ಕೆಲೊರಿಯು ಉಷ್ಣದ ಪರಿಮಾಣವನ್ನು ಅಳೆಯಲು ಉಪಯೋಗಿಸುವ ಏಕಮಾನ. ಒಂದು ಗ್ರಾಂ ನೀರಿನ ಉಷ್ಣತೆಯನ್ನು ೧೪.೫೦ ಸೆಂ.ನಿಂದ ೧೫.೫೦ ಸೆಂ.ಗೆ (ಅಂದರೆ ಒಂದು ಸೆಂ) ಏರಿಸಲು ಬೇಕಾಗುವ ಉಷ್ಣ ಪರಿಮಾಣಕ್ಕೆ ಒಂದು ಕೆಲೊರಿ ಎಂದು ಹೆಸರು. ಇದರ ಪರಿಮಾಣ ಅಳೆಯುವ ಪರಿಸ್ಥಿತಿ ಹಾಗೂ ಸ್ಥಳವನ್ನು ಅವಲಂಬಿಸಿದೆ. ಆದರೆ ಈಗ ವಿದ್ಯುನ್ಮಾನಗಳಲ್ಲಿ ಕೆಲೊರಿಯನ್ನು ಹೆಚ್ಚು ನಿಖರವಾಗಿ ಅಳೆಯಬಹುದು. ೨೦ನೆಯ ಶತಮಾನದ ಸಾಧನ ಹಾಗೂ ನಿಖರತೆಯ ವಿಧಾನಗಳಿಂದಾಗಿ ನೀರಿನ ಸಾಪೇಕ್ಷ ಉಷ್ಣತೆಯ ಆದರ್ಶದ ಆಧಾರದಿಂದ ಉಷ್ಣವನ್ನು ಅಳೆಯುವುದರ ಜೊತೆಗೆ ಜೌಲನ್ನು ಆದರ್ಶಮಾನವನ್ನಾಗಿ ತೆಗೆದುಕೊಳ್ಳಲಾಗಿದೆ. ಕಿಲೋ ಕೆಲೊರಿ: ಇದು ೧೦೦೦ ಕೆಲೊರಿಗಳಿಗೆ ಸಮ. ತಂತ್ರಶಾಸ್ತ್ರಜ್ಞರು ಇದನ್ನು ಬಳಸುತ್ತಾರೆ. ಇನ್ನು, ಒಂದು ಪೌಂಡ್ ಕೆಲೊರಿ ೪೫೩.೬ ಕಿಲೊರಿಗಳಿಗೆ ಸಮ. ಲಂಡನ್‍ನಲ್ಲಿ ನಡೆದ ಅಂತರರಾಷ್ಟ್ರೀಯ ಸಮ್ಮೇಳನವೊಂದರಲ್ಲಿ ಒಂದು ಕೆಲೊರಿ (೧/೮೬೦) ವಾಟ್-ಗಂಟೆಗೆ ಸಮ ಎಂದು ಖಚಿತಪಡಿಸಲಾಯಿತು.[]

ಕೆಲೊರಿ ಮಾಪನ

ಬದಲಾಯಿಸಿ
 
ವಿಶ್ವದ ಮೊದಲ ಕೆಲೊರಿಮೆಟ್ರಿ

ಭೌತ ಹಾಗೂ ರಾಸಾಯನಿಕವಾಗಿ ವಸ್ತುವಿನ ಸ್ಥಿತಿಯಲ್ಲಿ ಬದಲಾವಣೆ ಆದಾಗ ಬಿಡುಗಡೆಯಾಗುವ ಅಥವಾ ಹೀರಿಕೊಳ್ಳುವ ಉಷ್ಣದ ಪರಿಮಾಣವನ್ನು ಅಳೆಯುವ ವಿಜ್ಞಾನ (ಕೆಲೊರಿಮೆಟ್ರಿ). ಉಷ್ಣವನ್ನು, ಪರೋಕ್ಷವಾಗಿ, ಅದು ಉಂಟು ಮಾಡುವ ಪರಿಣಾಮಗಳಿಂದ ಅಳೆಯಬಹುದು. ಉದಾಹರಣೆಗೆ ಉಷ್ಣತಾ ವ್ಯತ್ಯಾಸ, ಭೌತಸ್ಥಿತಿ ಬದಲಾವಣೆ, ಶಕ್ತಿ ರೂಪಾಂತರ ಇತ್ಯಾದಿ. ಯಾವುದಾದರೂ ಒಂದು ವಸ್ತು ಮತ್ತು ವಾತಾವರಣದ ನಡುವಣ ಶಕ್ತಿ ವಿನಿಮಯ ಉಷ್ಣ ಅಥವಾ ಕಾರ್ಯ ಅಥವಾ ಎರಡರ ರೂಪದಲ್ಲೂ ಇರಬಹುದು. ಕೆಲೊರಿಮಾಪನ ಶಕ್ತಿ ಬದಲಾವಣೆಗಳನ್ನು ನಿರ್ಧರಿಸಲು ಬಹಳ ಅನುಕೂಲವಾಗಿದೆ. ಉಷ್ಣರೂಪದ ಶಕ್ತಿಯನ್ನು ಅಳೆಯುವ ಸಾಧನದ ಹೆಸರು ಕೆಲೊರಿಮಾಪಕ. ಇದರಲ್ಲಿ ಅನೇಕ ಬಗೆಗಳಿವೆ. ಶಕ್ತಿ ಉಷ್ಣವಾಗಿ ರೂಪಾಂತರ ಹೊಂದಿದ ಪರಿಮಾಣವನ್ನು ಇವು ಅಳೆಯಬಲ್ಲವು. ಸಾಮಾನ್ಯವಾಗಿ ಮೂರು ಘಟಕಗಳನ್ನು ಅಳೆಯುವುದರಿಂದ ಕೆಲೊರಿಮಾಪನ ಸಾಧ್ಯ. ಅವುಗಳು

  1. ಕೆಲೊರಿಮಾಪಕ ಮತ್ತು ಅದರಲ್ಲಿರುವ ವಸ್ತುಗಳ ಉಷ್ಣತೆಯನ್ನು ಅಳೆಯುವಕೆ.
  2. ಹೊರಗಿನಿಂದ ಕೆಲೊರಿಮಾಪಕಕ್ಕೆ ಸೇರಿಸಿದ ಶಕ್ತಿಯ ಪರಿಮಾಣ.
  3. ಕೆಲೊರಿಮಾಪಕ ಹಾಗೂ ವಾತಾವರಣ ಇವುಗಳ ನಡುವಣ ಶಕ್ತಿವಿನಿಮಯ ಪರಿಮಾಣದ ಅಳೆಯುವಿಕೆ.

ಉಲ್ಲೇಖ

ಬದಲಾಯಿಸಿ


"https://kn.wikipedia.org/w/index.php?title=ಕೆಲೊರಿ&oldid=1250195" ಇಂದ ಪಡೆಯಲ್ಪಟ್ಟಿದೆ