ಗರಡಿ
ಈ ಲೇಖನ ಯಾವುದೇ ವಿಕಿಪೀಡಿಯ ಲೇಖನಕ್ಕೆ ಕೊಂಡಿಗಳನ್ನು (Interwiki links) ಹೊಂದಿಲ್ಲ. (ಡಿಸೆಂಬರ್ ೨೦೧೫) |
ಆದಿಯಿಂದಲೂ ಗರಡಿ ಮಾಡುತ್ತಿದ್ದ ವಸ್ತಾದ್ ರು ಇರುತ್ತಿದ್ದುದ್ದಕ್ಕೆ ಪುರಾಣದಲ್ಲಿ ಇತಿಹಾಸದಲ್ಲಿ, ಐತಿಹ್ಯಗಳಲ್ಲಿ ಜ್ವಲಂತ ನಿದರ್ಶನಗಳು ಕಂಡು ಬರುತ್ತವೆ. ಗರಡಿ ಮಾಡಿದ ಪುರುಷರ ಅಂಗಸೌಷ್ಟವ ಆಕರ್ಷಕವಾಗಿರುತ್ತಿದ್ದುದರಿಂದ ಗರಡಿಕಲೆ ಅಂದಿನಿಂದ ಇಂದಿನವರೆವಿಗೂ ಉಳಿದು ಬೆಳೆಯುತ್ತಾ ಬಂದಿದೆ. ಈಗೀಗ ಕಟ್ಟುತ್ತಿರುವ ಗರಡಿಮನೆಗಳನ್ನು 'ವ್ಯಾಯಾಮಶಾಲೆ'ಗಳೆಂದು ಕರೆಯುವರು.
ಗರಡಿ ಮನೆಯ ಸಂಕ್ಷಿಪ್ತ ಪರಿಚಯ
ಬದಲಾಯಿಸಿಗರಡಿ ಎಂಬುದು ಕುಸ್ತಿ ಮುಂತಾದ ಅಂಗಸಾಧನೆಗಳನ್ನು ಮಾಡುವ ಸ್ಥಳ. ಹಿಂದಿನ ಕಾಲದ ಗರಡಿಮನೆಗಳು ವಿಶಾಲವಾಗಿರದೆ ಕಿರಿದಾಗಿರುತ್ತಿದ್ದವು. ಗರಡಿಯ ಹೊರಗೋಡೆಗಳ ಮೇಲೆ ಕೆಮ್ಮಣ್ಣಿನ ದೊಡ್ಡ ದೊಡ್ಡ, ಉದ್ದುದ್ದದ ಪಟ್ಟೆಗಳನ್ನು ಹಾಕಿರುತ್ತಿದ್ದರು ಹಾಗೂ ಗರಡಿಯ ಮುಂದೆ ದಪ್ಪ ದಪ್ಪ ಕಲ್ಲುಗುಂಡುಗಳನ್ನು ಇಟ್ಟಿರುತ್ತಿದ್ದರು. ಬಾಗಿಲಿನಲ್ಲಿ ಗರುಡನ ಅಥವಾ ಹನುಮಂತನ ಚಿತ್ರಪಟವಿರುತ್ತಿತ್ತು. ಗರಡಿಮನೆಗಳ ಒಳಗಡೆ ಹೆಚ್ಚು ಗಾಳಿ, ಬೆಳಕು ಪ್ರವೇಶ ಮಾಡುವಂತಿರಲಿಲ್ಲ. ಅದಕ್ಕಾಗಿ ಮೂಲೆಯಲ್ಲಿ ಸಣ್ಣ ಕಿಟಕಿಯೊಂದಿರುತ್ತಿತ್ತು. ಬಾಗಿಲು ಚಚೌಕಾರವಾಗಿದ್ದು, ತುಂಬಾ ಚಿಕ್ಕದಾಗಿ ದಪ್ಪವಾಗಿರುತ್ತಿತ್ತು. ಆ ಬಾಗಿಲನ್ನು ತಳ್ಳಿಕೊಂಡು ಒಳ ಹೋಗಲು ಬಲ,ತಾಕತ್ತು ಇರಬೇಕಿತ್ತು. ಈ ಬಾಗಿಲುಗಳಿಗೆ ಮುಂಬಾಗದಲ್ಲಿ ಹಾಕಿಕೊಳ್ಳಲು ಚಿಲಕ ಇರುತ್ತಿರಲಿಲ್ಲ. ಆದರೆ ಒಳಬಾಗಿಲಿಗೆ ಅಗಳಿ ಇರುತ್ತಿತ್ತು. ಗರಡಿ ಮನೆ ಗುಹೆಯ ಮಾದರಿಯಲ್ಲಿರುತ್ತಿತ್ತು. ಸಾಧಾರಣವಾಗಿ ಈ ಮನೆಗಳಿಗೆ ಪ್ರಸಿದ್ದ ಉಸ್ತಾದರ ಹೆಸರನ್ನು ಇಡುತ್ತಿದ್ದರು.ಹೆಂಗಸರಾರು ಗರಡಿಮನೆ ಪ್ರವೇಶಿಸುವಂತಿರಲಿಲ್ಲ. ಈಗೀಗ ಕಟ್ಟುತ್ತಿರುವ ಗರಡಿಮನೆಗಳನ್ನು 'ವ್ಯಾಯಾಮಶಾಲೆ'ಗಳೆಂದು ಕರೆಯುವರು. ಇವರ ಆರಾಧ್ಯದೈವಗಳು-ಮೌಲಾಲಿ, ಹನುಮಂತ, ಅಂಬಾಭವಾನಿ, ನಿಂಜಾದೇವಿ.
ಪೌರಾಣಿಕ-ಐತಿಹಾಸಿಕ ಹಿನ್ನೆಲೆ
ಬದಲಾಯಿಸಿಪುರಾಣ ಕಾಲದಲ್ಲಿ, ಮಹಾಕಾವ್ಯಗಳ ಕಾಲದಲ್ಲಿ 'ಮಲ್ಲಯುದ್ದ'ದ ವರ್ಣನೆ ಇದೆ. ಭೀಮ, ದುರ್ಯೋಧನ, ಕೀಚಕ, ಹನುಮಂತ, ಭರತ, ಬಾಹುಬಲಿ ಮಲ್ಲಯುದ್ದದಲ್ಲಿ ಪ್ರವೀಣರಾಗಿದ್ದರು ಎಂಬುದಕ್ಕೆ ಹತ್ತು ಹಲವು ನಿದರ್ಶನಗಳಿವೆ. ಶ್ರೀಕೃಷ್ಣ ತನ್ನ ಸೋದರ ಮಾವ ಕಂಸನನ್ನು ಕೊಲ್ಲಲು ಮಥುರಾನಗರಿಗೆ ಹೋದಾಗ, ಕಂಸ ಶ್ರೀಕೃಷ್ಣ-ಬಲರಾಮರನ್ನು ಕೊಲ್ಲಿಸಲು ಜಗದಂಕಮಲ್ಲರನ್ನು ನೇಮಿಸಿರುತ್ತಾನೆ. ಜರಾಸಂಧನನ್ನು ಕೊಲ್ಲುವ ಸಂದರ್ಭದಲ್ಲಿ ಶ್ರೀಕೃಷ್ಣ ಭೀಮನಿಗೆ ಮಲ್ಲಯುದ್ದ ಮಾಡುವಂತೆ ಪ್ರೇರೇಪಿಸಿ ಅವನನ್ನು ಕೊಲ್ಲಿಸುತ್ತಾನೆ. ಅಂದಿನ ಮಲ್ಲಯುದ್ದವೇ ಇಂದಿನ ಕುಸ್ತಿ ಎಂಬ ಹೆಸರನ್ನು ಪಡೆದಿದೆ. ಇತಿಹಾಸದಲ್ಲೂ ಕುಸ್ತಿಕಲೆಗೆ ಬಹಳ ಪ್ರೋತ್ಸಾಹವಿತ್ತು. ರಾಜರು ತಮ್ಮ ಸೈನಿಕರಿಗೆ ಕಡ್ಡಾಯವಾಗಿ ಗರಡಿ ಶಿಕ್ಷಣದ ಬಗ್ಗೆ ತರಭೇತಿ ನೀಡುತ್ತಿದ್ದರು. ಸ್ವತ: ರಾಜರೇ ಕುಸ್ತಿಕಲೆಯಲ್ಲಿ ಪರಿಣತರಾಗಿರುತ್ತಿದ್ದರು. ಗರಡಿಕಲೆಗೆ ಕರ್ನಾಟಕದಲ್ಲಿ ನಿರ್ಧಿಷ್ಟ ನೆಲೆ ದೊರೆತದ್ದು ವಿಜಯನಗರದರಸರ ಕಾಲದಲ್ಲಿ. ಮೈಸೂರಿನಲ್ಲಿ ಸು.೧೬೧೦ರಲ್ಲಿ ಆರಂಭವಾದ ನವರಾತ್ರಿ ಉತ್ಸವದಲ್ಲಿ ಕುಸ್ತಿಕಲೆ ಪ್ರದರ್ಶಿಸಲ್ಪಡುತ್ತಿತ್ತು. ರಾಜಮಹಾರಾಜರುಗಳು ಪ್ರಖ್ಯಾತ ಪೈಲ್ವಾನರುಗಳನ್ನು ಸಾಕಿಕೊಂಡು ಈ ಕಲೆಗೆ ಪ್ರೋತ್ಸಾಹವಿತ್ತಿದ್ದರು. ಶ್ರೀಕೃಷ್ಣದೇವರಾಯ, ಶ್ರೀ ರಣಧೀರಕಂಠೀರವ ನರಸಿಂಹರಾಜ ಒಡೆಯ, ಮದಕರಿನಾಯಕ, ಸಂಗೊಳ್ಳಿರಾಯಣ್ಣ ಈ ಕಲೆಯಲ್ಲಿ ಅಸಾಧರಣ ಚತುರತೆ/ಪ್ರಾವೀಣ್ಯತೆ ಸಂಪಾದಿಸಿದ್ದರು. ಮಕ್ಕಳಿಗೆ ಇಷ್ಟವಾದ ಫ್ಯಾಂಟಮ್, ಟಾರ್ಜಾನ್, ಬ್ರೂಸ್ಲಿ, ಸ್ಪೇಡರ್ ಮ್ಯಾನ್ ಗಳು ತಮ್ಮ ಆಕರ್ಷಕ ಅಂಗಸೌಷ್ಟವದಿಂದ ಪ್ರಸಿದ್ದರಾಗಿದ್ದರು.
ಪ್ರಸಿದ್ದ ಕುಸ್ತಿ ಪಟುಗಳು
ಬದಲಾಯಿಸಿಕುಸ್ತಿಕಲೆ ವಿಜಯನಗರ ಕಾಲದಿಂದ ಬೆಳೆದು ಬಂದಿದ್ದರೂ, ಅದರ ಪತನಾ ನಂತರ ಮೈಸೂರು ದಸರಾ ಕುಸ್ತಿಕಲೆಗೆ ಪೋಷಕ, ಪ್ರೇರಕರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು. ಇವರು ಪ್ರತಿ ವರ್ಷ ದಸರಾ ಮಹೋತ್ಸವದ ಕಾಲದಲ್ಲಿ ಕುಸ್ತಿಕಲೆಗಾಗಿ ಅರಮನೆ ನಿಧಿಯಿಂದ ಹಣ ತೆಗೆದಿರಿಸಿ, ನಾನಾ ಭಾಗಗಳಿಂದ ಪೈಲ್ವಾನರುಗಳನ್ನು ಕರೆಸಿ ಕುಸ್ತಿ ಪಂದ್ಯ ಏರ್ಪಡಿಸಿ ಜಯಶಾಲಿಗಳಾದವರಿಗೆ ಸೂಕ್ತ ಬಹುಮಾನ, ಬಿರುದು ಬಾವಲಿಗಳನ್ನು ನೀಡಿ ಗೌರವಿಸುತ್ತಿದ್ದರು. ಪ್ರಸಿದ್ದ ಪೈಲ್ವಾನರುಗಳೆಂದರೆ-ಸಾಹುಕಾರ್ ಚನ್ನಯ್ಯ, ಪೈಲ್ವಾನ್ ಶಿವನಂಜಪ್ಪ, ಪೈಲ್ವಾನ್ ಪಾಪಯ್ಯ, ಪೈಲ್ವಾನ್ ಶ್ರೀನಿವಾಸ್ ಬಂಡೀಕೇರಿ, ಪೈಲ್ವಾನ್ ಚಿಕ್ಕಯ್ಯ, ಪೈಲ್ವಾನ್ ಸ್ಟಾರ್ ರಾಮು, ಪೈಲ್ವಾನ್ ಸಬುಲಾಲ್, ಪೈಲ್ವಾನ್ ಬಸಪ್ಪಪೂಜಾರಿ, ಪೈಲ್ವಾನ್ ರತನಕುಮಾರ ಮಠಪತಿ ಪೈಲ್ವಾನ ಕೃಷ್ಣಾ ಎಂ ಅಥಣಿಮಠ [ಜಮಖಂಡಿ] ಪೈಲ್ವಾನ್ ಫಾರೂಕ್, ಪೈಲ್ವಾನ್ ಚಿನ್ನ, ಪೈಲ್ವಾನ್ ಅರ್ಜುನ್ ಖಾನಾಪುರ್, ಪೈಲ್ವಾನ್ ಚಂದ್ರು ಕುರುವಿನ ಕೊಪ್ಪ, ಪೈಲ್ವಾನ್ ರುದ್ರ, ಪೈಲ್ವಾನ್ ಮೂಗ, ಪೈಲ್ವಾನ್ ಮುಕುಂದ, ಪೈಲ್ವಾನ್ ಚಂದ್ರಶೇಖರ್, ಟೈಗರ್ ಬಾಲಾಜಿ, ಪೈಲ್ವಾನ್ ವಿಜೇಂದ್ರ ಪಾಲನಳ್ಳಿ ,ಪೈಲ್ವಾನ್ ದೊಡ್ಡಲಿಂಗ, ಪೈಲ್ವಾನ್ ಕುಚೇಲ, ಅಹಮದ್ ಸಾಹೇಬ್ ಮುಂತಾದವರು ಹೆಸರಾಂತ ಕುಸ್ತಿ ಕ್ರೀಡಾಪಟುಗಳಾಗಿದ್ದರು.
ಮಟ್ಟಿ
ಬದಲಾಯಿಸಿಗರಡಿಮನೆಯ ಅತ್ಯಂತ ಪ್ರಧಾನ ಭಾಗವೆಂದರೆ ಮಟ್ಟಿ. ಅಂದರೆ ಕುಸ್ತಿ ಮಾಡುವ ಸ್ಥಳ. ಇದನ್ನು ಗೋದ, ಆಖಾಡ ಎಂದೂ ಕರೆಯುತ್ತಾರೆ. ಗರಡಿ ಮಾಡುವುದೆಂದರೆ ಅಂಗಸಾಧನೆ, ವ್ಯಾಯಾಮಗಳನ್ನು ಮಾತ್ರ ಮಾಡುವುದಲ್ಲ. ಕುಸ್ತಿಮಾಡುವುದು ಎಂಬ ಅರ್ಥವೂ ರೂಢಿಯಲ್ಲಿದೆ. ಈ ಮಟ್ಟಿ ಕನಿಷ್ಠ ೧೪ ಅಡಿ ಇರುವ ಒಂದು ಚೌಕ. ಇದರಲ್ಲಿ ಎರಡು ಜೊತೆ ಜೋಡಿಗಳು ಕುಸ್ತಿ ಮಾಡಬಹುದು. ಇದಕ್ಕೆ ಕೆಮ್ಮಣ್ಣು -೧೦೦ಚೀಲ, ಜೇಕಿನಗೆಡ್ಡೆಯ ಪುಡಿ -೧೦ಚೀಲ, ಕರ್ಪೂರ, ಕುಂಕುಮ -೨೦ಪೌಂಡು, ಟಿಂಕ್ಚರ್ -೪೬ಪೌಂಡು, ದೇವದಾರು ಎಣ್ಣೆ -೨೦ಪೌಂಡು, ಗಂಧದಹುಡಿ-೨೦ಪೌಂಡು, ಅತ್ತರು-೨೦ತೊಲ, ಎಳ್ಳೆಣ್ಣೆ-೨೦ಮಣ ಇವೇ ವೊದಲಾದ ಸಾಮಗ್ರಿ ಬೆರೆಸಿದ ಮಟ್ಟಿ ಆರೋಗ್ಯದಾಯಕವೆಂಬ ನಂಬಿಕೆ ಬೆಳೆದುಬಂದಿದೆ. ಲಡತ್ ಮಾಡಿ ಮುಗಿದ ಮೇಲೆ ಪೈಲ್ವಾನರು ಈ ಮಟ್ಟಿಯಲ್ಲಿ ಉದ್ದುದ್ದ ಹಳ್ಳ ತೊಡಿ ತಮ್ಮ ದೇಹವನ್ನು ಅದರಲ್ಲಿ ಸಂಪೂರ್ಣ(ತಲೆಯೊಂದನ್ನು ಹೊರತು ಪಡಿಸಿ)ವಾಗಿ ಹೂತು ವಿಶ್ರಮಿಸಿಕೊಳ್ಳುತ್ತಾರೆ. ಇದಕ್ಕೆ ಮಟ್ಟಿ ತೆಗೆದು ಕೊಳ್ಳುವುದು ಎಂದು ಹೇಳುತ್ತಾರೆ. ನವರಾತ್ರಿಯಲ್ಲಿ ಈ ಮಟ್ಟಿಗೆ ಹೊಸಮಣ್ಣು ಸೇರಿಸಿ ಉಸ್ತಾದರೆಲ್ಲ ಸೇರಿಸಿ ಪೂಜೆ ಮಾಡುತ್ತಾರೆ. ಬರಮಹಾಲಕ್ಷ್ಮೀ ಹಬ್ಬದ ದಿನ ಹೊಸ ಮಣ್ಣು ತರುವುದು ವಾಡಿಕೆ. ತಂದ ಮಣ್ಣನ್ನು ಪೂಜಿಸುತ್ತಾರೆ. ಕುಸ್ತಿ ಸ್ಪರ್ಧೆ ಇರುವ ದಿವಸ ಮಟ್ಟಿಯ ಮಣ್ಣನ್ನು ಒಂದೆಡೆ ರಾಶಿ ಹಾಕಿ ಅದರೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಪೈಲ್ವಾನರೆಲ್ಲರ ಒಳುಡುಪು, ವ್ಯಾಯಾಮ ಸಾಮಗ್ರಿಗಳನ್ನಿಟ್ಟು ಪೂಜೆ ಮಾಡುತ್ತಾರೆ. ಇದಕ್ಕೆ ಏರು ಹಾಕುವುದು ಎನ್ನುತ್ತಾರೆ. ಕುಸ್ತಿ ಮುಗಿದ ಮಾರನೆ ದಿನವೇ ಏರು ಹಾಕಿದ ಮಟ್ಟಿಯ ಮಣ್ಣನ್ನು ಒಡೆದು ಸಮತಟ್ಟು ಮಾಡಿ ದೈನಂದಿನ ಚಟುವಟಿಕೆಯಲ್ಲಿ ತೊಡಗುತ್ತಾರೆ.
ಪೈಲ್ವಾನ್ ರಿಗೆ ನೀಡುವ ಪ್ರಶಸ್ತಿಗಳು
ಬದಲಾಯಿಸಿಕುಸ್ತಿ ಪಟುವಿನ ತೂಕ ಹಾಗೂ ವಯಸ್ಸಿನ ಆಧಾರದ ಮೇಲೆ ಅನೇಕ ವಿಭಾಗಗಳನ್ನು ವಿಂಗಡಿಸಿಕೊಂಡು ಪ್ರಶಸ್ತಿಗಳನ್ನು ಕೊಡಲಾಗುತ್ತದೆ. ೫೮-೬೫ಕೆ.ಜಿ ಇರುವವರಿಗೆ -ದಸರ ಕಿಶೋರ್ ಪ್ರಶಸ್ತಿ, ೬೯-೭೫ಕೆ.ಜಿ ಇರುವವರಿಗೆ-ದಸರ ಕುಮಾರ್ ಪ್ರಶಸ್ತಿ, ೮೫-೯೦ಕೆ.ಜಿ ಇರುವವರಿಗೆ- ದಸರ ಕಂಠೀರವ ಪ್ರಶಸ್ತಿ ನೀಡಲಾಗುತ್ತದೆ. ಇವಲ್ಲದೆ ಮಹಾಪೂರ್ ಕೇಸರಿ ಪ್ರಶಸ್ತಿ, ಕರ್ನಾಟಕ ಕುಮಾರ್ ಪ್ರಶಸ್ತಿ, ದಸರ ಕೇಸರಿ ಪ್ರಶಸ್ತಿಗಳನ್ನು ಕೊಡಲಾಗುತ್ತದೆ.
ವ್ಯಾಯಾಮ ಸಾಮಗ್ರಿಗಳು
ಬದಲಾಯಿಸಿಹಿಂದಿನ ಕಾಲದ ಗರಡಿಮನೆಯಲ್ಲಿ ವ್ಯಾಯಾಮ ಸಾಮಗ್ರಿಗಳು ಹೆಚ್ಚಾಗಿ ಇರುತ್ತಿರಲಿಲ್ಲ. ಕೈಹಿಡಿ, ಮಣೆ, ಮಲ್ಲಕಂಬದಲ್ಲಿ ೩ ವಿಧ-೧.ನೇಣು ಮಲ್ಲಕಂಬ,೨.ಹುಗಿದಿರುವ ಮಲ್ಲಕಂಬ, ೩.ಬೆತ್ತದಮಲ್ಲಕಂಬ. ಡಂಬೆಲ್ಲು, ಗದೆ/ಲೋಡು, ಬಳಪದ ಕಲ್ಲಿನ ಗಾಲಿ, ರಂಧ್ರವಿರುವ ದಪ್ಪನೆ ಕಬ್ಬಿಣದ ಗುಂಡು, ಗುದ್ದಲಿ ಮುಂತಾದುವು. ದಂಡೆ ಒತ್ತುವುದು, ಬಸ್ಕಿಹೊಡೆಯುವುದು ಮತ್ತು ಮಟ್ಟಿ ಕುರಾಯಿಸುವುದು ಅಲ್ಲಿನ ಪ್ರಧಾನ ವ್ಯಾಯಾಮಗಳಾಗಿದ್ದವು.
ಗರಡಿಯ ಪ್ರಸ್ತುತ ಸ್ಥಿತಿ-ಗತಿ
ಬದಲಾಯಿಸಿಮೈಸೂರು ಪುರಸಭೆ ೧೯೬೨ರಲ್ಲಿ ದೊಡ್ಡಕೆರೆ ಮೈದಾನದಲ್ಲಿ ನಿವೇಶನವೂಂದನ್ನು ಗರಡಿಸಂಘಕ್ಕೆ ನೀಡಿತು. ಅಲ್ಲಿ ಕುಸ್ತಿ ಅಖಾಡವನ್ನು ನಿರ್ಮಿಸಲಾಯಿತು. ಈ ಅಖಾಡವನ್ನು ಅಂದು ಮೈಸೂರಿನ ರಾಜ್ಯಪಾಲರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಉದ್ಘಾ ಟಿಸಿದರು. ಈ ಅಖಾಡದ ಸಂಸ್ಥಾಪಕರಾದ ಚನ್ನಯ್ಯ ಅವರ ನೆನಪಿನಲ್ಲಿ ಚನ್ನಯ್ಯ ಕುಸ್ತಿ ಅಖಾಡ ಎಂದು ನಾಮಕರಣ ಮಾಡಲಾಯಿತು. ಅಂದಿನಿಂದ ದಸರ ಕುಸ್ತಿಗಳು ಈ ಅಖಾಡದಲ್ಲೇ ನಡೆಯುತ್ತವೆ. ಮೈಸೂರಿನ ಸಾಹುಕಾರ್ ನಂಜಪ್ಪ ಮತ್ತು ಪೈಲ್ವಾನ್ ಶಿವನಂಜಪ್ಪನವರು ಸೇರಿಕೊಂಡು ೧೯೫೮ರಲ್ಲಿ ಗರಡಿಸಂಘವನ್ನು ಸ್ಥಾಪಿಸಿದರು. ಮೈಸೂರು ಮತ್ತು ಮಹಾರಾಷ್ಟೃಗಳಲ್ಲಿ ಸುಸಜ್ಜಿತ ಗರಡಿಮನೆಗಳಿವೆ. ಹಿಂದೆ ಕಿಷ್ಕಿಂದೆಯಂತಿದ್ದ ಗರಡಿ ಮನೆಗಳು ಇಂದು ಆಧುನಿಕತೆಯ ಗಾಳಿ ಸೋಂಕಿ ವಿಶಾಲವಾಗಿದ್ದು ಗಾಳಿ, ಬೆಳಕು ಹೆಚ್ಚಾಗಿ ಬರುವಂತಿವೆ. ಅಂದಿನ ಗರಡಿಮನೆಯಲ್ಲಿ ಕುಸ್ತಿ ಕಲಿಯುವುದು ಪ್ರಧಾನವಾಗಿತ್ತು. ಆದರೀಗ ಕುಸ್ತಿಗಿಂತ ದೇಹದ ಅಂಗಾಂಗಗಳ ಕಾಂತಿ ಹೆಚ್ಚಿಸಿ ಕೊಳ್ಳಲು ವ್ಯಾಯಾಮ ಮಾಡಲಾಗುತ್ತಿದೆ. ಹಿಂದೆ ನಿಷೇಧಿತಗೊಂಡಿದ್ದ ಈ ಜಾಗಕ್ಕೆ ಈಗೀಗ ಮಹಿಳೆಯರು ಪ್ರವೇಶಿಸಿ ಕಸರತ್ತು ಮಾಡಲು ತೊಡಗಿ ಪ್ರಸಿದ್ದರಾಗಿದ್ದಾರೆ. ಸಂಗೀತದ ಮೂಲಕವೂ ಅಂಗಸಾಧನೆ ಮಾಡುವವರ ಸಂಖ್ಯೆಯು ದಿನೇ ದಿನೇ ಹೆಚ್ಚುತ್ತಿದೆ.
ಪೂರಕ ಮಾಹಿತಿ
ಬದಲಾಯಿಸಿ- ಕನ್ನಡ ವಿಷಯ ವಿಶ್ವಕೋಶ-ಪ್ರಕಟಣೆ-ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ
- ಮೈಸೂರು ಗರಡಿ ಒಂದು ಜಾನಪದೀಯ ಅಧ್ಯಯನ-ಡಾ.ಪಿ.ಈಶ್ವರ್
ಉಲ್ಲೇಖ
ಬದಲಾಯಿಸಿ[೧] [೨] [೩] [೪] [೫] [೬] [೭] [೮]
- ↑ http://vijaykarnataka.indiatimes.com/home/weekly/weekly-articles/-/articleshow/14904736.cms
- ↑ http://kn.wikisource.org/wiki/%E0%B2%AE%E0%B3%88%E0%B2%B8%E0%B3%82%E0%B2%B0%E0%B3%81_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%A8%E0%B2%BF%E0%B2%B2%E0%B2%AF_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%95%E0%B3%8B%E0%B2%B6/%E0%B2%97%E0%B2%B0%E0%B2%A1%E0%B2%BF
- ↑ "ಆರ್ಕೈವ್ ನಕಲು". Archived from the original on 2016-03-04. Retrieved 2015-05-28.
- ↑ http://kannada.oneindia.com/festivals/dasara/2011/0927-lifestyle-of-wrestlers-in-mysore-aid0130.html
- ↑ http://www.karnatakayouthportal.in/kn/?page_id=1013[ಶಾಶ್ವತವಾಗಿ ಮಡಿದ ಕೊಂಡಿ]
- ↑ http://kn.wiktionary.org/wiki/%E0%B2%97%E0%B2%B0%E0%B2%A1%E0%B2%BF
- ↑ "ಆರ್ಕೈವ್ ನಕಲು". Archived from the original on 2016-03-04. Retrieved 2015-05-28.
- ↑ "ಆರ್ಕೈವ್ ನಕಲು". Archived from the original on 2023-03-14. Retrieved 2023-03-14.