ಕ್ರೋಟನ್ - ಯೂಫೋರ್ಬಿಯೇಸೀ ಕುಟುಂಬಕ್ಕೆ (ಹರಳಿನ ಗಿಡದ ಕುಟುಂಬ) ಸೇರಿದ ಒಂದು ಸುಂದರ ಹಾಗೂ ಸುಪ್ರಸಿದ್ಧ ಅಲಂಕಾರ ಸಸ್ಯ ಜಾತಿ. ಕೋಡೀಯಂ ವೇರಿಗೇಟಂ ಇದರ ಶಾಸ್ತ್ರೀಯ ನಾಮ. ಇದರಲ್ಲಿ ಅಸಂಖ್ಯಾತ ಬಗೆಗಳಿದ್ದು ಒಂದೊಂದೂ ವರ್ಣ ವೈವಿಧ್ಯಮಯವಾದ ಉಜ್ವಲವಾದ ಎಲೆಗಳನ್ನು ಪಡೆದಿರುವುದರಿಂದ ಇವನ್ನು ಅಂದಕ್ಕಾಗಿ ಉದ್ಯಾನಗಳಲ್ಲಿ ಮನೆ ತೋಟಗಳಲ್ಲಿ ಬೆಳೆಸಲಾಗುತ್ತದೆ. ಎಲೆಗಳ ವರ್ಣವಿನ್ಯಾಸ ಒಂದೊಂದು ಬಗೆಯಲ್ಲೂ ಒಂದೊಂದು ವಿಧ.

ಕ್ರೋಟನ್ ಕ್ಯಾಲಿಫೋರ್ನಿಕಸ್
ಕ್ರೋಟನ್ ಟಿಗ್ಲಿಯಮ್

ವಿವರಣೆ

ಬದಲಾಯಿಸಿ

ಇದೊಂದು ಬಹುವಾರ್ಷಿಕ ಪೊದೆ ಸಸ್ಯ. ಸುಮಾರು 2'-6' ಎತ್ತರಕ್ಕೆ ಬೆಳೆಯುತ್ತದೆ. ಗಿಡದ ಬುಡದಲ್ಲಿ 2-3 ಮುಖ್ಯ ಕಾಂಡಗಳಿದ್ದು ಇವು ಮಿತವಾಗಿ ಕವಲೊಡೆದಿರುತ್ತವೆ. ಎಲೆಗಳು ಸರಳ; ಪರ್ಯಾಯವಾಗಿ ಜೋಡಣೆಗೊಂಡಿವೆ. ಇವುಗಳ ತೊಟ್ಟು ಚಿಕ್ಕದು. ಅಂಚು ಸಾಮಾನ್ಯವಾಗಿ ನಯ. ಕೆಲವೊಮ್ಮೆ ಅಲೆಗಳಾಗಿ ವಿಭಾಗವಾಗಿರುವುದು ಉಂಟು. ತುದಿ ಮೊನಚಾಗಿರಬಹುದು ಇಲ್ಲವೆ ಮೊಂಡಾಗಿರಬಹುದು. ಅಲಗು ಉದ್ದುದ್ದವಾಗಿರಬಹುದು ಇಲ್ಲವೆ ಕಿರಿದಾಗಿ ಎಸಳಿನಂತಿರಬಹುದು. ಮೇಲ್ಮೈ ಹೊಳೆಯುತ್ತಿರುತ್ತದೆ. ಬಣ್ಣ ಅಚ್ಚ ಬಿಳಿಯಿಂದ ಹಿಡಿದು ನಸುಹಳದೆ, ಗಾಢ ಹಳದಿ, ಕಿತ್ತಳೆ ನಸುಗೆಂಪು, ಕೆಂಪು, ಕಡುಗೆಂಪು, ನೇರಳೆವರೆಗೂ ವ್ಯತ್ಯಾಸವಾಗುತ್ತದೆ. ಕೆಲವು ಬಗೆಗಳಲ್ಲಿ ಈ ಬಣ್ಣಗಳ ಮನಮೋಹಕ ಮಿಶ್ರಣವೂ ಅಲ್ಲಲ್ಲಿ ಭಿನ್ನಬಗೆಯ ಬಣ್ಣದ ಮಚ್ಚೆಗಳೂ ಇದ್ದು ಎಲೆಗಳು ಅತ್ಯಾಕರ್ಷಕವಾಗಿರುತ್ತದೆ. ಕ್ರೋಟನ್ನಿನ ಎಲೆಗಳು ಎಷ್ಟು ಸುಂದರವೋ ಇದರ ಹೂಗಳು ಅಷ್ಟೇ ಅನಾಕರ್ಷಕ. ಹೂಗಳು ಏಕಲಿಂಗಿಗಳು; ಎಲೆಗಳ ಕಂಕುಳಲ್ಲಿ ಹುಟ್ಟುವ ಅಂತ್ಯಾರಂಭಿ ಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಒಂದೇ ಹೂ ಗೊಂಚಲಿನ ಮೇಲ್ಭಾಗದಲ್ಲಿ ಗಂಡು ಹೂಗಳು, ಕೆಳಭಾಗದಲ್ಲಿ ಹೆಣ್ಣುಹೂಗಳು ಇವೆ. ಗಂಡು ಹೂವಿನಲ್ಲಿ ದಳಗಳು ಪುಷ್ಪಪತ್ರಗಳೂ 20-30 ಕೇಸರಗಳೂ ಇವೆ. ಹೆಣ್ಣು ಹೂವಿನಲ್ಲಿ ಬರಿಯ ಪುಷ್ಪಪತ್ರಗಳು ಮೂರು ಕಾರ್ಪೇಲುಗಳಿಂದ ಕೂಡಿದ ಉಚ್ಛಸ್ಥಾನದ ಅಂಡಾಶಯವೂ ಇವೆ. ಫಲ ಸಂಪುಟ ಮಾದರಿಯದು.

ಎಲ್ಲೆಲ್ಲಿ

ಬದಲಾಯಿಸಿ

ಕ್ರೋಟನ್ ಮಲೆಯದೇಶದ ಮೂಲ ನಿವಾಸಿ. ಎಲೆಗಳ ಅಂದದಿಂದ ಬಲುಬೇಗ ಜನಪ್ರಿಯವಾದ ಇದನ್ನು ಇಂದು ಪ್ರಪಂಚದ ಎಲ್ಲಾ ಕಡೆಗಳಲ್ಲೂ ಬೆಳೆಸಲಾಗುತ್ತಿದೆ. ಕಳೆದ ಶತಮಾನದಲ್ಲಿ ಇದನ್ನು ಯೂರೋಪಿಗೆ ತಂದು ರೂಢಿಸಲಾಯಿತೆಂದು ಹೇಳಿಕೆ ಉಂಟು. ಬ್ರಿಟಿಷರ ಆಳ್ವಿಕೆಯಲ್ಲಿ ಭಾರತಕ್ಕೆ ಕಾಲಿಟ್ಟ ಕ್ರೋಟನ್ ಕಳೆದ 40 ವರ್ಷಗಳಿಂದೀಚೆಗೆ ಹೆಚ್ಚು ಪ್ರಸಿದ್ಧಿಗೆ ಬಂದಿದೆ. ಬೆಂಗಳೂರಿನ ಜಗತ್ಪ್ರಸಿದ್ಧ ಲಾಲ್‍ಬಾಗ್ ತೋಟದಲ್ಲಿ ಕ್ರೋಟನ್ನಿನ ಅತ್ಯುತ್ತಮ ತಳಿಗಳ ಸಂಗ್ರಹ ಉಂಟು.

ಕ್ರೋಟನ್ ಸಸ್ಯವನ್ನು ಬೀಜಗಳ ಇಲ್ಲವೇ ಗೂಟಿ ಮಾಡುವುದರ ಮೂಲಕವೂ ಕಾಂಡತುಂಡುಗಳಿಂದಲೋ ವೃದ್ಧಿಮಾಡಬಹುದು. ಇದರ ವಿವಿಧ ಬಗೆಗಳನ್ನು ಅಡ್ಡಹಾಯಿಸಿ ಬೀಜಗಳನ್ನು ಪಡೆದು ವಿಭಿನ್ನ ರೀತಿಯ ಹಾಗೂ ಆಕರ್ಷಕ ತಳಿಗಳನ್ನು ಪಡೆಯಬಹುದು. ಹೀಗೆ ಪಡೆದ ಯಾವುದೇ ಒಂದು ಚೆಲುವಾದ ತಳಿಯನ್ನು ಗೂಟಿ ಮಾಡಿ ಸುಲಭವಾಗಿ ವೃದ್ಧಿಮಾಡಬಹುದು. ಸಾಮಾನ್ಯವಾಗಿ ಒಂದೆರಡು ಎಲೆಗಳಿರುವ ಕಾಂಡತುಂಡುಗಳನ್ನು ಮರಳುತುಂಬಿದ ಆಳವಿಲ್ಲದ ಪೆಟ್ಟಿಗೆಯಲ್ಲಿ ನೆಟ್ಟು ಯಂತ್ರಗಳ ಸಹಾಯದಿಂದ 10 ಮಿನಿಟುಗಳಿಗೊಂದಾವರ್ತಿ ಸಣ್ಣ ಸಣ್ಣ ತುಂತುರಾಗಿ ನೀರು ಹನಿಸುವ ವ್ಯವಸ್ಥೆಮಾಡಿದಲ್ಲಿ ತುಂಡುಗಳು ಸುಲಭವಾಗಿ ಬೇರುಬಿಡುತ್ತವೆ.

ಕ್ರೋಟನ್ ಸಸ್ಯಗಳನ್ನು ಸಾಮಾನ್ಯವಾಗಿ ಕುಂಡ ಸಸ್ಯಗಳಾಗಿ ಬೆಳೆಸುತ್ತಾರೆ. ನೆಲದಲ್ಲಿ ನೇರವಾಗಿ ನೆಟ್ಟು ಬೆಳೆಸಲೂ ಬಹುದು. ನೆಲದಲ್ಲಿ ಬೆಳೆಯುವಂತವೂ ಕುಂಡದಲ್ಲಿ ಬೆಳೆಯುವ ಬಗೆಗಳಿಗಿಂತ ಹೆಚ್ಚು ದಷ್ಟುಪುಷ್ಠವಾಗಿಯೂ ಎತ್ತರವಾಗಿಯೂ ಇರುತ್ತವೆ. ಕುಂಡದಲ್ಲಾಗಲಿ ನೆಲದಲ್ಲಾಗಲಿ ಇವನ್ನು ಬೆಳೆಸುವಾಗ ಮಣ್ಣಿನ ಫಲವಂತಿಕೆಯ ಬಗ್ಗೆ ಎಚ್ಚರಿಕೆವಹಿಸಬೇಕು. ಕುಂಡದಲ್ಲಿ ಬೆಳೆಸುವಾಗ ಅದರಲ್ಲಿರುವ ಮಣ್ಣನ್ನು ಮೂರು ತಿಂಗಳುಗಳಿಗೆ ಒಂದು ಸಾರಿ ಬದಲಾಯಿಸಬೇಕು. ಇವುಗಳ ಹುಲುಸಾದ ಬೆಳವಣಿಗೆಗೆ ನಾಲ್ಕುಭಾಗ ಕೆಂಪುಮಣ್ಣು, ನಾಲ್ಕು ಭಾಗ ಕುದುರೆಗೊಬ್ಬರ, ಮೂರುಭಾಗ ಮರಳು, ಎರಡು ಭಾಗ ಎಲೆಗೊಬ್ಬರ, ಮತ್ತು ಒಂದುಭಾಗ ಹಳೆಗಾರೆ ಅಥವಾ ಸುಣ್ಣದ ಅಂಶವಿರುವ ಮಣ್ಣು ಅಗತ್ಯ. ಹಳೆ ಗಾರೆಯನ್ನು ಉಪಯೋಗಿಸುವಾಗ ಇದನ್ನು ನುಣ್ಣಗೆ ಪುಡಿಮಾಡಿ ಹಾಕಬೇಕು. ಕುಂಡದ ತುಂಬ ಸಸ್ಯದ ಬೇರು ತುಂಬಿಕೊಂಡು ಬೇರುಗಳು ಮಣ್ಣಿನ ಮೇಲುಭಾಗದಲ್ಲಿ ಕಾಣಿಸಿಕೊಂಡಾಗ, ಕುಂಡದಿಂದ ಸಸ್ಯವನ್ನು ಬದಲಾಯಿಸಿ ದೊಡ್ಡದಾದ ಕುಂಡದಲ್ಲಿ ಮೇಲೆ ಹೇಳಿರುವ ಮಣ್ಣಿನ ಮಿಶ್ರಣವನ್ನು ತುಂಬಿ ಅದರಲ್ಲಿ ಗಿಡವನ್ನು ನಾಟಿಮಾಡಬೇಕು. ಪ್ರತಿನಿತ್ಯ ನೀರು ಹಾಕಬೇಕು. ಕೆಲವು ಸಾರಿ ಕುಂಡದ ತಳದಲ್ಲಿನ ರಂಧ್ರ ಮುಚ್ಚಿಕೊಂಡು ಕುಂಡದಲ್ಲಿ ಹೆಚ್ಚಾದ ನೀರು ಸರಿಯಾಗಿ ಬಸಿದುಹೋಗದೆ ಇದ್ದು ಗಿಡ ಬಿಳಿಚಿಕೊಂಡು ರೋಗಪೀಡಿತವಾದ ರೀತಿಯಲ್ಲಿ ಕಾಣುತ್ತದೆ. ಆಗ ಕುಂಡದಲ್ಲಿರುವ ಗಿಡವನ್ನು ಹೊರತೆಗೆದು, ಮುಚ್ಚಿಕೊಂಡಿರುವ ರಂಧ್ರವನ್ನು ತೆಗೆದು ಹೊಸಗೊಬ್ಬರ ಮಿಶ್ರಣವನ್ನು ತುಂಬಿ ಮತ್ತೆ ನಾಟಿ ಮಾಡಬೇಕು. ನೆಲದಲ್ಲಿ ಬೆಳೆಸುವ ಕ್ರೋಟನ್ ಗಿಡಗಳ ನೀರಿನ ಅವಶ್ಯಕತೆ ಮಳೆಯನ್ನು ಅವಲಂಬಿಸಿದೆ. ಇವು ಹೆಚ್ಚು ಬಿಸಿಲಿನ ತಾಪವನ್ನು ಸಹಿಸುವುದಿಲ್ಲವಾದ್ದರಿಂದ ಇವನ್ನು ಪಾಶ್ರ್ವನೆರಳಿನಲ್ಲಿ ಇಡಬೇಕು. ವಿಪರೀತ ಬಿಸಿಲಿನಲ್ಲಿ ಬೆಳೆಸಿದ ಗಿಡಗಳ ಎಲೆಗಳ ಬಣ್ಣ ನಶಿಸಿಹೋಗುತ್ತದೆ.

ಗಾಳಿ ಮತ್ತು ಇತರ ಕಾರಣಗಳಿಂದ ಗಿಡ ಮತ್ತು ಎಲೆಗಳ ಮೇಲೆ ದೂಳು ತುಂಬಿಕೊಂಡು ಮಂಕಾಗಿ ಕಾಣುತ್ತವೆ. ಎಲೆಗಳ ಶುಭ್ರವಾಗಿ ಕಾಣುವುವಲ್ಲದೆ ಲವಲವಿಕೆಯಾಗಿ ಕಾಣುತ್ತವೆ. ಅಲ್ಲದೆ ನೀರನ್ನು ಸಿಂಪಡಿಸುವುದರಿಂದ ಕೀಟ ಮತ್ತು ಬೂಷ್ಟು ರೋಗಗಳನ್ನು ಸ್ವಲ್ಪಮಟ್ಟಿಗೆ ತಡೆಯಬಹುದು. ಕ್ರೋಟನಿಗೆ ಹಲವಾರು ಬಗೆಯ ಕೀಟಪೀಡೆಗಳು ಅಂಟುವುದುಂಟು. ಇವುಗಳಲ್ಲಿ ಬಲುಮುಖ್ಯವಾದವು ಇವು. ಬಿಳಿತಿಗಣೆ(ಮೀಲೀಬಗ್ಸ್) ಇವು ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳ ಎಳೆಯ ಅಂಗಗಳಲ್ಲಿ ಕಾಣಿಸಿಕೊಂಡು ಸಸ್ಯರಸವನ್ನು ಹೀರಿ ತೊಂದರೆಪಡಿಸುತ್ತವೆ. 0.025%ರ ಪ್ಯಾರಥಿಯಾನ್

ದ್ರಾವಣ ಸಿಂಪಡಿಸುವುದರಿಂದ ಇವನ್ನು ಹತೋಟಿ ಮಾಡಬಹುದು. ಕೆಂಪು ಜೇಡ: ಎಲೆಗಳ ತಳಭಾಗದಲ್ಲಿ ಮತ್ತು ಎಳೆಯ ಕಾಂಡ ತುದಿಯಲ್ಲಿ ಅಗಾಧ ಸಂಖ್ಯೆಯಲ್ಲಿ ಇದ್ದು ಸಸ್ಯ ರಸವನ್ನು ಹೀರುತ್ತವೆ. ಇದರಿಂದ ಸಸ್ಯದ ಬೆಳೆವಣಿಗೆ ನಿಂತು ಹೋಗುತ್ತದೆ. ಈ ಕೀಟಗಳ ಹಾವಳಿ ವಿಪರೀತವಾದಾಗ ಸಸ್ಯಗಳು ಸತ್ತು ಹೋಗುತ್ತವೆ.

ಉಪಯೋಗಗಳು

ಬದಲಾಯಿಸಿ

ಕ್ರೋಟನ್ ಪ್ರಸಿದ್ಧ ಅಲಂಕಾರ ಸಸ್ಯವೊಂದೇ ಅಲ್ಲ. ಮಲಯದಲ್ಲಿ ಇದು ಅತ್ಯುತ್ತಮವಾದ ಔಷಧಿಸಸ್ಯವೂ ಹೌದು; ಇದರ ಬೇರಿನ ಪುಡಿಯನ್ನು ಗಾಯಗಳ ಚಿಕಿತ್ಸೆಯಲ್ಲಿ ಉಪಯೋಗಿಸುತ್ತಾರೆ. ಎಲೆಯ ಪುಡಿ ಮಕ್ಕಳ ಮೂತ್ರವ್ಯಾಧಿಗೆ ಉತ್ತಮವಾದ ಮದ್ದು. ಕೆಲವು ಬಗೆಗಳ ರಸ ಮಲವಿಸರ್ಜನೆಯನ್ನು ಪರಿಣಾಮಕಾರಿಯಾಗಿ ತೀವ್ರಗೊಳಿಸುತ್ತದೆ. ಈ ರಸ ಗರ್ಭಪಾತ ಪ್ರಚೋದನಕಾರಿ ಎಂದೂ ತಿಳಿದು ಬಂದಿದೆ. ಹಲವು ಬಗೆಗಳ ಎಲೆಗಳು ಸಿಹಿಯಾಗಿರುವುದರಿಂದ ಭಕ್ಷ್ಯಭೋಜ್ಯಗಳಲ್ಲಿ ಉಪಯೋಗಿಸುವುದುಂಟು. ಪೆಸಿಫಿಕ್ ಸಾಗರದಲ್ಲಿನ ದ್ವೀಪಗಳಲ್ಲಿ ಹಾಗೂ ಮಲಯದಲ್ಲಿ ಅತಿಥಿಗಳಿಗೆ ಕ್ರೋಟನಿನ ಎಲೆಗುಚ್ಛವನ್ನು ಕೊಡುವುದು ಗೌರವಸೂಚಕವೆಂದು ತಿಳಿಯಲಾಗಿದೆ.

ಬಗೆಗಳು

ಬದಲಾಯಿಸಿ

ಕ್ರೋಟನಿನಲ್ಲಿ ಹಲವಾರು ಬಗೆಗಳಿವೆ ಎಂದು ಮೊದಲೇ ಹೇಳಲಾಗಿದೆ. ಉದ್ಯಾನಗಾರಿಕೆಯ ದೃಷ್ಟಿಯಿಂದ ಬಹುಮುಖ್ಯವಾಗಿರುವ ಬಗೆಗಳ ಹೆಸರುಗಳನ್ನು ಮಾತ್ರ ಮುಂದೆ ತಿಳಿಸಲಾಗಿದೆ. ರೊಸೆಟ್, ಸ್ಟಾಪ್‍ಲೈಟ್, ಮಿಸೆಸ್ ಕೋಲೆಡ್, ಪಂಕ್ಟೇಟಮ್ ಆರಿಯಮ್, ಫಿಲಡೆಲ್ಫಿಯ, ಔಕ್ಯುಬೀ, ಫೋಲಿಯಮ್, ಗೋಲ್ಡನ್ ರಿಂಗ್, ರೀಡಿಯೈ, ಪಾಲಿಕ್ರೋಮ್, ಮಾನ್ಸ್‍ಫ್ಲಾರಿನ್, ಕೊಲಂಬಿಯಾನ ಗೋಲ್ಡ್, ಸನ್‍ರೈಸ್, ಮೆಜೆಸ್ಟಿಕಮ್ ಮುಂತಾದವು ಪ್ರಪಂಚದಾದ್ಯಂತ ಜನಪ್ರಿಯವಾದವು. ಅಲೆಕ್ಸಾಂಡ್ರ, ಎಕ್ಸೆಲ್ಸಿಯರ್, ಇಂಪರೇಟರ್, ಮ್ಯಾಕ್ಯುಲೇಟಮ್, ಪ್ರಿನ್ಸ್ ಆಫ್ ವೇಲ್ಸ್, ಸನ್‍ಸೆಟ್, ಮೂರಿಯಾನಸ್, ಮ್ಯುಟಾಬಿಲಿಸ್ ಇತ್ಯಾದಿ ಇನ್ನು ಕೆಲವು ಪ್ರಸಿದ್ಧ ಬಗೆಗಳು.

 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಕ್ರೋಟನ್&oldid=712041" ಇಂದ ಪಡೆಯಲ್ಪಟ್ಟಿದೆ