ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಸೀಸದ ಮುಖ್ಯ ಅದಿರು. ರಾಸಾಯನಿಕವಾಗಿ ಸೀಸದ ಸಲ್ಫೈಡ್ PbS. ಇದು ಉತ್ತಮ ನಿಕ್ಷೇಪವಾಗಿ ದೊರೆಯುತ್ತದೆ. ಸಾಮಾನ್ಯವಾಗಿ ಉತ್ತಮ ಹರಳು ಗುಚ್ಛಗಳಂತೆ ಇದರ ಆಕಾರ ಉಂಟು. ಲೋಹದಂತೆ ಚೆನ್ನಾಗಿ ಹೊಳೆಯುತ್ತದೆ. ಚೌಕಾಕಾರದ ಸೀಳುಗೆರೆಗಳು ಇದರ ಮೇಲೆ ಬಲುಸ್ಪಷ್ಟವಾಗಿ ಕಾಣುತ್ತವೆ. ಸಾಂದ್ರತೆ 7.4-7.6. ಮೋಕಾಠಿನ್ಯಮಾನದಲ್ಲಿ ಇದರ ಕಾಠಿನ್ಯ 2.5-2.75ರವರೆಗಿದೆ. ಇದರ ಬಣ್ಣ ಮತ್ತು ಒರೆ ಸೀಸದ ಬೂದು ಬಣ್ಣವಾಗಿದೆ. ಸೀಸದ ಸಲ್ಫೈಡ್ ಅದಿರಾದ ಗಲೀನ ಸಾಧಾರಣವಾಗಿ ತಾಮ್ರ, ಸತು, ಆಂಟಿಮನಿ, ಆರ್ಸೆನಿಕ್ ಮುಂತಾದ ಲೋಹ ಸಲ್ಫೈಡುಗಳೊಂದಿಗೆ ದೊರೆಯುತ್ತವೆ. ಸೀಸ ನಿಕ್ಷೇಪಗಳೊಂದಿಗೆ ಸತು ನಿಕ್ಷೇಪಗಳು, ಸತು ನಿಕ್ಷೇಪಗಳೊಂದಿಗೆ ಸೀಸ ನಿಕ್ಷೇಪ ಗಳು ಸಾಮಾನ್ಯವಾಗಿ ಕೂಡಿಲ್ಲದಿದ್ದರೂ ಇವೆರಡು ಲೋಹದ ಅದಿರುಗಳು ಒಂದೆಡೆಯಲ್ಲಿರುವುದುಂಟು. ಗಲೀನ ದಿಂದ ಸುಲಭವಾಗಿ ಬೇರ್ಪಡಿಸಬಹುದಾದ ಬೆಳ್ಳಿ ಕೆಲವು ಸಂದರ್ಭಗಳಲ್ಲಿ ಲಾಭಕರವಾದ ಗಾತ್ರದಲ್ಲಿ ಇರುವುದುಂಟು. ಆಗ ಅದಕ್ಕೆ ಆರ್ಜೆಂಟಿಫೆರಸ್ ಗಲೀನ ಅಥವಾ ರಜತಾನ್ವಿತ ಗಲೀನ ಎಂದು ಹೆಸರು.

ಗಲೀನ


ಭಾರತದಲ್ಲಿ ಸೀಸದ ಅದಿರು ಬಹಳ ಕಡೆ ಸಿಕ್ಕಿದ್ದರೂ ಆರ್ಥಿಕ ದೃಷ್ಟಿಯಿಂದ ಹೇಳಿಕೊಳ್ಳುವಂಥ ಉತ್ತಮ ನಿಕ್ಷೇಪಗಳಿಲ್ಲ. ಪ್ರಸಕ್ತ ರಾಜಸ್ತಾನದ ಭವಾರ್ ಸೀಸದ ಅದಿರು ನಿಕ್ಷೇಪ ಬಹಳ ಮುಖ್ಯವಾದದ್ದು. ಇಲ್ಲಿ ರಜತಾನ್ವಿತ ಸೀಸದ ಅದಿರು ಸತುವಿನ ಜೊತೆಯಲ್ಲಿ ಡಾಲೊಮೈಟ್ ಶಿಲೆಯ ಬಿರುಕುಗಳಲ್ಲಿ ಅಡಕವಾಗಿದೆ. ಸದ್ಯದಲ್ಲಿ ಭಾರತದ ಲೋಹ ಕಾರ್ಪೊರೇಷನ್ನಿನವರು ಈ ಅದಿರಿಗಾಗಿ ಮೊಚಿಯಮಾಗ್ರ ಎಂಬ ಬೆಟ್ಟದಲ್ಲಿ ಗಣಿ ಕೆಲಸ ನಡೆಸುತ್ತಿದ್ದಾರೆ. ಮೈಸೂರಿನ ಕೆಲವು ಪ್ರದೇಶಗಳಲ್ಲಿ ತಾಮ್ರದ ಅದಿರಿನೊಂದಿಗೆ ಅಥವಾ ಶುದ್ಧರೂಪದಲ್ಲಿ ಸೀಸದ ಅದಿರು ನಿಕ್ಷೇಪಗಳಿವೆ. ಆದರೆ ಇವೆಲ್ಲವೂ ಅಷ್ಟು ದೊಡ್ಡ ಗಾತ್ರದ ನಿಕ್ಷೇಪಗಳಲ್ಲ. ಬೆಳ್ಳಿ ಬೆರೆತ ಗಲೀನ ಅದಿರು ಮುಖ್ಯವಾಗಿ ಚಿತ್ರದುರ್ಗದ ಸಮೀಪದಲ್ಲಿ ಮತ್ತು ಗುಡ್ಡದ ರಂಗಪ್ಪನಹಳ್ಳಿ, ಕುರುಬರ ಮರಡೀಕೆರೆ ಸುತ್ತಮುತ್ತ ಅನೇಕ ಸ್ಥಳಗಳಲ್ಲಿ ಕಂಡುಬಂದಿದೆ. ಈ ಪ್ರದೇಶದಲ್ಲಿ 16-19 ಕಿಮೀ ಉದ್ದದ ಕ್ಲೋರೈಟ್ ಪದರ ಶಿಲಾಹರವನ್ನು ಹಾಯ್ದಿರುವ ಅನೇಕ ಬೆಣಚು ಸಿರಗಳಲ್ಲಿ ಗಲೀನ ಬಿಡಿ ಹರಳು ಗಳಂತೆಯೂ ಗೊಂಚಲುಗಳಂತೆಯೂ ಮಡಿಗಳಂತೆಯೂ ಸಿಗುತ್ತದೆ.

"https://kn.wikipedia.org/w/index.php?title=ಗಲೀನ&oldid=658756" ಇಂದ ಪಡೆಯಲ್ಪಟ್ಟಿದೆ