ಕೈಗಾರಿಕಾ ವ್ಯವಸ್ಥಾಪನ
ಒಂದು ಕೈಗಾರಿಕೋದ್ಯಮದ ಹೊಣೆಗಾರ ಅಧಿಕಾರಿಗಳು ಇತರರ ಸಂಘಟಿತ ಪ್ರಯತ್ನಗಳ ಮೂಲಕ ಉದ್ದೇಶಿತ ಕಾರ್ಯ ಮಾಡಿಸಿಕೊಳ್ಳುವ ವಿಧಾನ (ಇಂಡಸ್ಟ್ರಿಯಲ್ ಮ್ಯಾನೇಜ್‍ಮೆಂಟ್). ಇದನ್ನು ಕೈಗಾರಿಕಾ ನಿರ್ವಹಣೆಯೆಂದೂ ಕರೆಯುವುದಿದೆ. ವ್ಯವಹಾರಲೋಕದಲ್ಲಿ ವ್ಯವಸ್ಥಾಪನ (ನಿರ್ವಹಣೆ), ಆಡಳಿತ (ಅಡ್ಮಿನಿಸ್ಟ್ರೇಷನ್)-ಇವೆರಡೂ ಶಬ್ದಗಳು ಸಮಾನಾರ್ಥಕಗಳೆಂಬಂತೆ ಬಳಕೆಯಲ್ಲಿವೆ. ವ್ಯವಹಾರದ ಉದ್ದಿಷ್ಟ ಗುರಿ ನಿಲುಕಲು ಕೈಗೊಳ್ಳುವ ನಿರ್ದೇಶನ, ಮಾರ್ಗದರ್ಶನ, ನಿಯಂತ್ರಣ ಮುಂತಾದ ಕಲಾಪಗಳೂ ವ್ಯವಸ್ಥಾಪನದ ವ್ಯಾಪ್ತಿಯಲ್ಲೇ ಬರುವುವೆಂಬುದು ಕೆಲವರ ವಾದ. ಆದರೆ ಇವೆಲ್ಲವೂ ಆಡಳಿತದ ಕಾರ್ಯಭಾರವೆಂಬುದಾಗಿ ಇನ್ನು ಕೆಲವರು ವಾದಿಸುತ್ತಾರೆ. ಮತ್ತೆ ಕೆಲವರು ಇವೆರಡಕ್ಕೂ ನಡುವೆ ಯಾವ ವ್ಯತ್ಯಾಸವನ್ನೂ ಕಾಣುವುದೇ ಇಲ್ಲ. ವ್ಯವಸ್ಥಾಪನ, ಆಡಳಿತ-ಇವೆರಡರ ವ್ಯಾಪ್ತಿಗಳನ್ನು ಶಾಸ್ತ್ರೀಯವಾಗಿ ನಿರ್ಧರಿಸಿರುವವನು ಷೆಲ್ಡನ್. ಸಂಸ್ಥೆಯ ನೀತಿಯನ್ನು ನಿರ್ಧರಿಸುವುದೂ ಹಣ, ಉತ್ಪಾದನೆ, ವಿತರಣೆ ಮುಂತಾದವುಗಳನ್ನು ಸಂಯೋಜಿಸುವುದೂ ಸಂಸ್ಥೆಯ ಘಟನೆ ಹೇಗಿರಬೇಕೆಂಬುದನ್ನು ತೀರ್ಮಾನಿಸುವುದೂ ಆಡಳಿತದ ಕಾರ್ಯಭಾರವೆಂದು ಆತ ಹೇಳುತ್ತಾನೆ. ಆಡಳಿತ ನಿರ್ಧರಿಸಿದ ನೀತಿಯನ್ನು ಅದು ನಿರೂಪಿಸಿದ ಎಲ್ಲೆಯ ಒಳಗೆ ಕಾರ್ಯಗತಗೊಳಿಸುವುದು ವ್ಯವಸ್ಥಾಪನದ ಹೊಣೆ. ನಿಶ್ಚಿತ ಉದ್ದೇಶ ಸಾಧನೆಗೆ ಅಗತ್ಯವಾದ ಸಂಘಟನೆಯನ್ನು ನಿಯೋಜಿಸುವುದೂ ವ್ಯವಸ್ಥಾಪನದ ಕಾರ್ಯಭಾರವೇ-ಎಂಬುದು ಷೆಲ್ಡನನ ಮತ. ಅದು ಮಾನವ ಪ್ರಯತ್ನವನ್ನು ಕ್ರಿಯಾತ್ಮಕ ಮಾರ್ಗಗಳಲ್ಲಿ ನಿರ್ದೇಶಿಸುತ್ತದೆ. ಜನರ ಮೂಲಕ, ಅವರ ಸಹಾಯದೊಡನೆ ಕೆಲಸಗಳನ್ನು ಆಗಮಾಡಿಸುವುದು ವ್ಯವಸ್ಥಾಪನದ ಕರ್ತವ್ಯ. ಆಡಳಿತದ ಹೊಣೆ ನಿರ್ಧಾರಕವಾದರೆ, ವ್ಯವಸ್ಥಾಪನದ್ದು ಕಾರ್ಯಕಾರಕ. ಅನೇಕ ಸಮಯಗಳಲ್ಲಿ ನಿರ್ಧಾರಕ-ಕಾರ್ಯಕಾರಕ ಹೊಣೆಗಳೆರಡನ್ನೂ ಒಬ್ಬನೇ ವ್ಯಕ್ತಿ ನಿರ್ವಹಿಸಬಹುದು. ಒಂದು ಸಂಸ್ಥೆಯ ಅಧ್ಯಕ್ಷ ಅಥವಾ ವ್ಯವಸ್ಥಾಪಕನಿಯೋಗಿ ಅಥವಾ ಮಹಾವ್ಯವಸ್ಥಾಪಕನಾದವನು ಬಹಳ ಮಟ್ಟಿಗೆ ಅದರ ಆಡಳಿತಕಾರ್ಯಗಳನ್ನೂ ಸ್ವಲ್ಪ ಮಟ್ಟಿಗೆ ಅದರ ವ್ಯವಸ್ಥಾಪನ ಕಾರ್ಯಗಳನ್ನೂ ಮಾಡಬಹುದು. ಕಾರ್ಖಾನೆಯ ಕಾರ್ಯನೀತಿ ಬಹುತೇಕ ನಿರ್ಧಾರವಾಗುವುದು ಆ ಮಟ್ಟದಲ್ಲಿ. ಅಧಿಕಾರದ ಕೆಳಗಿನ ಹಂತಗಳಿಗೆ ಬಂದಂತೆಲ್ಲ ವ್ಯವಸ್ಥಾಪನದ ಅಥವಾ ನಿರ್ವಹಣೆಯ ಅಂಶ ಅಧಿಕವಾಗುತ್ತದೆ. ಆದರೂ ಆಯಾ ಹಂತಗಳಲ್ಲಿ ಕೆಲಸಮಾಡುವ ಅಧಿಕಾರಿಗಳೂ ತಮತಮಗೆ ನಿಯಮಿತವಾದ ಕಾರ್ಯನಿರ್ವಹಣೆಯ ಜೊತೆಗೆ ತಂತಮ್ಮ ಸೀಮಿತ ಪರಿಧಿಯೊಳಗೆ ನೀತಿ ನಿರ್ಧಾರ ಮಾಡುವುದನ್ನೂ ಕಾಣಬಹುದು. ಈ ಕೆಲಸವನ್ನು ಎಷ್ಟರಮಟ್ಟಿಗೆ ಅವರು ಮಾಡುತ್ತಾರೋ ಅಷ್ಟರಮಟ್ಟಿಗೆ ಅವರು ಆಡಳಿತಗಾರರೂ ಹೌದು. ಒಟ್ಟಿನಲ್ಲಿ ಅಧಿಕಾರಿವರ್ಗದ ಮೇಲಣ ಮಟ್ಟದಲ್ಲಿ ಆಡಳಿತದ ಅಂಶ ಹೆಚ್ಚು, ನಿರ್ವಹಣೆಯ ಅಥವಾ ವ್ಯವಸ್ಥಾಪನದ ಅಂಶ ಕಡಿಮೆ; ಕೆಳಗಣ ಮಟ್ಟದಲ್ಲಿ ಆಡಳಿತದ ಅಂಶ ಕಡಿಮೆ, ನಿರ್ವಹಣೆಯ ಅಂಶ ಹೆಚ್ಚು. ಇದು ಈ ರೀತಿ ಇರುತ್ತದೆ.[೧]
ವ್ಯವಸ್ಥಾಪನದ ಆಧುನಿಕ ಸಿದ್ಧಾಂತ
ಬದಲಾಯಿಸಿವ್ಯವಸ್ಥಾಪನದ ಆಧುನಿಕ ಸಿದ್ಧಾಂತವನ್ನು ನಿರೂಪಿಸಿದವನು ಹೆನ್ರಿ ಫಯೋಲ್ (1841-1925). ಅವನ ಪ್ರಕಾರ ಒಂದು ಕೈಗಾರಿಕೋದ್ಯಮದ ಎಲ್ಲ ಕಲಾಪಗಳನ್ನೂ ಈ ರೀತಿ ವಿಂಗಡಿಸಬಹುದು: 1 ತಾಂತ್ರಿಕ (ಉತ್ಪಾದನೆ, ತಯಾರಿಕೆ, ಸಂಯೋಜನೆ), 2 ವಾಣಿಜ್ಯಕ (ಕ್ರಯ, ವಿಕ್ರಯ, ವಿನಿಮಯ), 3 ವಿತ್ತೀಯ (ಬಂಡವಾಳದ ಅನ್ವೇಷಣೆ, ಅನುಕೂಲತಮ ಬಳಕೆ), 4 ಭದ್ರತೆ (ಸ್ವತ್ತಿನ ಮತ್ತು ಜನರ ರಕ್ಷಣೆ), 5 ಲೆಕ್ಕ (ಸರಕು ಝಡತಿ, ಆಸ್ತಿ-ಹೊಣೆ ತಖ್ತೆಯ ರಚನೆ, ವೆಚ್ಚನಿರ್ಣಯ, ಅಂಕಿ-ಅಂಶ) ಮತ್ತು 6 ವ್ಯವಸ್ಥಾಪನ (ಯೋಜನೆ, ಸಂಘಟನೆ, ಪ್ರಭುತ್ವ, ಸಂಯೋಜನೆ, ನಿಯಂತ್ರಣ).ಪ್ರತಿಯೊಂದು ಕಾರ್ಯ ಮಾಡುವುದಕ್ಕೂ ಅದಕ್ಕೆ ತಕ್ಕ ಸಾಮಥ್ರ್ಯ ಇರುವುದು ಅವಶ್ಯವಾಗಿರುವಂತೆ, ವ್ಯವಸ್ಥಾಪನಕಾರ್ಯಕ್ಕೂ ಅದಕ್ಕೆ ತಕ್ಕ ಸಾಮಥ್ರ್ಯ ಇರಬೇಕೆಂಬುದು ಫಯೋಲನ ಮತ. ಬಹುತೇಕ ಕೆಲಸಗಾರರಿಗೆ ತಾಂತ್ರಿಕ ಸಾಮಥ್ರ್ಯ ಇರುವುದು ಅವಶ್ಯ. ಅಧಿಕಾರದ ಮೇಲಣ ಹಂತಗಳನ್ನು ಏರಿದಂತೆ ತಾಂತ್ರಿಕ ಸಾಮಥ್ರ್ಯಕಿಂತ ನಿರ್ವಹಣ ಸಾಮಥ್ರ್ಯ ಹೆಚ್ಚಾಗಿ ಬೇಕಾಗುತ್ತದೆ. ತಾಂತ್ರಿಕ ಸಾಮಥ್ರ್ಯದಂತೆ ವ್ಯವಸ್ಥಾಪನ ಸಾಮಥ್ರ್ಯವನ್ನು ಕೂಡ ಶಾಲೆ ಕಾಲೇಜುಗಳಲ್ಲೂ ಅನಂತರ ಕಾರ್ಯಾಗಾರದಲ್ಲೂ ಪಡೆದುಕೊಳ್ಳಬಹುದು.[೨]
ವ್ಯವಸ್ಥಾಪನ ಕಾರ್ಯಭಾರಗಳು
ಬದಲಾಯಿಸಿಪ್ರತಿಯೊಂದು ಕೆಲಸಕ್ಕೂ ಒಂದು ಗುರಿಯನ್ನು ನಿಶ್ಚಯಿಸುವುದೂ ಅದನ್ನು ಸಾಧಿಸುವ ವಿಧಿ ವಿಧಾನಗಳನ್ನು ರೂಪಿಸುವುದೂ ವ್ಯವಸ್ಥಾಪಕನ ಮೊದಲನೆಯ ಕರ್ತವ್ಯ. ಗುರಿಗಳು ಖಚಿತವಾಗಿಯೂ ಸ್ಪಷ್ಟವಾಗಿಯೂ ಇರಬೇಕು. ಗುರಿಗಳನ್ನು ನಿಷ್ಕರ್ಷಿಸುವ ಮುನ್ನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮಾಹಿತಿಯನ್ನು ದೊರಕಿಸಿಕೊಳ್ಳುವುದು ಅವಶ್ಯ. ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಷಿಸಿ ಅದರ ಆಧಾರದ ಮೇಲೆ ಗುರಿಗಳನ್ನು ನಿಷ್ಕರ್ಷಿಸಬೇಕು. ಪ್ರಸ್ತುತ ಪರಿಸ್ಥಿತಿಯಲ್ಲಿ ಯಾವ ಗುರಿಗಳನ್ನು ಸಾಧಿಸಬಹುದೆಂಬುದನ್ನು ತೀರ್ಮಾನಿಸಬೇಕಾಗುತ್ತದೆ. ಅವನ್ನು ಸಾಧಿಸಲು ಸೂಕ್ತಕ್ರಮಗಳನ್ನು ನಿಷ್ಕರ್ಷಿಸಬೇಕು; ಅದಕ್ಕಾಗಿ ನಿರ್ದೇಶನವನ್ನು ನೀಡಬೇಕು. ಸಂಘಟನೆ, ಸಿಬ್ಬಂದಿಯ ಪೂರೈಕೆ, ನಿರೂಪಣೆ, ಪ್ರೇರೇಪಣೆ, ದಿಗ್ದರ್ಶನ ಮತ್ತು ಸಂಯೋಜನೆಗಳ ಮೂಲಕ ವ್ಯವಸ್ಥಾಪಕ ತನ್ನ ಉದ್ದೇಶವನ್ನು ಸಾಧಿಸುತ್ತಾನೆ. ಇದು ವ್ಯವಸ್ಥಾಪನದ ಕಾರ್ಯವಿಧಾನ.ಇದನ್ನು ವ್ಯವಸ್ಥಾಪಕನೇ ಸ್ವತಃ ಸಾಧಿಸುವುದಿಲ್ಲ. ಇದಕ್ಕೆ ಇತರರ ನೆರವು ಪಡೆಯುವುದು ಅವಶ್ಯವಾಗುತ್ತದೆ. ಇದಕ್ಕಾಗಿ ಅವನು ಮಾನವವ್ಯಕ್ತಿಗಳ ಒಂದು ರಚನೆಯನ್ನು ನಿರ್ಮಿಸುತ್ತಾನೆ. ಇದೇ ಸಂಘಟನೆ. ಸಂಘಟನೆಯೆಂಬುದು ಜನಗಳ ಗುಂಪು ಅಥವಾ ತಂಡವಲ್ಲ. ಇಲಾಖೆ ಅಥವಾ ವಿಭಾಗವನ್ನು ಹಾಗೆಂದು ಕರೆಯಬಹುದು; ಅದು ವ್ಯಕ್ತಿಯ ವಿಸ್ತøತರೂಪ: ಒಂದು ನಿರ್ದಿಷ್ಟಕರ್ತವ್ಯದ ಸಾಧನೆಗಾಗಿ ನಿರ್ಮಿಸಲಾದ ಜನತಂಡ. ಒಂದು ಉದ್ಯಮದಲ್ಲಿ ಅಚ್ಚುಕಟ್ಟಾದ ಇಲಾಖೆಗಳನ್ನು ರಚಿಸಬಹುದು. ಆದರೂ ಅದು ಸಂಘಟಿತವಾಗಿಲ್ಲದಿರಬಹುದು. ಒಂದು ಇಲಾಖೆಗೂ ಇನ್ನೊಂದು ಇಲಾಖೆಗೂ ಪ್ರತಿಯೊಂದು ಇಲಾಖೆಯ ವ್ಯಕ್ತಿವ್ಯಕ್ತಿಗೂ ಇರಬೇಕಾದ ಸಂಬಂಧವನ್ನು ನಿರ್ಧರಿಸುವುದು, ಅದನ್ನು ಬೆಳೆಸುವುದು ಸಂಘಟನೆಯ ಕಾರ್ಯ. ಇದೇ ವ್ಯವಸ್ಥಾಪನದ ತಂತ್ರ..ಸಂಘಟನೆಯ ಸ್ವರೂಪವನ್ನು ನಿರ್ಧರಿಸಿದ ಮೇಲೆ ಸಿಬ್ಬಂದಿಪೂರೈಕೆಯ ಕಾರ್ಯ ಆರಂಭವಾಗುತ್ತದೆ. ಒಂದು ಕೆಲಸಕ್ಕೆ ಅಗತ್ಯವಾದ ಜನರಲ್ಲಿ ಇರಬೇಕಾದ ಸಾಮಥ್ರ್ಯಗಳೇನೆಂಬುದನ್ನು ನಿರೂಪಿಸುವುದು, ಅದಕ್ಕೆ ಸೂಕ್ತರಾದ ಜನರನ್ನು ಆರಿಸುವುದು. ಅವರಿಗೆ ತರಬೇತು ನೀಡುವುದು, ಅವರು ಆದಷ್ಟು ಪರಿಣಾಮಕಾರಿಯಾಗಿ ತಮ್ಮ ಕೆಲಸ ಸಾಧಿಸುವಂತೆ ಅವರ ಕರ್ತೃತ್ವಶಕ್ತಿಯನ್ನು ಬೆಳೆಸುವುದು ಇವೆಲ್ಲ ಸಿಬ್ಬಂದಿ ಪೂರೈಕೆಯ ಅಂಶಗಳು.ಅವಶ್ಯವಾದ ಸಿಬ್ಬಂದಿಯ ಪೂರೈಕೆಯಾದ ಮೇಲೆ ವ್ಯವಸ್ಥಾಪಕ ಮಾಡಬೇಕಾದ ಮುಂದಿನ ಕೆಲಸವೆಂದರೆ ವಿಷಯ ನಿರೂಪಣೆ: ತನ್ನ ಕಾರ್ಯಯೋಜನೆಯನ್ನೂ ತನ್ನ ಭಾವನೆಗಳನ್ನೂ ಸಿಬ್ಬಂದಿಗೆ ತಿಳಿಸುವುದು. ತಮ್ಮಿಂದ ಏನನ್ನು ನಿರೀಕ್ಷಿಸಲಾಗಿದೆಯೆಂಬುದನ್ನು ಸಿಬ್ಬಂದಿಜನ ಅರಿತುಕೊಂಡ ಮೇಲೆ ಮಾತ್ರ ಅವರು ತಮ್ಮ ಹೊಣೆಯನ್ನು ಯಶಸ್ವಿಯಾಗಿ ನಿರ್ವಹಿಸಬಲ್ಲರು. ಪ್ರೇರೇಪಣೆ ಅಥವಾ ಚೋದನೆ ಅತ್ಯಂತ ಮುಖ್ಯವಾದ ಅಂಶ, ಉದ್ಯಮದ ಉದ್ದೇಶವನ್ನು ಸಾಧಿಸುವುದಕ್ಕಾಗಿ ಸಿಬ್ಬಂದಿ ಜನರು ಮನಃಪೂರ್ವಕವಾಗಿ ಏಕೀಭವಿಸುವಂತೆ ಮಾಡಲು ಪ್ರತಿಯೊಂದು ಕೈಗಾರಿಕಾ ಸಂಸ್ಥೆಯೂ ಆದ್ಯಗಮನ ಕೊಡುತ್ತದೆ. ಇದರಲ್ಲಿ ಯಶಸ್ಸುಗಳಿಸಿದಾಗಲೇ ಕಾರ್ಯ ಸಾರ್ಥಕವಾಗುತ್ತದೆ.ನಿರ್ದೇಶನ, ಮಾರ್ಗದರ್ಶನ, ಸಲಹೆ-ಇವು ಕೂಡ ಮುಖ್ಯ. ಏನನ್ನು ಮಾಡಬೇಕು, ಏಕೆ ಮಾಡಬೇಕು-ಎಂಬುದು ಒಬ್ಬ ಉದ್ಯೋಗಿಗೆ ಗೊತ್ತಿರಬಹುದು. ಆದರೆ ಹೇಗೆ ಮಾಡಬೇಕು-ಎಂಬುದು ಗೊತ್ತಿಲ್ಲದಿದ್ದರೆ ಪ್ರಯೋಜನವಾಗುವುದಿಲ್ಲ. ಇದನ್ನು ತಿಳಿಯಹೇಳುವುದೂ ವ್ಯವಸ್ಥಾಪನದ ಹೊಣೆ. ಪ್ರತಿಯೊಬ್ಬ ಉದ್ಯೋಗಿಯೂ ಪ್ರತಿಯೊಂದು ಇಲಾಖೆಯೂ ಮಾಡಿದ ಕೆಲಸದ ಸಂಯೋಜನೆ, ನಿರ್ವಾಹಕ ವರ್ಗದ ಮತ್ತು ಕಾರ್ಮಿಕವರ್ಗದ ನಡುವೆ ಸಹಕಾರ-ಇವನ್ನು ಸಾಧಿಸುವುದು ಕೂಡ ವ್ಯವಸ್ಥಾಪನದ ಕರ್ತವ್ಯ. ಕೆಲಸದ ಮೇಲ್ವಿಚಾರಣೆ. ನಿಯಂತ್ರಣ, ಹೊಸಹೊಸ ಉತ್ಪಾದನ ವಿಧಾನಗಳನ್ನು ಕಂಡುಹಿಡಿಯಲು ಕೆಲಸಗಾರರಿಗೆ ಪ್ರೋತ್ಸಾಹ ದೊರಕುವಂಥ ವಾತಾವರಣದ ನಿರ್ಮಾಣ-ಇದೆಲ್ಲವೂ ವ್ಯವಸ್ಥಾಪನದ ಹೊಣೆಯೇ.
=ವ್ಯವಸ್ಥಾಪನದ ಪ್ರಚಲಿತ ವಿಚಾರಧಾಟಿ
ಬದಲಾಯಿಸಿವ್ಯವಸ್ಥಾಪನದ ಬಗ್ಗೆ ಪ್ರಚಲಿತ ವಿಚಾರಧಾಟಿ ಬಹಳಮಟ್ಟಿಗೆ ಮುಂದುವರಿದಿದೆ. ವೇತನ ನೀಡಿ ನಿರ್ದಿಷ್ಟ ಕೆಲಸ ಮಾಡಿಸುವುದಷ್ಟೇ ಉದ್ಯಮವ್ಯವಸ್ಥಾಪನದ ಕಾರ್ಯವಲ್ಲ. ಅದರ ಹೊಣೆ ಇನ್ನೂ ಮಿಗಿಲಾದ್ದು. ಕಾರ್ಮಿಕನ ಚಿತ್ತವೃತ್ತಿ, ಭಾವನೆಗಳು-ಇವನ್ನೆಲ್ಲ ಅದು ಪರಿಗಣಿಸಬೇಕಾಗುತ್ತದೆ. ಆದ್ದರಿಂದ ವ್ಯವಸ್ಥಾಪನ ಒಂದು ವರ್ತನವಿಜ್ಞಾನ. ತನ್ನ ಕೆಲಸದ ಪರಿಸ್ಥಿತಿ ಉತ್ತಮವಾಗಬೇಕು, ತಾನು ಮಾಡುವ ಕೆಲಸಕ್ಕೆ ಮನ್ನಣೆ ದೊರಕಬೇಕು, ತನ್ನ ಹಿತಕ್ಕೆ ಸಂಬಂಧಿಸಿದ ವಿಚಾರಗಳನ್ನು ಕುರಿತ ತೀರ್ಮಾನಗಳಲ್ಲಿ ಭಾಗವಹಿಸಲು ತನಗೆ ಅವಕಾಶ ಇರಬೇಕು-ಎಂದು ಕೆಲಸಗಾರ ಬಯಸುವುದು ಸಹಜವೇ ಆಗಿದೆ. ವ್ಯವಸ್ಥಾಪಕವರ್ಗ ಇದನ್ನು ಗಮನಿಸಲಾರಂಭಿಸಿದೆ. ಹೊಸ ಅರಿವು, ಒಳ್ಳೆಯ ಕೈಗಾರಿಕಾ ಸಂಬಂಧಗಳ ಸ್ಥಾಪನೆ-ಇವು ಇಂದಿನ ವ್ಯವಸ್ಥಾಪನದ ಮುಖ್ಯಲಕ್ಷಣಗಳು. ಒಳ್ಳೆಯ ಮಾನವಸಂಬಂಧದಿಂದ ಒಳ್ಳೆಯ ವ್ಯವಹಾರ,-ಎಂಬುದು ಇಂದಿನ ಘೋಷವಾಕ್ಯ. ಕೆಲಸಗಾರರಲ್ಲಿ ಎಷ್ಟು ಹೆಚ್ಚಿನ ನೈತಿಕ ಸ್ಥೈರ್ಯ ಇರುತ್ತದೊ ಅಷ್ಟರಮಟ್ಟಿಗೆ ಲಾಭವೂ ಅಧಿಕವಾಗುತ್ತದೆ. ಸಿಬ್ಬಂದಿಯ ಆಡಳಿತವೇ ವ್ಯವಸ್ಥಾಪನ. ಅದು ಆದೇಶನೀಡಿಕೆಯಲ್ಲ, ಸಿಬ್ಬಂದಿಯ ಅಭಿವೃದ್ಧಿ. ಮಾನವರ ಗುಂಪಿಗೂ ಜೀವಂತಿಕೆಯುಂಟು. ಗುಂಪಿನಲ್ಲಿ ಎಷ್ಟು ಜನರಿದ್ದಾರೋ ಅಷ್ಟು ಜನರ ಜೀವಂತಿಕೆಗಳ ಮೊತ್ತಕ್ಕಿಂತಲೂ ಗುಂಪಿನ ಜೀವಂತಿಕೆ ಅಧಿಕ. ಇದನ್ನು ಪರಿಗಣಿಸಿ ಅಧಿಕಾರವನ್ನು ಅವೈಯಕ್ತಿಕಗೊಳಿಸಬೇಕು. ಕಾರ್ಯಾತ್ಮಕ ಸಹಕಾರ ತತ್ತ್ವದ ಮೇಲೆ ಯಜಮಾನ-ಉದ್ಯೋಗಿ ಸಂಬಂಧ ರೂಪಿತವಾಗಿದೆಯೇ ವಿನಾ ಅಧಿಕಾರದ ಅಂತಸ್ತಿನ ಮೇಲಲ್ಲ. ವಿವಾದ ಸಂಬಂಧಿಸಿದಾಗ ಎರಡೂ ಪಕ್ಷಗಳ ಅಭಿಲಾಷೆಗಳನ್ನು ಮಿಳಿತಗೊಳಿಸಿ ವಿರಸವನ್ನು ಬಗೆಹರಿಸಬೇಕೇ ವಿನಾ ಒಂದು ಪಕ್ಷದ ಭಾವನೆಗಳನ್ನು ಇನ್ನೊಂದು ಪಕ್ಷ ಹತ್ತಿಕ್ಕುವುದರಿಂದಲ್ಲ. ಒಂದು ಕೊಠಡಿಯಲ್ಲಿ ಇಬ್ಬರು ವಾಸವಾಗಿದ್ದು, ಆ ಕೊಠಡಿಯ ಕಿಟಕಿಯನ್ನು ತೆರೆಯಬೇಕೆಂಬುದು ಒಬ್ಬನ ಇಚ್ಛೆಯೂ ಅದನ್ನು ಮುಚ್ಚಬೇಕೆಂಬುದು ಇನ್ನೊಬ್ಬನ ಇಚ್ಛೆಯೂ ಆಗಿದ್ದ ಪಕ್ಷದಲ್ಲಿ, ಅವರಿಬ್ಬರಲ್ಲಿ ಯಾರೊಬ್ಬನ ಅಭಿಲಾಷೆ ಪೂರೈಸಿದರೂ ಇನ್ನೊಬ್ಬನ ಅಭಿಲಾಷೆಯನ್ನು ಕಡೆಗಣಿಸಿದಂತೆ. ಈ ಸಮಸ್ಯೆಯ ಪರಿಹಾರಕ್ಕೆ ಮೂರನೆಯ ಮಾರ್ಗವಿರಬಹುದೆಂದು ಭಾವಿಸಿ ಅವನ್ನು ಅರಸುವುದೂ ಸಾಧ್ಯ. ಆ ಕೊಠಡಿಗೆ ಸೇರಿದಂತಿರುವ ಪಕ್ಕದ ಕೊಠಡಿಯ ಕಿಟಕಿಯನ್ನು ತೆರೆದರೆ ಇಬ್ಬರ ಹಟವೂ ಸಾಧಿಸಿದಂತಾಗುತ್ತದೆ. ವಿರಸ ಸಂಭವಿಸಿದಾಗ ಎರಡು ಪಕ್ಷಗಳಲ್ಲಿ ಯಾವುದೂ ಸೋತಂತೆ ಭಾವಿಸಲಾಗದ ಮೂರನೆಯ ಮಾರ್ಗವನ್ನು-ಎರಡು ಪಕ್ಷಗಳಿಗೂ ಒಪ್ಪಿಗೆಯಾಗುವ ಮಾರ್ಗವನ್ನು ಹುಡುಕಬೇಕಾಗುತ್ತದೆ. ಅಂತಿಮವಾಗಿ ಎರಡೂ ಪಕ್ಷಗಳ ಗುರಿ ಒಂದೇ ಆಗಿ ಪರಿಣಮಿಸುವಂತೆ ಮಾಡಬೇಕಾಗುತ್ತದೆ. ಅದಕ್ಕನುಗುಣವಾಗಿ ನಾಯಕತ್ವದ ಸ್ವರೂಪವೂ ವ್ಯತ್ಯಾಸಗೊಳ್ಳುವುದು ಅವಶ್ಯ: ಅದು ಆಳ್ವಿಕೆ ನಡೆಸುವುದಲ್ಲ; ಮಾರ್ಗದರ್ಶನ ನೀಡುವುದು, ಮೇಲ್ಪಂಕ್ತಿ ಹಾಕುವುದು. ನಾಯಕತ್ವದ ಶಕ್ತಿ ಇರುವುದು ಸಂಯೋಜನೆಯಲ್ಲಿ. ನಾಯಕನಾದವನು ವ್ಯಕ್ತಿಗಳಲ್ಲಿರುವ ಉತ್ತಮಾಂಶಗಳನ್ನು ಪ್ರಚೋದಿಸುತ್ತಾನೆ. ವ್ಯಕ್ತಿಗಳಲ್ಲಿ ಒಟ್ಟೊಟ್ಟಾಗಿ, ಬಿಡಿಬಿಡಿಯಾಗಿ ಯಾವ ಭಾವನೆಗಳು ಮೂಡುತ್ತವೆಯೋ ಅವನ್ನೆಲ್ಲ ಅವನು ಕ್ರೋಡೀಕರಿಸಿ ಸಾಂದ್ರೀಕರಿಸುತ್ತಾನೆ. ಪ್ರತಿಯೊಬ್ಬ ಮನುಷ್ಯನಲ್ಲೂ ಭ್ರೂಣಾವಸ್ಥೆಯಲ್ಲಿರುವ ಚೈತನ್ಯಕ್ಕೆ ರೂಪು ಆಕಾರ ನೀಡುವವನೇ ನಾಯಕ. ಮಹಾಕಾರ್ಯಗಳನ್ನು ಮಾಡಿ ಯಾರೂ ಇತರರ ಮೇಲೆ ಶಾಶ್ವತ ಪ್ರಭಾವ ಬೀರಲಾರರು. ತಾವು ಕೂಡ ಮಹಾಕಾರ್ಯಗಳನ್ನು ನಿರ್ವಹಿಸಬಲ್ಲೆವೆಂಬ ಭಾವನೆ ಇತರರಲ್ಲಿ ಮೂಡುವಂತೆ ಮಾಡುವವನೇ ನಿಜವಾದ ಪ್ರಭಾವಶಾಲಿ. ನಿಜವಾದ ನಾಯಕತ್ವಕ್ಕೆ ಈ ಗುಣ ಇರಬೇಕು. ಇಂದು ವ್ಯವಸ್ಥಾಪನ ಈ ಬಗೆಯ ನಿಲುವು ತಳೆಯುತ್ತಿದೆ. ಇದಕ್ಕೆ ಮನಶ್ಶಾಸ್ತ್ರ, ಸಮಾಜಶಾಸ್ತ್ರ ಮತ್ತು ಸಾಂಸ್ಕøತಿಕ ಮಾನವಶಾಸ್ತ್ರ ತಳಹದಿಗಳಾಗಿವೆ. ನಾಯಕನ ಗುಣಲಕ್ಷಣಗಳಿಗೆ ಸಂಬಂಧಿಸಿದ ಅಮೂರ್ತ ಅಂಶಗಳನ್ನು ಸೋಸಿ ಅಳೆಯುವುದು ಇದರ ಕೆಲಸ.
ರೆ ಫ್ರೆಡರಿಕ್ ಡಬ್ಲ್ಯೂ. ಟೇಲರ್ (1856-1915
ಬದಲಾಯಿಸಿಇವೆಲ್ಲ ವಿಚಾರಗಳಿಂದ ವ್ಯವಸ್ಥಾಪನ ಸಿದ್ಧಾಂತವೊಂದು ಕ್ರಮಕ್ರಮವಾಗಿ ರೂಪುಗೊಳ್ಳುತ್ತಿದೆ. ವ್ಯವಸ್ಥಾಪನವೂ ಒಂದು ವಿಜ್ಞಾನವೆಂಬ ಭಾವನೆಯೆಂಬ ಕ್ರಮಬದ್ಧವಾಗಿ ಬಿತ್ತಿ ಬೆಳೆಸಿದವರಲ್ಲಿ ಮೊದಲಿಗನೆಂದರೆ ಫ್ರೆಡರಿಕ್ ಡಬ್ಲ್ಯೂ. ಟೇಲರ್ (1856-1915). ಇವನನ್ನು ವ್ಶೆಜ್ಞಾನಿಕ ವ್ಯವಸ್ಥಾಪನದ ಜನಕನೆಂದು ಪರಿಗಣಿಸುವುದು ರೂಢಿ. ಜೀವವಿಜ್ಞಾನದಲ್ಲಿ ಡಾರ್ವಿನನಿಗೆ ಯಾವ ಸ್ಥಾನವಿದೆಯೋ, ಕೈಗಾರಿಕಾ ವ್ಯವಸ್ಥಾಪನದಲ್ಲಿ ಟೇಲರನಿಗೆ ಅದೇ ಸ್ಥಾನವಿದೆಯೆಂದು ಸ್ಟ್ರೀಗಲ್ ಮತ್ತು ಲ್ಯಾನ್ಸ್‍ಬರ್ಗ್ ಅಭಿಪ್ರಾಯಪಡುತ್ತಾರೆ. ಕೆಲಸಗಾರರ ಕಡಿಮೆ ದಕ್ಷತೆಯ ಸಮಸ್ಯೆಯನ್ನು ಅವನು ಅಧ್ಯಯನ ಮಾಡಿದ್ದಾನೆ. ಒಂದು ದಿನದಲ್ಲಿ ಒಬ್ಬ ಕೆಲಸಗಾರ ಎಷ್ಟು ಕೆಲಸ ಮಾಡಬೇಕೆಂಬ ಬಗ್ಗೆ ವ್ಯವಸ್ಥಾಪನಕ್ಕೆ ಸರಿಯಾದ ತಿಳಿವಳಿಕೆ ಇಲ್ಲದಿರುವುದೇ ಇದಕ್ಕೆ ಕಾರಣವೆಂಬುದಾಗಿ ಆತನ ನಂಬಿಕೆ. ವ್ಯವಸ್ಥಾಪನವರ್ಗ ನಿಜವಾಗಿಯೂ ವ್ಯವಸ್ಥಾಪನಕಾರ್ಯ ಮಾಡುತ್ತಿಲ್ಲವೆಂಬುದು ಅವನ ತೀರ್ಮಾನ. ವ್ಯವಸ್ಥಾಪನಕ್ಕೂ ವೈಜ್ಞಾನಿಕ ನಿಲುವು ಅಗತ್ಯ ಎಂದು ಆತ ವಾದಿಸಿದ್ದಾನೆ. ಉತ್ಕøಷ್ಟ ವ್ಯವಸ್ಥಾಪನವೂ ವಾಸ್ತವವಾಗಿ ಒಂದು ವಿಜ್ಞಾನ. ಖಚಿತವಾಗಿ ವ್ಯಾಖ್ಯಿಸಲಾದ ನಿಯಮಗಳೂ ನಿಬಂಧನೆಗಳೂ ತತ್ತ್ವಗಳೂ ಅದಕ್ಕೆ ಆಧಾರ. ವೀಕ್ಷಣೆ, ಅಳತೆ, ಪ್ರಯೋಗ, ತೀರ್ಪು-ಇವು ವಿಜ್ಞಾನದ ಅಂಶಗಳು. ಕೆಲಸಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯ ವರ್ಗೀಕರಣ ನಿಯಮ, ನಿಬಂಧನೆ ಮತ್ತು ಸೂತ್ರಗಳ ರಚನೆ-ಈ ಕಾರ್ಯವನ್ನು ಕೈಗೊಳ್ಳುವುದು ವ್ಯವಸ್ಥಾಪನದ ಕರ್ತವ್ಯ. ತರಬೇತಾದ ಕಾರ್ಮಿಕರು ಅನುಸರಿಸಬೇಕಾದ ಶಿಷ್ಟತೆಗಳು ಕೂಡ ವ್ಯವಸ್ಥಾಪನದಿಂದ ನಿಷ್ಕರ್ಷೆಯಾಗಬೇಕು. ಯೋಜನೆಯನ್ನೂ ಕೆಲಸವನ್ನೂ ಪ್ರತ್ಯೇಕಿಸಬೇಕು. ಯೋಜಿಸುವುದೂ ಮೇಲ್ವಿಚಾರಣೆ ನಡೆಸುವುದೂ ವ್ಯವಸ್ಥಾಪಕನ ಹೊಣೆ. ನೀಡಲಾದ ಸೂಚನೆಗಳಿಗೆ ಅನುಗುಣವಾಗಿ ಕೆಲಸಮಾಡುವುದು ಕಾರ್ಮಿಕರ ಹೊಣೆ. 1 ಸ್ಥೂಲ ನಿಯಮಗಳ ಬದಲು ವೈಜ್ಞಾನಿಕ ವಿಧಾನಗಳ ಅನುಸರಣೆ, 2 ಕೆಲಸಗಾರರ ವೈಜ್ಞಾನಿಕ ಆಯ್ಕೆ, ನೇಮಕ, ತರಬೇತು, 3 ವ್ಯವಸ್ಥಾಪಕ ಮತ್ತು ಕಾರ್ಮಿಕ ವರ್ಗಗಳ ನಡುವಣ ಸಹಕಾರದ ಮೂಲಕ ಸಾಮರಸ್ಯ ಸಾಧನೆ, 4 ವೈಜ್ಞಾನಿಕ ವಿಧಾನಗಳ ಮೂಲಕ ಗರಿಷ್ಠ ಉತ್ಪತ್ತಿ, 5 ಗರಿಷ್ಠ ದಕ್ಷತೆ ಮತ್ತು ಪ್ರಗತಿ ಸಾಧಿಸುವಂತೆ ಪ್ರತಿಯೊಬ್ಬ ಕೆಲಸಗಾರನ ಅಭಿವೃದ್ಧಿ, 6 ವ್ಯವಸ್ಥಾಪನ ಮತ್ತು ಕಾರ್ಮಿಕರ ನಡುವೆ ಕೆಲಸ ಮತ್ತು ಹೊಣೆಗಳ ನ್ಯಾಯವಾದ ವಿಭಜನೆ-ಇವು ವ್ಯವಸ್ಥಾಪನದ ಕಾರ್ಯಭಾರವೆಂದು ಟೇಲರ್ ಹೇಳಿದ್ದಾನೆ.ತನ್ನ ಸೂತ್ರಗಳು ವಿಸ್ತøತವಾಗಿ ಅನ್ವಯವಾಗಬೇಕೆಂಬುದು ಟೇಲರನ ಉದ್ದೇಶವಾಗಿತ್ತಾದರೂ ಇಡೀ ಉದ್ಯಮಕ್ಕಿಂತ ಕಾರ್ಯಶಾಲೆಯ ಹಂತದಲ್ಲಿ ನಡೆಯುವ ಕಲಾಪಗಳ ವ್ಯವಸ್ಥಾಪನಕ್ಕೆ ಆತ ಹೆಚ್ಚು ಗಮನ ನೀಡಿದ್ದಾನೆ. ಯಂತ್ರಗಳು, ಅವುಗಳ ಚಾಲಕರು, ಪದಾರ್ಥೋತ್ಪಾದನೆಯಲ್ಲಿ ನಿರತರಾದ ಕಾರ್ಮಿಕರ ದಕ್ಷತೆ, ವ್ಯವಸ್ಥಾಪಕನ ಅಡಿಗಲ್ಲಾಗಿ ಕಾಲ ಮತ್ತು ಚಲನೆಯ ಅಧ್ಯಯನ ವಿಚಾರವನ್ನು ಆತ ಬೆಳೆಸಿದ್ದಾನೆ. ಆದರೆ ಇಡೀ ಕೈಗಾರಿಕೋದ್ಯಮದ ವ್ಯವಸ್ಥಾಪನ ಹಿಂದೆ ಹೇಳಿದಂತೆ ಇದಕ್ಕಿಂತ ವ್ಯಾಪಕವಾದ್ದು. ಅದು ವಿಜ್ಞಾನ ಮಾತ್ರವಲ್ಲ; ಒಂದು ಕಲೆ ಮತ್ತು ಒಂದು ದರ್ಶನ ಕೂಡ.
ಉಲ್ಲೇಖಗಳು
ಬದಲಾಯಿಸಿ