ಗಾಂಧಿಕ್ಲಾಸು (ಕುಂವೀ ಆತ್ಮಕಥೆ)

[]

ಗಾಂಧಿಕ್ಲಾಸು (ಕುಂವೀ ಆತ್ಮಕಥೆ)
ಚಿತ್ರ:ಗಾಂಧಿಕ್ಲಾಸು (ಕುಂವೀ ಆತ್ಮಕಥೆ).jpg
ಮುಖ ಪುಟ
ಮುಖಪುಟ ಕಲಾವಿದಡಿ.ಜಿ ಮಲ್ಲಿಕಾರ್ಜುನ್ ( ವಿನ್ಯಾಸ : ಅಪಾರ)
ಭಾಷೆಕನ್ನಡ
ವಿಷಯಅತ್ಮಕಥನ
ಪ್ರಕಾರNon-fiction
ಪ್ರಕಾಶಕರುSapna Book House (P) Ltd., Bangalore.
ಪ್ರಕಟವಾದ ದಿನಾಂಕ
2010
ಮಾಧ್ಯಮ ಪ್ರಕಾರPrint (Hardcover)
ಪುಟಗಳು೩೯೦ pp

ಗಾಂಧಿ ಕ್ಲಾಸು ಕನ್ನಡದ ಖ್ಯಾತ ಮತ್ತು ವಿಶಿಷ್ಟ ಬರಹಗಾರ ಎಂದೇ ಹೆಸರಾದ ಕುಂ.ವೀರಭದ್ರಪ್ಪನವರ ೨೦೧೦ ರಲ್ಲಿ ಪ್ರಕಟವಾದ ಅತ್ಮಕಥನ.

ಕುಂ.ವೀಯವರು ಬಾಲ್ಯದಿಂದ ಹಿಡಿದು, ಅಮೆರಿಕಾದ ಅಕ್ಕ ಸಮ್ಮೇಳನದವರೆಗೆ ಬೆಳೆದ ಕುಂವೀಯನ್ನು ಈ ಕೃತಿಯಲ್ಲಿ ಕಾಣಬುಹುದಾಗಿದೆ.ಬಳ್ಳಾರಿ ಜಿಲ್ಲೆಯ ಗ್ರಾಮೀಣ ಭಾಷೆಯ ಸೊಗಡನ್ನು ಆತ್ಮಕಥನದ ಸನ್ನಿವೇಶಗಳಲ್ಲಿ ಹಿಡಿದಿಡುತ್ತಲೇ, ಹಿಂದುಳಿದ ಜನಾಂಗದ ಬದುಕಿನ ಬವಣೆಗಳನ್ನು ಕಣ್ಣಿಗೆ ಕಟ್ಟುವಂತೆ ಲೇಖಕರು ಚಿತ್ರಿಸುತ್ತಾರೆ. ಇಲ್ಲಿ ಬಾಲ್ಯ ಸಹಜ ಕುತೂಹಲಗಳಿವೆ, ಬೆರಗುಗಣ್ಣುಗಳಿವೆ, ಉತ್ಸಾಹ, ಉಲ್ಲಾಸ, ಅಂತೆಯೇ ಕಾಮದ ಕುತೂಹಲವೂ ಒಡಮೂಡಿದೆ. ಆತ್ಮಕಥನದ ಮೊದಲಿಗೆ ಬರವಣಿಗೆ ಬಹು ಲಘುವಾಗಿ ಸಾಗುತ್ತದೆ. ಕುಂವೀಯ ಎಂದಿನ ಭಾಷಾ ಶೈಲಿಯ ಸೊಗಡನ್ನು ಇಲ್ಲಿ ಆಸ್ವಾದಿಸಬಹುದು. ಅವರಲ್ಲಿ ಕಾದಂಬರಿಕಾರ ಒಡಮೂಡಿದ ನಂತರ ಕೃತಿಯ ಗಂಭೀರತೆ ಹೆಚ್ಚುತ್ತ ಹೋಗುತ್ತದೆ. ಕೃತಿಯುದ್ದಕ್ಕೂ ನಗುವಿನ ಸೆಳಹುಗಳಿವೆ. ಅಂತೆಯೇ ಬಡತನ, ಕ್ರೌರ್ಯ, ಹಿಂಸೆ, ಹಸಿವಿನ ದಾಖಲೆಗಳೂ ಇವೆ. ಇಡೀ ಗ್ರಾಮಕ್ಕೇ ಕೊಡುಗೈ ದೊರೆಯೆನಿಸಿಕೊಂಡಿದ್ದ ಕುಂವೀಯವರ ಮನೆತನ ಬಡತನದ ಬವಣೆಗೆ ಸಿಲುಕುವ ಪ್ರತಿ ಹಂತಗಳೂ ಕೃತಿಯಲ್ಲಿ ದಾಖಲಾಗಿವೆ. ಹಿಂದುಳಿದ ಜನಾಂಗವನ್ನು ಸಮಾಜ ಕಾಣುವ ದೃಷ್ಟಿಕೋನ, ಅವಮಾನದ ಪ್ರಸಂಗಗಳು, ಅದನ್ನು ಭರಿಸಿ ಸವಾಲಿನ ರೀತಿಯಲ್ಲಿ ಮುಂದೆ ಸಾಗುವ ಸನ್ನಿವೇಶಗಳನ್ನು ಕುಂ.ವೀಯವರು ಮನಮುಟ್ಟುವಂತೆ ಚಿತ್ರಿಸಿದ್ದಾರೆ.

ಒಳ ಪುಟಗಳಲ್ಲಿ

ಬದಲಾಯಿಸಿ

ಗಾಂಧಿ ಕ್ಲಾಸು ಆತ್ಮಕಥನ ಒಟ್ಟು ಹನ್ನೊಂದು ಅಧ್ಯಾಯಗಳಲ್ಲಿ ಅನಾವರಣಗೊಂಡಿದೆ. ಕುಂವೀ ಇಲ್ಲಿನ ಪ್ರತಿಯೊಂದು ಅಧ್ಯಾಯವನ್ನು ಓಣಿ ಎನ್ನುವ ಅನ್ವರ್ಥನಾಮದಿಂದ ಕರೆದಿರುವರು. ಪ್ರಾರಂಭದ ಎರಡು ಅಧ್ಯಾಯಗಳಲ್ಲಿನ ಬರವಣಿಗೆಯನ್ನು ಲೇಖಕರು ತಮ್ಮ ತಂದೆಗಾಗಿ ಮೀಸಲಿಟ್ಟಿರುವರು. ಅಪ್ಪನ ದೈಹಿಕ ಸೌಂದರ್ಯ, ಆತನೊಳಗಿನ ಸಿಟ್ಟು, ಹಟ, ಬಡವರ ಕುರಿತು ಇರುವ ಅನುಕಂಪ, ಮಗನನ್ನು ಓದಿಸಿ ದೊಡ್ಡ ವ್ಯಕ್ತಿಯನ್ನಾಗಿಸಬೇಕೆನ್ನುವ ಹಂಬಲ ಹೀಗೆ ಅಪ್ಪನ ವ್ಯಕ್ತಿತ್ವದ ವಿಭಿನ್ನ ಮುಖಗಳನ್ನು ಈ ಎರಡು ಅಧ್ಯಾಯಗಳಲ್ಲಿ ಪರಿಚಯಿಸುತ್ತಾರೆ. ತಂದೆಯ ಅತಿಯಾದ ಕೋಪ ಮತ್ತು ಹಟ ಒಮ್ಮೊಮ್ಮೆ ಸಿಟ್ಟು ತರಿಸಿದರೆ ಮಗದೊಮ್ಮೆ ಮಕ್ಕಳಿಗಾಗಿ ಅಹರ್ನಿಶಿ ದುಡಿಯುತ್ತಿರುವ ಅಪ್ಪ ಆದರ್ಶಪ್ರಾಯನಾಗುತ್ತಾನೆ. ಅಪ್ಪನಲ್ಲಿದ್ದ ಆದರ್ಶ ಮತ್ತು ಸಿಟ್ಟಿನ ಸ್ವಭಾವದಿಂದ ಆಸ್ತಿಯನ್ನೆಲ್ಲ ಕಳೆದುಕೊಂಡು ನಾವು ಬಡತನದ ಬದುಕನ್ನು ಅಪ್ಪಿಕೊಳ್ಳಬೇಕಾಯಿತು ಎಂದು ಹೇಳುವ ಕುಂವೀ ತಂದೆಯ ಸಾವಿನ ನಂತರ ಇರುವ ಸಾಲವನ್ನೆಲ್ಲ ತೀರಿಸಿ ಅಪ್ಪನನ್ನು ಋಣಮುಕ್ತನನ್ನಾಗಿಸುವ ಸನ್ನಿವೇಶ ಓದುಗರ ಮನಸ್ಸನ್ನು ಆರ್ದ್ರವಾಗಿಸುತ್ತದೆ. ಆ ಸಂದರ್ಭ ಅರಿವಿಲ್ಲದೆ ಕಣ್ಣೀರು ಕಪಾಲಕ್ಕಿಳಿದು ಭಾವ ತೀವೃತೆಯಿಂದ ಹೃದಯ ಹೊಯ್ದಾಡುತ್ತದೆ.

ನಂತರದ ಅಧ್ಯಾಯಗಳಲ್ಲಿ ಕುಂವೀ ಶಿಕ್ಷಣ, ನಿರುದ್ಯೋಗ, ದಿನಗೂಲಿಯಾಗಿ ಕೆಲಸ ಮಾಡಿದ ಸಂದರ್ಭಗಳನ್ನು ಕುರಿತು ಹೇಳಿಕೊಂಡಿರುವರು. ಒಂದು ಸಂದರ್ಭ ಮನೆಯಿಂದ ದೂರಾಗಿ ಕೆಲಸ ಸಿಗದೆ 36 ಗಂಟೆಗಳ ಕಾಲ ಉಪವಾಸವಿದ್ದ ಪ್ರಸಂಗವನ್ನು ಓದುವಾಗ ಕಣ್ಣುಗಳು ಮತ್ತೊಮ್ಮೆ ಹನಿಗೂಡುತ್ತವೆ. ಆ ಸಮಯ ಯುವ ಈರಭದ್ರನಲ್ಲಿರುವ ಹಸಿವನ್ನು ಗುರುತಿಸಿ ತಾನು ತಂದ ಬುತ್ತಿಯನ್ನೇ ಅರ್ಧ ಹಂಚಿಕೊಂಡು ಉಣ್ಣುವ ದುರುಗ್ಯಾ ನಾಯ್ಕನನ್ನು ಅವನ ಕೊನೆಗಾಲದಲ್ಲಿ ಸತ್ಕರಿಸುವ ಕುಂವೀ ವ್ಯಕ್ತಿತ್ವ ಓದುಗನಿಗೆ ಹೆಚ್ಚು ಆಪ್ತವಾಗುತ್ತದೆ.

ಪುಸ್ತಕದ ಒಂಬತ್ತನೇ ಅಧ್ಯಾಯ ಕುಂವೀ ಬದುಕಿನ ಬಹುಮುಖ್ಯ ತಿರುವಿಗೆ ಸಂಬಂಧಿಸಿದೆ. ‘ನೀನು ಯಾವುದೇ ಕಾರಣಕ್ಕೂ ಊರಿಗೆ ವಾಪಸು ಬರಕೂಡದು. ತೊಲಗು ಇಲ್ಲಿಂದ. ಮುಂದೆಯೂ ನಿನ್ನ ಮುಖ ತೋರಿಸಬೇಡ’ ಹೆತ್ತ ಅಪ್ಪನೇ ಫತ್ವಾ ಹೊರಡಿಸಿದ ಮೇಲೆ ಅದು ಗಡಿಪಾರೋ, ಬಹಿಷ್ಕಾರವೋ ಯಾವ ಸುಡುಗಾಡೆಂಬುದು ತಿಳಿಯದು ಎನ್ನುತ್ತ ಊರು ಬಿಟ್ಟು ಹೊರಡುವ ಕುಂವೀ ನೇರವಾಗಿ ಹೋಗಿ ಸೇರುವುದು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಆಲೂರು ತಾಲ್ಲೂಕಿಗೆ ಸೇರಿದ ವಾಗಿಲಿ ಎನ್ನುವ ಕುಗ್ರಾಮವನ್ನು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಆ ಪುಟ್ಟ ಗ್ರಾಮವನ್ನು ಸೇರಿಕೊಳ್ಳುವ ಕುಂವೀಗೆ ನಂತರದ ದಿನಗಳಲ್ಲಿ ಆ ಗ್ರಾಮ ಅವರಲ್ಲಿನ ಅಭಿವ್ಯಕ್ತಿ ಮಾಧ್ಯಮಕ್ಕೆ ವೇದಿಕೆಯಾಗುತ್ತ ಹೋಗುತ್ತದೆ. ಗಾಂಧಿ ಕ್ಲಾಸಿನ ಕಥಾನಾಯಕನ ಬದುಕಿಗೆ ಒಂದು ಸೃಜನಶೀಲತೆಯ ಆಯಾಮ ದೊರೆಯುವುದು ವಾಗಿಲಿ ಎನ್ನುವ ಪುಟ್ಟ ಪ್ರಪಂಚದಲ್ಲೇ. ವಾಗಿಲಿ ಅವರಿಗೆ ಬಡತನ, ಅಜ್ಞಾನ, ಅಂಧಾನುಕರಣೆ, ಶೋಷಣೆ, ವರ್ಗ ಸಂಘರ್ಷ, ದಬ್ಬಾಳಿಕೆ, ಜೀತ ಪದ್ಧತಿ, ಸೇಡು, ಪ್ರತಿಕಾರ, ಮುಗ್ಧತೆ, ಸುಶಿಕ್ಷಿತರ ಸಣ್ಣತನ ಹೀಗೆ ಅನೇಕ ವಿಷಯಗಳನ್ನು ಪರಿಚಯಿಸುತ್ತ ಹೋಗುತ್ತದೆ. ಅವರ ಕಥೆ, ಕಾದಂಬರಿಗಳ ರಚನೆಗೆ ವಾಗಿಲಿ ಸ್ಫೂರ್ತಿಯ ಸೆಲೆಯಾಗುತ್ತದೆ. ಇಲ್ಲಿ ಕುಂವೀ ಬದುಕಿನ ಜೊತೆ ಜೊತೆಗೆ ಆಂಧ್ರದ ರಾಯಲಸೀಮಾದ ರಕ್ತಸಿಕ್ತ ಚರಿತ್ರೆ ನಮ್ಮೆದುರು ತೆರೆದುಕೊಳ್ಳುತ್ತದೆ. ಓದುತ್ತ ಹೋದಂತೆ ಇದು ಆತ್ಮಕಥೆಯೋ ಅಥವಾ ರೋಚಕ ನಿರೂಪಣೆಯಿಂದ ಕೂಡಿದ ಕಾದಂಬರಿಯೋ ಎನ್ನುವ ಅನುಮಾನ ಒಂದು ಹಂತದಲ್ಲಿ ಓದುಗನ ಮನಸ್ಸಿನಲ್ಲಿ ಮೂಡದೇ ಇರದು.

ಹತ್ತನೇ ಅಧ್ಯಾಯ ಲೇಖಕರು ಗೂಳ್ಯಂನಲ್ಲಿ ಕಟ್ಟಿಕೊಂಡ ವೃತ್ತಿ ಮತ್ತು ವೈಯಕ್ತಿಕ ಬದುಕಿನ ಮೇಲೆ ಬೆಳಕು ಚೆಲ್ಲುತ್ತದೆ. ನಕ್ಸಲ್‍ರ ಪರಿಚಯ, ರಾಯಲಸೀಮಾದಲ್ಲಿನ ಹೊಡೆದಾಟಗಳು, ಗಡಿನಾಡಿನಲ್ಲಿ ಕನ್ನಡ ಶಾಲೆಯನ್ನು ಉಳಿಸಿಕೊಳ್ಳಲು ಮಾಡುವ ಪ್ರಯತ್ನ, ಶಾಮಣ್ಣ ಕಾದಂಬರಿಯ ರಚನೆ ಹೀಗೆ ಅನೇಕ ವಿಷಯಗಳು ಓದಲು ಸಿಗುತ್ತವೆ. ಕುಂವೀ ಅವರ ವೃತ್ತಿ ಬದುಕಿನ ಕೊನೆಯ ದಿನಗಳು ಹನ್ನೊಂದನೇ ಅಧ್ಯಾಯದಲ್ಲಿ ತೆರೆದುಕೊಳ್ಳುತ್ತವೆ. ಗೂಳ್ಯಂನಿಂದ ಹಿರೇಹಾಳಿಗೆ ಬಂದು ನೆಲೆಸುವ ಕುಂವೀ ಇಲ್ಲಿ ತಮ್ಮ ಮಹತ್ವಾಕಾಂಕ್ಷೆಯ ‘ಅರಮನೆ’ ಕಾದಂಬರಿಯನ್ನು ಬರೆಯುತ್ತಾರೆ. ಅರಮನೆಯಂಥ ಬೃಹತ್ ಕಾದಂಬರಿಯನ್ನು ಬರೆಯಬೇಕೆನ್ನುವ ತುಡಿತ, ಪಾತ್ರಗಳ ಹುಡುಕಾಟ, ಅರಮನೆಗಳನ್ನು ಹುಡುಕುತ್ತ ಅಲೆದಾಟ, ಕಟ್ಟಿ ಕೆಡವಿ ಮತ್ತೆ ಮತ್ತೆ ಬರೆಯುವ ಅನಿವಾರ್ಯತೆ, ಕೊನೆಗೂ ಹದಿನೈದು ವರ್ಷಗಳ ಕಾಲ ಕಾಡಿದ ಸೃಜನಶೀಲ ತಾಕತ್ತು ಕೃತಿಯಾಗಿ ರೂಪಾಂತರಗೊಂಡ ಸಂದರ್ಭ ಇದೆಲ್ಲವನ್ನು ಲೇಖಕರು ಕೊನೆಯ ಅಧ್ಯಾಯದಲ್ಲಿ ವಿವರಿಸುತ್ತಾರೆ.

ಕೃತಿಯ ವಿಶೇಷತೆ

ಬದಲಾಯಿಸಿ

ಗಾಂಧಿ ಕ್ಲಾಸು ಬರಿಯ ಅತ್ಮಕಥೆಯಾಗಿರದೆ ಆತ್ಮಕಥನ ರೂಪದ ಕಾದಂಬರಿ ಎನ್ನುವಂತಿದೆ. ಕೃತಿಯಲ್ಲಿ ಬರುವ ಎಲ್ಲ ಸನ್ನಿವೇಶಗಳೂ ಕಾದಂಬರಿಯ ರೀತಿಯಲ್ಲಿ ಹೆಣೆಯಲ್ಪಟ್ಟಿವೆಯಲ್ಲದೆ, ಇಲ್ಲಿ ಬರುವ ಎಲ್ಲ ಘಟನೆಗಳೂ ತಮ್ಮ ಜೀವನದ ಶೇ.೯೯ರಷ್ಟು ಸತ್ಯವೆಂದೇ ಕುಂವೀ ಹೇಳುತ್ತಾರೆ.

ಕುಂ.ವೀ ಯವರ ಎಂದಿನಿ ಅಪ್ಪಟ ಗ್ರಾಮೀಣ ಭಾಷಾ ಸೊಗಡು ಈ ಕೃತಿಯ ವಿಶೇಷತೆ.

ಗಾಂಧಿ ಕ್ಲಾಸಿನ ಮತ್ತೊಂದು ವಿಶೇಷವೆಂದರೆ ಶಕ್ತ ಕತೆಗಾರ, ಕಾದಂಬರಿಕಾರ, ಲೇಖಕ ಕುಂವೀಯವರು ಸಾಹಿತ್ಯವನ್ನು ಕಂಡರಿಸಿರುವ ಧೋರಣೆ. ಕತೆ, ಕಾದಂಬರಿ ಅಥವಾ ಸಾಹಿತ್ಯ ಎಂಬುದನ್ನು ಅವರು ಬದುಕಿನ ಅಸಾಮಾನ್ಯ ಸಂಗತಿಯೆಂದು ಭಾವಿಸುವುದಿಲ್ಲ. ಬದಲಿಗೆ ಯಾವುದೇ ಕುಶಲಕರ್ಮಿಯೊಬ್ಬನ ಕುಶಲತೆಯೆಂದಷ್ಟೇ ತಿಳಿಯುತ್ತಾರೆ.

ಅದೊಂದು ರೀತಿಯಲ್ಲಿ ವೃತ್ತಿಯ ಹಾಗೆ, ಬಡ ಮೇಷ್ಟರೊಬ್ಬನನ್ನು ಆಗಾಗ್ಗೆ ಕೈಹಿಡಿಯುವ ಉಪವೃತ್ತಿಯ ಹಾಗೆ ತಮ್ಮ ಬದುಕನ್ನು ಪೊರೆದುದನ್ನು ಹೇಳಿಕೊಳ್ಳುತ್ತಾರೆ. ಹಾಗಾಗಿಯೇ ಅವರು ವಾರೊಪ್ಪತ್ತಿನಲ್ಲಿ ಕಾದಂಬರಿಗಳನ್ನು, ಕತೆಗಳನ್ನು ಸಲೀಸಾಗಿ ಬರೆಯಲು ಸಾಧ್ಯವಾಗಿದ್ದನ್ನು ಯಾವ ಪೂರ್ವಗ್ರಹವೂ ಇಲ್ಲದೆ ಹೇಳಬಲ್ಲವರಾಗಿದ್ದಾರೆ. ಸಾಹಿತ್ಯ ಸೃಷ್ಟಿಯನ್ನು ಅತಾರ್ಕಿಕವಾಗಿ ದೈವೀಕರಿಸುವ, ಪವಿತ್ರೀಕರಿಸುವ, ಅದನ್ನೊಂದು ಶ್ರೇಷ್ಠ ಪ್ರವೃತ್ತಿಯಂತೆ ಕಾಣುವವರ ನಡುವೆ ಕುಂವೀ ಅವರ ಈ ಸಾಹಿತ್ಯ ತತ್ವ ಗಾಂಧಿಯ ಕಾಯಕ ತತ್ವಕ್ಕೆ ಹತ್ತಿರದ್ದಾಗಿದೆ.

ಗಾಂಧಿ ಕ್ಲಾಸು ಅತ್ಮಕಥನ ಎನ್ನುವುದಕ್ಕಿಂತ ಅದೊಂದು ಆರು ದಶಕಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನ ತವಕ, ತಲ್ಲಣ ಹಾಗೂ ಹಿರಿಮೆಗಳ ಹಿನ್ನೋಟ. ಈ ಹಿನ್ನೋಟದಲ್ಲಿ ಅಪ್ರತಿಮ ಸಾಧಕನ ಯಶೋಗಾಥೆ ಇದೆ, ಎದುರಾದ ಸಂಕಷ್ಟಗಳಿವೆ, ಸಂಪ್ರದಾಯಗಳ ಸಂಘರ್ಷವಿದೆ, ಸಾರಸ್ವತ ಲೋಕದ ಸಣ್ಣತನಗಳಿವೆ, ಶೋಷಿತರ ಬದುಕಿನ ಬವಣೆಗಳಿವೆ ಇವುಗಳೆಲ್ಲವನ್ನೂ ಮೀರಿ ಕುಂವೀ ಅವರ ಮುಗ್ಧತೆ ಇಲ್ಲಿ ಮೈಚಾಚಿಕೊಂಡಿದೆ.

ಕುಂವೀ ಬಾಲ್ಯದ ಕೊಟ್ಟೂರು, ಶಿಕ್ಷಕರಾಗಿ ಕೆಲಸ ಮಾಡುವ ಆಂಧ್ರಪ್ರದೇಶದ ಕ್ರೌರ್ಯ ತುಂಬಿದ ವಾಗಿಲಿಯಂಥ ಪ್ರದೇಶಗಳು, ಅಲ್ಲಿನ ಜಮೀನ್ದಾರಿ ಪದ್ಧತಿಯ ರೆಡ್ಡಿಗಳ ಅಟ್ಟಹಾಸ, ಜೊತೆಯಲ್ಲಿಯೇ ಅದನ್ನು ತಮ್ಮೊಳಗಿನ ಕಾದಂಬರಿಕಾರನಿಗೆ ಉಣಬಡಿಸುವ, ದಾಖಲಿಸುವ ಪ್ರಕರಣಗಳು ಕುಂವೀ ಬೆಳೆದ ದಾರಿಯನು ತೋರುತ್ತವೆ. ಬದುಕಿನುದ್ದಕ್ಕೂ ನೋವು, ಸವಾಲು, ಆರ್ಥಿಕ ತೊಂದರೆಗಳನ್ನು ಅನುಭವಿಸುತ್ತಲೇ, ಅದರಲ್ಲಿಯೇ ಸಂತಸದ ಕ್ಷಣಗಳನ್ನೂ ಕುಂವೀ ತೋರಿದ್ದಾರೆ. ತಮ್ಮ ಕೇರಿಯ, ದಲಿತರ ಕೇರಿಯ ದೃಶ್ಯಗಳನ್ನು ಕೃತಿಯಲ್ಲಿ ಒಡಮೂಡಿಸಿರುವುದು ಅದ್ಭುತವಾಗಿದೆ. ಆತ್ಮಕಥನದಲ್ಲಿ ಬರುವ ದೆವ್ವಗಳ ಪ್ರಸಂಗ, ಮುದುಕಿಯರ ಜಗಳಗಳು, ರಂಪಾಟ, ತಾಯಂದಿರು ತಮ್ಮ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ರೀತಿ, ಗ್ರಾಮೀಣ ಭಾಗದಲ್ಲಿ ಶೌಚಾಲಯಗಳಿಲ್ಲದೆ ಬಯಲು ಪ್ರದೇಶಕ್ಕೆ ಹೋದಾಗ ನಡೆವ ಸನ್ನಿವೇಶಗಳು ಓದುಗರು ನಗೆ ಚೆಲ್ಲುವಂತೆ ಮಾಡುವುವಲ್ಲದೆ, ಗ್ರಾಮಗಳ ನೈಜ ಸ್ಥಿತಿಯನ್ನು ಬಿಂಬಿಸುತ್ತವೆ.

ಅಯ್ದ ಪುಟಗಳಿಂದ

ಬದಲಾಯಿಸಿ

* ಗಾಂಧಿ ಎಂದರೆ "ಅದ್ಯಾಕೆ ಬಾಪೂಜಿ... ನೀವು ಮೂರನೆ ತರಗತಿಯ ಬೋಗಿಗಳಲ್ಲಿ ಪ್ರಯಾಣಿಸುವುದು?" "ನಾಲ್ಕನೆ ತರಗತಿಯ ಬೋಗಿಗಳಿಲ್ವಲ್ಲ... ಅದಕ್ಕೆ."

  • "ಈಗ ಹತ್ತಿರವಿರುವ ಅದೋನಿ ಎಂಬ ಶಹರ ಆ ಕಾಲದಲ್ಲಿ ಹಲವು ಯೋಜನ ದೂರದಲ್ಲಿತ್ತು. ಈಗ ಎರಡು ಕಿಲೋಮೀಟರು ದೂರದಲ್ಲಿರುವ ಕೊಟ್ಟೂರು ಆಗ ಹಲವು ಯೋಜನ ದೂರದಲ್ಲಿತ್ತಷ್ಟೆ."
  • "ಪೌಡರ್-ಗೆ ಪರ್ಯಾಯವಾಗಿ ಇಬತ್ತಿಉಂಡೆಯ ಪುಡಿಯನ್ನು ಅಕ್ಕ ಲೇಪಿಸಿದ್ದರಿಂದಾಗಿ ನನ್ನ ಕಪ್ಪನೆಯ ಮುಖ ದೇಹದಿಂದ ಬೇರ್ಪಟ್ಟಿರುವಂತೆ ಭಾಸವಾಗುತ್ತಲಿತ್ತು."
  • "ಕಥೆಗಳೂ ಮನುಷ್ಯರಂತೆ ಆಹಾರ ಮತ್ತು ಹದವರಿತ ಭಾಷೆ ಬಯಸುವವೆಂಬುದು ಕ್ರಮೇಣ ತಿಳಿಯಿತು, ಅದೂ ನನಗರಿವಿಲ್ಲದಂತೆ."
  • "ಇರುವ ಒಂಚೂರು ಇಡ್ಲಿ ತುಂಡನ್ನು ಹಲವು ತಾಸುಗಳವರೆಗೆ ಅರಗದಂತೆ ನೋಡಿಕೋ” ಎಂದು ದಯಾಮಯನಾದ ಭಗವಂತನಲ್ಲಿ ಕೇಳಿಕೊಂಡೆ. ಸರ್ವಶಕ್ತನಾದ ಅವನು ಹಸಿವೆಯ ವಿಷಯದಲ್ಲಿ ಅಸಹಾಯಕನೆಂಬ ಸಂಗತಿ ಗೊತ್ತಿದ್ದರೂ."
  • "ತುರ್ತುಪರಿಸ್ಥಿತಿ ಸಾಹಿತ್ಯಕ್ಕೆ ಸಲ್ಲಿಸಿದ ಅಮೂಲ್ಯ ಕೊಡುಗೆಯೆಂದರೆ ನಾಡಿನಾದ್ಯಂತ ಅಪಾರ ಸಂಖ್ಯೆಯಲ್ಲಿ ಕವಿಗಳನ್ನು ಸೃಷ್ಟಿಸಿದ್ದು, ಮತ್ತು ಕಸ್ತೂರಿಯಂತೆ ಕಂಗೊಳಿಸುತ್ತಿದ್ದ ಭಾಷೆಯ ಗೋಣಿಯೊಳಗೆ ತ್ಯಾಜ್ಯ ಸರಕನ್ನು ತುರುಕಿದ್ದು. ಕೊಟ್ರೇಶಿ, ಅಪಾರಿ, ಬಾಲ್ರಾಜ, ಸಿದ್ದ, ಮಾದೇವ, ಮಂಜ ಮೊದಲಾದವರು ಬರೆಯುತ್ತಿದ್ದ ಪದ್ಯಗಳಂತೂ ಆಟಂಬಾಂಬುಗಳಿಗೆ ಸರಿಸಾಟಿಯಾಗಿರುತ್ತಿದ್ದವು."
  • "ಹಲಗೆ ಬಳಪವ ಪಿಡಿಯದೊಂದಗ್ಗಳಿಕೆಯ ಕುಮಾರವ್ಯಾಸನಂತೆಯೇ ತಾವೂ ಒಮ್ಮೆ ಬರೆದರೆ ಅದನ್ನು ಮತ್ತೆ ತಿದ್ದುಪಡಿ ಮಾಡುವ ಗೋಜಿಗೇ ಹೋಗುವುದಿಲ್ಲ."

ಉಲ್ಲೇಖಗಳು

ಬದಲಾಯಿಸಿ
  1. "ಕಾಸು ವಾಪಸ್ಸು!". www.prajavani.net.[ಶಾಶ್ವತವಾಗಿ ಮಡಿದ ಕೊಂಡಿ]


[]

[]

[]

  1. "ಕುಂವೀ ಆತ್ಮಕಥನ - ಗಾಂಧಿ ಕ್ಲಾಸು". https://sampada.net. Archived from the original on 2011-10-18. Retrieved 1 ಜೂನ್ 2016. {{cite web}}: External link in |publisher= (help)
  2. "ಗಾಂಧಿ ಕ್ಲಾಸು: ಸೃಜನಶೀಲ ಬದುಕಿನ ವಿಭಿನ್ನ ಮುಖಗಳು". ರಾಕೇಶ್ ಶೆಟ್ಟಿ. Archived from the original on 2015-03-16. Retrieved 1 ಜೂನ್ 2016.
  3. "Book Review". Retrieved 1 ಜೂನ್ 2016.