ಗಾತಿಕ್ ಭಾಷೆ

ಭಾಷೆ.

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಗಾತಿಕ್ ಭಾಷೆ

ಬದಲಾಯಿಸಿ

ಪೂರ್ಣವಾಗಿ ವಿವರಗಳು ತಿಳಿದುಬಂದಿವೆಯೆಂದು ಹೇಳಬಹುದಾದ ಜರ್ಮ್ಯಾನಿಕ್ ಭಾಷೆಗಳಲ್ಲಿ ಅತಿ ಪ್ರಾಚೀನವಾದುದು. ಹಾಗಾಗಿ ಇದರ ಬಗ್ಗೆ ವಿಶೇಷ ಆಸಕ್ತಿ ತಲೆದೋರುವುದು ಸಹಜ. ಈ ಭಾಷೆಯನ್ನು ಕುರಿತಾದ ತಿಳಿವಳಿಕೆಗೆ ಇದೇ ಭಾಷೆಯಲ್ಲಿರುವ ಬೈಬಲಿನ ಅನುವಾದದ ಉಳಿಕೆಯೇ ಆಧಾರ. ಪ್ರ.ಶ. 35೦ರ ಸುಮಾರಿಗೆ ಪಶ್ಚಿಮ ಗಾತರ ಪಾದ್ರಿ ವುಲ್ಫಿಲನೆಂಬವನಿಂದ ಈ ಅನುವಾದ ಆಯಿತೆನ್ನಲು ಆ ಕಾಲದಲ್ಲಿ ಗಾತ್ ಜನ ಕಪ್ಪು ಸಮುದ್ರದ ಪಶ್ಚಿಮ ದಂಡೆಯಲ್ಲಿ ವಾಸಮಾಡುತ್ತಿದ್ದುದೇ ಕಾರಣವೆನ್ನಬಹುದು. ಆದ್ದರಿಂದ ಈ ಅನುವಾದ ಇಂಗ್ಲಿಷ್ ಮತ್ತು ಜರ್ಮನ್ ಭಾಷೆಗಳಲ್ಲಿ ಉಪಲಬ್ಧವಾಗಿರುವ ಪ್ರಾಚೀನತಮ ಗ್ರಂಥಗಳಿಂದ ಕ್ರಮವಾಗಿ 3೦೦ ಮತ್ತು 4೦೦ ವರ್ಷ ಹಿಂದಿನದೆನ್ನಬಹುದು.

ಗ್ರೀಕ್ ವರ್ಣಮಾಲೆಯ ಮಾದರಿಯನ್ನಿಟ್ಟುಕೊಂಡು ವುಲ್ಫಿಲನಿಂದ ರಚನೆ ಗೊಂಡ 27ಅಕ್ಷರಗಳಿಂದ ಕೂಡಿರುವ ವಿಶೇಷ ವರ್ಣಮಾಲೆಯ ಆಧಾರದ ಮೇಲೆ ಅನುವಾದಿತ ಬೈಬಲನ್ನು ಬರೆಯಲಾಗಿದೆ. ಗಾತಿಕ್ ಭಾಷೆಯಲ್ಲಿನ ಸ್ವರಗಳ ಬಗ್ಗೆ ವಿಶದವಾಗಿ ಹೇಳಲಾಗದಿದ್ದರೂ ವ್ಯಂಜನಗಳು ಮಾತ್ರ ಜರ್ಮ್ಯಾನಿಕ್ ಮೂಲ ಭಾಷೆಗೆ ವಿದ್ವಾಂಸರು ಕಲ್ಪಿಸಿಕೊಂಡಿರುವ ವ್ಯಂಜನಗಳೇ ಆಗಿವೆ- ಮೂರು ಅಘೋಷಸ್ಪರ್ಶಗಳು (ಪ, ತ, ಕ), ಮೂರು ಅಘೋಷ ಸಂಘರ್ಷಿಗಳು (ಫ, ಥ, ಹ), ಮೂರು ಘೋಷ ಸ್ಪರ್ಶ-ಸಂಘರ್ಷಿಗಳು (ಬ, ದ, ಗ), ಎರಡು ಊಷ್ಮ ವರ್ಣಗಳು (ಸ, ಜ), ಎರಡು ನಾಸಿಕ್ಯಗಳು (ಮ, ನ), ಎರಡು ಸಲಿಲಗಳು (ಲ, ರ), ಮತ್ತು ಎರಡು ಅಂತಸ್ಥಗಳು (ಅರ್ಧಸ್ವರಗಳು) (ವ,ಯ).

ಪ್ರ. ಶ. 466 ರಿಂದ 711ರವರೆಗೆ ಸ್ಪೇನ್ ದೇಶವನ್ನಾಳಿದ ಪಶ್ಚಿಮ ಗಾತರು ಮತ್ತು 489ರಿಂದ 554ರವರೆಗೆ ಇಟಲಿಯನ್ನಾಳಿದ ಪೂರ್ವ ಗಾತರೂ ಗಾತಿಕ್ ಭಾಷೆಯನ್ನಾಡಿದವರೇ ಆಗಿರಬೇಕು. ಆದರೆ ಈ ಭಾಷೆ ಬಹಳ ಕಾಲ ಈ ಯಾವುದೇ ದೇಶಗಳಲ್ಲಿ ಉಳಿದು ಬರಲಿಲ್ಲ. ಇದಕ್ಕೂ ಮುಂದೆ ಸಾವಿರ ವರ್ಷಗಳವರೆಗೆ ಈ ಭಾಷೆ ವ್ಯವಹಾರದಲ್ಲಿದ್ದ ದೇಶವೆಂದರೆ ಕ್ರಿಮಿಯ ಎನ್ನಬಹುದು. ರಾಜಕಾರ್ಯಕ್ಕಾಗಿ ಕಾನ್ಸ್ಟಾಂಟಿನೋಪಲಿಗೆ ಬಂದಿದ್ದ ಬಸ್ಬೆಕ್ ಎಂಬ ಹೆಸರಿನ ಫ್ಲೆಮಿಷ್ ರಾಜಕಾರಣಿ ಕ್ರಿಮಿಯದಲ್ಲಿ ವ್ಯವಹಾರದಲ್ಲಿದ್ದ ಗಾತಿಕ್ ಭಾಷೆಯ ಹಲವಾರು ಶಬ್ದಗಳನ್ನು, ವಾಕ್ಯಾಂಶಗಳನ್ನು ಗಮನಿಸಿ ಬರೆದಿಟ್ಟಿದ್ದಾನೆ. ಗಾತಿಕ್ ಭಾಷೆಯ ಬಗ್ಗೆ ನಮಗೆ ದೊರಕುವ ಕಟ್ಟ ಕಡೆಯ ಬರೆವಣಿಗೆ ಎಂದರೆ ಈ ತುಣುಕುಗಳೇ.