲಿಂಗಗಳು. ಸನಿಹದಲ್ಲಿ ಕಮಲ ತೀರ್ಥ, ಉತ್ತರಕ್ಕೆ ಶೃಂಗೇರಿ ಶಾರದಾ ಪೀಠ ಮತ್ತು ವಹ್ನಿ ಕುಲದ ಮಹಾಲಕ್ಷ್ಮೀ ಪೀಠವಿದೆ. ಪೂರ್ವಕ್ಕೆ ಬೃಹದಾಕಾರದ ರಾಚೋಟಿ ವೀರಭದ್ರಾಲಯದ ಎತ್ತರದ ಗಂಟೆ ಕಂಬ, ಹರಕೆ ಗಣಪ, ಪಾತಾಳಗಂಗೆಗೆ ಹೋಗುವ ಮಾರ್ಗ. ಇದೇ ಮಾರ್ಗದಲ್ಲಿ ಕ್ಷೇತ್ರದ ದೇವತೆ ಹೊನ್ನಾದೇವಿ ದೇವಾಲಯವಿದೆ.ಅದಕ್ಕೆ ಹೊಂದಿಕೊಂಡಂತೆ ಹೊನ್ನಮ್ಮಗವಿ ಮಠ, ಅದೋಗುಹಾ ಮಠ, ಪಾತಾಳಗಂಗೆ, ಶಂಕರ ತೀರ್ಥಗಳಿವೆ. ಒಟ್ಟು 68,000 ತೀರ್ಥಗಳು ಇದ್ದುದರಿಂದ ಈ ಕ್ಷೇತ್ರವನ್ನು ಅಷ್ಟಾಷಷ್ಠಿಸಹಸ್ರ ಪುಷ್ಕರಣಿ ಕ್ಷೇತ್ರ ಎಂದೂ ಕರೆಯಲಾಗುತ್ತದೆ. ಗಿರಿಜಾ ಕಲ್ಯಾಣ ಮಹೋತ್ಸವದ ಕುರುಹಾಗಿ ಪ್ರತಿವರ್ಷ ಸಂಕ್ರಾಂತಿ ದಿನ ಗಂಗಾಧರೇಶ್ವರನ ಕಲ್ಯಾಣೋತ್ಸವ ನಡೆಯುತ್ತದೆ.

ಸಮಯ ಬದಲಾಯಿಸಿ

ಜನಪದದ ದೃಷ್ಟಿಯಲ್ಲಿ ಇದು ಗಂಗಪ್ಪನ ಧಾರೆಯಾಗಿದೆ. ಬೆಟ್ಟದ ಮತ್ತೊಂದು ವಿಶೇಷವೆಂದರೆ ಪೂರ್ವಕ್ಕೆ ವೃಷಭಾಕೃತಿ, ದಕ್ಷಿಣಕ್ಕೆ ಲಿಂಗಾಕೃತಿ, ಪಶ್ಚಿಮಕ್ಕೆ ಗಣಪತಿ, ಉತ್ತರಕ್ಕೆ ಸರ್ಪಾಕೃತಿಯಾಗಿ ಕಾಣುವ ಈ ಬೆಟ್ಟಕ್ಕೆ ತನ್ನದೇ ಆದ ವೈಶಿಷ್ಟ್ಯಗಳಿವೆ. 18ನೇ ಶತಮಾನದ ಕಳಲೆ ನಂಜರಾಜ ಎಂಬ ಕವಿಯು ಕುಕುದ್ಗಿರಿ ಮಹಾತ್ಮೆ ಎಂಬ ಕಾವ್ಯವನ್ನು ರಚಿಸಿದ್ದಾನೆ. ವಿಷ್ಣುವರ್ಧನನ ಪಟ್ಟ ಮಹಿಷಿ ಶಾಂತಲಾ ದೇವಿಯು ಶಿವಗಂಗೆಯಲ್ಲಿ ಸಲ್ಲೇಖನ ವ್ರತ ಕೈಗೊಂಡು ಕೊನೆಯುಸಿರೆಳೆದಳು ಎಂದು ಕ್ರಿ.ಶ.1131ರ ಶ್ರಾವಣ ಬೆಳಗೊಳದ ಶಾಸನದಿಂದ ತಿಳಿದುಬರುತ್ತದೆ. ಶಿವಗಂಗೆ ಬೆಟ್ಟದಲ್ಲಿರುವ ಕಡಿದಾದ ಹೆಬ್ಬಂಡೆಗಳು, ವಿಶಾಲವಾದ ಇಳಿಜಾರುಗಳು ಚಾರಣಪ್ರಿಯರಿಗೆ ಸಾಹಸಿಗರಿಗೆ ಸೂಕ್ತ ಸ್ಥಳವಾಗಿದೆ. ಒಮ್ಮೆ ಬೆಟ್ಟಹತ್ತಿ ಪ್ರಕೃತಿ ವಿಸ್ಮಯ ಅರಿಯಬಹುದು.ಈ ವರ್ಷ ಮಂಗಳವಾರ ಸಂಜೆ 4:15ಕ್ಕೆ ಗಂಗೋತ್ಪತ್ತಿಯಾಗುತ್ತದೆ. ಆ ಗಂಗೆಯಿಂದಲೆ ಸಂಜೆ 5:30ಕ್ಕೆ ಗಂಗಾಧರೇಶ್ವರನಿಗೆ ಧಾರಾ ಮಹೋತ್ಸವ ಮತ್ತು ಗಿರಿಜಾ ಕಲ್ಯಾಣ ಮಹೋತ್ಸವ ನಡೆಯಲಿದೆ.

ಉಲ್ಲೇಖಗಳು ಬದಲಾಯಿಸಿ

[೧]

  1. http://www.prajavani.net/news/article/2014/01/14/219745.html[ಶಾಶ್ವತವಾಗಿ ಮಡಿದ ಕೊಂಡಿ]