ಕ್ರಿಯಾವಾದ ಎಂದರೆ ಒಂದು ಸಮಗ್ರ ರಚನೆಯಲ್ಲಿ ಇರಬಹುದಾದ ಅನೇಕ ಅಂಗಗಳು ಅಥವಾ ಅಂಶಗಳು ತಮ್ಮ ತಮ್ಮ ಸ್ಥಾನಕ್ಕೆ ಯೋಗ್ಯವಾದ ಕರ್ಮಗಳನ್ನು (ಅಥವಾ ಕಾರ್ಯಗಳನ್ನು) ಮಾಡುವ ಮೂಲಕ ತಮ್ಮ ತಮ್ಮ ಮೌಲ್ಯಗಳನ್ನು ನಿರ್ಧರಿಸಿಕೊಳ್ಳುತ್ತವೆ ಎಂಬ ವಿವೇಚನೆಯನ್ನು ತತ್ತ್ತ್ವಶಾಸ್ತ್ತ್ರದಲ್ಲಿ ಈ ಹೆಸರಿನಿಂದ (ಫಂಕ್ಷನಲಿಸಂ) ಕರೆಯುತ್ತಾರೆ.[೧]

ಅರ್ಥ ಬದಲಾಯಿಸಿ

ಸಮಾಜ, ವ್ಯಕ್ತಿ ಅಥವಾ ಯಾವುದೇ ಘಟಕದ ಸಾಧನೆ ಹಾಗೂ ಯಶಸ್ಸು ಅವುಗಳ ರಚನೆಯಲ್ಲಿರಬಹುದಾದ ಅಂಗಾಂಗಗಳ ಅಂಶಾಂಶಗಳ-ಅವು ಭೌತಿಕ ಅಥವಾ ದೈಹಿಕ ಆಗಿರಬಹುದು. ಮಾನಸಿಕ ಅಥವಾ ಆಧ್ಯಾತ್ಮಕ ಆಗಿರಬಹುದು-ಕರ್ತವ್ಯ ನಿರ್ವಹಣೆಗೆ ಹೊಂದಿಕೊಂಡಿರುತ್ತವೆಂಬುದು ಸ್ಪಷ್ಟ. ಹಾಗೆಯೇ ಈ ನಿರ್ವಹಣೆಯಲ್ಲಿ ಎಲ್ಲಿಯಾದರೂ ಕುಂದು ಇರುವುದಾದರೆ ಸಮಗ್ರತೆಯ ಅಥವಾ ಘಟಕದ ಸು-ಸ್ಥಿತಿಗೆ ಪೆಟ್ಟು ಬರುತ್ತದೆಂಬುದೂ ಸ್ಪಷ್ಟ. ಆದರೆ ಇಲ್ಲಿ ಕರ್ತವ್ಯ ಮತ್ತು ಅದರ ಸಿದ್ಧಿ ಸಮಗ್ರ ಘಟಕಕ್ಕೆ ಸಂಬಂಧಿಸಿದುದೇ ಅಥವಾ ಪ್ರತ್ಯೇಕ ಪ್ರತ್ಯೇಕವಾಗಿರುವ ಅಂಶ (ಅಥವಾ ಅಂಗ)ಗಳಿಗೆ ಸಂಬಂಧಿಸಿದುದೇ ಎನ್ನುವುದು ಯೋಚನೆಗೆ ಎಡೆ ಮಾಡಿಕೊಡುತ್ತದೆ. ಈ ವಿಚಾರದಲ್ಲಿ ತಾತ್ತ್ವಿಕರಲ್ಲಿ ಪಂಗಡಗಳೇ ಆಗಿವೆ.

ಪಂಗಡ ಬದಲಾಯಿಸಿ

ಕ್ರಿಯಾವಾದ ಸಮಗ್ರತೆಯ ಕರ್ತವ್ಯವನ್ನು ಹೇಗೆ ಸಮಷ್ಟಿದೃಷ್ಟಿಯಿಂದ ಮೌಲಿಕವಾದುದೆಂದು ಬಗೆಯುತ್ತದೋ ಹಾಗೆಯೇ ಅಂಶ ಅಂಶಗಳ ಕರ್ತವ್ಯವನ್ನೂ ಮೌಲಿಕವೆಂದು ತಿಳಿಯಬೇಕೆಂಬುದು ಮತ್ತೊಂದು ವಾದ. ಹಾಗೆಯೇ ಭೌತಿಕವೊ ಅಭೌತಿಕವೊ ಎಂಬುದನ್ನು ಅನುಸರಿಸಿ ಪ್ರತಿಯೊಂದು ಘಟಕಕ್ಕೂ ಒಂದು ಆಂತರಿಕ ರಚನೆ ಇರುವುದೆಂಬುದು ಸತ್ಯ. ಉದಾಹರಣೆಗೆ-ನಮ್ಮ ದೇಹದಲ್ಲಿ ವಿವಿಧ ಅಂಗಗಳು ಇರುವ ಹಾಗೆ, ಒಂದು ಯಂತ್ರದಲ್ಲಿ ವಿವಿಧ ಭಾಗಗಳು ಇರುವ ಹಾಗೆ, ಸಮಾಜದಲ್ಲಿ ವ್ಯಕ್ತಿಗಳೂ ಸಂಸ್ಥೆಗಳಿಗೂ ಇರುವ ಹಾಗೆ. ಇಲ್ಲಿ ಜಿe್ಞÁಸೆಗೆ ಅರ್ಹವಾದುದು ಏನೆಂದರೆ ಘಟಕದಲ್ಲಿನ ರಚನೆ (ಸ್ಟ್ರಕ್ಚರ್) ಮುಖ್ಯವೋ ಅದರ ಕ್ರಿಯೆ ಅಥವಾ ಕಾರ್ಯ (ಫಂಕ್ಷನ್) ಮುಖ್ಯವೋ ಎನ್ನುವುದು. ಈ ವಿಚಾರದಲ್ಲೂ ವಿದ್ವಾಂಸರಲ್ಲಿ ಪಂಗಡಗಳಾಗಿವೆ.

ಪ್ರಶ್ನೆಯನ್ನು ಪರಿಶೀಲಿಸುವ ದೃಷ್ಟಿಕೋನಗಳಲ್ಲಿ ವ್ಯತ್ಯಾಸ ಬರುವುದರಿಂದ ಈ ಪಂಗಡಗಳು ಏರ್ಪಟ್ಟಿರುವುದು ಸಹಜ. ಆದರೆ ರಚನೆ ಇಲ್ಲದೆ ಕಾರ್ಯವಿಲ್ಲ, ಕಾರ್ಯವಿಲ್ಲದ ರಚನೆಯಿಲ್ಲ ಎನ್ನುವುದನ್ನು ಮರೆಯಬಾರದು. ಈ ಎರಡನ್ನೂ ಕೂಡಿಸುವ ಪ್ರಮೇಯ ಅವುಗಳ ಧ್ಯೇಯದಲ್ಲಿ ಕಾಣುತ್ತದೆ. ಪ್ರತಿಯೊಂದು ಸಮಗ್ರದ ಅಥವಾ ಘಟಕದ ಕಾರ್ಯಪ್ರವೃತ್ತಿಯಲ್ಲೂ ಅಂಶಗಳ ಕಾರ್ಯಪ್ರವೃತ್ತಿಯಲ್ಲೂ ಒಂದು ಆಂತರಿಕ ಧ್ಯೇಯ ಇರಲೇಬೇಕೆಂಬ ಸತ್ಯವನ್ನು ಅನುಸರಿಸಿದ ಕ್ರಿಯಾವಾದವೂ ಒಂದು ತರಹೆಯ ಮೂಲ ಸಂಕಲ್ಪವಾದ (ಟೆಲಿಯಾಲೊಜಿ) ಎಂದೇ ಹೇಳಬೇಕು.

ಅರಿಸ್ಟಾಟಲಿನ ವಾದ ಬದಲಾಯಿಸಿ

ಕ್ರಿಯಾವಾದಗಳಲ್ಲಿ ಅರಿಸ್ಟಾಟಲಿನ ವಾದ (ಆಕ್ಚುಯಾಲಿಟಿ ಥಿಯೊರಿ) ಒಂದು. ಅವನ ಪ್ರಕಾರ ಇರವಿನ ದಶೆಗಳು ಎರಡು-ಅಂತಸ್ಥದಶೆ ಮತ್ತು ವಾಸ್ತವದಶೆ. ಇವೆರಡನ್ನೂ ಬೇರೆ ಬೇರೆಯಾಗಿ ಗುರುತಿಸಬಹುದಾದರೂ ಇವು ಒಂದನ್ನು ಬಿಟ್ಟು ಒಂದು ಇರುವುದಿಲ್ಲ. ಅಂತಸ್ಥ ದಶೆಯಲ್ಲಿ ಇರವನ್ನು ಅರಿಸ್ಟಾಟಲ್ ದ್ರವ್ಯವೆಂದೂ (ಮ್ಯಾಟರ್) ಕ್ರಿಯಾದಶೆಯಲ್ಲಿರುವುದನ್ನು ರೂಪ (ಫಾರಂ) ಎಂದೂ ಕರೆದಿದ್ದಾನೆ. ಯಾವುದೊಂದು ರೂಪ ಪ್ರಕಟವಾಗಬೇಕಾದರೂ ಅದು ಇರವಿನಲ್ಲಿ ಅಂತಸ್ಥವಾಗಿರಬೇಕು. ಯಾವುದನ್ನಾದರೂ ಅದು ವಾಸ್ತವ ಎಂದು ಹೇಳಬೇಕಾದರೆ ಅಂಶಸ್ಥವಾಗಿರುವುದು ಕ್ರಿಯಾರೂಪವಾಗಬೇಕು. ಅರಿಸ್ಟಾಟಲನ ಪ್ರಕಾರ ಪ್ರತಿಯೊಂದು ವಸ್ತುವಿಗೂ ನಾಲ್ಕು ಬಗೆಯಾದ ಕಾರಣಗಳಿವೆ. ಒಂದು ಗಿಡ ಹುಟ್ಟಿ ಬೆಳೆದು ಹೂ, ಕಾಯಿ, ಹಣ್ಣುಗಳನ್ನು ಬಿಡಬೇಕಾದರೆ ಅದಕ್ಕೆ ಬೀಜ ಕಾರಣ. ಇದು ಉಪಾದಾನ ಕಾರಣ (ಮೆಟೀರಿಯಲ್). ಬೀಜದಲ್ಲಿರುವುದನ್ನು ಕಾರ್ಯರೂಪಕ್ಕೆ ತರುವ ಶಾಖ, ನೀರು, ಭೂಸಾರ ಇತ್ಯಾದಿಗಳ ಸಮೂಹ ನಿಮಿತ್ತ ಕಾರಣ (ಎಫಿಷಂಟ್). ಗಿಡದ ವಿನ್ಯಾಸ ಭಾವಕಾರಣ (ಫಾರ್ಮಲ್). ಫಲಿಸಿ ಮುಂದೆ ಸಂತಾನಾಭಿವೃದ್ದಿಗೊಳಿಸುವುದು ಅಂತಿಮ ಕಾರಣ (ಫೈನಲ್) ಅಥವಾ ಪ್ರಯೋಜನ ಕಾರಣ. ಪ್ರಕೃತಿ ಪರಿಣಾಮಗೊಳ್ಳಲು ನಾಲ್ಕೂ ಅಗತ್ಯ. ಹೀಗೆ ಪರಿಣಾಮಗೊಳ್ಳುವ ಸತ್ತನ್ನು ಅರಿಸ್ಟಾಟಲ್ ಎಂಟೆಲಿಕಿ ಎಂದು ಕರೆದಿರುತ್ತಾನೆ.[೨]

ಸಾಂಖ್ಯ ಪರಿಣಾಮವಾದ ಬದಲಾಯಿಸಿ

ಭಾರತದಲ್ಲಿ ಅರಿಸ್ಟಾಟಲನ ಕ್ರಿಯಾವಾದವನ್ನು ಬಹುಮಟ್ಟಿಗೆ ಹೋಲುವ ವಾದವೆಂದರೆ ಸಾಂಖ್ಯ ಪರಿಣಾಮವಾದ. ಪ್ರಕೃತಿಯಲ್ಲಿ ಅಂತಸ್ಥವಾಗಿರುವುದು ವಾಸ್ತವ ವಿಶ್ವವಾಗಿ ಪರಿಣಾಮಗೊಳ್ಳುತ್ತದೆ ಎಂಬ ಒಂದು ಅಂಶದಲ್ಲಿ ಮಾತ್ರ ಸಾಂಖ್ಯಕ್ಕೂ ಅರಿಸ್ಟಾಟಲನ ತತ್ತ್ವಕ್ಕೂ ಸಾಮ್ಯವಿದೆ. ಸಾಂಖ್ಯದರ್ಶನ ವಿವರಿಸುವ ಪರಿಣಾಮ ಕ್ರಿಯೆ ತನ್ನದೇ ಆದ ವೈಶಿಷ್ಟ್ಟ್ಯವನ್ನು ಪಡೆದಿದೆ. ಸಾಂಖ್ಯ ದರ್ಶನವು ಇದರ ಬಗ್ಗೆ ಬಹುವಾಗಿ ಚರ್ಚೆ ಮಾಡುತ್ತದೆ.

ಪುರುಷ ನಿಷ್ಕ್ರಿಯಾರೂಪ ಬದಲಾಯಿಸಿ

ಭಾರತದ ಇನ್ನೊಂದು ಕ್ರಿಯಾವಾದ ಜೈನ ದಾರ್ಶನಿಕರದು. ಇವರದು ಸಾಂಖ್ಯರದಕ್ಕಿಂತ ಭಿನ್ನವಾದದ್ದು. ಸಾಂಖ್ಯರುವ ಪ್ರಕೃತಿ ಮಾತ್ರ ಕ್ರಿಯಾರೂಪವಾದದ್ದು, ಪುರುಷ ನಿಷ್ಕ್ರಿಯಾರೂಪ ಎಂದು ಹೇಳುತ್ತಾರೆ. ಜೈನರಾದರೋ ಪುರುಷ ಕ್ರಿಯಾರೂಪನೆಂದು ಭಾವಿಸುತ್ತಾರೆ.

ಬೌದ್ದ ರೂಪ ಬದಲಾಯಿಸಿ

ಭಾರತದ ಬೌದ್ದರು ಪರಮ ಕ್ರಿಯಾವಾದಿಗಳು. ಇವರ ಪ್ರಕಾರ ಕ್ರಿಯೆ ಇಲ್ಲದ ಯಾವೂದೂ ಇಲ್ಲವೇ ಇಲ್ಲ. ಯಾವುದೊಂದನ್ನಾಗಲಿ ಅದು ಇದೆ ಎಂದು ಹೇಳಬೇಕಾದರೂ ಅದರು ಅರ್ಧಕ್ರಿಯಾಕಾರಿಯಾಗಿರಬೇಕು. ಕ್ರಿಯಾರೂಪವೇ ವಾಸ್ತವರೂಪ. ಕ್ರಿಯೆ ಇಲ್ಲದ ಆತ್ಮನನ್ನು ಇವರು ಒಪ್ಪುವುದಿಲ್ಲ. ಸಕಲವೂ ಸದಾ ಬದಲಾಯಿಸುತ್ತಿದೆ. ಆದ್ದರಿಂದ ಸಕಲವೂ ಕ್ಷಣಿಕ ಎಂಬುದು ಇವರ ಮೂಲತತ್ತ್ವ.

ಆಧುನಿಕ ಪಾಶ್ಚಾತ್ಯ ತಾತ್ತ್ವಿಕತೆ ಬದಲಾಯಿಸಿ

ಅರಿಸ್ಟಾಟಲ್ ಪ್ರತಿಪಾದಿಸಿದ ನಾಲ್ಕು ಬಗೆಯ ಕಾರಣಗಳಲ್ಲಿ ಅಂತಿಮ ಕಾರಣಕ್ಕೆ ಹೆಚ್ಚು ಹೆಚ್ಚು ಪ್ರಾಶಸ್ತ್ಯ ಕೊಟ್ಟ ಆಧುನಿಕ ಪಾಶ್ಚಾತ್ಯ ತಾತ್ತ್ವಿಕರು, ಮುಖ್ಯವಾಗಿ ಧ್ಯೇಯವಾದಿಗಳು, ಸತ್ ತತ್ತ್ತ್ವವನ್ನು ಬೆಳೆಸಿದ್ದಾರೆ. ಸತ್ತಿನ ರಚನೆ ಮತ್ತು ಕ್ರಿಯೆಯನ್ನು ಕೂಡಿಸುವುದು ಅವೆರಡರಲ್ಲೂ ಅಂತಸ್ಥವಾದ ಧ್ಯೇಯ. [೩]ಆ ಧ್ಯೇಯವೇ ರಚನೆ ಮತ್ತು ಕ್ರಿಯೆಗಳ ಉದ್ದೇಶ. ಅದನ್ನು ಮುಟ್ಟುವುದೇ ಸಮಗ್ರ ಕಾರ್ಯ ಪ್ರವೃತ್ತಿಗಳ ಮತ್ತು ಅಂಶಗಳ ಕಾರ್ಯಪ್ರವೃತ್ತಿಯ ಪರಮಧ್ಯೇಯ. ಆ ಧ್ಯೇಯವೇ ರಚನೆ ಮತ್ತು ಕ್ರಿಯೆಗಳ ಉದ್ದೇಶ. ಅದನ್ನು ಮುಟ್ಟುವುದೇ ಸಮಗ್ರ ಕಾರ್ಯ ಪ್ರವೃತ್ತಿಗಳ ಮತ್ತು ಅಂಶಗಳ ಕಾರ್ಯಪ್ರವೃತ್ತಿಯ ಪರಮಧ್ಯೇಯ. ಈ ಧ್ಯೇಯ ವಾದವನ್ನು ಒಂದು ಬಗೆಯ ಕ್ರಿಯಾವಾದವೆಂದು ಭಾವಿಸಬಹುದು. ಇಂಥ ಕ್ರಿಯಾವಾದ ಚಿತ್‍ಪ್ರಧಾನವಾದಕ್ಕೂ ಏಕತಾವಾದಕ್ಕೂ ಹಬ್ಬಿರುವಂತೆ ವಾಸ್ತವವಾದಕ್ಕೂ ಅನೇಕತಾವಾದಕ್ಕೂ ಹಬ್ಬಿದೆ. ಜರ್ಮನಿಯ ಪ್ರಸಿದ್ಧ ತಾತ್ತ್ವಿಕನಾದ ಹೆಗೆಲನ ತತ್ತ್ವ ಚಿತ್‍ಪ್ರಧಾನ ಏಕತಾವಾದವಾದರೆ, ಜರ್ಮನಿಯ ಇನ್ನೊಬ್ಬ ಪ್ರಖ್ಯಾತ ತಾತ್ವಿಕನಾದ ಷೋಪೆನ್‍ಹೌರನದು ಸಂಕಲ್ಪ ಪ್ರಧಾನ ಕ್ರಿಯಾವಾದ. ಜೇಮ್ಸ್ ವಾರ್ಡ್ ಎಂಬ ಆಂಗ್ಲೇಯನ ತತ್ತ್ವ ಚಿತ್‍ಪ್ರಧಾನ ಅನೇಕತಾವಾದಕ್ಕೆ ನಿದರ್ಶನ.[೪] ಪಪ್ ಅಲೆಕ್ಸಾಂಡರ್ ಎಂಬುವನ ವಿಕಾಸವಾದ ವಾಸ್ತವಕ್ರಿಯಾವಾದಕ್ಕೆ ಉದಾಹರಣೆ ಎ.ಎನ್. ವೈಟ್‍ಹೆಡ್ ಆಧುನಿಕ ಕ್ರಿಯಾವಾದಗಳನ್ನು ಅರಿಸ್ಟಾಟಲನ ಕ್ರಿಯಾವಾದದೊಡನೆ ಸಮನ್ವಯಗೊಳಿಸಿದ್ದಾನೆ. ಇವನದು ಒಂದು ದೃಷ್ಟಿಯಿಂದ ವಾಸ್ತವವಾದ, ಇನ್ನೊಂದು ದೃಷ್ಟಿಯಿಂದ ಧ್ಯೇಯವಾದ; ಒಂದು ದೃಷ್ಟಿಯಿಂದ ಅದು ಏಕತಾವಾದ, ಇನ್ನೊಂದು ದೃಷ್ಟಿಯಿಂದ ಅನೇಕತಾವಾದ, ಹೀಗೆ ಅದು ಅನೇಕ ದೃಷ್ಟಿಗಳನ್ನು ಸಮನ್ವಯ ಮಾಡುವ ಕ್ರಿಯಾವಾದ. ಆತ ತನ್ನ ಒಂದು ಮುಖ್ಯ ಗ್ರಂಥಕ್ಕೆ ಪೋಸಸ್ ಅಂಡ್ ರಿಯಾಲಿಟಿ ಎಂಬ ಹೆಸರಿಟ್ಟು ಕಾರ್ಯಗತಿಗೆ ಆದ್ಯ ಸ್ಥಾನ ಕೊಟ್ಟಿದ್ದಾನೆ.[೫]

ವಿಲಿಯಮ್ ಜೇಮ್ಸ್‍ನ ಫಲವಾದ ಬದಲಾಯಿಸಿ

ಜೀವಶಾಸ್ತ್ರದಲ್ಲಿ ಡಾರ್ವಿನ್ನನ ವಿಕಾಸವಾದ ಹುಟ್ಟಿದ ಮೇಲೆ ಕ್ರಿಯಾವಾದ ಇನ್ನೊಂದು ರೂಪ ತಾಳಿತು. ಸನ್ನಿವೇಶಕ್ಕೆ ಹೊಂದಿಕೊಳ್ಳುವುದೇ ಒಂದು ಪ್ರಾಣಿಯ ಅಥವಾ ಸಸ್ಯದ ಉಳಿವಿಗೂ ಬೆಳೆವಿಗೂ ಕಾರಣ. ಸರಿಯಾಗಿ ಹೊಂದಿಕೊಂಡದ್ದು ಉಳಿಯುತ್ತದೆ. ಹೊಂದಿಕೊಳ್ಳದ್ದು ಅಳಿಯುತ್ತದೆ. ಒಂದು ಪ್ರಾಣಿಯ ಅಂಗರಚನೆ ಈ ಹೊಂದಿಕೆಗೆ ಅನುಸಾರವಾಗಿ ಬದಲಾಯಿಸುತ್ತದೆ. ಈಗಿನ ಕುದುರೆಯ ವಂಶಕ್ಕೆ ಮೂಲವಾದ ಪ್ರಾಣಿಯ ಕಾಲಿನಲ್ಲಿ ಒಂದು ದೊಡ್ಡ ಮುಂಗೊರಸಿಗೆ ಸೇರಿದಂತೆ ಅದರ ಹಿಂದೆ ಅದಕ್ಕಿಂತ ಸಣ್ಣದಾದ ಹಿಂಗೊರಸುಗಳಿದ್ದುವು. ಈ ಹಿಂಗೊರಸುಗಳಿಂದ ಅದರ ಓಟಕ್ಕೆ ಯಾವ ರೀತಿಯ ಅನುಕೂಲವೂ ಇರಲಿಲ್ಲ. ಕೆಲಸವಿಲ್ಲದ್ದರಿಂದ ಅವು ಕ್ರಮಕ್ರಮವಾಗಿ ಸಣ್ಣವಾಗಿ ಹಿಂದಕ್ಕೆ ಸರಿದು ಈಗ ಕೇವಲ ಅವಶೇಷಗಳಾಗಿ ಉಳಿದಿವೆ. ಹೀಗೆಯೇ ತೀರ ಸರಳವಾದ ಜೀವಿಯಿಂದ ಹಿಡಿದು ಸಂಕೀರ್ಣ ದೇಹಪಡೆದ ಮಾನವನವರೆಗೆ, ಕಾರ್ಯಪ್ರವೃತ್ತಿಗೆ ಅನುಗುಣವಾಗಿ ಅಂಗಗಳ ಮತ್ತು ಇಡೀ ದೇಹದ ರಚನೆ ಮಾರ್ಪಡುತ್ತಿರುವುದನ್ನು ಕಾಣಬಹುದು. ಡಾರ್ವಿನ್ನನ ವಿಕಾಸವಾದದಿಂದ ಪ್ರೇರಿತವಾಗಿ ತತ್ತ್ವಶಾಸ್ತ್ರದಲ್ಲಿ ಹೊಸಬಗೆಯ ಕ್ರಿಯಾವಾದಗಳು ಹುಟ್ಟಿಕೊಂಡವು. ಫ್ರಾನ್ಸ್ ದೇಶದ ಪ್ರಸಿದ್ದ ತಾತ್ತ್ತ್ತ್ವಿಕನಾದ ಬರ್ಗ್‍ಸನ್ನನ ಸೃಷ್ಟ್ಯಾತಂಕ ಕ್ರಿಯಾವಾದ ಅವುಗಳಲ್ಲಿ ಒಂದು. ಇನ್ನೊಂದು ಬಗೆಯ ಕ್ರಿಯಾವಾದವನ್ನು ರೂಪಿಸಿದವ ಅಮೇರಿಕದ ತಾತ್ತ್ವಿಕ ಜಾನ್ ಡ್ಯೂಯಿ. [೬]ಸತ್ತಿನಲ್ಲಾಗಲಿ ಜ್ಞಾನದಲ್ಲಾಗಲಿ ಸತ್ತ್ವವಿರುವುದು ಅದರ ಕ್ರಿಯಾಕಾರಿತ್ವದಲ್ಲೇ-ಎಂಬುದು ಇವರ ವಾದ. ಯಾವುದಾದರೂ ಇದೆ ಎಂದು ನಾವು ಬಗೆಯಬೇಕಾದರೆ ಅದು ಪರಿಣಾಮಕಾರಿಯಾಗಿರಬೇಕು. ಯಾವ ಭಾವನೆಯನ್ನೇ ಆಗಲಿ ಅದು ಸತ್ಯ ಎಂದು ನಾವು ಸ್ಥಿರಪಡಿಸಬೇಕಾದೆ ಅದರಿಂದ ನಾವು ನಿರೀಕ್ಷಿಸಬಹುದಾದ ಫಲ ದೊರೆಯಬೇಕು. ಜೀವನದಲ್ಲಿ ಪರಿಣಾಮಕಾರಿಯಾಗುವುದೇ ಸತ್ಯದ ಹೆಗ್ಗುರುತು. ಜ್ಞಾನ ಕೇವಲ ಬೆಳಕಲ್ಲ, ಅದು ಒಂದು ಶಕ್ತಿ, ಕ್ರಿಯಾಕಾರಕ ಸಾಧನ ಅಥವಾ ಕರಣ. ಆದ್ದರಿಂದ ಡ್ಯೂಯಿ ತನ್ನ ಜ್ಞಾನತತ್ತ್ವವನ್ನು ಕರಣತತ್ತ್ವವೆಂದು ಕರೆದಿದ್ದಾನೆ.[೭] ಡ್ಯೂಯಿಗೆ ಪ್ರೇರಕವಾದದ್ದು ವಿಲಿಯಮ್ ಜೇಮ್ಸ್‍ನ ಫಲವಾದವೆಂಬ ಕ್ರಿಯಾವಾದ.[೮]

ನೋಡಿ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. "ಆರ್ಕೈವ್ ನಕಲು". Archived from the original on 2020-03-31. Retrieved 2020-01-08.
  2. https://plato.stanford.edu/entries/functionalism/
  3. https://www.nyu.edu/gsas/dept/philo/faculty/block/papers/functionalism.html
  4. https://www.thoughtco.com/functionalist-perspective-3026625
  5. https://www.tutor2u.net/sociology/topics/functionalism
  6. https://www.betterhelp.com/advice/psychologists/pragmatism-functionalism-and-william-james-psychology/
  7. https://www.ncbi.nlm.nih.gov/pubmed/11763887
  8. https://psychology.fas.harvard.edu/people/william-james