ಗಿಡುಗ ಸಾಕಣೆ
ಗಿಡುಗ ಇಲ್ಲವೆ ಡೇಗ ಜಾತಿಯ ಪಕ್ಷಿಗಳನ್ನು ಹಿಡಿದು ಪಳಗಿಸಿ, ತರಬೇತಿ ನೀಡಿ ಅವನ್ನು ಛೂ ಬಿಟ್ಟು ಇತರ ಪಕ್ಷಿ, ಪ್ರಾಣಿಗಳ ಬೇಟೆಯಾಡುವ ಪದ್ಧತಿ (ಫ್ಯಾಲ್ಕನ್ರಿ). ಇದು ಅತ್ಯಂತ ಪ್ರಾಚೀನ ಕಾಲದಿಂದಲೂ ಎಂದರೆ, ಮಾನವ ಬರೆವಣಿಗೆಯನ್ನು ಕಲಿಯುವುದಕ್ಕೆ ಎಷ್ಟೋ ಕಾಲ ಮುಂಚಿನಿಂದಲೇ ಬಳಕೆಯಲ್ಲಿದೆ. ಡೇಗೆಗಾರ ಛೂ ಬಿಟ್ಟಾಗ ನುಗ್ಗಿ, ಎದುರಿಗಿನ ಪಕ್ಷಿ, ಇಲ್ಲವೆ ಪ್ರಾಣಿಯನ್ನು ಕೊಂದು ಇಲ್ಲವೆ ಗಾಯಗೊಳಿಸಿ ಅವನು ಕರೆಯುವವರೆಗೂ ಬೇಟೆಯ ಬಳಿಯೇ ಇದ್ದು ಅವನ್ನು ಬೇಟೆಗಾರನಿಗೆ ದೊರಕಿಸಿ ಕೊಡುವುದೇ ಈ ಗಿಡುಗಗಳ ಕೆಲಸ.
ಗಿಡುಗ ಬೇಟೆ
ಬದಲಾಯಿಸಿಆರಂಭದಿಂದಲೂ ಗಿಡುಗ ಬೇಟೆ ಒಂದು ಸಾಹಸಿ ಕಾಲಕ್ಷೇಪವಾಗಿ ಬೆಳೆದು ಬಂತು. ಪ್ರ.ಶ.ಪು.722-705ರಲ್ಲಿ ಅಸ್ಸಿರಿಯದ ಎರಡನೆಯ ಸಾರ್ಗಾನನ ಕಾಲದಲ್ಲಿ ಗಿಡುಗ ಶಿಕ್ಷಣ ಜೀವಂತವಾಗಿದ್ದುದಕ್ಕೆ ದಾಖಲೆಗಳಿವೆ. ಪ್ರ.ಶ.875ರಲ್ಲಿದು ಯುರೋಪ್ ಮತ್ತು ಬ್ರಿಟಿಷ್ ದ್ವೀಪಗಳಲ್ಲಿ ಉನ್ನತಿ ಗೆ ಬಂತು. ಪೌರಸ್ತ್ಯ ದೇಶಗಳಲ್ಲಿ ವ್ಯಾಪಾರಕ್ಕಾಗಿ ಸಂಚರಿಸುತ್ತಿದ್ದ ವರ್ತಕರು, ಸಾಹಸಿ ಸಮುದ್ರಯಾನಿಗಳು ಹಾಗೂ ಧರ್ಮಪ್ರಚಾರಕರು, ತಾವು ಸಂಚರಿಸಿದ ದೇಶಗಳಲ್ಲಿ ಈ ಕ್ರೀಡೆಯ ಅಭಿವೃದ್ಧಿಯನ್ನು ಕಂಡು ತಾವು ಹಿಂತಿರುಗುವಾಗ ತಮ್ಮೊಂದಿಗೆ ಡೇಗೆಗಳನ್ನೂ ಡೇಗೆಗಾರನನ್ನೂ ಕೊಂಡೊಯ್ದು, ಅವರಿಗೆ ಆಶ್ರಯವಿತ್ತು ಯುರೋಪ್ ದೇಶಗಳಲ್ಲೂ ಈ ಕ್ರೀಡೆಯನ್ನು ಅಸ್ತಿತ್ವಕ್ಕೆ ತಂದರು. ಮಧ್ಯ ಯುಗದಲ್ಲಿದು ಪ್ರತಿಷ್ಠಿತ ವರ್ಗದವರ ಮನೋರಂಜನೆಯ ಕಾಲಕ್ಷೇಪವಾಗಿ ಪರಿಣಮಿಸಿತು.
ಗಿಡುಗ ಶಿಕ್ಷಣ
ಬದಲಾಯಿಸಿ- ಗಿಡುಗಶಿಕ್ಷಣವೂ ಒಂದು ಸೂಕ್ಷ್ಮವಾದ ಕಲೆ. ಇದರ ಶಿಕ್ಷಕನಿಗೆ ಅಪಾರವಾದ ಬುದ್ಧಿಸೂಕ್ಷ್ಮತೆ, ತಾಳ್ಮೆ, ಶ್ರಮಸಹಿಷ್ಣುತೆ ಇರಬೇಕಾಗುತ್ತದೆ. ಎಲ್ಲ ಡೇಗೆಗಳೂ ಯಶಸ್ವೀ ಬೇಟೆಯ ಪಕ್ಷಿಗಳಾಗಲಾರವು. ಗಿಡುಗ, ಗೂಬೆ ಮತ್ತು ಹದ್ದುಗಳು ಸ್ವಭಾವತಃ ಹಿಂಸ್ರ ಪಕ್ಷಿಗಳೇನೋ ಸರಿ. ಅವೆಲ್ಲವೂ ಬೇಟೆಯಾಡಿಯೇ ಜೀವಿಸುತ್ತವೆ. ಆದರೆ ಅವೆಲ್ಲವೂ ಈ ಕೆಲಸವನ್ನು ನಿರ್ವಹಿಸಲಾರವು. ಡೇಗೆಗಾರ ಈ ಎಲ್ಲ ಪಕ್ಷಿಗಳ ಸ್ವಭಾವ ಲಕ್ಷಣಗಳನ್ನರಿತು, ವಿಶಿಷ್ಟ ವರ್ಗದ ಹಕ್ಕಿಮರಿಗಳನ್ನು ಮಾತ್ರ ಆಯ್ದು ಶಿಕ್ಷಣ ಕೊಡಬೇಕಾಗುತ್ತದೆ. ಪೆರಿಗ್ರಿನ್ ಡೇಗೆ ಪ್ರಪಂಚಾದ್ಯಂತ ವಾಸಿಸುತ್ತದೆ.
- ಇದು ಶ್ರೇಷ್ಠ ಬೇಟೆಯ ಪಕ್ಷಿಯೆಂದು ಹೆಸರುಗೊಂಡಿದೆ. ಡೇಗೆಗಾರ ಬಯಸುವ ಎಲ್ಲ ಲಕ್ಷಣಗಳೂ ಸ್ವಭಾವಗಳೂ ಗುಣಗಳೂ ಈ ಡೇಗೆಯಲ್ಲಿವೆ. ಇದು ಯಾವುದೇ ದೇಶದ ಹವಾ ವೈಪರೀತ್ಯಗಳನ್ನೂ ಸಹಿಸಿಕೊಂಡು ಹೊಂದಿಕೊಳ್ಳಬಲ್ಲದು. ಪಕ್ಷಿ ಬಲಿಷ್ಠ, ತೀವ್ರವಾಗಿ ಚಲಿಸಬಲ್ಲದು. ಅಗತ್ಯ ಕ್ಕನುಗುಣವಾಗಿ ಸೌಮ್ಯವಾಗಿಯೂ ಉಗ್ರವಾಗಿಯೂ ಇರಬಲ್ಲದು. ಡೇಗೆಗಳು ಶಿಕ್ಷಕನ ಮನಸ್ಸನ್ನು ಬಹುಬೇಗ ತಿಳಿಯಬಲ್ಲವುಗಳಾಗಿರುವುದರಿಂದ ಅವುಗಳ ಶಿಕ್ಷಣ ಸುಲಭ.
- ಡೇಗೆಗಳಲ್ಲಿ ಹನ್ನೆರಡು ವರ್ಗಗಳಿವೆ. ಅವುಗಳಲ್ಲಿ ಎರಡು ವರ್ಗದ ಡೇಗೆಗಳು ಮಾತ್ರ ಈ ಕೆಲಸಕ್ಕೆ ಯೋಗ್ಯವೆನಿಸಿ ವೆ. ನೀಳ ರೆಕ್ಕೆಯ ಡೇಗೆ ಮತ್ತು ಗಿಡ್ಡರೆಕ್ಕೆಯ ಡೇಗೆಗಳು ವಿಶೇಷವಾಗಿ ಡೇಗೆಗಾರರ ಮನಸ್ಸನ್ನು ಸೆಳೆದಿವೆ. ದೊಡ್ಡ ಹೆಣ್ಣು ಗಿಡುಗವನ್ನು ಮಾತ್ರ ಡೇಗೆಯೆಂದು ಕರೆಯು ತ್ತಾರೆ. ಗಂಡು ಇದಕ್ಕಿಂತ ತುಂಬ ಚಿಕ್ಕದು. ಪೂರ್ಣ ಬೆಳೆದಿದ್ದು ಇನ್ನೂ ಹಾರಲು ಬಾರದಿರುವ ಡೇಗೆ ಮರಿಯನ್ನು ಐಯಸ್ (ಗೂಡಿನಲ್ಲಿನ ಮರಿ) ಎಂದೂ ಅರಣ್ಯದ ಮರದ ಪೊಟರೆಯಿಂದ ಹೊರತೆಗೆದ ಮರಿಯನ್ನು ದಾರಿ ಹೋಕ ಹಕ್ಕಿ ಎಂದೂ ಕರೆಯುತ್ತಾರೆ. ವಲಸೆ ಹೋಗುತ್ತಿದ್ದ ಗಿಡುಗನ ಮರಿಯಾಗಿದ್ದರಿಂದ ಎರಡನೆಯದಕ್ಕೆ ದಾರಿ ಹೋಕ ಹಕ್ಕಿ ಎಂಬ ಹೆಸರು ಬಂದಿದೆ. ಯುರೋಪು ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಐಯಸ್ಗಳ ಬಳಕೆ ಹೆಚ್ಚು. ಆಫ್ರಿಕ ಮತ್ತು ಭಾರತಗಳಲ್ಲಿ ಅರಣ್ಯ ಡೇಗೆಗಳನ್ನೇ ಹಿಡಿದು ಪಳಗಿಸುತ್ತಾರೆ.
ಕೆಲಸ ನಿರ್ವಹಣೆ
ಬದಲಾಯಿಸಿ- ಡೇಗೆಗಾರ ತನ್ನ ಪ್ರದೇಶ ಪರಿಸ್ಥಿತಿಗಳಿಗನುಸಾರವಾಗಿ ಡೇಗೆಯ ಮರಿಗಳನ್ನು ಆರಿಸಬೇಕಾಗುತ್ತದೆ. ನೀಳ ರೆಕ್ಕೆಯ ಗಿಡುಗಗಳು ಬಯಲು ಪ್ರದೇಶದಲ್ಲೂ ಗಿಡ್ಡ ರೆಕ್ಕೆಯ ಗಿಡುಗಗಳು ಅರಣ್ಯ ಹಾಗೂ ಕುರುಚಲು ಗಿಡಗಳ ಪ್ರದೇಶಗಳಲ್ಲೂ ಚೆನ್ನಾಗಿ ಕೆಲಸ ನಿರ್ವಹಿಸುತ್ತವೆ. ನೀಳರೆಕ್ಕೆಯ ಗಿಡುಗ ಬಯಲು ಪ್ರದೇಶದಲ್ಲಿ ಅತಿ ಎತ್ತರದಲ್ಲಿ ಹಾರಾಡುತ್ತಿದ್ದು, ಶಿಕಾರಿ ಕಣ್ಣಿಗೆ ಬೀಳುತ್ತಿದಂತೆ ಶರವೇಗದಲ್ಲಿ ಆಕ್ರಮಣ ಮಾಡಿ ಕೊಲ್ಲುತ್ತದೆ. ಗಿಡ್ಡ ರೆಕ್ಕೆಯ ಡೇಗೆ ಎತ್ತರವಾದ ಮರಗಳ ಮೇಲೆ ಸುರಕ್ಷಿತ ಸ್ಥಳದಲ್ಲಿ ಕುಳಿತು ಬೇಟೆಗೆ ನಾಯಿ ಹಾಗೂ ಸೋಹುಗಾರರು ಎಬ್ಬಿಸಿದ ಪ್ರಾಣಿಗಳ ಮೇಲೆ ಒಂದೆ ಬಾರಿಗೆ ಎರಗಿ, ತನ್ನ ತೀವ್ರ ನಖಗಳಿಂದ ಅದನ್ನು ಹಿಡಿದು ಮೇಲಕ್ಕೆ ಹಾರಿ ನಿಧಾನವಾಗಿ ಕೆಳಕ್ಕೆ ತರುತ್ತದೆ.
- ಹವ್ಯಾಸಿ ಡೇಗೆಗಾರ ಐಯಸ್ಗಳನ್ನೇ ಆಯ್ದುಕೊಂಡು ಶಿಕ್ಷಣ ನೀಡುತ್ತಾನೆ. ಅನುಭವಿ ಶ್ಯೇನಗಾರ ಕಾಡು ಗಿಡುಗವನ್ನು ಹಿಡಿದು ಪಳಗಿಸುತ್ತಾನೆ. ಕಾಡು ಗಿಡುಗವನ್ನು ಹಿಡಿಯುವುದು ಸ್ವಲ್ಪ ಕಷ್ಟದ ಕೆಲಸ. ಬಲೆಯೊಡ್ಡಿ ಅದನ್ನು ಹಿಡಿಯಬೇಕಾಗುತ್ತದೆ. ಹಿಡಿದ ಅನಂತರ ಡೇಗೆಯ ಕಾಲಿನ ಚರ್ಮದ ಪಟ್ಟಿ ಕಟ್ಟಿ, ಮೃದುಚರ್ಮದ ಮುಖ ಕವಚ ತೊಡಿಸುತ್ತಾರೆ; ಕಾಲಿಗೆ ಕಿರುಗಂಟೆಗಳನ್ನು ಕಟ್ಟುತ್ತಾರೆ. ಈ ಗಂಟೆಗಳಿಂದ ಒಂದು ಅನುಕೂಲವಿದೆ. ಕಾಡಿನಲ್ಲಿ ಗಿಡುಗ ಬೇಟೆಗಾಗಿ ನುಗ್ಗಿದಾಗ ಅದು ಯಾವ ಕಡೆ ಇದೆ ಎಂಬುದನ್ನು ಗಂಟೆಯ ದನಿಯಿಂದ ತಿಳಿಯಲು ಸಾಧ್ಯ.
- ಅನಂತರ ಡೇಗೆಯ ಶಿಕ್ಷಣ ಆರಂಭವಾಗುತ್ತದೆ. ಡೇಗೆಯ ಉಗುರುಗಳು ಅತಿ ಚೂಪಾಗಿರುವುದರಿಂದ ಶಿಕ್ಷಣ ಸಮಯದಲ್ಲಿ ಶಿಕ್ಷಕ ತನ್ನ ಕೈಗಳಿಗೆ ಚರ್ಮದ ಕವಚ ಧರಿಸುತ್ತಾನೆ. ಒಂದು ಕೈಯಲ್ಲಿ ಪಕ್ಷಿಯನ್ನು ಹಿಡಿದು ಮತ್ತೊಂದು ಕೈಯಿಂದ ಬೆನ್ನಮೇಲೆ ಮೃದುವಾಗಿ ಕೈಯಾಡಿಸುತ್ತ ಅದನ್ನು ಒಗ್ಗಿಸಿಕೊಳ್ಳುತ್ತಾನೆ. ತನ್ನ ಕೈಯಿಂದಲೇ ಅದಕ್ಕೆ ಆಹಾರ ಉಣಿಸುತ್ತಾನೆ. ಒಮ್ಮೊಮ್ಮೆ ಕಣ್ಕವಚವನ್ನು ತೆಗೆದು, ಮುಚ್ಚಿ ಮಾಡುತ್ತಾನೆ. ಬಹುಕಾಲ ಹೀಗೆ ಮಾಡಿದ ಮೇಲೆ ಡೇಗೆ ಅವನ ವಿಶಿಷ್ಟ ಭಾಷೆಗೆ, ಸಹವಾಸಕ್ಕೆ ಹೊಂದಿಕೊಳ್ಳುತ್ತದೆ.
- ಹೀಗೆ ಹೊಂದಿಕೊಂಡ ಮೇಲೆ ಕಣ್ಕವಚ ತೆಗೆದು ಆಹಾರ ಕೊಡುತ್ತಾನೆ. ಮುಂದೆ ಬೇಟೆಯ ಶಿಕ್ಷಣ ಆರಂಭವಾಗುತ್ತದೆ. ಹಸಿ ಮಾಂಸಕ್ಕೆ ಪಕ್ಷಿಯಾಕಾರದಲ್ಲಿ ಪುಕ್ಕಗಳನ್ನು ಸಿಕ್ಕಿಸಿ, ಉದ್ದವಾದ ತೊಗಲು ಭಾರವನ್ನು ಹೊಂದಿಸಿ ಡೇಗೆಯ ಎದುರಿಗೆ ಅದನ್ನು ಮೇಲೆ ಎಸೆದು ಡೇಗೆಯನ್ನು ಬಿಡುತ್ತಾನೆ. ಡೇಗೆ ಅದರತ್ತ ಹಾರಿ ಅದು ನೆಲಕ್ಕೆ ಬೀಳುವ ಮುಂಚೆಯೇ ಅದನ್ನು ಕಾಲುಗಳಿಂದ ಹಿಡಿದು ಶಿಕ್ಷಕನ ಬಳಿಗೆ ಬರುತ್ತದೆ. ಈ ರೀತಿ ಪುರ್ಣ ಪಳಗಿದ ಮೇಲೆ ಅದು ಬೇಟೆಯಾಡಲು ತಯಾರಾಯಿತು ಎಂದು ಅರ್ಥ.
ಸೈನ ಶಿಕ್ಷಣಪದ್ಧತಿ
ಬದಲಾಯಿಸಿ- ಸರಿಸುಮಾರಾಗಿ ಐಯಸ್ ಮರಿಗಳಿಗೂ ಇದೇ ಬಗೆಯ ಶಿಕ್ಷಣ ಕೊಡುತ್ತಾರೆ. ಇದು ಪ್ರಾಚೀನ ಕಾಲದಿಂದಲೂ ನಡೆದು ಬಂದಿರುವ ಸೈನಶಿಕ್ಷಣ ಪದ್ಧತಿಯಾಗಿದೆ. ಆಧುನಿಕ ಜಗತ್ತಿನಲ್ಲಿ, ಬಂದೂಕ ಬಂದು, ಜನ ಬಯಲು ಪ್ರದೇಶಗಳನ್ನು ವಸತಿಗೋ ವ್ಯವಸಾಯಕ್ಕೋ ಆಕ್ರಮಣ ಮಾಡ ತೊಡಗಿದಾಗ ಹಾಗೂ ಪುರಾತನ ರಾಷ್ಟ್ರಗಳಲ್ಲುಂಟಾದ ಸಾಮಾಜಿಕ ಬದಲಾವಣೆಗಳಿಂದಾಗಿ ಶ್ಯೇನಶಿಕ್ಷಣ ಕೇಳಿ ಕಣ್ಮರೆಯಾಗುತ್ತ ಬಂತು. ಇದರಲ್ಲಿ ಅಲ್ಪಸ್ವಲ್ಪ ಆಸಕ್ತಿ ಮತ್ತೆ ಕುದುರಿದ್ದು ಎರಡನೆಯ ಮಹಾಯುದ್ಧದ ತರುವಾಯ. ಸೈನಶಿಕ್ಷಣಪದ್ಧತಿ ಹಾಗೂ ಸಾಹಿತ್ಯಗಳ ಬಗ್ಗೆ ವಿಶೇಷ ಆಸಕ್ತಿಹೊಂದಿದ ಸಾವಿರದ ಐನೂರಕ್ಕಿಂತ ಹೆಚ್ಚು ಜನ ಈಗ ಸಂಯುಕ್ತ ಸಂಸ್ಥಾನ ಒಂದರಲ್ಲೇ ಇದ್ದಾರೆ. ಈ ಹೊಸ ಆಸಕ್ತಿಯಿಂದಾಗಿ ಯುರೋಪಿನ ವಿವಿಧ ರಾಷ್ಟ್ರಗಳಲ್ಲಿ ಹೊಸ ಹೊಸ ಡೇಗೆಗಾರ ಕ್ಲಬ್ಬುಗಳು ಹುಟ್ಟಿಕೊಂಡುವು.
- 1770ರಲ್ಲಿ ಬ್ರಿಟಿಷ್ ದ್ವೀಪಗಳಲ್ಲಿ ಫಾಲ್ಕನರ್ಸ್ ಸೊಸೈಟಿ ಹುಟ್ಟಿಕೊಂಡಿತು. ಆದರೆ ಇದರ ಮೇಲ್ವಿಚಾರಕ ಲಾರ್ಡ ಬರ್ನರ್ಸ್ ನಿಧನಾನಂತರ ಈ ಸೊಸೈಟಿಯೂ ಕಣ್ಮರೆಯಾಯಿತು. ಇಂಗ್ಲೆಂಡಿನ ಡೇಗೆಗಾರ ಕೇಂದ್ರ ಈಸ್ಟ್ ಆಂಗ್ಲಿಯ ಪ್ರದೇಶದಲ್ಲಿ ಹೆರಾನ್ ಪಕ್ಷಿಗಳ ಅಭಾವದಿಂದಾಗಿಯೂ ಬಂಜರು ಭೂಮಿಯ ಉಳುವಿಕೆಯಿಂದಾಗಿಯೂ ನೆದರ್ಲೆಂಡ್ಸ್‌ಗೆ ವರ್ಗಾವಣೆ ಗೊಂಡಿತು. 1839ರಲ್ಲಿ ನೆದರ್ಲೆಂಡ್ಸಿನ ದೊರೆ ಎರಡನೆಯ ವಿಲಿಯಂನ ಪೋಷಕತ್ವದಲ್ಲಿ ಲೂ ಹಾಕಿಂಗ್ ಕ್ಲಬ್ ಸ್ಥಾಪಿತವಾಯಿತು. ಈ ಕ್ಲಬ್ಬಿನ ಮೊದಲ ಎಂಟು ವರ್ಷಗಳ ಅವಧಿಯಲ್ಲಿ, ಸಂಸ್ಥೆಗೆ ಸೇರಿದ ಡೇಗೆಗಳು ಸಾವಿರದ ಐನೂರು ಶಿಕಾರಿಗಳನ್ನು ಹಿಡಿದಿದ್ದವಂತೆ. 1853ರ ಹೊತ್ತಿಗೆ ರಾಜಾಶ್ರಯವನ್ನು ಕಳೆದುಕೊಂಡ ಈ ಕ್ಲಬ್ಬು ಕಣ್ಮರೆಯಾಯಿತು.
- ಕೆಲವು ವಿಲಾಸಿ ಡೇಗೆಗಾರರ ಹಾಗೂ ಉದ್ಯೋಗಸ್ಥರ ಸತತ ಪ್ರಯತ್ನದ ಫಲವಾಗಿ ಇಂಗ್ಲೆಂಡಿನಲ್ಲಿ ಮತ್ತೆ ಗಿಡುಗರಕ್ಷಕಸಂಘಗಳು ಹುಟ್ಟಿಕೊಂಡವು. 1864ರಲ್ಲಿ ವಿಲ್ಟ್‌ಶಿರ್ ನಗರ ಪ್ರದೇಶದ ರೂಕ್ ಪಕ್ಷಿಗಳನ್ನು ಬೇಟೆಯಾಡಲು ಓಲ್ಡ್ ಹಾಕಿಂಗ್ ಕ್ಲಬ್ ಸ್ಥಾಪಿತವಾಗಿ 1926ರ ವರೆಗೂ ನಡೆದು ಬಂತು. ಪುನಃ 1927ರಲ್ಲಿ ಬ್ರಿಟಿಷ್ ಫಾಲ್ಕನರ್ಸ್ ಕ್ಲಬ್ ಆರಂಭವಾಯಿತು. ಇಪ್ಪತ್ತನೆಯ ಶತಮಾನದ ದ್ವೀತಿಯಾರ್ಧದಲ್ಲಿ ಕ್ಲಬ್ಬಿನ ಸದಸ್ಯ ನೂರ ಐವತ್ತಕ್ಕಿಳಿಯಿತು. ಇವರಲ್ಲಿ ಅರ್ಧದಷ್ಟು ಜನ ಸಂಯುಕ್ತ ಸಂಸ್ಥಾನಗಳಿಗೆ ವಲಸೆ ಹೋದರು. ಅಲ್ಲಿಯೂ ಈ ಕೇಳಿಯನ್ನು ಸ್ವಲ್ಪ ಜನ ಉಳಿಸಿಕೊಂಡು ಬಂದರು. ಕ್ರಮೇಣ ಬೇಟೆಯ ವಿಚಾರದಲ್ಲಿಯೇ ಜನತೆಯ ಅಭಿಪ್ರಾಯ ವ್ಯತ್ಯಾಸವಾಗುತ್ತ ಬಂತು.
ಪಕ್ಷಿಗಳ ಸಂರಕ್ಷಣೆ
ಬದಲಾಯಿಸಿ- ವನ ಮತ್ತು ವನ್ಯಮೃಗಗಳ ಸಂರಕ್ಷಣೆಗೆ ಪ್ರಾಮುಖ್ಯ ಬಂತು. ಡೇಗೆಯ ಬೇಟೆಗೆ ಗುರಿಯಾಗಿದ್ದ ಹಲವಾರು ಪಕ್ಷಿ, ಪ್ರಾಣಿಗಳು ಸಾಮ್ರಾಜ್ಯದ ಸಂರಕ್ಷಕ ಪ್ರಾಣಿ ಪಕ್ಷಿಗಳ ಪಟ್ಟಿಯನ್ನು ಸೇರಿದವು. ಡೇಗೆಗಾರರು ಗೃಹ ಇಲಾಖೆಯ ರಹದಾರಿ ಪಡೆದೇ ಬೇಟೆಯಾದಡಬೇಕೆಂಬ ನಿಯಮ ಜಾರಿಗೆ ಬಂತು. ಡೇಗೆಗಾರರ ಆಸಕ್ತಿ ಕಡಿಮೆಯಾಗಲು ಇದು ಪ್ರಮುಖ ಕಾರಣವಾಯಿತು. ಯುರೋಪಿನ ಹಲವಾರು ರಾಷ್ಟ್ರಗಳಲ್ಲಿ ಡೇಗೆಗಾರರ ಕ್ಲಬ್ಬುಗಳು ಅಸ್ತಿತ್ವದಲ್ಲಿವೆಯಾದರೂ ಅವುಗಳ ಕಾರ್ಯಕಲಾಪಗಳಿಗೆ ಅನೇಕ ಕಾರಣಗಳಿಂದಾಗಿ ಒಂದು ಮಿತಿ ಏರ್ಪಟ್ಟಿದೆ. ಫ್ರಾನ್ಸಿನ ಡೇ ಫ್ಯಾಂಪೇನ್ 1870ರಲ್ಲಿ ಕಣ್ಮರೆಯಾಯಿತು. ಅನಂತರ ಫ್ರಾನ್ಸಿನ ಡೇಗೆಗಾರರು ಅಸೋಸಿಯೇಷನ್ ನ್ಯಾಷನಲೆ ಡೆಸ್ ಫಾಕನಿಯರ್ಸ್ ಎಟ್ ಡೆಟೋರ್ಸಿರ್ಸ್ ಫ್ರಾಂಕಾಯ್ ಸಂಘದ ಮೂಲಕ ಒಂದು ಗೂಡಿದರು.
- ಜರ್ಮನಿಯಲ್ಲಿ ಆಯಟ್ಶರ್ ಫಾಲ್ಕೆನೋರ್ಡೆನ್ 1923ರಲ್ಲಿ ಆರಂಭವಾಗಿ ಇಂದಿಗೂ ಅಸ್ಥಿತ್ವದಲ್ಲಿದೆ. ಇಟಲಿ ಮತ್ತು ಆಸ್ಟ್ರಿಯಗಳಲ್ಲೂ ಇಂಥ ಕ್ಲಬ್ಬುಗಳು ಉಳಿದು ಬಂದಿವೆ. ಸಿರೆನೇಯಿಕದ ಅರಬರು, ಪರ್ಷಿಯನ್ ಕೊಲ್ಲಿ ಹಾಗೂ ಸೌದೀ ಅರೇಬಿಯದ ತೈಲ ಶ್ರೀಮಂತ ಷೇಕರು ಇಂದಿಗೂ ಡೇಗೆ ಸಾಕಣೆ, ಶಿಕ್ಷಣ ಹಾಗೂ ಬೇಟೆಗಳಿಗೆ ಪ್ರೋತ್ಸಾಹ ಕೊಡುತ್ತಿದ್ದಾರೆ. ಭಾರತ ಮತ್ತು ಪಾಕಿಸ್ತಾನಗಳ ಪಂಜಾಬ್ ಹಾಗೂ ವಾಯುವ್ಯ ಗಡಿ ಪ್ರದೇಶಗಳಲ್ಲಿ ಇಂದಿಗೂ ಡೇಗೆಗಳನ್ನು ಪಳಗಿಸಿ ಬಾತುಕೋಳಿಗಳನ್ನು ಹಿಡಿಯುತ್ತಾರೆ. ವಿಶ್ವವಿಖ್ಯಾತ ಗಿಡುಗಗಂಟೆಗಳನ್ನು ಭಾರತ ಪಾಕಿಸ್ತಾನಗಳ ಅಮೃತಸರ ಹಾಗೂ ಲಾಹೋರ್ಗಳಲ್ಲಿ ಇಂದಿಗೂ ತಯಾರಿಸುತ್ತಿದ್ದಾರೆ.
- ಭರತಖಂಡದಲ್ಲಿ ಈ ಕ್ರೀಡೆ ಅತ್ಯಂತ ಪ್ರಾಚೀನ ಕಾಲದಿಂದಲೂ ಇದ್ದು, ಮೊಗಲರ ಮತ್ತು ರಜಪುತ ದೊರೆಗಳ ಕಾಲದಲ್ಲಿ ರಾಜಾಶ್ರಯ ಪಡೆದಿತ್ತೆಂದು ತಿಳಿದುಬರುತ್ತದೆ. ಇಂದಿಗೂ ಬಹು ಮಂದಿ ಅರಣ್ಯವಾಸಿಗಳು, ಬೇಟೆಗಾರ ಜನಾಂಗಗಳು ಡೇಗೆ ಜಾತಿಯ ಹಲವು ಪಕ್ಷಿಗಳನ್ನು ಸಾಕಿ, ಬೇಟೆಯಾಡಿಸುವ ಕಸುಬನ್ನು ಉಳಿಸಿಕೊಂಡು ಬಂದಿದ್ದಾರೆ.