ಖಲೀಲ್ ಜಿಬ್ರಾನ್
ಖಲೀಲ್ ಜಿಬ್ರಾನ್ (1883-1931)- ಲೆಬನಾನಿನಲ್ಲಿ ಜನಿಸಿ ಉತ್ತರ ಅಮೆರಿಕದಲ್ಲಿ ತನ್ನ ಜೀವನದ ಬಹುಭಾಗವನ್ನು ಕಳೆದ ದಾರ್ಶನಿಕ ಕವಿ, ಚಿತ್ರಕಾರ. ಇಪ್ಪತ್ತಕ್ಕೂ ಹೆಚ್ಚಿನ ಅಪೂರ್ವ ಕೃತಿಗಳಿಂದ, ಸಹಸ್ರಾರು ವಚನ-ಕವನಗಳಿಂದ, ನೂರಾರು ಆನುಭಾವಿಕ ಚಿತ್ರಗಳಿಂದ ಪೂರ್ವ ಪಶ್ಚಿಮದವರ ಪ್ರೀತಿ ಗೌರವಗಳಿಗೆ ಪಾತ್ರನಾದವ. ತನ್ನ ಅಮೂರ್ತ ಚಿಂತನೆಗಳಿಗೆ, ಕಾವ್ಯಮಯ ಉಕ್ತಿಗಳಿಗೆ, ಶಬ್ದಶಿಲ್ಪಶೈಲಿಗೆ ಪ್ರಸಿದ್ಧನಾದವ.
ಬದುಕು ಮತ್ತು ಬರಹ
ಬದಲಾಯಿಸಿಈತನ ತಂದೆ ಖಲೀಲ್ ಜಿಬ್ರಾನ್; ತಾಯಿ ಕಮಿಲಾ ರಾಹ್ಮಿ. ತುಂಬ ಬುದ್ಧಿಶಾಲಿನಿಯಾದ ಆಕೆಗೆ ಮಧುರವಾದ ಕಂಠವೂ ಇತ್ತು. ಆಕೆಯ ಮಧುರವಾಣಿ ಇಂದಿಗೂ ಲೆಬನಾನಿನಲ್ಲಿ ಮನೆಯ ಮಾತಾಗಿದೆಯಂತೆ. ಬಾಲಕ ಜಿಬ್ರಾನ್ ಬೆಟ್ಟ ಮರುಭೂಮಿಗಳನ್ನು ಕುರಿತು ತನ್ನ ತಾಯಿ ಮಧುರವಾಗಿ ಹಾಡುತ್ತಿದ್ದುದನ್ನು ಗಂಟೆಗಟ್ಟಲೆ ಆಲಿಸುತ್ತಿದ್ದನಂತೆ.
ಜಿಬ್ರಾನನ ಬಾಲ್ಯ ವಿದ್ಯಾಭ್ಯಾಸವೆಲ್ಲ ಮನೆಯಲ್ಲೇ ನಡೆಯಿತು. ಅರಬ್ಬೀ, ಫ್ರೆಂಚ್ ಮತ್ತು ಇಂಗ್ಲಿಷ್ ಭಾಷೆಗಳನ್ನು ಕಲಿತ. 1894ರಲ್ಲಿ ತಾಯಿ ತಂಗಿಯರ ಜೊತೆ ಬಾಸ್ಟನ್ನಿಗೆ ಬಂದು ಎರಡು ವರ್ಷ ಇದ್ದ. ಅರಬ್ಬೀ ಭಾಷೆಯ ಕರೆ ಅದಮ್ಯವಾಯಿತು. ಮತ್ತೆ ಊರಿಗೆ ಹಿಂದಿರುಗಿದ. ಬೇರೂಟ್‍ನಲ್ಲಿ ಕಾಲೇಜಿಗೆ ಸೇರಲು ಹೋದಾಗ ಅಲ್ಲಿನ ಅಧಿಕಾರಿಗಳು ನಿನ್ನ ಜೊತೆ ಯಾರಿದ್ದಾರೆ ಎಂದು ಪ್ರಶ್ನಿಸಿದಾಗ ಜಿಬ್ರಾನ್ ಸೆಟೆದು ನಿಂತು ನನ್ನ ಜೊತೆ ನಾನಿದ್ದೇನೆ ಎಂದ. ಹೀಗೆ ಇನ್ನೂ ತಾರುಣ್ಯಕ್ಕೆ ಕಾಲಿಡುವ ಮುನ್ನವೆ ಈತನಲ್ಲಿ ಆಧ್ಯಾತ್ಮಿಕ ಜಾಗೃತಿ ಉಂಟಾಗಿತ್ತು. ಆಧ್ಯಾತ್ಮಿಕ ಅರಿವಿನಲ್ಲಿಯೇ ಈತ ಬಾಳಿದ; ಬರೆದ; ಹಾಡಿದ.
ಬೇರೂಟ್‍ನಲ್ಲಿದ್ದಾಗಲೇ ಈತ ಅರಬ್ಬೀ ಭಾಷೆಯಲ್ಲಿ ತನ್ನ ಲೋಕಪ್ರಸಿದ್ಧವಾದ ದಿ ಪ್ರಾಫೆಟ್ (1923)-ಪ್ರವಾದಿ-ಎಂಬ ಕೃತಿಯನ್ನು ರಚಿಸಿದ್ದು. ಕವಿಗೆ ತನ್ನ ಜೀವಿತಕಾಲದಲ್ಲಿಯೇ ಅಪಾರ ಯಶಸ್ಸನ್ನು ತಂದ ಗ್ರಂಥವಿದು. ಮೂರು ವರ್ಷಗಳ ಅನಂತರ ಕಾಲೇಜು ಜೀವನ ಮುಗಿಸಿ ಉಚ್ಚ ತರಗತಿಯಲ್ಲಿ ತೇರ್ಗಡೆಯಾಗಿ ಹೊರಬಂದು ಪ್ಯಾರಿಸ್ಸಿಗೆ ಹೋದ. ಅಲ್ಲಿ ಚಿತ್ರಕಲೆಯ ಅಭ್ಯಾಸ ನಡೆಸಿದ. ಹಗಲೂ ರಾತ್ರಿ ನಡೆಸಿದ ಅಭ್ಯಾಸಗಳಿಂದಾಗಿ ಈತನ ಚೇತನ ಬಣ್ಣಗಳಲ್ಲಿ ಅದ್ದಿ ಹೋಗಿ ಮುಳುಗಿ, ತೇಲಿತು. ಈತನ ಕುಂಚ ಹೃದಯದ ಅನುಭವಗಳಿಗೆ ಬೇಕಾದ ಮಾತುಗಳನ್ನು ಬಣ್ಣಗಳಲ್ಲಿ ರೂಪಿಸುವುದನ್ನು ಕಲಿಯಿತು.
ಪ್ಯಾರಿಸಿನಲ್ಲಿ ಚಿತ್ರಕಲೆಯ ಅಭ್ಯಾಸ ಮಾಡುವಾಗ ಜಿಬ್ರಾನ್ ಅರಬ್ಬೀ ಭಾಷೆಯಲ್ಲಿ ಅನೇಕಾನೇಕ ವಿಷಯಗಳನ್ನು ಕುರಿತು ಬರೆದ (1901-1903). ಸ್ಪಿರಿಟ್ಸ್ ರೆಬೆಲಿಯಸ್ (ದಮನಗೊಳಿಸಲಾರದ ಚೇತನಗಳು) ಎಂಬ ಕೃತಿ ರಚಿತವಾದದ್ದು ಆಗಲೇ. ಆಗ ಈತನ ದೇಶ ತುರ್ಕೀ ಸಾಮ್ರಾಜ್ಯದ ದಬ್ಬಾಳಿಕೆಯಲ್ಲಿ ಸಿಕ್ಕಿ ನರಳುತ್ತಿತ್ತು. ಪ್ರಕಟವಾದ ಕೆಲವೇ ದಿನಗಳಲ್ಲಿ ಅದರ ಪ್ರತಿಗಳನ್ನು ಮಾರ್ಕೆಟ್ ಚೌಕದಲ್ಲಿ ಸುಡಲಾಯಿತು. ಇದು ಅಪಾಯಕಾರಿ, ಕ್ರಾಂತಿಕಾರಿ ಗ್ರಂಥ, ಯುವಕರಿಗೆ ವಿಷಪ್ರಾಯ-ಎಂದು ಪುರೋಹಿತ ವರ್ಗ ಹೇಳಿತು. ಚರ್ಚ್ ಈತನಿಗೆ ಬಹಿಷ್ಕಾರ ಹಾಕಿತು. ತುರ್ಕೀ ಸರ್ಕಾರ ಈತನ ಮೇಲೆ ಗಡೀಪಾರು ಆಜ್ಞೆ ಹೊರಡಿಸಿತು. ಆದರೆ 1908ರಲ್ಲಿ ಹೊಸ ಸರ್ಕಾರ ಬಂದಾಗ ಗಡೀಪಾರು ಆಜ್ಞೆ ರದ್ಧಾಯಿತು. ಏತನ್ಮಧ್ಯೆ, ಈತನ ಕಲಾಕೌಶಲವೂ ಬೆಳೆಯುತ್ತ ಹೋಯಿತು. 1904ರಲ್ಲಿ ಅಮೆರಿಕದಲ್ಲಿ ಈತನ ಚಿತ್ರಗಳ ಪ್ರದರ್ಶನ ನಡೆಯಿತು. ದುರಂತವೆಂದರೆ ಪ್ರದರ್ಶನ ನಡೆಯುತ್ತಿದ್ದ ಕಟ್ಟಡಕ್ಕೆ ಬೆಂಕಿ ಬಿದ್ದು ಈತನ ಸಮಸ್ತ ಕಲಾ ಸೃಷ್ಟಿಯೂ ಭಸ್ಮವಾಯಿತು. ಮತ್ತೆ ಪ್ಯಾರಿಸ್ಸಿಗೆ ಹೋಗಿ ಜಿಬ್ರಾನ್ ಕಲೆಯ ಅಧ್ಯಯನವನ್ನು ಮುಂದುವರಿಸಿದ. ತನ್ನ ಕವಿತೆಗಳನ್ನು ಚಿತ್ರಗಳನ್ನು ಅಪಾರವಾಗಿ ಜನ ಮೆಚ್ಚಿಕೊಂಡಾಗ ಅದರ ಪರಿವೆಯೇ ಇರದೆ ತಾನು ಈ ಲೋಕದಲ್ಲಿ ನಿತ್ಯನಿರಂತರ ಆಗಂತುಕ ಎಂಬ ಪ್ರಜ್ಞೆಯಲ್ಲಿಯೇ ಬಾಳಿದ.
ಜಿಬ್ರಾನ್ ಅರಬ್ಬೀ ಭಾಷೆಯಲ್ಲಿ ಬರೆದದ್ದೇ ಹೆಚ್ಚು. ಈತನ ಕೃತಿಗಳಲ್ಲಿ ಕೆಲವು ಇಂಗ್ಲಿಷಿಗೆ ಭಾಷಾಂತರವಾಗಿವೆ. ಕೆಲವಂತೂ ಈತ ಸತ್ತ ಅನೇಕ ವರ್ಷಗಳ ಮೇಲೆ ಭಾಷಾಂತರಗೊಂಡವು. ಸ್ಪಿರಿಟ್ಸ್ ರೆಬೆಲಿಯಸ್ ಕೃತಿಯ ಇಂಗ್ಲಿಷ್ ರೂಪ 1949ರಲ್ಲಿ ಪ್ರಕಟವಾಯಿತು. ಇದರಲ್ಲಿ ಪ್ರೀತಿಯ ಮಹತ್ತ್ವವನ್ನು ಸಮಾನತೆಯ ಘನತೆಯನ್ನು ಕುರಿತ ನಾಲ್ಕು ಕಥೆಗಳಿವೆ. ಈತನ ಮನಸ್ಸು ಇಂಥ ವಿಷಯಗಳಲ್ಲಿ ಸಂಪ್ರದಾಯದ ಇತಿಮಿತಿಗಳನ್ನು ಮೀರಿ ನಡೆದಿತ್ತು ಎಂಬುದು ಇದರಿಂದ ಗೊತ್ತಾಗುತ್ತದೆ. ಈತನ ಶೈಲಿಯೂ ಅಷ್ಟೆ, ವಿಶಿಷ್ಟವಾದುದು.
1920ರಲ್ಲಿ ಈತನ ದಿ ಫೋರ್‍ರನ್ನರ (ಅಗ್ರಗಾಮಿ) ಎಂಬ ಕೃತಿ ಪ್ರಕಟವಾಯಿತು. ಇದು ಸುಂದರವಾದ ದೃಷ್ಟಾಂತ ಕಥೆಗಳು ಹಾಗೂ ಕವನಗಳನ್ನೊಳಗೊಂಡ ಪುಟ್ಟ ಪುಸ್ತಕ.
ದಿ ವಾಂಡರರ್ (ಅಲೆಮಾರಿ) ಎಂಬುದು ದೃಷ್ಟಾಂತ ಕಥೆಗಳಿಂದ ತುಂಬಿದ ಈತನ ಇನ್ನೊಂದು ಗ್ರಂಥ. ಸ್ಯಾಂಡ್ ಅಂಡ್ ಪೋಮ್ (ಮರಳು-ನೊರೆ) ಎಂಬುದು ಜಿಬ್ರಾನನ ಮಾತುಕತೆಗಳಲ್ಲಿ ಚಿಮ್ಮಿದ ಹೊಳಹುಗಳನ್ನು ಈತನ ಗೆಳತಿ ಬಾರ್ಬರಾ ಯಂಗ್ ಗುರುತು ಹಾಕಿಕೊಂಡದ್ದರ ಫಲವಾಗಿ ಸಂಕಲನ ಗೊಂಡ ಕೃತಿ.
ಇಂಗ್ಲಿಷ್ ಭಾಷೆ ತನ್ನ ತಾಯಿನುಡಿಯಲ್ಲದಿದ್ದರೂ ಆ ಭಾಷೆಯಲ್ಲಿ ಈತ ಸೊಗಸಾಗಿ ಬರೆಯಬಲ್ಲವನಾಗಿದ್ದ ಎಂಬುದಕ್ಕೆ ಸಾಕ್ಷಿ ಈತನ ಜೀಸಸ್ (1928) ಕೃತಿ. ಮ್ಯಾಂಚೆಸ್ಟರ್ ಗಾರ್ಡಿಯನ್ ಪತ್ರಿಕೆ ಈ ಕೃತಿಯನ್ನು ವಿಮರ್ಶೆ ಮಾಡುತ್ತ ಸಮಕಾಲೀನ ಇಂಗ್ಲಿಷ್ ಲೇಖಕರಲ್ಲಿ ಅತ್ಯುತ್ತಮರಾದ ಆರು ಜನರ ಹೆಸರನ್ನು ಹೇಳಿ ಅವರಲ್ಲಿ ಈತನೂ ಒಬ್ಬನೆಂದಿದೆ.
ಈತನ ಜೀಸಸ್, ದಿ ಸನ್ ಆಫ್ ಮ್ಯಾನ್ (ಯೇಸು, ಮಾನವನ ಮಗ) ಎಂಬುದು ಒಂದು ಸೀಮಾಕೃತಿ. ಯೇಸುವಿನ ಮಾನವೀಯತೆ, ಅನುಕಂಪಗಳಿಂದ ಸ್ಫೂರ್ತಿಪಡೆದ ಜಿಬ್ರಾನ್ ಆ ಸ್ಪೂರ್ತಿಸ್ಥಿತಿಯಲ್ಲೇ ಹೇಳುತ್ತಾ ಹೋದಂತೆ ಈತನ ಗೆಳತಿ ಬಾರ್ಬರಾ ಯಂಗ್ ಈ ಕೃತಿಯನ್ನು ಬರೆದುಕೊಂಡಳು. ಯೇಸುವನ್ನು ಕಂಡವರು, ಬಲ್ಲವರು ಅವನನ್ನು ಕುರಿತು ಏನು ಹೇಳಿರಬಹುದು, ಹೇಗೆ ಹೇಳಿರಬಹುದು ಎಂಬುದನ್ನು ಕಲ್ಪನೆಯಲ್ಲಿ ಕಾಣುತ್ತಾ ಹೋದಂತೆ ರಚಿತವಾಗಿರುವ ಜೀವನಚರಿತ್ರೆ ಇದು. ಜಿಬ್ರಾನನ ವರ್ಣಶಿಲ್ಪ, ಕಾವ್ಯಶಕ್ತಿ ಎರಡೂ ಒಂದು ಕಡೆ ಅಭೂತಪೂರ್ವವಾಗಿ ಮಿಳಿತವಾಗಿದ್ದರೆ ಅದು ಈ ಕೃತಿಯಲ್ಲಿ.
ದಿ ಗಾರ್ಡನ್ ಆಫ್ ದಿ ಪ್ರಾಫೆಟ್ (ಪ್ರವಾದಿಯ ತೋಟ), ದಿ ಅರ್ತ್ ಗಾಡ್ಸ್ (ಭೂಮಿ ದೇವತೆಗಳು) ಮುಂತಾದವು ಈತನ ಇತರ ಕೃತಿಗಳು. 1919ರಲ್ಲಿ ಈತನ ಇಪ್ಪತ್ತು ರೇಖಾಚಿತ್ರಗಳು ಪ್ರಕಟವಾಗಿ ಅಮೆರಿಕದ ಕಲಾಜಗತ್ತಿಗೆ ಈತನ ಪರಿಚಯವಾಯಿತು. 1931ನೆಯ ಇಸವಿ ಏಪ್ರಿಲ್ 10ರಂದು ಅನಾರೋಗ್ಯದಿಂದಾಗಿ ಜಿಬ್ರಾನ್ ಅಸ್ಪತ್ರೆ ಸೇರಿ ಶಾಂತನಾಗಿ ಪ್ರಾಣಬಿಟ್ಟ. ಬಾಸ್ಟನ್ನಿನಿಂದ ಈತನ ದೇಹವನ್ನು ಲೆಬನಾನಿಗೆ ಒಯ್ದು ಅಂತ್ಯಕ್ರಿಯೆ ಮಾಡಲಾಯಿತು.