ಕಾರ್ಲೋ ಗಾಟ್ಸಿ
ಬದುಕು
ಬದಲಾಯಿಸಿಕಾರ್ಲೋ ಗಾಟ್ಸಿ 1720-1806. ಇಟಲಿಯ ನಾಟಕಕಾರ.
ರಸಿಕರ ಸುಸಂಸ್ಕೃತರ ಬೀಡು ಎನಿಸಿಕೊಂಡಿದ್ದ ವೆನಿಸ್ನಲ್ಲಿ ಜನಿಸಿದ. ಕೆಲಕಾಲ ಡಾಲ್ಮೇಷಿಯದಲ್ಲಿ ರಾಹುತಪಡೆಯ ಸೈನಿಕನಾಗಿದ್ದ. ತನ್ನ 24 ನೆಯ ವರ್ಷದಲ್ಲಿ ವೆನಿಸ್ಗೆ ಹಿಂದಿರುಗಿ ಅಲ್ಲಿನ ಶಿಷ್ಟ ಸಮಾಜದಲ್ಲಿ ಹೆಸರುಗಳಿಸಿ ಶ್ರೀಮಂತ ಸಾಹಿತಿಗಳ ಸಹವಾಸ ದೊರಕಿಸಿಕೊಂಡ. ಇಟಲಿಯ ಜನಪದ ಸಾಹಿತ್ಯದ ಹಳೆಯ ಪರಂಪರೆಯನ್ನು ಉಳಿಸಬೇಕೆಂದು ವಾದಿಸಿ, ಹೊಸ ಪೀಳಿಗೆಯ ಲೇಖಕರ ವಿರುದ್ಧ ಕತ್ತಿ ಕಟ್ಟಿದ.
ನಾಟಕಗಳು
ಬದಲಾಯಿಸಿಆ ಕಾಲದಲ್ಲಿ ಕಾರ್ಲೋ ಗಾಲ್ಡೋನಿ ಹಾಗೂ ಷಿಯಾರಿ ಎಂಬ ಇಬ್ಬರು ಹೊಸ ಹೊಸ ಸಾಮಾಜಿಕ ವಿನೋದನಾಟಕಗಳನ್ನು ಬರೆದು ಪ್ರದರ್ಶಿಸಿ ವಿಪುಲವಾದ ಜನಪ್ರಿಯತೆ ಸಂಪಾದಿಸಿದ್ದರು. ಮಡಿವಂತ ಸಾಹಿತಿಗಳೇ ಸೇರಿ ಸ್ಥಾಪಿಸಿದ ಗಾನೆಲೆಷ್ಚಿ ಅಕಾಡೆಮಿಯ ಸದಸ್ಯನಾಗಿ ಗಾಟ್ಸಿ ಅಂಥ ಹೊಸ ನಾಟಕಕಾರರ ಅತಿವಾಸ್ತವಿಕತೆಯನ್ನೂ ಭಾವುಕತೆಯನ್ನೂ ತನ್ನ ನಾಟಕಗಳಲ್ಲಿ ವಿಡಂಬನೆ ಮಾಡಿ ಮಿತಿ ಇಲ್ಲದ ವಾದವಿವಾದಗಳನ್ನು ಎಬ್ಬಿಸಿದ. ಇಟಲಿಯ ಜನಪದ ನಾಟಕ ಪ್ರಕಾರವಾದ ಕಮೆದಿಯ ದೆಲ್ ಆರ್ತ್ನ ಪ್ರಾತಿನಿಧಿಕ, ಸಾಂಪ್ರದಾಯಿಕ ಪಾತ್ರಗಳನ್ನೇ ತನ್ನ ನಾಟಕಗಳಿಗೆ ಅಳವಡಿಸಿಕೊಂಡು ಜನಪದ ಕಟ್ಟುಕಥೆಗಳಿಂದ ಅಜ್ಜಿ ಕಥೆಗಳಿಂದ ಆರಿಸಿದ ಕಥಾವಸ್ತುವನ್ನು ಧಾರಾಳವಾಗಿ ಬಳಸಿಕೊಂಡ. ಈತ ಬರೆದ ಫಿಯಾಬಿ ಎಂಬ ಹತ್ತು ವಿಚಿತ್ರ ಕಾಲ್ಪನಿಕ ರೂಪಕಗಳು ಹೆಸರುವಾಸಿಯಾದವು. ಇವುಗಳಲ್ಲಿ ಮುಖ್ಯವಾದ, ಮೂರು ಕಿತ್ತಳೇ ಹಣ್ಣಿನ ಕಥೆ-ಎನ್ನುವ ವಿಚಿತ್ರ ಪ್ರಹಸನದಲ್ಲಿ ಗಾಲ್ಡೋನಿ ಮತ್ತು ಷಿಯಾರಿಗಳಿಬ್ಬರನ್ನೂ ವಿಚಿತ್ರ ಹಾಸ್ಯಪಾತ್ರಗಳಾಗಿ ಮಾರ್ಪಡಿಸಿ ಗೇಲಿಮಾಡಿದ. ಜಿಂಕೆಯಾಗಿ ಮಾರ್ಪಟ್ಟ ದೊರೆ, ಪುಟಾಣಿ ಸುಂದರ ಹಸುರು ಹಕ್ಕಿ, ಟುರಾಂಡಾಟ್ - ಇವು ಈತನ ಇತರ ಸ್ವಾರಸ್ಯಕರ ಕೃತಿಗಳು.
ಇಟಲಿಯ ಪ್ರೇಕ್ಷಕರನ್ನು, ರಸಿಕರನ್ನು ಪ್ರಬಲವಾಗಿ ಸೆಳೆದು ವೆನಿಸ್ ರಂಗ ಭೂಮಿಯ ಮೇಲೆ ಕೊಲಾಹಲವನ್ನುಂಟುಮಾಡಿದ ಗಾಟ್ಸಿಯ ವಿಚಿತ್ರ ವೈನೋದಿಕಗಳು ಬಲುಬೇಗ ತಮ್ಮ ಆಕರ್ಷಣೆಯನ್ನು ಕಳೆದುಕೊಂಡು ಸ್ವಲ್ಪಕಾಲ ಮೂಲೆಗುಂಪಾದವು. ಆದರೆ 1777ರಲ್ಲಿ ಇವು ಜರ್ಮನ್ ಭಾಷೆಗೆ ಅನುವಾದವಾಗಿ ಜರ್ಮನಿಯಲ್ಲಿ ವಿಶೇಷ ಮನ್ನಣೆ ಪಡೆದವು. ಗಯಟೆ, ಷಿಲ್ಲರ್, ಲೆಸ್ಸಿಂಗ್, ಷ್ಲೆಗಲ್ ಮುಂತಾದ ಜರ್ಮನ್ ರೊಮ್ಯಾಂಟಿಕ್ ಸಾಹಿತಿಗಳಿಗೆ ಗಾಟ್ಸಿಯ ನಾಟಕಗಳು ಹಿಡಿಸಿದವು. ಇವನ ಒಂದೆರಡು ಕಥಾನಕಗಳು ಪ್ಯುಟ್ಚೀನೀ, ಪ್ರೋಕೋಫೀವ್ ಮುಂತಾದವರ ಆಪೆರಗಳಲ್ಲಿ ಮತ್ತೆ ಮತ್ತೆ ಹೊಸ ರೂಪ ತಾಳಿವೆ. 1780ರಲ್ಲಿ ಗಾಟ್ಸಿ ಬರೆದ ಆತ್ಮಕಥೆಯಲ್ಲಿ ಬೇಕಾದಷ್ಟು ಆತ್ಮಪ್ರತಿಷ್ಠೆ, ಆಡಂಬರ ತುಂಬಿವೆ. ಆದರೆ ಅವನ ಚಿಕ್ಕಂದಿನ ನೆನಪುಗಳು, ಇಟಲಿಯ ಜನಪದ ಸಾಹಿತ್ಯವನ್ನು ಕುರಿತ ಮಾತುಗಳು, ಎಲ್ಲಕ್ಕಿಂತ ಹೆಚ್ಚಾಗಿ ಅವನು ಗಾಲ್ಡೋನಿ, ಷಿಯಾರಿಗಳ ಜೊತೆ ನಡೆಸಿದ ಜಗಳಗಳ ಲಘುಹಾಸ್ಯದ ವರ್ಣನೆಗಳು-ಇವುಗಳಿಂದಾಗಿ ಅದು ಸ್ವಾರಸ್ಯವಾದ ಗ್ರಂಥವಾಗಿದೆ.