ಗಮನ
ಗಮನ ವ್ಯಕ್ತಿನಿಷ್ಠ ಅಥವಾ ವಸ್ತುನಿಷ್ಠವೆಂದು ಭಾವಿಸಲಾದ ಮಾಹಿತಿಯ ಪ್ರತ್ಯೇಕ ಅಂಶಗಳ ಮೇಲೆ ಆಯ್ಕೆಯಿಂದ ಕೇಂದ್ರೀಕರಿಸುವ ವರ್ತನ ಮತ್ತು ಅರಿವಿನ ಪ್ರಕ್ರಿಯೆ. ಆ ವೇಳೆಯಲ್ಲಿ ಇತರ ಇಂದ್ರಿಯಗ್ರಾಹ್ಯವಾದ ಮಾಹಿತಿಯನ್ನು ನಿರ್ಲಕ್ಷಿಸಲಾಗುತ್ತದೆ. ಇದು ಸ್ಪಷ್ಟ ಮತ್ತು ಎದ್ದುಕಾಣುವ ರೂಪದಲ್ಲಿ ಮನಸ್ಸು ಹಲವಾರು ಏಕಕಾಲಿಕ ವಸ್ತುಗಳು ಅಥವಾ ವಿಚಾರದ ಹರಿವುಗಳೆಂದು ಅನಿಸುವುದರಿಂದ ಒಂದನ್ನು ಸ್ವಾಧೀನಪಡಿಸಿಕೊಳ್ಳುವುದು. ಕೆಂದ್ರೀಕರಣ, ಪ್ರಜ್ಞೆಯ ಕೇಂದ್ರೀಕರಣ ಅದರ ಮೂಲತತ್ವಗಳು. ಗಮನವನ್ನು ಸೀಮಿತ ಸಂಸ್ಕರಣ ಸಂಪನ್ಮೂಲಗಳ ಹಂಚಿಕೆ ಎಂದೂ ಹೆಸರಿಸಲಾಗಿದೆ.[೧]
ಗಮನವು ಶಿಕ್ಷಣ, ಮನೋವಿಜ್ಞಾನ, ನರವಿಜ್ಞಾನ, ಅರಿವಿನ ನರವಿಜ್ಞಾನ, ಮತ್ತು ನರಮನೋವಿಜ್ಞಾನದಲ್ಲಿ ತನಿಖೆಯ ಪ್ರಮುಖ ಕ್ಷೇತ್ರವಾಗಿ ಉಳಿದಿದೆ. ಸಕ್ರಿಯ ತನಿಖೆಯ ಕ್ಷೇತ್ರಗಳು ಗಮನವನ್ನು ಉತ್ಪತ್ತಿಮಾಡುವ ಸಂವೇದನಾ ಸೂಚನೆಗಳು ಮತ್ತು ಸಂಜ್ಞೆಗಳ ಮೂಲವನ್ನು ನಿರ್ಧರಿಸುವುದು, ಸಂವೇದನಾ ನರಕೋಶಗಳ ಹೊಂದಿಕೆಯ ಗುಣಲಕ್ಷಣಗಳ ಮೇಲೆ ಈ ಸಂವೇದನಾ ಸೂಚನೆಗಳು ಮತ್ತು ಸಂಜ್ಞೆಗಳ ಪರಿಣಾಮಗಳು, ಮತ್ತು ಗಮನ ಹಾಗೂ ಇತರ ವರ್ತನ ಹಾಗೂ ಅರಿವಿನ ಪ್ರಕ್ರಿಯೆಗಳ (ಉದಾ. ಸಕ್ರಿಯ ನೆನಪು ಮತ್ತು ಜಾಗರೂಕತೆ) ನಡುವಿನ ಸಂಬಂಧ ಒಳಗೊಂಡಿವೆ. ನರಮನೋವಿಜ್ಞಾದೊಳಗಿನ ಮುಂಚಿನ ಸಂಶೋಧನೆಯನ್ನು ವಿಸ್ತರಿಸುವ ತುಲನಾತ್ಮಕವಾಗಿ ಒಂದು ಹೊಸ ಸಂಶೋಧನಾ ಸಂಚಯವು ಆಘಾತಕಾರಿ ಮಿದುಳು ಗಾಯಗಳಿಗೆ ಸಂಬಂಧಿಸಿದ ರೋಗನಿದಾನ ಲಕ್ಷಣಗಳು ಮತ್ತು ಗಮನದ ಮೇಲೆ ಅವುಗಳ ಪರಿಣಾಮಗಳನ್ನು ತನಿಖೆ ಮಾಡುತ್ತಿದೆ. ಗಮನವು ಸಂಸ್ಕೃತಿಗಳಾದ್ಯಂತವೂ ಬದಲಾಗುತ್ತದೆ.
ಗಮನ ಮತ್ತು ಪ್ರಜ್ಞೆಯ ನಡುವಿನ ಸಂಬಂಧಗಳು ದೀರ್ಘಕಾಲಿಕ ತತ್ವಶಾಸ್ತ್ರೀಯ ಅನ್ವೇಷಣೆಯನ್ನು ಅಗತ್ಯವಾಗಿಸುವಷ್ಟು ಸಂಕೀರ್ಣವಾಗಿವೆ. ಅಂತಹ ಅನ್ವೇಷಣೆಯು ಪ್ರಾಚೀನ ಮತ್ತು ನಿರಂತರವಾಗಿ ಪ್ರಸ್ತುತ ಎರಡೂ ಆಗಿದೆ, ಏಕೆಂದರೆ ಅದು ಮಾನಸಿಕ ಆರೋಗ್ಯ ಹಾಗೂ ಪ್ರಜ್ಞೆಯ ಅಸ್ವಸ್ಥತೆಗಳ ಅಧ್ಯಯನದಿಂದ ಹಿಡಿದು ಕೃತಕ ಬುದ್ಧಿಮತ್ತೆ ಹಾಗೂ ಅದರ ಸಂಶೋಧನಾ ಹಾಗೂ ಅಭಿವೃದ್ಧಿಯ ಕಾರ್ಯಕ್ಷೇತ್ರಗಳವರೆಗಿನ ಕ್ಷೇತ್ರಗಳಲ್ಲಿ ಪರಿಣಾಮಗಳನ್ನು ಹೊಂದಿರಬಹುದು.
ಬಹುಕಾರ್ಯಕತೆಯನ್ನು ಎರಡು ಅಥವಾ ಹೆಚ್ಚು ಕಾರ್ಯಗಳನ್ನು ಏಕಕಾಲದಲ್ಲಿ ಮಾಡುವ ಪ್ರಯತ್ನವೆಂದು ವ್ಯಾಖ್ಯಾನಿಸಬಹುದು; ಆದರೆ, ಬಹುಕಾರ್ಯಗಳನ್ನು ಮಾಡುವಾಗ, ಜನರು ಹೆಚ್ಚು ತಪ್ಪುಗಳನ್ನು ಮಾಡುತ್ತಾರೆ ಅಥವಾ ತಮ್ಮ ಕಾರ್ಯಗಳನ್ನು ಹೆಚ್ಚು ನಿಧಾನವಾಗಿ ಮಾಡುತ್ತಾರೆ ಎಂದು ಸಂಶೋಧನೆಯು ತೋರಿಸುತ್ತದೆ. ಅವುಗಳನ್ನು ಮಾಡಲು ಎಲ್ಲ ಪ್ರತ್ಯೇಕ ಕಾರ್ಯಗಳ ನಡುವೆ ಗಮನವನ್ನು ವಿಭಜಿಸಬೇಕಾಗುತ್ತದೆ. ವಿಭಜಿತ ಗಮನದಲ್ಲಿ, ವ್ಯಕ್ತಿಗಳು ಏಕಕಾಲಕ್ಕೆ ಮಾಹಿತಿಯ ಬಹು ಮೂಲಗಳಿಗೆ ಗಮನ ನೀಡುತ್ತಾರೆ ಅಥವಾ ಒಂದಕ್ಕಿಂತ ಹೆಚ್ಚು ಕಾರ್ಯಗಳನ್ನು ಮಾಡುತ್ತಾರೆ.
ಉಲ್ಲೇಖಗಳು
ಬದಲಾಯಿಸಿ- ↑ Anderson, John R. (2004). Cognitive psychology and its implications (6th ed.). Worth Publishers. p. 519. ISBN 978-0-7167-0110-1.