ಕ್ವೋಮಿಂಟಾಂಗ್
ಕ್ವೋಮಿಂಟಾಂಗ್ 1928ರಿಂದ 1949ರ ವರೆಗೆ ಚೀನವನ್ನಾಳಿದ ಪಕ್ಷ. ರಾಷ್ಟ್ರೀಯ ಜನತಾ ಪಕ್ಷ ಎಂಬುದು ಈ ಶಬ್ದದ ಅರ್ಥ. ಚೀನೀ ರಾಜತ್ವವನ್ನು ಉರುಳಿಸುವ ಉದ್ದೇಶದಿಂದ ಕ್ರಾಂತಿ ಪಕ್ಷವಾಗಿ ಇದರ ಸ್ಥಾಪನೆಯಾಯಿತು. ಚೀನೀ ಗಣರಾಜ್ಯ ಸ್ಥಾಪನೆಯಾದಾಗ (1912) ಇದು ರಾಜಕೀಯ ಪಕ್ಷವಾಗಿ ಪರಿವರ್ತನೆಗೊಂಡಿತು. 1913ರಲ್ಲಿ ಸಂಭವಿಸಿದ ಕ್ಷಿಪ್ರಾಕ್ರಮಣದ ಫಲವಾಗಿ ಚೀನಿ ಸಂಪತ್ತು ವಿಸರ್ಜಿತವಾದಾಗ ಈ ಪಕ್ಷದ ನಾಯಕನಾದ ಸುನ್ ಯಾತ್-ಸೆನ್ ಇದನ್ನು ಶಿಸ್ತಿನಿಂದ ಕೂಡಿದ ಪಕ್ಷವಾಗಿ ಪರಿವರ್ತಿಸಿದ. 1923-24ರಲ್ಲಿ ಇದು ರಷ್ಯದ ಬಾಲ್ಷೆವಿಕ್ ಪಕ್ಷದ ಮಾದರಿಯಲ್ಲಿ ಸಂಘಟಿತವಾಯಿತು. ಸೋವಿಯೆತ್ ನೆರವು, ಚೀನೀ ಕಮ್ಯೂನಿಸ್ಟ್ ಪಕ್ಷದ ಸಹಕಾರ ಇವುಗಳಿಂದ ಆರಂಭದಲ್ಲಿ ಇದು ಬಹಳ ಮಟ್ಟಿಗೆ ಪ್ರಗತಿ ಹೊಂದಿತು. 1925ರಲ್ಲಿ ಸುನ್ ಯಾತ್-ಸೆನ್ ತೀರಿಕೊಂಡ. ಪಕ್ಷ ಕ್ರಮಕ್ರಮವಾಗಿ ಚಿಯಾಂಗ್ ಕೈ-ಷೆಕ್‍ನ ವಶಕ್ಕೆ ಬಂತು. ಇಡೀ ಚೀನ ಆ ಪಕ್ಷದ ಆಡಳಿತಕ್ಕೆ ಒಳಪಟ್ಟಿತು. ರಾಷ್ಟ್ರೀಯತೆ, ಪ್ರಜಾಪ್ರಭುತ್ವ, ಜನಜೀವನ ಸುಧಾರಣೆ ಇವು ಕ್ವೋಮಿಂಟಾಗಿಗೆ ಸುನ್ ಯಾತ್-ಸೆನ್ ಹಾಕಿಕೊಟ್ಟಿದ್ದ ಸೂತ್ರಗಳು. ಕ್ವೋಮಿಂಟಾಂಗ್ ಮೊದಲನೆಯ ಸೂತ್ರವನ್ನು ಅನುಸರಿಸಲು ಯತ್ನಿಸಿ ಯಶಸ್ವಿಯಾಯಿತು. 1931-45ರ ಜಪಾನೀ ಆಕ್ರಮಣವನ್ನು ಎದುರಿಸಿತು. ಆದರೆ 1936ರಲ್ಲೂ 1946ರಲ್ಲೂ ಅದು ಜಾರಿಗೆ ತಂದ ಸಂವಿಧಾನಗಳಿಂದ ಪ್ರಜಾಪ್ರಭುತ್ವ ಕೇವಲ ತಾತ್ತ್ವಿಕವಾಗಿ ಉಳಿಯಿತು. ಜನಜೀವನ ಸುಧಾರಣೆಯ ಗುರಿಯೂ ಸಾಧಿಸಲಿಲ್ಲ. ಪಕ್ಷದ ಗುರಿಸಾಧನೆಯಲ್ಲಿ ಸಂಭವಿಸಿದ ಸೋಲುಗಳಿಗೆ ಜಪಾನೀ ಆಕ್ರಮಣವೂ ಪಕ್ಷದ ನಾಯಕತ್ವದ ದೌರ್ಬಲ್ಯವೂ ಕಮ್ಯೂನಿಸ್ಟರೊಂದಿಗೆ ವಿರೋಧವೂ ಕಾರಣ. 1949ರಲ್ಲಿ ಕ್ವೋಮಿಂಟಾಂಗ್ ಸರ್ಕಾರ ಕಮ್ಯೂನಿಸ್ಟ್ ವಿಮೋಚನಾಪಡೆಯಿಂದ ಸಂಪೂರ್ಣವಾಗಿ ಪರಾಭವಗೊಂಡು ಟೈವಾನ್ ದ್ವೀಪಕ್ಕೆ ನಿರ್ಗಮಿಸಿ ಅಲ್ಲಿ ಮುಂದುವರಿಯಿತು. (ಎಸ್.ಎ.ಆರ್.; ಎಸ್.ವಿ.ಡಿ.)