ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಗದಬ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಹರವು ಮತ್ತು ಒರಿಸ್ಸದ ಕೋರಾಪುತ್ ಹರವುಗಳಲ್ಲಿ ಬಳಕೆಯಲ್ಲಿರುವ ಅಪ್ರಸಿದ್ಧ ಭಾಷೆ. ಇದನ್ನು ಮುಂಡ ಭಾಷಾವರ್ಗದ ಒಂದು ಉಪಭಾಷೆ ಎನ್ನುವವರೂ ಇದ್ದಾರೆ.

ಗದಬ ಭಾಷೆ ಮುಂಡ ಭಾಷಾವರ್ಗಕ್ಕೆ ಅಥವಾ ಗ್ರಿಯಸನ್ನರ ಲಿಂಗ್ವಿಸ್ಟಿಕ್ ಸರ್ವೇ ಆಫ್ ಇಂಡಿಯಕ್ಕೆ ಅನುಸಾರವಾಗಿ ಆಸ್ಟ್ರಿಕ್ ಭಾಷಾವರ್ಗದ ಆಸ್ಟ್ರೋ-ಏಷ್ಯಾಟಿಕ್ ಉಪವರ್ಗದ ಮುಂಡಶಾಖೆಗೆ ಸೇರಿದ್ದು. ನಾರ್ಮನ್ ಎಚ್. ಜೈದ್ ಎಂಬುವವರು ಗದ್ಬಾ ಮತ್ತು ಗದಬ ಎಂಬ ಎರಡು ಉಪಭಾಷೆಗಳನ್ನು ಕರೆಂಟ್ ಟ್ರೆಂಡ್ಸ್ ಇನ್ ಲಿಂಗ್ವಿಸ್ಟಿಕ್ಸ್ ಎಂಬ ಗ್ರಂಥದಲ್ಲಿ ಗುರುತಿಸಿದ್ದಾರೆ. ಅವರ ಪ್ರಕಾರ ಮೊದಲನೆಯದು ಗುತೋಬ್ ಭಾಷೆಯ ಒಂದು ಅಂಗ. ಈ ಗುತೋಬ್ ಒಂದು ಪ್ರತ್ಯೇಕ ಮುಂಡ ಭಾಷೆ. ಎರಡನೆಯದನ್ನು ಲಿಂಗ್ವಿಸ್ಟಿಕ್ ಸರ್ವೇ ಆಫ್ ಇಂಡಿಯದಲ್ಲಿ ವಿಶಾಖಪಟ್ಟಣದ ಗದಬ ಎಂದು ಗುರುತಿಸಲಾಗಿದ್ದು ಮತ್ತೊಂದು ಮುಂಡಭಾಷೆಯಾದ ಗೋರುಮ್ನ ಅಂಗವಾಗಿ ಪರೆಂಗಾ ಮತ್ತಿತರ ಉಪಭಾಷೆಗಳೊಡನೆ ಪರಿಗಣಿಸಲಾಗಿದೆ. ಗದಬದ ಒಂದು ಶಾಖೆಗೆ ಸಂಬಂಧಿಸಿದಂತೆ ನಡೆದಿರುವ ಕಾರ್ಯ ಇದು ದ್ರಾವಿಡ ಭಾಷಾವರ್ಗದೊಡನೆ ಸಂಬಂಧ ಹೊಂದಿದೆಯೆಂಬುದನ್ನು ತೋರಿಸಿ ಕೊಟ್ಟಿರುವುದಾಗಿ ವರದಿಯಾಗಿದೆ ಎಂದು 1961ರ ಜನಗಣತಿಯ ಭಾಷಾಕೋಷ್ಟಕದಲ್ಲಿ ಹೇಳಲಾಗಿದೆ.

ಈ ಭಾಷೆಯ ಭಾಷಾವೈಜ್ಞಾನಿಕ ಅಧ್ಯಯನ ಸಿದ್ಧರೂಪದಲ್ಲಿ ದೊರೆಯುವುದಿಲ್ಲ. ಗ್ರಿಯರ್ಸನ್ನನ ಲಿಂಗ್ವಿಸ್ಟಿಕ್ ಸರ್ವೇ ಆಫ್ ಇಂಡಿಯದ ನಾಲ್ಕನೆಯ ಸಂಪುಟದಲ್ಲಿ ಬಸ್ತಾರ್ ಮಾಹಿತಿಯ ಆಧಾರದ ಮೇಲೆ ಇದರ ಉಚ್ಚಾರ, ಸಂಖ್ಯಾವಾಚಕಗಳು, ನಾಮಪದಗಳು, ಕ್ರಿಯಾಪದಗಳು ಮತ್ತಿತರ ವ್ಯಾಕರಣಾಂಶಗಳ ಬಗ್ಗೆ ಚಿಕ್ಕ ನಿರೂಪಣೆಯೊಂದನ್ನು ಕೊಟ್ಟಿದೆ. ಘೋಷಸ್ಪರ್ಶವ್ಯಂಜನ ಮಾಲೆಯಲ್ಲಿ ಮತ್ತು ಸ್ವರಗಳಲ್ಲಿ ಕಾಣಬರುವ ಕಾಕಲ್ಯೀಕರಣವೇ ಈ ಭಾಷೆಯ ವೈಶಿಷ್ಟ್ಯ. ಇದು ಆರ್ಯ ಮತ್ತು ದ್ರಾವಿಡ ವಾಕ್ಯರಚನಾ ಸ್ವರೂಪಗಳನ್ನು ಬಹಳವಾಗಿ ಎರವಲು ಪಡೆದಿರುವಂತೆ ತೋರುತ್ತದೆ. ಇದಕ್ಕೆ ತನ್ನದೇ ಆದ ಲಿಪಿಯಿಲ್ಲ. ಗೋಪೀನಾಥ ಮೊಹಾಂತಿ ತಮ್ಮ ಗದ್ಬಾ ಭಾಷಾ ಎಂಬ ಪುಸ್ತಿಕೆಯಲ್ಲಿ ಈ ಭಾಷೆಗೆ ಬೇರೊಂದು ವರ್ಣ ಮಾಲೆಯನ್ನು ಸೂಚಿಸಿದ್ದಾರಾದರೂ ಆಯಾ ಪ್ರದೇಶಗಳಲ್ಲಿನ ಪ್ರಮುಖ ಪ್ರಾದೇಶಿಕ ಭಾಷೆಗಳ ಲಿಪಿಯನ್ನೇ ಈ ಭಾಷೆಯ ಬರೆವಣಿಗೆಗೆ ಉಪಯೋಗಿಸಲಾಗುತ್ತಿದೆ. ಇಷ್ಟಾದರೂ ಇದನ್ನು ಮಾತನಾಡುವ ಜನಗಳಲ್ಲಿ ಸಾಕ್ಷರತೆಯ ಪ್ರಮಾಣ ತುಂಬ ಕಡಿಮೆ ಯಾಗಿದೆಯೆಂದೇ ಹೇಳಬೇಕು.

"https://kn.wikipedia.org/w/index.php?title=ಗದಬ&oldid=658732" ಇಂದ ಪಡೆಯಲ್ಪಟ್ಟಿದೆ