ಗಾಂಕೂರ್ ಸಹೋದರರು
ಎಡ್ಮಾನ್ ಡ ಗಾಂಕೂರ್ (1822-96) ಮತ್ತು ಜ಼ೂಲ್ ಡ ಗಾಂಕೂರ್ (1830-70) 19ನೆಯ ಶತಮಾನದ ಉತ್ತರಾರ್ಧದ ಫ್ರೆಂಚ್ ಸಾಹಿತ್ಯದಲ್ಲಿ ಹೆಸರಾಂತ ಕಾದಂಬರಿಕಾರರು; ಕಲಾ ವಿಮರ್ಶಕರು. ತಮ್ಮ ಕಾದಂಬರಿಗಳನ್ನು ರೂಪಾಂತರ ಮಾಡಿ ಇವರು ಬರೆದ ನಾಟಕಗಳು ಫ್ರೆಂಚ್ ರಂಗಭೂಮಿ ಸ್ವಲ್ಪಕಾಲ ಕಳೆಗಟ್ಟುವಂತೆ ಮಾಡಿದ್ದವು. ಇವರು ತಮ್ಮ ಪೂರ್ವದ ಬಾಲ್‌ಜ್ಯಾಕ್, ಪ್ಲೋಬರ್-ಮುಂತಾದವರ ವಾಸ್ತವತಾ ಸಿದ್ಧಾಂತವನ್ನೇ ಅನುಸರಿಸಿ ತಮ್ಮ ಅನಂತರ ಬಂದ ಎಮಿಲಿ ಜೋ಼ಲಾ ಮೊದಲಾದ ವಾಸ್ತವತಾವಾದಿಗಳಿಗೆ ದಾರಿ ತೋರಿಸಿದರು. ಈ ಇಬ್ಬರು ಸಹೋದರರಲ್ಲಿ ಚಿಕ್ಕವನಾದ ಜ಼ೂಲ್ ತನ್ನ 40ನೆಯ ವರ್ಷದಲ್ಲಿ ತೀರಿಕೊಂಡ. ಇವನು ಜೀವಿಸಿದ್ದಾಗ ಇಬ್ಬರೂ ಬರೆದ ಕೃತಿಗಳಲ್ಲಿ ಯಾರದ್ದು ಎಷ್ಟು ಭಾಗವೆಂದು ನಿರ್ಣಯಿಸುವುದು ಕಷ್ಟ. ಚಿತ್ರಕಲೆಯಲ್ಲಿ ಹೆಚ್ಚಿನ ಆಸಕ್ತಿ ಇದ್ದುದರಿಂದ ಇವರು 18ನೆಯ ಶತಮಾನದ ಫ್ರೆಂಚ್ ಸಮಾಜವನ್ನೂ ಆ ಕಾಲದ ಕಲೆಯನ್ನೂ ಆಳವಾಗಿ ಅಧ್ಯಯನ ಮಾಡಿದರು. ಆ ತನಕ ಸಾಮಾನ್ಯವಾಗಿ ಅನೇಕ ಇತಿಹಾಸಕಾರರು ಅಲಕ್ಷಿಸುತ್ತಿದ್ದ ಹಳೆಯ ಕಾಗದಪತ್ರಗಳು, ವರ್ಣಚಿತ್ರಗಳು, ಕೆತ್ತನೆಯ ಚಿತ್ರಗಳು, ಸಾಮಾಜಿಕ ಹಿನ್ನೆಲೆಗೆ ಸಂಬಂಧಿಸಿದ ಸಾಕ್ಷ್ಯ ಸಂಗತಿಗಳು, ಅಲಂಕಾರ ವಸ್ತುಗಳು, ಪೀಠೋ ಪಕರಣಗಳು ಮುಂತಾದ ಐತಿಹಾಸಿಕ ಪುರಾವೆಗಳನ್ನು ಇವರಿಬ್ಬರೂ ಪರಿಣಾಮಕಾರಿ ಯಾಗಿ ಬಳಸಿಕೊಂಡರು. ಇವರು ಬರೆದ ಹಿಸ್ಟರಿ ಡ ಲ ಸೊಸೇತಿ ಫ್ರಾನ್ಸೇಸ್ ಪೆಂದಾಂತ್ ಲ ರೆವೆಲ್ಯೂಷನ್ (1854) ಮತ್ತು ಒಂಬತ್ತು ಸಂಪುಟಗಳಾಗಿ ರಚಿತವಾದ ಗಾಂಕೂರ್ ಜರ್ನಲ್ (1885-87) ಎಂಬುವು ಉಪಯುಕ್ತ ಚಾರಿತ್ರಿಕ ಆಕರ ಗ್ರಂಥಗಳಾಗಿವೆ. ಇವುಗಳ ಜೊತೆಗೆ 18ನೆಯ ಶತಮಾನದ ಚಿತ್ರಕಲೆಯನ್ನು ಕುರಿತು ವಿಚಾರಭರಿತ ಸಾಕ್ಷ್ಯ ಗ್ರಂಥಗಳನ್ನು ಇವರು ಬರೆದಿದ್ದಾರೆ. ಪ್ರಮುಖವಾಗಿ ಇತಿಹಾಸಕಾರ ರೆಂದು ಪ್ರಸಿದ್ಧಿ ಪಡೆದ ಇವರು ತಮ್ಮ ಕಾದಂಬರಿ ಹಾಗೂ ನಾಟಕಗಳಲ್ಲಿಯೂ ಅನನ್ಯ ವಾಸ್ತವಿಕ ಪ್ರಜ್ಞೆಯನ್ನು ತೋರಿಸಿದ್ದಾರೆ. ಆನ್ರೀತ್ ಮಾರೇಶಲ್ ಮುಂತಾದ ನಾಟಕಗಳಲ್ಲಿ ನಿತ್ಯಜೀವನದ ಆಡುಮಾತಿನ ಸೊಗಡನ್ನೂ ರಂಗಭೂಮಿಯ ಸಾಂಪ್ರದಾಯಿಕ ಗಡಸು ಶೈಲಿಯನ್ನೂ ಚೆನ್ನಾಗಿ ರೂಢಿಸಿಕೊಂಡಿದ್ದಾರೆ. ಹಲವು ಸಮಕಾಲೀನ ಸಮಸ್ಯೆಗಳನ್ನೆತ್ತಿಕೊಂಡು, ಪ್ರಮಾಣಬದ್ಧವಾದ ಜೀವಂತ ವಾಸ್ತವಿಕ ಚಿತ್ರಗಳನ್ನು ಕೊಟ್ಟಿದ್ದಾರೆ. ಇವರು ಯಥಾರ್ಥ ಸಂಗತಿಗಳನ್ನು ಯಾಥಾರ್ಥವಾದಿಗಳಂತೆ ಕೇವಲ ಬಾಹ್ಯಾಲಂಕರಣಕ್ಕಾಗಿ ಬಳಸುವುದಿಲ್ಲ. ಕಳೆದುಹೋದ ಯುಗದ ಜನ ಜೀವನವನ್ನು ವೀಕ್ಷಿಸುವಾಗ ಆ ಕಾಲದ ಜನರ ಮನಸ್ಸಿನ ಚಲನವಲನಗಳನ್ನು ಸೂಕ್ಷ್ಮವಾಗಿ ಗ್ರಹಿಸಿ, ಅತ್ಯಂತ ನವಿರಾದ, ಕಾವ್ಯಾತ್ಮಕ ಭಾಷೆಯಲ್ಲಿ ವಿಶ್ಲೇಷಿಸಿದ್ದಾರೆ. ಇವರ ಕೃತಿಗಳು ಆಧುನಿಕ ಮನೋವಿಶ್ಲೇಷಣಾತ್ಮಕ ಕಾದಂಬರಿಗಳ ಪುರ್ವಸೂಚಿ ಯಂತಿವೆ. ಇವರ ರಿನೆಮಾ ಮೊಪೆರಿನ್ ಕಾದಂಬರಿಯಲ್ಲಿ ಸಮಕಾಲೀನ ಯುವಜನರನ್ನು ಕುರಿತ ಹೃದಯಸ್ಪರ್ಶಿ ಚಿತ್ರವಿದೆ. ಮದಾಂ ಜರ್ ವಾಯ್ಸಾಯ್ ಧರ್ಮದ ಗೀಳು ಹಿಡಿದ ವ್ಯಕ್ತಿಗಳನ್ನು ಕುರಿತ ಕಥೆ. ಮ್ಯಾನೀತ್ ಸಾಲೊಮನ್ ಚಿತ್ರಕಲಾವಿದರ ಬದುಕನ್ನೂ ಕಲಾವಿದನೊಬ್ಬನ ದುರಂತ ಜೀವನವನ್ನೂ ಪಡಿಮೂಡಿಸುವ ಗಂಭೀರ ಕಥೆ. ಎಲ್ಲಕ್ಕಿಂತ ಹೆಚ್ಚಾಗಿ ಜರ್ಮಿನಿ ಲ್ಯಾಸೆರ್ಟ್ಯೂ ಎನ್ನುವ ಕಾದಂಬರಿಯಲ್ಲಿ ದೀನವ್ಯಕ್ತಿಯೊಬ್ಬನ ದಾರುಣ ಕಥೆಯಿದೆ. ಎಡ್ಮಾನ್ ಗಾಂಕೂರ್ ಒಬ್ಬನೇ ಬರೆದ ಆತ್ಮಕಥೆಯಲ್ಲಿ ಸರ್ಕಸ್ ಕೆಲಸಗಾರರ ವೃತ್ತಿಜೀವನದ ಹಾಗೂ ತಮ್ಮ ಜ಼ೂಲ್ ಗಾಂಕೂರ್ನನ್ನು ಕುರಿತ ಅಂತಃಕರಣ ಪೂರ್ವಕವಾದ ವರ್ಣನೆಗಳಿವೆ. ಸೂಳೆಗಾರಿಕೆ ಮತ್ತು ಏಕಾಂತ ಕಾರಾಗೃಹವಾಸದ ಕ್ರೂರ ಪರಿಣಾಮಗಳನ್ನು ಬಣ್ಣಿಸುವ ದುರಂತ ಕಾದಂಬರಿ-ಲಾ ಫಿಲ್ ಎಲಿಸೊ.
ಗಾಂಕೂರ್ ಸಹೋದರರು ವಾಸ್ತವಿಕ ಬದುಕನ್ನು ಯಥಾರ್ಥವಾದಿಗಳಂತೆ ಕೇವಲ ಛಾಯಾಗ್ರಹಣ ಮಾಡಿ ತೋರಿಸುವುದಿಲ್ಲ. ಅತ್ಯಂತ ಸೂಕ್ಷ್ಮಸಂವೇದಿಗಳಾದ ಅವರು ಅದನ್ನು ಧ್ವನಿಪುರ್ಣವಾದ ಭಾಷೆಯಲ್ಲಿ ಸಮಷ್ಟಿ ಪರಿಣಾಮ ಸಾಧಿಸುವಂತೆ ಚಿತ್ರಿಸುತ್ತಾರೆ. ಪರಿಣಾಮ ವಿಧಾನ ‘ಇಂಪ್ರೆಷನಿಸಂ’ ಎನ್ನುವ ಫ್ರೆಂಚ್ ಕಲಾಸಂಪ್ರದಾಯಕ್ಕೆ ಇವರು ವಿಶೇಷ ಕೊಡುಗೆ ನೀಡಿದ್ದಾರೆ. ಎಡ್ಮಾನ್ ಗಾಂಕೂರ್ ಸ್ಥಾಪಿಸಿದ ಗಾಂಕೂರ್ ಅಕಾಡೆಮಿ ಮತ್ತು ಪ್ರಿ ಗಾಂಕೂರ್ ಸಾಹಿತ್ಯ ಪ್ರಶಸ್ತಿ ಅವನ ಹೆಸರನ್ನು ಚಿರಸ್ಥಾಯಿಯಾಗಿಸಿವೆ.