ಗಾಮ (ಕುಸ್ತಿಪಟು)

ಭಾರತೀಯ ಮತ್ತು ಪಾಕಿಸ್ತಾನಿ ವೃತ್ತಿಪರ ಕುಸ್ತಿಪಟು

ಗಾಮ ಬದಲಾಯಿಸಿ

1888-1953. ಭಾರತಕ್ಕೆ 1910ರಲ್ಲಿ ವಿಶ್ವಕುಸ್ತಿ ಪ್ರಶಸ್ತಿಯನ್ನು ದೊರಕಿಸಿದ ಪ್ರಸಿದ್ಧ ಕುಸ್ತಿಪಟು. ಈತ ಹುಟ್ಟಿದ್ದು ಪಂಜಾಬಿನ ಅಮೃತಸರದಲ್ಲಿ. ಇವನ ನಿಜವಾದ ಹೆಸರು ಗುಲಾಮ್ ಮೊಹಮದ್. ಎಳೆಯ ವಂiÀÄಸ್ಸಿನಿಂದಲೂ ಕುಸ್ತಿ ಮಾಡುವುದೆಂದರೆ ಇವನಿಗೆ ತುಂಬಾ ಆಸಕ್ತಿ. ಇದಕ್ಕೆ ತಕ್ಕಂತೆ ಮನೆಯವರಿಂದಲೂ ಇವನಿಗೆ ಪ್ರೋತ್ಸಾಹ. ಇವನ ತಂದೆ ಅಜೀಜ್ ಪೈಲ್ವಾನನಾಗಿದ್ದ. ಸೋದರ ಇಮ್ರಾನ್ ಕೂಡ ಕುಸ್ತಿ ಪಟುವಾಗಿದ್ದ. ಹೀಗಾಗಿ ಕುಸ್ತಿಪಟುವೆಂದು ಹೆಸರು ಗಳಿಸಿದ. ಭಾರತದಲ್ಲಿ ಬಹುಬೇಗ ಪ್ರಸಿದ್ಧನಾದ. ಇವನಿಗಿದ್ದ ಶಕ್ತಿಯಂತೂ ಹೇಳಲಸದಳ. ಈತ ಬಾದಾಮಿಕಾಯಿಯನ್ನು ಬೆರಳಿನಿಂದ ಹೊಸಕಿ ಸಿಪ್ಪೆ ತೆಗೆದು ತಿನ್ನುತ್ತಿದ್ದನಂತೆ. ಕಬ್ಬಿಣದ ದಪ್ಪ ದಪ್ಪ ಮೊಳೆಗಳನ್ನು ಅಂಗೈ ಹಾಗೂ ಮಧ್ಯದ ಬೆರಳು ಎರಡಕ್ಕೂ ಸಿಕ್ಕಿಸಿಕೊಂಡು ಬಗ್ಗಿಸುತ್ತಿದ್ದನಂತೆ. ವ್ಯಾಯಾಮ ಮಾಡುವಾಗ ದಮ್ಮು ಕಟ್ಟಿ ನಿಂತು ತನ್ನ ಶರೀರದ ಭುಜ, ಎದೆ, ಬೆನ್ನು, ತೋಳುಗಳಿಗೆ ನಾಲ್ಕಾರು ಜನ ಪೈಲ್ವಾನರುಗಳಿಂದ ಡಂಬಲ್್ಸಗಳಿಂದ ಏಟು ಹಾಕಿಸಿಕೊಳ್ಳುತ್ತಿದ್ದುದೂ, ವ್ಯಾಯಾಮ ಮುಗಿದ ಮೇಲೆ ಧಾರಾಳವಾಗಿ ಹಾಲು ಸೇವಿಸುತ್ತಿದ್ದ.

ಭಾರತದಲ್ಲಿ ಕೀರ್ತಿಗಳಿಸಿದ್ದ ಈತ ಅಂತಾರಾಷ್ಟ್ರೀಯ ಕುಸ್ತಿಯಲ್ಲಿ ಭಾಗವಹಿಸಿ ಭಾರತಕ್ಕೆ ಕೀರ್ತಿ ತಂದೇ ತರುತ್ತಾನೆ ಎಂಬ ಅಚಲ ವಿಶ್ವಾಸ ಬಂಗಾಳದ ದೊಡ್ಡ ಶ್ರೀಮಂತ ಸರತ್ಕುಮಾರ್ ಮಿತ್ರನಿಗೆ ಇತ್ತು. 1910ರಲ್ಲಿ ಲಂಡನ್ನಿನಲ್ಲಿ ಜಾನ್ ಬುಲ್ ವಿಶ್ವಕುಸ್ತಿ ಚಾಂಪಿಯನ್ಷಿಪ್ ಸ್ಪರ್ಧೆ ನಡೆಯುವುದಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಸರತ್ಕುಮಾರ್ಮಿತ್ರ ಅವರು ಗಾಮ ಮತ್ತು ಇಮಾಂ ಭಕ್ಷ್ ಇವರಿಬ್ಬರ ಖರ್ಚಿನ ಹೊಣೆಯನ್ನು ತಾವೇ ಪುರ್ಣ ವಹಿಸಿಕೊಂಡು ಲಂಡನ್ನಿಗೆ ಕರೆದೊ ಯ್ದರು. ಲಂಡನ್ನಿನಲ್ಲಿ ವಿಶ್ವಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಲು ಅತ್ಯಂತ ಉತ್ಸಾಹದಿಂದ ಹೋದ ಗಾಮನಿಗೆ ಆ ಸ್ಪರ್ಧೆಯಲ್ಲಿ ಭಾಗ ವಹಿಸಲು ಅವಕಾಶ ದೊರೆಯಲಿಲ್ಲ. ಇದಕ್ಕೆ ಕಾರಣ ಗಾಮ 5' 7" ಮಾತ್ರ ಎತ್ತರವಿದ್ದು ತೂಕದಲ್ಲಿ 250 ಪೌಂಡು ಇದ್ದುದು. ಇವನು ಇತರ ಖ್ಯಾತ ಪೈಲ್ವಾನರ ಜೊತೆ ಸೆಣಸಾಡ ಲಾರನೆಂಬುದೇ ಅವರು ಕೈಗೊಂಡ ತೀರ್ಮಾನ. ಇದರಿಂದಾಗಿ ಇವನಿಗೆ ಅವಮಾನವಾದಂತಾಯಿತು. ಅಸಾಧಾರಣ ಕೋಪದಿಂದ ಸ್ಪರ್ಧೆ ನಡೆಯಲಿದ್ದ ಕ್ರೀಡಾಂಗಣದಲ್ಲಿ ನಿಂತು ಇಡೀ ಇಂಗ್ಲೆಂಡಿನಲ್ಲಿ ಯಾರೇ ಆದರೂ ಸರಿ ತನ್ನನ್ನು ಗೆಲ್ಲುವುದಿರಲಿ ತನ್ನ ಜೊತೆ 5 ನಿಮಿಷಗಳ ಕಾಲ ನಿಂತು ಹೋರಾಡಿದರೆ ಅವರಿಗೆ ತಾನೇ 15 ಪೌಂಡುಗಳನ್ನು ಬಹುಮಾನವಾಗಿ ಕೊಡುವುದಾಗಿ ಸವಾಲು ಹಾಕಿದ. ಇವನ ಸವಾಲನ್ನು ಇಂಗ್ಲೆಂಡಿನ ಪೈಲ್ವಾನರು ಎದುರಿಸಲೇಬೇಕಾಯಿತು. ಮೊದಲ ದಿನ ಇವನ ಜೊತೆ ಹೋರಾಡಲು ಬಂದ ಮೂರು ಜನ ಪೈಲ್ವಾನರನ್ನು 2 ನಿಮಿಷದೊಳಗೆ ಸೋಲಿಸಿದ. ಎರಡನೆಯ ದಿನ ತನ್ನ ಜೊತೆ ಕುಸ್ತಿ ಮಾಡಲು ಬಂದ 12 ಜನ ಪೈಲ್ವಾನರುಗಳಿಗೂ ಅದೇ ಗತಿ ಕಾಣಿಸಿ, ಪ್ರೇಕ್ಷಕರಿಗೆ ದಿಗ್ಭ್ರಮೆ ಹಿಡಿಸಿದ.

ಇದಾದ ಅನಂತರ ವಿಶ್ವಕುಸ್ತಿ ಸ್ಪರ್ಧೆಯ ವ್ಯವಸ್ಥಾಪಕರು ಇವನಿಗೆ ವಿಶ್ವಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲೇಬೇಕಾಯಿತು. 1910ರ ಸೆಪ್ಟೆಂಬರ್ 10 ರಂದು ಈತ ಖ್ಯಾತಿವೆತ್ತ ಅಮೆರಿಕದ ಕುಸ್ತಿಪಟು ಇ. ರೋಲರ್ನನ್ನು ಎದುರಿಸ ಬೇಕಾಯಿತು. ರೋಲರ್ನನ್ನು 15 ನಿಮಿಷಗಳಲ್ಲಿ 12 ಸಾರಿ ಕೆಡವಿ ಪ್ರೇಕ್ಷಕರು ಹುಚ್ಚೆದ್ದು ಕುಣಿಯುವಂತೆ ಮಾಡಿದ. ಅನಂತರ ವಿಶ್ವಚಾಂಪಿಯನ್ ಎನಿಸಿಕೊಂಡಿದ್ದ ಆಸ್ಟ್ರೇಲಿಯದ ಜಿಬಿಸ್ಕೊನನ್ನು ಎದುರಿಸಿದ. ದಿಗ್ಗಜಗಳಂತೆ ಇಬ್ಬರೂ ಹೋರಾಡಿದರು. ಸತತವಾಗಿ ಮೂರು ಗಂಟೆಗಳ ಕಾಲ ನಡೆದ ಈ ಪಂದ್ಯದಲ್ಲಿ ಈತ ಜಿಬಿಸ್ಕೊನನ್ನು ಹಲವಾರು ಬಾರಿ ಸೋಲಿಸಿದ್ದ. ಕುಸ್ತಿಪಂದ್ಯದ ನೀತಿನಿಯಮಗಳನ್ನು ರೆಫರಿಗಳು ಸರಿಯಾಗಿ ಪಾಲಿಸದೆ ಪಕ್ಷಪಾತ ತೋರಿಸಿದರಂತೆ. ಪಂದ್ಯ ಅಂತ್ಯವಾಗಲಿಲ್ಲವೆಂದು ಹೇಳಿ ಮಾರನೆಯ ದಿವಸಕ್ಕೆ ಪಂದ್ಯವನ್ನು ಮುಂದೂಡಲಾಯಿತು. ಮಾರನೆಯ ದಿನ ಗಾಮ ಅತ್ಯಂತ ಉತ್ಸಾಹದಿಂದ ಕುಸ್ತಿಯ ಕಣಕ್ಕೆ ಹಾಜರಾದ. ಆದರೆ, ಹಿಂದಿನ ದಿವಸ ಗಾಮನಿಂದ ಮೈಮೂಳೆ ಮುರಿಸಿಕೊಂಡಿದ್ದ ಜಿಬಿಸ್ಕೊ ಹಾಸಿಗೆಯಿಂದ ಏಳುವುದು ಸಾಧ್ಯವಾಗದೆ ಸ್ಪರ್ಧೆಗೆ ಗೈರುಹಾಜರಾದ. ಅಂದೇ ಈತ ವಿಶ್ವಕುಸ್ತಿ ಪ್ರಶಸ್ತಿಯನ್ನು ಗೆದ್ದುಕೊಂಡು ವಿಶ್ವ ಚಾಂಪಿಯನ್ ಬಿರುದಿನೊಡನೆ ಭಾರತದ ಕೀರ್ತಿಪತಾಕೆಯನ್ನು ಎತ್ತಿಹಿಡಿದ. ಕೆಲವು ತಿಂಗಳ ಅನಂತರ ಈತ ಜಿಬಿಸ್ಕೊನನ್ನು ಪಾಟಿಯಾಲದಲ್ಲೂ ಎದುರಿಸಿದ. ಜಿಬಿಸ್ಕೊಗೆ ಇವನ ಜೊತೆ ಮತ್ತೆ ಕುಸ್ತಿ ಮಾಡುವುದು ಇಷ್ಟವಿರಲಿಲ್ಲ. ಆದರೆ ಅವನ ದೇಶದ ಜನ ವಿಶ್ವ ಚಾಂಪಿಯನ್ಷಿಪ್ ಬಿರುದನ್ನು ಮತ್ತೆ ಪಡೆಯುವಂತೆ ಜಿಬಿಸ್ಕೊನನ್ನು ಪ್ರೇರೇಪಿಸಿದರು. ಆದರೆ ಈ ಸಾರಿ ಗಾಮ ಕೇವಲ ಎರಡು ಸೆಕೆಂಡುಗಳಲ್ಲಿ ಜಿಬಿಸ್ಕೊನನ್ನು ಸೋಲಿಸಿ ಇಡೀ ವಿಶ್ವದಲ್ಲಿ ಅಜೇಯನೆನಿಸಿಕೊಂಡ. ಆರಂಭಿಕ ಪಂದ್ಯಗಳು ಸಮವಾದರೂ ಸು. 5,000 ಪಂದ್ಯಗಳಲ್ಲಿ ಈತ ಅಜೇಯನಾಗಿದ್ದ.

1919ರಲ್ಲಿ ಜಲಿಯನ್ವಾಲಾ ಪ್ರಕರಣದ ಸಂದರ್ಭದಲ್ಲಿ ಬಂಧಿಸಲ್ಪಟ್ಟವರಲ್ಲಿ ಇವನೂ ಒಬ್ಬ. ಕಾರಾಗೃಹ ವಾಸದ ಅವಧಿಯಲ್ಲಿ ಇವನೊಂದಿಗೆ ಜೈಲಿನ ಸಿಬ್ಬಂದಿ ಸಾಧಾರಣ ವ್ಯಕ್ತಿಯೊಂದಿಗೆ ವ್ಯವಹರಿಸುವಂತೆಯೇ ವ್ಯವಹರಿಸಿತು. ಆದ್ದರಿಂದ ಇವನ ಬಾಳಿನ ನಿಯಮಬದ್ಧತೆಗೆ ಭಂಗ ಬಂತು. ಕಸರತ್ ಹಾಗೂ ಮಾಲಿಗಳ ಅಭಾವದಿಂದ ಇವನಿಗೆ ಸಾಧಾರಣ ಜ್ವರ ಕಾಣಿಸಿಕೊಂಡಿತು. ಮೈಕೈಯಲ್ಲಿ ನೋವು ಕಾಣಿಸಿತು. ಇನ್ನು ಆಹಾರದ ವಿಷಯವಂತೂ ಹೇಳುವ ಹಾಗೇ ಇರಲಿಲ್ಲ. ಈ ಸಂದರ್ಭದ ದುರುಪಯೋಗ ಪಡೆಯಲು ಅಧಿಕಾರಿಗಳು ಎಷ್ಟೇ ಅಸೆ ತೋರಿಸಿದರೂ ಈತ ಅದಾವುದಕ್ಕೂ ಬಗ್ಗಲಿಲ್ಲ. ತನ್ನ ಇತರ ರಾಜಕೀಯ ಚಳವಳಿಗಾರರ ವಿಷಯ ಹೇಳಲಿಲ್ಲ. ಬೇಸತ್ತ ಅಧಿಕಾರಿಗಳು ಕೊನೆಗೆ ಇವನನ್ನು ಬಿಡುಗಡೆಗೊಳಿಸಬೇಕಾಯಿತು. ಈತ ತನ್ನ ಬದುಕಿನ ಕೊನೆಯ ದಿನಗಳಲ್ಲಿ ಪಡಬಾರದ ಕಷ್ಟಗಳನ್ನು ಎದುರಿಸಬೇಕಾಯಿತು. ಭಾರತ ಸರ್ಕಾರದಿಂದ ಯಾವ ಪುರಸ್ಕಾರವೂ ಇವನಿಗೆ ಸಿಗಲಿಲ್ಲ. ಅನ್ನ ಆಹಾರಗಳಿಲ್ಲದೆ ಸಾಯುವ ದುರ್ಗತಿ ಬಂತು. ಇವನಿಗೆ ಒದಗಿದ ಈ ದುರ್ಗತಿಯನ್ನು ಕಂಡು ಪಾಕಿಸ್ತಾನದ ಸರ್ಕಾರ ಧನಸಹಾಯ ಮಾಡುವುದಾಗಿ ಭರವಸೆಯಿತ್ತು ಗಾಮರನ್ನು ತನ್ನಲ್ಲಿಗೆ ಕರೆಸಿಕೊಂಡಿತು. ಕೊನೆ ಕೊನೆಯ ದಿನಗಳಲ್ಲಿ ತನ್ನ ಮೂಗಿನ ಮೇಲೆ ಕುಳಿತ ನೊಣವನ್ನು ಕೂಡ ಕೈಯಿಂದ ಹೊಡೆದು ಓಡಿಸಲಾಗದಷ್ಟು ನಿಶ್ಯಕ್ತನಾಗಿದ್ದ ಸ್ಥಿತಿಯಲ್ಲಿ ಈತ ಪಾಕಿಸ್ತಾನದಲ್ಲಿ 1953ರಲ್ಲಿ ನಿಧನನಾದ.