ಕ್ರಿಯಾಪದ‎(kriyāpada) ಪದವನ್ನು ಇಂಗ್ಲಿಷ್‍ನಲ್ಲಿ verb ಎಂದು ಕರೆಯುತ್ತಾರೆ. ಕ್ರಿಯೆ ಎಂದರೆ ಕೆಲಸ. ಕ್ರಿಯೆಗೆ ಕಾರಣವಾದವುಗಳು ಕಾರಕಗಳು. ಕಾರಕ ಎಂದರೆ ಚಾಲಕ, ಪ್ರಚೋದಕ ಎಂಬ ಅರ್ಥಗಳಿವೆ. ಕೆಲಸವನ್ನು ಸೂಚಿಸುವ ಪದಗಳನ್ನು ಕ್ರಿಯಾಪದಗಳು ಎಂದು ಕರೆಯುತ್ತಾರೆ.[]

ಉದಾ:

(i) ತಾಯಿಯು ಅಡಿಗೆಯನ್ನು ಮಾಡುತ್ತಾಳೆ.

(ii) ತಂದೆಯು ಕೆಲಸವನ್ನು ಮಾಡಿದನು.

(iii) ಅಣ್ಣ ಊಟವನ್ನು ಮಾಡುವನು.

(iv) ದೇವರು ಒಳ್ಳೆಯದನ್ನು ಮಾಡಲಿ.

(vi) ಅವನು ನಾಳೆಯದಿನ ಮಾಡಾನು (ಮಾಡಿಯಾನು).

(vii) ಅವನು ಊಟವನ್ನು ಮಾಡನು.

ಮೇಲೆ ಇರುವ ವಾಕ್ಯಗಳಲ್ಲಿ ದಪ್ಪಕ್ಷರದಲ್ಲಿರುವ ಪದಗಳಾದ- ಮಾಡುತ್ತಾಳೆ, ಮಾಡಿದನು, ಮಾಡುವನು, ಮಾಡಲಿ, ಮಾಡಾನು (ಮಾಡಿಯಾನು), ಮಾಡನು- ಇವೆಲ್ಲ ಒಂದೊಂದು ಕ್ರಿಯೆಯು ಪೂರ್ಣಗೊಂಡ ಅರ್ಥಕೊಡುವಂಥ ಪದಗಳಾಗಿವೆ. ಆದುದರಿಂದ ಹೀಗೆ ಪೂರ್ಣಗೊಂಡ ಒಂದು ಕ್ರಿಯೆಯ ಅರ್ಥಕೊಡುವ ಪದಗಳನ್ನು ಸಾಮಾನ್ಯವಾಗಿ ಕ್ರಿಯಾಪದ ಎನ್ನುತ್ತೇವೆ.

ಮೇಲೆ ಹೇಳಿದ ಆರು ಕ್ರಿಯಾಪದಗಳಿಗೆಲ್ಲ ಮೂಲ ಮಾಡು ಎಂಬ ಶಬ್ದವಾಗಿದೆ. ಇದು ಕ್ರಿಯೆಯ ಅರ್ಥವನ್ನು ಕೊಡುವ ಮೂಲ ರೂಪವೇ ಆಗಿದೆ.

ಮಾಡುತ್ತಾನೆ ಮಾಡು
ಮಾಡಿದನು
ಮಾಡುವನು
ಮಾಡಲಿ
ಮಾಡಾನು
ಮಾಡನು

ಮಾಡು ಎಂಬ ಈ ಮೂಲರೂಪಕ್ಕೆ ಅನೇಕ ಪ್ರತ್ಯಯಗಳು ಸೇರಿದ ಮೇಲೆ ಅದು ವಿವಿಧ ರೂಪಗಳನ್ನು ಹೊಂದಿ ವಿವಿಧವಾದ ಕ್ರಿಯೆಯನ್ನು ಸೂಚಿಸುವ ಕ್ರಿಯಾಪದವಾಗುವುದು.  ಇಂಥ ಕ್ರಿಯಾಪದದ ಮೂಲರೂಪವನ್ನು ಕ್ರಿಯಾಪ್ರಕೃತಿ ಅಥವಾ ಧಾತು ಎನ್ನುವರು.  ಇದರ ಸೂತ್ರವನ್ನು ಮುಂದಿನಂತೆ ಹೇಳಬಹುದು.

ಕ್ರಿಯಾರ್ಥವನ್ನು ಕೊಡುವುದಾಗಿಯೂ, ಪ್ರತ್ಯಯವನ್ನು ಹೊಂದದೆಯೂ ಇರುವ ಶಬ್ದಕ್ಕೆ ಕ್ರಿಯಾಪ್ರಕೃತಿ ಅಥವಾ ಧಾತು ಎನ್ನುವರು.[]

ಇಂಥ ಧಾತುಗಳು ಎರಡು ವಿಧ.

ಧಾತುಮಾಡುತ್ತಾಳೆ
ಮೂಲ ಧಾತು ಪ್ರತ್ಯಯಾಂತ ಧಾತು

(೧) ಮೂಲಧಾತುಗಳು- ಉದಾಹರಣೆಗೆ:- ಮಾಡು, ತಿನ್ನು, ಹೋಗು, ಬರು, ಮಲಗು, ಏಳು, ನಡೆ, ನೋಡು, ಓಡು, ನಿಲ್ಲು, ಓದು, ಆಗು, ಹೊಳೆ, ಬದುಕು, ಇಕ್ಕು, ಮುಗಿ, ತೂಗು, ಹಿಗ್ಗು, ನಡುಗು, ಮಿಂಚು, ಮೆಟ್ಟು, ಹಂಚು, ಅಂಜು, ಈಜು, ಉಜ್ಜು, ದಾಟು, ಹುಟ್ಟು, ಒಕ್ಕು, ತುಂಬು, ಮುಚ್ಚು, ಹಿಡಿ, ಕೊಡು, ಹರಡು, ಇಡು, ಪಡೆ, ಕುಣಿ, ಕಾಣು, ಸುತ್ತು, ಒತ್ತು, ಎತ್ತು, ಬಿತ್ತು, ತೆರು, ಒದೆ, ತಿದ್ದು, ಹೊಡೆ, ಬಡಿ, ಬರೆ, ನೆನೆ, ಎನ್ನು, ಒಪ್ಪು, ತಪ್ಪು, ನಂಬು, ಉಬ್ಬು, ಕಾ, ಬೇ, ಮೀ, ಮೇ, ಚಿಮ್ಮು, ಹೊಯ್, ಬಯ್, ಸುಯ್, ಕೊಯ್, ತೆಯ್, ಸುರಿ, ಅರಿ, ಹೀರು, ಸೇರು, ಸೋಲು, ಹೊಲಿ, ಬಲಿ, ಹೇಸು, ಅರಸು, ಹುಡುಕು, ಬಳಸು, ಗುಡಿಸು, ಚೆಲ್ಲು, ತೊಳೆ, ಬೆಳಗು, ಬಡಿಸು, ಇಳಿ, ಏರು, ಹೊಗಳು, ತೆಗಳು, ಬಾಳು, ಬೀಳು, ತಾಳು, ಎಳೆ, ಕಳಿ, ಸೆಳೆ, ತಿಳಿ, ಸುಳಿ, ಕೊರೆ-ಇತ್ಯಾದಿ.

ಮೇಲೆ ಹೇಳಿದವುಗಳಲ್ಲದೆ ಇನ್ನೂ ಅನೇಕ ಧಾತುಗಳಿವೆ.  ಈ ಎಲ್ಲ ಧಾತುಗಳಿಂದ ಆದ ವಿವಿಧ ಪ್ರತ್ಯಯಗಳನ್ನು ಹೊಂದಿ ವರ್ತಮಾನ, ಭೂತ, ಭವಿಷ್ಯತ್‌ಕಾಲಗಳಲ್ಲೂ ವಿಧ್ಯರ್ಥ, ಸಂಭಾವನಾರ್ಥ, ನಿಷೇಧಾರ್ಥಗಳಲ್ಲೂ ನಾವು ಅನೇಕ ಕ್ರಿಯಾಪದಗಳನ್ನು ಪ್ರತಿನಿತ್ಯ ಭಾಷೆಯಲ್ಲಿ ಬಳಸುತ್ತೇವೆ.

(೨) ಸಾಧಿತ ಧಾತು (ಪ್ರತ್ಯಯಾಂತ ಧಾತು)- ಒಮ್ಮೊಮ್ಮೆ ನಾವು ನಾಮಪ್ರಕೃತಿಗಳನ್ನೇ ಧಾತುಗಳನ್ನಾಗಿ ಮಾಡಿಕೊಂಡು ಕ್ರಿಯಾಪ್ರಕೃತಿಗಳಿಗೆ ಹತ್ತುವ ಪ್ರತ್ಯಯ ಹಚ್ಚಿ ಕ್ರಿಯಾಪದಗಳ ನ್ನಾಗಿ ಮಾಡಿ ಹೇಳುತ್ತೇವೆ.

ಉದಾಹರಣೆಗೆ:- ಅವನು ಆ ಗ್ರಂಥವನ್ನು ಕನ್ನಡಿಸಿದನು.  ಕನ್ನಡ ಎಂಬುದು ನಾಮಪ್ರಕೃತಿಯಾಗಿದೆ.  ಇದು ಧಾತುವಲ್ಲ.  ಇದರ ಮೇಲೆ ಇಸು ಪ್ರತ್ಯಯ ಹಚ್ಚಿ ಕನ್ನಡಿಸು ಎಂದು ಆಗುವುದಿಲ್ಲವೆ? ಹೀಗೆ ಕನ್ನಡಿಸು ಎಂದಾದ ಮೇಲೆ ಇದು ಧಾತುವೆನಿಸುತ್ತದೆ.  ಇದರ ಮೇಲೆ ಧಾತುಗಳ ಮೇಲೆ ಸೇರಬೇಕಾದ ಎಲ್ಲ ಪ್ರತ್ಯಯಗಳು ಸೇರಿ-ಕನ್ನಡಿಸುತ್ತಾನೆ, ಕನ್ನಡಿಸಿದನು, ಕನ್ನಡಿಸುವನು, ಕನ್ನಡಿಸಲಿ, ಕನ್ನಡಿಸಾನು, ಕನ್ನಡಿಸನು-ಇತ್ಯಾದಿ ಕ್ರಿಯಾಪದಗಳಾಗಿ ಬಳಸಲ್ಪಡುತ್ತವೆ.  ಇಂಥ ಧಾತುಗಳನ್ನೇ ನಾವು ಸಾಧಿತಧಾತು ಅಥವಾ ಪ್ರತ್ಯಯಾಂತಧಾತು ಗಳೆಂದು ಕರೆಯುತ್ತೇವೆ.

ಪ್ರತ್ಯಯಾಂತ ಧಾತು (ಸಾಧಿತ ಧಾತು):- ಕೆಲವು ನಾಮ ಪ್ರಕೃತಿಗಳ ಮೇಲೂ, ಧಗ ಧಗ, ಛಟ ಛಟ ಮೊದಲಾದ ಅನುಕರಣ ಶಬ್ದಗಳ ಮೇಲೂ ಇಸು ಎಂಬ ಪ್ರತ್ಯಯ ಸೇರಿದಾಗ ಅವು ಪ್ರತ್ಯಯಾಂತ ಧಾತುಗಳೆನಿಸುತ್ತವೆ. ಇವಕ್ಕೆ ಸಾಧಿತ ಧಾತುಗಳೆಂದೂ ಹೆಸರು.

ಉದಾಹರಣೆಗೆ:-

ನಾಮ ಪ್ರಕೃತಿ + ಇಸು = ಧಾತು - ಕ್ರಿಯಾಪದ
ಕನ್ನಡ + ಇಸು = ಕನ್ನಡಿಸು - ಕನ್ನಡಿಸಿದನು
ಓಲಗ + ಇಸು = ಓಲಗಿಸು - ಓಲಗಿಸುತ್ತಾನೆ
ಅಬ್ಬರ + ಇಸು = ಅಬ್ಬರಿಸು - ಅಬ್ಬರಿಸುವನು
ನಾಮ ಪ್ರಕೃತಿ + ಇಸು = ಧಾತು - ಕ್ರಿಯಾಪದ

ಅನುಕರಣ ಶಬ್ದಗಳು ಧಾತುಗಳಾಗುವುದಕ್ಕೆ ಉದಾಹರಣೆ:-

ಧಗ ಧಗ + ಇಸು = ಧಗಧಗಿಸು - ಧಗಧಗಿಸುತ್ತಾನೆ
ಥಳ ಥಳ + ಇಸು = ಥಳಥಳಿಸು - ಥಳಥಳಿಸುತ್ತಾನೆ
ಗಮ ಗಮ + ಇಸು = ಗಮಗಮಿಸು - ಗಮಗಮಿಸುವುದು
ಛಟ ಛಟ + ಇಸು = ಛಟಛಟಿಸು - ಛಟಛಟಿಸುತ್ತದೆ

ಉಲ್ಲೇಖ

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2016-03-06. Retrieved 2015-09-13.
  2. http://karnatakaeducation.org.in/KOER/index.php/%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%B5%E0%B3%8D%E0%B2%AF%E0%B2%BE%E0%B2%95%E0%B2%B0%E0%B2%A3

೩. http://dnshankarabhat.net/tag/%E0%B2%95%E0%B3%8D%E0%B2%B0%E0%B2%BF%E0%B2%AF%E0%B2%BE%E0%B2%AA%E0%B2%A6/