ಗಂಗಾಧರ ಗೋಪಾಲ ಗಾಡಗೀಳ

(ಗಾಡಗೀಳ ಗಂಗಾಧರ ಗೋಪಾಲ ಇಂದ ಪುನರ್ನಿರ್ದೇಶಿತ)

ಗಂಗಾಧರ ಗೋಪಾಲ ಗಾಡಗೀಳ ೧923-2008. ಮಹಾರಾಷ್ಟ್ರದ ಹೆಸರಾಂತ ಸಣ್ಣ ಕಥೆಗಾರರು; ಅಲ್ಲಿಯ ನವ್ಯಕಥೆಯ ಆದ್ಯಪ್ರವರ್ತಕರು.

ಇವರು 1923ರ ಆಗಸ್್ಟ 25ರಂದು ಮುಂಬಯಿಯಲ್ಲಿ ಜನಿಸಿದರು. ತಮ್ಮ ಇಪ್ಪತ್ತೊಂದನೆಯ ವಯಸ್ಸಿನಲ್ಲಿ ಚರಿತ್ರೆ ಮತ್ತು ಅರ್ಥಶಾಸ್ತ್ರಗಳನ್ನು ಮುಖ್ಯ ವಿಷಯಗಳನ್ನಾಗಿ ಆರಿಸಿಕೊಂಡು ಮುಂಬಯಿ ವಿಶ್ವವಿದ್ಯಾಲಯದ ಎಂ.ಎ. ಪದವಿಯನ್ನು ಪಡೆದು ಅದೇ ವಿಷಯಗಳ ಪ್ರಾಧ್ಯಾಪಕರಾಗಿ ಕೆಲಸ ಮಾಡತೊಡಗಿದರು. ಬರೆವಣಿಗೆಯ ಕಡೆಗೆ ಮೊದಲಿನಿಂದಲೂ ಇವರಿಗೆ ಒಲವು.

ಇವರು 2008 ಸೆಪ್ಟೆಂಬರ್ 15ರಂದು ನಿಧನವಾದರು.

ಪ್ರಿಯಾ ಆಣಿ ಮಾಂಜರ (ಪ್ರಿಯೆ ಮತ್ತು ಬೆಕ್ಕು) ಎಂಬ ಮೊದಲ ಕಥೆ ವಾಙ್ಮಯಶೋಭಾ ಪತ್ರಿಕೆಯಲ್ಲಿ ಪ್ರಕಟವಾಯಿತು. ಮಾನಸಚಿತ್ರೆ ಎನ್ನುವ ಮೊದಲ ಕಥಾಸಂಗ್ರಹ ಹೊರಬಂದದ್ದು 1946ರಲ್ಲಿ. ಅನಂತರ ಇವರು ಸಣ್ಣ ಕಥೆಗಳನ್ನು ಮಾತ್ರವಲ್ಲದೆ ಏಕಾಂತ ನಾಟಕ, ಪ್ರವಾಸ ವರ್ಣನೆ, ನಾಟಕ, ಕಾದಂಬರಿ- ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ವಿಪುಲವಾಗಿ ಬರೆದಿದ್ದಾರೆ. ಮಾನಸಚಿತ್ರೆ (1946). ನವ್ಯಾವಾಟಾ (ಹೊಸ ದಾರಿಗಳು, 1950), ಕಬೂತರೆ (ಪಾರಿವಾಳಗಳು, 1952) ಮತ್ತು ತಲಾವಾತೀಲ ಚಾಂದಣಿ (ಕೆರೆಯಲ್ಲಿಯ ಬೆಳದಿಂಗಳು, 1954)-ಇವು ಇವರ ಕಥಾಸಂಗ್ರಹಗಳು. ಪಾಂಚನಾಟಿಕಾ (1953) ಒಂದು ನಾಟಕ ಸಂಗ್ರಹ, ಲಿಲೀಚೆ ಫೂಲ್ (ಲಿಲಿ ಹೂವು, 1955) ಒಂದು ಕಾದಂಬರಿ, ಗೋಪುರಾಂಚ್ಯಾ ದೇಶಾಂತ (ಗೋಪುರಗಳ ದೇಶದಲ್ಲಿ) ಒಂದು ಪ್ರವಾಸ ವರ್ಣನೆ, ಖಡಕ ಆಣಿ ಪಾಣೀ ಒಂದು ವಿಮರ್ಶನ ಗ್ರಂಥ, ಇವಲ್ಲದೆ ಮಕ್ಕಳಿಗಾಗಿ ಕಥೆಗಳು ಎಂದು ಮುಂತಾಗಿ ಇವರ ಬರೆವಣಿಗೆ ಬಹುಮುಖವಾಗಿ ಮುಂದುವರಿದಿದೆ. 1964ರಲ್ಲಿ ನ್ಯೂಯಾರ್ಕಿನ ಹೆರಾಲ್ಡ್ ಟ್ರಿಬ್ಯೂನ್ ಪತ್ರಿಕೆಯ ಪಾರಿತೋಷಕ ಇವರಿಗೆ ದೊರಕಿತಲ್ಲದೆ ಮೂರು ವರ್ಷಗಳ ಅನಂತರ ರಾಕ್ಫೆಲರ್ ಫೌಂಡೇಷನ್ನಿನಿಂದ ಒಂದು ವರ್ಷದ ವ್ಯಾಸಂಗ ವೇತನವೂ ಸಿಕ್ಕಿತು. ಗಾಡಗೀಳರು ಇಂಗ್ಲಿಷಿ ನಲ್ಲಿಯೂ ಚೆನ್ನಾಗಿ ಬರೆಯಬಲ್ಲರು. ಇವರ ಅನೇಕ ಕಥೆಗಳು ಹಿಂದಿ, ಗುಜರಾತಿಗಳಲ್ಲಿ ಮಾತ್ರವಲ್ಲದೆ ಇಂಗ್ಲಿಷ್ ಮತ್ತು ಇಟಾಲಿಯನ್ ಭಾಷೆಗಳಲ್ಲಿಯೂ ಅನುವಾದಿತ ವಾಗಿ ಪ್ರಕಟವಾಗಿವೆ.

ನಲವತ್ತರಿಂದ ಅರವತ್ತರವರೆಗಿನ 20ನೆಯ ಶತಮಾನದ ಎರಡು ದಶಕಗಳಲ್ಲಿ ಸಮೃದ್ಧವಾಗಿ ಬೆಳೆದ ಮರಾಠಿ ಸಣ್ಣ ಕಥೆಗಳ ಪ್ರಪಂಚದಲ್ಲಿ ಗಂಗಾಧರ ಗಾಡಗೀಳರಿಗೆ ಒಂದು ವಿಶಿಷ್ಟವಾದ ಸ್ಥಾನವಿದೆ. ಕಥೆಯನ್ನು ಹೊರಜಗತ್ತಿನ ಘಟನೆಗಳಿಗೆ ಸೀಮಿತವಾಗಿಸದೆ ಅಂತರಂಗ ಪ್ರಪಂಚದ ಅನಂತ ವಿಸ್ತಾರವನ್ನು ಅದಕ್ಕೆ ಒದಗಿಸಿದವರು ಇವರು. ಮಾತ್ರವಲ್ಲದೆ ಮಾನವಸ್ವಭಾವವನ್ನು ಅನೇಕ ನಿಲುವುಗಳಿಂದ ಅನೇಕ ಪಾತಳಿಗಳಲ್ಲಿ ಕಂಡು ವಿಶ್ಲೇಷಿಸಿ ವಿವರಿಸುವ ಇವರ ವಿಧಾನ ಸಣ್ಣ ಕಥೆಗಳ ಪರಿಣಾಮ ಸಾಧನೆಯಲ್ಲಿ ಒಂದು ಹೊಸ ಆಯಾಮವನ್ನೇ ಸಾಧಿಸಿತು. ಸಾಹಿತ್ಯ ನಿರ್ಮಿತಿಯ ಜೊತೆಯಲ್ಲಿ ತಮ್ಮ ಅಧ್ಯಾಪನದ ವಿಷಯವಾದ ಅರ್ಥಶಾಸ್ತ್ರವನ್ನು ಕುರಿತು ಇಂಗ್ಲಿಷಿನಲ್ಲಿ ಮೂರು ಮತ್ತು ಮರಾಠಿಯಲ್ಲಿ ಎರಡು ಗ್ರಂಥಗಳನ್ನು ಇವರು ಬರೆದಿದ್ದಾರೆ. ಮಹಾರಾಷ್ಟ್ರದ ಪ್ರತಿಭಾನ್ವಿತ ಬರೆಹಗಾರರಾಗಿದ್ದ ಇವರ ಕೊಡುಗೆಯನ್ನು ಇವರು ಬರೆದ ಕೃತಿಗಳಲ್ಲಿ ಹೇಗೋ ಹಾಗೆ ಸಣ್ಣ ಕಥೆಗೆ ಇವರು ಕೊಟ್ಟ ತಿರುವಿನಲ್ಲಿಯೂ ಗುರುತಿಸಬಹುದಾಗಿದೆ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: