ಕೆಂಜಿಗ ಕೆಂಪುಬಣ್ಣದ ಇರುವೆಗಳಿಗಿರುವ ಸಾಮಾನ್ಯ ಬಳಕೆಯ ಹೆಸರು. ದೇಹದ ಬಣ್ಣ ಕೆಂಪುಮಿಶ್ರಿತ ಕಂದು ಇಲ್ಲವೆ ಅಚ್ಚಕೆಂಪಿನಿಂದ ಹಿಡಿದು ನಸುಹಳದಿ ಮಿಶ್ರಿತ ಕೆಂಪಿನವರೆಗೂ ವ್ಯತ್ಯಾಸವಾಗುತ್ತದೆಯಾಗಿ ಈ ಹೆಸರಿದೆ. ಕೆಂಜಿಗಗಳ ದೇಹದಲ್ಲಿ ನಿರ್ದಿಷ್ಟವಾದ ತಲೆ, ಎದೆ ಮತ್ತು ಉದರ ಭಾಗಗಳಿವೆ. ಭಾರತದಲ್ಲಿ ಸುಮಾರು ಐದು ಜಾತಿಯ ಕೆಂಜಿಗಗಳಿವೆ. ಎಲ್ಲವೂ ಫಾರ್ಮಿಸಿಡೀ ಕುಟುಂಬಕ್ಕೆ ಸೇರಿದ್ದು ಈ ಕುಟುಂಬದ ಪ್ರಮುಖ ಲಕ್ಷಣವಾದ ಉನ್ನತಮಟ್ಟದ ಸಂಘ ಜೀವನವನ್ನು ಪ್ರದರ್ಶಿಸುತ್ತವೆ. ಈ ವ್ಯವಸ್ಥೆಯ ವೈಶಿಷ್ಟ್ಯ ಕೆಲಸಗಾರ ಇರುವೆಗಳು.

ಈಕೋಫಿಲಾ ಸ್ಮರಾಗ್ಡಿನಾ

ಭಾರತದಲ್ಲಿ ಕಾಣಬರುವ ಕೆಂಜಿಗಗಳ ಮುಖ್ಯ ಜಾತಿಗಳನ್ನು ಕೆಳಗೆ ವಿವರಿಸಲಾಗಿದೆ.

  1. ಈಕೋಫಿಲ ಸ್ಮರಾಗ್ಡಿನ: ಮರಗಳಲ್ಲಿ ಗೂಡು ಕಟ್ಟಿಕೊಂಡು ವಾಸಿಸುವ ಅತಿ ಸಾಮಾನ್ಯವಾದ ಕೆಂಜಿಗ. ಡಿಂಬಗಳು ಉತ್ಪಾದಿಸುವ ರೇಷ್ಮೆಯಂಥ ವಸ್ತುವನ್ನು ಉಪಯೋಗಿಸಿ ಎಲೆಗಳನ್ನು ಅಂಟಿಸಿ ಕೆಲಸಗಾರ ಕೆಂಜಿಗಗಳು ಗೂಡನ್ನು ನಿರ್ಮಿಸುತ್ತವೆ. ಇವುಗಳ ಪ್ರಧಾನ ಆಹಾರ ಹುರುಪೆ ಕೀಟಗಳು (ಸ್ಕೇಲ್ ಇನ್‍ಸೆಕ್ಟ್ಸ್) ಉತ್ಪಾದಿಸುವ ಕೆಲವು ಬಗೆಯ ವಸ್ತುಗಳು. ಕೆಂಜಿಗದ ಕಡಿತ ಬಹಳ ಉರಿತವನ್ನೂ ನೋವನ್ನೂ ಉಂಟು ಮಾಡುತ್ತದೆ. ತೋಟಗಳಲ್ಲಿನ ಕೀಟಪೀಡೆಗಳನ್ನು ನಾಶಪಡಿಸುವುದರಿಂದ ಈ ಕೆಂಜಿಗ ಮಾನವನಿಗೆ ಸಹಕಾರಿಯೆನಿಸಿದೆ.
  2. ಕ್ರೆಮಟೋಗ್ಯಾಸ್ಟರ್ ಡಾರ್ನಿ: ಇದೂ ಮರಗಳಲ್ಲಿ ವಾಸಿಸುವ ಒಂದು ಕೆಂಜಿಗ. ಸಾಮಾನ್ಯವಾಗಿ 70,000-1,00,000 ಕೆಂಜಿಗಗಳು ಒಟ್ಟುಗೂಡಿ ಗುಂಡನೆಯ ಗೂಡನ್ನು ಕಟ್ಟಿಕೊಂಡು ವಾಸಿಸುತ್ತವೆ.
  3. ಮಾನೋಮೋರಿಯಂ ಗ್ಲೈಸೆಫಿಲಂ: ಮರಗಳ ಬಳಿ ಗೂಡು ಕಟ್ಟಿ ವಾಸಿಸುವ ಕೆಂಜಿಗ, ಕೆಲವು ಬಾರಿ ಮಾನವವಸತಿಗೂ ಬರುವುದುಂಟು. ಹುರುಪೆ ಕೀಟಗಳು ಉತ್ಪಾದಿಸುವ ಜೇನಿನಂಥ ರಸವನ್ನು ಕುಡಿದು ಬದುಕುತ್ತವೆ. ಇದೇ ಜಾತಿಯ ಮಾ. ಗ್ರಾಸಿಲಿಮಂ ಮತ್ತು ಮಾ. ಡಿಸ್ಟ್ರಕ್ಟರ್ ಎಂಬ ಎರಡು ಪ್ರಭೇದಗಳು ಮನೆಗಳಲ್ಲಿ ವಾಸಿಸುತ್ತವೆ. ಇವನ್ನು ಸಾಮಾನ್ಯವಾಗಿ ಕೆಂಪಿರುವೆಗಳೆನ್ನುತ್ತಾರೆ. ಗೋಡೆ, ನೆಲ ಮುಂತಾದವುಗಳನ್ನು ಕೊರೆದು ಬಿಲ ಮಾಡಿಕೊಂಡು ಇವು ವಾಸಿಸುತ್ತವೆ.
  4. ಇರಿಡೊಮರ್ಮಿಕ್ಸ್ ಆನ್ ಸೆಪ್ಸ್ : ನೆಲದಲ್ಲಿ ಬಿಲ ತೋಡಿ ವಾಸಿಸುವ ಕೆಂಜಿಗ. ಏಫಿಡ್ ಕೀಟಗಳು ವಾಸಿಸುವ ಮರಗಳ ಸಮೀಪದಲ್ಲಿ ಗೂಡು ಕಟ್ಟಿ ವಾಸಿಸುತ್ತ ಆ ಕೀಟಗಳು ಉತ್ಪಾದಿಸುವ ರಸವನ್ನೇ ಕುಡಿದು ಬದುಕುತ್ತದೆ.
  5. ಫೈಡೋಲ್ ಇಂಡಿಕ: ಇದೂ ನೆಲದಲ್ಲಿ ಬಿಲ ತೋಡಿ ವಾಸಿಸುವ ಕೆಂಜಿಗ. ಗೂಡನ್ನು ಎಲೆಗಳಿಂದ ಮರೆ ಮಾಡುತ್ತದೆ. ಸತ್ತ ಕೀಟಗಳನ್ನು ಗೂಡಿಗೆ ಹೊತ್ತು ತಂದು ತಿಂದು ಬದುಕುತ್ತವೆ.
  6. ಸೊಲೆನಾಪ್ಸಿಸ್ ಜೆಮಿನೇಟ: ಇದೊಂದು ಸಣ್ಣ ಗಾತ್ರದ ಕೆಂಜಿಗ. ಮರಳು ನೆಲದಲ್ಲಿ ಸಣ್ಣ ಬಿಲಗಳನ್ನು ನಿರ್ಮಿಸಿಕೊಂಡು ವಾಸಿಸುತ್ತದೆ. ಬಿಲಗಳ ಸುತ್ತ ಸಣ್ಣ ಮರಳಿನ ಚಿಕ್ಕ ಚಿಕ್ಕ ದಿಣ್ಣೆಗಳಿರುವುದು ಇದರ ವಿಶೇಷ ಗುಣ. ಕಿತ್ತಳೆ, ನಿಂಬೆ ಜಾತಿಯ ಗಿಡಗಳು, ಹತ್ತಿ ಮತ್ತು ತರಕಾರಿ ಗಿಡಗಳಿಗೆ ಉಪದ್ರವಕಾರಿ. ಆದರೂ ಬೇರೆ ಕೀಟಗಳನ್ನು ತಿನ್ನುವುದರಿಂದ ಇದನ್ನು ಕೀಟ ಪೀಡೆಗಳ (ಉದಾ: ಸಂಗ್ರಹಿಸಲಾದ ಅರಗನ್ನು ತಿನ್ನುವ ಕೀಟಪೀಡೆಗಳು) ನಿವಾರಣೆಗೆ ಬಳಸುವುದುಂಟು.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕೆಂಜಿಗ&oldid=891115" ಇಂದ ಪಡೆಯಲ್ಪಟ್ಟಿದೆ