ಕೆಪ್ಲೆರ್ ಉಪಗ್ರಹ
ಕೆಪ್ಲರ್ ಕೃತಕ ಉಪಗ್ರಹವು, ಸೌರಮಂಡಲದ ಹೊರಗಿನ, ಬಹುದೂರದ ಇತರೆ ನಕ್ಷತ್ರಗಳನ್ನು ಹಾಗು ಅವುಗಳನ್ನು ಪರಿಭ್ರಮಿಸುವ ಭೂಮಿ ಗಾತ್ರದ ಗ್ರಹಗಳನ್ನು ಅನ್ವೇಷಿಸಲು ಅಮೇರಿಕಾದ ನಾಸಾ ಸಂಸ್ಥೆಯು ಬಾಹ್ಯಾಕಾಶಕ್ಕೆ ಉಡಾಯಿಸಿದ, ಒಂದು ಬಾಹ್ಯಾಕಾಶ ವೀಕ್ಷಣಾಲಯ ಆಗಿದೆ. ಖಗೋಳಶಾಸ್ತ್ರಜ್ಞನಾದ ಜೊಹಾನ್ಸ್ ಕೆಪ್ಲರ್ ಹೆಸರಿನ ಈ ಬಾಹ್ಯಾಕಾಶ ನೌಕೆಯನ್ನು ಮಾರ್ಚ್ ೭, ೨೦೦೯ ರಂದು ಉಡಾವಣೆ ಮಾಡಲಾಯಿತು. ಕ್ಷೀರಪಥದ ವಿಸ್ತರತೆಯ ಪ್ರದೇಶದಲ್ಲಿ ಒಂದು ಭಾಗವನ್ನು ವಾಸಯೋಗ್ಯ ವಲಯವಾಗಿ ಪರಿಗಣಿಸಿ, ಸುಮಾರು ಭೂಮಿ ಗಾತ್ರದ ಗ್ರಹಗಳನ್ನು ಅನ್ವೇಷಿಸಲು ಮತ್ತು ಕ್ಷೀರಪಥದಲ್ಲಿರುವ ಶತಕೋಟಿ ನಕ್ಷತ್ರಗಳ ಪ್ಶೆಕಿ ಎಷ್ಟು ನಕ್ಷತ್ರಗಳಿಗೆ ಈ ರೀತಿಯಾದ ಗ್ರಹಗಳು ಇವೆ ಎಂಬುದರ ಅಂದಾಜು ಪಡೆಯಲು ಹಾಗು ಸಮೀಕ್ಷೆ ನಡೆಸಲು ಈ ಉಪಗ್ರವನ್ನು ವಿನ್ಯಾಸಗೊಳಿಸಲಾಗಿದೆ. ಕೆಪ್ಲರ್‌ನ ಒಂದು ಭಾಗವಾದ ಫೊಟೊಮೀಟರ್, ಒಂದೆ ಸ್ಥಿರ ಕ್ಷೇತ್ರದಲ್ಲಿ ನಿರಂತರವಾಗಿ ೧೪೫೦೦೦ 'ಪ್ರಧಾನ ಸರಣಿ ನಕ್ಷತ್ರ'[೧] ಗಳ ಹೊಳಪನ್ನು ವೀಕ್ಷಿಸುತ್ತದೆ. ಇದರ ಮಾಹಿತಿಗಳನ್ನು ಭೂಮಿಗೆ ರವಾನಿಸುತ್ತದೆ. ಗ್ರಹಗಳು ತಮ್ಮ ನಕ್ಷತ್ರದ ಸುತ್ತಲಿನ ಕಕ್ಷೆಯಲ್ಲಿ ಸುತ್ತುವಾಗ, ನಕ್ಷತ್ರದ ಮುಂದೆ ದಾಟಲು, ಇದರಿಂದ ಉಂಟಾಗುವ ಆವರ್ತಕ ಕಳೆಗುಂದುವಿಕೆಯನ್ನು ಪತ್ತೆಮಾಡುತ್ತದೆ.
Operator | ನಾಸಾ |
---|---|
Mission type | ಬಾಹ್ಯಾಕಾಶ ವೀಕ್ಷಣಾಲಯ |
Launch date | ೦೭ ಮಾರ್ಚ್ ೨೦೦೯ |
Launch vehicle | ಡೆಲ್ಟಾ-೨ |
Launch site | CCAFS SLC-17B Cape Canaveral, FL (ಕೇಪ್ ಕೆನೆವರಾಲ್) |
Mission duration | ಯೋಜಿತ ಕಾಲಾವಧಿ-3.5 ವರ್ಷಗಳು |
Mass | 1,052.4 kg (ಉಡಾವಣೆಯ ಸಮಯದಲ್ಲಿ) |
Dimensions | 4.7 m × 2.7 m (15.4 ft × 8.9 ft) |
Power | 1100 watts |
Orbital elements | |
Reference system | ಸೂರ್ಯ ಕೇಂದ್ರಿತ ಕಕ್ಷೆ |
Regime | Earth-trailing |
Inclination | 0.44745 degrees |
ವಿನ್ಯಾಸ ಮತ್ತು ನಿಯಂತ್ರಣ
ಬದಲಾಯಿಸಿಅತ್ಯಂತ ಕಡಿಮೆ ಖರ್ಚಿನಲ್ಲಿ ವಿನ್ಯಾಸಗೊಂಡಿರುವ ಈ ಉಪಗ್ರಹವನ್ನು ತಯಾರಿಸುವ ಜವಾಬ್ದಾರಿಯನ್ನು ನಾಸಾದ ಜೆಟ್ ಪ್ರೊಪಲ್ಶನ್ ಪ್ರಯೋಗಾಲಯ ಹಾಗು ಬಾಲ್ ಏರೋಸ್ಪೇಸ್ ಕಂಪನಿ[೨]ಯು ವಹಿಸಿಕೊಂಡಿತು. ಅಮೆಸ್ ರಿಸರ್ಚ್ ಸೆಂಟರ್ [೩]ಭೂಮಿ ಮೇಲಿನ ನಿಯಂತ್ರಣಾಲಯವನ್ನು ನಿರ್ಮಿಸುವ ಹೊಣೆ ಹೊತ್ತುಕೊಂಡಿತು. ಇದು ಡಿಸೆಂಬರ್ ೨೦೦೯ ರಿಂದ ವೈಜ್ಞಾನಿಕ ಮಾಹಿತಿ ಮತ್ತು ವಿಶ್ಲೇಷಣೆ ನೀಡುತ್ತಿದೆ. ಇದರ ಆಯಸ್ಸು ಸುಮಾರು ೩.೫ ವರ್ಷಗಳೆಂದು ನಿಗದಿಪಡಿಸಲಾಗಿತ್ತು. ಆದರೆ, ಉಪಗ್ರಹದಿಂದ ಪಡೆಯಲಾದ ದತ್ತಾಂಶಗಳಲ್ಲಿ ತುಂಬಾ ಗೋಜಲು ಮತ್ತು ಗೊಂದಲಗಳು ಇದ್ದ ಕಾರಣದಿಂದಾಗಿ ಉಪಗ್ರಹದ ವಯೋಮಿತಿಯನ್ನು ಹೆಚ್ಚಿಸುವುದು ಅನಿವಾರ್ಯವಾಯಿತು.
ಈ ಬಾಹ್ಯಾಕಾಶ ದೂರದರ್ಶಕವು ೧೦೩೯ ಕಿಲೋಗ್ರಾಂಗಳಷ್ಟು ಭಾರವಿದ್ದು, ೧.೪ ಮೀಟರ್ ಪ್ರಾಥಮಿಕ ಕನ್ನಡಿಯನ್ನು, ೦.೯೫ ಮೀಟರ್ ಒಂದು ದ್ಯುತಿರಂಧ್ರ ಹೊಂದಿದೆ. ಈ ಉಪಗ್ರಹದ ಉಡಾವಣಾ ಸಮಯದಲ್ಲಿ ಭೂಮಿಯ ಹೊರಗೆ ಕಕ್ಷೆಯಲ್ಲಿದ್ದ ದೊಡ್ಡ ದೂರದರ್ಶಕ ಕನ್ನಡಿ ಇದಾಗಿತ್ತು. ಅತ್ಯುತ್ತಮ ದ್ಯುತಿಮಾಪನಕ್ಕಾಗಿ (ಫೊಟೊಮೆಟ್ರಿ[೪]), ಸೂಕ್ಷ್ಮ ಫೊಟೊಮೀಟರ್[೫] ಹೊಂದಿದೆ. ಇದರಿಂದಾಗಿ ದೂರದರ್ಶಕವು ಉತ್ತಮ ಚೂಪಾಗಿರದ ಛಾಯಚಿತ್ರ ಒದಗಿಸುತ್ತದೆ.
ಮಿಷನ್ ಗಳು ಹಾಗು ಎದುರಿಸಿದ ತೊಂದರೆಗಳು
ಬದಲಾಯಿಸಿ೨೦೧೨ರ ಆರಂಭದಲ್ಲಿ, ಉಪಗ್ರಹದ ಕಾರ್ಯಾಚರಣೆ ೨೦೧೬ ತನಕ ವಿಸ್ತರಿಸಲಾಗಿದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಜುಲೈ ೧೪, ೨೦೧೨ ರಂದು , ಉಪಗ್ರಹದ ನಾಲ್ಕು ಪ್ರತಿಕ್ರಿಯೆ ಚಕ್ರಗಳ ಪೈಕಿ ಒಂದು ಕಾರ್ಯ ನಿಲ್ಲಿಸಿತು. ಇಂತಹ ಸಂದರ್ಭದಲ್ಲಿ, ಉಳಿದ ಪ್ರತಿಕ್ರಿಯೆ ಚಕ್ರಗಳು ಕಾರ್ಯಾ ನಿರ್ವಹಿಸಿದರೆ, ಮಾತ್ರ ಸಂಶೋಧನೆ ಕಾರ್ಯಾಚರಣೆ ಸಾಧ್ಯವಾಗಿತ್ತು. ನಂತರ , ಮೇ ೧೧,೨೦೧೩, ಎರಡನೇ ಪ್ರತಿಕ್ರಿಯೆ ಚಕ್ರ ನಿಷ್ಕ್ರಿಯಗೊಂಡ ಕಾರಣ ವಿಜ್ಞಾನ ಮಾಹಿತಿ ಸಂಗ್ರಹಣೆ, ಸಂಶೋಧನೆ ಪೂರ್ಣಗೊಳಿಸಲು ಕಂಟಕವಾಯಿತು. ಆಗಸ್ಟ್ ೧೫, ೨೦೧೩ ರಂದು ನಾಸಾ ಎರಡು ಪ್ರತಿಕ್ರಿಯೆ ಚಕ್ರಗಳನ್ನು ಸರಿಪಡಿಸುವ ಪ್ರಯತ್ನವನ್ನು ಕೈಚಲ್ಲಿತು. ಈ ಮಾರ್ಪಾಡು ಅಗತ್ಯವಿದೆ ಪ್ರಸ್ತುತ ಮಿಷನ್ ಅರ್ಥ , ಆದರೆ ಅದು ಗ್ರಹದ ವೀಕ್ಷಣೆಗೆ ಯಾವುದೇ ತೊದರೆಯಾಗಲಿಲ್ಲ. ನಾಸಾ, ಉಳಿದ ಎರಡು ಪ್ರತಿಕ್ರಿಯೆ ಚಕ್ರಗಳನ್ನು ಬಳಸಿಕೊಂಡು, ಪರ್ಯಾಯ ಯೋಜನೆಗಳನ್ನು ಪ್ರಸ್ತಾಪಿಸಲು ಬಾಹ್ಯಾಕಾಶ ವಿಜ್ಞಾನ ಸಮುದಾಯಕ್ಕೆ ಕೇಳಿತು. ನವೆಂಬರ್ ೧೮, ೨೦೧೩ ರಂದು, ಕೆ ೨ "ಸೆಕೆಂಡ್ ಲೈಟ್" ಪ್ರಸ್ತಾವನೆಯಾಯಿತು. ನಿಷ್ಕ್ರಿಯಗೊಂಡ ಕೆಪ್ಲರ್ ಬಳಸಿಕೊಂಡು ವಾಸಯೋಗ್ಯ ಗ್ರಹಗಳ ಪತ್ತೆ, ಕೆಂಪು ಕುಬ್ಜಗಳನ್ನು ಪತ್ತೆಮಾಡುವುದು ಇದರ ಧ್ಯೇಯವಾಗಿತ್ತು. ಮೇ ೧೬, ೨೦೧೪ ರಂದು ನಾಸಾ ಕೆ 2 ವಿಸ್ತರಣೆ ಅನುಮೋದನೆ ಘೋಷಿಸಿತು.[೬]
ಸಾಧನೆ ಹಾಗು ಸಂಪಾದಿಸಿದ ಮಾಹಿತಿ
ಬದಲಾಯಿಸಿಜನವರಿ 2015 ರಲ್ಲಿ, ಕೆಪ್ಲರ್ ಮತ್ತು ಇದರ ನಂತರದ ವೀಕ್ಷಣೆಗಳಲ್ಲಿ ೪೪೦ ನಾಕ್ಷತ್ರಿಕ ವ್ಯವಸ್ಥೆಗಳಲ್ಲಿ ೧೦೧೩ ದೃಢಪಡಿಸಿದ ಎಕ್ಸೋಗ್ರಹಗಳನ್ನು, ಇನ್ನೂ ೩೧೯೯ ದೃಢಪಟ್ಟಿಲ್ಲದ ಗ್ರಹದ ಅಭ್ಯರ್ಥಿಗಳನ್ನು ಸಂಪಾದಿಸಿದೆ. ನಾಲ್ಕು ಗ್ರಹಗಳು ಕೆಪ್ಲರನ ಕೆ 2 ಮಿಷನ್ ಮೂಲಕ ಖಚಿತಪಡಿಸಲಾಗಿದೆ. ನವೆಂಬರ್೨೦೧೩ ರಲ್ಲಿ ಖಗೋಳವಿಜ್ಞಾನಿಗಳು ಕ್ಷೀರಪಥದ ಒಳಗಿನ ವಾಸಯೋಗ್ಯ ವಲಯಗಳಲ್ಲಿ ಸೂರ್ಯನ ತರಹದ ನಕ್ಷತ್ರಗಳು, ಸುತ್ತುವ ಸುಮಾರು ೪೦ ಭೂಮಿ ಗಾತ್ರದ ಗ್ರಹಗಳು ಮತ್ತು ಕೆಂಪು ಕುಬ್ಜಗಳು ಇರುವುದಾಗಿ ಹೇಳಿದರು, ಕೆಪ್ಲರ್ ಬಾಹ್ಯಾಕಾಶ ಮಿಷನ್ ಮಾಹಿತಿ ಆಧಾರಿತ, ವರದಿ ಪ್ರಕಾರ ೧೧ ಶತಕೋಟಿ ಗ್ರಹಗಳು ಸೂರ್ಯನ ತರಹದ ನಕ್ಷತ್ರಗಳನ್ನು ಪರಿಭ್ರಮಿಸುತ್ತವೆ ಎಂದು ಅಂದಾಜಿಸಲಾಗಿದೆ. ವಿಜ್ಞಾನಿಗಳ ಪ್ರಕಾರ, ಇಂತಹ ಗ್ರಹಗಳಲ್ಲಿ ಹತ್ತಿರದ ಗ್ರಹವು ಇಲ್ಲಿಂದ ಸುಮಾರು ೧೨ ಜ್ಯೋತಿವರ್ಷ ದೂರ ಇರಬಹುದು. ಜನವರಿ 6, 2015 ರಂದು ನಾಸಾ ಕೆಪ್ಲರ್ ಬಾಹ್ಯಾಕಾಶ ದೂರದರ್ಶಕ ಪತ್ತೆಮಾಡಿ, ದೃಢಪಡಿಸಿದ ೧೦೦೦ ಎಕ್ಸೋಗ್ರಹವನ್ನು ಘೋಷಿಸಿತು. ವಾಸಯೋಗ್ಯ ವಲಯಗಳಿಂದ ಹೊಸದಾಗಿ ದೃಢಪಡಿಸಿದ ನಾಲ್ಕು ಎಕ್ಸೋಗ್ರಹಳ ಪೈಕಿ, ಮೂರು, ಕೆಪ್ಲರ್ ೪೩೮ಬಿ, ಕೆಪ್ಲರ್ ೪೪೨ಬಿ ಮತ್ತು ಕೆಪ್ಲರ್ ೪೫೨ಬಿ, ಸುಮಾರು ಭೂಮಿಯ ಗಾತ್ರದಲ್ಲಿದ್ದು ಕೆಪ್ಲರ್ ೪೪೦ಬಿ ಒಂದು ಸೂಪರ್ ಅರ್ಥ್ ಆಗಿದೆ.
- ಸಾಗಣೆ (ಟ್ರ್ಯಾನ್ಸಿಟ್) ವಿಧಾನದಿಂದ ಗ್ರಹಗಳನ್ನು ಪತ್ತೆಹಚ್ಚುವುದು
ಒಂದು ಗ್ರಹ ತನ್ನ ನಕ್ಷತ್ರ ಮುಂದೆ ಹಾದುಹೋಗುವ ಕ್ರಿಯೆಯನ್ನು ಒಂದು "ಸಾಗಣೆ" (ಟ್ರ್ಯಾನ್ಸಿಟ್) ಎಂದು ಕರೆಯಲಾಗುತ್ತದೆ. ಭೂಮಿಯ ಮೇಲೆ, ನಾವು ಭೂಮಿಯಿಂದ ಸಾಂದರ್ಭಿಕವಾಗಿ ಶುಕ್ರ ಅಥವಾ ಬುಧ ಸಾಗಣೆ (ಟ್ರ್ಯಾನ್ಸಿಟ್) ಗಮನಿಸಬಹುದು. ಈ ಘಟನೆಗಳ ಸಂದರ್ಭದಲ್ಲಿ ಗ್ರಹವು ಸೂರ್ಯ ಮತ್ತು ನಮ್ಮ ನಡುವೆ ಚಲಿಸುತ್ತದೆ, ಈ ರೀತಿಯಾಗಿ ಸಾಗುವಾಗ ಸೂರ್ಯನ ಅಡ್ಡಲಾಗಿ ತೆವಳುವ ಒಂದು ಸಣ್ಣ ಕಪ್ಪು ಚುಕ್ಕೆಯಂತೆ ಕಂಡುಬರುತ್ತದೆ, ಹಾಗು ಸ್ವಲ್ಪ ಪ್ರಮಾಣದಲ್ಲಿ ಸೂರ್ಯನ ಕಿರಣಗಳನ್ನು ಶುಕ್ರ ಅಥವಾ ಬುಧ ತಡೆಯುತ್ತವೆ . ಕೆಪ್ಲರ್, ಒಂದು ಗ್ರಹವು ನಕ್ಷತ್ರದ ಮುಂದೆ ದಾಟಿದಾಗ ನಕ್ಷತ್ರದ ಹೊಳಪಿನ ಸಣ್ಣ ಏರಿಳಿತಗಳನ್ನು ಹುಡುಕುವುದರಿಂದ ಗ್ರಹಗಳನ್ನು ಕಂಡುಹಿಡಿಯುತ್ತದೆ.
ಒಮ್ಮೆ ಪತ್ತೆ ಮಾಡಿದ ಗ್ರಹದ ಕಕ್ಷೆಯ ಗಾತ್ರವನ್ನು ಅವಧಿಯ ( ಇದು ನಕ್ಷತ್ರವನ್ನು ಸುತ್ತುವಲ್ಲಿ ಗ್ರಹ ತೆಗೆದುಕೊಂಡ ಸಮಯಾವಧಿ ) ಆಧಾರದ ಮೇಲೆ ಕಂಡುಹಿಡಿಯಬಹುದು. ಕೆಪ್ಲರನ ಗ್ರಹಗಳ ಚಲನೆಯ ಮೂರನೇ ನಿಯಮ ಬಳಸಿಕೊಂಡು ನಕ್ಷತ್ರ ದ್ರವ್ಯರಾಶಿಯ ಲೆಕ್ಕಾಚಾರ ಮಾಡಬಹುದು . ಗ್ರಹದ ಗಾತ್ರವನ್ನು ( ನಕ್ಷತ್ರದ ಹೊಳಪು ಎಷ್ಟು ಕಡಿಮೆಯಾಗುತ್ತದೆ) ಸಾಗಣೆ ಕಂಡುಕೊಳ್ಳಬಹುದು. ಕಕ್ಷೀಯ ಗಾತ್ರ ಮತ್ತು ನಕ್ಷತ್ರದ, ಗ್ರಹದ ತಾಪಮಾನ ಕಂಡುಹಿಡಿಯಬಹುದು. ಹೀಗೆ ಗ್ರಹವು ವಾಸಯೋಗ್ಯವೋ, ಇಲ್ಲವೋ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬಹುದು.
ಧ್ಯೇಯಗಳು
ಬದಲಾಯಿಸಿಕೆಪ್ಲರ್ ಉಡಾವಣೆಯ ವೈಜ್ಞಾನಿಕ ಉದ್ದೇಶ, ಗ್ರಹಗಳ ವ್ಯವಸ್ಥೆ ಮತ್ತು ರಚನೆ ಹಾಗು ವೈವಿಧ್ಯತೆ ಕಂಡುಹಿಡಿಯುವುದಾಗಿದೆ. ಇದರಸಲುವಾಗಿ, ನಕ್ಷತ್ರಗಳ ಮಾದರಿಯನ್ನು ಸಮೀಕ್ಷೆ ಮಾಡಲಾಗುತ್ತದೆ :
- ವಿವಿಧ ನಕ್ಷತ್ರಗಳ ವಾಸಯೋಗ್ಯ ವಲಯದಲ್ಲಿರುವ ಭೂಮಂಡಲದ ಗಾತ್ರದ ಮತ್ತು ದೊಡ್ಡ ಗ್ರಹಗಳ ಶೇಕಡಾವಾರು ನಿರ್ಧರಿಸಲು
- ಈ ಗ್ರಹಗಳ ಕಕ್ಷೆಗಳ ಗಾತ್ರಗಳು ಮತ್ತು ಆಕಾರಗಳನ್ನು ಪತ್ತೆಮಾಡಲು
- ಬಹು ತಾರಾ ವ್ಯವಸ್ಥೆಗಳಲ್ಲಿ ಅಲ್ಲಿ ಎಷ್ಟು ಗ್ರಹಗಳು ಇವೆ ಎಂದು ಅಂದಾಜು ಮಾಡಲು
- ಗ್ರಹದ ಕಕ್ಷೆ ಸೇರಿದಂತೆ, ಗ್ರಹದ ಗಾತ್ರ, ಸಾಂದ್ರತೆಯ ವಿಷಯಗಳನ್ನು, ದೈತ್ಯ ಗ್ರಹಗಳ ಮಾಹಿತಿ ಸಂಪಾದಿಸುವುದು.
- ಇತರ ತಂತ್ರಗಳನ್ನು ಬಳಸಿ ಪತ್ತೆಮಾಡಿರುವ ಗ್ರಹಗಳ ವ್ಯವಸ್ಥೆಯ ಹೆಚ್ಚುವರಿ ಸದಸ್ಯರನ್ನು ಗುರುತಿಸುವುದು.
- ಗ್ರಹಗಳ ವ್ಯವಸ್ಥೆಗಳ ಆಶ್ರಯ ನಕ್ಷತ್ರಗಳ ಗುಣವಿಶೇಷಗಳನ್ನು ನಿರ್ಧರಿಸಲು .
ಕೆಪ್ಲೆರ್ ವೀಕ್ಷಣಾಕ್ಷೇತ್ರ
ಬದಲಾಯಿಸಿಸಾಗಣೆಯು ಕೇವಲ ಒಂದು ದಿನದ ಒಂದು ಘಳಿಗೆಯಲ್ಲಿ ಕಂಡುಬರುವುದರಿಂದ, ಎಲ್ಲಾ ನಕ್ಷತ್ರಗಳನ್ನು ಎಲ್ಲಾ ಸಮಯದಲ್ಲೂ ನಿರಂತರವಾಗಿ ವೀಕ್ಷಿಸಬೇಕು. ಅಂದರೆ, ನಿರಂತರವಾಗಿ ನಕ್ಷತ್ರಗಳ ಪ್ರಖರತೆ ಕುಂದುವುದೇ ಎಂದು, ಪ್ರತೀ ಕೆಲವು ಗಂಟೆಗಳಿಗೊಮ್ಮೆ ಅಳೆದುಕೊಳ್ಳಬೇಕಾಗುತ್ತದೆ. ನಿರಂತರವಾಗಿ ನಕ್ಷತ್ರಗಳನ್ನು ವೀಕ್ಷಿಸಲು ಈ ಕೆಳಗಿನ ಅಂಶಗಳು ಪರಿಗಣಿಸಲಾಗುತ್ತದೆ
- ನೋಟದ ವೀಕ್ಷಣಾಕ್ಷೇತ್ರದಲ್ಲಿ ಯಾವುದೇ ಸಮಯದಲ್ಲೂ, ತಡೆ ಆಗದಂತೆ ಮಾಡಬೇಕು. ಆದ್ದರಿಂದ, ಸೂರ್ಯನ ಅಡಚಣೆ ತಪ್ಪಿಸಲು, ಸಮತಳದಿಂದ ಹೊರಗೆ ಇರಬೇಕು.
- ಇದರೊಂದಿಗೆ, ವೀಕ್ಷಣಾಕ್ಷೇತ್ರದಲ್ಲಿ ಸಾಧ್ಯವಾದಷ್ಟು ನಕ್ಷತ್ರಗಳನ್ನು ಅವಶ್ಯಕವಾಗಿ ಹೊಂದಿರುವಂತ ಪಥದಲ್ಲಿ ಉಪಗ್ರಹ ಇರಬೇಕು.
- ಕೆಪ್ಲರ್ ಮಿಷನ್ :
೧.ದೃಢಪಡಿಸಿರುವ ಎಕ್ಸೊಪ್ಯಾನೆಟ್ ಗಳು : ೧೦೩೧ ೨.ಅಭ್ಯರ್ಥಿ ಎಕ್ಸೊಪ್ಯಾನೆಟ್ ಗಳು : ೪೬೯೬ ೩.ವಾಸಯೋಗ್ಯ ವಲಯದಲ್ಲಿ ಭೂಮಿಯ ಗಾತ್ರಕ್ಕಿಂತ ಎರಡುಪತಟ್ಟು ಕಡಿಮೆಯಿರುವ, ದೃಢಪಡಿಸಿರುವ ಎಕ್ಸೊಪ್ಯಾನೆಟ್ ಗಳು :೧೨
- ಕೆ ೨ ಮಿಷನ್ :
ದೃಢಪಡಿಸಿರುವ ಎಕ್ಸೊಪ್ಯಾನೆಟ್ ಗಳು : ೨೫
ಫೆಬ್ರವರಿ 2014 ರಲ್ಲಿ, ಖಗೋಳಶಾಸ್ತ್ರಜ್ಞರು ಬಹು ಗ್ರಹದ ವ್ಯವಸ್ಥೆಗಳಲ್ಲಿ, ಗ್ರಹಗಳನ್ನು ಪತ್ತೆಮಾಡುವ ಹೊಸ ತಂತ್ರ "ಬಹುಸಂಖ್ಯೆಯ ಪರಿಶೀಲನೆ" ಕಂಡುಹಿಡಿದರು. ಅನೇಕ ಗ್ರಹಗಳುಳ್ಳ ನಕ್ಷತ್ರವು, ಈ ಸಿದ್ಧಾಂತದ ಪ್ರಕಾರ, ಬೃಹತ್ ಗುರುತ್ವಾಕರ್ಷಣೆಯ ಕಾರಣದಿಂದ ಹೆಚ್ಚು ಅಸ್ಥಿರ ವ್ಯವಸ್ಥೆ ಹೊಂದಿರುತ್ತದೆ. ಒಂದು ನಿಕಟ ವ್ಯವಸ್ಥೆಯಲ್ಲಿರುವ ನಕ್ಷತ್ರವು, ಪ್ರತಿ ನಕ್ಷತ್ರದ ದ್ರವ್ಯರಾಶಿ ಹಾಗು ಗುರುತ್ವಾಕರ್ಷಣೆಯ ಫಲವಾಗಿ, ಹೆಚ್ಚು ಅಸ್ಥಿರ ವ್ಯವಸ್ಥೆ ಹೊಂದಿರುತ್ತದೆ. ಈ ತಂತ್ರದ ಮೂಲಕ, ತಂಡವು ೭೧೫ ಗ್ರಹಗಳನ್ನು ದೃಢಪಡಿಸಿದರು. ಇದು, ಏಕೈಕ ಘೋಷಣೆಯಲ್ಲಿ ಬಿಡುಗಡೆಯಾದ, ಅತಿ ಹೆಚ್ಚು ಗ್ರಹಗಳು. ಕೆಪ್ಲೆರ್ ಮಿಷನ್ ಸಮಯದಲ್ಲಿ, ಉಪಗ್ರಹವು ೧೫೦೦೦೦ಕ್ಕೂ ಹೆಚ್ಚು ನಕ್ಷತ್ರಗಳನ್ನು ನಿರಂತರವಾಗಿ ವೀಕ್ಷಿಸಿ, ಅವುಗಳಲ್ಲಿ ಹಲವು ಸಾವಿರ ಗ್ರಹದ ಅಭ್ಯರ್ಥಿಗಳನ್ನು ಕಂಡುಹಿಡಿಯಿತು.
ಉಪಯೋಗಗಳು ಹಾಗು ವಿಶೇಷತೆಗಳು
ಬದಲಾಯಿಸಿಕೆಪ್ಲರ್ ದೂರದರ್ಶಕವು ಒಂದು ನಕ್ಷತ್ರದ ವಾಸಯೋಗ್ಯ ಪ್ರದೇಶದಲ್ಲಿ ಭೂಮಿಯ ಸುಮಾರು ಗಾತ್ರದ ಒಂದು ಗ್ರಹವನ್ನು ಹುಡುಕಿದ ಮೊದಲ ದೂರದರ್ಶಕವಾಗಿತ್ತು . ಕೆಪ್ಲರ್ ೬೯ಸಿ ಈ ಗ್ರಹದ ಹೆಸರು. ಇದು, ೨೭೦೦ ಜ್ಯೋತಿವರ್ಷ ದೂರವಿದ್ದು, ಭೂಮಿಯ ವ್ಯಾಸಕ್ಕಿಂತ ೧.೫ ಪಟ್ಟು ದೊಡ್ಡ ವ್ಯಾಸ ಹೊಂದಿದೆ.ಭೂಮಿಗಿಂತ ಚಿಕ್ಕ ಗ್ರಹಗಳನ್ನು ಹುಡುಕುವ ಸಾಮರ್ಥ್ಯವನ್ನು ಹೊಂದಿರುವ ದೂರದರ್ಶಕ, ಕೆಪ್ಲರ್ ೩೭ಬಿ ಎಂಬ ಮಂಗಳ ಗ್ರಹದ ಗಾತ್ರ ಹೋಲುವ ಗ್ರಹವನ್ನೂ ಪತ್ತೆ ಮಾಡಿದೆ. ನಮ್ಮ ಸೌರವ್ಯೂಹದ ಗ್ರಹದ ಹಾಗೆ, ಕಲ್ಲಿನಿಂದ ಕೂಡಿದ್ದರೂ ಗಾಳಿ ಹೊಂದಿಲ್ಲ.ದೂರದರ್ಶಕ ಪತ್ತೆಮಾಡಿದ ಇತರೆ ವಿಲಕ್ಷಣ ಪ್ರಪಂಚಗಳ ಸಾಲಿನಲ್ಲಿ ಕೆಪ್ಲರ್ ೬೨ಇ ಮತ್ತು ಕೆಪ್ಲರ್ ೬೨ಎಫ಼್ ಕೂಡ ಸೇರುತ್ತದೆ. ೧೨೦೦ ಜ್ಯೋತಿವರ್ಷ ದೂರವಿರುವ ಈ ಗ್ರಹಗಳಲ್ಲಿ ಸಂಪೂರ್ಣ ನೀರೇ ಇದ್ದು, ಲೈರಾ ತಾರ ಸಮೂಹದಲ್ಲಿ ಪತ್ತೆಯಾಗಿದೆ.ಹೀಗೆ ಅನೇಕ ಮಾಹಿತಿಗಳೊಂದಿಗೆ, ಅತಿ ದೂರದ ಪ್ರಪಂಚವನ್ನು ಜನಸಾಮಾನ್ಯರಿಗೆ ಕೆಪ್ಲೆರ್ ಉಪಗ್ರಹವು ಪರಿಚಯಿಸುತ್ತಿದೆ.
ಉಲ್ಲೇಖಗಳು
ಬದಲಾಯಿಸಿ- ↑ http://study.com/academy/lesson/main-sequence-star-definition-facts-quiz.html/ಪ್ರಧಾನ ಸರಣಿ ನಕ್ಷತ್ರ]
- ↑ http://www.ballaerospace.com//ಬಾಲ್ ಏರೋಸ್ಪೇಸ್ ಕಂಪನಿ
- ↑ https://www.nasa.gov/centers/ames/home//ಅಮೆಸ್ ರಿಸರ್ಚ್ ಸೆಂಟರ್
- ↑ http://www.gamma-sci.com/photometry//ಫೊಟೊಮೆಟ್ರಿ
- ↑ http://physics.kenyon.edu/EarlyApparatus/Optics/Photometer/Photometer.html//ಫೊಟೊಮೀಟರ್
- ↑ http://keplerscience.arc.nasa.gov//ಮಿಷನ್ ಗಳು
- ↑ http://planetquest.jpl.nasa.gov/page/methods/ವಿಕ್ಷಣೆಗೆ ಬಳಸುವ ವಿಧಾನಗಳು
- ↑ http://exoplanet.eu/catalog//ಕೆಪ್ಲರ್ ಕಂಡುಹಿಡಿದಿದರುವ ಎಕ್ಸೊಪ್ಲಾನೆಟ್ಗಳ ಪಟ್ಟಿ