ಕೋಡೂರು ಶ್ರೀಶಂಕರೇಶ್ವರ ದೇಗುಲ

ಕೋಡೂರು ಶ್ರೀಶಂಕರೇಶ್ವರ ದೇಗುಲ ಶಿವಮೊಗ್ಗ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲೊಂದು. ಮಲೆನಾಡಿನ ಸಹ್ಯಾದ್ರಿ ಸೆರಗಿನಲ್ಲಿ ಶಿವನ ಕ್ಷೇತ್ರಗಳು ಸಾಕಷ್ಟಿವೆ. ಆದರೂ ಶಿವಮೊಗ್ಗ ಜಿಲ್ಲೆಯಲ್ಲಿನ ಪಂಚಕ್ಷೇತ್ರಗಳು ಪುರಾತನ ಕಾಲದಿಂದಲೂ ಶ್ರದ್ಧಾಭಕ್ತಿ ಮತ್ತು ನಿರಂತರ ಸೇವೆಗಳಿಂದ ಬಹು ಪ್ರಸಿದ್ಧವಾಗಿವೆ. ಮಲೆಶಂಕರ, ಗುಳುಗುಳಿ ಶಂಕರ, ಹೆಬ್ಬಿಗೆ ಶಂಕರ,ಅಲಸೆ ಶಂಕರ ಮತ್ತು ಕೋಡೂರು ಶಂಕರ ಇವು ಪವಿತ್ರ ಪಂಚ ಕ್ಷೇತ್ರಗಳು. ಇವುಗಳಲ್ಲಿ ಕೊನೆಯದಾದ ಕೋಡೂರು ಶಂಕರ ಹೊಸನಗರ ತಾಲೂಕಿನ ಕೋಡೂರು ಗ್ರಾಮದಲ್ಲಿದೆ. ಈ ದೇಗುಲ ಸುಂದರ ಶಿಲಾಮಯ ದೇಗುಲ, ಆಕರ್ಷಕ ಭಂಗಿ, ಸುತ್ತಲಿನ ಮಲೆನಾಡ ಪ್ರಾಕೃತಿಕ ಸೌಂದರ್ಯಗಳಿಂದ ಧಾರ್ಮಿಕ ಮತ್ತು ಪ್ರವಾಸಿ ತಾಣವಾಗಿದೆ.

Beautiful temple of South India

ಸ್ಥಳ ನಿರ್ದೇಶನ ಬದಲಾಯಿಸಿ

ಹೊಸನಗರ-ಶಿವಮೊಗ್ಗ ಹೆದ್ದಾರಿಯಲ್ಲಿ ಹೊಸನಗರ ತಾಲೂಕು ಕೇಂದ್ರದಿಂದ ಕೇವಲ ೧೫ ಕಿ.ಮೀ.ದೂರದ ಕೋಡೂರಿನಲ್ಲಿ ಹೆದ್ದಾರಿಯಿಂದ ಅರ್ಧ ಕಿ.ಮೀ.ದೂರದಲ್ಲಿರುವ ಈ ದೇಗುಲ ವಿಶಿಷ್ಠ ಶಿಲ್ಪಕಲಾ ಶೈಲಿಯಿಂದ ದೂರ ದಿಂದಲೇ ಕೈಬೀಸಿ ಕರೆಯುತ್ತದೆ.

ಸ್ಥಳ ಪುರಾಣ ಬದಲಾಯಿಸಿ

ಕಾಮ ದಹನದ ನಂತರ ಕೋಪಾತಿರೇಕದ ರುದ್ರನಾಗಿ , ಲಯಕಾರನಾಗಿ ವಿಜೃಂಬಿಸಿದ ಶಿವ ಈ ಸ್ಥಳದಲ್ಲಿ ಶಾಂತನಾಗಿ ನೆಲೆನಿಂತನಂತೆ, ಈಶ್ವರನ ಜೊತೆ ಆಗಮಿಸಿದ್ದ ಮಾತೆ ಪಾರ್ವತಿ ದೇವಿ ಮಹಿಷ ಮರ್ದಿನಿಯಾಗಿ ದುಷ್ಟ ನಿಗ್ರಹ ಮಾಡಿ ಶಿಷ್ಠ ಪರಿಪಾಲನಾ ಕಾರ್ಯದ ಆತ್ಮ ತೃಪ್ತಿಯನ್ನು ಇಲ್ಲಿ ಶಿವನಿಗೆ ನಿವೇದಿಸಿ ಸಂತಸ ಹೊಂದಿದಳು ಎಂಬ ಸ್ಥಳ ಪುರಾಣವಿದೆ.

ಈ ದೇವಾಲಯದ ಮುಂಭಾಗದಲ್ಲಿ ಶಿಲಾಶಾಸನವಿದ್ದು ವಿಜಯನಗರ ಸ್ಥಾಪಕರಾದ ಹಕ್ಕಬುಕ್ಕರು ವಿದ್ಯಾರಣ್ಯ ಮಹರ್ಷಿಗಳ ಅಣತಿಯಂತೆ ಕಾರಣಗಿರಿಯ ಸಿದ್ಧಿವಿನಾಯಕ ಸ್ವಾಮಿಗೆ ಪೂಜೆ ಸಲ್ಲಿಸಿ ಹಿಂದಿರುಗುವಾಗ ಇಲ್ಲಿಗೆ ಬಂದು ತಂಗಿದ್ದರಂತೆ. ಈ ಪ್ರದೇಶದ ಸುತ್ತಮುತ್ತಲು ಆಡಳಿತ ನಡೆಸಲು ರಾಜ ಪ್ರತಿನಿಧಿಯ ಆಯ್ಕೆ ಬಗ್ಗೆ ಸಮಾಲೋಚನೆ ನಡೆಸಿದ್ದರಂತೆ. ರಾತ್ರಿ ಮಲಗಿದ್ದಾಗ ಈಶ್ವರ ಪ್ರತ್ಯಕ್ಷನಾಗಿ ವರ ಪ್ರಸಾದ ನೀಡಿದನಂತೆ, ಇದರಿಂದ ಸಂತುಷ್ಟರಾದ ಸಹೋದರರು ಈ ದೇಗುಲದ ನಿರ್ವಹಣೆಗೆ ಭೂಮಿಯನ್ನು ದಾನವಾಗಿ ನೀಡಿದ ಉಲ್ಲೇಖವಿದೆ.

ಹರಕೆ ಬದಲಾಯಿಸಿ

ಇಲ್ಲಿನ ಶಿವನಿಗೆ ರುದ್ರಾಭಿಷೇಕ ಅತಿ ಪ್ರಿಯವಾಗಿದ್ದು ಆಗಮಿಸುವ ಭಕ್ತರು ರುದ್ರಾಭಿಷೇಕದ ಹರಕೆ ಹೊತ್ತು ತೀರಿಸುತ್ತಾರೆ. ಸಂತಾನಪ್ರಾಪ್ತಿ, ವೈವಾಹಿಕ ಸಂಬಂಧ, ಉದ್ಯೋಗ ಲಭ್ಯತೆ, ವಿದ್ಯಾಪ್ರಗತಿ ಮತ್ತು ಕೃಷಿಕಾರ್ಯದಲ್ಲಿ ಉನ್ನತಿ ಹಾಗೂ ಮನೋಗತ ನಿವೇದನೆಗೆ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಸುಮಾರು ೧೦ ಸಾವಿರಕ್ಕೂ ಅಧಿಕ ಕುಟುಂಬಗಳು ಈ ದೇವರನ್ನು ಕುಲದೇವರೆಂದು ಆರಾಧಿಸುತ್ತಿವೆ.

ಶ್ರಾವಣಮಾಸದಂದು ನಿತ್ಯ ಶತರುದ್ರಾಭಿಷೇಕ, ಅಲಂಕಾರ ಪೂಜೆ, ಎಳ್ಳಿನ ಪಂಚಕಜ್ಜಾಯ ನೈವೇದ್ಯ ನಡೆಯುತ್ತದೆ. ನವರಾತ್ರಿಯ ೧೦ ದಿನಗಳ ಕಾಲ ಶಿವಕಲ್ಪೋಕ್ತ ಪೂಜೆ, ಸಹಸ್ರನಾಮ ಪೂಜೆ ಜರುಗುತ್ತದೆ, ವಿಜಯದಶಮಿಯಂದು ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವರ ಪಲ್ಲಕ್ಕಿ ಉತ್ಸವ , ಬನ್ನಿಮಂಟಪ ಪ್ರವೇಶ ಸೀಮೋಲ್ಲಂಘನ ವೈಭವ ಮತ್ತು ಓಕುಳಿ ನಡೆಯುತ್ತದೆ. ಪ್ರತಿ ವರ್ಷ ಕಾರ್ತೀಕ ಬಹುಳ ಅಮಾವಾಸ್ಯೆಯಂದು ದೇವರ ರಥೋತ್ಸವ ಅತ್ಯಂತ ವೈಭವದಿಂದ ನಡೆಯುತ್ತದೆ. ಮಹಾ ಶಿವರಾತ್ರಿಯಂದು ಸಾಮೂಹಿಕ ರುದ್ರಪಾರಾಯಣ, ಶತರುದ್ರ ಹವನ, ರುದ್ರಾಭಿಷೇಕ, ದೀಪಾಲಂಕಾರ ಸೇವೆ, ಪ್ರಾಕಾರ ಉತ್ಸವ, ಪಲ್ಲಕ್ಕಿ ಉತ್ಸವ, ಅಖಂಡ ಭಜನೆ ಇತ್ಯಾದಿಗಳು ನಡೆಯುತ್ತವೆ.

ಆಡಳಿತ ಬದಲಾಯಿಸಿ

ಮುಜರಾಯಿ ಇಲಾಖೆಗೆ ಸೇರಿದ ಈ ದೇವಾಲಯದ ಸಮಗ್ರ ಪ್ರಗತಿಗೆ ಶ್ರೀಶಂಕರೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮತ್ತು ಶ್ರೀಶಂಕರೇಶ್ವರ ಜನ ಸೇವಾ ಟ್ರಸ್ಟ್ ಎಂಬ ಎರಡು ಸಂಘಟನೆಗಳ ಮೂಲಕ ಸುಮಾರು ೨೫ ಲಕ್ಷ ರೂ.ಅಂದಾಜು ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯ ನಡೆಸಲಾಗುತ್ತಿದೆ. ದೇವಾಲಯದ ಆವರಣದಲ್ಲಿ ಚಪ್ಪಡಿ ಹಾಸುವಿಕೆ, ಶಿಥಿಲ ಚಂದ್ರಶಾಲಾ ಕಟ್ಟದ ಪುನಃನಿರ್ಮಾಣ, ಹೆಬ್ಬಾಗಿಲು ರಚನೆ ,ಪ್ರಾಕಾರ ನೆಲಗಟ್ಟು ದುರಸ್ತಿ ಇತ್ಯಾದಿ ಕಾರ್ಯ ಭರದಿಂದ ನಡೆಯುತ್ತದೆ, ದೇವಾಲಯದ ಸನಿಹ ಕಲ್ಯಾಣ ಮಂಟಪ ಮತ್ತು ಸಮುದಾಯ ಭವನ ನಿರ್ಮಾಣ ಸಹ ನಡೆಯುತ್ತಿದ್ದು ಸ್ಥಳೀಯ ಗ್ರಾಮಸ್ಥರು ಮತ್ತು ದೂರದ ಊರುಗಳ ಭಕ್ತರು ಉದಾರ ಧನಸಹಾಯ ಅಗತ್ಯವಿದೆ. ದೇವಾಲಯದ ಶಿಲ್ಪ ರಚನೆ ಮತ್ತು ಕಂಬಗಳ ರಚನೆ ವಿಶಿಷ್ಠವಾಗಿದ್ದು ಪ್ರವಾಸಿಗರು ಮತ್ತು ಶಿಲ್ಪಕಲಾ ಅಧ್ಯಯನ ನಿರತರಿಗೆ ಈ ದೇಗುಲ ಸದಾ ಮುಕ್ತವಾಗಿದೆ.