ಗಂಭೀರ ನಾಟಕವು (ರುದ್ರನಾಟಕ, ದುರಂತ ನಾಟಕ) ರೂಪಕಪ್ರಪಂಚದ ಎರಡು ಮುಖ್ಯ ವಿಭಾಗಗಳಲ್ಲೊಂದು (ಟ್ರ್ಯಾಜಡಿ.) ಇನ್ನೊಂದು ಹರ್ಷನಾಟಕ (ಕಾಮೆಡಿ). ಟ್ರ್ಯಾಜಡಿ ಎಂಬ ಮಾತಿನ ವ್ಯಾಖ್ಯಾನದಲ್ಲಿ ಬಂದಿರುವ ಗಾಂಭೀರ್ಯ ಕೇವಲ ನಾಟಕಗಳಿಗೆ ಮಾತ್ರ ಅನ್ವಯವಾಗುತ್ತದೆಯೆ, ಇತರ ಪ್ರಕಾರಗಳಲ್ಲೂ ಅದಿದ್ದು ಅದನ್ನೂ ಟ್ರ್ಯಾಜಡಿ ಎಂದು ಕರೆಯಬಹುದೆ, ನಿಜವಾಗಿ ಟ್ರ್ಯಾಜಡಿಯ ತತ್ತ್ವ ಏನು ಎಂಬ ವಿಚಾರ ಈ ಲೇಖನದಲ್ಲಿ ಬಂದಿದೆ. ತತ್ತ್ವದ ಹಿನ್ನಲೆಯಲ್ಲಿ ಗಂಭೀರ ನಾಟಕದ ಸ್ಥೂಲ ಇತಿಹಾಸವೂ ಇದೆ.

ಟ್ರ್ಯಾಜಡಿ ಎಂಬ ಪದಕ್ಕೆ ಅರ್ಥ ನಿರ್ದಿಷ್ಟವಾದದ್ದು ಈಚೆಗೆ. ಹಿಂದೆ ಅದನ್ನು ನಾಟಕಕ್ಕೇ ಅಲ್ಲದೆ ಕಾವ್ಯಕ್ಕೂ ಅನ್ವಯಿಸುವ ವಾಡಿಕೆಯಿತ್ತು. ಹೋಮರನ ಭವ್ಯ ಕಾವ್ಯ ಎರಡೂ ಪ್ಲೇಟೋವಿನ ದೃಷ್ಟಿಯಲ್ಲಿ ಟ್ರ್ಯಾಜಡಿ ; ಏತಕ್ಕೆಂದರೆ ಅವುಗಳಲ್ಲಿ ಉದಾತ್ತ ಗಾಂಭೀರ್ಯ ತುಂಬಿದೆ. ಕ್ರಿ.ಶ ೪೫೦ರಲ್ಲಿ ಹೊರಬಂದ ಒಂದು ಕಥನಕಾವ್ಯ ಒರೆಸ್ಟೀಸ್ ಎಂಬುದಕ್ಕೆ ಅದರ ಕವಿ ಇರಿಸಿದ ಅಂಕಿತ ಟ್ರ್ಯಾಜಡಿ. ಬಹಳ ಕಾಲ ಓವಿಡ್ ಮುಂತಾದವರನ್ನು ಟ್ರ್ಯಾಜಿಕ್ ಕವಿಗಳೆಂದೆ ಕರೆದರು. ಹನ್ನೊಂದು ಹನ್ನೆರಡನೆಯ ಶತಮಾನಗಳಲ್ಲಿ ಬಂದ ಸ್ಕ್ಯಾಂಡನೇವಿಯದ ರಾಷ್ಟ್ರಕಾವ್ಯಗಳಾದ ಎಡ್ಡಗಳೂ ಟ್ರ್ಯಾಜಡಿಯೆಂದೇ ಹಲವು ವಿದ್ವಾಂಸರಿಗೆ ತೋರಿಬಂತು ; ಅವುಗಳಲ್ಲಿ ವರ್ಣಿತವಾಗಿರುವ ವೀರ ವ್ಯಕ್ತಿಗಳಿಗೆ ಅಗಾಧ ಸಾಮಥ್ರ್ಯವೂ ವಿಧಿಯನ್ನು ಎದುರಿಸಿ ನಗುವ ಕೆಚ್ಚೆದೆಯೂ ಉಂಟು. ಮಧ್ಯಯುಗದ ಪೂರ್ತ, ಟ್ರ್ಯಾಜಡಿಯೆಂದರೆ ಒಂದು ಬಗೆಯ ಕಥೆ ; ಅತ್ಯುನ್ನತಿಗೆ ಏರಿ ಅದೃಷ್ಟದ ಗೊಡ್ಡಾಟಕ್ಕೆ ಪಕ್ಕಾಗಿ ಅಧೋಗತಿಗೊ ಸರ್ವ ನಾಶಕ್ಕೊ ಇಳಿಯುವ ಹತಭಾಗ್ಯನ ಅಖ್ಯಾನ. ಮಧ್ಯಯುಗದ ಮೂರು ನಾಲ್ಕು ವಿಧದ ನಾಟಕ ಯಾವುದಕ್ಕೂ ಟ್ರ್ಯಾಜಡಿ, ಕಾಮೆಡಿ, ಎಂಬ ಹೆಸರಿರಲಿಲ್ಲ. ಪ್ರಾಚೀನ ಶಿಷ್ಟ ಸಾಂಪ್ರದಾಯಿಕ ಟ್ರ್ಯಾಜಡಿಗೂ ಮಧ್ಯಯುಗದ ಕಥಾ ಟ್ರ್ಯಾಜಡಿಗೂ ವ್ಯತ್ಯಾಸ ತೋರಿಸುವುದಕ್ಕೆ ಎರಡನೆಯದನ್ನು ಗಾಥಿಕ್ ಟ್ರ್ಯಾಜಡಿ ಎನ್ನಬೇಕು ಎಂದು ಒಬ್ಬ ಪಂಡಿತನ ಸಲಹೆ.

ಆದರೂ ಹೊಸಹುಟ್ಟಿನಿಂದ ಈಚಿನ ಆಧುನಿಕ ಅವಧಿಗಳಲ್ಲಿ ಕಥೆ ಕಾದಂಬರಿಗಳನ್ನು ಟ್ರ್ಯಾಜಡಿ ಎಂದು ನಿರ್ದೇಶಿಸುವ ಪದ್ಧತಿ ಎಂದೂ ಕಂಡುಬರಲಿಲ್ಲ; ಸಾಹಿತ್ಯ ಪ್ರಭೇದಗಳಲ್ಲಿ ಒಂದಾದ ರೂಪಕಕ್ಕೇ ಅದು ಮೀಸಲು. ವಿಮರ್ಶಕರ ಹೆಗ್ಗಡೆ ಅರಿಸ್ಟಾಟಲ್ ಭವ್ಯಕಾವ್ಯ, ಟ್ರ್ಯಾಜಡಿ, ಕಾಮೆಡಿ, ಚರಿತ್ರೆ- ಎಂಬ ಸಾಹಿತ್ಯ ಪ್ರಕಾರಗಳನ್ನು ವಿಂಗಡಿಸಿ ಅವುಗಳ ಬೇರೆ ಬೇರೆ ಗುಣಧರ್ಮವನ್ನು ಸ್ಥಾಪಿಸಿಸೂತ್ರೋಚ್ಚಾರಣೆ ಮಾಡಿದ. ಪಾಶ್ಚಾತ್ಯ ಲೋಕದಲ್ಲಿ ಅದಕ್ಕಿರುವ ಮರ್ಯಾದೆ ಪ್ರಭಾವಗಳು ಇನ್ನೂ ಕುಗ್ಗಿಲ್ಲ. ಇತರ ಸಾಹಿತ್ಯಪ್ರಕಾರ ಅಲ್ಲಲ್ಲಿ ಟ್ರ್ಯಾಜಡಿಯನ್ನು ನೆನಪಿಗೆ ತಂದರೆ ಅದನ್ನು ಟ್ರ್ಯಾಜಿಕ್ ಕಾವ್ಯ ಅಥವಾ ಟ್ರ್ಯಾಜಿಕ್ ಕಾದಂಬರಿ ಎನ್ನುತ್ತಾರೆಯೇ ವಿನಾ ಖಚಿತವಾಗಿ ಟ್ರ್ಯಾಜಡಿ ಎನ್ನಲಾರರು. ಟ್ರ್ಯಾಜಿಕ್ ಎಂಬ ವಿಶೇಷಣವನ್ನು ಕಥೆ, ಭಾವಗೀತೆ, ಪ್ರಬಂಧ ಯಾವುದಕ್ಕೆ ಬೇಕಾದರೂ ಅಂಟಿಸಬಹುದು; ಘಟನೆ, ದೃಶ್ಯ, ಅನುಭವ ಮೊದಲಾದುವಕ್ಕೂ ಅಂಟಿಸಬಹುದು-ಕಾರಣವಿದ್ದರೆ.

ಗಂಭೀರನಾಟಕದ ಲಕ್ಷಣ ನಿರೂಪಣೆ ಅರಿಸ್ಟಾಟಲ್ ಪ್ರಕಾರ

ಬದಲಾಯಿಸಿ

ಟ್ರ್ಯಾಜಡಿ ಎಂಬುದು ಗಂಭೀರವೂ ಸಮಗ್ರವೂ ಬೃಹತ್ತುಳ್ಳದ್ದೂ ಆದ ಒಂದು ಘಟನಾವಳಿಯ ಪ್ರತಿರೂಪ ; ಭಾಷೆ ಅಂದಗೊಳಿಸಿದ್ದೂ ವೈವಿಧ್ಯ ಪೂರ್ಣವಾದ್ದೂ ಆಗಿರಬೇಕು; ನಿರೂಪಣೆಯ ವಿಧಾನ-ಕಥನವಲ್ಲ-ಅಭಿನಯ. ಮರುಕ ಭೀತಿಗಳ ಮೂಲಕ ಅಂಥ ಭಾವಗಳ ಉಲ್ಬಣ ಮತ್ತು ಉಪಶಮನ ಉಂಟಾಗುತ್ತವೆ. ನಾಟಕಕ್ಕೆ ಆರು ಅಂಗಗಳು. ಅವುಗಳಲ್ಲಿ ಕ್ರಮವಾಗಿ ವಸ್ತುಸಂವಿಧಾನ, ಪಾತ್ರ ವರ್ಗ, ಚಿಂತನೆಗಳು, ಭಾಷೆ, ಸಂಗೀತ ಮತ್ತು ವಸನ ಭೂಷಣಾದಿ ರಂಗಸಜ್ಜುಗಳಿಗೆ ಯಥೋಚಿತಸ್ಥಾನ. ಅವನ ಅಭಿಮತದಂತೆ ಕಡೆಯದಾದ ಅಲಂಕರಣ ಅಷ್ಟೇನೂ ಮುಖ್ಯವಲ್ಲ. ಈ ಹೇಳಿಕೆಗೆ ಮೊದಲೇ ಭವ್ಯಕಾವ್ಯವೂ ಟ್ರ್ಯಾಜಡಿಯೂ ಉಚ್ಚಮಟ್ಟದ ವ್ಯಕ್ತಿಗಳ ಚಲನೆ ವಲನೆಯನ್ನು ಪ್ರತಿಪಾದಿಸುತ್ತವಾಗಿ ಆ ಗುಣದಲ್ಲಿ ಅವೆರಡಕ್ಕೂ ಸಮಾನತೆ ಎಂದು ತಿಳಿಸಿದ್ದಾನೆ. ಅಲ್ಲದೆ ಪಾತ್ರಕ್ಕಿಂತ ಘಟನಾವಳಿಯೇ ಪ್ರಧಾನವೆಂದೂ ಅವನ ದೃಢಾಭಿಪ್ರಾಯವಾದ್ದರಿಂದ ವಸ್ತುಸಂವಿಧಾನವೇ ಗಂಭೀರ ನಾಟಕದ ಆತ್ಮ ಅಥವಾ ಸರ್ವಸ್ವ. ಅರಿಸ್ಟಾಟಲನ ತರುವಾಯ ಬಂದವರು ಅವನಿಂದ ಸೂಚಿತವಾಗಿವೆಯೆಂದು ಬಗೆದು ವಚನಿಸಿದ ಮೂರು ಏಕತೆಗಳು (ಕಾರ್ಯವಳಿ, ಸ್ಥಳ, ಕಾಲಗಳ ವಿಚಾರವಾದ ಹ್ರಸ್ವತೆ) ಎಂಬುದನ್ನು ಅವನ ತಲೆಗೇ ಕಟ್ಟಿದರು. ಪ್ರಾಚೀನ ಗ್ರೀಕ್ ಗಂಭೀರನಾಟಕಕ್ಕೆ ಹೊಂದಿಕೊಳ್ಳುವ ಈ ನಿಯಮಾವಳಿಯಲ್ಲಿ ಕಾಲಪುರುಷನ ವಿರೋಧಕ್ಕೆ ಬಗ್ಗದೆ ಉಳಿದು ನಿಲ್ಲಬಲ್ಲ ಅಂಶ, ಸರಿಸುಮಾರಾಗಿ ಸಕಲ ಗಂಭೀರನಾಟಕಕ್ಕೂ ಅನ್ವಯಿಸಬಲ್ಲ ಅಂಶ, ಎರಡೇ ಎರಡು: ನಾಟಕದ ವಿಷಯಗಾಂಭೀರ್ಯ ಮತ್ತು ಗಂಭೀರಪರಿಣಾಮ. ನಾನಾ ಮುಖವಾಗಿ ಅನಿವಾರ್ಯವಾಗಿಯೂ ತರ್ಕಸಮ್ಮತವಾಗಿಯೂ ಸಹಜವಾಗಿಯೂ ಬಲಿಷ್ಠವಾಗಿಯೂ ಗಂಭೀರ ನಾಟಕ ಬೆಳೆದು ಅರಿಸ್ಟಾಟಲನ ಆಜ್ಞೆಗಳಲ್ಲಿ ಹಲವನ್ನು ಒತ್ತಟ್ಟಿಗೆ ನೂಕಿ ಬಿಟ್ಟಿತು. ಅದು ನ್ಯಾಯವೆಂದೇ ಒಪ್ಪಬೇಕು. ಅರಿಸ್ಟಾಟಲ್ ಜೀವಶಾಸ್ತ್ರದ ಅಧ್ಯಯನಿಯಾದ್ದರಿಂದ ಟ್ರ್ಯಾಜಡಿ ಮುಂದೆ ಯಾವ ಯಾವ ರೂಪಾಂತರಗಳಿಸುವುದೊ ಹೇಳಲಾಗದೆಂದು ಭವಿಷ್ಯ ನುಡಿದಿದ್ದ ಯಾವುದನ್ನು ಕುರಿತು ಮಾನವನೊಬ್ಬ ಶಾಶ್ವತವೊ ವಿಶ್ವವ್ಯಾಪಕವೊ ಆದ ಲಕ್ಷಣನಿರೂಪಣೆಯನ್ನು ನಿರ್ಮಿಸಲಾರ. ಸೌಖ್ಯದಿಂದ ಪ್ರಾರಂಭಗೊಂಡು ಅಸೌಖ್ಯದಲ್ಲಿ ಕೊನೆಗೊಳ್ಳುವುದೇ ಟ್ರ್ಯಾಜಡಿಯೆಂದು ಡಾಂಟೆ ಮತ್ತು ಚಾಸರ್ ಒತ್ತಿಹೇಳಿದರು. ಕಾಳಗವಿದ್ದರೆ ಟ್ರ್ಯಾಜಡಿ, ಇಲ್ಲದಿದ್ದರೆ ಕಾಮೆಡಿ ಎಂದು ಹ್ಯಾನ್ಸ್ ಸ್ಯಾಕ್ಸ್ ಸಾರಿದ. ಉನ್ಮಾದಕ್ಕೆ ಸಮನಾದ ತೀವ್ರವೇಶವೇ ಟ್ರ್ಯಾಜಡಿಯನ್ನು ಹೆರುವ ತಾಯಿ ಎಂಬುದರಲ್ಲಿ ನೀಷೆಗೆ ನಿಸ್ಸಂದೇಹ ಅದೂ ಸರಿ ಇದೂ ಸರಿ ಎಂಬ ಎರಡು ನ್ಯಾಯಗಳ ಪರಸ್ಪರ ಸೆಣಸಾಟವೇ ಆದರ್ಶ ಟ್ರ್ಯಾಜಡಿ ಎಂದು ಹೆಗಲ್ ವಾದಿಸಿದ. ಹೀಗೆ ಗುಣಲಕ್ಷಣಗಳನ್ನು ಹೇಳುವ ಸಿದ್ಧಾಂತಗಳೆಲ್ಲ ತಮತಮಗೆ ಅಚ್ಚುಕಟ್ಟಾಗಿ ಹಿಡಿಸಿದ ಗಂಭೀರನಾಟಕವನ್ನು ಮಾತ್ರ ಕಣ್ಣ ಮುಂದೆ ಇಟ್ಟುಕೊಂಡಿದ್ದಂತೆ ಭಾಸವಾಗುತ್ತದೆ. ಆದ್ದರಿಂದ ಇದಾವುದನ್ನೂ ಸಮಗ್ರವಾದ ಲಕ್ಷಣ ನಿರೂಪಣೆಯೆಂದು ಒಪ್ಪುವುದು ಕಷ್ಟ.

ಕ್ರಿ. ಪೂ. ೫ನೆಯ ಶತಮಾನದಿಂದ ಪ್ರಾಯಶಃ ಕ್ರಿ.ಶ. ೧೯ನೆಯದರ ವರೆಗೂ ಗಂಭೀರನಾಟಕದ ಮುಖ್ಯ ಪಾತ್ರಗಳು ರಾಜರೊ ದಂಡಾಧೀಶರೊ ಉನ್ನತ ಪದವಿಯವರೊ ಆಗಿರಲೇಬೇಕಾಗಿತ್ತು. ಆಗಾಗ ಹೊರಬಂದ ಕೆಲವು ಗೃಹಕೃತ್ಯ ನಾಟಕಗಳಲ್ಲಿ ಮಧ್ಯಮ ವರ್ಗದವರಿಗೆ ನಾಯಕಸ್ಥಾನ ದೊರಕಿದರೂ ಅದು ಪ್ರಭಾವ ಬೀರದೇ ಹೋಯಿತು. ೧೯ನೆಯ ಶತಮಾನದಲ್ಲಿ ವಾಸ್ತವತೆ ಸ್ವಾಭಾವಿಕತೆಗಳು ಹಬ್ಬಿ, ಹರಡಿ, ರೈತ ಕಾರ್ಮಿಕ ಮುಂತಾದವರ ಜೀವನವೂ ಗಂಭೀರನಾಟಕಕ್ಕೆ ಕಥಾವಸ್ತು ಆಗಬಹುದೆಂಬ ನಿಜಾಂಶ ಪ್ರಾಯೋಗಿಕ ಸಮರ್ಥನೆ ಪಡೆಯಿತು. ಇಬ್ಸನ್, ಸ್ಟ್ರಿಂಡ್‍ಬರ್ಗರ ಗಂಭೀರ ನಾಟಕಗಳ ತುಂಬ ಮಧ್ಯಮವರ್ಗದ ಪಾತ್ರಗಳೇ ಇವೆ. ಟಾಲ್‍ಸ್ಟಾಯ್, ಹಾಫ್‍ಮನ್, ಗಾರ್ಕಿ ಮೊದಲಾದವರಿಗೆ ಸಾಮಾನ್ಯ ಜನರೇ ಸಾಕು. ಇನ್ನು ಕೆಲವು ರೂಪಕಗಳಲ್ಲಿ ಕುಲವೃತಿ. ಯಾವುದೊ ಗೋಚರಿಸದ, ಕೊನೆಗೆ ಹೆಸರೂ ಇಲ್ಲದ ಶ್ರೀಮಾನ್ ಸೊನ್ನೆ, ಮಾನವ, ಮಗ, ಬೂದುಬಟ್ಟೆಯವ ಮುಂತಾದ ವ್ಯಕ್ತಿಗಳ ದುಃಖದಲ್ಲಿ ನಾವು ಸಹಭಾಗಿಗಳಾಗುತ್ತೇವೆ. ಪದಚ್ಯುತನಾದ ಭೂಪಾಲನ ಶೋಕ ಎಷ್ಟು ಅಪಾರವೋ ಗಳಿಸಿದ್ದ ಹಲವು ಕಾಸುಗಳನ್ನು ಕಳೆದು ಕೊಂಡ ಬಡ ಯಾಚಕೀಯ ಆಳಲೂ ಅಷ್ಟೇ ಅಪಾರ ; ಅವನು ಸಾಲಂಕೃತ ಶೈಲಿಯಲ್ಲಿ ಪ್ರೌಢವಾಗಿ ರೋದಿಸಬಹುದು, ಇವಳು ಪುನರುಕ್ತಿಯ, ಮಾತಾಡುವ ರೀತಿಯಲ್ಲಿ ಗೋಳಿಡಬಹುದು ; ಅಳು ಆಳುವೇ ಒಟ್ಟಿನಲ್ಲಿ.

ಕ್ರಿ.ಪೂ. ೫ನೆಯ ಶತಮಾನದ ಅನ್ಯಾದೃಶ ಗ್ರೀಕ್ ಗಂಭೀರ ನಾಟಕ ದುರಂತದಿಂದ ಕೊನೆಗೊಳ್ಳಬಹುದಾಗಿತ್ತು; ಇಲ್ಲವೆ ಸುಖಾಂತವಾಗಿ ಕೊನೆಗೊಳ್ಳಬಹುದಾಗಿತ್ತು. ಅದನ್ನು ಕಂಡ ಅರಿಸ್ಟಾಟಲನೇ ಗಂಭೀರನಾಟಕದ ಕಥಾವಸ್ತು ವಿನ್ಯಾಸಕ್ಕೆ ಒಂದು ಸ್ಪಷ್ಟ ಸ್ಥಿತಿಬದಲಾವಣೆ (ಪೆರಿಪೆಟೈಯ) ಅತ್ಯವಶ್ಯಕವೆಂದು ನಮೂದಿಸಿ, ಆ ಬದಲಾವಣೆ ಸೌಭಾಗ್ಯದಿಂದ ದೌರ್ಭಾಗ್ಯಕ್ಕೊ ದೌರ್ಭಾಗ್ಯದಿಂದ ಸೌಭಾಗ್ಯಕ್ಕೂ ತಿರುಗ ಬಹುದೆಂದು ಟಿಪ್ಪಣಿಬರೆದ. ಮರಣ ಇಲ್ಲವೆ ಸರ್ವನಾಶ ಕಡ್ಡಾಯವಾಗಿ ಒದಗಲೇಬೇಕೆಂದು ಅವನೆಂದೂ ಹಠ ಹಿಡಿಯಲಿಲ್ಲ. ಆದರೆ ಮಧ್ಯಯುಗದ ಮತ್ತು ಹೊಸ ಹುಟ್ಟಿನ ನಾಟಕಕಾರರಿಗೆ ಸಮಯ ಸಂಧರ್ಭ ಒತ್ತಡದ ಫಲವಾಗಿ ದುರಂತವೇ ಟ್ರ್ಯಾಜಡಿಗೆ ಸೂಕ್ತವೂ ಸಮರ್ಪಕವೂ ಆದ ಸಮಾಪ್ತಿಯೆಂದು ಸ್ವತಸ್ಸಿದ್ಧ ಸೂತ್ರವಾಯಿತು. ಪಾಶ್ಚಾತ್ಯರಿಗೆ ಅದೇತಕ್ಕೊ ಕೇಡು ಹಾನಿಗಳಿಂದ ಮುಕ್ತಾಯವಾಗುವ ಕಥೆ ಕಾದಂಬರಿ ರೂಪಕಗಳೇ ಹೆಚ್ಚು ಪ್ರಿಯಾವಾದುವು ; ಹೆಚ್ಚು ಸ್ವಾರಸ್ಯವುಳ್ಳವೂ, ಹೆಚ್ಚು ಸತ್ತ್ವಮಯವೂ ಆಗಿ ಕಂಡುವು ; ಅಷ್ಟೇ ಅಲ್ಲದೆ, ಅದೇ ಗಂಭೀರನಾಟಕ ಎಂದು ಅವರು ತಿಳಿದರು. ತದ್ವಿರುದ್ಧವಾದ ಅಂತ್ಯವುಳ್ಳದ್ದು ಗಂಭೀರನಾಟಕವಲ್ಲ. ಎಂದು ಅವರಲ್ಲಿ ಅನೇಕರ ಘೋಷಣೆ. ಹಾಗು ಪೂರ್ವ ವಲಯದಲ್ಲಿ ಗಂಭೀರನಾಟಕ ಕಾಣಲೇ ಇಲ್ಲ. ಏತಕ್ಕೆಂದರೆ ಅಲ್ಲಿನ ಜನರಿಗೆ ಘನವಿಪತ್ತಿನ ವಿಷಾದವನ್ನು ಸಹಿಸುವ ತ್ರಾಣವಿಲ್ಲ- ಎಂದು ಹಂಗಿಸಿದ್ದಾರೆ. ಕೆಲವು ವಿದ್ವಾಂಸರು. ವಿಷಯಗಳನ್ನು ಚೆನ್ನಾಗಿ ಪರಿಶೀಲಿಸದೆ ಪೂರ್ವದೇಶದÀ ಕೆಲವು ಪಂಡಿತರು ಆ ಆರೋಪಕ್ಕೆ ತಲೆಬಾಗಿಸಿದ್ದಾರೆ. ದಿಟವಾಗಿ ಈ ಬಗೆಯ ಉಕ್ತಿ ಸತ್ಯಾಂಶದಿಂದ ದೂರ. ಗ್ರೀಕ್ ಗಂಭೀರ ನಾಟಕದ ಪ್ರತ್ಯಕ್ಷ ಪ್ರಮಾಣ, ಅರಿಸ್ಟಾಟಲನ ಅಸಂದಿಗ್ದ ವಚನ, ಹಾಗಿರಲಿ ; ಜರ್ಮನಿಯ ಸುಖಾಂತ ಟ್ರ್ಯಾಜಡಿ ಮತ್ತು ಫ್ರಾನ್ಸಿನ ಸುಖಾಂತ ಟ್ರ್ಯಾಜಡಿ ಕಣ್ಣಿದುರಿಗೆ ಇಲ್ಲವೆ ಸಾವನ್ನಿಡದೆ ಟ್ರ್ಯಾಜಡಿ ಕಟ್ಟುತ್ತಾನೆ ರಾಸೀನ್ -ಎಂಬ ಹೇಳಿಕೆ ಇಲ್ಲವೆ ಚೆಕಾಫ್, ಸ್ಟ್ರಿಂಡಬರ್ಗ ಮೊದಲಾದವರ ಹಲವು ಗಂಭೀರ ನಾಟಕಗಳಲ್ಲಿ ಅಂತ್ಯದ ಪರಿಸ್ಥಿತಿ ಆದಿಯಲ್ಲಿ ಇದ್ದುದಕ್ಕೇ ಹಿಮ್ಮರಳುತ್ತದೆ, ಅನೇಕ ಆಗುಹೋಗಿನ ಕೊನೆಯಲ್ಲಿ. ನಾಟಕದ ನಿಜರೂಪವನ್ನು ಅಭಿವ್ಯಕ್ತಿಸುವುದು ಅದರ ಅಂತ್ಯವಲ್ಲ ಆದಿಯೂ ಅಲ್ಲ, ಅದರ ಸುದೀರ್ಘ ಮಧ್ಯಭಾಗ. ನಿಷ್ಪಕ್ಷಪಾತ ದೃಷ್ಟಿಯಿಂದ ಪರಾಮರ್ಶೆ ನಡೆಸಿ ನೋಡಿದಲ್ಲಿ ಗಂಭೀರ ನಾಟಕದ ಅಂತ್ಯ ಸುಖವೂ ಅಲ್ಲ, ಅಸುಖವೂ ಅಲ್ಲ, ಒಂದು ಬಗೆಯ ವಿಚಿತ್ರ ಮಿಶ್ರಣದ ಸಮಾಧಾನ, ಗಂಭೀರ ಶಾಂತಿ, ಅದರ ಬಗ್ಗೆ ಇನ್ನೆರಡು ಮಾತು ಮುಂದೆ ಬರುತ್ತದೆ.

ಗಂಭೀರ ನಾಟಕದ ಮುಖ್ಯವೊ ರಸವತ್ತೂ ಆದ ಭಾಗ ನಾಯಕ ನಾಯಕಿಯರ ವಿಶಿಷ್ಟ ಸೊಬಗಿನ ಕಥೆ ಅಥವಾ ಕಥಾನಕ. ಅದು ಸಾಮಾನ್ಯವಾಗಿ ಸಂತಸ ಪ್ರಮುಖವಲ್ಲ; ಸಂಕಟಪ್ರಮುಖ. ಅಡ್ಡಿ ಅಡಚಣೆಗಳ ಎದುರು ಹೋರಾಟ, ಆಶಾಭಂಗ, ಮಬ್ಬು, ಮಬ್ಬು ಕತ್ತಲೆ, ಅಸಹಾಯಕತೆ, ನರಳಿಕೆ, ನೋವು ಇತ್ಯಾದಿ ಅಹಿತಸಂಗತಿಗಳ ಇರುಕಿನಲ್ಲಿ ಸಿಕ್ಕಿಕೊಂಡು ಸ್ತ್ರೀಪುರಷರು ತಡವರಿಸುತ್ತಾರೆ, ತೂಳಲುತ್ತಾರೆ. ಮತ್ತೆ ಪ್ರಯತ್ನಿಸುತ್ತಾರೆ, ಗೆಲ್ಲುತ್ತಾರೆ, ಸೋಲುತ್ತಾರೆ. ಅವರ ಬಾಳಿನ ವೈಯಕ್ತಿಕ ವಿದ್ಯಮಾನಗಳನ್ನೇ ಅಲ್ಲದೆ ಅವುಗಳ ಹಿಂದೆ ಸುಳಿದಾಡುವ ಮಾನವಿಕ ಸಮಸ್ಯೆಗಳನ್ನೂ ನಾವು ಲಕ್ಷಿಸುತ್ತೇವೆ. ಇಂಥ ಕಷ್ಟನಷ್ಟ ಏತಕ್ಕೆ ಬಂತು, ಅದಕ್ಕೆ ಯಾರು ಕಾರಣ. ಈ ಸೌಖ್ಯ ಸಂತೋಷ ಮೊದಲೇ ಏತಕ್ಕೆ ಬರಲಿಲ್ಲ. ಇಷ್ಟೊಂದು ರಂಪ ರಾದ್ಧಾಂತ ಅಗಲೆಬೇಕಾಗಿತ್ತೆ, ಎಲ್ಲಕ್ಕೂ ಜವಬ್ದಾರ ಮನುಷ್ಯನೆ ಅಥವಾ ಮನುಷ್ಯೇತರ ಶಕ್ತಿಗಳೆ ಮುಂತಾದ ಪ್ರಶ್ನೆಗಳು ಆಕೃತಿಗೊಂಡು ಅಡ್ಡಾಡುತ್ತವೆ, ನಮ್ಮ ಮುಂದೆ. ಒಳ್ಳೆಯದು ಕೆಟ್ಟದು, ಅನ್ಯಾಯ ನ್ಯಾಯ, ರಾಗಾವೇಶ ವಿವೇಕ-ಇತ್ಯಾದಿ ದ್ವಂದ್ವ ತತ್ತ್ವಗಳೂ ನಮ್ಮ ಮನಸ್ಸಿಗೆ ಹೊಳೆಯದೇ ಇರುವು. ಸಾಧಾರಣ ನಾಟಕಕಾರರು ತಮ್ಮ ಜನಾಂಗದ ಮತ್ತು ತಮ್ಮ ಕಾಲದ ಧಾರ್ಮಿಕ ನಂಬಿಕೆ ಎಂತೊ ಅಂತೆಯೇ ವಿಸ್ತರಿಸುತ್ತಾರೆ, ನಾಟಕದ ಕಥಾಸರಣೆಯನ್ನು. ಪುಷ್ಕಳ ದೀಶಕ್ತಿಯುತರೂ ಪ್ರಚಂಡ ಪ್ರತಿಭಾಶಾಲಿಗಳೂ ಆದ ಕವಿವರರಾದರೊ ತಮ್ಮದೇ ಆದ ಆಲೋಚನಾ ಜಾಲವನ್ನು ಇಡುತ್ತಾರೆ, ನಮ್ಮ ಮುಂದೆ. ದೇವತೆಗಳು ಮತ್ಸರಗ್ರಸ್ತರು, ನರರಿಗೆ ಹುಚ್ಚುಹಿಡಿಸಿ ಕೇಡಿಗೆಳೆದು ಅವರನ್ನು ಕೊಲ್ಲುತ್ತಾರೆ ಎಂಬುದು ಪ್ರಚಾರದಲ್ಲಿದ್ದಾಗ, ಈಸ್ಕಿಲಸ್ ಅಹಂಕಾರಮತ್ತರು ಅತಿರೇಕಕ್ಕೆ ಹೋಗಿ ಪಾತಕಿಗಳಾಗಿ ತಮ್ಮ ಪತನಕ್ಕೆ ತಾವೇ ಕಾರಣರಾಗುತ್ತಾರೆ; ಮಿತಿಯನ್ನು ಆರಿತ ನಮ್ರ ಮನುಷ್ಯರಿಗೆ ಸದಾ ನೆಮ್ಮದಿ ಎಂದು ಘಂಟಾಘೋಷವಾಗಿ ಹೇಳಿದ. ವಿಧಿಯ ಚಾಂಚಲ್ಯ, ಗ್ರಹಗಳ ವಕ್ರ ದೃಷ್ಟಿಗಳನ್ನು ಸ್ವಲ್ಪಮಟ್ಟಿಗೆ ಒಪ್ಪಿಕೊಂಡರೂ ಷೇಕ್ಸಪಿಯರ್ ಅವರವರ ಸ್ವಭಾವದೋಷದಿಂದಲೇ ಅವರವರಿಗೆ ಅನರ್ಥ, ಏನೆಂದರೂ ವೇದನೆ ಬರುವ ವಿಚಾರ ಒಂದು ರಹಸ್ಯ ಎಂದು ಬೋಧಿಸಿದ. ೧೯ನೆಯ ಶತಮಾನದಿಂದ ಈಚೆಗೆ ಅದೃಷ್ಟದ ಸ್ಥಾನ ಸಾಮಾಜಿಕ ಕಟ್ಟುಕಟ್ಟಳಿಗೆ ಕೊಡಲ್ಪಟ್ಟಿದೆ; ಸ್ವತಂತ್ರವಾಗಿ ವರ್ತಿಸಬಯಸುವ ವ್ಯಕ್ತಿ ಆ ಬಲು ಕಠಿನವೂ ಕನಿಕರಶೂನ್ಯವೂ ಆದ ಗೋಡೆಯನ್ನು ಗುದ್ದಿ ಗುದ್ದಿ ವ್ಯರ್ಥವಾಗಿ, ಗಾಯಗೊಳ್ಳುತ್ತಾನೆ; ಯಾವೊಂದನ್ನು ಹೆಚ್ಚಾಗಿ ಚಿತ್ತಕ್ಕೆ ತಗೆದುಕೊಳ್ಳದೆ ಜಡ್ಡುಹಿಡಿದ ಮಾಂಧ್ಯದಲ್ಲಿ ದಿವಸ ನೂಕುವುದೇ ಮನುಷ್ಯರಿಗೆ ಉಳಿದಿರುವ ಉಪಾಯ ಎಂದು ಚೆಕಾಫನ ಚಿಂತನೆ. ಮೇಲಿನಿಂದ ಭೂವಿಯವರನ್ನು ಆಳುವುದು ದೈವವಲ್ಲ. ಗ್ರಹಗತಿಯಲ್ಲ. ಒಂದು ಪೈಶಾಚಿಕ ಯಂತ್ರ ಅದು ಗಣಿತಶಾಸ್ತ್ರದ ಲೆಕ್ಕಾಚರದಂತೆ ನಿರ್ಬಲ ನರನನ್ನು ತುಂಡು ತುಂಡಾಗಿ ಕತ್ತರಿಸಿಹಾಕುತ್ತದೆ. ಎಂದು ಜೀನ್ ಕಾಕ್ತೊ ಉಚ್ಚರಿಸಿದ. ಆದರೆ ಜೀನ್ ಪಾಲ್ ಸಾರ್ತೃನ ಯೋಚನೆಯಂತೆ ನಷ್ಟ. ನಾಶ ಹತಾಶೆ-ಅಲ್ಲಿಂದಾಚೆಯೇ ಮನುಜನ ನೈಜ ಜೀವನ. ಹೀಗೆ ಗಂಭೀರನಾಟಕಕಾರರ ಗಂಭೀರ ದರ್ಶನ ವಿಧವಿಧವಾಗಿದೆ, ಮನನೀಯವಾಗಿದೆ, ಬುದ್ಧಿ ಕುದುರಿಸುವಂತಿದೆ, ರಮಣೀಯವಾಗಿದೆ.

ನವಶಿಷ್ಟತೆಯ ೧೭ ಮತ್ತು ೧೮ ನೆಯ ಶತಮಾನದಲ್ಲಿ, ಗಂಭೀರನಾಟಕ ಉದ್ದಕ್ಕೂ ಗಂಭೀರವಾಗಿಯೇ ಇರತಕ್ಕದ್ದು, ಲಾಘವಕ್ಕೆ ಎಳ್ಳಷ್ಟೂ ಅವಕಾಶ ಕೊಡಕೂಡದು ಎಂದು ಪಂಡಿತರು ಅಭಿಪ್ರಾಯಪಟ್ಟರು. ಹಾಗೂ ಅಂಗೀಕೃತವಾಗಿರುವ ನಿಯಮಾವಳಿಯನ್ನು ಅದು ಎಲ್ಲೂ ಉಲ್ಲಂಘಿಸಬಾರದು-ಎಂದೂ ಅವರು ಹೇಳಿದರು, ಷೇಕ್ಸ್‍ಪಿಯರ್ ತನ್ನ ಕೆಲವು ಗಂಭೀರನಾಟಕಗಳಲ್ಲಿ ಬಿಗಿಯನ್ನು ಸಡಿಲಿಸಿದ್ದಾನೆ. ಸಾಕ್ಷಾತ್ ವಿದೂಷಕನನ್ನೇ ತಂದಿಟ್ಟಿದ್ದಾನೆ. ಒಂದೇ ಪ್ರಸ್ತಾವದಲ್ಲಿ ಕಂಬಳಿ (ಬ್ಲ್ಯಾಂಕೆಟ್) ಮತ್ತು ಚೂರಿ (ನೈಫ್) ಎಂಬ ಗ್ರಾಮ್ಯ ಶಬ್ದಗಳನ್ನಿಟ್ಟು ಗಂಭೀರಭಾಷೆಗೆ ಕಳಂಕ ಎಸಗಿದ್ದಾನೆ ಎಂದು ಅವರ ಖಂಡನೆ. ಇಂಥ ನುಡಿಗಳಿಂದ ನಮಗೆ ಕೇವಲ ಪರಿಹಾಸ, ಟ್ರ್ಯಾಜಡಿಯ ಜನಕ ಈಸಿ ಲಸ್ ಹರುಕು ಬಟ್ಟೆಯ ಕೊಳಕು ಮುಖದ ನಾಯಕನನ್ನು ರಂಗದಮೇಲೆ ತಂದದ್ದನ್ನೂ ಯೂರಿಪಿಡೀಸ್ ಅರಸುಕುಮಾರಿ ಎಲೆಕ್ಟ್ರಳಿಗೆ ಗುಡಿಸಲು ವಾಸದ ಉಳುವವನೊಬ್ಬ ಗಂಡನಾಗುವಂತೆ ನಿಯಂತ್ರಿಸಿದ್ದನ್ನೂ ಅವರೇಕೊ ಗಮನಿಸಲಿಲ್ಲ. ಗಂಭೀರ ನಾಟಕಕ್ಕೆ ಹಲವು ತರಹೆಯ ಮಿಶ್ರಣ ಸಂದು ಬಂದು ಎಷ್ಟೊ ಕಾಲವಾಯಿತು. ಇತ್ತೀಚಿಗೆ ವಿನೋದಕ್ಕಿಂತ ಹೆಚ್ಚು ಹಗುರವಾದ ಅಬದ್ದಕ್ಕೂ ಗಾಂಭೀರ್ಯಕ್ಕೂ ನಿಕಟ ಸಂಬಂಧವುಂಟು ಎಂಬ ಅಭಿಪ್ರಾಯ ಮೂಡಿ ಬಲಗೊಂಡಿದೆ. ಷೇಕ್ಸಪಿಯರನ್ನು ಕಂಡು ಕೆಲವು ವಿದ್ವಾಂಸರಿಗೆ ಆಶ್ಚರ್ಯಕ್ಕೆ ಸಮನಾದ ಹೆಗ್ಗೌರವ; ಏತಕ್ಕೆಂದರೆ ಆತ ತನ್ನ ದಿವ್ಯದೃಷ್ಟಿಯಿಂದ ಆಗಲೇ ಈ ವಿಸ್ಮಯ ತತ್ತ್ವವನ್ನು ಪರಿಭಾವಿಸಿ. ಲಿಯರ್ ಪ್ರಭುವಿಗೆ ಒಬ್ಬ ಹಾಸ್ಯಗಾರನನ್ನು ಸಂಗಾತಿಯಾಗಿಸಿದೆ. ಬಾಹ್ಯವಾಗಿ ಆಭಾಸವೆಂದು ತೋರುವ ಅಬದ್ಧವೂ ಗಾಂಬೀರ್ಯದೊಡನೆ ಮೇಳಗೊಳ್ಳಬಲ್ಲುದು. ಎಂಬುದರ ಧೃಢೀಕರಣವೇ ಆ ಮಹಾಕವಿಯ ಉದ್ದೇಶ. ಕಾರ್ನೀಲನ ನಾಟಕದಲ್ಲಿ ಐದಾರು ಗಂಟೆ ಅಧಿಕವಾಯ್ತೆಂದು ಹಗರಣ ಎಬ್ಬಿಸದ ಪಂಡಿತರು ಪ್ರಾಮಾಣಿಕರೆ ಆದರೆ ಅವರ ವಿವೇಚನೆಯಲ್ಲಿ ಕೊರೆ ಇದೆ, ಅಷ್ಟೆ.

ಗಂಭೀರ ನಾಟಕ ಪ್ರೇಕ್ಷಕರು ಅಥವಾ ಓದುಗರ ಮೇಲೆ ಬೀರುವ ಪರಿಣಾಮ ಏನು? ಮರುಕ ಭೀತಿಗಳ ಪ್ರಚೋದನೆ, ಅದರ ಮೂಲಕ ನೋಟಕರ ಮನಸ್ಸಿನ ಶುದ್ಧೀಕರಣ (ಕತಾರ್ಸಿಸ್). ಈ ಮಾತು ಪಾಶ್ಚಾತ್ಯರಲ್ಲಿ ಹೆಚ್ಚು ಕಡಿಮೆ ಎಲ್ಲರ ಬಾಯಿನಲ್ಲೂ ಬಂದಿದೆ. ಅವರಿಗೆ ಅದೊಂದು ಸ್ವಯಂವೇದ್ಯ ಸಿದ್ಧಾಂತ. ಅದು ಅಷ್ಟೊಂದು ನೇರ್ಪಾದದ್ಧಲ್ಲ ಎಂಬ ಶಂಕೆ ಹಲವು ಯೋಚನಾಪರರಿಗೆ ಹಿಂದಾಗಲೇ ಹೊಳೆದಿತ್ತು. ಕೆಲವರು ಮರುಕ ಭೀತಿಗಳ ಜೊತೆಗೆ ಅಚ್ಚರಿ, ಮೆಚ್ಚಿಕೆಯನ್ನು ಸೇರಿಸಬೇಕು ಎಂದು ಹೇಳಿದರು. ಅಷ್ಟೇ ಸಾಕೆ? ಗಂಭೀರನಾಟಕವನ್ನು ನೋಡುವಾಗಲೊ ಪಠಿಸುವಾಗಲೊ ನಮ್ಮ ಅಂತರ್ಯದಲ್ಲಿ ಸದಾಗ್ರಹ, ವ್ಯಸನ, ಹರ್ಷೋಲ್ಲಾಸ, ಆಶಾಭಂಗ, ನಿರಾಶೇ ಮತ್ತು ಆಶೆ ಇತ್ಯಾದಿ ಭಾವಗಳು ಏಳುತ್ತ ಬೀಳುತ್ತ ನರ್ತನಗೈಯುವುದಿಲ್ಲವೇ? ಹೀಗೆ ಭಾವಗಳ ಪಟ್ಟಿಯನ್ನು ಲಂಬಿಸಬಹುದಲ್ಲವೇ? ಲಂಬಿಸಿದರೆ ಉಪಯೋಗವುಂಟೆ? ಅಲ್ಲದೆ ಯಾರ ಯಾರಲ್ಲಿ ಯಾವ ಯಾವ ಭಾವಗಳು ಪ್ರಮುಖವಾಗಿ ಕಾಣಬರುತ್ತವೊ ಹೇಳಿ ಮುಗಿಸಲಾದಿತೇ? ಹಲವು ರಾಗಗಳನ್ನು ಉದ್ರೇಕಗೊಳಿಸಿ ಹೊರಗೆಳೆದು ತನ್ಮೂಲಕ ಅವನ್ನು ಶಮನ ಮಾಡಿ, ಕೊನೆಗೆ ಚಿತ್ತಸ್ಥೈರ್ಯ ಸಮಾಧಾನ ಪ್ರಶಾಂತ ಸ್ಥಿತಿಗೆ ಬರುವಂತೆ ಮಾಡುವುದೇ ಗಂಭೀರ ನಾಟಕದ ಮಹೋಪಕಾರ. ಆ ಕಾರಣದಿಂದಲೇ ನಾವು ಅದನ್ನು ತಿರುತಿರುಗಿ ವೀಕ್ಷಿಸುತ್ತೇವೆ, ಓದುತ್ತೇವೆ.

ಜಪಾನಿನ ನೋ ನಾಟಕಗಳನ್ನು ಬಿಟ್ಟರೆ ಪೂರ್ವವಲಯದಲ್ಲಿ ಗಂಭೀರ ನಾಟಕವೇ ಇಲ್ಲ-ಎಂಬ ದರ್ಪದ ಅಭಿಶಾಪವಿದೆ. ಆ ಸಂಕುಚಿತ ದೃಷ್ಟಿಗೆ ಗಂಭೀರ ನಾಟಕ ಒಂದೇ ಬಗೆಯದು ಎಂಬ ಅರ್ಧ ತಿಳಿವಳಿಕೆ ಕಾರಣ. ನಾಟಕದ ಅಂತ್ಯ ಮುಖವಲ್ಲ ಎಂಬ ಮಾತನ್ನು ಹಿಂದೆಯೇ ನಿರೂಪಿಸಿದ್ದಾಗಿದೆ. ಆದ್ದರಿಂದ ಭಾಸ ಭವಭೂತಿ ಕಾಳಿದಾಸರ ಹಲವು ನಾಟಕಗಳು ನಿಶ್ಚಯವಾದ ಅರ್ಥದಲ್ಲಿ ಟ್ರ್ಯಾಜಡಿ-ಗಂಭೀರ ನಾಟಕ, ರಾಮ ಸೀತೆ, ದುಷ್ಯಂತ ಶಕುಂತಲೇ, ವತ್ಸರಾಜ ವಾಸದತ್ತೆಯರು ಆ ಕವಿಗಳ ಶಿಲ್ಪದಂತೆ ಗಂಭೀರ ನಾಯಕ ನಾಯಕಿಯರೆ. ಹಾಗೆ ಹೇಳಲು ಯಾವ ಹೆದರಿಕೆ ಹಿಂಜರಿಕೆಗಳೂ ಇಲ್ಲ. ಗದಾಯುದ್ಧ ನಾಟಕಂ ರನ್ನನ ಆಶಯದಂತೆ ಭೀಮಸೇನನ ಸಿಂಹಾಸನ ಆರೋಹಣೆಯಿಂದ ಸಮಾಪ್ತಿಗೊಂಡಿದ್ದರೆ ಅದರ ಗಂಭೀರನಾಟಕತ್ವಕ್ಕೆ ಯಾವ ಲೋಪವೂ ಉಂಟಾಗುತ್ತಿರಲಿಲ್ಲ. ಹುಟ್ಟು ಸಾವು-ಅಷ್ಟೆಕ್ಕೇ ಪರ್ಯವಸಾನಗೊಳ್ಳುವುದು ಒಂದು ರೀತಿಯ ಗಂಭೀರನಾಟಕ; ಹುಟ್ಟು ಸಾವು ಮರುಹುಟ್ಟು-ಅಷ್ಟನ್ನೂ ಉಳ್ಳದ್ದು ಇನ್ನೊಂದು ರೀತಿಯ ಗಂಭೀರನಾಟಕ.

ಸಾಹಿತ್ಯ ವಿಮರ್ಶೆ ಅದರ ವ್ಯಾಖ್ಯಾನಗಳು ದೇಶದ ಅಥವಾ ಜಗತ್ತಿನ ಆಗು-ಹೋಗುಗಳ ಪ್ರಭಾವಕ್ಕೆ ಒಳಗಾಗುವುದು ವಿರಳವಲ್ಲ. (ಎರಡನೆಯ ಮಹಾಯುದ್ಧವು ಮಿಲ್ಟಿನನ ಸೇಟನನ ಪಾತ್ರದ ವ್ಯಾಖ್ಯಾನದ ಮೇಲೆ ಪ್ರಭಾವ ಬೀರಿದ್ದು, ರಷ್ಯದಲ್ಲಿ ಕಮ್ಯೂನಿಸ್ಟ್ ಆಡಳಿತ ಬಂದ ನಂತರ ಬಂದ ಸಾಹಿತ್ಯ ವಿಮರ್ಶೆ ಇವು ಉದಾಹರಣೆಗಳು) ನಾರ್ಜಿ ಜರ್ಮನಿಯಲ್ಲಿ, ಸ್ಟಾಲಿನನ ರಷ್ಯದಲ್ಲಿ ನಡೆದ ಘೋರ ಪಾತಕಗಳು ಗಂಭೀರ ನಾಟಕದ ಪರಿಕಲ್ಪನೆಯ ಮೇಲೆ ಪ್ರಭಾವ ಬೀರಿತು. ಪೀಟರ್ ಮರ್ಸರ್‍ನಂಥ ವಿಮರ್ಶಕರು, ಮನುಷ್ಯನಿಗೆ ತನ್ನ ಮಾನವೀಯ ಸ್ವಭಾವ ಮತ್ತು ನಾಗರಿಕತೆಗಳಿಗೆ ಸದಾ ವಿಧಿಯ ತರ್ಕರಹಿತ ಆಕಸ್ಮಿಕಗಳು ಮತ್ತು ತನ್ಮೋಳಗೆ ಇರುವ ಬರ್ಬರತೆ ಇವುಗಳಿಂದ ಅಪಾಯವಿದೆ ಎಂಬ ಅರಿವಿದೆ, ಈ ಅರಿವು ಗಂಭೀರ ನಾಟಕದಲ್ಲಿ ಪ್ರಕಟವಾಗುತ್ತದೆ ಎನ್ನುತ್ತಾರೆ.

ದುಃಖ, ನೋವುಗಳನ್ನು ಪ್ರದರ್ಶಿಸುವ ಗಂಭೀರ ನಾಟಕವನ್ನು ಮನುಷ್ಯನು ನೋಡಲು ಬಯಸುವುದೇಕೆ ಎಂಬ ಪ್ರಶ್ನೆಗೆ ಮನೋವಿಜ್ಞಾನಿಗಳು ಬೇರೆ ಬೇರೆ ಉತ್ತರಗಳನ್ನು ಕೊಟ್ಟಿದ್ದಾರೆ. ಪ್ರೇಕ್ಷಕನಿಗೆ, ತನಗೆ ಈ ಕಷ್ಟ ನೋವುಗಳು ಪ್ರಾಪ್ತವಾಗಲಿಲ್ಲವಲ್ಲ ಎಂಬ ಸಮಾಧಾನವಿರುತ್ತದೆ ಎನ್ನುವುದು ಒಂದು ವಿವರಣೆ. ಮನುಷ್ಯನಲ್ಲಿ `ಸ್ಯಾಡಿಸಂ ಅಥವಾ ಇನ್ನೊಬ್ಬರ ನೋವನ್ನು ಕಂಡು ಸಂತೋಷ ಪಡುವ ಪ್ರವೃತ್ತಿ ಇದೆ. ಇದರಿಂದ ಗಂಭೀರ ನಾಟಕವನ್ನು ನೋಡಲು ಬಯಸುತ್ತಾನೆ ಎನ್ನುವುದು ಮತ್ತೊಂದು ವಿವರಣೆ. ಗಂಭೀರನಾಟಕದಲ್ಲಿ ಕಷ್ಟ ನೋವುಗಳ ಪ್ರದರ್ಶನವಿದ್ದರೂ ಕೇಂದ್ರ ಪಾತ್ರಗಳಲ್ಲಿ ಯಾವುದಾದರೂ ವಿಶಿಷ್ಟವಾದ ಮೆಚ್ಚ ಬೇಕಾದ ಗುಣ ಇರುತ್ತದೆ. ಇತರ ಪಾತ್ರಗಳಲ್ಲಿಯೂ ನಮ್ಮ ಮೆಚ್ಚಿಕೆಯನ್ನು ಅಥವಾ ಅನುಕಂಪವನ್ನು ನಡೆಯುವ ಗುಣ ಇರಬಹುದು. (ಕುವೆಂಪು ಅವರ `ಬೆರಳ್-ಗೆ-ಕೊರಳ್‍ನಲ್ಲಿ ಏಕಲವ್ಯ ನಮ್ಮ ಮೆಚ್ಚಿಕೆಯನ್ನು ಪಡೆಯುತ್ತಾನೆ, ದ್ರೋಣ ಅನುಕಂಪವನ್ನು ಪಡೆಯುತ್ತಾನೆ). ನಾವೂ ಮನುಷ್ಯರಾದುದರಿಂದ, ಕಷ್ಟ-ನೋವುಗಳ ದೃಶ್ಯದಲ್ಲಿಯೂ ಮನುಷ್ಯನ ಘನತೆ, ಒಳ್ಳೆಯತನಗಳು ಪ್ರಕಟಿತವಾಗುವುದರಿಂದ ನಮಗೆ ಮೆಚ್ಚಿಕೆ ಸಮಾಧಾನಗಳಾಗುತ್ತವೆ. ಇದರಿಂದ ಗಂಭೀರ ನಾಟಕವನ್ನು ನೋಡಲು ಬಯಸುತ್ತೇವೆ ಎನ್ನುವುದು ಸಮರ್ಪಕವಾದ ವಿವರಣೆ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
  • Taplin, Oliver; Billings, Joshua. "What is Tragedy?" (podcast). UK: Oxford University. Archived from the original on 2020-08-09. Retrieved 2019-04-21..
  • Aristotle. "Poetics" (online ed.). Tufts..
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: