ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಗಾಳಿಯುಬ್ಬಟೆ ರೋಗ ಬದಲಾಯಿಸಿ

ಫುಪ್ಪಸದ ಗಾಳಿಗೂಡುಗಳು ಒಡೆದು ಹೋಗಿ, ಅವು ತಮ್ಮ ಸ್ಥಿತಿಸ್ಥಾಪಕ ಶಕ್ತಿ ಕಳೆದುಕೊಳ್ಳುವುದರಿಂದ ಫುಪ್ಪಸ ಅತಿಯಾಗಿ ಹಿಗ್ಗಿ ದೊಡ್ಡದಾಗುವ ಒಂದು ರೋಗ (ಎಂಫಿಸೀಮ). ಗಾಳಿ ಗೂಡುಗಳು (ಆಲ್ವಿಯೋಲೈ) ತೆಳುವಾದ ಪೊರೆಯಿಂದ ರೂಪುಗೊಂಡು, ಉಸಿರೆಳೆದುಕೊಂಡಾಗ ಉಬ್ಬಿ, ಉಸಿರು ಬಿಟ್ಟಾಗ ತಮ್ಮ ಯಥಾಸ್ಥಿತಿಗೆ ಹಿಂತಿರುಗುತ್ತವೆ; ಆದರೆ ಗಾಳಿಯುಬ್ಬಟೆಯಿಂದ ಪೀಡಿತವಾದಾಗ ಇವು ಅತಿಯಾಗಿ ಹಿಗ್ಗಿರುವುದರಿಂದ ಯಥಾಸ್ಥಿತಿಗೆ ಹಿಂತಿರುಗದೆ ದೊಡ್ಡವಾಗೇ ಉಳಿಯುತ್ತವೆ. ಇದರಿಂದ ಇಕ್ಕೆಡೆಗಳಲ್ಲೂ ಇರುವ ಫುಪ್ಪಸಗಳು ದೊಡ್ಡವಾಗಿ ಎದೆಗೂಡಿಗೆ ಪೀಪಾಯಿ ಆಕಾರ ಬರುತ್ತದೆ. ಸಾಮಾನ್ಯವಾಗಿ ಈ ರೋಗವನ್ನು ತುತೂರಿ, ಓಲಗ, ಕೊಳಲು ಮುಂತಾದ ವಾದ್ಯಗಳನ್ನು ನುಡಿಸುವ ಸಂಗೀತಗಾರರಲ್ಲಿ ಕಾಣಬಹುದು. ಈ ರೋಗ ಧೂಮಪಾನ ಮಾಡುವವರಲ್ಲಿ ಗೋಚರಿಸುವ ಮುಖ್ಯ ರೋಗ. ಫುಪ್ಪಸಗಳ ಗಾಳಿ ಗೂಡುಗಳಲ್ಲಿ ಗಾಳಿಯೊತ್ತಡ ಒಂದೇ ಸಮವಾಗಿ ಏರಿ ಉಳಿಯುವುದರಿಂದ ಕಾಲ ಕ್ರಮೇಣ ಈ ಪರಿಸ್ಥಿತಿ ಒದಗುತ್ತದೆ. ಅವರಲ್ಲಿ ಉಸಿರು ಹೊರಬಿಡುವುದು ತುಂಬ ಕಷ್ಟಕರ. ಇದೇ ರೀತಿ ಉಬ್ಬಟೆ ಇತರ ಅಂಗಾಂಶಗಳಲ್ಲೂ ಕಾಣಿಸಿಕೊಳ್ಳಬಹುದು. ಉದಾಹರಣೆಗೆ ಎರಡು ಫುಪ್ಪಸಗಳ ಮಧ್ಯೆ ಹಾಗೂ ಬೆನ್ನೆಲುಬು ಮತ್ತು ಎದೆ ಎಲುಬುಗಳ ನಡುವಣ ಸ್ಥಳದಲ್ಲೂ ಚರ್ಮದಡಿಯ ಅಂಗಾಂಶಗಳಲ್ಲೂ ಗಾಳಿಯುಬ್ಬಟೆಗೆ ಅವಕಾಶವಿದೆ. ಪಕ್ಕೆಲುಬು ಮುರಿದು ಫುಪ್ಪಸವನ್ನು ಚುಚ್ಚಿ ಹರಿದರೆ ಈ ಬಗೆಯ ಗಾಳಿಯುಬ್ಬಟೆ ಕಾಣಿಸಿಕೊಳ್ಳಬಹುದು.

ವಾಯು ಅಥವಾ ಇತರ ಅನಿಲಗಳು ದೇಹದ ನಾನಾ ಕುಹರಗಳಲ್ಲಿ ಸಂಗ್ರಹವಾಗಬಹುದು. ಎದೆಗೂಡಿನ ಕುಹರಗಳಲ್ಲಿ ಈ ರೀತಿ ವಾಯು ಸಂಗ್ರಹವಾದರೆ ನ್ಯೂಮೋತೋರ್ಯಾಕ್್ಸ (ಗಾಳಿ ತುಂಬಿದೆದೆ) ಎಂದೂ ಹೊಟ್ಟೆಯೊಳಗೆ ನಾನಾ ಅಂಗಗಳನ್ನಾವರಿಸಿರುವ ಪೆರಿಟೋನಿಯಂ ಪೊರೆಯ ಕುಹರಗಳಲ್ಲಿ ಸಂಗ್ರಹವಾದರೆ ನ್ಯೂಮೋಪೆರಿಟೋನಿಯಂ ಎಂದೂ ಕರೆಯಲಾಗುತ್ತದೆ. ಇವು ಗಾಯದಿಂದ ಅಥವಾ ರೋಗದಿಂದ ಉತ್ಪತ್ತಿಯಾಗುತ್ತವೆ. ಅನಿಲವನ್ನು ಉತ್ಪತ್ತಿಮಾಡುವ ಏಕಾಣುಜೀವಿಗಳ ಸೋಂಕುಂಟಾದರೆ ಅಂಗಾಂಶಗಳಲ್ಲಿ ಗಾಳಿಯುಬ್ಬಟೆ ಕಾಣಿಸಿಕೊಳ್ಳುತ್ತದೆ.