ಕ್ರೈಸ್ತ ಮಿಷನರಿಗಳ ಕನ್ನಡ ಕಾವ್ಯ

ಭಾರತಕ್ಕೆ ಬಂದ ಬಾಸೆಲ್ ಮಿಷನರಿಗಳು

ಬದಲಾಯಿಸಿ

ಭಾರತಕ್ಕೆ ಬಂದ ಬಾಸೆಲ್ ಮಿಷನರಿ ೧೮೩೪ರಲ್ಲಿ ಮಂಗಳೂರಿನಲ್ಲಿ ತಮ್ಮ ಕೇಂದ್ರವನ್ನು ಪ್ರಾರಂಭಿಸಿದರು. ಇಲ್ಲಿ ಕ್ರೈಸ್ತ ಮತ ಪ್ರಚಾರವಾಗಬೇಕಾದರೆ ಮತಾವಲಂಬಿಗಳು ವಿದ್ಯೆ ಕಲಿಯಬೇಕು. ವಿದ್ಯೆ ಕಲಿತರೆ ಮಾತ್ರ ಕ್ರೈಸ್ತ ಶಾಸ್ತ್ರಗಳನ್ನು ಓದಬಹುದು ಎಂದರಿತ ಅವರು ೧೮೩೬ರಲ್ಲಿ ಪ್ರಾಥಮಿಕ ಶಾಲೆಗಳನ್ನು ತೆರೆದು ಜಾತಿ ಮತ ಭೇದವಿಲ್ಲದೆ ವಿದ್ಯೆಯನ್ನು ಕಲಿಯುವಂತೆ ಮಾಡಿದರು. ಆಗ ಮುದ್ರಣದ ವಹಿಗಳು ಮದ್ರಾಸ್ ಅಥವಾ ಮುಂಬಯಿಯಿಂದ ತರಿಸಬೇಕಾಗಿತ್ತು. ೧೮೪೧ ರಲ್ಲಿ ಮುಂಬಯಿಯ ಕಲ್ಲು ಛಾಪೆಯಿಂದ ಮುದ್ರಿಸಲ್ಪಟ್ಟ ಮೊದಲ ಕನ್ನಡದ ಕ್ರೈಸ್ತ ಗೀತೆ ಪುಸ್ತಕವನ್ನು ಬಳಕೆಗೆ ತರಲಾಯಿತು. ಇದರಲ್ಲಿ ೫೦ ಕನ್ನಡ ಕ್ರೈಸ್ತ ಗೀತೆಗಳಿದ್ದು ಇದು ಜರ್ಮನ್ ಭಾಷೆಯಿಂದ ತರ್ಜುಮೆಯಾದ ಗೀತೆಗಳು. ಇದನ್ನು ತರ್ಜುಮೆ ಮಾಡಿದವರು. ಮ್ಯೋಗ್ಲಿಂಗ್ ಮತ್ತು ವೈಗ್ಲೆ ಎಂಬ ವಿದೇಶಿಯರು. ಈ ಕ್ರೈಸ್ತ ಗೀತೆಯ ಪುಸ್ತಕದಲ್ಲಿರುವ ಗೀತೆಗಳು ೧೯೧೩ ತನಕ ಹಲವು ಬಾರಿ ಪರಿಷ್ಕ್ತತಗೊಂಡು ಈಗಲೂ ಕನ್ನಡ ಕ್ರೈಸ್ತ ಸಭೆಗಳಲ್ಲಿ ಬಳಕೆಯಲ್ಲಿದೆ.

ಹೊಸಗನ್ನಡ ಅರುಣೋದಯ ಕಾಲ

ಬದಲಾಯಿಸಿ

ಈ ಕಾಲದಲ್ಲಿ ಕ್ರೈಸ್ತ ಮಿಷನರಿಗಳು ರಚಿಸಿದ ಗೀತ ಸಾಹಿತ್ಯವು ಕನ್ನಡ ಭಾವಗೀತ ಪರಂಪರೆಯ ಬೆಳವಣಿಗೆಗೆ ಪ್ರಮುಖ ಹಾದಿ ಹಾಕಿಕೊಟ್ಟವು. ಕರ್ನಾಟಕದಲ್ಲಿ ಗೀತಗಳ ಮೂಲಕ ಧರ್ಮ ಪ್ರಸಾರ ಮಾಡುತ್ತಲಿದ್ದ ಮಿಷನರಿಗಳಿಗೆ ವಿದೇಶಿ ರಾಗಗಳು ಕನ್ನಡಿಗರನ್ನು ಪ್ರಭಾವಿಸಲಾರವು ಎಂದು ತಿಳಿಯಲು ಬಹಳ ದಿನ ಹಿಡಿಯಲಿಲ್ಲ. ಟ್ಯೂಟೋನಿಕ್ ಪರಂಪರೆಯ ಕ್ರೈಸ್ತ ಗೀತಗಳು ಕರ್ನಾಟಕ ಜನತೆಯ ಸಂಪ್ರದಾಯಕ್ಕೆ ಅಷ್ಟಾಗಿ ಹೊಂದಿಕೊಳ್ಳಲಾರವು ಎಂಬ ಕಾರಣವಾಗಿ ಕ್ರೈಸ್ತರಲ್ಲಿ ದೇಸೀಯ ಮಾದರಿಯ ಗೀತೆಗಳಿಗೆ ಪ್ರೋತ್ಸಾಹ ದೊರೆಯಿತು. ಕಿಟೆಲ್ ಅವರು ಕೇಂದ್ರ ಸಂಸ್ಥೆಯಾದ ಬಾಸೆಲ್‍ಗೆ 18.4.1870 ರಂದು ಪತ್ರ ಬರೆದು "ಕ್ರೈಸ್ತ ಮತಪ್ರಸಾರ ಮಾಡುವ ಮಿಷನರಿಗಳು ಕನ್ನಡ ಕಾವ್ಯಗಳನ್ನು ಅಭ್ಯಸಿಸಬೇಕು ಮತ್ತು ಈ ವಿಷಯವು ದೈವಜ್ಞಾನ ಶಾಲೆಯಲ್ಲಿ ಓದುವವರಿಗೆ ಕಡ್ಡಾಯವಾಗಬೇಕು. ಹೀಗೆ ಕಲಿತವರು ಮುಂದೆ ಕನ್ನಡದಲ್ಲಿ ಅದೂ ದೇಸೀಯ ರಾಗಗಳಲ್ಲಿ ಪದ್ಯಗಳನ್ನು ರಚಿಸಬೇಕು" ಎಂದರು. ಕನ್ನಡ ಭಾಷೆ ಮತ್ತು ಸಾಹಿತ್ಯದ ಮೇಲೆ ಪ್ರಭುತ್ವ ಸಾಧಿಸಿ ಕಿಟೆಲ್, ವೈಗಲ್, ಮೊಗ್ಲಿಂಗ್, ಲೂಥಿ, ಮುರಾ ಮೊದಲಾದವರು ಜನಪದ ಹಾಡು, ದಾಸರ ಕೀರ್ತನೆಗಳು, ಶರಣರ ಕೈವಲ್ಯ, ತತ್ತ್ವಪದಗಳಿಂದಲೂ, ಜನರ ನಾಲಗೆಯ ಮೇಲೆ ನಲಿಯುತ್ತಿದ್ದ 'ಕುಮಾರವ್ಯಾಸ ಭಾರತ'ದ ಪದ್ಯಗಳು ಹೀಗೆ ಮುಂತಾದ ಕಾವ್ಯಗಳಿಂದಲೂ ಪ್ರಭಾವಿತರಾಗಿ ಈ ನಾಡಿನ ಜನರು ಸ್ಪುರಿಸುವ ದೇಸೀ ಗೀತ ಪ್ರಕಾರವನ್ನು ಮನವರಿಕೆ ಮಾಡಿಕೊಂಡರು. ಆಗ ದಾಸರ ಪದಗಳ,ಕೈವಲ್ಯ ಪದಗಳ ಶೈಲಿಯಲ್ಲಿ ಕ್ರೈಸ್ತ ಗೀತೆಗಳನ್ನು ಅನುವಾದಿಸಿದರು ಮತ್ತು ಸ್ವತಂತ್ರ ಕವಿತೆಗಳನ್ನು ಬರೆದರು.

ದಾಸರಪದ/ಕೈವಲ್ಯಪದಗಳ ಶೈಲಿಯ ಕ್ರೈಸ್ತಗೀತೆಗಳು

ಬದಲಾಯಿಸಿ

ಒಯ್ದ ರಾತನ ದಂಡಿನಾಳ್ಗಳು
ಹೊಯ್ದ ರಾತನ ಬಾರು ಹಗ್ಗದಿ
ಗೆಯ್ದ ರಾತನ ಹಾಸ್ಯ ರಾಜನ ಸೋಗು ತೊಡಿಸುತಲೀ
ಕೊಯ್ದ ರಾತನ ತಲೆಯ ಮುಳ್ಳಿಂ
ಬಯ್ದ ರಾತಗೆ ರಾಜ ಎನುತಲಿ
ಕೈದುವೆನುತಲಿ ಕೊಟ್ಟಬೆತ್ತದಿ ಹೊಡೆದರಾತನಿಗೆ
(ಕಿಟೆಲ್ ಕಥಾಮಾಲೆ ,1862 )

  • ಕ್ರೈಸ್ತನನ್ನು ಬಂಧಿಸಿ ಶಿಲುಬೆಗೇರಿಸಲು ಕರೆ ತಂದ ಸೈನಿಕರು ಆತನಿಗೆ ಕೊಟ್ಟ ಶಿಕ್ಷೆ ಯಾವ ಬಗೆಯದೆಂಬುದನ್ನು ದೇಸೀಯ ಕಾವ್ಯ ಮಟ್ಟದಲ್ಲಿ ಹೇಳಿದರು.
  • 19ನೆಯ ಶತಮಾನದಲ್ಲಿ ಮಿಷನರಿಗಳು ಬರೆದ ಗೀತೆಗಳು ಹೆಚ್ಚಾಗಿ ಅನುವಾದಗಳು.1845ರಲ್ಲಿ ಬಾಸೆಲ್ ಮಿಷನ್ನಿನವರು ಪ್ರಕಟಿಸಿದ ಸ್ತೋತ್ರ ಗೀತೆಗಳ ಸಂಗ್ರಹದಲ್ಲಿ ಅರವತ್ತೊಂದು ಕನ್ನಡ ಗೀತೆಗಳಿವೆ.ಇವು ಇಂಗ್ಲಿಷ್ ಮತ್ತು ಜರ್ಮನ್ ಭಾಷೆಗಳಿಂದ ಅನುವಾದಗೊಂಡವು.
  • ಜಿ.ಎಚ್.ವೈಗಲ್ ಬಾಸೆಲ್ ಮಿಷನ್ನಿನವನಾಗಿದ್ದು ರೀಡ್ ಎಂಬಾತನೊಂದಿಗೆ ಸೇರಿ ಇಂಗ್ಲಿಷ್ ಹಾಡುಗಳ ರೀತಿಯಲ್ಲಿ ಅನೇಕ ರಚನೆಗಳನ್ನು ಮಾಡಿದ್ದಾರೆ. ವೈಗಲ್ ಎಚ್.ಮೊಗ್ಲಿಂಗ್ ಜೊತೆಯಲ್ಲಿ 'ಕ್ರೈಸ್ತ ಗೀತೆಗಳು"ಪುಸ್ತಕವನ್ನು 1847 ರಲ್ಲಿ ಹೊರತಂದುದಲ್ಲದೆ 'ಪ್ರಾರ್ಥನೆಗಳು' 1862ರಲ್ಲಿ ಸಂಕಲನವನ್ನೂ ಹೊರತಂದರು.ಪ್ರಾರ್ಥನ ಪದ್ಯಗಳನ್ನು ಹೆಚ್ಚಾಗಿ ಬಾಸೆಲ್ ಮಿಷನ್ನಿನ ಬಿ.ಲೂಥಿ ಅನುವಾದಿಸಿದರು. ಬಿ.ಎಚ್.ರೈಸ್ ಕ್ರೈಸ್ತ ಕವಿತೆಗಳ ಪ್ರಮುಖ ಅನುವಾದಕರು.ಅವರ ರಚನೆಗಳಲ್ಲಿ ಬಹುಮಟ್ಟಿಗೆ ಕಂದ ದಾಸರ ಕೀರ್ತನೆಗಳ ಮಾದರಿಗಳು ಕಾಣಬರುತ್ತವೆ.
  • 'ಕನ್ನಡ ಸಂಗೀತಗಳು' ಸಂಕಲನದಲ್ಲಿ ಲಂಡನ್ ಮಿಷನ್ ಸಂಸ್ಥೆಯ ಹಲವರ ರಚನೆಗಳಿವೆಯಾದರೂ ರೈಸ್ ರವರ ಕವಿತೆಗಳೇ ಹೆಚ್ಚಾಗಿವೆ. ಮಿಸ್ ಅನಾಸ್ಟೆ ಎಂಬವರ 'ಕೀರ್ತನೆಗಳು'(1869) ಸಂಕಲನವೂ ಪ್ರಾರ್ಥನಾ ಪದ್ಯಗಳನ್ನೊಳಗೊಂಡಿದೆ.
  • ದೇಸೀಯ ಕ್ರೈಸ್ತರ ಪ್ರಾರ್ಥನಾ ಪದ್ಯಗಳಲ್ಲಿ ಅಬೈಜನ 'ಜ್ಞಾನ ಕೀರ್ತನೆಗಳು'(1871)ಮುಖ್ಯವಾದುದು.'ಪ್ರಾಕಾವ್ಯ ಮಾಲಿಕೆ'ಯನ್ನು 1868ರಲ್ಲಿ ಜಿ.ವರ್ತ ಸಂಪಾದಿಸಿದ್ದು , ಇಲ್ಲಿ ಸೇರಿರುವ ಕ್ರೈಸ್ತ ಗೀತೆಗಳ ಬಗ್ಗೆ : " ಈ ಪ್ರಾರ್ಥನಾ ಪದ್ಯಗಳು ಇಂಗ್ಲಿಷ್ ,ಜರ್ಮನ್ ಇತ್ಯಾದಿ ಟ್ಯುಟೂನಿಕ್ ಭಾಷೆಗಳ ಛಂದೋ ಮಾದರಿಯ ರಚನೆಗಳಾಗಿದ್ದು, ಕನ್ನಡ ವಿದ್ವಾಂಸರು ತಮ್ಮ ಭಾಷೆಯನ್ನು ಹೇಗೆ ಬಳಸಬಹುದೆಂಬುದಕ್ಕೆ ದಿಕ್ಚೂಚಿಗಳಾಗಿವೆ" ಎಂದಿದ್ದಾರೆ.
  • ಪಂಜೆ,ಪೈ ಅವರಿಗಿಂತಲೂ ಮುಂಚೆಯೇ ಸರಳಭಾವದ ಪದ್ಯಗಳನ್ನು ಕ್ರೈಸ್ತ ಮಿಷನರಿಗಳೇ ರಚಿಸಿ ದಾರಿ ತೋರಿಸಿದರು. 1893 ರಲ್ಲಿ ಪ್ರಕಟವಾದ 'ಕನ್ನಡ ಕವಿತೆಯ ಮೊದಲನೇ ಪುಸ್ತಕ'ದಲ್ಲಿರುವ ಒಂದು ಪದ್ಯದ ಕೆಲವು ಸಾಲುಗಳು ಹೀಗಿವೆ,

ಒಂದು ನಾಯಿಯು ತನ್ನ ಬಾಯೊಳು
ಚಂದವಾಗಿರ್ದೊಂದು ರೊಟ್ಟಿಯ
ಅಂದದಿಂದಲಿ ಕಚ್ಚಿಕೊಂಡು ಹೊಳೆಯ ದಾಟುತಿರೆ
ಸರಿದ ನೆರಳವ ಕಂಡು ಇದು ಮ-
ತ್ತೊಂದು ಸೊಣಗನು ಯಿದರ ಬಾಯೊಳ
ಗಿಂದ ಕಸಗೊಳಬೇಕು ರೊಟ್ಟಿಯನೆಂದು ಬಗೆಯುತ್ತ

ಇಂಥ ಪದ್ಯಗಳು ಕಂದ, ಚೌಪದಿ, ಷಟ್ಪದಿ ಮೊದಲಾದ ಪೂರ್ವ ಪರಿಚಿತ ಮಟ್ಟುಗಳಲ್ಲಿದ್ದವು. ಪಂಜೆಯವರು ತಮ್ಮ ಕಥನಕವನಗಳನ್ನು ಇಂಥವೇ ಮಟ್ಟುಗಳಲ್ಲಿ ರಚಿಸಿದ್ದಾರೆ. ಅನೇಕ ಕ್ರೈಸ್ತ ಮಿಷನರಿ ಗೀತೆಗಳು ಆ ಕಾಲಕ್ಕೆ ಕನ್ನಡದಲ್ಲಿ ತಲೆದೋರಿದವು. " ಈ ಉಪಕ್ರಮದಿಂದಾಗಿ ಕ್ರೈಸ್ತ ಧರ್ಮಪ್ರಚಾರಕ್ಕೆ ಹೆಚ್ಚು ಲಾಭವಾಯಿತಲ್ಲದೇ ಪರ್ಯಾಯವಾಗಿ ಕನ್ನಡ ಭಾವಗೀತೆಗಳ ಉದಯಕ್ಕೂ ಇದು ಕಾರಣವಾಯಿತು" ಎನ್ನುತ್ತಾರೆ ಕನ್ನಡ ಕ್ರೈಸ್ತ ಗೀತೆಗಳು ಕುರಿತು ಅಧ್ಯಯನ ಕೈಕೊಂಡ ಡಾ.ಎಸ್.ಪಿ.ಗೌಡರ ಅವರು. ಈವರೆಗೆ ಕನ್ನಡದಲ್ಲಿ ಇಂಥ ಗೀತೆಗಳು ದಾಸರಿಂದ, ವಚನಕಾರರಿಂದ ರಚನೆಗೊಳ್ಳುತ್ತ ಜನಮನದಲ್ಲಿ ಹಾಸು ಹೊಕ್ಕಾಗಿದ್ದರೂ ನಮ್ಮ ಪ್ರತಿಷ್ಠಿತ ಕವಿಗಳು ಇವುಗಳನ್ನು ಅಲಕ್ಷಿಸಿದ್ದರು. ಕ್ರೈಸ್ತ ಪಾದ್ರಿಗಳು ಈ ಅಲಕ್ಷಿತವಾದ ಜನಪ್ರಿಯ ಪ್ರಕಾರವನ್ನು ಗುರುತಿಸಿ ಈ ಮಾದರಿಯಲ್ಲಿ ಕ್ರೈಸ್ತ ಪದ್ಯ ಬರೆದು ಅಚ್ಚಿಸಿ ಅವುಗಳಿಗೆ ಸಾಹಿತ್ಯ ಪರಂಪರೆಯಲ್ಲಿ ಸ್ಥಾನ ಕಲ್ಪಿಸಿಕೊಟ್ಟರು. ದೇಸೀಯವೇ ಶಿಷ್ಟರ ಕೈಯಲ್ಲಿ ಮಾರ್ಗವಾಗುವ ಪ್ರಕ್ರಿಯೆಗಳಿಗನುಗುಣವಾಗಿ ಕ್ರೈಸ್ತರಿಂದ ಸ್ಥಾನಮಾನ ಪಡೆದು ಈ ದೇಸೀಯ ಗೀತ ಸಂಪ್ರದಾಯ ನಮ್ಮ ಭಾವಗೀತೆಯ ಸೃಷ್ಟಿಯ ಪ್ರೇರಣೆಗಳಲ್ಲಿ ಒಂದಾಯಿತು.

.