ಗಾಲಿನ, ಜೆಸಿಂತೊ ಬದಲಾಯಿಸಿ

 
ಜೆಸಿಂತೊ ಗಾಲಿನ

1852-97. ಇಟಲಿಯ ನಾಟಕಕಾರ.

ಬದುಕು ಬದಲಾಯಿಸಿ

ನಾಟಕಕಾರನಾಗುವುದಕ್ಕೆ ಮುಂಚೆ ಈತ ಕೆಲವು ಕಾಲ ನಟನಾಗಿಯೂ ರಂಗಭೂಮಿಯ ಮೇಳವಾದ್ಯದಲ್ಲಿ ಸೆಲ್ಲೋ ವಾದಕನಾಗಿ ಕೆಲಸಮಾಡುತ್ತಿದ್ದ. ಸಾಹಸಿ ರಂಗಮಂದಿರವೊಂದರ ವ್ಯವಸ್ಥಾಪಕನೊಬ್ಬ ಇವನ ಪ್ರತಿಭೆಯನ್ನು ಗುರುತಿಸಿ ವೆನೀಷಿಯನ್ ಭಾಷೆಯಲ್ಲಿ (ವೆನಿಸ್ಸಿನ ಪ್ರಾಂತಭಾಷೆ) ನಾಟಕ ಬರೆಯಲು ಪ್ರೇರೇಪಿಸಿದ. ಸ್ವಲ್ಪ ಕಾಲದಲ್ಲೇ ಇವನ ಹೆಸರು ಪ್ರಸಿದ್ಧವಾಯಿತು. ಸುಮಾರು ಏಳು ವರ್ಷ ಗಾಲಿನ ವೆನಿಸ್ಸಿನ ರಂಗಭೂಮಿಯ ಮೇಲೆ ಅತ್ಯಂತ ಪ್ರಸಿದ್ಧ ನಾಟಕಕಾರ ಎನಿಸಿಕೊಂಡ. ಗಾಲಿನ ಮೊಟ್ಟಮೊದಲ ಗಾಲ್ಡೋನಿಯ ಹರ್ಷನಾಟಕಗಳನ್ನು ಚೆನ್ನಾಗಿ ಅಭ್ಯಸಿಸಿ, ಮನನ ಮಾಡಿಕೊಂಡು ಆ ಮೇಲೆ ತನ್ನದೇ ಆದ ಕೃತಿಗಳನ್ನು ರಚಿಸಿದ.

ನಾಟಕಗಳು ಬದಲಾಯಿಸಿ

ಗಾಲ್ಡೋನಿಯ ಅನಂತರ ಬರಿದಾಗಿದ್ದ ರಂಗಭೂಮಿಯನ್ನು ಪುನಶ್ಚೇತನಗೊಳಿಸಿದ ಕೀರ್ತಿ ಇವನಿಗೆ ಸಲ್ಲುತ್ತದೆ. ಇಪ್ಪತ್ತು ವರ್ಷ ತುಂಬುವುದಕ್ಕೆ ಮುಂಚೆಯೇ ಈತ ಸಾಂಪ್ರದಾಯಿಕವೂ ಆಡಂಬರಯುತವೂ ಆದ ಎರಡು ನಾಟಕಗಳನ್ನು ಇಟಾಲಿಯನ್ ಭಾಷೆಯಲ್ಲಿ ಬರೆದನಾದರೂ ಅವು ಹೆಚ್ಚು ಬಳಕೆಗೆ ಬರಲಿಲ್ಲ. ಇವನ ನಾಟಕಗಳಲ್ಲಿ ಗಾಲ್ಡೋನಿಯ ಪ್ರಭಾವ ಸ್ಪಷ್ಟವಾಗಿದ್ದರೂ ನಾಟಕ ವಸ್ತು ಹಾಗೂ ಪಾತ್ರ ವಿನ್ಯಾಸದಲ್ಲಿ ವೈವಿಧ್ಯ, ಸ್ವಂತಿಕೆ ಇವೆ ಎನ್ನುತ್ತಾರೆ. ಈತ ತನ್ನ ಪ್ರತಿಯೊಂದು ನಾಟಕದಲ್ಲೂ ಸಮಕಾಲೀನ ವೆನಿಸ್ ನಾಗರಿಕ ಸಮಾಜದ ಹೃದಯವಿಹೀನತೆಯನ್ನೂ ದುರಾಸೆ, ದೌರ್ಬಲ್ಯಗಳನ್ನೂ ವಿಡಂಬನೆ ಮಾಡಿದ್ದಾನೆ; ಹಳೆಯ ಸಂಪ್ರದಾಯ ಹಾಗೂ ಹೊಸಕಾಲದ ಪ್ರವೃತ್ತಿಗಳ ಸಂಘರ್ಷವನ್ನು ಚಿತ್ರಿಸಿದ್ದಾನೆ. ಇವನ ಹಾಸ್ಯಪ್ರಧಾನವಾದ ನಾಟಕಗಳಲ್ಲೂ ಪ್ರಹಸನಗಳಲ್ಲೂ ಗಂಭೀರ ಚಿಂತನೆ ಇದೆ. ಸುಖ ದುಃಖಗಳ ನೆರಳು ಬೆಳಕಿನ ಚಲ್ಲಾಟವಿದೆ. ದಿ ಹಾರ್ಟ್ಸ್ ಐಸ್ ಎನ್ನುವ ನಾಟಕದಲ್ಲಿ ಬರುವ ಟೆರೆಸಾ ಎಂಬ ಹೃದಯವಂತಳಾದ ಕುರುಡ ವೃದ್ಧೆಯ ಪಾತ್ರ ಅಂತಃಕರಣವನ್ನು ಅರಳಿಸುವಂತಿದೆ. ಈತ ತನ್ನ ಜೀವಿತಕಾಲದ ಕೊನೆಯಲ್ಲಿ ಬರೆದ ವಾಸ್ತವಿಕ (ರಿಯಲಿಸ್ಟಿಕ್) ನಾಟಕಗಳಲ್ಲಿ ಸೂಕ್ಷ್ಮವಾದ ಕಲಾವಂತಿಕೆ, ಪರಿಪಕ್ವವಾದ ಚಿಂತನೆ ಕಾಣಿಸುತ್ತದೆ. ವ್ಯಕ್ತಿ ಹಾಗೂ ಸಮುದಾಯದ ಸಂಬಂಧವನ್ನು ಹೆಚ್ಚು ವ್ಯಗ್ರದೃಷ್ಟಿಯಿಂದ ಈತ ಚಿತ್ರಿಸಿದ್ದಾನೆ. ಹಣ ಹೇಗೆ ಮನುಷ್ಯರ ಅಂತರಂಗವನ್ನು ಕಳಂಕಗೊಳಿಸುತ್ತದೆ ಎನ್ನುವುದೇ ಇವನ ಎಲ್ಲ ನಾಟಕಗಳ ವಸ್ತು. ಆದರೆ ಅವುಗಳಲ್ಲಿ ಸೊಗಸಾದ ವೈವಿಧ್ಯವಿದೆ. ಸಾಯುವುದಕ್ಕೆ ಮುಂಚೆ ಈತ ಅರ್ಧಂಬರ್ಧ ಬರೆದು ಬಿಟ್ಟು ಹೋದ ಸೆನ್ಜ ಬರ್ಸೋಲ (ದಿಕ್ಸೂಚಿ ಇಲ್ಲದ) ಎನ್ನುವ ನಾಟಕದಲ್ಲಿ ಹಣವೇ ಸರ್ವಸ್ವ ಎಂಬ ನಂಬಿಕೆಗೆ ವಿರೋಧವಾಗಿ ನಡೆಯುವ ಮಾನವೀಯ ವ್ಯಕ್ತಿಯೊಬ್ಬನ ದುರಂತವಿದೆ. ಆ ನಾಟಕದ ಒಂದು ವಾಕ್ಯವನ್ನು ವೆನಿಸ್ ನಾಟಕಕಾರರು ಆಗಾಗ ನೆನೆಯುತ್ತಾರೆ. ಸದುದ್ದೇಶವುಳ್ಳವರಿಗೂ ಸತ್ಯವಂತರಿಗೂ ಕಾಲವಿಲ್ಲವೆನ್ನುವುದು ಸುಳ್ಳು. ಭವಿಷ್ಯ ಜಗತ್ತು ಅಂಥವರಿಗೇ ಸೇರಿದ್ದು. ಆದರೆ ಅವರು ಸ್ವಹಿತವನ್ನು ಬದಿಗೊತ್ತಿ ಶಿಲುಬೆ ಹೊತ್ತು ಅದನ್ನು ರಕ್ಷಿಸಲು (ಲೋಕಕಾರುಣ್ಯಕ್ಕಾಗಿ) ಧೈರ್ಯ ಹಾಗೂ ಹುರುಪಿನಿಂದ ಹೋರಾಡಬೇಕಾಗುತ್ತದೆ.

ಗಾಲಿನ ಬರೆದ ನಾಟಕಗಳಲ್ಲಿ ಉನ ಫ್ಯಮೇಜಿಯ ಇನ್ ರೋವಿನ, ಜೆಂತೆ ರೆಫಾದ, ಮಿಯಫಿಯ ಮತ್ತು ಲ ಫಮೇಜಿಯ ಎನ್ನುವುವು ಪ್ರಸಿದ್ಧವಾಗಿವೆ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: