ಗಾರ್ಬೂರ್ಗ, ಆರ್ನ ಎವನ್ಸನ್

ಗಾರ್ಬೂರ್ಗ, ಆರ್ನ ಎವನ್ಸನ್

ಬದಲಾಯಿಸಿ
 

1851-1924. ನಾರ್ವೆ ದೇಶದ ಕಾದಂಬರಿಕಾರ, ಕವಿ, ನಾಟಕಕಾರ. ನವ ನಾರ್ವೀಜಿಯನ್ ಬರೆಹದಲ್ಲಿ ಪ್ರಥಮ ಪಂಕ್ತಿಗೆ ಸೇರುವ ಸಾಹಿತಿ.

ಬದುಕು ಮತ್ತು ಬರಹ

ಬದಲಾಯಿಸಿ

ಗಾರ್ಬೂರ್ಗ ರೈತನ ಮಗ. ಮಧ್ಯಯುಗದಿಂದ ನಾರ್ವೆಯ ಗ್ರಾಮೀಣ ಜೀವನದಲ್ಲಿ ನಡೆದುಕೊಂಡು ಬಂದಿದ್ದ ವ್ಯವಸ್ಥೆ ಕುಸಿಯುತ್ತಿದ್ದ ಕಾಲದಲ್ಲಿ ಇವನ ಬಾಲ್ಯ, ಯೌವನಗಳು ಸಾಗಿದುವು. ತಂದೆ ಅತಿ ಧಾರ್ಮಿಕ ಮನೋಧರ್ಮದವನು. ಇದೇ ಅವನ ಸಾವಿಗೂ ಕಾರಣವಾಯಿತು. ಈ ಎರಡು ಅಂಶಗಳೂ ಗಾರ್ಬೂರ್ಗನ ಜೀವನ ಮತ್ತು ಬರೆಹಗಳ ಮೇಲೆ ಪ್ರಭಾವ ಬೀರಿದುವು. ಇವನಿಗೆ ವಿದ್ಯಾಭ್ಯಾಸ ದೊರೆಯುವುದೇ ಕಷ್ಟವಾಯಿತು. ಹಲವು ಅಡ್ಡಿಗಳನ್ನು ಎದುರಿಸಿ ಕ್ರಿಸ್ಟಿಯಾನ ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡಿದ. ಇವನು ವಿದ್ಯಾರ್ಥಿ ಜೀವನವನ್ನು ಕುರಿತು ಬರೆದ ಬಾಂಡೇ ಸ್ಟೂಡೆಂಟೆ (1883) ಆಗ ಜನಪ್ರಿಯವಾಗಿದ್ದ ಸ್ವೇಚ್ಛಾಪ್ರವೃತ್ತಿಯ, ಸಹಜತಾವಾದದ ಕಾದಂಬರಿಗಳನ್ನೇ ಅನುಸರಿಸಿದರೂ ಒಳ್ಳೆಯ ಕಥೆ ಎನಿಸಿದೆ. ಗಾರ್ಬೂರ್ಗ ಬೇಸರಪಟ್ಟು ಬೇಗ ಈ ಪಂಥದಿಂದ ದೂರನಾದ. ಗ್ರಾಮಜೀವನ ವಿಚ್ಚಿದ್ರವಾಗುವುದರಿಂದ ರೈತರ ಬಾಳಿನಲ್ಲಿ ತಲೆದೋರಿದ ಧಾರ್ಮಿಕ ಮತ್ತು ಅಂತಃಕರಣದ ಸಮಸ್ಯೆಗಳನ್ನು ಫ್ರೆಡ್ (1892) ಎಂಬ ಕಾದಂಬರಿಯಲ್ಲಿ ಸೂಕ್ಷ್ಮವಾಗಿ ನಿರೂಪಿಸಿದ. ಇದೇ ವಸ್ತುವನ್ನು ಕುರಿತು ಇನ್ನೆರಡು ಕಾದಂಬರಿಗಳನ್ನೂ ಒಂದು ನಾಟಕವನ್ನೂ ಬರೆದ. ಈ ಕೃತಿಗಳಲ್ಲೆಲ್ಲ ಆಳವಾದ ಧಾರ್ಮಿಕ ಭಾವನೆಯುಂಟು. ಬರೆಹಗಾರರು ಬಳಸುತ್ತಿದ್ದ ಡೇನೋ ನಾರ್ವೀಜಿಯನ್ ಮಾಧ್ಯಮದ ಬದಲು, ಪ್ರಾಚೀನ ನಾಸ್ರ್ಕನಿಂದ ಬಂದ ರೈತರ ಭಾಷೆಯ ಆಧಾರದ ಮೇಲೆ ಸಾಹಿತ್ಯಕ್ಕಾಗಿ ನಾರ್ವೀಜಿಯನ್ ಭಾಷೆಯನ್ನು ಹೊಸದಾಗಿ ರೂಪಿಸಬೇಕೆಂಬ ಸಾಹಿತಿಗಳ ಪಂಥಕ್ಕೆ ನಾಯಕನಾದ. ಇವನ ಭಾವಗೀತೆಗಳ ಚಕ್ರ ಹೌಟುಸ (1895) ರೈತರ ಭಾಷೆಯಲ್ಲಿಯೇ ಇದೆ. ಇದು ಅತಿಮಾನುಷದಲ್ಲಿ ಹುಡುಗಿಯೊಬ್ಬಳಿಗಿದ್ದ ನಂಬಿಕೆಯನ್ನು ನಿರೂಪಿಸುತ್ತದೆ. ಮಧ್ಯಯುಗದ ನಂಬಿಕೆಗಳು, ಪದ್ಧತಿಗಳು ಇನ್ನೂ ಜೀವಂತವಾಗಿದ್ದ ಯುಗದ ಜೀವನವನ್ನು ಈ ಕವನಚಕ್ರ ಬಣ್ಣಿಸುತ್ತದೆ. ಇವನ ಭಾಷೆಗೆ ಭಾವನೆಗಳನ್ನು ಪ್ರಚೋದಿಸುವ ವಿಶೇಷ ಸಾಮರ್ಥ್ಯ ಉಂಟು. ಈ ಕವನಚಕ್ರ ಮತ್ತು ಫ್ರೆಡ್ ಇವನಿಗೆ ನವನಾರ್ವೀಜಿಯನ್ ಭಾಷೆಯ ಸಾಹಿತ್ಯದಲ್ಲಿ ಬಹು ಹಿರಿಯ ಸ್ಥಾನವನ್ನು ಗಳಿಸಿಕೊಟ್ಟಿದೆ.

ಗಾರ್ಬೂರ್ಗ ವಿಶಾಲ ಮನೋಭಾವದ ಅಭಿಪ್ರಾಯಗಳಿಸಿ ಹೆಸರು ಪಡೆದ ಪತ್ರಿಕೆಯೊಂದರ ಸ್ಥಾಪಕ ಸಂಪಾದಕನಾಗಿದ್ದನಲ್ಲದೆ ಹೋಮರನ ಒಡಿಸ್ಸಿಯನ್ನೂ (1918) ಮಹಾಭಾರತದಿಂದ ಆಯ್ದ ಭಾಗಗಳನ್ನೂ (1921) ಅನುವಾದ ಮಾಡಿದ್ದಾನೆ. ಇವನ ಕತೆಗಳು ಯುರೋಪಿನ ಹಲವು ಭಾಷೆಗಳಿಗೆ ಅನುವಾದವಾಗಿವೆ. ಈತನ ಎಲ್ಲ ಬರೆಹಗಳನ್ನೂ 8 ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ (1944).