ಕೈಗಾರಿಕಾ ಹಣಕಾಸು
ಒಂದು ದೇಶದ ಕೈಗಾರಿಕಾಭಿವೃದ್ಧಿ ಬಹಳ ಮಟ್ಟಿಗೆ ಹಣಕಾಸಿನ ಸರಬರಾಯಿಯನ್ನೆ, ಧನಪೋಷಣೆಯನ್ನೆ, ಅವಲಂಬಿಸಿದೆ, ಹಣಕಾಸು ಕೈಗಾರಿಕಾಭಿವೃದ್ಧಿಗೆ ಜೀವನಾಡಿ ಇದ್ದಂತೆ. ದೇಶದ ಕೈಗಾರಿಕೆಯ ಸುಸೂತ್ರವಾದ ಚಾಲನೆಗೆ ಯಥೋಚಿತವಾದ ಹಣಕಾಸಿನ ಸರಬರಾಯಿ ಅತ್ಯಾವಶ್ಯಕ. ಒಬ್ಬ ವ್ಯಕ್ತಿ ಬೆಳೆದಂತೆಲ್ಲ ಹೇಗೆ ಅವನಿಗೆ ದೊಡ್ಡ ದೊಡ್ಡ ಉಡುಪಿನ ಆವಶ್ಯಕತೆ ಇರುತ್ತದೆಯೋ ಅದೇ ರೀತಿ ಒಂದು ದೇಶದ ಕೈಗಾರಿಕಾಭಿವೃದ್ಧಿ ಆದಂತೆ ಅದರ ಹಣಕಾಸಿನ ಬೇಡಿಕೆಯೂ ಬೆಳೆಯುತ್ತದೆ.ಕೈಗಾರಿಕೆಗಳಿಗೆ ಸಾಮಾನ್ಯವಾಗಿ 1 ಅಲ್ಪಾವಧಿ, 2 ಮಧ್ಯಮಾವಧಿ ಮತ್ತು 3 ದೀರ್ಘಾವಧಿ ಎಂಬ ಮೂರು ಬಗೆಯ ಹಣಕಾಸಿನ ಅಗತ್ಯವಿರುತ್ತದೆ. ಕಚ್ಚಾಸಾಮಗ್ರಿ ಮತ್ತು ಇತರ ವಸ್ತುಗಳನ್ನು ಕೊಳ್ಳಲೂ ದಿನವಹಿ ಮಾಡಬೇಕಾಗುವ ಖರ್ಚುಗಳಿಗೂ ಅಲ್ಪಾವಧಿ ಹಣಕಾಸು ಬೇಕು. ಇದಲ್ಲದೆ ಕೈಗಾರಿಕಾ ಉತ್ಪಾದನೆಗೆ ಸಾಮಗ್ರಿಗಳನ್ನು ಉಗ್ರಾಣದಲ್ಲಿ ಸಂಗ್ರಹಿಸಲೂ ಸಿದ್ಧ ಪಡಿಸಿದ ವಸ್ತುಗಳನ್ನು ಬಿಕರಿ ಮಾಡಲೂ ಜಾಹೀರಾತು ಮುಂತಾದ ಖರ್ಚುಗಳಿಗೂ ಅಲ್ಪಾವಧಿ ಹಣಕಾಸಿನ ಅಗತ್ಯವಿರುತ್ತದೆ. ಇದನ್ನು ಕೆಲವರು ಚರಬಂಡವಾಳವೆಂತಲೂ ಕರೆಯುತ್ತಾರೆ.[೧]
ಕೈಗಾರಿಕೆಗಳಿಗೆ ದೀರ್ಘಾವಧಿ ಹಣಕಾಸಿನ ಆವಶ್ಯಕತೆ
ಬದಲಾಯಿಸಿಸ್ಥಿರ ಆಸ್ತಿಗಳನ್ನು ಪಡೆಯಲು ಕೈಗಾರಿಕೆಗಳಿಗೆ ದೀರ್ಘಾವಧಿ ಹಣಕಾಸಿನ ಆವಶ್ಯಕತೆ ಇರುತ್ತದೆ. ಹೊಸದಾಗಿ ಕೈಗಾರಿಕೆಯನ್ನು ಸ್ಥಾಪಿಸಲು ಅಗತ್ಯವಾದ ಸ್ಥಳವನ್ನು ಕೊಳ್ಳಲೂ ಕಾರ್ಖಾನೆಗಳಿಗೆ ಬೇಕಾದ ಕಟ್ಟಡಗಳನ್ನು ನಿರ್ಮಿಸಲೂ ಯಂತ್ರಗಳನ್ನೂ ಇತರ ಬಾಳಿಕೆ ಬರುವ ಸಾಧನಗಳನ್ನು ಕೊಳ್ಳಲೂ ದೀರ್ಘಾವಧಿ ಹಣಕಾಸು ಬೇಕಾಗುತ್ತದೆ. ಪ್ರಚಲಿತ ಕೈಗಾರಿಕೆಯೊಂದನ್ನು ವಿಸ್ತರಿಸಲು ಮತ್ತು ಹಳೆಯದಾದ ಯಂತ್ರಗಳನ್ನು ತೆಗೆದುಹಾಕಿ ಹೊಸ ಯಂತ್ರಗಳನ್ನು ಪ್ರತಿಸ್ಥಾಪನೆ ಮಾಡಲು ದೀರ್ಘಾವಧಿ ಹಣಕಾಸು ಬೇಕಾಗುತ್ತದೆ. ಈ ದೀರ್ಘಾವಧಿ ಹಣಕಾಸನ್ನು ಸ್ಥಿರಬಂಡವಾಳವೆಂದು ಕರೆಯುವುದೂ ಉಂಟು. ಸ್ಥಿರ ಆಸ್ತಿಗಳ ಆಯುಸ್ಸು ಹೆಚ್ಚು.ಕೈಗಾರಿಕೆಯ ವಿಸ್ತರಣೆಗೂ ಸವೆದ ಮತ್ತು ಹಳೆಯ ಯಂತ್ರದ ಬದಲು ಹೊಸ ಯಂತ್ರಗಳನ್ನು ಸ್ಥಾಪಿಸಲೂ ಮಧ್ಯಮಾವಧಿ ಹಣಕಾಸಿನ ಅಗತ್ಯವಿರುತ್ತದೆ. ಆದರೆ ಯಾವುದೇ ಕೈಗಾರಿಕೆಯ ಒಟ್ಟು ಬಂಡವಾಳದಲ್ಲಿ ಮಧ್ಯಮಾವಧಿ ಹಣಕಾಸಿನ ಭಾಗ ಎಷ್ಟು ಎಂದು ಹೇಳುವುದು ಬಹಳ ಕಷ್ಟ. ಏಕೆಂದರೆ ಯಾವುದೇ ಕಂಪನಿಯ ಆಸ್ತಿ-ಹೊಣೆ ತಃಖ್ತೆಯಲ್ಲಾಗಲಿ ಪ್ರಕಟಿತವಾದ ಇತರ ಅಂಕಿಅಂಶಗಳ ಪಟ್ಟಿಯಲ್ಲಾಗಲಿ ಇದರ ವಿಷಯ ಪ್ರತ್ಯೇಕವಾಗಿರುವುದಿಲ್ಲ. ಮತ್ತೊಂದು ಮುಖ್ಯ ಅಂಶವೇನೆಂದರೆ, ಮಧ್ಯಮಾವಧಿ ಹಣಕಾಸಿನ ಆವಶ್ಯಕತೆ ಒಂದು ಕೈಗಾರಿಕೆಯಿಂದ ಇನ್ನೊಂದು ಕೈಗಾರಿಕೆಗೆ ವ್ಯತ್ಯಾಸವಾಗುತ್ತದೆ. ಒಂದೇ ಕೈಗಾರಿಕೆಯಲ್ಲಿ ಇದರ ಆವಶ್ಯಕತೆ ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ.ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಕೈಗಾರಿಕಾ ಹಣಕಾಸುಗಳ ಅವಧಿಗಳ ವಿಚಾರದಲ್ಲೂ ಒಮ್ಮತವಿಲ್ಲ. ಒಟ್ಟಿನಲ್ಲಿ ಕೈಗಾರಿಕೆಯ ಹಣಕಾಸಿನ ಆವಶ್ಯಕತೆ ಒಂದು ವರ್ಷದ ಅವಧಿಯದಾಗಿದ್ದರೆ ಅದನ್ನು ಅಲ್ಪಾವಧಿ ಹಣಕಾಸೆಂದೂ ಒಂದರಿಂದ ಐದು ವರ್ಷಗಳವರೆಗಿನ ಅವಧಿಯದಾಗಿದ್ದರೆ ಮಧ್ಯಮಾವಧಿ ಹಣಕಾಸೆಂದೂ ಐದು ವರ್ಷಗಳಿಗಿಂತ ಹೆಚ್ಚಿನ ಅವಧಿಯದಾಗಿದ್ದರೆ ಅದನ್ನು ದೀರ್ಘಾವಧಿ ಹಣಕಾಸೆಂದೂ ಹೇಳಬಹುದು.
ಕೈಗಾರಿಕಾ ಹಣಕಾಸಿನ ಮೂಲಗಳು: ಈ ಕೆಳಗೆ ಕಂಡ ಮೂಲಗಳಿಂದ ಕೈಗಾರಿಕೆಗಳು ತಮಗೆ ಬೇಕಾದ ಹಣವನ್ನು ಪಡೆಯುತ್ತವೆ
ಬದಲಾಯಿಸಿ1 ಬಂಡವಾಳ ಹೂಡುವ ಸಾರ್ವಜನಿಕರು; ಒಂದು ಕೈಗಾರಿಕೆಗೆ ಪ್ರಾರಂಭದಲ್ಲಿ ಬೇಕಾಗುವ ಹಣಕಾಸು ಷೇರು ಬಂಡವಾಳದ ಮೂಲಕ ಬರುತ್ತದೆ. ಷೇರು ಬಂಡವಾಳದ ಸ್ವಲ್ಪ ಭಾಗವನ್ನು ಕೈಗಾರಿಕೆಯ ಪ್ರವರ್ತಕರು, ನಿರ್ದೇಶಕರು ಮುಂತಾದವರು ಕೊಳ್ಳುತ್ತಾರೆ. ಉಳಿದ ಷೇರುಗಳನ್ನು ಸಾರ್ವಜನಿಕರಿಗೆ ನೀಡಿ ಹಣ ಪಡೆಯಲಾಗುತ್ತದೆ. ಹೆಚ್ಚಿನ ಹಣದ ಆವಶ್ಯಕತೆ ಇದ್ದಾಗ ಹೆಚ್ಚು ಷೇರುಗಳನ್ನು ಅಥವಾ ಡಿಬೆಂಚರುಗಳನ್ನು ಮಾರುಕಟ್ಟೆಯಲ್ಲಿ ಮಾರಿ ಹಣ ಪಡೆಯುತ್ತಾರೆ.2 ವ್ಯವಸ್ಥಾಪಕ ನಿಯೋಗಿಗಳು: ಭಾರತದ ಕೈಗಾರಿಕೆಗಳಿಗೆ ಹಣಕಾಸನ್ನು ಒದಗಿಸುವುದರಲ್ಲಿ ವ್ಯವಸ್ಥಾಪಕ ನಿಯೋಗಿಗಳು (ಮ್ಯಾನೇಜಿಂಗ್ ಏಜೆಂಟ್ಸ್) ಇತ್ತೀಚಿನವರೆಗೂ ಪ್ರಮುಖ ಪಾತ್ರ ವಹಿಸಿದ್ದರು. ಕೈಗಾರಿಕೆಗಳ ಸ್ಥಾಪನೆ, ವ್ಯವಸ್ಥಾಪನ, ಅದಕ್ಕೆ ಬೇಕಾಗುವ ಹಣಕಾಸಿನ ಒದಗಣೆ, ಬೇರೆ ಕಡೆ ಸಾಲ ಪಡೆಯಬೇಕಾದಾಗ ಅದಕ್ಕೆ ಜಾಮೀನು ನೀಡಿಕೆ-ಇವು ವ್ಯವಸ್ಥಾಪಕ ನಿಯೋಗಿಗಳು ಮಾಡುತ್ತಿದ್ದ ಕಾರ್ಯಗಳು, ಇವರು ಕೈಗಾರಿಕೆಗಳಿಗೆ ಚರ ಸ್ಥಿರ ಬಂಡವಾಳವನ್ನು ಒದಗಿಸುವುದರ ಜೊತೆಗೆ ಬೇರೆ ಮೂಲಗಳಿಂದ ಡಿಬೆಂಚರು, ಬ್ಯಾಂಕ್ ಸಾಲ, ಸಾರ್ವಜನಿಕರಿಂದ ಠೇವಣಿ ಮುಂತಾದ ರೀತಿಗಳಲ್ಲಿ ಹಣವನ್ನು ಪಡೆದು ಕೈಗಾರಿಕಾಭಿವೃದ್ಧಿಗೆ ಸಹಾಯಕರಾಗಿದ್ದರು. ಆದರೆ ವ್ಯವಸ್ಥಾಪಕ ನಿಯೋಗ ವ್ಯವಸ್ಥೆಯಲ್ಲಿ ಅನೇಕ ನ್ಯೂನತೆಗಳಿದ್ದುವು. ಆದ್ದರಿಂದ ಭಾರತ ಸರ್ಕಾರ ಈ ವ್ಯವಸ್ಥೆಯನ್ನು ನಿವಾರಿಸಲು ಕಾನೂನು ಮಾಡಬೇಕಾಯಿತು. ಇಂದು ಈ ಮೂಲದಿಂದ ಕೈಗಾರಿಕೆಗಳಿಗೆ ಹಣಕಾಸು ಒದಗಿಬರುತ್ತಿಲ್ಲ.3 ಸಾರ್ವಜನಿಕರ ಠೇವಣಿಗಳು: ಕೈಗಾರಿಕಾ ಹಣಕಾಸಿನ ಇನ್ನೊಂದು ಪ್ರಮುಖ ಮೂಲವೆಂದರೆ ಸಾರ್ವಜನಿಕರ ಠೇವಣಿಗಳು. ಸಾರ್ವಜನಿಕರು ಬಡ್ಡಿಯ ಆಸೆಯಿಂದ ಕಂಪನಿಗಳಲ್ಲಿ ತಮ್ಮ ಹಣವನ್ನು ಠೇವಣಿ ಇಡುವುದುಂಟು. ಭಾರತದ ಅನೇಕ ಸಕ್ಕರೆ, ಹತ್ತಿಜವಳಿ, ಎಂಜಿನಿಯರಿಂಗ್ ಮತ್ತು ರಾಸಾಯನಿಕ ಕೈಗಾರಿಕೆಗಳಿಗೆ ಮತ್ತು ವ್ಯಾಪಾರ ಸಂಸ್ಥೆಗಳಿಗೆ ಈ ಮೂಲದಿಂದ ತಕ್ಕಮಟ್ಟಿಗೆ ಹಣ ಒದಗುತ್ತದೆ. ಸಾರ್ವಜನಿಕರ ಠೇವಣಿಗಳು ಅಲ್ಪಾವಧಿ ಹಣಕಾಸಿನ ರೂಪದಲ್ಲಿದ್ದರೂ ಅವನ್ನು ನವೀಕರಿಸಿದಾಗ ಮಧ್ಯಮಾವಧಿ ಮತ್ತು ದೀರ್ಘಾವಧಿ ಹಣಕಾಸಿನ ರೂಪ ತಳೆಯುತ್ತವೆ. ಆದರೆ ಸಾರ್ವಜನಿಕ ಠೇವಣಿಗಳು ಅನುಕೂಲಕಾಲದ ಬಂಧುಗಳಿದ್ದಂತೆ. ಕೈಗಾರಿಕೆ ತೊಂದರೆ ಅನುಭವಿಸುತ್ತಿದೆಯೆಂದು ಸಂಶಯ ಬಂದಕೂಡಲೇ ಠೇವಣಿದಾರರು ತಮ್ಮ ಠೇವಣಿಗಳನ್ನು ವಾಪಸು ಪಡೆಯುತ್ತಾರೆ. ಕೈಗಾರಿಕೆಯ ವಿಸ್ತರಣೆಗೆ, ಅದರಲ್ಲೂ ದೀರ್ಘಾವಧಿ ವಿಸ್ತರಣೆಗೆ ಇವು ಅಷ್ಟು ಸಾಧಕವಾಗುವುದಿಲ್ಲ.4 ಸಂಸ್ಥೆಗಳು: ವಾಣಿಜ್ಯ ಬ್ಯಾಂಕುಗಳು, ವಿಮಾ ಸಂಸ್ಥೆಗಳು, ಕಂಪನಿಗಳು, ವಿನಿಯೋಜನ ನ್ಯಾಸಗಳು (ಇನ್ವೆಸ್ಟ್‍ಮೆಂಟ್ ಟ್ರಸ್ಟ್) ಮತ್ತು ಕೈಗಾರಿಕಾ ಬ್ಯಾಂಕುಗಳು ಈ ಗುಂಪಿಗೆ ಸೇರಿದವು. ಇವು ಎಲ್ಲ ಬಗೆಯ ಕೈಗಾರಿಕಾ ಹಣಕಾಸು ಒದಗಿಸುವುದರಲ್ಲಿ ಇತ್ತೀಚೆಗೆ ಬಹಳ ಪ್ರಾಮುಖ್ಯ ಪಡೆಯುತ್ತಿವೆ. ವಾಣಿಜ್ಯ ಬ್ಯಾಂಕುಗಳು ಸಾಮಾನ್ಯವಾಗಿ ಅಲ್ಪಾವಧಿ ಹಣಕಾಸನ್ನು ಪ್ರತಿಭೂತಿಗಳ ಆಧಾರದ ಮೇಲೆ ಅಥವಾ ಕಂಪನಿಗಳ ನಿದೆ ್ೀಶಕರ ಜಾಮೀನಿನ ಮೇಲೆ ಒದಗಿಸುತ್ತವೆ. ಕೆಲವೊಮ್ಮೆ ಅಲ್ಪಾವಧಿ ಸಾಲವನ್ನು ನವೀಕರಿಸಿ ಮಧ್ಯಮಾವಧಿ ಸಾಲವಾಗಿ ಪರಿವರ್ತಿಸುತ್ತವೆ. ಭಾರತದಲ್ಲಿ ಸ್ಥಾಪಿತವಾಗಿರುವ ಕೈಗಾರಿಕಾ ಹಣಕಾಸು ಕಾರ್ಪೊರೇಷನ್‍ಗಳ ಮೂಲಕ ದೀರ್ಘಾವಧಿ ಸಾಲವನ್ನು ಒದಗಿಸುವುದರಲ್ಲಿ ವಾಣಿಜ್ಯ ಬ್ಯಾಂಕುಗಳು ಪರೋಕ್ಷಪಾತ್ರ ವಹಿಸುತ್ತಿವೆ.
ವಿಮಾ ಕಂಪನಿಗಳು
ಬದಲಾಯಿಸಿಕೈಗಾರಿಕಾ ಹಣಕಾಸನ್ನು ಒದಗಿಸುವುದರಲ್ಲಿ ವಿಮಾ ಕಂಪನಿಗಳು ಮುಖ್ಯ ಸಾಧನಗಳು. ಈ ಕಂಪನಿಗಳು ಕೈಗಾರಿಕೆಗಳ ಷೇರು ಮತ್ತು ಡಿಬೆಂಚರುಗಳನ್ನು ಕೊಳ್ಳುವುದರ ಮೂಲಕ ಅವಕ್ಕೆ ಅಗತ್ಯವಾದ ಹಣಕಾಸನ್ನು ಒದಗಿಸುತ್ತವೆ. ಭಾರತದ ಜೀವವಿಮಾ ಕಾರ್ಪೊರೇಷನ್ ಮತ್ತು ಸಾರ್ವತ್ರಿಕ ವಿಮಾ ಕ್ಷೇತ್ರ ಕೈಗಾರಿಕೆಗಳಿಗೆ ಕೋಟ್ಯಂತರ ರೂಪಾಯಿಗಳನ್ನು ವರ್ಷವರ್ಷವೂ ಒದಗಿಸುತ್ತಿವೆ.
ಸ್ವಯಂ ಧನಪೋಷಣೆ
ಬದಲಾಯಿಸಿಒಂದು ಕೈಗಾರಿಕೆಯ ಲಾಭವನ್ನು ಆದಷ್ಟು ಮಟ್ಟಿಗೆ ಅದರಲ್ಲೇ ಉಳಿಯಗೊಟ್ಟು, ಕೈಗಾರಿಕೆಯನ್ನು ಬೆಳೆಸಲೂ ವಿಸ್ತರಿಸಲೂ ಇದನ್ನು ಉಪಯೋಗಿಸಿಕೊಳ್ಳುವುದುಂಟು. ಇದು ಸ್ವಯಂಧನಪೋಷಣೆ. ಇದು ಬಹಳ ಸುಲಭವಾದ ವಿಧಾನ. ಏಕೆಂದರೆ ಇದರಲ್ಲಿ ಬ್ಯಾಂಕುಗಳಿಂದಾಗಲಿ ಸಾರ್ವಜನಿಕರಿಂದಾಗಲಿ ಹಣ ಪಡೆಯುವಾಗ ಎದುರಿಸಬೇಕಾದ ತೊಂದರೆಗಳಿರುವುದಿಲ್ಲ. ಬ್ರಿಟನ್ ಮತ್ತು ಅಮೆರಿಕ ಸಂಯುಕ್ತಸಂಸ್ಥಾನಗಳ ಕೈಗಾರಿಕಾಭಿವೃದ್ಧಿಯಲ್ಲಿ ಇದು ಒಂದು ಪ್ರಮುಖ ಅಂಶವಾಗಿದೆ.5 ಕೇಂದ್ರ ಮತ್ತು ರಾಜ್ಯ ಸರ್ಕಾರಗಳು: ಒಂದನೆಯ ಮಹಾಯುದ್ಧದವರೆಗೆ ಸರ್ಕಾರಗಳು ಕೈಗಾರಿಕೆಗಳ ವಿಚಾರದಲ್ಲಿ ತಾಟಸ್ಥ್ಯ ನೀತಿ ಅನುಸರಿಸುತ್ತಿದ್ದುವು. ಈ ನೀತಿ ಕುಸಿದುಬಿದ್ದ ಮೇಲೆ, ಅದರಲ್ಲೂ 1930ರ ವಿಶ್ವ ಆರ್ಥಿಕ ಮುಗ್ಗಟ್ಟಿನ ಅನಂತರ, ಸರ್ಕಾರಗಳು ತಂತಮ್ಮ ದೇಶಗಳ ಕೈಗಾರಿಕೆಗಳಿಗೆ ಸಹಾಯ ಮಾಡಲು ಮುಂದೆ ಬಂದುವು. ಭಾರತದಲ್ಲೂ ಕೈಗಾರಿಕೆಗಳಿಗೆ ಹಣಕಾಸಿನ ಸಹಾಯ ನೀಡಲು ಅನೇಕ ಕಾನೂನುಗಳನ್ನು ಜಾರಿಗೆ ತಂದುವು. ಭಾರತದಲ್ಲಿ ಪಂಚವಾರ್ಷಿಕ ಯೋಜನೆಗಳು ಪ್ರಾರಂಭವಾದಾಗಿನಿಂದ ಸರ್ಕಾರವೂ ಕೈಗಾರಿಕೆಗಳನ್ನು ಸ್ಥಾಪಿಸಿ ನಡೆಸುವುದರಲ್ಲಿ ಹೆಚ್ಚಿನ ಆಸಕ್ತಿ ವಹಿಸಿತು. ಈಗ ಭಾರತದಲ್ಲಿ ಸರ್ಕಾರಿ ಉದ್ಯಮವಲಯ ಮತ್ತು ಖಾಸಗಿ ಉದ್ಯಮವಲಯ-ಎಂಬ ಎರಡು ವಿಭಾಗಗಳು ಬೆಳೆದಿವೆ. ಸರ್ಕಾರಿ ವಲಯದ ಕೈಗಾರಿಕೆಗಳಿಗೆ ಬೇಕಾದ ಹಣಕಾಸಿನ ಅವಶ್ಯಕತೆಯನ್ನು ಸರ್ಕಾರವೇ ಸಂಪೂರ್ಣವಾಗಿ ಪೂರೈಸುತ್ತದೆ. ಕೈಗಾರಿಕಾ ಹಣಕಾಸು ಕಾರ್ಪೊರೇಷನ್‍ಗಳ ಮೂಲಕ ಖಾಸಗಿ ಕೈಗಾರಿಕೆಗಳಿಗೂ ಧನಪೋಷಣೆ ನೀಡುತ್ತಿದೆ.
6 ವಿದೇಶಿ ಬಂಡವಾಳ
ಬದಲಾಯಿಸಿಎಲ್ಲ ದೇಶಗಳೂ ಕೈಗಾರಿಕಾ ಬೆಳೆವಣಿಗೆಯ ಆರಂಭದಲ್ಲಿ ವಿದೇಶಿ ಬಂಡವಾಳವನ್ನು ಹೇರಳವಾಗಿ ಉಪಯೋಗಿಸಿಕೊಂಡಿವೆ. ಭಾರತದ ಪಂಚವಾರ್ಷಿಕ ಯೋಜನೆಗಳಲ್ಲಿ ಅನ್ಯದೇಶಗಳ ಖಾಸಗಿ ಸಂಸ್ಥೆಗಳಿಂದಲೂ ಸರ್ಕಾರಗಳಿಂದಲೂ ಅಂತರರಾಷ್ಟ್ರೀಯ ಹಣಕಾಸಿನ ಸಂಸ್ಥೆಗಳ ಮೂಲಕವೂ ಹಣ ಪಡೆಯಲಾಗಿದೆ.
ಕೈಗಾರಿಕಾ ಧನಪೋಷಣೆಯ ವಿಧಾನದಲ್ಲಿ ಇತ್ತೀಚಿನ ಬದಲಾವಣೆ
ಬದಲಾಯಿಸಿಕೈಗಾರಿಕೆಗಳು ಮೊದಮೊದಲು ಹಣಕಾಸಿನ ವಿಷಯದಲ್ಲಿ ಆದಷ್ಟೂ ಸ್ವಾವಲಂಬಿಗಳಾಗಿರುತ್ತಿದ್ದುವು. ಅಂದರೆ ತಮ್ಮ ಆಂತರಿಕ ಮೂಲಗಳಾದ ಮುಕ್ತ ಸಂಚಿತಿಗಳು, ಹಿಡಿದಿಟ್ಟ ಲಾಭ ಮುಂತಾದವುಗಳಿಂದಲೇ ಅಭಿವೃದ್ಧಿ ಸಾಧಿಸಿಕೊಳ್ಳುತ್ತಿದ್ದುವು. ಇತ್ತೀಚೆಗೆ ಕೈಗಾರಿಕೆಗಳು ಅಭಿವೃದ್ಧಿ ಕಾರ್ಯಗಳಿಗೆ ಹೊರಗಡೆಯ ಹಣಕಾಸಿನ ಮೂಲಗಳನ್ನು ನಿರೀಕ್ಷಿಸುತ್ತವೆ. ಈ ಪ್ರವೃತ್ತಿ ಸಹಜವೇ ಎನಿಸಿದೆ. ಒಂದು ದೇಶದ ಕೈಗಾರಿಕಾಭಿವೃದ್ಧಿ ಆದಂತೆಲ್ಲ ಕೈಗಾರಿಕೆಯ ಆಂತರಿಕ ಹಣಕಾಸಿನ ಮೂಲದ ಪ್ರಾಮುಖ್ಯ ಕಡಿಮೆಯಾಗಿ ಹೊರಗಿನ ಹಣಕಾಸಿನ ಮೂಲಗಳ ಪ್ರಾಮುಖ್ಯ ಹೆಚ್ಚುತ್ತದೆಯೆಂಬುದು ಕೆಲವು ಅರ್ಥಶಾಸ್ತ್ರಜ್ಞರ ಅಭಿಪ್ರಾಯ. ಮೊದಮೊದಲು ಕೈಗಾರಿಕಾ ಕಂಪನಿಗಳು ನೇರವಾಗಿ ಉಳಿತಾಯಗಾರರಿಂದ ಹಣ ಪಡೆಯುತ್ತವೆ. ಅನಂತರ ಅದು ಪರೋಕ್ಷವಾಗಿ ಹಣಕಾಸಿನ ಸಂಸ್ಥೆಗಳ ಮೂಲಕ ಹಣ ಪಡೆಯುವ ಪದ್ಧತಿ ಬೆಳೆಯುತ್ತದೆ. ಈ ಪ್ರವೃತ್ತಿ ಆರ್ಥಿಕವಾಗಿ ಮುಂದುವರಿದಿರುವ ರಾಷ್ಟ್ರಗಳ ಆರ್ಥಿಕ ಚರಿತ್ರೆಯಲ್ಲಿ ವ್ಯಕ್ತವಾಗುತ್ತದೆ. ಭಾರತದಲ್ಲಿ ಕೂಡ ಹೊರಗಿನ ಹಣಕಾಸಿನ ಮೂಲಗಳಿಂದ ಕೈಗಾರಿಕೆಗಳು ಹಣ ಪಡೆಯುತ್ತಿರುವುದು ಹೆಚ್ಚಾಗುತ್ತಿದೆ. 1951ರಲ್ಲಿ ಕೈಗಾರಿಕೆಗಳು ಪಡೆದ ಹಣಕಾಸಿನಲ್ಲಿ ಹೊರಗಿನ ಮೂಲಗಳಿಂದ ಬಂದದ್ದು ಸೇ.46. 1968ರ ವೇಳೆಗೆ ಇದು ಸೇಕಡ 53ಕ್ಕೆ ಏರಿತ್ತು. ಒಟ್ಟಿನಲ್ಲಿ ಕೈಗಾರಿಕಾ ಹಣಕಾಸಿನ ಬೇಡಿಕೆ, ನೀಡಿಕೆ ಮತ್ತು ಮೂಲಗಳು ಬೆಳೆದಂತೆಲ್ಲ ಅದರ ವಿಧಾನವೂ ಬದಲಾಗುತ್ತಿದೆ.