ಗರುಡಫಲ
Chaulmoogra | |
---|---|
Scientific classification | |
ಸಾಮ್ರಾಜ್ಯ: | Plantae
|
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | Eudicots
|
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | H. wightianus
|
Binomial name | |
Hydnocarpus wightianus |
ಗರುಡಫಲ ಫ್ಲಕೂರ್ಷಿಯೇಸೀ ಕುಟುಂಬಕ್ಕೆ ಸೇರಿದ ಹಿಡ್ನೊಕಾರ್ಪಸ್ ಲಾರಿಫೋಲಿಯ ಎಂಬ ಶಾಸ್ತ್ರೀಯ ಹೆಸರಿನ ಮರ. ಚಿಕ್ಕ ಸುರಟಿ ಗಿಡ ಪರ್ಯಾಯ ನಾಮ.[೨]
ಹರಡುವಿಕೆ
ಬದಲಾಯಿಸಿಇಂಡೊ ಮಲಯ ಮತ್ತು ಏಷ್ಯದ ಉಷ್ಣ ಪ್ರದೇಶಗಳಲ್ಲಿ ಸಮೃದ್ಧವಾಗಿ ಬೆಳೆಯುತ್ತದೆ. ಭಾರತದಲ್ಲಿ ಪಶ್ಚಿಮ ಘಟ್ಟದ ಕಾಡುಗಳಲ್ಲೂ ವಿಪುಲ.
ಲಕ್ಷಣಗಳು
ಬದಲಾಯಿಸಿಸುಮಾರು 50ಮೀ ಎತ್ತರಕ್ಕೆ ಬೆಳೆಯುವ ಮರ ಇದು. ಕಂದುಬಣ್ಣದ ತೊಗಟೆ, ಗರಗಸದಂಥ ಅಂಚುಳ್ಳ ನೀಳವಾದ ಎಲೆಗಳು, ಹಸುರು ಮಿಶ್ರಿತ ಬಿಳಿಬಣ್ಣದ ಚಿಕ್ಕ ಗಾತ್ರದ ಹೂಗಳು, ಲಿಂಗಭಿನ್ನತೆ-ಇವು ಈ ಮರದ ಮುಖ್ಯ ಲಕ್ಷಣಗಳು. ಬೀಜಗಳು ಅಂಡಾಕೃತಿಯಲ್ಲಿವೆ. ಅವುಗಳಲ್ಲಿ ಒಂದು ವಿಶೇಷ ಬಗೆಯ ಎಣ್ಣೆ ಉಂಟು, ಇದಕ್ಕೆ ಹಿಡ್ನೊಕಾರ್ಪಸ್ ತೈಲ ಎಂದು ಹೆಸರು. ಇದು ಅನೇಕತರದ ಚರ್ಮ ವ್ಯಾಧಿಗಳಿಗೆ-ಮುಖ್ಯವಾಗಿ ಕುಷ್ಠರೋಗಕ್ಕೆ ಒಳ್ಳೆಯ ಮದ್ದು ಎನಿಸಿದೆ. ಬಹಳ ಹಿಂದಿನಿಂದಲೂ ಇದರ ಔಷಧೀಯ ಗುಣಗಳು ಪ್ರಸಿದ್ಧಯಾಗಿವೆ. ಎಣ್ಣೆಗೆ ಬೆಲ್ಜಿಯಂ, ಫ್ರಾನ್ಸ್, ಬೋರ್ನಿಯೊಗಳಲ್ಲಿ ಅತೀವ ಬೇಡಿಕೆಯಿದೆ.
ಸಸ್ಯಾಭಿವೃದ್ಧಿ
ಬದಲಾಯಿಸಿಗರುಡ ಫಲಗಳನ್ನು ಗುಡ್ಡಪ್ರದೇಶಗಳಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಬೆಳೆಸುವುದು ರೂಢಿ. ಸಸ್ಯಾಭಿವೃದ್ಧಿ ಬೀಜಗಳ ಮೂಲಕ. ಮೊದಲು ನರ್ಸರಿಯಲ್ಲಿ ಸಸಿಗಳನ್ನು ಬೆಳೆಸಿ ಅನಂತರ ಅಪೇಕ್ಷಿತ ಸ್ಥಳಗಳಲ್ಲಿ ಸಸಿಗಳನ್ನು ನಾಟಿ ಮಾಡಲಾಗುತ್ತದೆ.
ಔಷಧೀಯ ಗುಣಗಳು
ಬದಲಾಯಿಸಿಎಣ್ಣೆಗೆ ತನ್ನದೇ ಆದ ವಾಸನೆ ಹಾಗೂ ಕ್ಷಾರೀಯ ರುಚಿ ಉಂಟು. ಇದನ್ನು ಕೈಕಾಲುಗಳ ಮೇಲೆ ಮೂಡುವ ಗಂಟುಗಳ ಊದುವಿಕೆಗೆ ಮತ್ತು ಸ್ಪರ್ಶಕ್ಕೆ ಸಂವೇದಿಯಾಗಿಲ್ಲದ ಚರ್ಮದ ವ್ರಣಗಳ ಉಪಶಮನಕ್ಕೆ ಹಾಗೂ ಕುಷ್ಠರೋಗ ನಿವಾರಣೆಗೆ ಉಪಯೋಗಿಸುತ್ತಾರೆ. ತೈಲ ಇಲ್ಲವೆ ಬೀಜಗಳನ್ನು ಹೆಚ್ಚು ಮೊತ್ತದಲ್ಲಿ ನೇರವಾಗಿ ಸೇವಿಸಿದರೆ, ಕರುಳಿನಲ್ಲಿ ವೇದನೆ ಉಂಟಾಗುವುದರಿಂದ ಸೇವನೆಯ ಮೊತ್ತವನ್ನು ಕ್ರಮೇಣ ಹೆಚ್ಚಿಸುತ್ತ ಹೋಗಬೇಕು. ಚುಚ್ಚುಮದ್ದಿನ ರೂಪದಲ್ಲಿ ಕೊಡುವುದೇ ಒಳ್ಳೆಯದು. ಹಿಡ್ನೊಕಾರ್ಪಸ್ ಎಣ್ಣೆಯನ್ನು ಶುದ್ಧರೂಪದಲ್ಲಿ ಬಹಳ ಕಾಲ ಸಂಗ್ರಹಿಸಿಡಲಾಗುವುದಿಲ್ಲ. ಸಂಗ್ರಹಿಸಿಟ್ಟ ಎಣ್ಣೆ ಕೊಳೆಯುತ್ತದಲ್ಲದೆ ಇಂಥ ಎಣ್ಣೆಯನ್ನು ಬಳಸಿದರೆ ಹೆಚ್ಚು ನೋವು ಮತ್ತು ತುರಿಕೆಯುಂಟಾಗುತ್ತವೆ. ಇದರಿಂದ ತೈಲದ ಬಾಳಿಕೆಯನ್ನು ಹೆಚ್ಚಿಸಲು ಕ್ರಿಯೊಸೋಟ್ ಅಥವಾ ಹೈಡ್ರೊಕ್ವಿನೋನ್ ಗಳನ್ನು ಮಿಶ್ರಮಾಡುತ್ತಾರೆ. ಬೀಜಗಳಿಂದ ಎಣ್ಣೆ ತೆಗೆದ ನಂತರ ಉಳಿವ ಹಿಂಡಿಯನ್ನು ಗೊಬ್ಬರವಾಗಿ ಉಪಯೋಗಿಸುತ್ತಾರೆ. ಗರುಡಫಲ ಮೀನುಗಳಿಗೆ ಮಾರಕವೆನ್ನಲಾಗಿದೆ. ಇದರ ಸೇವನೆಯ ಫಲವಾಗಿ ಸತ್ತ ಮೀನುಗಳು ತಿನ್ನಲು ಯೋಗ್ಯವಲ್ಲ.
ಚೌಬೀನೆ ಉಪಯೋಗ
ಬದಲಾಯಿಸಿಚೌಬೀನೆ ಬಲು ಹಗುರ, ಮೃದು ಮತ್ತು ಏಕರೂಪದ ರಚನಾವಿನ್ಯಾಸವುಳ್ಳದ್ದು. ಸುಲಭವಾಗಿ ಕೊಯ್ಯ ಬಹುದು ಮತ್ತು ನಯಗೊಳಿಸಬಹುದು. ಒಣಗಿಸುವಾಗ ಸೀಳದಿದ್ದರೂ ಕೊಂಚ ಕಾಲದ ಅನಂತರ ಅಲ್ಲಲ್ಲಿ ಬಿರುಕು ಬಿಡುವುದಲ್ಲದೆ ತನ್ನ ಬಣ್ಣವನ್ನು ಕಳೆದುಕೊಳ್ಳುತ್ತದೆ. ಅಲ್ಲದೆ ಕೀಟ, ಬೂಷ್ಟುಗಳಿಗೆ ಬಲುಬೇಗ ಬಲಿಯಾಗುವುದರಿಂದ ಹೆಚ್ಚು ಬಾಳಿಕೆ ಬರುವುದಿಲ್ಲ. ಆದ್ದರಿಂದ ತಾತ್ಕಾಲಿಕ ಉಪಯೋಗಕ್ಕೆ ಬೇಕಾಗುವ ಪೆಟ್ಟಿಗೆ ಮುಂತಾದವನ್ನು ಮಾತ್ರಮಾಡಲು ಇದನ್ನು ಬಳಸುತ್ತಾರೆ. ಸೌದೆಯಾಗಿ ಉಪಯೋಗಿಸುವುದುಂಟು