ಗಾಣರಾಣಿಯರು : ರಾಘವಾಂಕನ ಅದ್ಭುತ ಸೃಷ್ಟಿ!
ರಾಘವಾಂಕನ ‘ಹರಿಶ್ಚಂದ್ರ ಚಾರಿತ್ರ್ಯ’ ಕಾವ್ಯದಲ್ಲಿ ಸಪ್ತಮ ಸ್ಥಲವು ಆತನ ಉಜ್ವಲ ಕಾವ್ಯಪ್ರತಿಭೆಗೆ ಸಾಕ್ಷಿಯಾಗಿದೆ. ಆತನ ಇಡೀ ಕಾವ್ಯವೇ ಅದಕ್ಕೆ ಸಾಕ್ಷಿಯಾಗಬಹುದಾದರೂ, (’ಹರಿಶ್ಚಂದ್ರಕಾವ್ಯಸಂಗ್ರಹ’ದ ವಾಚನ ರಸಿಕರಿಗೊಂದು ರಸಯಾತ್ರೆ. – ಕುವೆಂಪು) ಈ ಪ್ರಸಂಗ ಮಾತ್ರ, ತನ್ನ ವೈಚಾರಿಕ ಸಂಘರ್ಷದಿಂದ, ಕಾವ್ಯಸೌಂದರ್ಯದಿಂದ ಆತನ ಪ್ರತಿಭೆಗೆ ಸುಂದರ ಚೌಕಟ್ಟನ್ನು ಒದಗಿಸುತ್ತದೆ. ಸಂದರ್ಭ ಹೀಗಿದೆ: ತಾನು ಸೃಷ್ಟಿಸಿದ ಹಂದಿ, ಹರಿಶ್ಚಂದ್ರನ ಬಾಣಗಳಿಂದ ಗಾಯಗೊಂಡು ಬಂದಿದೆ. ಅದನ್ನು ನೋಡಿ ಕುಪಿತನಾದ ವಿಶ್ವಾಮಿತ್ರ ‘ಸಿಕ್ಕಿದನಲಾ ಭೂಪನ್ ಇಂದು. ನಾನಾಯ್ತು ತಾನಾಯ್ತು, ಕೆಡಿಸದೆ ಮಾಣೆನ್’ ಎಂದು ಹೂಂಕರಿಸಿದಾಗ ಸತಿಯರಿಬ್ಬರು ಸೃಷ್ಟಿಯಾಗುತ್ತಾರೆ. ಆತನ ಆಜ್ಞೆಯಂತೆ, ಅವರಿಬ್ಬರು ಹರಿಶ್ಚಂದ್ರನಿದ್ದಲ್ಲಿಗೆ ಬಂದು, ಹಾಡಿ ನರ್ತಿಸಿ ಅವನನ್ನು ಸಂತೋಷಪಡಿಸುತ್ತಾರೆ. ಆದರೆ ಆತ ಕೊಡಲುದ್ದೇಶಿಸಿದ ಕೊಡುಗೆಯನ್ನು ನಿರಾಕರಿಸಿ ತಮ್ಮನ್ನು ಮದುವೆಯಾಗುವಂತೆ ಹಠ ಹಿಡಿಯುತ್ತಾರೆ. ಆದರೆ, ಹರಿಶ್ಚಂದ್ರ ಅವರನ್ನು ಮದುವೆಯಾಗದಿರುವುದಕ್ಕೆ ಕೊಡುವ ಕಾರಣ ಅವರು ಹೊಲತಿಯರೆಂಬುದು! ಈ ಹೊಲೆತನದ ವಿಶ್ಲೇಷಣೆಯನ್ನು ರಾಘವಾಂಕ ಹೇಗೆ ನೆಡೆಸಿದ್ದಾನೆ? ಅದರ ಬಗ್ಗೆ ಆತನ ನಿಲುವೇನು? ಇಂತಹ ಒಂದು ವೈಚಾರಿಕ ಸಂಘರ್ಷವನ್ನು ಕಾವ್ಯದಲ್ಲಿ ರಾಘವಾಂಕ ಕಲಾತ್ಮಕವಾಗಿ ಅಭಿವ್ಯಕ್ತಿಸಿದ್ದಾನೆಯೆ? ಅದಕ್ಕೆ ಆತ ಕಂಡುಕೊಂಡ ಉಪಾಯವೇನು? ಎಂಬುದನ್ನು ನಾವು ಮನಗಾಣಬೇಕಾಗಿದೆ.
- ಮುನಿಗೆ ಹೊಲೆಯಾವುದು? ಅತಿ ಕೋಪ, ಬದ್ಧದ್ವೇಷ, ಅನಿಮಿತ್ತ ವೈರ.
- ಅದಱಿಂದ ಹುಟ್ಟಿದರಾಗಿ ವನಿತೆಯರು ಕಡೆಗೆ ಹೊಲತಿಯರಾಗಿ,
- ಕೆಲಸಾರಿ ನಿಂದು ‘ಬೆಸನ್ ಆವುದು?’ ಎನಲು
- ‘ಜನಪತಿ ಹರಿಶ್ಚಂದ್ರ ಬಂದು ನಮ್ಮಯ ತಪೋವನದೊಳೈದನೆ.
- ಹೋಗಿ, ಸರ್ವಬುದ್ಧಿಗಳೊಳ್ ಆತನ ಮರುಳು ಮಾಡುತಿರಿ. ಹೋಗಿ.’
- ಎಂದು ಅಟ್ಟಿದಂ ದುರ್ಮಂತ್ರ ಬಲವಂತನು.
ಇದು ಸಪ್ತಮಸ್ಥಲದ ಎರಡನೆಯ ಪದ್ಯ. ಮುಂದೆ ತಾನು ಹರಿಶ್ಚಂದ್ರ ಮತ್ತು ಗಾನರಾಣಿಯರ ನಡುವೆ ನಡೆಸಲಿರುವ ವೈಚಾರಿಕ ಸಂಘರ್ಷಕ್ಕೂ ಮೊದಲೇ ರಾಘವಾಂಕ ‘ಹೊಲೆತನ’ ‘ಅಸ್ಪೃಷ್ಯತೆ’ ಇವುಗಳ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದಾನೆ. ಆತನ ಪ್ರಕಾರ ಹೊಲೆತನಕ್ಕೆ ಕಾರಣಗಳು ಮೂರು; . ಅತಿ ಕೋಪ, ಬದ್ಧದ್ವೇಷ, ಅನಿಮಿತ್ತ ವೈರ. ಅದು ಮುನಿಗೆ ಎಂದು ಹೇಳಿದ್ದರೂ ಒಂದು ರೀತಿಯಲ್ಲಿ ಸಾರ್ವತ್ರಿಕವಾಗಿಯೂ ಆ ಕಾರಣಗಳು ಹೊಲೆತನಕ್ಕೆ ಅನ್ವಯವಾಗುವಂತಹವೇ ಆಗಿವೆ. ಅಂತಹ ಗುಣಗಳಿದ್ದರೆ ಮುನಿಯಾದವನಿಗೂ ಹೊಲೆತನ ತಪ್ಪಿದ್ದಲ್ಲ! ಹೊಲೆತನ ಹುಟ್ಟಿನಿಂದ ಬರುವುದಿಲ್ಲ; ಗುಣದಿಂದ ಬರುತ್ತದೆ. ಅದು, ಹುಟ್ಟುವಿಕೆಗೆ ಕಾರಣವಾದ ಸಂದರ್ಭದಿಂದ, ಉದ್ದೇಶದಿಂದ ಹಾಗೂ ವ್ಯಕ್ತಿಯ ನಡವಳಿಕೆಯಿಂದ ಹೊಲೆತನ ಆರೋಪಿತವಾಗುತ್ತದೆ. ಆದರೆ ಒಂದು ಅಂಶವನ್ನು ಸ್ಪಷ್ಟವಾಗಿ ಗಮನಿಸಬೇಕು. ರಾಘವಾಂಕ ಸೂಚನಾಪದ್ಯದಲ್ಲಿ ಮತ್ತು ಎರಡನೆಯ ಪದ್ಯದಲ್ಲಿ ಮಾತ್ರ ಆ ಗಾನರಾಣಿಯರನ್ನು ‘ಹೊಲತಿ’ಯರೆಂದು ಸಂಬೋಧಿಸಿದ್ದಾನೆ. ಇನ್ನು ಉಳಿದಂತೆ ಹರಿಶ್ಚಂದ್ರನ ಮತ್ತು ಗಾನರಾಣಿಯರ ನಡುವೆ ನಡೆಯುವ ವೈಚಾರಿಕ ಸಂಘರ್ಷದಲ್ಲಿ, ವಿಶ್ವಾಮಿತ್ರ-ಹರಿಶ್ಚಂದ್ರರ ನಡುವಿನ ವಾಗ್ಯುದ್ಧದಲ್ಲಿ ಮಾತ್ರ, ಆಯಾಯ ಪಾತ್ರಗಳ ಬಾಯಲ್ಲಿ ಸಂದರ್ಭಾನುಸಾರವಾಗಿ ಬಳಸಿದ್ದಾನೆ.
- ಹೊಸ ಕುಟಿಲ ಕುಂತಲದ, ಚಂಚಲ ಆಕ್ಷಿಗಳ,
- ಕರ್ಕಶ ಕುಚದ, ಶಿಥಿಲ ಮಧ್ಯದ, ಲಘು ಶ್ವಾಸದ,
- ಅತ್ಯಸಮ ರಾಗಾಧರದ, ಗೂಢ ನಾಭಿಯ,
- ಮೀಱಿ ಕೊಬ್ಬಿದ ನಿತಂಬಯುಗದ, ಅಸದಳದ ಜಡಗತಿಯ, ಬೆಳುನಗೆಯ,
- ವಕ್ರವಾಕ್ಯ ಸಮೂಹದ ಅವಗುಣಂಗಳ ಸಂಗದಿಂ
- ಕುಲಂ ಹಸಗೆಟ್ಟ ಅನಾಮಿಕೆಯರ್ ಆದರ್.
- ಅಲ್ಲದೆ ಸಂಗವು ಆರ ಕುಲಮಂ ಕೆಡಿಸದು?
ಈ ಪದ್ಯದಲ್ಲಿ ಎರಡು ಭಾಗಗಳಿವೆ. ಮೊದಲು ಆ ಅನಾಮಿಕೆಯರ ಅಸಹಜ ಸೌಂದರ್ಯದ ಕಾರಣದಿಂದ ಅವರ ಕುಲ ಹಸಗೆಟ್ಟು ಅನಾಮಿಕೆಯರಾದರು ಎಂಬುದನ್ನು (ಇಲ್ಲಿ ರಾಘವಾಂಕ ಹೊಲತಿ ಎಂಬ ಪದವನ್ನು ಬಳಸಿಲ್ಲದಿರುವುದು ಗಮನಾರ್ಹ; ಆದರೆ ಕುಲದ ಮಾತೆತ್ತಿದ್ದಾನೆ.) ಒಪ್ಪಲು ಕಷ್ಟವಾಗುತ್ತದೆ. ಆದರೆ ಎರಡನೆಯ ಭಾಗದಲ್ಲಿ ‘ಅವಗುಣಂಗಳ ಸಂಗದಿಂ ಕುಲಂ ಹಸಗೆಟ್ಟು’ ಹೊಲತಿಯರಾದರು ಎಂಬುದರಲ್ಲಿ ಸ್ವಲ್ಪಮಟ್ಟಿನ ಅರ್ಥವಿದೆ. ವಿಚಾರಗೆಟ್ಟವರು ಮಾತ್ರ ಹೊಲೆತನಕ್ಕೆ ಒಳಗಾಗುತ್ತಾರೆ. ಕೊನೆಯ ಸಾಲು, ‘ಸಂಗವು ಆರ ಕುಲಮಂ ಕೆಡಿಸದು’ ಎನ್ನುವಲ್ಲಿ ರಾಘವಾಂಕ ತನ್ನ ವೈಚಾರಿಕ ನಿಲುವನ್ನು ಉನ್ನತೀಕರಿಸಿಕೊಂಡಿರುವುದನ್ನು ನೋಡಬಹುದು. ಅಸಹಜ ಸೌಂದರ್ಯದಿಂದ, ಅವಗುಣಂಗಳ ಸಂಗದಿಂದ ಹೊಲತಿಯರಾಗಿರುವ ಆ ಅನಾಮಿಕೆಯರ ಸಂಗ ಯಾರ ಕುಲವನ್ನೂ ಕೆಡಿಸುವುದಿಲ್ಲ. ಏಕೆಂದರೆ ಅವರಿಗೆ ಆರೋಪಿತವಾಗಿರುವ ಹೊಲೆತನಕ್ಕೆ ಅವರು ಕಾರಣರಲ್ಲ! ಮುಂದಿನ ಪದ್ಯದಲ್ಲಿ,
- ಸುರಾಸುರರ್ ಅಬುದಿಯಂ ಮಥಿಸುವಂದು
- ಹೊಸವಿಷದ ಹೊಗೆ ಹೊಯ್ದು ಕಗ್ಗನೆ ಕಂದಿ
- ಜಲದೇವಿಯರು ಮನದಲಿ ನೊಂದು ಮಾನಿಸರಾದರೋ,
- ಕಮಲಜಂ ನೀಲದಿಂದ ಮಾಡಿದ ಸಾಲಭಂಜಿಕೆಗಳ್ ಒದವಿ ಜೀವಂ ತಳೆದವೋ
- ಎನಿಪ್ಪ ಅಂದದಿಂ ಬಂದರ್ ಅಂಗನೆಯರ್ ಅವನೀಶನೆಡೆಗೆ.
ಎಂದು ಹೇಳುವಾಗಲೂ, ಅವರ ಬಗ್ಗೆ ರಾಘವಾಂಕ ಸಹಾನುಭೂತಿ ಉಳ್ಳವನಾಗಿದ್ದಾನೆ. ಹಾಗೆ ಬಂದ ಗಾನನಾಯಕಿಯರು, ಹರಿಶ್ಚಂದ್ರನನ್ನು ಸ್ತುತಿಸಿ, ‘ಯಥೋಚಿತ ತಾರಮಧುರಮಂದ್ರಂಗಳಿಂ’ ಹಾಡಿ, ನರ್ತಿಸಿ ರಾಗರಸಲಹರಿಯಿಂದ ಹರಿಶ್ಚಂದ್ರನ ದುಗುಡವನ್ನು ತೊಳೆಯುತ್ತಾರೆ. ಇಲ್ಲಿ ರಾಘವಾಂಕ ಅನಾಮಿಕೆಯರು ಎಂಬ ಪದ ಬಳಸಿರುವುದರಲ್ಲಿ ಔಚಿತ್ಯವಿದೆ. ಏಕೆಂದರೆ ಅವರಿಬ್ಬರೂ ಹರಿಶ್ಚಂದ್ರನಿಗೆ ಅಪರಿಚಿತರು. ಅವರಿಗೆ ಎಂದು ಒಂದು ಹೆಸರೂ ಇಲ್ಲ! ಅವರೇನು ಬಂದು ಹರಿಶ್ಚಂದ್ರನಲ್ಲಿ ತಮ್ಮ ಪರಿಚಯ (ವಿಶ್ವಾಮಿತ್ರನ ಮಕ್ಕಳೆಂದು) ಹೇಳಿಕೊಂಡಿಲ್ಲ. ಹಂದಿಯನ್ನು ಬೆನ್ನಟ್ಟಿದ ಆಸಱು, ವಿಶ್ವಾಮಿತ್ರನ (ಮುನಿರಕ್ಕಸ!) ಆಶ್ರಮಕ್ಕೆ ಬಂದಿರುವ ಅಂಜಿಕೆ, (ಮುಕ್ಕಣ್ಣನೆನಿಪ) ಗುರುವಶಿಷ್ಠನ ಆಜ್ಞೆಯನ್ನು ತಪ್ಪಿದ ಅಳಲು, ವಿಶ್ರಮಿಸಿಕೊಳ್ಳುವಾಗ ಕಂಡ ಕನಸಿನ ಭಯ ಇವುಗಳನ್ನು, ಅನಾಮತ್ತಾಗಿ ಮರೆಸಿಬಿಡುವಂತೆ ಹಾಡಿ ನರ್ತಿಸಿದ ಆ ಕನ್ನೆಯರಿಗೆ ಏನಾದರೂ ಕೊಡಬೇಕೆನ್ನಿಸುತ್ತದೆ. ಹರಿಶ್ಚಂದ್ರ ಕೊಡುಗೈದಾನಿ. ತನ್ನ ಮೈಮೇಲಿದ್ದ ಆಭರಣವನ್ನೇ ತೆಗೆದು ಕೊಡಲು ಮುಂದಾಗುತ್ತಾನೆ. ಆಭರಣಕ್ಕೆ ಆಸೆ ಪಡದ ಆ ಗಾನರಾಣಿಯರು, (ಅಸಮ್ಮತಿಯ ಧ್ವನಿಯಲ್ಲಿ)
- ಬಡತನದ ಹೊತ್ತು ಆನೆ ದೊರಕಿ ಫಲವೇನು?
- ನೀರಡಸಿರ್ದ ಹೊತ್ತು ಆಜ್ಯ ದೊರಕಿ ಫಲವೇನು?
- ರುಜೆ ಅಡಸಿ ಕೆಡೆದಿಹ ಹೊತ್ತು ರಂಭೆ ದೊರಕೊಂಡಲ್ಲಿ ಫಲವೇನು?
- ಸಾವ ಹೊತ್ತು ಪೊಡವಿಯ ಒಡೆತನ ದೊರಕಿ ಫಲವೇನು?
- ಕಡುವಿಸಿಲು ಹೊಡೆದು ಬೆಂಡಾಗಿ ಬೀಳ್ವ ಎಮಗೆ, ನೀನೊಲಿದು ಮಣಿದೊಡುಗೆಗಳನು ಇತ್ತು ಫಲವೇನು?
- ಕಡಲೊಳ್ ಆಳ್ವಂಗೆ ತೆಪ್ಪವನು, ದಾರಿದ್ರಂಗೆ ಕಡವರವನು,
- ಅತಿ ರೋಗಿಗೆ ಅಮೃತಮಂ ಕೊಟ್ಟಡೆ,
- ಅವರ್ ಅಡಿಗಡಿಗೆ ಅದಾವ ಹರುಷವನ್ ಎಯ್ದುತಿಪ್ಪರ್?
- ಅವರಂ ಪೋಲ್ವರ್, ಈ ಪೊತ್ತಿನ ಸುಡುಸುಡನೆ ಸುಡುವ
- ಬಿಱುಬಿಸಿಲ ಸೆಕೆ ಉಸುರ ಬಿಸಿ ಹೊಡೆದುದು.
- ಉರಿಹೊತ್ತಿ, ಬಾಯ್ಬತ್ತಿ, ಡಗೆ ಸುತ್ತಿ ಸಾವಡಸುತಿದೆ.
- ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲುಹು ಭೂಭುಜ.
ಎಂದು ಒತ್ತಾಯಪಡಿಸುತ್ತಾರೆ. ಇಲ್ಲಿಂದಲೇ ರಾಘವಾಂಕ ತಾನು ನೇರವಾಗಿ ಏನನ್ನೂ ಹೇಳದೆ, ಹರಿಶ್ಚಂದ್ರ ಮತ್ತು ಗಾನರಾಣಿಯರ ಮುಖಾಂತರ ವೈಚಾರಿಕ ಸಂಘರ್ಷವನ್ನು ಮುಂದುವರೆಸುತ್ತಾನೆ; ಪರಕಾಯ ಪ್ರವೇಶ ಮಾಡಿದವನಂತೆ! ಇಲ್ಲಿ ಗಾನರಾಣಿಯರ ಮತ್ತು ಹರಿಶ್ಚಂದ್ರನ ಉದ್ದೇಶಗಳು ಮೊದಲೇ ನಿರ್ಧಾರಿತವಾಗಿವೆ. ಆದರೆ, ಅವರಿಬ್ಬರೂ ನಟಿಸಲೇಬೇಕಾಗಿದೆ. ಏಕೆಂದರೆ ರಾಘವಾಂಕ ಸೂತ್ರಧಾರನ ಜಾಗದಲ್ಲಿ ನಿಂತಿದ್ದಾನೆ. ಅವರು ಕೇಳುವ ಮುತ್ತಿನ ಸತ್ತಿಗೆ (ಮುತ್ತಿನಿಂದ ಅಲಂಕೃತವಾದ ಬಿಳಿಕೊಡೆಯಾದರೂ ಆಗಬಹುದು; ಶ್ಲೇಷಾರ್ಥವನ್ನು ಆರೋಪಿಸಿಕೊಂಡರೆ ‘ಚುಂಬನ’ವೂ ಆಗಬಹುದು!) ಹರಿಶ್ಚಂದ್ರನಲ್ಲಿ ದಿಗಿಲನ್ನು ಹುಟ್ಟಿಸುತ್ತದೆ. ಆತ ಆ ಸತ್ತಿಗೆಯನ್ನು ಸೂರ್ಯವಂಶದವರಿಗಲ್ಲದೆ ಬೇರೆಯವರಿಗೆ ಕೊಡಲು ಬಾರುವುದಿಲ್ಲ ಎಂದು ಹೇಳುತ್ತಾನೆ.
ಹರಿಶ್ಚಂದ್ರ:
- ರವಿಕುಲದ ಪೀಳಿಗೆಯೊಳ್ ಒಗೆದ ರಾಯರ್ಗೆ ಪಟ್ಟವ ಕಟ್ಟುವಂದು, ಇದು ಇಲ್ಲದೊಡೆ ಅರಸುತನ ಸಲ್ಲದು ಅವನಿಯೊಳು. ಯುದ್ಧರಂಗದೊಳು ಇದಂ ಕಂಡ ಹಗೆಗಳು ನಿಲ್ಲರ್. ಇದಱ ಕೆಳಗೆ ಕವಿವ ನೆಳಲೊಳಗೆ ಆವನಿರ್ದನ್ ಆತಂಗೆ ತಾಂ ತವಿಲು, ಎಡರು, ಬಡತನ, ನಿರೋಧ, ಅಪಕೀರ್ತಿ, ಪರಿಭವಭಯಂ ಹರೆವುದು. ಇದನ್ ಅಱಿದು ಅಱಿದು ಸತ್ತಿಗೆಯ ಕೊಡಬಹುದೆ?
ಗಾಣರಾಣಿಯರು:
- ಕೊಡಬಾರದ ಒಡವೆಯಂ ಕೊಡುವುದು ಅರಿದೈಸೆ. ಕೊಡುವ ಒಡವೆಗಳನ್ ಆರದೊಡಂ ಕೊಡರೆ? ಹೇಳು. (ಸಾಮಾನ್ಯವಾಗಿ ಎಲ್ಲರೂ ಕೊಡುವದನ್ನು ಕೊಟ್ಟರೆ ಅದರಲ್ಲಿ ವಿಶೇಷವೇನಿಲ್ಲ. ಆದರೆ, ಕೊಡಬಾರದ್ದನ್ನು ಕೊಟ್ಟಾಗಲೇ ವಿಶೇಷ ಎಂಬ ವಾದ ಅವರದು)
ಹರಿಶ್ಚಂದ್ರ:
- (ಅಸಹನೆಯಿಂದ) ಬಿಡೆ ಬೇಡುವರ ಬಾಯಿ ಹಱಿವುದೇ? ಬೇಡಿದುದನ್ ಈವ ದೊರೆ ಆವನ್?
ಗಾಣರಾಣಿಯರು:
- ಮುನ್ನಿನ ಬಲಿ, ದಧೀಚಿ, ಶಿಬಿಗಳು ಬೇಡಿದ ಒಡವೆಗಳನ್ ಕೊಡರೆ?
ಹರಿಶ್ಚಂದ್ರ:
- ಅದೇಂ ತ್ಯಾಗವೇ? ದಾನಗುಣವ ಇಡಿದೈಸಲೇ ಕೊಟ್ಟರ್. (ಬಲಿ ದಧೀಚಿ ಶಿಬಿಗಳು ದಾನಗುಣವನ್ನು ಆಶ್ರಯಿಸಿದ್ದರಿಂದ ಕೊಟ್ಟರು. ಆದರೆ ಅದು ತ್ಯಾಗವಲ್ಲ! ಹರಿಶ್ಚಂದ್ರನನ್ನು ಅವರು ಮಾತಿನ ಗಾಳಕ್ಕೆ ಸಿಕ್ಕಿಸುತ್ತಿದ್ದಾರೆ. ಆದ್ದರಿಂದ ಆತ ಗೊಂದಲಕ್ಕೆ ಒಳಗಾಗಿದ್ದಾನೆ)
ಗಾಣರಾಣಿಯರು:
- ನೀನಿದಂ ಕೊಡಲ್ ಒಂದು ದಾನವೆ? ಪಾಡಿ ಮೆಚ್ಚಿಸಿದ ಕತದಿಂ ತ್ಯಾಗ, ಆಸತ್ತು ಬೇಡಿದುದಱಿಂ ದಾನ, ಹವಣಿನ ಪದಸ್ಥಿಕೆಯ ಜೋಡಿ – ಅದಱೊಳು ಉಪಕಾರ ಉಂಟು. ಕೌಶಿಕನ ಹೆಸರಿಂಗಿತ್ತಡೆ ಆರಾಧನೆ, ಗಾಡಿಕಾತಿಯರಾಗಿ ವಿಟಲಕ್ಷಣಂ, ಮನದ ಪಾಡು ಅಱಯಂಲೆಂದೆವು – ಅದಱಿಂ ಸಲುಗೆ, ಶಂಕಿಸದೆ ನೀಡಿದೊಡೆ ಕೀರ್ತಿ, ಕರುಣಿಸಿ ಕೊಡಲು ಪುಣ್ಯ ಈ ಸತ್ತಿಗೆಯೊಳಹುದು. (ಇಲ್ಲಿ ಗಾನರಾಣಿಯರು ಕೌಶಿಕ ಎಂದು ವಿಶ್ವಾಮಿತ್ರನ ಹೆಸರನ್ನು ಎತ್ತಿದ್ದಾರೆ. ಅವನ ಕಡೆಯವರು ಎಂದು ಸೂಚಿಸಿದ್ದಾರೆ; ಆದರೆ ಅವನ ಮಾನಸಪುತ್ರಿಯರೆಂದು, ಅವನೇ ನಮ್ಮನ್ನು ಇಲ್ಲಿ ಕಳುಹಿಸಿದ್ದು ಎಂದು ಹೇಳಿಲ್ಲ. ಹರಿಶ್ಚಂದ್ರನೂ ಕೌಶಿಕನ ಉಲ್ಲೇಖವನ್ನು ಗಮನಕ್ಕೆ ತಂದುಕೊಂಡಿಲ್ಲ ಎಂಬುದು ಗಮನಾರ್ಹ)
ಹರಿಶ್ಚಂದ್ರ:
- ಅನುನಯದೊಳು ಎಲ್ಲವಂ ಕೊಡಬಹದು ಬಿಡಬಹುದು. ಜನನಿಯಂ, ಜನಕನಂ, ನಲ್ಲಳಂ, ದೈವಮಂ, ನಂಬಿ ನಚ್ಚಿರ್ದ ಪರಿವಾರಮಂ ಮನವಾಱೆ ಕೊಡುವ ಬಿಡುವ ಅತಿಕಲಿಗಳು ಜನರೊಳಗೆ ಜನಿಸರ್!
ಗಾಣರಾಣಿಯರು:
- ನೀನೀಗ ಪೇಳ್ದ ಅನಿತರೊಳು ಬೇಡಿದಡೆ ಕೊಡಬೇಡ; ಕೊಡೆಯನ್ ಈಯೆನೆ, ಲೋಭವೇಕೆ ಅರಸ?
ಹರಿಶ್ಚಂದ್ರ:
- ಇದಲ್ಲದೆ ಬೇಱೆ ಮಾತೆ ಪಿತರ್ ಇಲ್ಲ. ಲೋಗರಿಗೆ ಕೊಡಬಾರದಾಗಿ ಸತಿ, ವಂಶಗತವಾಗಿ ಬಂದುದಱಿಂದ ತಂದೆ, ಪಟ್ಟವ ಕಟ್ಟುವಾಗಲ್ ಅರ್ಚಿಸಿಕೊಂಬುದಾಗೆ ದೈವಂ, ನೆಳಲ ತಂಪನ್ ಒಸೆದು ಈವುದಾಗಿ ಸಾಗಿಸುವ ತಾಯ್, ಧುರದೊಳರಿಗಳಂ ನಡುಗಿಸುವುದಾಗಿ ಚತುರಂಗಬಲವು ಎನಿಸಿತು ಈ ಛತ್ರ ಎಂಬಾಗಳ್, ಇದನ್ ಅಱಿದು ಅಱಿದು ಬೇಡುವರನ್ ಮೂಜಗದೊಳು ಅತಿಮರುಳರ್ ಎನ್ನರೇ?
ಇಲ್ಲಿಯವರೆಗೆ ಮಾತಿಗೆ ಮಾತು ಕೊಟ್ಟು ತಾವು ಬೇಡಿದ್ದುದನ್ನು ಗಾಣರಾಣಿಯರು, ಅದನ್ನು ಕೊಡದಿರುವುದಕ್ಕೆ ಹರಿಶ್ಚಂದ್ರ ಸಮರ್ಥನೆಯನ್ನು ಒದಗಿಸುವಲ್ಲಿ ನಿರತರಾಗಿದ್ದಾರೆ. ಆದರೆ ಹರಿಶ್ಚಂದ್ರ ಬಗ್ಗುವುದಿಲ್ಲ ಎಂಬುದನ್ನು ಮನಗಂಡ ಅವರಿಬ್ಬರೂ ತಮ್ಮ ವರಸೆಯನ್ನು ಬದಲಾಯಿಸುತ್ತಾರೆ.
ಗಾಣರಾಣಿಯರು:
- (ನಿರಾಸೆಯಿಂದ) ಇಳೆಯೊಳಗೆ ಹೆಸರುಳ್ಳ ದಾನಿಯೆಂಬುದನು ಕೇಳ್ದು, ಎಳಸಿ, ಕಟ್ಟಾಸೆಪಟ್ಟು ಎಯ್ತಂದು ಬೇಡಿ ನಿಷ್ಫಲವಾಗಂತೆ, ನಾವು ಅತಿ ಮಱುಗದಂತೆ, ಅಳಲದಂತೆ, ಬಿಸುಸುಯ್ಯದಂತೆ ತಿಳಿದು ನೀನ್ ಎಮಗೆ ವಲ್ಲಭನಾಗಿ ಚಿತ್ತದ ಉಮ್ಮಳಿಕೆಯಂ ಕಳೆ ಹರಿಶ್ಚಂದ್ರ ಭೂನಾಥ.
(ಹರಿಶ್ಚಂದ್ರನನ್ನೇ ಮದುವೆಯಾಗು ಎಂದು ಕೇಳುತ್ತಿದ್ದಾರೆ. ಈಗಾಗಲೇ ಆತನಿಗೆ ಮದುವೆಯಾಗಿದೆ; ಮಗನಿದ್ದಾನೆ. ಅವರಿಬ್ಬರೂ ಅಲ್ಲಿಯೇ ಇದ್ದಾರೆ.ಅದು ಗೊತ್ತಿದ್ದೂ, ಆದರೆ ರಾಜನಾದವನು ಬಹುಪತ್ನಿವಲ್ಲಭನಾಗಬಹುದಲ್ಲವೆ? ಆ ಆಸೆಯಿಂದ ಕೈಮುಗಿದು ಗೋಗರೆದು ಕೇಳುತ್ತಿದ್ದಾರೆ.)
ಹರಿಶ್ಚಂದ್ರ:
- (ಹೆಮ್ಮೆಯಿಂದ) ಲಲಿತ ವಸುಮತಿ ಹುಟ್ಟುವಂದು ಹುಟ್ಟಿದ ಸೂರ್ಯ ಕುಲದ ರಾಯರ್ಗೆ ವಂಶದೊಳು, ಕೀರ್ತಿಯೊಳು, ಭುಜಬಲದೊಳು ಒರೆದೊರೆಯೆನಿಸಿ ಕನ್ನಿಕೆಯರಂ ಕೊಡುವ ಭೂಪರ್ ಇಲ್ಲ; ಇಂದುತನಕ! (ಅಸಹನೆಯ ಧ್ವನಿಯಲ್ಲಿ) ಹೊಲತಿಯರ್ ಬಂದು ‘ಆವು ಸತಿಯರಾದಪ್ಪೆವು’ ಎಂಬ ಉಲಿಹ ಎಂಬುದು ಬಂದ ಕಾಲಗುಣವೋ? ನಿಂದ ನೆಲದ ಗುಣವೋ? ನೋಡು, ನೋಡು. (ಕೋಪಗೊಳ್ಳುತ್ತಾನೆ) (ನಿಂದ ನೆಲದ ಕಾಲಗುಣವೋ? ಎಂಬಲ್ಲಿ ಆತನಿಗೆ ವಿಶ್ವಾಮಿತ್ರನ ಬಗ್ಗೆ ಇರುವ ಅಸಹನೆ, ತಿರಸ್ಕಾರ, ಭಯ, ದುಗುಡ ಎಲ್ಲವೂ ವ್ಯಕ್ತವಾಗಿವೆ)
ಗಮನಿಸಬೇಕು, ಇಲ್ಲಿಯವರೆಗೂ ಗಾನರಾಣಿಯರ ಹಾಗೂ ಹರಿಶ್ಚಂದ್ರನ ಮಾತಿನಲ್ಲಿ ಹೊಲೆತನದ, ಅಸ್ಪೃಷ್ಯತೆಯ ಮಾತು ಬಂದಿಲ್ಲ. ಹರಿಶ್ಚಂದ್ರನಂತೂ ಅವರನ್ನು ಆ ದೃಷ್ಟಿಯಿಂದ ನೋಡೇ ಇಲ್ಲ. ಆದರೆ ಮದುವೆಯ ಮಾತು ಕೇಳುತ್ತಲೇ ಆತನ ಕುಲಶ್ರೇಷ್ಠತೆಯ ಅಹಂ ಎಚ್ಚೆತ್ತುಬಿಡುತ್ತದೆ. ‘ತನಗೆ ಮದುವೆಯಾಗಿ ಮಗನಿದ್ದಾನೆ, ಮನಕೊಪ್ಪಿದ ಮಡದಿ ಚಂದ್ರಮತಿಯಿದ್ದಾಳೆ. ನನಗೆ ಇನ್ನೊಂದು ಮದುವೆಯ ಆಸೆಯಿಲ್ಲ’ ಎಂದು ನಿರಾಕರಿಸುವ ಬದಲು ಕುಲದ ಮಾತು ಎತ್ತುತ್ತಾನೆ. ಮೊದಲ ಬಾರಿಗೆ ಅವರನ್ನು ‘ಹೊಲತಿ’ಯರು ಎಂದು ಕರೆದು ಹೀಯಾಳಿಸುತ್ತಾನೆ. ಬಂದ ಕಾಲಗುಣದ ಹಾಗೂ ನಿಂದ ನೆಲದ (ವಿಶ್ವಾಮಿತ್ರನ ಆಶ್ರಮಕ್ಕೆ ಸೇರಿದ ಜಾಗ) ಬಗ್ಗೆಯೂ ತಪ್ಪಾಗಿ ಮಾತನಾಡುತ್ತಾನೆ. ಅಷ್ಟಕ್ಕೂ ‘ನಾವು ಹೊಲತಿಯರು’ ಎಂದಾಗಲೀ, ವಿಶ್ವಾಮಿತ್ರನ ಮಕ್ಕಳೆಂದಾಗಲೀ ಅವರು ಹರಿಶ್ಚಂದ್ರನಿಗೆ ಪರಿಚಯಿಸಿಕೊಂಡಿಲ್ಲ. ಯಾವ ಆಧಾರದ ಮೇಲೆ ಅವರನ್ನು ಹೊಲತಿಯರು ಎಂದು ಹರಿಶ್ಚಂದ್ರ ಕರೆಯುತ್ತಾನೆ? ಅವರ ದೈಹಿಕ ಲಕ್ಷಣಗಳ ಆಧಾರದ ಮೇಲೆ; ಮೈಬಣ್ಣದ ಆಧಾರದ ಮೇಲೆ! ಕುಲದ ಅಡಚಣೆಯಿಲ್ಲದಿದ್ದರೆ ಅವರಿಬ್ಬರನ್ನು ಆತ ಮದುವೆಯಾಗುತ್ತಿದ್ದನೆ!? ಈ ಪ್ರಶ್ನೆಗೆ ಹರಿಶ್ಚಂದ್ರನಂತೆ ರಾಘವಾಂಕನೂ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ.
ಏಕೆಂದರೆ, ಇಲ್ಲಿ ಕತೆಯ ನೆಡೆ ಮೊದಲೇ ನಿರ್ಧಾರವಾಗಿಬಿಟ್ಟಿದೆ. ಆದರೆ, ಆ ನೆಡೆಯ ನಡುವೆಯೇ ರಾಘವಾಂಕ ಹೊಲೆತನದ, ಅಸ್ಪೃಷ್ಯತೆಯ ಬಗ್ಗೆ ತನಗಿರುವ ವಿರೋಧವನ್ನು ದಾಖಲಿಸುವ ಮನಸ್ಸು ಮಾಡಿಬಿಟ್ಟಿದ್ದಾನೆ. ಅದಕ್ಕಾಗೆ ಈ ಗಾನರಾಣಿಯರ ಸೃಷ್ಟಿ, ಈ ಪರಕಾಯಪ್ರವೇಶ. ಗಾನರಾಣಿಯರ ಮೂಲಕ ತನ್ನ ನಿಲುವನ್ನು ಇಲ್ಲಿ ರಾಘವಾಂಕ ವ್ಯಕ್ತಪಡಿಸುತ್ತಾ ಹೋಗುತ್ತಾನೆ. ಅದಕ್ಕೆ ಪೂರಕವಾದ ವಾತಾವರಣವನ್ನು ಹರಿಶ್ಚಂದ್ರನ ಮೂಲಕ ಕಲ್ಪಿಸಿಕೊಳ್ಳುತ್ತಾನೆ. ‘ವೈಚಾರಿಕ ದೃಷ್ಟಿಯಿಂದ ಹರಿಶ್ಚಂದ್ರನ ವಾದ ಒಪ್ಪಿತವಾದುದಲ್ಲ’ ಎಂಬ ಡಾ. ಕೆ,ವೈ.ಶಿವಕುಮಾರರ ಗ್ರಹಿಕೆಯೇ ಅದನ್ನು ಸೂಚಿಸುತ್ತದೆ. ಇಲ್ಲಿ ಕವಿ ಗಾನರಾಣಿಯರ ಮೂಲಕ ಮಾತನಾಡುತ್ತಿದ್ದಾನೆ. ಆದ್ದರಿಂದಲೇ ಇಲ್ಲಿ ಸಹೃದಯ ಓದುಗರ ಸಹಾನುಭೂತಿ ಗಾನರಾಣಿಯರ ಕಡೆಗೇ ವ್ಯಕ್ತವಾಗುತ್ತದೆ. (ಮುಂದೆ ಒಟ್ಟು ಕಾವ್ಯದ ನಡೆಯ ದೃಷ್ಟಿಯಿಂದ ಕಥಾನಾಯಕನಾದ ಹರಿಶ್ಚಂದ್ರನಿಗೂ ಸಹಾನಭೂತಿಯನ್ನು ಗಳಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾನೆ)
ಗಾಣರಾಣಿಯರು:
- ಪಾವನಕ್ಷೀರಮಂ ಕೊಡುವ ಕೆಚ್ಚಲ ಮಾಂಸ ಆವ ಲೇಸು? ಇನಿದುಳ್ಳ ಮಧುವೊನೊಸೆದು ಈವ ನೊಳ (ಜೇನ್ನೊಣ) ಆವ ಲೇಸು? ಅಧಿಕ ಕಸ್ತೂರಿಯಂ ಕೊಡುವ ಮೃಗನಾಭಿ ತಾನ್ ಆವ ಲೇಸು? ದೇವರಿಗೆ ಸಲ್ಲವೇ? ಉತ್ತಮ ಗುಣಂಗಳಿರ್ದ ಅವನೀಶ ಆವ ಕುಂದಂ ಕಳೆಯಲಾಱ? (ವೈಯಾರದಿಂದ) ಕೇಳ್, ಭಾವಿಸುವೊಡೆ ಇಂದೆಮ್ಮ ರೂಪು ಜವ್ವನವಿರಲು ಕುಲದ ಮಾತೇಕೆ?
ಮಾಂಸದ ಕೆಚ್ಚಲಿನ ಹಾಲು, ನೊಣದ ಎಂಜಲಿನ ಜೇನು, ಮೃಗನಾಭಿಯ ಕಸ್ತೂರಿ ಇವಕ್ಕೆ ಮೈಲಿಗೆಯಿಲ್ಲ, ಹೊಲೆತನವಿಲ್ಲ. ಅವು ದೇವರಿಗೆ ಸಲ್ಲುತ್ತವೆ. (ಇಂದಿಗೂ, ‘ಮಡಿ’ ಆಚರಣೆ ಮಾಡುವವರು, ಸನ್ಯಾಸಿಗಳು, ಮಠಾಧಿಪತಿಗಳು ತಾವು ಬಳಸುವ, ರೇಷ್ಮೆಹುಳುವಿನ ಎಂಜಲಿನಿಂದ ಸೃಷ್ಟಿಯಾಗುವ ರೇಷ್ಮೆಬಟ್ಟೆ, ತಾವು ಕುಳಿತುಕೊಳ್ಳಲು ಬಳಸುವ ಮೃಗಚರ್ಮ ಇವುಗಳನ್ನು ಮೈಲಿಗೆ ಎಂದು ಭಾವಿಸುವುದಿಲ್ಲ.) ಸದ್ಗುಣಿಯೇ ಆಗಿರುವ ನೀನು ನಮ್ಮ ಕುಲದ ಕುಂದನ್ನು ಕಳೆಯಲಾರೆಯಾ? ಯೌವನ್ನಕ್ಕೆ ಯಾವ ಕುಲ? ಎನ್ನುವಲ್ಲಿ, ಅವರು ಹರಿಶ್ಚಂದ್ರನ ದೃಷ್ಟಿಯಲ್ಲಿ ಹೊಲೆತನವನ್ನು ಸ್ವೀಕರಿಸಿಯೇ ವಾದ ಮಂಡಿಸುತ್ತಿರುವುದನ್ನು ಗಮನಿಸಬೇಕು. ಹೌದು, ನಮಗೆ ಹೊಲೆತನದ ಕುಂದು ಇದೆ. ಅದನ್ನು ನಿನ್ನ ಸದ್ಗುಣಗಳಿಂದ ಹೋಗಲಾಡಿಸು ಎಂದು ಒತ್ತಾಯಿಸುತ್ತಿದ್ದಾರೆ. ಪ್ರಜೆಗಳ ಕುಂದನ್ನು ಕಳೆಯುವುದು ರಾಜನ ಕರ್ತವ್ಯವಲ್ಲವೆ? ಅದಕ್ಕೆ ತಾನೆ ಹರಿಶ್ಚಂದ್ರ ಬೇಟೆಗೆ ಬಂದಿದ್ದು! ಆದರೆ, ಹರಿಶ್ಚಂದ್ರ ವಿಚಾರದ ದಾರಿಯನ್ನು ಬಿಟ್ಟು ತರ್ಕದ ದಾರಿಯನ್ನು ಹಿಡಿಯುತ್ತಾನೆ. ಇಲ್ಲಿ ವಿಚಾರದ ದಾರಿ ಎಂದರೆ, ಅವರನ್ನು ಮದುವೆಯಾಗುವುದಲ್ಲ; ಬದಲಿಗೆ ಮದುವೆಯನ್ನು ನಿರಾಕರಿಸಲು ತನಗಿರುವ ಕಾರಣಗಳ ಆಯ್ಕೆಯಲ್ಲಿ ಆತ ಎಡವಿರುವುದು. ಮುಂದೆ ಆತ ಕೊಡುವ ಕಾರಣಗಳನ್ನು ಗಮನಿಸಬಹುದು.
ಹರಿಶ್ಚಂದ್ರ:
- (ಆಶ್ಚರ್ಯದಿಂದ) ಅಕ್ಕಕ್ಕು! ಬಚ್ಚಲುದಕಂ ತಿಳದಡೆ ಆರ ಮೀಹಕ್ಕೆ ಯೋಗ್ಯಂ? ನಾಯ್ಗೆ ಹಾಲುಳ್ಳಡೆ ಆವನ ಊಟಕ್ಕೆ ಯೋಗ್ಯಂ? ಪ್ರೇತವನದೊಳಗೆ ಬೆಳೆದ ಹೂವು ಆರ ಮುಡಿಹಕ್ಕೆ ಯೋಗ್ಯಂ? ಮಿಕ್ಕ ಹೊಲತಿಯರು ನೀವೆನೆ ನಿಮ್ಮ ಜವ್ವನದ ಸೊಕ್ಕು, ರೂಪಿನ ಗಾಡಿ ಜಾಣತನದೊಪ್ಪವೇತಕ್ಕೆ ಯೋಗ್ಯಂ? ರಮಿಸಿದವರುಂಟೆ? ಶಿವಶಿವಾ ಮಾತು ತಾ ಹೊಲೆ! (ಕಿವಿಮುಚ್ಚಿಕೊಳ್ಳುತ್ತಾನೆ)
ಇಂದು ಬಚ್ಚಲ ನೀರನ್ನು ಸಂಸ್ಕರಿಸಿ ಮರುಬಳಕೆಗೆ ಯೋಗ್ಯವಾಗುವಂತೆ ಮಾಡಲಾಗುತ್ತಿದೆ; ನಾಯಿಯ ಹಾಲಿನಲ್ಲೂ ಔಷಧಿಯ ಗುಣಗಳಿವೆ ಎನ್ನಲಾಗುತ್ತಿದೆ. ಶ್ಮಶಾಣದಲ್ಲಿ ಬೆಳೆದ ಮಾತ್ರಕ್ಕೆ ಹೂವು ತನ್ನ ಸುವಾಸನೆಯನ್ನು ಕಳೆದುಕೊಳ್ಳಬೇಕೆ? ಸ್ವತಃ ಹರಿಶ್ಚಂದ್ರನ ಆರಾಧ್ಯದೈವ ಸ್ಮಶಣದವಾಸಿ ಶಿವನಲ್ಲವೆ? ನೀವು ಹೊಲತಿಯರೆಂದ ಮೇಲೆ, ನಿಮಗಿರುವ ಜವ್ವನ, ಚೆಲುವು, ಜಾಣತನ ಇವೆಲ್ಲಾ ವ್ಯರ್ಥ. ಅವುಗಳಿದ್ದ ಮಾತ್ರಕ್ಕೆ ನಿಮ್ಮನ್ನು ರಮಿಸಲಾಗದು ಎನ್ನುತ್ತಾನೆ. ಅವರು ಆಡುವ ಮಾತಿಗೂ ಹೊಲೆತನದ ಆರೋಪವನ್ನು ಹೊರಿಸುತ್ತಾನೆ. ಏಕೆಂದರೆ ಅವನ ಪ್ರಕಾರ ಅವರು ಹೊಲತಿಯರು. ಅವರು ಹೊಲತಿಯರಲ್ಲದಿದ್ದ ಪಕ್ಷದಲ್ಲಿ ಹರಿಶ್ಚಂದ್ರನ ವಾದ ಏನಾಗಿರುತ್ತಿತ್ತು?
ಗಾಣರಾಣಿಯರು:
- (ವ್ಯಂಗ್ಯವಾಗಿ) ಹಾಡನೊಲಿದು ಆಲಿಸಿದ ಕಿವಿಗೆ ಹೊಲೆಯಿಲ್ಲ! ಮಾತಾಡಿ ಹೊಗಳಿದ ಬಾಯ್ಗೆ (ನಾಲಗೆ) ಹೊಲೆಯಿಲ್ಲ! ರೂಪನೆಱೆ ನೋಡಿದ ವಿಲೋಚನಕೆ (ಕಣ್ಣು) ಹೊಲೆಯಿಲ್ಲ! ಮೆಯ್ ಮುಡಿಗಳಿಂ ಸುಳಿವ ತಂಗಾಳಿಯಿಂ ತೀಡುವ ಸುಗಂಧಮಂ ವಾಸಿಸಿದ ನಾಸಿಕಕೆ ಹೊಲೆಯಿಲ್ಲ! ಸೋಂಕಿಂಗೆ (ಚರ್ಮ) ಹೊಲೆಯುಂಟಾಯ್ತೆ? ಕೂಡಿರ್ದ ಪಂಚೇಂದ್ರಿಯಂಗಳೊಳು ನಾಲ್ಕು ಅಧಮ, ಒಂದು (ಚರ್ಮ) ಅಧಿಕವೇ?
ಹರಿಶ್ಚಂದ್ರ:
- ಕಂಡಱಿವವೈಸಲೇ ನಯನೇಂದ್ರಿಯಂ, ಘ್ರಾಣಕೊಂಡಱಿವವೈಸಲೇ ವಾಸನೆಯ, ಕರ್ಣಂಗಳುಂಡಱಿವವೈಸಲೇ ಶಬ್ದಮಂ ದೂರದಿಂದ ಅಲ್ಲದೆ ಅವು ಮುಟ್ಟಲಿಲ್ಲ! ಭಂಡತನವು ಈ ಮಾತು. ಇದಕ್ಕೆ ಉಪಮಾನವೇ? ಕೆಂಡವನು ಮುಟ್ಟಿದಡೆ ಬೇವಂತೆ ಕೇಳ್ದಡಂ, ಕಂಡು ವಾಸಿಸಿದಡಂ ಬೆಂದವೇ? ಏಗೆಯ್ದಡಂ ಕುಲಜರ್ ಅಧಮ ಸತಿಯರ ನೋಡಲಾಗದು. ಅಱಿಯದೆ ಪಾಪದಿಂ ನೋಡಿದಡೆ ನುಡಿಸಲಾಗದು. ಎಂತಕ್ಕೆ ನುಡಿಸಿದಡೆ ಮನ್ನಿಸಲಾಗದು. ಅನುಗೆಟ್ಟು ಮನ್ನಿಸಿದಡೆ ಮೇಗೆ ಏನುವಂ ಕರೆದು ಕೊಡಲಾಗದು. ಇತ್ತಡೆ ಅವರೇಗಯ್ಯಲೊಪ್ಪದು. ಎನಗಿಂದು ನೀವು ಅಂಗನೆಯರ್ ಆಗಿಪ್ಪೆವೆಂದಿರೈ; ಸಲ್ಲದ ಒಡತಿಯರಪ್ಪೆವು ಎನಲು ತೀರದು. ಕಾಳುಗೆಡೆಯದೆ ನೀವು ಹೋಗಿ.
ಕುಲಜರಾದವರು ಅಧಮ ಸತಿಯರನ್ನು ನೋಡಬಾರದು; ನೋಡಿದರೂ ಮಾತನಾಡಿಸಬಾರದು; ಮಾತನಾಡಿಸಿದರೂ ಒಪ್ಪಿಕೊಳ್ಳಬಾರದು; ಆ ಕ್ಷಣಕ್ಕೆ ಬುದ್ದಿಗೆಟ್ಟು ಒಪ್ಪಿಕೊಂಡರೂ, ಕರೆದು ಏನನ್ನು ಕೊಡಲಾಗದು! ಕೊಟ್ಟರೆ ಅದು ಅನುಚಿತ! ಹರಿಶ್ಚಂದ್ರ ಶೋಷಕರ ವಕ್ತಾರನಂತೆ ಮಾತನಾಡುತ್ತಿದ್ದಾನೆ. ದುರಂತವೆಂದರೆ, ಇದುವರೆವಿಗೂ ಆತ ಅದನ್ನೇ ಮಾಡಿದ್ದಾನೆ. ಅವರನ್ನು ನೋಡಿದ್ದಾನೆ; ಅವರೊಂದಿಗೆ ಮಾತನಾಡಿದ್ದಾನೆ. ಅವರನ್ನು ಮನ್ನಿಸಿದ್ದಾನೆ. ಅವರಿಗೆ ತನ್ನ ಆಭರಣಗಳನ್ನು ಕೊಡಲು ಉದ್ದೇಶಿಸಿದ್ದಾನೆ. ಅಂದರೆ ಆತನೂ ಅನುಚಿತವಾದುದನ್ನು ಮಾಡಲೆಳೆಸಿದ್ದನೆ!?
ಪಾಪ, ಗಾಣರಾಣಿಯರಿಗೆ ನಿರಾಶೆಯಾಗುತ್ತದೆ. ಆದರೂ ಪಟ್ಟು ಬಿಡದೆ “ಸತ್ಕುಲಜಭೂಪ ನಿನ್ನಯ ಸಂಗದಿಂ ಶಾಪದಿಂದಾದ ದುಷ್ಕುಲಂ ಶುದ್ಧವಪ್ಪುದು ಎಂಬ ಅಪೇಕ್ಷೆಯಿಂ ಬಂದೆವು.” ಎನ್ನುತ್ತಾರೆ. ಅವರಿಗೆ ಆರೋಪಿತವಾಗಿರುವ ದುಷ್ಕುಲ ಶಾಪದಿಂದಲೇ ಆದುದು ಎಂದು ಭಾವಿಸಿದರೂ, ಶಾಪವಿಮೋಚನೆ ಆಗಲೇ ಬೇಕಲ್ಲವೆ? ದುಷ್ಕುಲದ ಶಾಪವನ್ನು ಕಳೆಯಲು ಸತ್ಕುಲಜನಾದ ರಾಜನಿಂದಲೇ ಸಾಧ್ಯ ಅಲ್ಲವೆ? ರಾಜ ಪ್ರತ್ಯಕ್ಷ ದೇವರಲ್ಲವೆ? ಇವರ ಈ ಬಲವಾದ ಪಟ್ಟಿನಿಂದ ಹರಿಶ್ಚಂದ್ರ ಅಲ್ಲಾಡಿ ಹೋಗುತ್ತಾನೆ. ಭಂಡತನಕ್ಕೆ ಬಿದ್ದವನಂತೆ ವಾದಕ್ಕೆ ನಿಲ್ಲುತ್ತಾನೆ.
ಹರಿಶ್ಚಂದ್ರ:
- (ಕೋಪದಿಂದ) ನಿಮಗೋಸುಗ ಎನ್ನ ಕುಲಮಂ ಕೆಡಿಪೆನೆ?
ಗಾಣರಾಣಿಯರು:
- ಪಾಪಿಗಳ ಪಾಪಮಂ ತೊಳೆವ ಗಂಗೆಗೆ ಪಾಪಲೇಪವುಂಟಾಯ್ತೆ, ಹೇಳು?
ಹರಿಶ್ಚಂದ್ರ:
- ಕುಲಧರ್ಮವು ಈ ಪಂಥವಲ್ಲ. ಕೊಡವಾಲ ಕೆಡಿಸುವೊಡೆ ಆಮ್ಲ ಎನಿತಾಗಬೇಕು?
ಕೋಟ್ಯಂತರ ಜನರ ಪಾಪವನ್ನು ತೊಳೆಯುತ್ತಿದ್ದರೂ ಗಂಗೆ ಪವಿತ್ರಳಾಗಿಯೇ ಉಳಿದಿದ್ದಾಳಲ್ಲ – ಇದು ಅಮೂರ್ತಕಲ್ಪನೆ. ನೂರು ಒಳ್ಳೆಯ ಹಣ್ಣುಗಳ ನಡುವೆ ಒಂದು ಕೆಟ್ಟ ಹಣ್ಣು ಇಟ್ಟರೆ ಎಲ್ಲ ಹಣ್ಣುಗಳೂ ಕೆಟ್ಟು ಹೋಗುತ್ತವೆ – ವಾಸ್ತವ ಮತ್ತು ಮೂರ್ತಕಲ್ಪನೆ. ಇಲ್ಲಿ ಇಬ್ಬರೂ ತರ್ಕಕ್ಕೆ ಬಿದ್ದು ವಾದಿಸುತ್ತಿರುವುದರಿಂದ ಅವರು ಆಶ್ರಯಿಸಿರುವ ಉದಾಹರಣೆಗಳು ಅದಲು ಬದಲಾಗಿವೆ ಅನ್ನಿಸುತ್ತದೆ. ಮಾತು ಸೋತುದರ ಸಂಕೇತ! ಈ ಮಾತುಗಳ ನಂತರ ಇಬ್ಬರ ಮಾತುಗಳಲ್ಲಿಯೂ ಚರ್ಚೆಯ ಅಂತ್ಯದ ಸುಳಿವು ಸಿಗುತ್ತದೆ. ಹರಿಶ್ಚಂದ್ರನೇ ಮೊದಲಿಗನಾಗಿ ಅವರಿಗೆ ದೈಹಿಕವಾಗಿ ಶಿಕ್ಷಿಸಲು ಮುಂದಾಗುತ್ತಾನೆ.
ಗಾಣರಾಣಿಯರು:
- ಮಾತಿಂಗೆ ಮಾತು ಕೊಡಲು ಅರಿದು. ನಿನ್ನಯ ನುತಖ್ಯಾತಿಗೆ, ಅದಟಿಂಗೆ, ರೂಪಿಂಗೆ, ಸುರಚಿರಗುಣವ್ರಾತಕ್ಕೆ, ಹರಯಕ್ಕೆ, ಗರುವಿಕೆ ಮನಸಂದು ಮರುಳಾಗಿ ಮತಿಗೆಟ್ಟೆವು. ಓತು ಬಂದವರನ್ ಉಪಚರಿಸದೆ ಇಪ್ಪುದು ನಿನಗೆ ನೀತಿಯಲ್ಲ! (ಭಂಡತನದಿಂದ) ಏಗೆಯ್ದಡಂ ಗಂಡನಾದಲ್ಲದೆ ಆತುರಂ ಪೋಗದು! ಇನ್ನು ಒಲಿದಂತೆ ಮಾಡು. ನಿನ್ನಯ ಬೆನ್ನು ಬಿಡೆವು.
ಹರಿಶ್ಚಂದ್ರನಿಗೆ ಬಹಳ ಇಕ್ಕಟ್ಟಿಗೆ ಇಟ್ಟುಕೊಳ್ಳುತ್ತದೆ. ಅವನ ಪ್ರಕಾರ ಅವರ ಹಾಡು ಕೇಳಿದ್ದೇ ಅವನ ತಪ್ಪು. ಬೀದಿಯಲ್ಲಿ ಹೋಗುತ್ತಿದ್ದ ಮಾರಿಯನ್ನು ಮನೆಗೆ ಹೊಕ್ಕಿಸಿಕೊಂಡಂತಾಗಿಬಿಟ್ಟಿದೆ ಆತನಿಗೆ. ಇದುವರೆಗೂ ರಾಜನೆಂಬ ಕಾರಣದಿಂದ ಅಧಿಕಾರಯುತನಾಗಿಯೂ, ತುಸು ಸಂಯಮದಿಂದಲೂ ವಾದಿಸುತ್ತಿದ್ದವನು, ಈಗ ತನ್ನ ಪುರುಷ ಅಹಂಕಾರವನ್ನೂ ಸೇರಿಸಿಕೊಂಡು ಅವರನ್ನು ದೈಹಿಕವಾಗಿ ದಂಡಿಸುವ ಮಟ್ಟಕ್ಕೆ ಇಳಿಸುಬಿಡುತ್ತಾನೆ.
ಹರಿಶ್ಚಂದ್ರ:
- ಬಳಿವಿಡಿದು ಬಂದು ಮಾಡುವುದೇನು? ನಮ್ಮ ಬೆಂಬಳಿಯಲ್ ಎನಿಬರು ಹೊಲೆಯರಿಲ್ಲ.
ಗಾಣರಾಣಿಯರು:
- (ಮತ್ಸರದಿಂದ) ಹಗೆ ಬಿಡೆವು. ’ಎಳಸಿ ಮೆಚ್ಚಿಸಿ, ಮರುಳ್ಗೊಳಿಸಿ ಮತ್ತೆ ಒಲ್ಲನ್ ಅವನಿಪನ್’ ಎಂದು ಮೊಱೆಯಿಡುತ್ತ ಇಳೆಯೊಳಗೆ ಸಾಱುತ್ತ, ದೂಱುತ್ತ ಬಪ್ಪೆವು!
ಹರಿಶ್ಚಂದ್ರ ಕೋಪದಿಂದ ದಡದಡನೆ ಎದ್ದು ‘ಹಲ್ಲ ಕಳೆ, ಬಾಯ ಹರಿಯ ಕೊಯ್, ಹೊಡೆ ಹೊಡೆ. ಎನ್ನುತ್ತ, ಎದ್ದು ಚಾವಟಿಯನ್ನು ತೆಗೆದು ಹೊಡೆಯುತ್ತಾನೆ. ಆತನೊಂದಿಗೆ ಮಂತ್ರಿಯೂ ಕೈಜೋಡಿಸುತ್ತಾನೆ. ಒಬ್ಬರೊಬ್ಬರನು ‘ಬೆನ್ನೊಡೆಯೆ, ಮುಡಿ ಹುಡಿಯೊಳಗೆ ಹೊರಳೆ, ಹಲು ಬೀಳೆ, ಬಾಯೊಡೆಯೆ, ಮೆಯ್ ನೋಯೆ, ಕಯ್ಯು ನಡೆದಲ್ಲಿ ನಡೆದು, ಹೊಕ್ಕಲ್ಲಿ ಹೊಕ್ಕು ಓಡಿ, ಹೋದೆಡೆಗೆ ಬೆನ್ನಟ್ಟಿ, ರುಧಿರಂ ಬಸಿಯೆ ಹೊಡೆದು’ ಓಡಿಸಿ ಹಿಂತಿರುಗುತ್ತಾರೆ. ಅವರು ಒರಲುತ್ತ ವಿಶ್ವಾಮಿತ್ರನೆಡೆಗೆ ಬಂದು ’ನಿಷ್ಕಾರಣಂ ನೃಪತಿ ಹೊಡೆದನ್. ಎಲೆ ಕೌಶಿಕಮುನೀಂದ್ರ, ಮೊಱೆಯೋ’ ಎಂದು ದೂರು ಹೇಳುತ್ತಾರೆ.
ಗಾಣರಾಣಿಯರು:
- (ವಿಶ್ವಾಮಿತ್ರನ ಮುಂದೆ ದುಃಖವನ್ನು ನಟಿಸುತ್ತಾ) ಆರ ಮನೆಯವರೆಂದು ಕೇಳ್ದಡೆ, ಎರಡನೆಯ ಪುರವೈರಿ ವಿಶ್ವಾಮಿತ್ರಮುನಿಯ ಮನೆಯವರೆಂದಡೆ – ಆ ರಾಯನೆದ್ದು, ಕಯ್ಯಾಱೆ ಸದೆಬಡಿದನ್ ಎಮ್ಮಂ! ನಿರಪರಾಧಿಗಳನು. ಕಾರುಣ್ಯ ಚಿತ್ತದಿಂ ಕಳುಹಿ ಕೊಲಿಸಿದೆ, ತಂದೆ. ಓರಂತೆ ಕೇಳು. (ಇಲ್ಲಿ ಗಾನರಾಣಿಯರು ಸುಳ್ಳು ಹೇಳುತ್ತಿದ್ದಾರೆ. ಅಲ್ಲಿ ಅವರು ಹರಿಶ್ಚಂದ್ರನಿಗೆ ನಾವು ವಿಶ್ವಾಮಿತ್ರನ ಮಕ್ಕಳೆಂದು ಹೇಳಿರಲೇ ಇಲ್ಲ! ಮುಂದೆ ಹರಿಶ್ಚಂದ್ರ ವಿಶ್ವಾಮಿತ್ರನಿಗೆ ಯಾರೋ ಬೇರೆಯವರೆಂದು ತಿಳಿದು ಹೊಡೆದೆ ಎನ್ನುತ್ತಾನೆ)
ವಿಶ್ವಾಮಿತ್ರ ಮುಖದಲ್ಲಿ ಸಂತೋಷವನ್ನು ಪ್ರಕಟಿಸುತ್ತಾ “ಎನ್ನಯ ಮನೋರಥಂ ಕೈಸಾರ್ದುದು! (ಗಾಣರಾಣಿಯರ ಕಡೆ ತಿರುಗಿ) ಅಳಲು ಬೇಡ” ಎಂದು ಹರಿಶ್ಚಂದ್ರನಲ್ಲಿಗೆ ಬರುತ್ತಾನೆ. ತನ್ನ ಮಕ್ಕಳಿಗಾದ ಅನ್ಯಾಯಕ್ಕೆ ನ್ಯಾಯ ಕೇಳುತ್ತಾನೆ. “ಕಲೆಗೆ ಮನ್ನಣೆ ಕೊಡುತ್ತೀಯಾ ಎಂದು ಕೇಳಿದರೆ, ಸತ್ತಿಗೆ ಕೊಡುವುದಿಲ್ಲ ಎನ್ನಬಹುದಿತ್ತು; ಸಂಗ ಮಾಡುವುದಿಲ್ಲ ಎಂದು ಹೇಳಿದ್ದರೆ ಸಾಕಿತ್ತು; ಹೊಡೆದುದು ಏಕೆ? ಆ ಹೆಣ್ಣುಗಳನ್ನು ಹೊಲತಿಯರೆನ್ನುವ ಮೂಲಕ ನನ್ನನ್ನೂ ಹೊಲೆಯ ಎನ್ನುತ್ತಿದ್ದೀಯಾ?” ಹೀಗೆ ವಿಶ್ವಾಮಿತ್ರ ಇನ್ನೊಂದು ರೀತಿಯಲ್ಲಿ ಭಂಡತನವನ್ನು ಪ್ರದರ್ಶಿಸುತ್ತಾನೆ. ಇಲ್ಲಿಯವರೆಗೂ ಗಾನರಾಣಿಯರ ಪರವಾಗಿ ಸಹಾನುಭೂತಿಯಿಂದಿದ್ದ ಸಹೃದಯರ ಮನಸ್ಸು ಇಲ್ಲಿಂದ ಮುಂದೆ ಹರಿಶ್ಚಂದ್ರನ ಪರವಾಗಿ ವಾಲುತ್ತದೆ.
“ಮುನಿಗೆ ಹೊಲೆ ಯಾವುದು?’ ಎಂಬ ಪ್ರಶ್ನೆಯನ್ನೆತ್ತಿಕೊಂಡು, ‘ಅತಿ ಕೋಪ, ಬದ್ಧ ದ್ವೇಷ, ಅನಿಮಿತ್ತ ವೈರ’ ಎಂದು ಹೇಳಿ, ‘ಅದರಿಂದ ಹುಟ್ಟಿದರಾಗಿ’ ವಿಶ್ವಾಮಿತ್ರಸಂಭವೆಯರಾದ ಗಾಣಗಾತಿಯರು ‘ಹೊಲತಿ’ಯರಾದರು ಎಂದು ರಾಘವಾಂಕ ವ್ಯಾಖ್ಯಾನಿಸುತ್ತಾನೆ. ಎಂದರೆ ‘ಅತಿಕೋಪ’, ಬದ್ಧದ್ವೇಷ, ಅನಿಮಿತ್ತ ವೈರ’ ಇತ್ಯಾದಿ ತಾಮಸ ಗುಣಗಳಿದ್ದ ಪಕ್ಷದಲ್ಲಿ ಅವನು ಮುನಿಯಾಗಿದ್ದರೂ, ಅದು ಅವನ ಹೊಲೆತನಕ್ಕೆ ಸಾಕ್ಷಿ ಎಂಬುದು ಇಲ್ಲಿನ ಅರ್ಥ”. ಎಂಬ ಜಿ.ಎಸ್.ಎಸ್. ಅವರ ಮಾತುಗಳು ಸಹಜವಾಗಿಯೇ ಇವೆಯಾದರೂ “ಗಾಣಗಾತಿಯರು, ವಿಶ್ವಾಮಿತ್ರನಂಥ ಋಷಿಯ ಕನ್ಯೆಯರಾದರೂ ಆತನ ತಾಮಸಗುಣಗಳಿಂದ ಹುಟ್ಟಿ, ಹರಿಶ್ಚಂದ್ರನಂಥ ಸತ್ಯವಂತನನ್ನು ಹಾದಿಗೆಡಿಸುವ ಉದ್ದೇಶಕ್ಕಾಗಿ ನಿಯುಕ್ತರಾದ್ದರಿಂದ ಅವರು ‘ಹೊಲತಿ’ಯರಾಗಿ ಕಾಣುತ್ತಾರೆ.” ಎನ್ನುವ ಮಾತುಗಳನ್ನು ಒಪ್ಪಿಕೊಳ್ಳುವುದು ಸ್ವಲ್ಪ ಕಷ್ಟ.
ಜಿ.ಎಸ್.ಎಸ್. ಮುಂದುವರೆದು ಹೇಳುವ “‘ಹೊಲೆತನ’ದ ಪ್ರತೀಕವಾದ ಗಾಣಗಾತಿ ‘ಹೊಲತಿ’ಯರಿಗೂ, ಹೊಲೆಯ ಕುಲದಲ್ಲೆ ಹುಟ್ಟಿದ ವೀರಬಾಹುಕನಿಗೂ ಇರುವ ಸ್ವಭಾವದ ವ್ಯತ್ಯಾಸವನ್ನು ಗಮನಿಸಿದರೆ, ಗಾಣಗಾತಿಯರ ‘ಹೊಲೆತನ’ವೆ ನಿಜವಾದ ‘ಹೊಲೆ’ ಎನ್ನಿಸುತ್ತದೆ.” ಎಂಬ ಮಾತುಗಳನ್ನ ಅರಗಿಸಿಕೊಳ್ಳುವುದು ಕಷ್ಟ. ಇಲ್ಲಿ ಅವರು ಸ್ವ-ಇಚ್ಛೆಯಿಂದ ಆ ಕೆಲಸವನ್ನು ಅಂದರೆ, ‘ಹರಿಶ್ಚಂದ್ರನಂಥ ಸತ್ಯವಂತನನ್ನು ಹಾದಿಗೆಡಿಸುವ’ ಕೆಲಸವನ್ನು ಆಯ್ದುಕೊಂಡಿರಲಿಲ್ಲ. ಅವರು ನಿರ್ದೇಶಿತರಾಗಿದ್ದರು. ಆದ್ದರಿಂದ ಇಲ್ಲಿ ಹೊಲೆತನಕ್ಕೆ ಈಡಾಗಬೇಕಾದವನು ವಿಶ್ವಾಮಿತ್ರನೇ ಹೊರತು ಗಾನರಾಣಿಯರಲ್ಲ. ವಿಶ್ವಾಮಿತ್ರನಾದರೊ ಇಂತಹ ಯಾವುದಕ್ಕೂ ಆತ ತಲೆಕೆಡಿಸಿಕೊಂಡವನಲ್ಲ. ಆತನದು ಮುರಿದು ಕಟ್ಟುವ, ಪರ್ಯಾಯವನ್ನು ಸೃಷ್ಟಿಸುವ ಮನೋಧರ್ಮ. ಆತ ತ್ರಿಶಂಕುಸ್ವರ್ಗವನನ್ನು ಸೃಷ್ಟಿಸಿದ್ದು, ಪ್ರಸ್ತುತ ಕಾವ್ಯದಲ್ಲಿ, ಹರಿಶ್ಚಂದ್ರನಿಗೆ ತೋಂದರೆ ಕೊಡುತ್ತಲೇ, ಆತನ ಸತ್ಯಪ್ರಕಾಶಕ್ಕೆ ಅವಕಾಶ ಮಾಡಿಕೊಡುವುದು ಆತನ ಮನೋಧರ್ಮವನ್ನು ಸಮರ್ಥವಾಗಿ ಬಿಂಬಿಸುತ್ತವೆ. “‘ಹೊಲೆತನ’ ಎನ್ನುವುದು ವ್ಯಕ್ತಿಯ ಅಂತರಂಗದ ಅವಗುಣಗಳಿಗೆ ಸಂಬಂಧಿಸಿದ್ದೆ ಹೊರತು, ಅದು ಒಂದು ಜಾತಿಯನ್ನು ಕುರಿತ ಪ್ರಶ್ನೆಯಲ್ಲ ಎನ್ನುವ ತಾತ್ವಿಕ ದೃಷ್ಟಿ ರಾಘವಾಂಕನದು.” ಎಂಬ ಮಾತುಗಳಿಗೆ ಪೂರಕವಾಗಿ “ಗಾಣಗಾತಿಯರ ‘ಹೊಲೆತನ’ವೆ ನಿಜವಾದ ‘ಹೊಲೆ’” ಎಂಬ ಮಾತುಗಳು ಬಂದಿರುವುದರಿಂದ, ಅಷ್ಟರಮಟ್ಟಿಗೆ ಸ್ವೀಕಾರಾರ್ಹ.
ಜಿ.ಎಸ್.ಎಸ್. ಹೇಳುವಂತೆ “ಹರಿಶ್ಚಂದ್ರನಿಗೆ ಹೊಲತಿಯರಾದ ಗಾಣಗಾತಿಯರಿಂದ ಮೊದಲು ಪ್ರಾಪ್ತವಾಗುವ ಆಹ್ವಾನವೇ ಕಡೆಗೆ ಅವನು ವೀರಬಾಹುಕನ ಆಳಾಗಿ ಹೊಲೆಯರಿಗೆ ಉಚಿತವಾದ ಚಾಂಡಾಲತ್ವವನ್ನು ಕೈಗೊಳ್ಳುವವರೆಗೂ ಅಟ್ಟಿಸಿಕೊಂಡು ಹೋಗಿರುವುದು ಗಮನಿಸಬೇಕಾದ ಸಂಗತಿಯಾಗಿದೆ. ಸಾಮಾಜಿಕವಾಗಿ ಹಾಗೂ ವಾಂಶಿಕವಾಗಿ, ಉಚ್ಚವರ್ಗದ ಪ್ರತಿಷ್ಠಿತ ವ್ಯಕ್ತಿಯಾದ ಹರಿಶ್ಚಂದ್ರ, ತಾನು ಯಾವ ಸಾಮಾಜಿಕ ಸ್ತರವನ್ನು ಉದ್ದಕ್ಕೂ ನಿಕೃಷ್ಟವೆಂದೇ ಕಂಡನೋ, ಅದೇ ಸಾಮಾಜಿಕ ಸ್ತರಕ್ಕೆ ಹೋಗಿ ಮುಟ್ಟುವ ಅನಿವಾರ್ಯತೆಯಲ್ಲಿ, ಆತನ ವಂಶಪ್ರಜ್ಞೆಯ ಹಾಗೂ ಅಹಂಕಾರದ ನಿರಸನಗಳು ಈ ಕೃತಿಯಲ್ಲಿ ಕ್ರಮಬದ್ಧವಾಗಿ ಚಿತ್ರಿತವಾಗಿವೆ.” ಮುಂದೆ ತನ್ನನ್ನು ತಾನು ಮಾರಿಕೊಳ್ಳುವ ಸಂದರ್ಭದಲ್ಲಿ, ತನ್ನನ್ನು ಕೊಳ್ಳುವವನು ಒಬ್ಬ ಚಾಂಡಾಲ ಎಂದು ತಿಳಿದಾಗ ಕನಲುವ ಹರಿಶ್ಚಂದ್ರನಿಗೆ “ಹುಸಿಯ ಹೊಲೆಯನ್ನು ಹೊತ್ತ ನೀನು ಚಾಂಡಾಲನೋ, ತನ್ನ ಪಾಡಿಗೆ ತಾನು ಇರುವ ನನ್ನಂಥವನು ಚಂಡಾಲನೋ” ಎಂದು ಪ್ರಶ್ನಿಸಿ, ಹರಿಶ್ಚಂದ್ರನಿಗೆ ತನ್ನ ತಪ್ಪಿನ ಅರಿವಾಗುವಂತೆ ಮಾಡುವವನೂ ಚಂಡಾಲನಾದ ವೀರಬಾಹುಕ ಎಂಬುದು ಗಮನಾರ್ಹ. ಹೊಲತಿಯರ ವಿಷಯದಲ್ಲಿ ಕಠಿಣನಾದಷ್ಟು ವೀರಬಾಹುಕನ ಮನೆಯಲ್ಲಿದ್ದ ಹರಿಶ್ಚಂದ್ರ ಹೊಲೆತನದ ವಿಷಯದಲ್ಲಿ ಕಠಿಣನಾಗುವುದಿಲ್ಲ ಎಂಬುದನ್ನು ಗಮನಿಸಬೇಕು.”ಆದರೆ ‘ಹೊಲೆಯ’ ಎಂಬ ಜಾತಿಯನ್ನು ಕುರಿತು, ರಾಘವಾಂಕನ ನಾಯಕ ಪಾತ್ರವಾದ ಹರಿಶ್ಚಂದ್ರನ ಪ್ರತಿಕ್ರಿಯೆಯಲ್ಲಿ ನಾವು ಕಾಣುವುದು, ಎಲ್ಲ ಕಾಲದ ಸಾಮಾಜಿಕ ವ್ಯವಸ್ಥೆಯಲ್ಲಿ ಈ ಒಂದು ಕುಲದ ಬಗ್ಗೆ ಇರುವ ಮನೋಧರ್ಮವನ್ನೆ. ಹರಿಶ್ಚಂದ್ರನಿಗೆ ತಾನು ಸಾಮಾಜಿಕವಾಗಿ- ಆರ್ಥಿಕವಾಗಿ ಉಚ್ಚವರ್ಗಕ್ಕೆ ಸೇರಿದವನೆಂಬ ಪ್ರಜ್ಞೆಯೆ ಪ್ರಧಾನವಾಗಿದೆ. ಮತ್ತು ಅದು ಸಹಜವೂ ಆಗಿದೆ. ತಾನು ಉತ್ತಮ ವಂಶದವನು, ಚಕ್ರವರ್ತಿ, ಎಂಬ ಹೆಮ್ಮೆಯಲ್ಲಿ ಬದುಕುವ ಹರಿಶ್ಚಂದ್ರನಿಗೆ ಉದ್ದಕ್ಕೂ ಸ್ಪರ್ಧಿಯಾಗುವುದು, ಸಾಮಾಜಿಕವಾಗಿ ಅತ್ಯಂತ ಕೆಳಗಿನ ಸ್ತರವೆಂದು ಭಾವಿಸಲಾಗಿರುವ ಹೊಲೆಯರೊಂದಿಗೆ ಮಾಡಿಕೊಳ್ಳಬೇಕಾದ ಒಡಂಬಡಿಕೆಯ ಪ್ರಶ್ನೆಯೇ.” ಎಂಬ ಅವರದೇ ಮಾತುಗಳು ಹಾಗೂ ಎಲ್. ಬಸವರಾಜು ಅವರ “ಮುನಿ ಎನಿಸಿಕೊಂಡವನಿಗೆ ಹೊಲೆಯಾಗಿರುವ ಅತಿಕೋಪ, ಬದ್ಧದ್ವೇಷ ಮತ್ತು ನಿಷ್ಕಾರಣ ವೈರ – ಈ ಮೂರು ದುರ್ಗಣದಿಂದ ಹುಟ್ಟಿದವರಾಗಿ ಮಾತ್ರ ಅವರು ಹೊಲತಿಯರು. ರಾಘವಾಂಕನ ಅಸ್ಪೃಷ್ಯಕಲ್ಪನೆ ಈ ಮಟ್ಟಿಗೆ ನೀತಿಪರವಾದ್ದು, ವರ್ಣಬೇಧದ ಬರ್ಬರ ರೀತಿಯಲ್ಲ.” ಎಂಬ ಅಭಿಪ್ರಾಯಗಳು ಸಮಂಜಸವಾದವುಗಳೇ ಆಗಿವೆ.
ಹರಿಶ್ಚಂದ್ರನು ಹೊಲತಿಯರೆಂದು ಕರೆಯುವ ಗಾನರಾಣಿಯರು ಹಾಗೂ ಚಾಂಡಾಲನಾದ ವೀರಬಾಹುಕ ಇವರೇ ಆತನ ಉದ್ಧಾರಪಥದಲ್ಲಿ ಬೆಳಕಾಗಿ ನಿಲ್ಲುತ್ತಾರೆ! ಗಾನರಾಣಿಯರ ಪಾತ್ರಗಳು ರಾಘವಾಂಕನ ಸ್ವಂತ ಸೃಷ್ಟಿ ಎಂಬುದು ಮುಖ್ಯವಾಗಿ ಗಮನಿಸಬೇಕಾದ ಅಂಶ. ತಾನು ಸೃಷ್ಟಿಸಿಕೊಂಡ ಪಾತ್ರಗಳ ಮುಖಾಂತರ ತನ್ನ ನಿಲುವನ್ನು ಕಲಾತ್ಮಕವಾಗಿ ಅಭಿವ್ಯಕ್ತಿಸುವಲ್ಲಿಯೂ, ತಾನು ಸತ್ಯವಂತನೆಂದು ನಿರೂಪಿಸಿಕೊಳ್ಳಲು ಹೊರಟ ಹರಿಶ್ಚಂದ್ರ, ಅದರ ಜೊತೆಗೆ ಕುಲಮದವನ್ನು ಕಳೆದು ಮಾನವೀಯನಾಗುವಂತೆ ಹಾಗೂ ಅದಕ್ಕೆ ಗಾನರಾಣಿಯರಿಗೆ ಆರೋಪಿತವಾಗುವ ಹೊಲೆತನವೇ ಕಾರಣವೆಂಬಂತೆ ಕತೆಯನ್ನು ಬೆಳೆಸುವಲ್ಲಿಯೂ, ಮುಂದೆ ಕಥಾನಾಯಕನ ಪರವಾದ ಸಹಾನುಭೂತಿಯನ್ನು ಸಹೃದಯರು ಹೊಂದುವಂತೆ ಮಾಡುವಲ್ಲಿಯೂ, ಇಡೀ ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸುವುದರಲ್ಲಿಯೂ ರಾಘವಾಂಕ ಕವಿಯಾಗಿ ಗೆಲ್ಲುತ್ತಾನೆ; ಹರಿಶ್ಚಂದ್ರಚಾರಿತ್ರ್ಯಂ ಕಾವ್ಯವಾಗಿ ಗೆಲ್ಲುತ್ತದೆ. ರಸಿಕರಿಗೊಂದು ರಸಯಾತ್ರೆಯ ಅವಕಾಶವಂತೂ ಇದ್ದೇ ಇದೆ.