ಖಾರವೇಲ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಖಾರವೇಲ- ಕ್ರಿ. ಪೂ. 1ನೆಯ ಶತಮಾನದ ಉತ್ತರಾರ್ಧದಲ್ಲಿ ಕಳಿಂಗ ದೇಶವನ್ನಾಳುತ್ತಿದ್ದ ದೊರೆ. ಈತನದು ಚೇದಿವಂಶ. ಮೇಘವಾಹನ ಈತನ ಮೂಲಪುರುಷನೆಂದು ಪರಿಗಣಿಸಲಾಗಿದೆ. ಭುವನೇಶ್ವರದ (ಒರಿಸ್ಸ) ಬಳಿಯ ಉದಯಗಿರಿ ಬೆಟ್ಟದ ಹಾಥಿಗುಂಫಾ ಎಂಬ ಗವಿಯಲ್ಲಿ ಖಾರವೇಲನ ಪರಾಕ್ರಮವನ್ನು ಬಣ್ಣಿಸುವ ಶಾಸನವಿದೆ. ಈತ ಶಾತವಾಹನ ಕುಲದ ಸಾತಕರ್ಣಿಯೊಂದಿಗೆ ಯುದ್ಧ ಮಾಡಿದ, ವಿದರ್ಭದ ಭೋಜನನ್ನೂ ರಠಿಕರನ್ನೂ ಸೋಲಿಸಿದ, ಅಂಗ ಮತ್ತು ಮಗಧ ರಾಜ್ಯಗಳ ಮೇಲೆ ವಿಜಯಯಾತ್ರೆ ನಡೆಸಿದ, ಎಂದು ಮುಂತಾಗಿ ಈತನ ಸಾಧನೆಗಳ ವಿವರಗಳು ಇದರಿಂದ ತಿಳಿಯುತ್ತವೆ. ಈತ ಜೈನಮತಾವಲಂಬಿ; ಆದರೂ ಅನ್ಯಮತಗಳಿಗೆ ಪುರಸ್ಕಾರ ನೀಡಿದ. ಇವನಿಂದ ಸಂಗೀತಾದಿ ಕಲೆಗಳಿಗೆ ಪ್ರೋತ್ಸಾಹ ಲಭ್ಯವಾಯಿತು. ಈ ಶಾಸನದಲ್ಲಿ ಈತನನ್ನು ಕ್ಷೇಮರಾಜ, ವೃದ್ಧರಾಜ, ಭಿಕ್ಷುರಾಜ, ಧರ್ಮರಾಜ ಎಂದು ಪ್ರಶಂಸಿಸಲಾಗಿದೆ.
ಖಾರವೇಲನ ಶಾಸನಗಳು
ಬದಲಾಯಿಸಿಖಾರವೇಲ ಮಹಾರಾಜನ ಎರಡು ಶಾಸನಗಳು ಒರಿಸ್ಸದಲ್ಲಿ ಭುವನೇಶ್ವರದ ಬಳಿಯ ಉದಯಗಿರಿ-ಖಂಡಗಿರಿ ಪರ್ವತಶ್ರೇಣಿಯ ಹಾಥಿಗುಂಫಾ ಮತ್ತು ಮಂಚಪುರಿ ಗುಹೆಗಳಲ್ಲಿ ದೊರೆತಿವೆ. ಎರಡೂ ಶಾಸನಗಳೂ ಬ್ರಾಹ್ಮೀ ಲಿಪಿ ಮತ್ತು ಪ್ರಾಕೃತ ಭಾಷೆಯಲ್ಲಿವೆ.
ಮಂಚಪುರಿ ಗುಹಾಶಾಸನ
ಬದಲಾಯಿಸಿಮಂಚಪುರಿ ಗುಹಾಶಾಸನ ಮೂರೇಸಾಲುಗಳಿಂದ ಕೂಡಿದೆ. ಅರ್ಹಂತನ ಪ್ರಾಸಾದವನ್ನೂ (ಶಾಸನವನ್ನು ಕೊರೆಯಲಾಗಿರುವ) ಕಳಿಂಗದ ಶ್ರಮಣರ ಗುಹೆಯನ್ನೂ ಕಳಿಂಗ ಚಕ್ರವರ್ತಿ ಖಾರವೇಲನ ಅಗ್ರಮಹಿಷಿ ಮಾಡಿಸಿದಳೆಂದು ತಿಳಿದುಬರುತ್ತದೆ.
ಹಾಥಿಗುಂಫಾ ಶಾಸನ
ಬದಲಾಯಿಸಿಖಾರವೇಲನ ಹಾಥಿಗುಂಫಾ ಶಾಸನವು ಹಲವು ದೃಷ್ಟಿಗಳಿಂದ ಐತಿಹಾಸಿಕ ಮಹತ್ತ್ವದ್ದಾಗಿದೆ. ಹದಿನೇಳು ಸಾಲುಗಳಲ್ಲಿ ಕೊರೆಯಲಾಗಿರುವ ಈ ಶಾಸನದ ಪಾಠ ಖಾರವೇಲನ ಹುಟ್ಟಿನಿಂದ, ಮೂವತ್ತೇಳು ವರ್ಷಗಳವರೆಗಿನ ಅವನ ಜೀವನದ ಒಂದು ಸಂಕ್ಷಿಪ್ತ ಪರಿಚಯವನ್ನು ಒದಗಿಸಿಕೊಡುವ ರೀತಿಯಲ್ಲಿ ರಚಿತವಾಗಿದೆ.
ಶಾಸನದಲ್ಲಿ ನಮೂದಿಸಲಾಗಿರುವ ಮುಖ್ಯ ವಿಷಯಗಳ ಸಾರಾಂಶ ಹೀಗಿದೆ: ಆರ್ಯ, ಮಹಾರಾಜ, ಮಹಾಮೇಘವಾಹನ, ಚೇದಿರಾಜ ವಂಶವರ್ಧನ, ಕಳಿಂಗಾಧಿಪತಿ ಖಾರವೇಲ (ತನ್ನ ಜೀವನದ ಮೊದಲ) 15 ವರ್ಷಗಳನ್ನು ಬಾಲಕ್ರೀಡೆಗಳಲ್ಲಿ ಕಳೆದ ಅನಂತರ ಓದುಬರಹ, ಆಡಳಿತ,ಹಣಕಾಸು, ಗಣಿತ ಮತ್ತು ಕಾನೂನು ವ್ಯವಸ್ದೆಗೆ ಸಂಬಂದಿಸಿದಂತೆ ಸೂಕ್ತ ಶಿಕ್ಷಣ ಪಡೆದನು. ಸಕಲ ಶಾಸ್ತ್ರಗಳಲ್ಲೂ ನೈಪುಣ್ಯವನ್ನು ಗಳಿಸಿ ಒಂಬತ್ತು ವರ್ಷಗಳ ಕಾಲ ಯುವರಾಜನಾಗಿ ಮೆರೆದ. ಹೀಗೆ ಇಪ್ಪತ್ನಾಲ್ಕು ವರ್ಷದವನಿದ್ದಾಗ ಕಳಿಂಗ ರಾಷ್ಟ್ರದ ಮಹಾರಾಜನಾಗಿ ಪಟ್ಟಗಟ್ಟಿಸಿಕೊಂಡು, ಚಂಡಮಾರುತದ ಹಾವಳಿಯಿಂದ ಜೀರ್ಣವಾಗಿದ್ದ ಕಳಿಂಗನಗರದ ಗೋಪುರ, ಪ್ರಾಕಾರ, ನಿವೇಶನ ಇವನ್ನು ತನ್ನ ಆಳ್ವಿಕೆಯ ಮೊದಲ ವರ್ಷದಲ್ಲಿ ಪುನರುದ್ಧಾರಗೊಳಿಸಿದ. ಎರಡನೆಯ ರಾಜ್ಯಸಂವತ್ಸರದಲ್ಲಿ ಸಾತಕರ್ಣಿಯ ಪ್ರಭಾವವನ್ನು ಕಡೆಗಣಿಸಿ ತುರಗ ಗಜ ಪದಾತಿ ರಥಗಳಿಂದ ಕೂಡಿದ ತನ್ನ ಸೈನ್ಯವನ್ನು ಪಶ್ಚಿಮದ ಪ್ರದೇಶಗಳಿಗೆ ಕಳುಹಿಸಿ ಕೃಷ್ಣವೇಣ್ಣಾನದೀ ತಟದ ಅಸಿಕ (ಋಷಿಕ್) ನಗರವನ್ನು ಆಕ್ರಮಿಸಿದ. ಗಂಧರ್ವವಿದ್ಯೆಯಲ್ಲಿ ಪರಿಣತನಾದ ಖಾರವೇಲ ಮೂರನೆಯ ವರ್ಷದಲ್ಲಿ ನೃತ್ಯಗೀತ ವಾದ್ಯಾದಿ ಪ್ರದರ್ಶನಗಳನ್ನು ಏರ್ಪಡಿಸಿ ರಾಜಧಾನಿಯ ಜನರನ್ನು ಸಂತೋಷಗೊಳಿಸಿದ. ನಾಲ್ಕನೆಯ ವರ್ಷದಲ್ಲಿ ರಠಿಕ ಮತ್ತು ಭೋಜಕ ಜನಾಂಗದವರು ತನ್ನ ಪಾದಗಳಿಗೆ ಎರಗುವಂತೆ ಮಾಡಿದ. ಐದನೆಯ ವರ್ಷದಲ್ಲಿ ಹಿಂದೆ ನಂದರಾಜ ತೋಡಿಸಿದ್ದ ಕಾಲುವೆಯ ನೀರು ತನ್ನ ರಾಜಧಾನಿಯನ್ನೂ ತಲುಪುವಂತೆ ಮಾಡಿದನಷ್ಟೇ ಅಲ್ಲದೆ ತನ್ನ ಆಳ್ವಿಕೆಯ ಆರನೆಯ ವರ್ಷದಲ್ಲಿ ನಗರದ ಹಾಗೂ ಜನಪದದ ಪ್ರಜೆಗಳಿಗೆ ಅಸಂಖ್ಯಾತ ಧನಕನಕಾದಿಗಳನ್ನು ಧಾರೆಯೆರೆದ. ಏಳನೆಯ ವರ್ಷದಲ್ಲಿ ಅವನ ಪಟ್ಟದರಸಿ ಅವನ ಶಿಶುವಿನ ತಾಯಾದಳು. ಎಂಟನೆಯ ವರ್ಷದಲ್ಲಿ ಗೊರಧಗಿರಿಯನ್ನು ಆಕ್ರಮಿಸಿಕೊಂಡು ರಾಜಗೃಹ ನಗರಕ್ಕೆ ಯಶಸ್ವಿಯಾಗಿ ಮುತ್ತಿಗೆ ಹಾಕಿದ. ಈ ಸುದ್ಧಿ ತಿಳಿದ ಯವನ ರಾಜ ದಿಮಿತ ಮಧುರೆಗೆ ಪಲಾಯನಗೈದ. ಅದೇ ವರ್ಷದಲ್ಲಿ ಖಾರವೇಲ ಬ್ರಾಹ್ಮಣರಿಗೆ ಕರಪರಿಹಾರ ನೀಡಿದ. ತನ್ನ ಆಳ್ವಿಕೆಯ ಒಂಬತ್ತನೆಯ ವರ್ಷದಲ್ಲಿ ಮೂವತ್ತೆಂಟು ಲಕ್ಷ ಮುದ್ರೆಗಳ ವೆಚ್ಚದಲ್ಲಿ ಮಹಾ ವಿಜಯವೆಂಬ ಅರಮನೆಯನ್ನು ನಿರ್ಮಿಸಿದ. ಹತ್ತನೆಯ ವರ್ಷದಲ್ಲಿ ಭಾರತ ವರ್ಷದುದ್ದಕ್ಕೂ ದಿಗ್ಜಿಜಯ ಪ್ರಯಾಣವನ್ನು ಕೈಗೊಂಡ. ಹನ್ನೊಂದನೆಯ ವರ್ಷದಲ್ಲಿ, ಪಲಾಯನಗೈದ ವೈರಿರಾಜರುಗಳ ಮಣಿ ರತ್ನಗಳನ್ನು ವಶಪಡಿಸಿಕೊಂಡ. ಪೂರ್ವದಲ್ಲಿ ರಾಜಧಾನಿ ಪಟ್ಟಣವಾಗಿ ಮೆರೆದಿದ್ದ ಪೀಥುಂಡವೆಂಬ ನಗರವನ್ನು ನೆಲಸಮ ಮಾಡಿ, ತನ್ನ ರಾಷ್ಟ್ರದ ಹಿತಕ್ಕೆ ಕಂಟಕಪ್ರಾಯವಾಗಿದ್ದ ತ್ರಮಿರ ದೇಶಗಳ ಒಕ್ಕೂಟವನ್ನು ಮುರಿದುಹಾಕಿದ. ಹನ್ನೆರಡನೆಯ ವರ್ಷದಲ್ಲಿ ಉತ್ತರಾಪಥದ ಅರಸುಗಳನ್ನು ಸೋಲಿಸಿ, ಮಗಧದವರಲ್ಲಿ ಭಯ ಹುಟ್ಟಿಸಿ, ಆ ದೇಶದ ಅರಸು ಬೃಹಸ್ಪತಿ ಮಿತ್ರ ತನಗೆ ತಲೆಬಾಗುವಂತೆ ಮಾಡಿದ. ಅಲ್ಲದೆ, ಹಿಂದೆ ನಂದರಾಜ ಸ್ಥಾನಾಂತರಗೊಳಿಸಿದ್ದ ಕಳಿಂಗದ ಜಿನಬಿಂಬವನ್ನು ಪುನಃ ಪ್ರತಿಷ್ಠಾಪಿಸಿ, ಅಂಗ, ಮಗಧ ರಾಷ್ಟ್ರಗಳ ಸಿರಿಸಂಪತ್ತುಗಳನ್ನು ತನ್ನವಾಗಿಸಿಕೊಂಡ. ಗೋಪುರಗಳನ್ನೂ ತೋರಣಗಳಿಂದ ಅಲಂಕೃತವಾದ ಶಿಖರಗಳನ್ನೂ ಅದ್ಭುತವಾದ ಗಜಶಾಲೆಯನ್ನೂ ನಿರ್ಮಿಸಿದ. ಪಾಂಡ್ಯರಾಜನಿಂದ ಮುಕ್ತಮಣಿರತ್ನಗಳನ್ನು ಕಪ್ಪಗೊಂಡ. ಹದಿಮೂರನೆಯ ವಿಜಯರಾಜ್ಯ ಸಂವತ್ಸರದಲ್ಲಿ ಶ್ರವಣರಿಗಾಗಿ ಕುಮಾರೀ ಪರ್ವತದಲ್ಲಿ ಆಶ್ರಯ ಗುಹೆಗಳನ್ನು ಕೊರೆಯಿಸಿದ. ಹೀಗೆ ಸರ್ವ ದೇವಾಲಯಗಳ ಸಂಸ್ಕಾರಕಾರಕನಾದ ಮಹಾವಿಜಯ ಖಾರವೇಲ ಶುಭಘಟನೆಗಳನ್ನು ವೀಕ್ಷಿಸುತ್ತ, ಕೇಳುತ್ತ ಅನುಭವಿಸುತ್ತ, ಮೆರೆದಿದ್ದ.
ಹೀಗೆ ರಾಜನೊಬ್ಬನ ಸಾಧನೆಗಳನ್ನು ವರ್ಷದಿಂದ ವರ್ಷಕ್ಕೆ ಪಟ್ಟಿ ಮಾಡಿ ಹೇಳುವ ಹಾಥಿಗುಂಫಾ ಶಾಸನ ಭಾರತದ ಶಾಸನಕ್ಷೇತ್ರದಲ್ಲಿ ಅದ್ವಿತೀಯವಾಗಿಯೆ ಉಳಿದಿದೆ. ಅದರಲ್ಲಿ ಉಕ್ತರಾಗಿರುವ ಸಾತಕರ್ಣಿ, ದಿಮಿತ ಮುಂತಾದವರು, ಖಾರವೇಲನ ಸಮಕಾಲಿಕರು, ಯಾವ ಕಾಲದವರೆಂಬುದು ಖಚಿತವಾಗಿ ತಿಳಿದಿಲ್ಲವಾದ ಕಾರಣ ಲಿಪಿ ಶಾಸ್ತ್ರವನ್ನೂ ಶಾಸನ ಪಾಠದ ಓಜೋಗುಣ ಕಾವ್ಯಶೈಲಿಯನ್ನೂ ಆಧಾರವಾಗಿಟ್ಟುಕೊಂಡು ಖಾರವೇಲ ಕ್ರಿ.ಪೂ. 1ನೆಯ ಶತಮಾನದ ಉತ್ತರಾರ್ಧದಲ್ಲಿ ರಾಜ್ಯವಾಳಿದನೆಂದು ಊಹಿಸಬೇಕಾಗಿದೆ. ಅವನು ಪರಮ ಜಿನಭಕ್ತನಿದ್ದನೆಂಬುದು ಮೇಲೆ ಚರ್ಚಿಸಲಾಗಿರುವ ಅವನ ಎರಡು ಶಾಸನಗಳಿಂದ ವ್ಯಕ್ತವಾಗುತ್ತದೆ.
ಬ್ರಾಹ್ಮಿ ಲಿಪಿಯಲ್ಲಿ ಪ್ರಾಕೃತ ಭಾಷೆಯಲ್ಲಿ ಕೆತ್ತಲಾಗಿರುವ ಹತಿಗುಂಫ ಶಾಸನವು ಕ್ರಿ.ಪೂ. ಸುಮಾರು ೧೬೦ ರಲ್ಲಿ ರಚಿತವಾಯಿತೆಂದು ತಿಳಿದು ಬಂದಿದೆ. ಕಳಿಂಗದ ಖಾರವೆಲನು ಕ್ರಿ.ಪು.೧೭೬ರಿಂದ ೧೬೦ರವರೆಗೆ ಆಳಿದನು.