ಗಾಹದ್ವಾಲ ಮನೆತನ
ಗಾಹದ್ವಾಲ ಮನೆತನ ೧೧
ನೆಯ ಶತಮಾನದ ಉತ್ತರಾರ್ಧದಲ್ಲಿ ಉತ್ತರ ಭಾರತದ ಕನೌಜಿನಲ್ಲಿ ಅಧಿಕಾರಕ್ಕೆ ಬಂದ ಒಂದು ರಾಜಮನೆತನ. ಇದು ರಾಷ್ಟ್ರಕೂಟರ ಅಥವಾ ರಾಥೋರರ ವಂಶದ ಒಂದು ರಾಜಮನೆತನ. ಇದು ರಾಷ್ಟ್ರಕೂಟರ ಅಥವಾ ರಾಥೋರರ ವಂಶದ ಒಂದು ಶಾಖೆಯೆಂಬುದು ಕೆಲವರ ಅಭಿಪ್ರಾಯವಾದರೂ ಇದಕ್ಕೆ ಸಾಕಷ್ಟು ಆಧಾರಗಳಿಲ್ಲ. ಕಳಚುರಿ ಲಕ್ಷ್ಮೀಕರ್ಣನ ಮಾಂಡಲಿಕನಾಗಿದ್ದ ಯಶೋವಿಗ್ರಹ ಈವರೆಗೆ ತಿಳಿದುಬಂದಿರುವ ಮೊದಲ ದೊರೆ. ಇವನ ಮಗ ಮಹೀಚಂದ್ರ. ಇವನಿಗೆ ಮಹೀತಲ, ಮಹೀಯಲ, ಎಂದೂ ಹೆಸರುಗಳಿದ್ದವು. ಈತ ಉತ್ತರ ಪ್ರದೇಶದ ಕೆಲವು ಭಾಗಗಳನ್ನಾಳುತ್ತಿದ್ದ. ಮಹೀಚಂದ್ರನ ಅನಂತರ ಪಟ್ಟಕ್ಕೆ ಬಂದವನು ಅವನ ಮಗ ಚಂದ್ರದೇವ. ಉತ್ತರ ಭಾರತದಲ್ಲಿ ಪ್ರಬಲರಾಗಿದ್ದ ಪರಮಾರ ಭೋಜ ಮತ್ತು ಕಳಚುರಿ ಕರ್ಣರ ಕಾಲದಲ್ಲಿ ಆಕ್ರಮಣ ಮಾಡಲು ಹೆದರಿ ಹಿಂದೆಗೆಯುತ್ತಿದ್ದ ಮುಸ್ಲಿಮರು ಅವರ ಅನಂತರ ಮತ್ತೆ ತಮ್ಮ ಧಾಳಿಗಳನ್ನಾರಂಭಿಸಿದ ರೆಂದೂ ಪಂಜಾಬಿನ ರಾಜ್ಯಪಾಲನಾಗಿದ್ದ ಮಹಮೂದ ೧೦೮೬-೯೦ರಲ್ಲಿ ಕನೌಜ್, ಕಾಲಂಜರ ಮತ್ತು ಉಜ್ಜಯಿನಿಗಳನ್ನು ಲೂಟಿ ಮಾಡಿದನೆಂದೂ ಆಗ ಕನೌಜಿನಲ್ಲಿ ಚಂದರಾಯ್ ಎಂಬವನು ಇವನ ಮಿತ್ರನಾಗಿದ್ದನೆಂದೂ ತಿಳಿದುಬರುತ್ತದೆ. ಚಂದ್ರದೇವನೇ ಈ ಚಂದರಾಯನಾಗಿರಬಹುದು. ಮಹಮೂದ ತನ್ನ ದಂಡಯಾತ್ರೆ ಯಿಂದ ಹಿಂದಿರುಗಿದಾಗ ಉದ್ಭವಿಸಿದ ಅನಿಶ್ಚಯ ಪರಿಸ್ಥಿತಿಯನ್ನು ಚಂದ್ರದೇವ ಉಪಯೋಗಿಸಿಕೊಂಡು ಕನೌಜನ್ನು ಪಂಚಾಲದ ರಾಷ್ಟ್ರಕೂಟ ದೊರೆ ಗೋಪಾಲನಿಂದ ಕಿತ್ತುಕೊಂಡ. ಚಂದ್ರದೇವ, ಗಜಪತಿ, ನರಪತಿ, ತ್ರಿಶಂಕುಪತಿ- ಇವರನ್ನು ಸೋಲಿಸಿದ. ಈತ ಕುಶಿಕ, ಕಾಶಿ, ಉತ್ತರ ಕೋಸಲಗಳನ್ನು ರಕ್ಷಿಸಿದುದಾಗಿ ಹೇಳಿಕೊಂಡಿದ್ದಾನೆ. ಪುರ್ವದಲ್ಲಿ ಇವನ ಮುನ್ನಡೆಗೆ ಮಗಧದ ದೊರೆ ಭೀಮಯಶನಿಂದ ತಡೆ ಬಿತ್ತು. ಅಲಹಾಬಾದಿನಿಂದ ವಾರಾಣಸಿ ಅಯೋಧ್ಯೆಗಳವರೆಗಿನ ಸೀಮೆಯೆಲ್ಲ ಚಂದ್ರದೇವನ ವಶವಾಗಿದ್ದುವು. ವಾರಾಣಸಿ ಗಾಹದ್ವಾಲರ ಎರಡನೆಯ ರಾಜಧಾನಿಯಾಗಿತ್ತು. ಚಂದ್ರದೇವನ ರಾಜ್ಯ ಪಶ್ಚಿಮದಲ್ಲಿ ಇಂದ್ರಪ್ರಸ್ಥದವರೆಗೂ ವಿಸ್ತರಿಸಿತ್ತೆಂಬುದು ಕೆಲವರ ಅಭಿಪ್ರಾಯ. ಆದರೆ ಆಗ ದೆಹಲಿಯಲ್ಲಿ ಬೇರೆ ರಾಜಮನೆತನ ಆಳುತ್ತಿತ್ತು. ಚಂದ್ರದೇವನ ವಶದಲ್ಲಿದ್ದ ಇಂದ್ರಸ್ಥಾನವೆಂಬುದು ಇಂದ್ರಪ್ರಸ್ಥವಾಗಿದ್ದಿರಲಾರದೆಂದು ಅದು ಈಗಿನ ಇಂದೂರ್ ಆಗಿರಬಹುದೆಂದೂ ಹೇಳಲಾಗಿದೆ.
ಚಂದ್ರದೇವನ ಅನಂತರ ರಾಜ್ಯವಾಳಿದವನು ಮದನಚಂದ್ರ. ಈತನ ೧೧೦೪-೦೯ರ ಶಾಸನಗಳು ದೊರೆತಿವೆ. ವಾರಾಣಸಿ, ಬಿಠಾಪುರ ಉಪವಿಭಾಗ, ಹಿಂದಿನ ಪಂಚಾಲ ರಾಜ್ಯದ ಒಂದು ಭಾಗ-ಇವು ಈತನ ಅಧೀನದಲ್ಲಿದ್ದುವು. ಮೂರನೆಯ ಅಲ್ಲಾವುದ್ದೌಲಾ ಮಸೂದ ಈ ಸಮಯದಲ್ಲಿ ಕನೌಜಿನ ಮೇಲೆ ದಂಡೆತ್ತಿ ಬಂದಿದ್ದನೆಂದೂ ಅಲ್ಲಿಯ ದೊರೆಯಾದ ಮಲ್ಹಿ ಎಂಬುವನನ್ನು ಸೆರೆಹಿಡಿದನೆಂದೂ ಆತ ವಿಪುಲವಾಗಿ ಹಣ ತೆತ್ತು ವಿಮೋಚನೆ ಪಡೆದನೆಂದೂ ಮುಸ್ಲಿಂ ಇತಿಹಾಸಕಾರರು ಹೇಳುತ್ತಾರೆ. ಮದನಚಂದ್ರನೇ ಈ ಮಲ್ಹಿ ಎಂದು ಭಾವಿಸಲಾಗಿದೆ.
ಮದನಚಂದ್ರನ ಮಗ ಗೋವಿಂದಚಂದ್ರ ಗಾಹದ್ವಾಲ ವಂಶದ ಸಮರ್ಥ ದೊರೆಗಳಲ್ಲೊಬ್ಬ. ಈತ ತನ್ನ ತಂದೆ ಬದುಕಿದ್ದ ಕಾಲದಲ್ಲೇ ಮುಸ್ಲಿಮರನ್ನು ಸೋಲಿಸಿದನೆಂದು ಕೆಲವು ದಾಖಲೆಗಳಿಂದ ಗೊತ್ತಾಗುತ್ತದೆ. ಮುಸ್ಲಿಮರು ತನ್ನ ತಂದೆಯನ್ನು ಸೆರೆಯಿಂದ ಬಿಡುಗಡೆ ಮಾಡುವಂತೆ ಈತ ಒತ್ತಡ ತಂದಿದ್ದಿರಬಹುದು. ಹೀಗಾಗಿ ಮುಂದೆ ಮದನಚಂದ್ರ ಹೆಸರಿಗೆ ದೊರೆಯಾಗಿದ್ದರೂ ವಾಸ್ತವವಾಗಿ ಗೋವಿಂದಚಂದ್ರನೇ ಆಡಳಿತ ನಡೆಸುತ್ತಿದ್ದಿರಬೇಕು. ಈ ಕಾಲದಲ್ಲಿ ದಂಡೆತ್ತಿ ಬಂದ ಗೌಡ ರಾಮಪಾಲನನ್ನು ಇವನು ಸೋಲಿಸಿ ಹಿಮ್ಮೆಟ್ಟಿಸಿದ. ಈತ ೧೧೧೪ರಲ್ಲಿ ಪಟ್ಟಕ್ಕೆ ಬಂದ. ಅಂದಿನಿಂದ ೧೧೫೪ರವರೆಗೆ ಈತ ಬರೆಸಿದ ೪೨ ಶಾಸನಗಳು ಇದುವರೆಗೆ ದೊರಕಿವೆ. ವಾರಾಣಸಿ, ಫತೇಪುರ, ಕಾನ್ಪುರ, ಕನೌಜ್, ಗೊಂಡಾ, ಗೋರಖಪುರ, ದಿನಾಪುರ, ಪಟ್ನಗಳವರೆಗೆ ಈತನ ರಾಜ್ಯ ವಿಸ್ತರಿಸಿತ್ತೆಂಬುದು ಈ ಶಾಸನಗಳಿಂದ ಗೊತ್ತಾಗುತ್ತದೆ. ೧೧೪೩ರ ಅನಂತರ ಈತ ಪಾಲದೊರೆ ಮದನನನ್ನು ಸೋಲಿಸಿ ಮಾಂಘೀರ್ವರೆಗಿನ ಎಲ್ಲ ನೆಲವನ್ನೂ ಗೆದ್ದುಕೊಂಡ. ಆದರೆ ೧೧೫೮ರ ವೇಳೆಗೆ ಮಾಂಘೀರನ್ನು ಮತ್ತೆ ಅವನಿಗೆ ಒಪ್ಪಿಸಬೇಕಾಯಿತು. ಗೊಂಡಾ ಜಿಲ್ಲೆಯನ್ನು ೧೧೨೯ಕ್ಕೂ ಹಿಂದೆಯೇ ರಾಷ್ಟ್ರಕೂಟ ಮದನಪಾಲನಿಂದಲೋ ಅವನ ಅನಂತರ ಬಂದ ದೊರೆಯಿಂದಲೋ ಗೆದ್ದುಕೊಂಡಿರಬೇಕೆಂದು ಊಹಿಸಲಾಗಿದೆ. ಗೌಡ, ವಂಗ, ಕಳಿಂಗ, ತೆಲಂಗ, ಮಹಾರಾಷ್ಟ್ರ, ಸೌರಾಷ್ಟ್ರ, ಚಂಪಾರಣ, ನೇಪಾಲ, ಭೋಟ, ಚೀನ, ಲೊಹಾವರ (ಲಾಹೋರ), ಓಡ್ರ, ಮಾಳವಗಳ ದೊರೆಗಳ ವಿರುದ್ಧ ಗೋವಿಂದಚಂದ್ರ ಸೆಣಸಾಡಿ ಗೆದ್ದನೆಂದು ಹೇಳಲಾಗಿದೆ. ಕಳಿಂಗ ಒರಿಸ್ಸಗಳ ದೊರೆಯಾಗಿದ್ದ ಅನಂತವರ್ಮನ್ ಚೋಡಗಂಗನ ಪಶ್ಚಿಮದ ಕಡೆಯ ವಿಸ್ತರಣವನ್ನು ಗೋವಿಂದಚಂದ್ರ ತಡೆಗಟ್ಟಿರಬೇಕು. ಮಿಥಿಲೆಯ ನಾನ್ಯದೇವ ಗೋವಿಂದಚಂದ್ರನ ನೆರೆರಾಜ್ಯದ ದೊರೆಯಾಗಿದ್ದ. ಈ ಇಬ್ಬರ ನಡುವೆ ಕದನ ಸಂಭವಿಸಿದ್ದಿರಬೇಕು. ಮಗಧದ ಮೇಲೆ ದಂಡೆತ್ತಿ ಹೋಗಿದ್ದ ಚಾಳುಕ್ಯದೊರೆ ಸೋಮೇಶ್ವರನೂ ಗೋವಿಂದಚಂದ್ರನೊಂದಿಗೆ ಕಾದಿದ ಸಂಭವವುಂಟು. ಇಂತೆಯೇ ಇತರ ಹಲವು ರಾಜರ ವಿರುದ್ಧ ಗೋವಿಂದಚಂದ್ರ ತನ್ನ ಶೌರ್ಯಪ್ರದರ್ಶನ ಮಾಡಿದನೆನ್ನಬಹುದು. ಆದರೆ ಈತ ನೇಪಾಲ, ಚೀನ, ಟಿಬೆಟ್ಗಳ ಮೇಲೆ ಆಕ್ರಮಣ ನಡೆಸಿದನೆನ್ನುವುದು ಉತ್ಪ್ರೇಕ್ಷೆಯೆಂದು ಭಾವಿಸಲಾಗಿದೆ. ಗೋವಿಂದಚಂದ್ರನ ಚಿನ್ನ ಮತ್ತು ತಾಮ್ರ ನಾಣ್ಯಗಳು ಸಿಕ್ಕಿವೆ. ಗೋವಿಂದಚಂದ್ರ ಅನೇಕ ಕಲೆಗಳನ್ನು ಬಲ್ಲವನಾಗಿದ್ದ. ಇವನಿಗೆ ಅನೇಕ ರಾಣಿಯರಿದ್ದರು. ಇವರ ಪೈಕಿ ಒಬ್ಬಳು ಕುಮಾರದೇವಿ.
ಈಕೆ ಬೌದ್ಧೆ, ದೇವ ರಕ್ಷಿತನ ಮಗಳು. ಗೋವಿಂದಚಂದ್ರನಿಗೆ ಆಸ್ಫೋಟಕಚಂದ್ರ, ವಿಜಯಚಂದ್ರ, ರಾಜ್ಯಪಾಲ ಎಂಬ ಮೂವರು ಮಕ್ಕಳಿದ್ದರು. ಬಹುಶಃ ಗೋವಿಂದಚಂದ್ರನ ಅನಂತರ ೧೧೫೪ರಿಂದ ಈಚೆಗೆ, ವಿಜಯಚಂದ್ರ ದೊರೆಯಾಗಿದ್ದ. ವಿಜಯಚಂದ್ರ ಮುಸ್ಲಿಮರ ದಂಡಯಾತ್ರೆಯೊಂದನ್ನು ಹಿಮ್ಮೆಟ್ಟಿಸಿದ. ಇವನಿಂದ ಸೋತ ಮುಸ್ಲಿಂ ಆಕ್ರಮಣಕಾರ ಬಹುಶಃ ಖುಸ್ರಾವ್ ಖಾನ್ ಇರಬೇಕು.
ವಿಜಯಚಂದ್ರನ ಅನಂತರ ಸಿಂಹಾಸನವನ್ನೇರಿದವನು (೧೧೭0) ಜಯಚಂದ್ರ. ದೋಆಬ್, ಅಲಹಾಬಾದ್, ವಾರಾಣಸಿ, ಪಟ್ನಾ, ಗಯ ಇವು ಈತನ ವಶದಲ್ಲಿದ್ದುವು. ಈತ ಪುರ್ವದಲ್ಲಿ ಸೇನ ದೊರೆಯೊಂದಿಗೆ ಘರ್ಷಣೆ ನಡೆಸಿದನೆಂದು ಹೇಳಲಾಗಿದೆ. ಜಯಚಂದ್ರನ ಮಗಳು ಸಂಯುಕ್ತೆಯನ್ನು ಅಜ್ಮೀರದ ಚಾಹಮಾನ 3ನೆಯ ಪೃಥ್ವೀರಾಜ ಪ್ರೇಮಿಸಿ ಅಪಹರಿಸಿಕೊಂಡು ಹೋದನೆಂಬ ಕಥೆಯೊಂದುಂಟು. ಇದು ನಿಜವೆಂಬುದಕ್ಕೆ ಆಧಾರಗಳಿಲ್ಲ. ಜಯಚಂದ್ರ ಕವಿಗಳಿಗೆ ಆಶ್ರಯ ನೀಡಿದ. ನೈಷಧಚರಿತದ ಕರ್ತೃವಾದ ಶ್ರೀಹರ್ಷ ಈತನ ಆಸ್ಥಾನದಲ್ಲಿದ್ದನೆಂದು ಹೇಳಲಾಗಿದೆ. ಜಯಚಂದ್ರ ಎರಡು ದಶಕಗಳಿಗೂ ಹೆಚ್ಚು ಕಾಲ ಶಾಂತಿಯಿಂದ ರಾಜ್ಯವಾಳಿದ. ಆದರೆ ಈತನ ಆಡಳಿತದ ಕೊನೆಯಲ್ಲಿ ಮಹಾ ದುರಂತವೊಂದು ಸಂಭವಿಸಿತು. ಮುಯಿಜ್ಜುದ್ದೀನ್ ಮಹಮ್ಮದ್ ಘೋರಿ ದೆಹಲಿ-ಅಜ್ಮೀರಗಳನ್ನು ಜಯಿಸಿ ದೊಡ್ಡ ಸೇನೆಯೊಂದಿಗೆ ಜಯಚಂದ್ರನ ರಾಜ್ಯದ ಮೇಲೆ ಏರಿಬಂದ (೧೧೯೩). ಜಯಚಂದ್ರ ತನ್ನೆಲ್ಲ ಸೇನಾಬಲದೊಡನೆ ಅವನನ್ನು ಚಂದವರದಲ್ಲಿ ಎದುರಿಸಿ ಹೋರಾಡಿದ. ಆನೆಯ ಮೇಲೆ ಕುಳಿತು ಯುದ್ಧ ಮಾಡುತ್ತಿದ್ದ ಜಯಚಂದ್ರ ಸಾವಿಗೆ ಈಡಾದ. ಗಾಹದ್ವಾಲ ಸೇನೆ ಸಂಪುರ್ಣವಾಗಿ ಸೋತುಹೋಯಿತು. ವಿಜಯೀ ಮುಸ್ಲಿಂ ಸೇನೆ ವಾರಾಣಸಿಗೆ ನುಗ್ಗಿ ಅಲ್ಲಿದ್ದ ಸಂಪತ್ತನ್ನೆಲ್ಲ ಸೂರೆಮಾಡಿತು. ಮಹಮ್ಮದ್ ಘೋರಿ ಗೆದ್ದ ಪ್ರದೇಶದ ಆಡಳಿತವನ್ನು ತನ್ನ ಕಡೆಯ ಅಧಿಕಾರಿಯೊಬ್ಬನಿಗೆ ಒಪ್ಪಿಸಿ ಸೇನೆಯೊಂದಿಗೆ ಹಿಂದಿರುಗಿದ. ಆದರೆ ಆ ಪ್ರದೇಶದ ಮೇಲೆ ಬಹಳ ಕಾಲ ಮುಸ್ಲಿಮರು ಹತೋಟಿ ಹೊಂದಲಾಗಲಿಲ್ಲ. ಜಯಚಂದ್ರ ಸತ್ತಾಗ ಅವನ ಮಗ ಹರಿಶ್ಚಂದ್ರನಿಗೆ ೧೮ ವರ್ಷ ವಸ್ಸಾಗಿತ್ತು. ಈತ ಮುಸ್ಲಿಮರಿಂದ ತನ್ನ ತಂದೆಯ ರಾಜ್ಯದ ಕೆಲವು ಭಾಗಗಳನ್ನು ಬಹುಶಃ ಬಿಡಿಸಿಕೊಂಡಿರಬೇಕು. ಇವನು, ಕನೌಜ್, ಜೌನ್ಪುರ, ಮಿರ್ಜಾಪುರಗಳನ್ನಾಳುತ್ತಿದ್ದ. ಚಂದೆಲ್ಲ ದೊರೆ ತ್ರೈಲೋಕ್ಯವರ್ಮನ್ ಹರಿಶ್ವಂದ್ರನ ಮೇಲೆ ಯುದ್ಧ ಮಾಡಿ ಇವನನ್ನು ಸೋಲಿಸಿದನೆಂದು ತಿಳಿದುಬರುತ್ತದೆ.
ಹರಿಶ್ಚಂದ್ರನ ಅನಂತರ ರಾಜ್ಯವಾಳುತ್ತಿದ್ದ ಗಾಹದ್ವಾಲ ದೊರೆ ಅಡಕ್ಕಮಲ್ಲನೆಂದು ಹೇಳಲಾಗಿದೆ. ಕನೌಜನ್ನು ಅಂತಿಮವಾಗಿ ಇಲ್ತಮಿಷ್ ಗೆದ್ದುಕೊಂಡ (೧೨೨೬). ರಾಜ್ಯ ಕಳೆದುಕೊಂಡ ಅಡಕ್ಕಮಲ್ಲ ಮಧ್ಯಭಾರತದ ನಾಗೋಡ್ ಸಂಸ್ಥಾನದಲ್ಲಿ ನೆಲೆಸಿದನೆಂದು ತಿಳಿದುಬರುತ್ತದೆ. ಅಲ್ಲಿ ಅಡಕ್ಕಮಲ್ಲನ ಸಾಮಂತನೊಬ್ಬ ಆಳುತ್ತಿದ್ದ.
ಗಾಹಾದ್ವಾಲ ದೊರೆಗಳು ವಿಷ್ಣುಭಕ್ತರು. ಇವರ ಶಾಸನಗಳು ಲಕ್ಷ್ಮಿಯ ಸ್ತುತಿಯೊಂದಿಗೆ ಆರಂಭವಾಗುತ್ತದೆ. ಇವರು ಶಿವ ಇತ್ಯಾದಿ ದೇವತೆಗಳನ್ನೂ ಪುಜಿಸುತ್ತಿದ್ದರು. ಇವರನ್ನು ಪರಮ ಮಹೇಶ್ವರರೆಂದೂ ಕರೆಯಲಾಗುತ್ತಿತ್ತು. ಗಾಹದ್ವಾಲ ದೊರೆಗಳು ಕಟ್ಟಿಸಿದ್ದ ಅನೇಕ ಮಂದಿರಗಳು ಮುಸ್ಲಿಮರ ದಾಳಿಗೆ ತುತ್ತಾಗಿ ನಾಶವಾದವು.