ಕ್ರಿಟೇಷಸ್

ಸುಮಾರು 135 ದಶಲಕ್ಷ ವರ್ಷ ಪ್ರಾಚೀನದಿಂದ ಸು. 65 ದ.ಲ. ವರ್ಷ ಪ್ರಾಚೀನದವರೆಗಿನ ಭೂವೈಜ್ಞಾನಿಕ ಕಲ್ಪದ ಮತ್ತು ಶಿಲಾಸ್ತೋಮಗಳ ಅತ್ಯಾಧುನಿಕ ವ್ಯವಸ್ಥೆಯ ಹೆಸರು. ಕ್ರಿಟೇಷಸ್ ಕಲ್ಪ ಮೀಸೋಜೋಯಿಕ್ ಯುಗದ (ಸು. 225 ದ.ಲ.ವ. ಪ್ರಾಚೀನ-ಸು. 65 ದ.ಲ.ವ. ಪ್ರಾಚೀನ ; ಮಧ್ಯಜೀವಯುಗ) ಮೂರನೆಯ ಹಾಗೂ ಕೊನೆಯ ಕಲ್ಪ. ಕ್ರಿಟೇಷಸ್ ಎಂಬ ಹೆಸರನ್ನು ಒಮಲಿಯಸ್ ಡಿ. ಹೆಲಾಯ್ ಮೊದಲು ಸೂಚಿಸಿದವ (1822). ಕ್ರೀಟ ಎಂದರೆ ರೋಮನ್ ಭಾಷೆಯಲ್ಲಿ ಚಾಕ್ ಎಂದು ಅರ್ಥ. ಈ ಹೆಸರು ಇಂಗ್ಲಿಷ್ ಕಡಲ್ಗಾಲುವೆಯ ಎರಡು ಕಡೆಗಳಲ್ಲಿಯೂ ಇರುವ ಕಡಿದಾದ ಬಿಳಿ ದಿಬ್ಬಗಳಲ್ಲಿ ಉತ್ಕøಷ್ಟವಾಗಿ ರೂಪುಗೊಂಡಿರುವ, ಚಾಕ್ ನಿಕ್ಷೇಪದಿಂದ ಬಂದಿದೆ. ಕ್ರಿಟೇಷಸ್ ಸ್ತೋಮವನ್ನು ಜುರಾಸಿಕ್ ಮತ್ತು ಆಧುನಿಕ ಜೀವಕಲ್ಪದ ಸ್ತೋಮಗಳಿಂದ ಮೊದಲಬಾರಿಗೆ ಬೇರ್ಪಡಿಸುದುದು ಈ ಕ್ಷೇತ್ರದಲ್ಲಿಯೇ. ಇಲ್ಲಿ ಕ್ರಿಟೇಷಸ್ ಸ್ತೋಮದ ಕೆಳಗೂ ಮೇಲೂ ಸ್ಪಷ್ಟ ಅನನುರೂಪತೆಗಳು (ನೋಡಿ- ಅನುರೂಪತೆ) ಇರುವುದರಿಂದ ಇದರ ಎಲ್ಲೆಗಳು ನಿಖರವಾಗಿವೆ.

ಕ್ರಿಟೇಷಸ್ ಸ್ತೋಮದ ವಿಶಿಷ್ಟ ಶಿಲೆ ಚಾಕ್ ಆಗಿದ್ದರೂ ಇದರಲ್ಲಿ ಇತರ ಶಿಲೆಗಳು ಕೂಡ ಇವೆ. ಜೇಡುಶಿಲೆ, ಮರಳುಶಿಲೆ ಮತ್ತು ಗಟ್ಟಿ ಸುಣ್ಣಶಿಲೆಗಳು ಅನೇಕ ಪ್ರದೇಶಗಳಲ್ಲಿ ಚಾಕಿಗಿಂತಲೂ ಹೆಚ್ಚು ಮೊತ್ತದಲ್ಲಿವೆ. ಈ ದೃಷ್ಟಿಯಿಂದ ನೋಡಿದರೆ ಕ್ರಿಟೇಷಸ್ ಎಂಬ ಹೆಸರು ಅಸಮಂಜಸವೇ ಸರಿ. ಆದರೆ ಮತ್ತಾವ ಸ್ತೋಮದಲ್ಲೂ ಇಷ್ಟೊಂದು ಮೊತ್ತದಲ್ಲಿ ಚಾಕ್ ಇಲ್ಲದಿರುವುದರಿಂದಲೂ ಈ ಸ್ತೋಮಕ್ಕೆ ಮತ್ತಾವ ಹೆಸರನ್ನು ಸೂಚಿಸಿಲ್ಲವಾದ್ದರಿಂದಲೂ ಕ್ರಿಟೇಷಸ್ ಎಂಬ ಹೆಸರಿಗೆ ಒಮ್ಮತದ ಸಮ್ಮತಿ ದೊರೆತಿದೆ.

ಕ್ರಿಟೇಷಸ್ ಸ್ತೋಮದ ಅನುಮೋದಿತ ವಿಭಜನೆಯನ್ನು ಫ್ರಾನ್ಸ್, ಸ್ವಿಟ್ಜರ್ಲೆಂಡ್, ಇಂಗ್ಲೆಂಡ್, ಜರ್ಮನಿ, ಬೆಲ್ಜಿಯಂ, ಹಾಲೆಂಡ್ ಮತ್ತು ಡೆನ್ಮಾರ್ಕ್ ದೇಶಗಳಲ್ಲಿನ ನಿಕ್ಷೇಪಗಳ ಆಧಾರದ ಮೇಲೆ ಮಾಡಲಾಗಿದೆ. ಈ ಸ್ತೋಮದ ಮುಖ್ಯಭಾಗಗಳನ್ನೂ ಅವನ್ನು ನಿರ್ಮಿಸಲು ಆಧಾರವಾಗಿಟ್ಟುಕೊಂಡ ಪ್ರದೇಶಗಳನ್ನೂ ಮುಂದೆ ಬರೆದಿದೆ.

ಪ್ರಪಂಚದಾದ್ಯಂತ ನಡೆದಿರುವ ಸಮುದ್ರಾಕ್ರಮಣ ಕ್ರಿಟೇಷಸ್ ಕಲ್ಪದ ಮಹತ್ತ್ವ ಘಟನೆಗಳಲ್ಲಿ ಒಂದು. ಇದನ್ನು ಸಾಮಾನ್ಯವಾಗಿ ಸಿನೊಮೇನಿಯನ್ ಸಮುದ್ರಾಕ್ರಮಣ ಎನ್ನುವುದು ರೂಢಿ. ಇದು ಸಿನೊಮೇನಿಯನ್ ಕಾಲಕ್ಕಿಂತ ಮುಂಚೆಯೇ ಪ್ರಾರಂಭವಾಗಿರುವುದು ಕ್ರಿಟೇಷಸ್ ಸ್ತೋಮಗಳ ಪರಿಶೀಲನೆಯಿಂದ ಗೊತ್ತಾಗುತ್ತದೆ. ಕ್ರಿಟೇಷಸ್ ಕಲ್ಪದ ಅಂತ್ಯದಲ್ಲಿ ಉತ್ತರ ಅಮೆರಿಕದಲ್ಲಿ ಲೆರಮಿಯನ್ ಭೂಚಲನೆಯಾಯಿತು. ಗೊಂಡವಾನ ಭೂಭಾಗ ಒಡೆದು ಐದು ಭಾಗಗಳಾಯಿತು. ಈ ಎರಡು ಘಟನೆಗಳ ಕಾಲದಲ್ಲಿ ಪ್ರಪಂಚದ ಅನೇಕ ಕಡೆಗಳಲ್ಲಿ ಅಗಾಧ ಮೊತ್ತದ ಶಿಲಾರಸ ಹೊರಬಂದಿದೆ. ಭಾರತದ ಡೆಕ್ಕನ್ ಟ್ರ್ಯಾಪ್ ಮತ್ತು ಅದಕ್ಕಿಂತ ಹಿಂದಿನ ಪೂರ್ವ ಆಫ್ರಿಕದ ಜ್ವಾಲಾಮುಖಿಜ ಶಿಲೆಗಳು ಈ ಕಾಲದವು. ಗೊಂಡವಾನ ಖಂಡದ ಛಿದ್ರತೆ ಆಲ್ಟ್ಸ್ ಮತ್ತು ಹಿಮಾಲಯ ಪರ್ವತಗಳ ಉದಯಕ್ಕೆ ಕಾರಣವಾಯಿತು.

ಯೂರೋಪಿನಲ್ಲಿ ಕ್ರಿಟೇಷಸ್ ಕಲ್ಪ ಸಮುದ್ರಾಕ್ರಮಣದೊಡನೆ ಪ್ರಾರಂಭವಾಯಿತು. ಈ ಕಲ್ಪದಲ್ಲಿ ಉತ್ತರ ಸಮುದ್ರ ಮತ್ತು ಮೆಡಿಟರೇನಿಯನ್ ಸಮುದ್ರ ಎಂಬ ಎರಡು ಸಾಗರ ಪ್ರಾಂತ್ಯಗಳಿದ್ದುವು. ಇಂಗ್ಲೆಂಡಿನ ವಾಯುವ್ಯ ಭಾಗ ಮತ್ತು ಫ್ರಾನ್ಸಿನ ಉತ್ತರ ಭಾಗಗಳನ್ನು ಒಳಗೊಂಡಿದ್ದ ಉತ್ತರ ಸಮುದ್ರ ಬೆಲ್ಜಿಯಂ, ಹಾಲೆಂಡ್, ಡೆನ್ಮಾರ್ಕ್, ಜರ್ಮನಿಗಳ ಮೂಲಕ ರಷ್ಯದವರೆಗೆ ವಿಸ್ತರಿಸಿತ್ತು. ಮೆಡಿಟರೇನಿಯನ್ ಸಮುದ್ರ ಪಶ್ಚಿಮಕ್ಕೆ ಪೈರೆನಿಸ್ ಬೆಟ್ಟಗಳ ಎರಡು ತಪ್ಪಲುಗಳಲ್ಲಿ ಹಾದು, ಪೋರ್ಚುಗಲ್ ಮತ್ತು ದಕ್ಷಿಣ ಫ್ರಾನ್ಸ್‍ವರೆಗೂ ಪೂರ್ವಕ್ಕೆ ಇಟಲಿ, ಗ್ರೀಸ್‍ಗಳ ಮೂಲಕ ಏಷ್ಯಮೈನರ್ ಮತ್ತು ಏಷ್ಯದವರೆಗೂ ವಿಸ್ತರಿಸಿತ್ತು. ಈ ಎರಡು ಪ್ರಾಂತ್ಯಗಳ ನಿಕ್ಷೇಪಗಳು ತೀರ ಭಿನ್ನವಾಗಿವೆ. ಉತ್ತರ ಸಮುದ್ರದಲ್ಲಿ ಮೃದುವಾದ ಬಿಳಿ ಚಾಕ್ ನಿಕ್ಷೇಪವಾಗಿದ್ದರೆ ಮೆಡಿಟರೇನಿಯನ್ ಸಮುದ್ರದಲ್ಲಿ ಗಟ್ಟಿ ಸುಣ್ಣಶಿಲೆ ನಿಕ್ಷೇಪಗೊಂಡಿದೆ. ಇವುಗಳಲ್ಲಿರುವ ಫಾಸಿಲುಗಳ ಭಿನ್ನತೆ ಇನ್ನೂ ಸ್ಪಷ್ಟ ರೀತಿಯದು. ಮೆಡಿಟರೇನಿಯನ್ ನಿಕ್ಷೇಪದಲ್ಲಿ ರೂಡಿಸ್ಟಿಡ್ ಮೃದ್ವಂಗಿಗಳ ಅವಶೇಷಗಳು ಬಹು ಹೇರಳವಾಗಿವೆ. ಆದ್ದರಿಂದ ಅವನ್ನು ರೂಡಿಸ್ಟಿನ್ ಕಾಕ್ ಅಥವಾ ಹಿಪ್ಪುರೈಟಿಸ್ ಸುಣ್ಣಶಿಲೆ ಎಂದು ಕರೆದಿರುತ್ತಾರೆ. ಈ ಜಾತಿಯ ಮೃದ್ವಂಗಿಗಳ ಪ್ರಕಾರಗಳು ಒಂದಾದ ಮೇಲೊಂದರಂತೆ ಉದಯಿಸಿರುವುದರಿಂದ ಅವು ಕ್ರಿಟೇಷಸ್ ಸ್ತೋಮವನ್ನು ಅನೇಕ ಶಿಲಾಪಾದಗಳನ್ನಾಗಿ ವಿಭಜಿಸಲು ಸಹಕಾರಿಯಾಗಿವೆ. ಇವು ಉತ್ತರ ಸಮುದ್ರದಲ್ಲಿ ಬಹು ವಿರಳ. ಆದರೆ ಉತ್ತರ ಪ್ರಾಂತ್ಯದಲ್ಲಿ ಹೇರಳವಾಗಿರುವ ಅಮೊನೈಟು ಮತ್ತು ಬೆಲಿಮ್ನೈಟುಗಳು ಇಲ್ಲಿ ವಿರಳ. ಹೀಗೆ ಈ ಎರಡು ಪ್ರಾಂತ್ಯಗಳ ನಿಕ್ಷೇಪಗಳು ಸಂಯೋಜನೆ ಮತ್ತು ಫಾಸಿಲುಗಳೆರಡರಲ್ಲೂ ಭಿನ್ನತೆಯನ್ನು ವ್ಯಕ್ತಪಡಿಸುತ್ತವೆ.

ಜುರಾಸಿಕ್ ಅಂತ್ಯದಲ್ಲೇ ಅಲ್ಲ ಕ್ರಿಟೇಷಸ್ ಆದಿಯಲ್ಲೂ ಬ್ರಿಟನಿನ ಉತ್ತರದಲ್ಲಿರುವ ಯಾರ್ಕ್‍ಷೈರ್ ಮತ್ತು ಲಿಂಕನ್‍ಷೈರುಗಳು ಮತ್ತೊಂದು ಸಮುದ್ರಾಕ್ರಮಣಕ್ಕೊಳಗಾಗಿದ್ದವು. ಇದಕ್ಕೂ ಆಂಗ್ಲೊ-ಪ್ಯಾರಿಸ್ ಪ್ರಾಂತ್ಯಕ್ಕೂ ಮಧ್ಯೆ ಒಂದು ದಿಬ್ಬವಿತ್ತು. ಇದು ಚಾರನ್‍ವುಡ್ಡಿನಿಂದ ಬೆಡ್‍ಫೋರ್ಡ್‍ಷೈರ್ ಮೂಲಕ ಬೆಲ್ಜಿಯಂವರೆಗೆ ಹಬ್ಬಿತು. ಸಿನೊಮೇನಿಯನ್ ಆಕ್ರಮಣ ಕಾಲದಲ್ಲಿ ಇವೆರಡು ಸಮುದ್ರಗಳೂ ವಿಲೀನವಾದುವು.

ಉತ್ತರ ಅಮೆರಿಕ: ಇಲ್ಲಿ ನಡೆದ ಕ್ರಿಟೇಷಸ್ ಕಲ್ಪದ ಸಮುದ್ರಾಕ್ರಮಣ ಭೂ ಇತಿಹಾಸದಲ್ಲೇ ಅತ್ಯಂತ ದೊಡ್ಡ ಪರಿಮಾಣದ್ದು. ಕ್ರಿಟೇಷಸ್ ಕಲ್ಪದ ಉತ್ತರಾರ್ಧದ ಆದಿಭಾಗದಲ್ಲಿ ಸಮುದ್ರಾಕ್ರಮಣ ಮೆಕ್ಸಿಕೋ ಕೊಲ್ಲಿಯಿಂದ ಪ್ರಾರಂಭಿಸಿ ಮೊದಲು ಟೆಕ್ಸಾಸ್ ಪ್ರಾಂತ್ಯಕ್ಕೆ ವಿಸ್ತರಿಸಿತು. ಅನಂತರ ಅದು ಕ್ಯಾನ್ಸಸ್, ನೆಬ್ರಾಸ್ಕ್ ಮತ್ತು ಕೊಲೊರಾಡೊ ಪ್ರಾಂತ್ಯಗಳ ಮೂಲಕ ಅಯೋವ ಪ್ರಾಂತ್ಯದವರೆಗೆ ವಿಸ್ತರಿಸಿತು. ಇದಾದ ಸ್ವಲ್ಪಕಾಲದಲ್ಲಿಯೇ ಆರ್ಕ್‍ಟಿಕ್ ಸಮುದ್ರ ರಾಕಿಪರ್ವತ ಪ್ರದೇಶಗಳಿಗೆ ನುಗ್ಗಿ ಮೊದಲಿನ ಸಮುದ್ರದೊಡನೆ ಒಂದುಗೂಡಿತು. ಅನಂತರ ಅಟ್ಲಾಂಟಿಕ್ ಸಾಗರ ನ್ಯೂಜರ್ಸಿಯಿಂದ ಟೆಕ್ಸಾಸ್‍ವರೆಗೆ ತೀರಪ್ರದೇಶವನ್ನು ಆಕ್ರಮಿಸಿತು. ಪೆಸಿಫಿಕ್ ಸಾಗರ ಸಹ ಕ್ಯಾಲಿಫೋರ್ನಿಯ, ಒರೆಗಾನ್, ವಾಷಿಂಗಟನ್ ಮತ್ತು ಬ್ರಿಟಿಷ್ ಕೊಲಂಬಿಯ ಪ್ರಾಂತ್ಯಗಳನ್ನು ಆಕ್ರಮಿಸಿತು. ಹೀಗೆ ಖಂಡಾಂತರ ಸಮುದ್ರ ಉತ್ತರ ಅಮೆರಿಕ ಖಂಡವನ್ನು ಎರಡು ದ್ವೀಪಗಳನ್ನಾಗಿ ರೂಪಿಸಿತು. ಪೆಸಿಫಿಕ್ ಸಾಗರ ಮತ್ತು ಖಂಡಾಂತರ ಸಮುದ್ರದ ಮಧ್ಯೆ ಇದ್ದ ಭೂಭಾಗ ಒಂದು ದ್ವೀಪ. ಖಂಡಾಂತರ ಸಮುದ್ರ ಮತ್ತು ಅಟ್ಲಾಂಟಿಕ್ ಸಾಗರದ ಮಧ್ಯೆ ಇದ್ದ ಭೂಭಾಗ ಮತ್ತೊಂದು ದ್ವೀಪ. ಮೊದಲನೆಯದಕ್ಕೆ ಮೀಸೊ ಕಾರ್ಡಿಲೆರಾನ್ ದ್ವೀಪ ಎಂದು ಹೆಸರು. ಈ ಆಕ್ರಮಣಗಳ ತರುವಾಯ ರಾಕಿಪರ್ವತಗಳ ಉತ್ತರ ಭಾಗ ಹಿಂಜರಿಯಲು ಪ್ರಾರಂಭಿಸಿತು. ಪಶ್ಚಿಮದಿಂದ ತಂದು ತುಂಬಲ್ಪಟ್ಟ ಮೆಕ್ಕಲು ಈ ಕಾರ್ಯವನ್ನು ತೀವ್ರಗೊಳಿಸಿತು. ಆದ್ದರಿಂದಲೇ ರಾಕಿಪರ್ವತ ಪ್ರದೇಶಗಳಲ್ಲಿ ಸಾಗರ ನಿಕ್ಷೇಪದ ಮೇಲೆ ಸಿಹಿ ನೀರು ನಿಕ್ಷೇಪ ಸಂಚಯನಗೊಂಡಿರುವುದು. ಎರಡನೆಯ ನಿಕ್ಷೇಪಗಳಲ್ಲಿ ಕಲ್ಲಿದ್ದಲು ಪದರಗಳೂ ಇವೆ. ಕಲ್ಪ ಹಂತ ಹೆಸರಿನ ಆಧಾರ

ಮೇಲಿನ ಕ್ರಿಟೇಷಸ್ ಡೇನಿಯನ್ ಡೆನ್ಮಾರ್ಕಿನ ಬ್ರಿಯಜೋವ ಸುಣ್ಣಶಿಲೆ


ಮ್ಯಾಸ್ಟ್ರಿಕ್ಟಿಯನ್ ಹಾಲೆಂಡಿನಲ್ಲಿರುವ ಮ್ಯಾಸ್ಟ್ರಿಕ್ಟ್ ಪ್ರದೇಶದ ಬೆಲೆಮ್ಮಿಟೆಲ್ಲಾ ಮ್ಯಾಕ್ರೊನೇಟ್ ಅವಶೇಷಗಳಿಂದ ಕೂಡಿದ ಸಿಲಿಕಾಂಶ ಚಾಕ್ ನಿಕ್ಷೇಪ


ಸಿನೋನಿಯನ್ ಕ್ಯಾಂಪೇನಿಯನ್ ಪ್ಯಾರಿಸ್ ಹತ್ತಿರದ ಕ್ಯಾಂಪಾಗ್ನೇಯಲ್ಲಿನ ಬೆ. ಕ್ವಾಡ್ರೇಟುಗಳಿಂದ ಕೂಡಿದ ಚಾಕ್


ಸ್ಯಾಂಟೋನಿಯನ್ ಮೈಕ್ರಾಸ್ಟರ್ ಕೊರಾಂಗ್ಯುನಂನಿಂದ ಕೂಡಿದ ಸ್ಯಾಟೊಂಗೆ ಬಳಿಯ ಚಾಕ್


ಕೋನಿಯೇಸಿಯನ್ ಪ.ಫ್ರಾನ್ಸಿನ ಕಾಗ್ನೆಯಲ್ಲಿನ ಮೈ. ಕಾರಟೆಸ್ಟುಡುನೇರಿಯಂ ಇರುವ ಚಾಕ್


ಟುರೋನಿಯನ್ ಟೌರೇನ್ ಬಳಿಯ ಸಿಲಿಕಾಂಶದ ಚಾಕ್ ಮಾರಲ್ ಶಿಲೆಗಳು


ಸಿನೋಮೇನಿಯನ್ ಪ. ಫ್ರಾನ್ಸಿನ ಲೆಮಾನ್ಸ್ (ರೋಮನ್ ಹೆಸರು) ಪ್ರದೇಶದ ಗ್ಲಾಕೊನೈಟ್ ಮರಳು


ಆಲ್ಬಿಯನ್ ಪ್ಯಾರಿಸಿಗೆ ಈಶಾನ್ಯದಲ್ಲಿರುವ ಅಬು ಜಿಲ್ಲೆಯ ಹಸಿರು ಮರಳು ಮತ್ತು ನೀಲಿ ಜೇಡು ನಿಕ್ಷೇಪಗಳು

ಕೆಳಗಿನ ಕ್ರಿಟೇಷಸ್ ಆಪ್ಸಿಯನ್ ಫ್ರಾನ್ಸಿನ ವಾಕ್ಲೂಸ್ ಪ್ರಾಂತ್ಯದ ಆಪ್ಟ್ ಪಟ್ಟಣದ ಬಳಿ ಇರುವ ಸುಣ್ಣಶಿಲೆ ಮತ್ತು ಮಾರಲ್


ನಿಯೊಕೋಮಿಯನ್ ಬೆರೆಮಿಯನ್ ಬೆರೆಮಿಯಲ್ಲಿನ ಮಾರಲ್ (ಬಸ್ಸೆ ಆಲ್ಪ್ಸ್) ಫ್ರಾನ್ಸ್


ಹಾಟೆರ್ವಿಯನ್ ಸ್ವಿಟ್ಜರ್ಲೆಂಡಿನ ಹಾಟರ್ವಿಯ ಮಾರಲ್ ಸುಣ್ಣ ಶಿಲೆಗಳು


ವೇಲಂಗಿನಿಯನ್ ಸ್ವಿಟ್ಜರ್ಲೆಂಡಿನ ವೇಲಿಂಗಿನ ಹತ್ತಿರದ ಮಾರಲ್ ಶಿಲೆಗಳು


ಬೆರಿಯಸಿಯನ್ ಸ್ವಿಟ್ಜರ್ಲೆಂಡ್


ನಿವೇಡಿಯನ್ ಭೂ ಚಲನೆ ಕ್ರಿಟೇಷಸ್ ಕಲ್ಪದ ಅಂತ್ಯ ಕಾಲದಲ್ಲಿ ಆಯಿತಾದರೂ ಅದರ ಮುನ್ಸೂಚನೆಗಳು ಕ್ರಿಟೇಷಸ್ ಆದಿಯಲ್ಲಿಯೇ ಕಂಡುಬಂದಿವೆ. ಈ ಕಾಲದಲ್ಲಿ ಮೀಸೊಕಾರ್ಡಿಯನ್ ಭೂಭಾಗ ಮೇಲಕ್ಕೆ ಎತ್ತಲ್ಪಟ್ಟಿತು. ಆಗ ಶಿಲಾರಸ ಕೂಡ ಹೊರಹೊಮ್ಮಿತು. ಕ್ರಿಟೇಷಸ್ ಆದಿಯಲ್ಲಿ ರಾಕಿ ಪರ್ವತಗಳು ಇನ್ನೂ ಉದಯಿಸಿರಲಿಲ್ಲ. ಕ್ರಿಟೇಷಸ್ ಅಂತ್ಯಕಾಲದಲ್ಲಿ ರಾಕಿಪರ್ವತ ಪ್ರದೇಶಗಳಲ್ಲಿ ಸಂಚಯನಗೊಂಡಿದ್ದ ನಿಕ್ಷೇಪಗಳು ಭೂಚಲನೆಗೆ ಸಿಕ್ಕಿ ಪರ್ವತಗಳ ರೂಪದಲ್ಲಿ ಹೊರಹೊಮ್ಮಿದುವು. ಅಲಾಸ್ಕದಿಂದ ಮೆಕ್ಸಿಕೊವರೆಗಿನ ಪ್ರದೇಶ ಈ ಭೂಚಲನೆಯ ಹಿಡಿತಕ್ಕೆ ಸಿಕ್ಕಿತು. ಇದು 3,000 ಮೈಲಿ ಉದ್ದ ಮತ್ತು ಅತ್ಯಂತ ಹೆಚ್ಚೆಂದರೆ 500 ಮೈಲಿ ಅಗಲವಿದೆ. ಈ ಭೂಚಲನೆಗೆ ವಯೋಮಿಂಗ್ ಪ್ರಾಂತದ ಲರೆಮಿ (ಲರೆಮಿಯನ್ ಭೂಚಲನೆ) ಪರ್ವತದ ಹೆಸರನ್ನು ಇಡಲಾಗಿದೆ. ಅಲ್ಲದೆ ಈ ಕಾಲದಲ್ಲಿ ಗ್ರ್ಯಾನಿಟಿಕ್ ಶಿಲಾಪಾಕ ಉತ್ತರ ಮತ್ತು ದಕ್ಷಿಣ ಅಮೆರಿಕ ಖಂಡಗಳ ಪಶ್ಚಿಮ ಭಾಗದ ಉದ್ದಕ್ಕೂ ಅನೇಕ ಬ್ಯಾತೊಲಿತುಗಳ ರೂಪದಲ್ಲಿ ಅಂತಸ್ಸರಣಗೊಂಡಿತು. ಈ ಘಟನೆ ಭೂ ಇತಿಹಾಸದ ಅತ್ಯಂತ ಮಹತ್ತ್ವ ಘಟನೆಗಳಲ್ಲಿ ಒಂದು.

ಭಾರತ: ಕ್ರಿಟೇಷಸ್ ಕಲ್ಪದಲ್ಲಿ ಆದಷ್ಟು ವಿವಿಧ ಘಟನೆಗಳು ಈ ಭೂಭಾಗದಲ್ಲಿ ಮತ್ತಾವ ಕಲ್ಪದಲ್ಲೂ ಆಗಿಲ್ಲ. ಈ ಕಾಲದ ಶಿಲೆಗಳು ಸಾಕಷ್ಟು ವ್ಯಾಪಕವಾಗಿ ಕೂಡ ನಿಕ್ಷೇಪವಾಗಿವೆ. ಅವು ಅನೇಕ ಮುಖಗಳಿಂದ ಕೂಡಿವೆ. ದೀರ್ಘಕಾಲದದಿಂದ ಪರ್ಯಾಯ ದ್ವೀಪದ ಉತ್ತರದಲ್ಲಿದ್ದ ಟೆತಿಸ್ ಸಾಗರದಲ್ಲಿ ನಿಕ್ಷೇಪಗೊಂಡಿದ್ದ ಶಿಲೆಗಳು ಟಿಬೆಟ್, ಉತ್ತರ ಹಿಮಾಲಯ, ಬಲೂಚಿಸ್ತಾನದ ಪೂರ್ವದಲ್ಲಿ ಫಾಸಿಲ್‍ಸಹಿತ ಸುಣ್ಣಶಿಲಾ ಮುಖವೂ ಪಶ್ಚಿಮದಲ್ಲಿ ಫಾಸಿಲ್‍ರಹಿತ ಮರುಳುಶಿಲಾಮುಖವೂ ರೂಪುಗೊಂಡಿವೆ. ಎರಡನೆಯದು ಯೂರೋಪ್ ಖಂಡದ ಪ್ಲಿಸ್ಚ್ ನಿಕ್ಷೇಪವನ್ನು ಹೋಲುತ್ತದೆ. ಈ ನಿಕ್ಷೇಪ ಟೆತಿಸ್ ಸಾಗರದ ಆಳ ಕಡಿಮೆಯಾಗುತ್ತಿದ್ದುದನ್ನು ಸೂಚಿಸುತ್ತದೆ. ಅಲ್ಲದೆ ದೀರ್ಘಕಾಲದಿಂದ ಇದ್ದ ಟೆತಿಸ್ ಸಾಗರದ ನಿರ್ಗಮನ ಅನತಿ ದೂರದಲ್ಲಿದೆ ಎಂಬುದನ್ನೂ ಸಾಗರ ತೀರ ಉತ್ತರಕ್ಕೆ ಕ್ರಮೇಣ ಹಿಂಜರಿಯುತ್ತಿತ್ತೆಂಬುದನ್ನೂ ಸೂಚಿಸುತ್ತದೆ. ಅಷ್ಟೇ ಅಲ್ಲದೆ ಟೆತಿಸ್ ಸಾಗರದ ಒಂದು ಶಾಖೆ ಪರ್ಯಾಯದ್ವೀಪ ಭಾಗವನ್ನು ಹಂಗಾಮಿಯಾಗಿ ಸ್ವಲ್ಪಕಾಲ ಆಕ್ರಮಿಸಿತ್ತು. ಆಗ ರೂಪುಗೊಂಡ ನಿಕ್ಷೇಪಗಳು ನರ್ಮದಾನದಿಯ ಕಣಿವೆಯಲ್ಲಿ ಅನೇಕ ಕಡೆಗಳಲ್ಲಿ ಹೊರ ಕಂಡಿವೆ. ಬಾಗ್ ಎಂಬಲ್ಲಿ ಅವು ಅತ್ಯುತ್ಕøಷ್ಟ ರೀತಿಯಲ್ಲಿ ರೂಪುಗೊಂಡಿರುವುದರಿಂದ ಅವಕ್ಕೆ ಬಾಗ್ ಪದರಗಳು ಎಂದು ಹೆಸರಾಗಿದೆ. ಪೂರ್ವತೀರದ ದಕ್ಷಿಣದಲ್ಲಿ ಕನ್ಯಾಕುಮಾರಿಯಿಂದ ಉತ್ತರದ ಅಸ್ಸಾಮಿನವರೆಗೆ ಮತ್ತೊಂದು ಸಾಗರ (ದಕ್ಷಿಣ ಸಾಗರ) ಹಂಗಾಮಿಯಾಗಿ ಆಕ್ರಮಿಸಿ ನಿಕ್ಷೇಪಗಳನ್ನು ಸಂಚಯಿಸಿ ಹಿಂಜರಿದಿದೆ. ಈ ನಿಕ್ಷೇಪಗಳು ತಿರುಚಿರಪಲ್ಲಿ, ವೃದ್ಧಾಚಲಂ, ಪಾಂಡಿಚೆರಿ, ರಾಜಮಹೇಂದ್ರಿ ಮತ್ತು ಅಸ್ಸಾಂ ಈ ಸ್ಥಳಗಳಲ್ಲಿ ಹೊರಕಂಡಿವೆ. ಹೀಗೆ ಒಂದೇ ಕಾಲದಲ್ಲಿ ಎರಡು ಸಾಗರಗಳು ಪರ್ಯಾಯ ದ್ವೀಪವನ್ನು ಆಕ್ರಮಿಸಿ ಒಂದಕ್ಕೊಂದು ಅತ ಸಮೀಪದಲ್ಲಿದ್ದುವು. ಆದರೂ ಇವೆರಡು ಸಾಗರಗಳಿಗೆ ಪರಸ್ಪರ ಸಂಪರ್ಕವಿರಲಿಲ್ಲ ಎಂಬುದಕ್ಕೆ ಆಧಾರವಿದೆ : ಭಿನ್ನ ಜೀವರಾಶಿಗಳ ಅವಶೇಷಗಳು ಅವುಗಳಲ್ಲಿ ದೊರೆತಿವೆ. ಮಧ್ಯಪ್ರದೇಶದ ಅನೇಕ ಕಡೆಗಳಲ್ಲಿ ಕ್ರಿಟೇಷಸ್ ಕಲ್ಪದ ನದಿ ಅಳಿವೆಯ ನಿಕ್ಷೇಪಗಳಿವೆ. ಲೆಮಟಾ ಘಾಟಿನಲ್ಲಿ ಉತ್ತಮವಾಗಿ ರೂಪುಗೊಂಡಿರುವುದರಿಂದ ಇವಕ್ಕೆ ಲೆಮಟಾ ಪದರಗಳೆಂದು ಹೆಸರು.

ಕಾರ್ಬಾನಿಫೆರಸ್ ಕಲ್ಪದ (ಸು. 350 ದ.ಲ.ವ. ಪ್ರಾಚೀನದಿಂದ ಸು. 280 ದ.ಲ.ವ. ಪ್ರಾಚೀನದವರೆಗಿನ ಅವಧಿ) ಅಂತ್ಯ ಕಾಲದಲ್ಲಿ ರೂಪುಗೊಳ್ಳಲು ಪ್ರಾರಂಭವಾದ ಗೊಂಡವಾನ ಖಂಡ ಕ್ರಿಟೇಷಸ್ ಕಲ್ಪದಲ್ಲಿ ಆಸ್ಟ್ರೇಲಿಯ, ಭಾರತ, ಆಫ್ರಿಕ, ದ. ಅಮೆರಿಕ ಮತ್ತು ಅಂಟಾರ್ಕ್‍ಟಿಕ ಎಂಬ ಐದು ಭಾಗಗಳಾಗಿ ಒಡೆದು ಇವು ಬೇರೆ ಬೇರೆ ದಿಕ್ಕಿಗೆ ಚಲಿಸಲಾರಂಭಿಸಿದುವು. ಒಡೆದ ಬಿರುಕುಗಳಲ್ಲಿ ಸ್ವಲ್ಪ ಭೂಭಾಗ ಸಮುದ್ರಗಳಲ್ಲಿ ಮುಳುಗಿ ಹೋಗಿರುವುದೇ ಅಲ್ಲದೆ, ಆರ್ಷೇಯ ಕಾಲದಿಂದ ಈಚೆಗೆ ಭೂ ಇತಿಹಾಸದ ಇನ್ನಾವ ಕಾಲದಲ್ಲೂ ಆಗಿಲ್ಲದಷ್ಟು ಅತಿ ಮಹತ್ತರ ಶಿಲಾರಸ ಬಹಿಸ್ಸರಣವಾಯಿತು. ಈ ಶಿಲಾರಸವೇ ಡೆಕ್ಕನ್ ಟ್ರ್ಯಾಪ್ ಶಿಲಾವರ್ಗವಾಗಿರುವುದು.

ಜೀವರಾಶಿ : ಕ್ರಿಟೇಷಸ್ ಕಲ್ಪದಲ್ಲಿ ಸಸ್ಯಗಳು ವಿಕಾಸ ಪಥದಲ್ಲಿ ಗಣನೀಯ ಪ್ರಗತಿ ಸಾಧಿಸಿದುವು. ಹೂ ಬಿಡುವ ಸಸ್ಯಗಳು ಮೊದಲ ಬಾರಿಗೆ ಕಾಣಿಸಿಕೊಂಡುದೇ ಇಲ್ಲಿನ ಮಹಾಸಾಧನೆ. ಹೂ ಬಿಡುವ ಸಸ್ಯಗಳು ಇತರ ಎಲ್ಲ ಸಸ್ಯವರ್ಗಗಳನ್ನೂ ಮೂಲೆಗೊತ್ತಿ ಅವುಗಳ ಸ್ಥಾನಗಳನ್ನು ಆಕ್ರಮಿಸಿಕೊಂಡುವು. ಮಧ್ಯಜೀವಯುಗದಲ್ಲಿ ಹೇರಳವಾಗಿದ್ದ ಸೈಕಾಡ್ ಮತ್ತು ಕೋನಿಫರ್ ಸಸ್ಯಗಳಿಗೂ ಇದೇ ಗತಿಯಯಿತು. ಹೂ ಬಿಡುವ ಸಸ್ಯಗಳು ಕಾಣಿಸಿಕೊಂಡು ಪ್ರಾಣಿವರ್ಗದ ಮೇಲೆ ಹೆಚ್ಚು ಪ್ರಭಾವ ಬೀರಿದುವು. ಈ ಸಸ್ಯಗಳ ವೈಪುಲ್ಯವೇ ಸಸ್ತನಿಗಳು ಮತ್ತು ಪಕ್ಷಿಗಳು ಹಠಾತ್ತನೆ ಹೆಚ್ಚಲು ಮತ್ತು ಶೀಘ್ರ ವಿಕಾಸಗೊಳ್ಳಲು ಮುಖ್ಯ ಕಾರಣವೆನಿಸಿದೆ. ಅಲ್ಲದೆ ಈ ಸಸ್ಯ ಬದಲಾವಣೆಯೇ ಮಧ್ಯಜೀವಯುಗದ ಸರೀಸೃಪ ಪೆಡಂಭೂತಗಳು ಗತವಂಶಿಗಳಾಗಲೂ ಕಾರಣವಾಗಿದೆ. ಹೂ ಬಿಡುವ ಜಾತಿಯ ಸಸ್ಯಗಳ ಅವಶೇಷಗಳು ಉತ್ತರ ಅಮೆರಿಕ, ಯೂರೋಪ್ ಮತ್ತು ನ್ಯೂಜಿಲೆಂಡುಗಳ ಕ್ರಿಟೇಷಸ್ ಸ್ತೋಮಗಳ ಮಧ್ಯಭಾಗದಲ್ಲಿ ಸಿಕ್ಕುತ್ತವೆ. ವರ್ಜಿನೀಯ ಮತ್ತು ಮೇರಿಲ್ಯಾಂಡ್ ಪ್ರಾಂತ್ಯಗಳಲ್ಲಿನ ಪೊಟಮ್ಯಾಕ್ ಶ್ರೇಣಿ ಮತ್ತು ಲೆರಮಿ ಶಿಲಾಗುಂಪುಗಳು ಹೇರಳವಾದ ಮತ್ತು ನಾನಾ ಜಾತಿಯ ಸಸ್ಯಾವಶೇಷಗಳಿಂದ ಕೂಡಿವೆ. ಸ್ಪೇನ್ ಮತ್ತು ಪೋರ್ಚುಗಲ್ಲಿನ ಕ್ರಿಟೇಷಸ್ ಸ್ತೋಮಗಳ ಕೆಳಭಾಗಗಳಲ್ಲೂ ಸ್ಯಾಕ್ಸೋನಿ, ಬೊಹೇಮಿಯ ಮತ್ತು ವೆಸ್ಟ್‍ಪಾಲಿಯಗಳಲ್ಲಿನ ಕ್ರಿಟೇಷಸ್ ಸ್ತೋಮಗಳ ಮೇಲ್ಭಾಗಗಳಲ್ಲೂ ಹೂ ಬಿಡುವ ಸಸ್ಯಗಳ ಅವಶೇಷಗಳು ವಿಪುಲವಾಗಿ ಇವೆ. ಇವು ಚಳಿಗಾಲದಲ್ಲಿ ಎಲೆ ಉದುರುವ ಸಸ್ಯವರ್ಗಕ್ಕೆ ಸೇರಿದವು. ಉತ್ತರಾರ್ಧಗೋಳದ ಬಹುಭಾಗದಲ್ಲಿ ಉಷ್ಣ ವಾಯುಗುಣವಿದ್ದುದನ್ನು ಈ ಅಂಶ ವ್ಯಕ್ತಪಡಿಸುತ್ತದೆ. ಈ ಸಸ್ಯವರ್ಗದಲ್ಲಿ ಮೇಪಲ್, ಓಕ್. ಅರಿಸಿನ, ಅಂಜೂರ, ಪೋಪ್ಲಾರ್, ಪ್ಲೇನ್, ಐವಿ, ವಿಲೊ, ಯೂಕಲಿಪ್ಟಸ್, ಕ್ಯಾಶುರಿನ ಮುಂತಾದ ಸಸ್ಯಗಳಿದ್ದುವು. ಫರ್ನ್, ಸೈಕಾಡ್ ಮತ್ತು ಕೋನಿಫರ್ ಜಾತಿಯ ಸಸ್ಯಗಳು ಕ್ರಿಟೇಷಸ್ ಕಲ್ಪದ ಪೂರ್ವಾರ್ಧದಲ್ಲಿ ಪ್ರಮುಖವಾಗಿದ್ದರೂ ಉತ್ತರಾರ್ಧದಲ್ಲಿ ವಿರಳವಾಗಿದ್ದುವು. ಸೈಕಾಡ್, ಝಮೈಟಿಸ್, ಓಟೊಝಮೈಟಿಸ್, ಗಿಂಕೊ, ಪೈನಸ್ ಮತ್ತು ಸಿಕ್ವೇನಿಯಗಳು ಉತ್ತರಾರ್ಧದ ಮುಖ್ಯ ಜಿಮ್ನೋಸ್ಪರ್ಮ್‍ಗಳು. ಇವುಗಳಲ್ಲೆಲ್ಲ ಸಿಕ್ವೇನಿಯ ಮುಖ್ಯವಾದದ್ದು. ಫೊರ್ಯಾಮಿನಿಫೆರಗಳ ವೈಫುಲ್ಯ ಹೊಸ ಜಾತಿಯ ಎಕಿನಾಯಿಡುಗಳ ಉದಯ, ವಿಚಿತ್ರ ಆಕಾರದ ರೂಡಿಸ್ಟಿಡ್ ಮೃದ್ವಂಗಿಗಳ ಪ್ರಾತಿನಿಧ್ಯ ಮತ್ತು ಸುರುಳಿ ಬಿಚ್ಚಿದ ಅಮ್ಮೊನೈಟುಗಳು ಕ್ರಿಟೇಷಸ್ ಕಲ್ಪದ ಪ್ರಾಣಿಪ್ರಪಂಚದ ಮುಖ್ಯ ಲಕ್ಷಣಗಳು. ಈ ಎಲ್ಲ ಗುಂಪಿನ ಪ್ರಾಣಿಗಳ ಅವಶೇಷಗಳು ಕ್ರಿಟೇಷಸ್ ಸ್ತೋಮವನ್ನು ಅನೇಕ ಶಿಲಾಪಾದಗಳನ್ನಾಗಿ ವಿಭಜಿಸಲು ಸಹಕಾರಿಯಾಗಿವೆ. ಫೊರ್ಯಾಮಿನಿಫೆರಗಳು ಎಷ್ಟು ಹೇರಳವಾಗಿದ್ದುವೆಂದರೆ ಅವುಗಳ ಅವಶೇಷಗಳಿಂದಲೇ ಕೆಲವು ಶಿಲೆಗಳು ರೂಪುಗೊಂಡಿರುತ್ತವೆ. ಚಾಕ್‍ನಿಕ್ಷೇಪ ಮತ್ತು ಕೆಲವು ಗಟ್ಟಿ ಸುಣ್ಣಶಿಲೆಗಳು ಮುಖ್ಯವಾಗಿ ಇವುಗಳ ಅವಶೇಷಗಳಿಂದಲೇ ಆಗಿವೆ. ಮೃದ್ವಂಗಿಗಳ ಹೇರಳವಾಗಿದ್ದುವು. ಅವುಗಳ ವ್ಯಾಪ್ತಿ ಅತಿ ವಿಶಾಲವಾಗಿತ್ತು. ಅವುಗಳಲ್ಲೆಲ್ಲ ರೂಡಿಸ್ಟಿಡ್ ಜಾತಿಯ ಮೃದ್ವಂಗಿಗಳು ಕ್ರಿಟೇಷಸ್ ಕಲ್ಪಕ್ಕೆ ಮಾತ್ರ ಸೀಮಿತಗೊಂಡಿದ್ದುದೇ ಅಲ್ಲದೆ ಆ ಕಾಲದ ವಿಶಿಷ್ಟ ಪ್ರಾಣಿಗಳೂ ಎನಿಸಿವೆ. ಕ್ರಿಟೇಷಸ್ ಸ್ತೋಮದ ಕೆಳಭಾಗದಲ್ಲಿ ರಿಕ್ವೇನಿಯಾ ಎಂಬುದೂ ಮೇಲ್ಭಾಗದಲ್ಲಿ ಹಿಪ್ಪುರೈಟಿಸ್ ಮತ್ತು ರೇಡಿಯೊಲೈಟಿಸುಗಳೂ ವಿಶಿಷ್ಟ ಫಾಸಿಲುಗಳೆನಿಸಿವೆ. ಕ್ಯಾಪ್ರಿನಿಡ್ಸ್ ಮತ್ತು ಮನೊಫ್ಲೂರಿಡ್‍ಗಳು ಈ ಕಾಲದ ಮತ್ತೆರಡು ವಿಶಿಷ್ಟ ರೂಡಿಸ್ಟಿಡ್ ಮೃದ್ವಂಗಿಗಳು. ಗ್ರಿಪಿಯ, ಆಸ್ಟ್ರಿಯ, ಎಕ್ಸ್ಟೊಗೈರ್, ಟ್ರೈಗೋನಿಯ, ಐನೊಸೆರಾವiಸ್, ಅಲೆಕ್ಟ್ರಿಯೋನಿಯ ಮತ್ತು ಕಾರ್ಡಿಟ ಜಾಕ್ವಿನೋಟಗಳು ದಕ್ಷಿಣ ಭಾರತದ ಕ್ರಿಟೇಷಸ್ ಸ್ತೋಮಗಳಲ್ಲಿ ಹೇರಳವಾಗಿವೆ; ಅವು ಇಲ್ಲಿನ ವಿಶಿಷ್ಟ ಫಾಸಿಲುಗಳೂ ಹೌದು. ಸ್ಪಾಂಡೈಲಸ್, ವೋಲ, ಮೋಡಿಯೋಲ, ಲೈವi, ಪೆಕ್ಟೆನ್, ಪ್ಲಿಕಟುಲ ಮೊದಲಾದವು ಈ ನಿಕ್ಷೇಪದಲ್ಲಿ ಹೆಚ್ಚಾಗಿ ದೊರೆಯುವ ಇತರ ಲೆಮಲಿಬ್ರ್ಯಾಂಕುಗಳು. ತಿರುಚಿರಪಲ್ಲಿ ಮತ್ತು ಅರಿಯಲೂರು ಭಾಗಗಳಲ್ಲಿನ ನಿಕ್ಷೇಪದಲ್ಲಿ ಶಂಖಗಳು ಹೇರಳವಾಗಿವೆ. ಆಧುನಿಕ ಜೀವಯುಗದ ಶಂಖಜಾತಿಗಳಾದ ನರೀನಿಯ, ಟರ್ರಿಟಲ್ಲಾ ಮತ್ತು ಅವೆಲ್ಲಾನಗಳೂ ಇವೆ. ಈ ನಿಕ್ಷೇಪಗಳಲ್ಲಿ ಅಮ್ಮೊನೈಟುಗಳು ಮತ್ತು ಬೆಲಿಮ್ನೈಟುಗಳು ಅತ್ಯಂತ ಹೇರಳವಾಗಿವೆ. ಜುರಾಸಿಕ್ ಕಲ್ಪದಲ್ಲಿದ್ದ ಪಿಲ್ಲೊಸೆರಾಸ್ ಅಮ್ಮೊನೈಟುಗಳೂ ಇವೆ. ಆದರೆ ಉತಕೂರು ಶ್ರೇಣಿಯಲ್ಲಿ ಹಾಪ್ಲೈಟಿಸ್ ಮತ್ತು ಅಕ್ಯಾಂತೊಸೆರಾಸುಗಳೂ ಇತರ ಶ್ರೇಣಿಗಳಲ್ಲಿ ಸೋಲನ್ ಬೇಕಿಯ, ಅನೈಸೊಸೆರಾಸ್, ಮ್ಯಾಮೈಟಿಸ್, ಟೆಸ್ಸೋಟಿಯ, ಡೆಸ್ಮೋಸೆರಾಸ್, ಪ್ಯಾಕಿಡಿಸ್ಕಸ್ ಮತ್ತು ಕಾಸ್ಮೇಟಿಸೆರಾಸುಗಳೂ ವಿಶಿಷ್ಟ ಅಮ್ಮೊನೈಟುಗಳೆನಿಸಿವೆ. ಇವುಗಳ ಜೊತೆಯಲ್ಲಿ ಸುರುಳಿ ಬಿಚ್ಚಿದ ಅಥವಾ ಕ್ರಮವರಿತು ಸುರುಳಿ ಸುತ್ತಿಲ್ಲದ ಅಮ್ಮೊನೈಟುಗಳು ಕ್ರಿಟೇಷಸ್ ಸ್ತೋಮದ ಮೇಲ್ಭಾಗದಲ್ಲಿ ಇವೆ. ಇವುಗಳಲ್ಲಿ ಸ್ಕ್ಯಾಪೈಟಿಸ್, ಮ್ಯಾಕ್ರೊಸ್ಕ್ಯಾಪೈಟಿಸ್, ಹ್ಯಾಮೈಟಿಸ್, ಬ್ಯಾಕ್ಯುಲೈಟಿಸ್ ಮತ್ತು ಟಿರ್ರಿಲೈಟಿಸುಗಳು ಮುಖ್ಯವಾದವು. ಬೆಲಿಮ್ನೈಟಿಸ್ ಗಾರ್ಡುಗಳು ಅತ್ಯಂತ ಹೇರಳವಾಗಿವೆ. ಬಹುಶ: ಭಾರತದ ಭೂ ಇತಿಹಾಸದಲ್ಲೇ ಇವು ಕೊನೆಯ ಬಾರಿಗೆ ಕಾಣಿಸಿಕೊಂಡಿವೆ. ನಾಟಿಲಾಯಿಡ್ ಗುಂಪು ನಾಟಿಲಸಿನಿಂದ ಪ್ರತಿನಿಧಿಸಲ್ಪಟ್ಟಿದೆ. ನಾಟಿಲಸ್ ಡೇನಿಕಸ್ ನಿನಿಯೂರು ಶ್ರೇಣಿಯ ಮೊದಲನೆಯ ಪದರದಲ್ಲಿದೆ.

ಸರೀಸೃಪಗಳಿಗೆ ಕ್ರಿಟೇಷಸ್ ಕಲ್ಪದಲ್ಲಿ ಕೂಡ ನೆಲಜಲ ಪ್ರದೇಶಗಳ ಒಡೆತನ ಇತ್ತು. ವಾಯು ಪ್ರದೇಶದಲ್ಲಿ ಇವು ಪಕ್ಷಿಗಳೊಡನೆ ಸಮಭಾಗಿಗಳಾಗಿದ್ದುವು. ಅಂಡು ಡೈನೊಸಾರ್ ಸರೀಸೃಪಗಳು ಭೂಮಿಯನ್ನು ಆಳುತ್ತಿದ್ದುವು. ಭೂ ಇತಿಹಾಸದಲ್ಲೇ ಅತ್ಯಂತ ದೊಡ್ಡ ಗಾತ್ರದ ಪ್ರಾಣಿಗಳು ಉದಯಿಸಿದುವು. ಡಿಪ್ಲೊಡೋಕನ್, ಜೈಗ್ಯಾಂಟೊಸಾರಸ್ ಮೊದಲಾದವು ಸಸ್ಯಾಹಾರಿಗಳಾದ ಸಾರೋಪೋಡಗಳು. ಮಾಂಸಾಹಾರಿಗಳಿಗೆ ತೀರೋಪೋಡಗಳೆಂದು ಹೆಸರು. ಇವುಗಳಲ್ಲಿ ಒಂದಾದ ಟೈರನೊಸಾರಸನ್ನು ಭೂಮಿಯ ಮೇಲೆ ಉದಯಿಸಿದ ಮಾಂಸ ತಿನ್ನುವ ಅತ್ಯಂತ ದೊಡ್ಡ ಜೀವಯಂತ್ರ ಎಂದು ವರ್ಣಿಸಲಾಗಿದೆ. ಇವುಗಳೇ ಅಲ್ಲದೆ ಬಾತು ಮೂತಿಯ ಡೈನೊಸಾರಗಳು, ಕವಚರಕ್ಷಿತ ಡೈನೊಸಾರಗಳು ಮತ್ತು ಕೊಂಬುಳ್ಳ ಡೈನೊಸಾರುಗಳು ಇದ್ದುವು. ಕೊಂಬುಳ್ಳ ಡೈನೊಸಾರುಗಳಿಗೆ ಸೆರಟಾಪ್ಸ್ ಎಂದು ಹೆಸರು. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಸಿಕ್ಕಿರುವ ಟ್ರೈಸೆರಟಾಪ್ಸ್ ಡೈನೊಸಾರುಗಳ ಪೈಕಿ ಕೊನೆಗೆ ಗತವಂಶಿಯಾಯಿತು. ಜುರಾಸಿಕ್ ಕಲ್ಪದಲ್ಲಿ ಸಾಗರವಾಸಿಗಳಾಗಿದ್ದ ಇಕ್ತಿಯೋಸಾರಸ್ ಮತ್ತು ಪ್ಲೀಜಿಯೋಸಾರಸುಗಳಿಗೆ ಕ್ರಿಟೇಷಸ್ ಕಲ್ಪದಲ್ಲಿ ಪ್ರಾಮುಖ್ಯವಿರಲಿಲ್ಲ. ಆದರೆ ಮೋಸೊಸಾರಸ್ ಎಂಬ ಮತ್ತೊಂದು ಜಾತಿ ಜಲಪ್ರದೇಶದಲ್ಲಿ ಪ್ರಬಲವಾಗಿತ್ತು. ಇದನ್ನು ಸಾಗರದ ಟೈರನೊಸಾರಸ್ ಎಂದು ಹೇಳಬಹುದು. ಇವೇ ಅಲ್ಲದೆ ಮೊಸಳೆ, ಆಮೆ ಮೊದಲಾದವು ಸಹ ಇದ್ದುವು. ವಯೋಮಿಂಗ್ ಪ್ರಾಂತ್ಯದಲ್ಲಿ ಸಿಕ್ಕಿರುವ ಆಮೆಯ ಚಿಪ್ಪು 11' ಉದ್ದವಿದೆ. ಹಾರುವ ಸರೀಸೃಪಗಳಿಗೆ ಟೀರೊಡಾಕ್ಟೈಲ್ಸ್ ಎಂದು ಹೆಸರು. ಇವುಗಳಲ್ಲಿ ಹಲ್ಲಿಲ್ಲದ ಟಿರೊಡಾನ್ ಉಲ್ಲೇಖಾರ್ಹ. ಭಾರತದಲ್ಲಿ ಈ ಕಾಲದ ಸರೀಸೃಪಗಳ ಅವಶೇಷಗಳು, ಲೆಮಟ ಪದರಗಳಲ್ಲಿ, ಅಂತರಟ್ರ್ಯಾಪ್ ಶಿಲೆಗಳಲ್ಲಿ ಮತ್ತು ತಿರುಚಿರಪಲ್ಲಿಯ ಕ್ರಿಟೇಷಸ್ ನಿಕ್ಷೇಪಗಳಲ್ಲಿ ಸಿಕ್ಕಿವೆ. ಡೈನೊಸಾರುಗಳ ಎಲ್ಲ ಶಾಖೆಗಳೂ ಮೋಸೋಸಾರಸ್ ಮತ್ತು ಆಮೆಗಳೂ ಇಲ್ಲಿ ಪ್ರತಿನಿಧಿಸಲ್ಲಪಟ್ಟಿವೆ. ಅಂಟಾರ್ಟೊಸಾರಸ್, ಲಾಪ್ಲಟಸಾರಸ್, ಲೆಮಟಸಾರಸ್, ಇಂಡೊಸಾರಸ್ ಮತ್ತು ಟೈರನೊಸಾರಸುಗಳು ಲೆಮಟ ಪದರಗಳಲ್ಲಿ ಸಿಕ್ಕಿವೆ. ತಿರುಚಿರಪಲ್ಲಿ ನಿಕ್ಷೇಪಗಳಲ್ಲಿ ಸ್ಟೀಗೊಸಾರಸ್, ಕ್ಯಾಮರೊಸಾರಸ್ ಮತ್ತು ಮೋಸೋಸಾರಸುಗಳ ಅವಶೇಷಗಳು ವರದಿಯಾಗಿವೆ. ಪ್ಲೇಟಮಿ ಎಂಬ ಆಮೆಯ ಚಿಪ್ಪು ಮುಂಬಯಿಯ ವಾರ್ಲಿ ಗುಡ್ಡದಲ್ಲಿರುವ ಅಂತರಟ್ರ್ಯಾಪ್ ಶಿಲೆಗಳಿಂದ ವರದಿಯಾಗಿದೆ. ಸಿ.ಎ. ಮ್ಯಾಟ್ಲಿ ಎಂಬಾತನಿಗೆ ತಿರುಚಿರಪಲ್ಲಿ ನಿಕ್ಷೇಪದಲ್ಲೂ ಒಂದು ಆಮೆಚಿಪ್ಪು ಸಿಕ್ಕಿದೆ. ಲೆಮಟ ಪದರಗಳಲ್ಲಿ ಸರೀಸೃಪಗಳ ಜೊತೆಯಲ್ಲಿ ಪೈಕ್ನೊಡಸ್ ಮೊದಲಾದ ಮತ್ಸ್ಯಗಳ ಅವಶೇಷಗಳೂ ದೊರೆತಿವೆ.

ಕ್ರಿಟೇಷಸ್ ಕಲ್ಪದಲ್ಲಿ ಎರಡು ಸಾಗರ ಜಲಪಕ್ಷಿಗಳಿದ್ದುದು ವರದಿಯಾಗಿದೆ. ಅವುಗಳಲ್ಲಿ ಒಂದು ಇಕ್ತಿಯಾರ್ನಿಸ್, ಮತ್ತೊಂದು ಹೆಸ್ಪರಾರ್ನಿಸ್. ಇಕ್ತಿಯಾರ್ನಿಸ್ ಬಲವಾದ ರೆಕ್ಕೆಗಳುಳ್ಳ ಚಿಕ್ಕ ಪಕ್ಷಿ. ಹೆಸ್ಪರಾರ್ನಿಸ್ 6' ಉದ್ದ, 4.5' ಎತ್ತರದ ಪ್ರಾಣಿ. ಅದರ ರೆಕ್ಕೆಗಳು ಅತಿ ಚಿಕ್ಕವು. ಅದಕ್ಕೆ ಕೋನಾಕಾರದ ಬಗ್ಗಿದ ಹಲ್ಲುಗಳಿದ್ದುವು. ಜುರಾಸಿಕ್ ಸಸ್ತನಿಗಳ ಪೈಕಿ ಮಲ್ಟಿಟ್ಯೂಬಕ್ರ್ಯುಲೇಟ ಮಾತ್ರ ಕ್ರಿಟೇಷಸ್ ಯುಗದಲ್ಲಿ ಉಳಿದಿದೆ. ಮಾರ್ಸೂಪಿಯಂ ಮತ್ತು ಕೀಟಾಹಾರಿ ಸಸ್ತನಿಗಳು ಹೊಸದಾಗಿ ಉದಯಿಸಿದುವು. (ಡಿ.ಆರ್.)