Lemon
ಗಜನಿಂಬೆ ಹೂವು ಮತ್ತು ಹಣ್ಣು
Scientific classification e
ಸಾಮ್ರಾಜ್ಯ: Plantae
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: Eudicots
ಏಕಮೂಲ ವರ್ಗ: Rosids
ಗಣ: ಸ್ಯಾಪಿಂಡೇಲ್ಸ್
ಕುಟುಂಬ: ರೂಟೇಸಿಯೇ
ಕುಲ: ಸಿಟ್ರಸ್
ಪ್ರಜಾತಿ:
C. limon
Binomial name
Citrus limon

ಗಜನಿಂಬೆ-ರೂಟೇಸೀ ಕುಟುಂಬಕ್ಕೆ ಸೇರಿದ ಒಂದು ಉಪಯುಕ್ತ ಮರ. ಸಿಟ್ರಸ್ ಲೈಮನ್ ಇದರ ವೈಜ್ಞಾನಿಕ ಹೆಸರು. ಗಜನಿಂಬೆ ಉತ್ತರ ಭಾರತದ ಮೂಲನಿವಾಸಿ.

ವಿವರಣೆ

ಬದಲಾಯಿಸಿ

ನಿಂಬೆಯನ್ನು ಹೋಲುವುದಾದರೂ ಹಣ್ಣಿನ ಗಾತ್ರದಲ್ಲಿ ನಿಂಬೆಗಿಂತ ದಪ್ಪ. ಮರವೊ ಹೆಚ್ಚು ದಪ್ಪುಪುಷ್ಟ. ಹಣ್ಣಿನಲ್ಲಿ ಸಿಪ್ಪೆ ಸಡಿಲವಾಗಿಲ್ಲ. ಹಣ್ಣಿನ ರುಚಿ ಹುಳಿ ಇಲ್ಲವೆ ಕೊಂಚ ಒಗರು ; ಆಕಾರ ಅಂಡದಂತೆ ; ತುದಿ ಚೂಚುಕದಂತೆ ಮುಂಚಾಚಿದೆ.

ಇದು 10'-20' ಎತ್ತರ ಬೆಳೆಯುತ್ತದೆ. ಇದರಲ್ಲಿ ಗಟ್ಟಿಯಾದ ಮುಳ್ಳುಗಳಿವೆ. ಎಲೆಗಳ ಬಣ್ಣ ನಸುಹಸಿರು : ಆಕಾರ ಆಯತ ಇಲ್ಲವೆ ಕರನೆಯಂತೆ; ಅಂಚು ನಯ. ತುದಿ ಚೂಪಾಗಿರಬಹುದು ಇಲ್ಲವೆ ಮೊಂಡಾಗಿರಬಹುದು. ಎಲೆ ತೊಟ್ಟು ರೆಕ್ಕೆಯಂತೆ ಹರಡಿ ಕೊಂಡಿದೆ. ಹೂಗಳು ಮಧ್ಯಾರಂಭಿ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ.

ಗಜನಿಂಬೆ ಉಷ್ಣ ಹವೆಯ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ವರ್ಷಕ್ಕೆ 30' ಕ್ಕಿಂತ ಕಡಿಮೆ ಮಳೆ ಬೀಳುವ ಮತ್ತು ಸಮುದ್ರಮಟ್ಟದಿಂದ 3,000 ಅಡಿ ಎತ್ತರವಿರುವ ಪ್ರದೇಶಗಳು ಇದರ ಬೇಸಾಯಕ್ಕೆ ಉತ್ತಮ. ಗಜನಿಂಬೆ ಬೇಸಾಯಕ್ಕೆ 6'-8' ಆಳದವರೆಗೆ ಒಂದೇ ಸಮನಾದ ರಚನೆಯುಳ್ಳ ಮತ್ತು ನೀರು ಚೆನ್ನಾಗಿ ಇಂಗಿಹೋಗುವಂಥ ಗೋಡು ಮಣ್ಣು ಯೋಗ್ಯವಾದ್ದು. ಗಜನಿಂಬೆ ನೆಟ್ಟ ನಾಲ್ಕು ವರ್ಷಗಳ ಅನಂತರ ಫಲ ಬಿಡತೊಡಗುತ್ತದೆ. ಬೆಳೆಯುವ ಸ್ಥಳದ ಹವಾಗುಣಕ್ಕನುಸಾರವಾಗಿ ಹಣ್ಣು ಬಿಡುವ ಕಾಲ ಬದಲಾಗುತ್ತದೆ. ಒಂದು ವರ್ಷಕ್ಕೆ ಒಂದು ಮರದಿಂದ 600-800 ಹಣ್ಣುಗಳನ್ನು ಪಡೆಯಬಹುದು.

ಬಗೆಗಳು

ಬದಲಾಯಿಸಿ

ಗಜನಿಂಬೆಯಲ್ಲಿ ಹಲವಾರು ಬಗೆಗಳಿವೆ. ಭಾರತದಲ್ಲಿ ಬೆಳೆಯಲಾಗುತ್ತಿರುವ ಕೆಲವು ಮುಖ್ಯವಾದ ಬಗೆಗಳನ್ನು ಮುಂದೆ ವಿವರಿಸಲಾಗಿದೆ.

  1. . ಗಾಲ್ಗರ್ (ಬೆಟ್ಟದ ಗಜನಿಂಬೆ): ಪಂಜಾಬ್ ಮತ್ತು ಉತ್ತರ ಪ್ರದೇಶಗಳಲ್ಲಿ ಬೆಳೆಯುವ ಬಗೆ. ಇದರ ಹಣ್ಣು ಮೊಟ್ಟೆಯಾಕಾದ್ದು. ಬೀಜಗಳ ಸಂಖ್ಯೆ ಕಡಿಮೆ. ಅಧಿಕ ಇಳುವರಿಯನ್ನು ಕೊಡುವ ಬಗೆ ಇದು. ಹಣ್ಣನ್ನು ಉಪ್ಪಿನಕಾಯಿ ಮತ್ತು ತಂಪಾದ ಪಾನೀಯಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.
  2. . ಇಟಲಿಯ ಗಜನಿಂಬೆ: ಯೂರೋಪಿನಿಂದ ತರಲಾದ ಗಜನಿಂಬೆಯ ಬಗೆಗಳಲ್ಲಿ ಇದು ಬಹು ಮುಖ್ಯವಾದದ್ದು; ಸಾಮಾನ್ಯವಾಗಿ ಎಲ್ಲ ತರಹದ ವಾತಾವರಣಕ್ಕೂ ಹೊಂದಿಕೊಂಡು ಬೆಳೆಯುತ್ತದೆ. ಇದರ ಹಣ್ಣು ಅಂಡಾಕಾರದ್ದು. ಬೀಜಗಳಿರುವುದಿಲ್ಲ. ಹಣ್ಣುಗಳಿಗೆ ಮಂದವಾದ ಸಿಪ್ಪೆ ಮತ್ತು ರಸಭರಿತ ತಿರುಳು ಇರುವುದರಿಂದ ಉಪ್ಪಿನಕಾಯಿ ಮತ್ತು ತಂಪಾದ ಪಾನೀಯಗಳ ತಯಾರಿಕೆಗೆ ಯೋಗ್ಯವಾಗಿವೆ.
  3. . ಪಾಟ್ ನಿಂಬು ಅಥವಾ ಅಸ್ಸಾಂ ಗಜನಿಂಬೆ: ಇದು ಹೆಚ್ಚು ಫಲ ಬಿಡುವ ಬಗೆ. ಇದು ಇಟಲಿಯ ಗಜನಿಂಬೆಗಿಂತ ಕಡಿಮೆ ರುಚಿಯುಳ್ಳದ್ದು.
  4. . ಬರಮಾಸಿಯ ಗಜನಿಂಬೆ: ಇದು ಉತ್ತರ ಪ್ರದೇಶದ ಪೂರ್ವ ಜಿಲ್ಲೆಗಳಲ್ಲಿ ಮತ್ತು ಪಂಜಾಬಿನಲ್ಲಿ ಜನಪ್ರಿಯವಾಗಿದೆ. ಇದು ಮಧ್ಯಮ ಗಾತ್ರದ. ಚೆಂಡಿನಾಕಾರದ ಹಣ್ಣುಗಳನ್ನು ಬಿಡುತ್ತದೆ. ಚೂಚುಕ ಇರುವುದಿಲ್ಲ. ಸಿಪ್ಪೆ ತೆಳು. ತಿರುಳು ರಸಭರಿತವಾಗಿಯೂ ರುಚಿಯಾಗಿಯೂ ಇದೆ. ಇದೂ ಕೂಡ ಅಧಿಕ ಇಳವರಿ ಕೊಡುವಂಥದು.
  5. . ಜಿನೋವ ಗಜನಿಂಬೆ: ಇದನ್ನು ಆಂಧ್ರ ಪ್ರದೇಶದ ಕಡಪ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಲಾಗುತ್ತಿದೆ. ಇದರ ಹಣ್ಣಿನಲ್ಲಿ. ಬೀಜಗಳಿಲ್ಲ.

ಗಜನಿಂಬೆಯನ್ನು ನಿಂಬೆಯಂತೆ ನೇರವಾಗಿಯೇ ಉಪಯೋಗಿಸುವುದಿಲ್ಲ; ತಂಪಾದ ಪಾನೀಯಗಳ ತಯಾರಿಕೆಯಲ್ಲಿ ಬಳಸುವುದೇ ಹೆಚ್ಚು. ಕ್ಯಾಂಡಿ, ಜ್ಯಾಮ್, ಜೆಲಿ ಮುಂತಾದವುಗಳಿಗೆ ವಾಸನೆ ಕಟ್ಟಲು ಉಪಯೋಗಿಸುತ್ತಾರೆ. ಸಿಟ್ರಿಕ್ ಆಮ್ಲ, ಪೆಕ್ಟಿನ್, ನಿಂಬೆಎಣ್ಣೆ ಮುಂತಾದುವುಗಳ ತಯಾರಿಕೆಗೂ ಇದನ್ನು ಬಳಸುವುದಿದೆ. ಕಲೆಗಳನ್ನು ಹೋಗಲಾಡಿಸುವುದಕ್ಕೂ ಚಲುವೆ ಮಾಡುವುದಕ್ಕೂ ಇದನ್ನು ಉಪಯೋಗಿಸುವುದುಂಟು. ಹಣ್ಣಿನ ಸಿಪ್ಪೆಯಿಂದ ನಿಂಬೆಯ ಪಾಕ. ನಿಂಬೆ ಎಣ್ಣೆ ಮತ್ತು ಔಷಧಗಳಿಗೆ ಸುವಾಸನೆ ಕೊಡಲು ಬಳಸುವ ವಸ್ತುಗಳು ಇತ್ಯಾದಿಗಳು ತಯಾರಿಕೆಗೆ ಬಳಸಬಹುದು. ಗುಲ್ಮ ಸಂಬಂಧಿ ರೋಗಗಳಗೆ ಗಜನಿಂಬೆಯ ಉಪ್ಪಿನ ಕಾಯಿ ಒಳ್ಳೆಯ ಮದ್ದು. ಅತಿಸಾರ, ಆಮಶಂಕೆ, ಸಂಧಿವಾತ ಮುಂತಾದ ರೋಗಗಳಲ್ಲಿ ಗಜನಿಂಬೆಯ ರಸವನ್ನು ಬಳಸುತ್ತಾರೆ.

 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಗಜನಿಂಬೆ&oldid=1000718" ಇಂದ ಪಡೆಯಲ್ಪಟ್ಟಿದೆ