ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಗಳಲೆ ದುಗ್ಧ ರಸನಾಳಗಳ (ಲಿಂಫ್ಯಾಟಿಕ್ ವೆಸಲ್ಸ್) ಮಾರ್ಗದಲ್ಲಿ ಸಾಧಾರಣವಾಗಿ ಅಲ್ಲಲ್ಲಿ ಇರುವ ಸಾಸಿವೆಕಾಳಿನಿಂದ ಅವರೆಕಾಳಿನ ಗಾತ್ರದ ಗಂಟುಗಳು, ರೋಗಗ್ರಸ್ತವಾದಾಗ ತಳೆಯುವ ಗಡಸಾದ ಮತ್ತು ದಪ್ಪವಾದ ಒಂದು ವಿಶೇಷ ಸ್ಥಿತಿ. ಗಾತ್ರ ಮತ್ತು ಗಡಸುತನದಿಂದ ಗಳಲೆ ಗಳು, ಕೈಗೆ ಸಿಕ್ಕುವುದರಿಂದ ಸ್ಪರ್ಶಪರೀಕ್ಷೆಯಿಂದ ಅವನ್ನು ಕಂಡುಕೊಳ್ಳಬಹುದು. ಅನೇಕ ವೇಳೆ ಅವು ನೋಯುವುದರಿಂದಲೂ ಗಮನಕ್ಕೆ ಬರುತ್ತವೆ. ಗಳಲೆಗಳು ತಾತ್ಕಾಲಿಕವಾಗಿಯೋ ಬಹುಕಾಲಿಕವಾಗಿಯೋ ಇರಬಹುದು. ತಾತ್ಕಾಲಿಕವಾದ ಅಥವಾ ಬಹುಕಾಲಿಕವಾದ ವಿಷಾಣು ಸೋಂಕಿ ನಿಂದ ರೋಗಗ್ರಸ್ತವಾದ ದೇಹಭಾಗಗಳಿಂದ ಪ್ರವಹಿಸುವ ದುಗ್ಧರಸಮಾರ್ಗದಲ್ಲಿರುವ ಗಂಟುಗಳು ಅದೇ ವಿಷಾಣು ಸೋಂಕಿನಿಂದ ಗಳಲೆ ಕಟ್ಟಿಕೊಳ್ಳುವುದು ಸಾಮಾನ್ಯ. ಕೈಕಾಲುಗಳಲ್ಲಿ ಗಾಯವಾಗಿ ಕೀತುಕೊಂಡಾಗ ಕಂಕುಳು ತೊಡೆಸಂದಿಗಳಲ್ಲಿ ತಾತ್ಕಾಲಿಕ ಗಳಲೆಗಳು ಕಾಣಿಸಿ ಕೊಳ್ಳುವುದೂ ಗಂಟಲು ನೋವು ಬಂದಾಗ ದವಡೆಯ ತಳಭಾಗದಲ್ಲಿರುವ ಗಂಟುಗಳು ಗಳಲೆ ಕಟ್ಟಿ ಕೊಳ್ಳುವುದೂ ಹೇನು ಹತ್ತಿ ತಲೆಯಲ್ಲಿ ವ್ರಣವಾದಾಗ ಕತ್ತಿನ ಹಿಂಭಾಗದಲ್ಲಿ ಗಳಲೆ ಕಟ್ಟಿಕೊಳ್ಳುವುದೂ ಸಾಮಾನ್ಯವಾಗಿ ಎಲ್ಲರಿಗೂ ತಿಳಿದ ವಿಷಯ. ಈ ಗಳಲೆಗಳೆಲ್ಲ ಸಾಧಾರಣವಾಗಿ ತಾತ್ಕಾಲಿಕವಾಗಿದ್ದು ನೋವನ್ನು ಉಂಟುಮಾಡುತ್ತಿದ್ದರೂ ಕಾರಣಭೂತ ಸ್ಥಿತಿಗಳಿಗೆ ಅನುಸಾರವಾಗಿ ಇವು ಬಹುಕಾಲಿಕವಾಗಿಯೂ ವೇದನಾರಹಿತವಾಗಿಯೂ ಇರಬಹುದು. ಬಹುಕಾಲಿಕ ವ್ಯಾಧಿಗಳಾದ ಕ್ಷಯ, ಫರಂಗಿರೋಗ (ಸಿಫಿಲಿಸ್), ಏಡ್ಸ್ ಇವುಗಳಲ್ಲಿ ಗಳಲೆ ಸಹಜವಾಗಿಯೇ ಬಹುಕಾಲಿಕವಾಗಿ ಇರುತ್ತದೆ. ಬಾಲ್ಯಾವಸ್ಥೆಯಲ್ಲಿ ಕ್ಷಯ ರೋಗಾಣು ಸೋಂಕಿನಿಂದ ಉಂಟಾದ ಜಡೆಕಟ್ಟಿಕೊಂಡಿರುವ ಕೊರಳಿನ ಹಿಂಭಾಗದಲ್ಲಿ (ಕಳ್ಳಂಗುಣಿ) ಇರುವ ಗಳಲೆಗಳು, ಹಾಗೆಯೇ ಫರಂಗಿ ರೋಗದಲ್ಲಿ ಕಾಣಬರುವ ಮೊಣಕೈ ಮತ್ತು ತೊಡೆಯ ಸಂದಿನಲ್ಲಿ ಸಿಕ್ಕುವ ಕಲ್ಲಿನಂತೆ ಗಡಸಾದ ಗಳಲೆಗಳು ಈ ರೀತಿಯವು. ಏಡ್ಸ್ ರೋಗದಲ್ಲಿ ಅಕಾರಣವಾಗಿ ದೇಹಾದ್ಯಂತ ಗಳಲೆಗಳು ದೊಡ್ಡದಾಗಿ ಗೋಚರಿಸುತ್ತವೆ. ಏಡಿಗಂತಿಕೋಶಗಳ ಆಕ್ರಮಣದಿಂದಲೂ ಗಳಲೆ ಕಟ್ಟಿಕೊಳ್ಳುವುದರಿಂದ ಗಳಲೆ ರೋಗನಿದಾನವನ್ನು ಬಹು ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ. ಕಾರಣಭೂತ ರೋಗ ಗುಣವಾದರೆ ಕ್ರಮೇಣ ಗಳಲೆ ಗಳೂ ಇಂಗಿ ಮಾಯವಾಗುತ್ತವೆ.

"https://kn.wikipedia.org/w/index.php?title=ಗಳಲೆ&oldid=658758" ಇಂದ ಪಡೆಯಲ್ಪಟ್ಟಿದೆ