ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಗಾರ್ ಮೀನು

ಬದಲಾಯಿಸಿ

ಬೆಲೋನಿಫಾರ್ಮೀಸ್ ಗಣದ ಬೆಲೋನಿಡೀ ಕುಟುಂಬಕ್ಕೆ ಸೇರಿದ ಕೆಲವು ಜಾತಿಯ ಮೀನುಗಳಿಗಿರುವ ಸಾಮಾನ್ಯ ಹೆಸರು. ಸುರಳಿ, ಕೊಂಟಿ, ಕೊಕ್ಕರೆ ಮೀನು ಎಂದು ಸ್ಥಳೀಯವಾಗಿ ಕರೆಯುತ್ತಾರೆ. ಸ್ಟ್ರಾಂಗಿಲ್ಯೂರ ಸ್ಟ್ರಾಂಗಿಲ್ಯೂರ, ಸಾ. ಕ್ರೊಕೊಡೈಲಸ್, ಸಾ. ಇನ್ಸಿಸ, ಸಾ. ಸಿಕೋನಿಯ, ಕ್ಸಿನೆಂಟಡಾನ್ ಕ್ಯಾನಸಿಲ, ಬೆಲೋನಿ ಮುಂತಾದವು ಪ್ರಮುಖ ಗಾರ್ಮೀನುಗಳು. ಇವುಗಳಲ್ಲಿ ಹೆಚ್ಚಿನವು ಸಾಗರವಾಸಿಗಳು. ಕೆಲವು ಸಿಹಿನೀರಿನ ಕೊಳದಲ್ಲೂ, ನದಿಗಳಲ್ಲೂ ವಾಸಿಸುತ್ತವೆ. ಬಲು ಉದ್ದವಾದ ದೇಹ, ಕೊಕ್ಕಿನಂತೆ ಉದ್ದವಾದ ಮೂತಿ, ಸಣ್ಣ ಕಣ್ಣುಗಳು, ಸಣ್ಣದಾದ ಈಜುರೆಕ್ಕೆಗಳು, ಅಷ್ಟಾಗಿ ಕವಲೊಡೆದಿರದ ಬಾಲದ ಈಜು ರೆಕ್ಕೆ (ಟ್ರಂಕೇಟೆಡ್), ಪಾಶರ್್ವರೆಕ್ಕೆ ಹೆಚ್ಚುಕಡಿಮೆ ಉದರ ಭಾಗದಲ್ಲಿರುವುದು. ಗುದದ ಮತ್ತು ಬೆನ್ನು ಈಜುರೆಕ್ಕೆಗಳು ಬಾಲದ ಈಜುರೆಕ್ಕೆಗೆ ಸಮೀಪದಲ್ಲಿರುವುದು. - ಇವು ಗಾರ್ ಮೀನುಗಳ ಪ್ರಮುಖ ಲಕ್ಷಣಗಳು. ವಿಚಿತ್ರ ಲಕ್ಷಣವೆಂದರೆ ಇವುಗಳ ಮೂಳೆ ಹಸಿರುಬಣ್ಣಕ್ಕಿರುವುದು. ಮೂತಿ ಬಲು ಉದ್ದವಾಗಿ ಚೂಪಾಗಿರುವುದರಿಂದ ಈ ಮೀನನ್ನು ಸೂಜಿ ಮೀನು (ನೀಡಲ್ ಫಿಶ್), ಕೊಕ್ಕು ಮೀನು (ಬಿಲ್ ಫಿಶ್) ಎಂದೂ ಕರೆಯುವುದುಂಟು. ಇವು ಸಾಮಾನ್ಯವಾಗಿ ನೀರಿನ ಮೇಲ್ಮಟ್ಟದಲ್ಲಿ ಈಜುತ್ತ ಇದ್ದು ಆಗಿಂದಾಗ್ಗೆ ನೀರಿನಿಂದ ಮೇಲಕ್ಕೆ ನೆಗೆಯುತ್ತಿರುತ್ತವೆ. ಕ್ಸಿನೆಂಟಡಾನ್ ಕ್ಯಾನಸಿಲ, ಜಾತಿಯ ಮೀನು ಕರ್ನಾಟಕದ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಲ್ಲಿ ಕಾಣಸಿಗುತ್ತವೆ, ಇದನ್ನು ಸಿಹಿನೀರಿನ ಗಾರ್ ಮೀನು, ಕೊಕ್ಕರೆ ಮೀನು ಎಂದು ಕರೆಯುತ್ತಾರೆ.

ಗಾರ್ಮೀನುಗಳು ಮಾಂಸಾಹಾರಿಗಳು; ಹೆರ್ರಿಂಗ್, ಮ್ಯಾಕರಲ್, ಪಿಲ್ಚರ್ಡ್ ಮುಂತಾದ ಇತರ ಜಾತಿಯ ಮೀನುಗಳ ಮರಿಗಳನ್ನು ಹಿಡಿದು ತಿನ್ನುತ್ತವೆ. ಆಹಾರವನ್ನು ಹಿಡಿಯಲು ತಮ್ಮ ಉದ್ದವಾದ ಮೂತಿಯನ್ನು ಕೊಕ್ಕಿನಂತೆ ಬಳಸುತ್ತವೆ. ಕಡಲಿನಿಂದ ಗಾರ್ ಮೀನುಗಳನ್ನು ಅಲ್ಪ ಪ್ರಮಾಣದಲ್ಲಿ ಹಿಡಿಯಲಾಗುತ್ತದೆ. ಗಾರ್ ಮೀನುಗಳ ಮಾಂಸ ಸಾಕಷ್ಟು ರುಚಿಯಾಗಿದ್ದರೂ ಅಷ್ಟಾಗಿ ಹೆಸರುವಾಸಿಯಲ್ಲ. ತಾಜಾ ರೂಪದಲ್ಲಿ ಮಾರಾಟ ಮಾಡಲಾಗುತ್ತದೆ.