ಕ್ಷಯ ಮಾಸ ಎರಡು ಅಮಾವಾಸ್ಯೆಗಳ ಮಧ್ಯದಲ್ಲಿ ಎರಡು ಸೂರ್ಯ ಸಂಕ್ರಮಣಗಳು ಬರುವ ಚಾಂದ್ರಮಾಸ.

ಜ್ಯೋತಿಶ್ಯಾಸ್ತ್ರದಲ್ಲಿ ತಿಳಿಸಿರುವಂತೆ ಸೂರ್ಯನ ಮಂದೋಚ್ಚ ಮಿಥುನರಾಶಿಯಲ್ಲಿರುವಾಗ ಕಾರ್ತಿಕ ಮೊದಲು ಮೂರು ತಿಂಗಳ ಮಧ್ಯದಲ್ಲಿದು ಬರುತ್ತದೆ.

ಮಾಸಗಳು

ಬದಲಾಯಿಸಿ

ಶುಕ್ಲಪಕ್ಷಪಾಡ್ಯದಿಂದ ಪ್ರಾರಂಭವಾಗಿ ಅಮಾವಾಸ್ಯೆ ಮುಗಿಯುವ ವರೆಗಿನ ಕಾಲ ಒಂದು ಚಾಂದ್ರಮಾಸ. ಈ ಮಾಸ ಶುದ್ಧ ಅಧಿಕ ಕ್ಷಯ ಎಂದು ಮೂರು ವಿಧ.

ಶುದ್ಧಮಾಸ

ಬದಲಾಯಿಸಿ

ಚಾಂದ್ರಮಾಸ ಮಧ್ಯದಲ್ಲಿ ಸೂರ್ಯಸಂಕ್ರಮಣವಿದ್ದರೆ ಅದು ಶುದ್ಧ ಮಾಸ; ಚೈತ್ರದಿಂದ ಪ್ರಾರಂಭವಾಗಿ ಫಾಲ್ಗುನ ಪೂರ್ತಿ ಇರುವ ಹನ್ನೆರಡು ಮಾಸಗಳು ಶುದ್ಧ ಚಾಂದ್ರಮಾಸಗಳು.

ಅಧಿಕಮಾಸ

ಬದಲಾಯಿಸಿ

ಸೂರ್ಯಸಂಕ್ರಮಣವಿಲ್ಲದಿರುವುದು ಅಧಿಕಮಾಸ; ಮೂರು ವರ್ಷಗಳಿಗೆ ಒಂದು ಸಲ ಹನ್ನೆರಡು ತಿಂಗಳುಗಳಲ್ಲಿ ಒಂದೇ ಹೆಸರಿನ ಎರಡು ತಿಂಗಳು ಬಂದು ವರ್ಷ ಮಧ್ಯದಲ್ಲಿ ಹದಿಮೂರು ತಿಂಗಳುಗಳಾಗುತ್ತವೆ. ಆಗ ಒಂದೇ ಹೆಸರಿನ ಎರಡು ತಿಂಗಳುಗಳಲ್ಲಿ ಮೊದಲನೆಯದು ಅಧಿಕ ಮಾಸವಾಗುತ್ತದೆ. ಅಧಿಕ ಮಾಸ 29 ರಿಂದ 36 ತಿಂಗಳುಗಳ ಮಧ್ಯೆ ಒಮ್ಮೆ ಬರುತ್ತದೆ. ಇದರಂತೆ ಐದು ವರ್ಷಗಳಿಗೆ ಎರಡು ಅಧಿಕಮಾಸಗಳು ಬರುತ್ತವೆ.

ಕ್ಷಯ ಮಾಸ

ಬದಲಾಯಿಸಿ

ಎರಡು ಸೂರ್ಯ ಸಂಕ್ರಮಣಗಳಿರುವುದು ಕ್ಷಯ ಮಾಸ. ಕ್ಷಯ ಮಾಸ 19ರಿಂದ 141 ವರ್ಷಗಳ ಮಧ್ಯದಲ್ಲಿ ಒಮ್ಮೆ ಸಂಭವಿಸುತ್ತದೆ. 1963ನೆಯ ಡಿಸೆಂಬರ್ ಮಾಹೆಯಲ್ಲಿ ಮಾರ್ಗಶಿರಮಾಸ ಕ್ಷಯವಾಗಿತ್ತು. ಇದಕ್ಕೆ 141 ವರ್ಷಗಳ ಹಿಂದಿನ ಚಿತ್ರಭಾನು ಸಂವತ್ಸರದಲ್ಲಿ ಕ್ಷಯ ಮಾಸ ಬಂದಿತ್ತು. ಮುಂದಿನ 19 ವರ್ಷಗಳಲ್ಲಿ ಬರುವ ಸಂಭವವಿದೆ.

ಈ ಕ್ಷಯ ಮಾಸ ಬಂದಾಗ ಇದಕ್ಕೆ ಹಿಂದೆ ಒಂದು ಅಧಿಕ ಮಾಸವೂ ಮುಂದೆ ಬಂದು ಅಧಿಕ ಮಾಸವೂ ಬರುತ್ತದೆ. ಎರಡು ಅಧಿಕ ಮಾಸಗಳೂ ಒಂದೇ ಸಂವತ್ಸರದಲ್ಲಿ ಬರಬಹುದು. ಇಲ್ಲದೆ ಎರಡನೆಯ ಅಧಿಕಮಾಸ ಮುಂದಿನ ಸಂವತ್ಸರದ ಆರಂಭದಲ್ಲಿ ಬರಬಹುದು. ಕ್ಷಯಮಾಸವನ್ನು ದ್ವಿಸಂಕ್ರಾತಿ ಮಾಸ, ಮಲಮಾಸ, ಮಲಿಮ್ಲುಚಮಾಸ, ಅಂಹಸ್ಪತಿ ಎಂಬ ಹೆಸರುಗಳಿಂದಲೂ ಕರೆಯುವುದುಂಟು. ಕ್ಷಯಮಾಸ ಸಂಭವವನ್ನು ಭಾಸ್ಕರಾಚಾರ್ಯರು ಸಿದ್ಧಾಂತ ಶಿರೋಮಣಿ ಎಂಬ ಗ್ರಂಥದಲ್ಲಿ ಹೇಳಿದ್ದಾರೆ.

ಈ ಕ್ಷಯಮಾಸ ಒಂದೇ ಚಾಂದ್ರಮಾಸ ಮಾಸವಾದರೂ ಇದಕ್ಕೆ ಎರಡು ಚಾಂದ್ರಮಾನ ಮಾಸಗಳ ಲಕ್ಷಣ ಸರಿಹೊಂದುವುದರಿಂದ ಇದರಲ್ಲಿ ಎರಡು ಮಾಸಗಳು ಅಡಕವಾಗಿವೆ. ಎರಡು ಚಾಂದ್ರಮಾನಮಾಸಗಳ ಕರ್ತವ್ಯಗಳನ್ನು ಈ ಒಂದರಲ್ಲೇ ಮಾಡಬೇಕು. ಸ್ಮøತಿಸಂಗ್ರಹದಲ್ಲೂ ಕಾರಕಗೃಹ್ಯದಲ್ಲೂ ತಿಳಿಸಿರುವಂತೆ ಈ ಕ್ಷಯ ಮಾಸದಲ್ಲಿ ನಿತ್ಯ ನೈಮಿತ್ತಿಕ ಕಾರ್ಯಗಳನ್ನು ಮಾತ್ರ ಮಾಡಬೇಕು. ಮಂಗಳಕಾರ್ಯಗಳನ್ನು ಮಾಡಬಾರದು.

ಕ್ಷಯ ಮಾಸದಲ್ಲಿ ಜನನವಾಗಲೀ ಮರಣವಾಗಲೀ ಸಂಭವಿಸಿದರೆ ತಿಥಿಯ ಮೊದಲನೆಯ ಅರ್ಧಭಾಗದಲ್ಲಿ ಆದುದನ್ನು ಮೊದಲನೆಯ ತಿಂಗಳಿನಲ್ಲಿ ಆದಂತೆಯೂ ಎರಡನೆಯ ಅರ್ಧದಲ್ಲಿ ಆದುದನ್ನು ಎರಡನೆಯ ತಿಂಗಳಿನಲ್ಲಿ ಆದಂತೆಯೂ ಗೊತ್ತು ಮಾಡಿ ಮುಂದಿನ ವರ್ಷಗಳಲ್ಲಿ ನಡೆಸಬೇಕಾದ ತಿಥಿ ಮತ್ತು ಹುಟ್ಟಿದ ಹಬ್ಬದ ದಿನಗಳನ್ನು ನಿಷ್ಕರ್ಷಿಸಬೇಕು. ಉದಾಹರಣೆಗೆ 1963ನೆಯ ಶೋಭಕೃತ್ ವರ್ಷದಲ್ಲಿ ಮಾರ್ಗಶಿರ ಮಾಸ ಕ್ಷಯವಾಗಿದೆ. ಪುಷ್ಯಮಾಸವನ್ನೇ ಮಾರ್ಗಶಿರ ಮತ್ತು ಪುಷ್ಯ ಎಂಬ ಎರಡು ಹೆಸರುಗಳಿಂದ ಕರೆದು ಅದರಲ್ಲೇ ಆ ಎರಡು ತಿಂಗಳಿನ ಕರ್ತವ್ಯಗಳನ್ನು ನೆರವೇರಿಸಬೇಕು. ಇದರಲ್ಲಿ ತಿಥಿಯ ಪೂರ್ವಾರ್ಧ ಮಾರ್ಗಶಿರ ಮಾಸಕ್ಕೆ ಸೇರಿದ್ದು ಉತ್ತರಾರ್ಧ ಪುಷ್ಯ ಮಾಸಕ್ಕೆ ಸೇರಿದ್ದು. ಈ ಕ್ಷಯಮಾಸಕ್ಕೆ ಹಿಂದೆ ಅಶ್ವಯುಜ ಮಾಸ ಅಧಿಕವಾಗಿ ಬಂದಿದೆ. ಮುಂದಿನ ಕ್ರೋಧಿ ಸಂವತ್ಸರದ ಚೈತ್ರಮಾಸವೂ ಅಧಿಕವಾಗಿ ಬಂದಿದೆ. ಹೀಗೆ ಕ್ಷಯಮಾಸಕ್ಕೆ ಮೊದಲೂ ಅನಂತರವೂ ಅಧಿಕಮಾಸ ಬರುತ್ತದೆ. ಎರಡು ಅಧಿಕ ಮಾಸಗಳೂ ಒಂದೇ ವರ್ಷಮಧ್ಯದಲ್ಲಿ ಬಂದಾಗ ಒಂದು ಮಾಸ ನಿಜವಾದ ಅಧಿಕಮಾಸವಾಗಿ ಒಂದೇ ಹೆಸರಿನ ಎರಡು ಚಾಂದ್ರಮಾಸಗಳಿರುತ್ತವೆ. ಮತ್ತೊಂದರ ಎರಡು ತಿಂಗಳುಗಳಿರದೆ ಒಂದೇ ತಿಂಗಳಿರುತ್ತದೆ. ಎರಡನೆಯ ಮಾಸ ಕ್ಷಯವಾಗುತ್ತದೆ.

"https://kn.wikipedia.org/w/index.php?title=ಕ್ಷಯಮಾಸ&oldid=1152096" ಇಂದ ಪಡೆಯಲ್ಪಟ್ಟಿದೆ