ಆರ್ಥಿಕವಾಗಿ ದುರ್ಬಲರಾದವರು ಸಮಾನತೆಯ ತಳಹದಿಯ ಮೇಲೆ ಸಂಘಟಿತರಾಗಿ, ಪರಸ್ಪರ ಸಹಾಯದಿಂದ ತಮ್ಮ ಮೇಲ್ಮೆಯನ್ನು ಸಾಧಿಸಿಕೊಳ್ಳಬೇಕೆಂಬ ಉದ್ದೇಶದಿಂದ ಆರಂಭಿಸಲಾದ ಸಹಕಾರ ಚಳುವಳಿ ಕೃಷಿಕ್ಷೇತ್ರವನ್ನೂ ವ್ಯಾಪಿಸಿದೆ. ಕೃಷಿ ಉತ್ಪಾದನೆಯ ಘಟಕಗಳು ಸಾಮಾನ್ಯವಾಗಿ ಚಿಕ್ಕವು. ಕೃಷಿ ಕಾರ್ಯನಿರತರಾಗಿರುವವರು ಆರ್ಥಿಕವಾಗಿಯೂ, ಸಾಮಾಜಿಕವಾಗಿಯೂ ಅಷ್ಟೇನೂ ಮುಂದುವರಿದವರಲ್ಲ. ದೇಶದಲ್ಲಿ ವ್ಯಾಪಕವಾಗಿ ಹರಡಿರುವ ಈ ಮಂದಿ ಕೈಗಾರಿಕಾ ನಿರತರಂತೆ ಸಂಘಟಿತರಾಗಿಲ್ಲ. ವ್ಯಕ್ತಿಶಃ ಇವರು ಸಬಲರಲ್ಲ. ಉತ್ಪಾದನೆಗೆ ಅಗತ್ಯವಾದ ಅಂಗಗಳನ್ನು ಹೊಂದಿಸುವುದರಲ್ಲೂ ಉತ್ಪಾದನೆಯಾದ ಪದಾರ್ಥವನ್ನು ಮಾರಾಟ ಮಾಡುವುದರಲ್ಲೂ ಇವರು ಅನೇಕರನ್ನು. ಲಾಭಾಕಾಂಕ್ಷೆಯಿಂದ ಕೂಡಿದವರು ಕೃಷಿಕರನ್ನು ಸುಲಭವಾಗಿ ವಂಚಿಸಬಹುದು. ಅವರ ದೌರ್ಬಲ್ಯದ ದುರುಪಯೋಗ ಪಡೆದುಕೊಂಡು ಅವರನ್ನು ಶೋಷಿಸಬಹುದು. ಇವನ್ನೆಲ್ಲ ತಪ್ಪಿಸಲು ಇರುವ ಉಪಾಯವೊಂದೇ: ಅವರ ಸಂಘಟನೆ, ಕೈಗಾರಿಕೆ, ವ್ಯಾಪಾರ ಮುಂತಾದ ಕ್ಷೇತ್ರಗಳಿಗೆ ಅನ್ವಯಿಸಲಾಗಿರುವ ಸಹಕಾರ ತತ್ತ್ವವನ್ನು ಕೃಷಿಕ್ಷೇತ್ರಕ್ಕೂ ಸುಲಭವಾಗಿ ಅನ್ವಯಿಸಬಹುದಾಗಿದೆ. ವಾಸ್ತವವಾಗಿ ಕೃಷಿಕ್ಷೇತ್ರದಲ್ಲೇ ಇದು ಹೆಚ್ಚಿನ ಯಶಸ್ಸು ಗಳಿಸಿದೆ. ಕೃಷಿಕನಿಗೆ ಉತ್ಪಾದನೆಯ ಸಾಲ ನೀಡಿಕೆ, ಬೀಜ, ಗೊಬ್ಬರ ಉಪಕರಣ ಮೊದಲಾದವುಗಳ ಸರಬರಾಯಿ, ಕೃಷಿ ಉತ್ಪನ್ನದ ಸಂಗ್ರಹ, ಪರಿಷ್ಕರಣ ಮತ್ತು ಮಾರಾಟ, ಕೃಷಿಕನ ಋಣಪರಿಹಾರ ಮತ್ತು ಜಮೀನು ಅಭಿವೃದ್ಧಿಗಾಗಿ ನೆರವು, ಸಹಕಾರಿ ವ್ಯವಸಾಯ-ಈ ರೀತಿಯಾಗಿ ಸಹಕಾರವನ್ನು ಕೃಷಿಯ ಎಲ್ಲ ವಿಭಾಗಗಳಿಗೂ ಅನ್ವಯಿಸಬಹುದು. ಸಹಕಾರದಿಂದ ರೈತ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ಳದೆ ಇತರರೊಂದಿಗೆ ಸರಿಸಮಾನವಾಗಿ ತನ್ನ ಹಿತಗಳನ್ನು ರಕ್ಷಿಸಿಕೊಳ್ಳಬಹುದು. ಆ ವ್ಯವಸ್ಥೆಯ ಆಡಳಿತದಲ್ಲಿ ಪಾಲ್ಗೊಳ್ಳಬಹುದು ಮತ್ತು ಫಲಗಳನ್ನು ಅನುಭವಿಸಬಹುದು. ಸಹಕಾರ ಸಂಘಗಳ ಬಂಡವಾಳ ಮುಖ್ಯವಾಗಿ ಅವುಗಳ ಸದಸ್ಯರಿಂದಲೇ ಬರುತ್ತದೆ.[]

ಕೃಷಿಕರ ಸಹಕಾರ ಸಂಘಗಳು

ಬದಲಾಯಿಸಿ

ಕೃಷಿಕರ ಸಹಕಾರ ಸಂಘಗಳು 19ನೆಯ ಶತಮಾನದ ದ್ವಿತೀಯಾರ್ಧದಲ್ಲಿ ಯೂರೋಪ್ ಅಮೆರಿಕಗಳಲ್ಲಿ ವ್ಯಾಪಕವಾಗಿ ಸ್ಥಾಪಿತವಾದುವು. ಅವುಗಳ ಕಲಾಪಗಳು ಎಲ್ಲ ಕಡೆಯೂ ಒಂದೇ ರೀತಿಯಾಗಿರಲಿಲ್ಲ. ಆದರೆ ರೈತರಿಗೆ ಅಗತ್ಯವಾದ ಸೌಲಭ್ಯಗಳನ್ನು ನೀಡಲು ಪ್ರಚಲಿತವಾಗಿದ್ದ ಸಾಧನಗಳು ಎಲ್ಲೆಲ್ಲಿ ಅಸಮರ್ಪಕವಾಗಿದ್ದುವೋ ಆ ಕ್ಷೇತ್ರಗಳಲ್ಲೆಲ್ಲ ಅವನ್ನು ಒದಗಿಸುವುದು ಇವುಗಳ ಉದ್ದೇಶವಾಗಿತ್ತು. ಉದ್ದರಿ, ವಿಮೆ, ಮಾರಾಟ, ಕೃಷಿಗೆ ಅಗತ್ಯವಾದ ವಸ್ತುಗಳ ಖರೀದಿ-ಇವು ಸಹಕಾರ ಸಂಘಗಳು ನೀಡತೊಡಗಿದ ಸೇವೆಗಳು. ಮೊತ್ತಮೊದಲಿಗೆ ಸಂಘಗಳು ಸ್ಥಳೀಯವಾಗಿದ್ದುವು. ಆರ್ಥಿಕ ವ್ಯವಸ್ಥೆ ಬೆಳೆದಂತೆ ಕೃಷಿಕರ ಅಗತ್ಯಗಳು ಹೆಚ್ಚು ಸಂಕೀರ್ಣವಾಗತೊಡಗಿದಾಗ ಸಹಕಾರವೂ ಬೆಳೆಯಿತು. ಅನೇಕ ಸ್ಥಳೀಯ ಸಂಘಗಳು ಒಕ್ಕೂಟಗಳನ್ನು ರಚಿಸಿಕೊಂಡು ತಮ್ಮ ಸೇವೆಯನ್ನು ವಿಸ್ತರಿಸಿದುವಲ್ಲದೆ ಚೌಕಾಸಿ ಶಕ್ತಿಯನ್ನೂ ಹೆಚ್ಚಿಸಿಕೊಂಡುವು. 20ನೆಯ ಶತಮಾನದ ಪ್ರಥಮಾರ್ಧದಲ್ಲಿ ಇವು ತಮ್ಮ ಖರೀದಿ ಕಾರ್ಯವನ್ನು ವ್ಯಾಪಕಗೊಳಿಸಿದುವಲ್ಲದೆ, ಕೃಷಿ ಉತ್ಪನ್ನಗಳನ್ನು ಸಂವೇಷ್ಟಿಸುವ ಮತ್ತು ಪರಿಷ್ಕರಿಸುವ, ಕೃಷಿಕರಿಗೆ ಬೇಕಾದ ವಸ್ತುಗಳನ್ನು ತಯಾರಿಸುವ ಕಾರ್ಯಗಳಲ್ಲೂ ನಿರತವಾದುವು. ಎರಡನೆಯ ಮಹಾಯುದ್ಧಾನಂತರ ಕಾಲದ ತಾಂತ್ರಿಕ ಮತ್ತು ಕೈಗಾರಿಕಾ ವಿಸ್ತರಣದೊಂದಿಗೆ ಸಹಕಾರ ಸಂಘಗಳ ಕ್ಷೇತ್ರವೂ ವಿಸ್ತಾರವಾಯಿತು.


ಇತಿಹಾಸ

ಬದಲಾಯಿಸಿ

ಭಾರತದಲ್ಲಿ 19ನೆಯ ಶತಮಾನದ ಉತ್ತರಾರ್ಧದಲ್ಲಿ ಹಳ್ಳಿಗಳ ಪರಿಸ್ಥಿತಿ ಬಹು ಶೋಚನೀಯವಾಗಿತ್ತು. ಗ್ರಾಮಗಳಲ್ಲಿ ಬಡತನ ಹೆಚ್ಚಾಗಿ ಸಾಲದ ಹೊರೆ ವ್ಯಾಪಕವಾಗತೊಡಗಿತ್ತು. ಸಾಗುವಳಿಯ ಭೂಮಿ ಧನಿಕರ ಕೈವಶವಾಗಹತ್ತಿತು. ಇಂಥ ಪರಿಸ್ಥಿತಿಯನ್ನು ಹೋಗಲಾಡಿಸುವ ಉದ್ದೇಶದಿಂದ ಆಗಿನ ಸರ್ಕಾರ 1904ರಲ್ಲಿ ಸಹಕಾರಿ ಪತ್ತಿನ ಸಂಘಗಳ ಕಾಯಿದೆಯನ್ನು ಜಾರಿಗೆ ತಂದು ರೈತರಿಗೆ ಅಲ್ಪಾವಧಿ ಮತ್ತು ಮಧ್ಯಮಾವಧಿ ಸಾಲವನ್ನು ಪೂರೈಸುವ ವ್ಯವಸ್ಥೆ ಮಾಡಿತು. ಈ ಕಾಯಿದೆಯಿಂದ ದೇಶದಲ್ಲಿ ಕೃಷಿ ಸಹಕಾರ ಅಧಿಕೃತವಾಗಿ ಪಾದಾರ್ಪಣೆ ಮಾಡಿದಂತಾಯಿತು. ಮುಂದೆ 1912ರ ಕಾಯಿದೆಯನ್ವಯ ವಿವಿಧೋದ್ದೇಶ ಸಂಘಗಳು ಸ್ಥಾಪನೆಯಾದುವು. 1929-30ರವರೆಗೆ ನಿರೀಕ್ಷಣೆಗಿಂತ ಹೆಚ್ಚಿನ ಸಂಘಗಳು ಸ್ಥಾಪನೆಯಾದರೂ ಸಹಕಾರಿ ಆಂದೋಳನ ಆರ್ಥಿಕ ಮುಗ್ಗಟ್ಟಿನಿಂದ ಸ್ವಲ್ಪಮಟ್ಟಿಗೆ ಕುಂಠಿತಗೊಂಡರೂ ಎರಡನೆಯ ಮಹಾಯುದ್ಧದ ಸಮಯದಲ್ಲಿ ಮತ್ತೆ ಚೇತರಿಸಿಕೊಂಡಿತು.ಅಂದು ಪತ್ತು ಪೂರೈಕೆಗಾಗಿ ಜನ್ಮತಾಳಿದ ಸಹಕಾರ ಚಳವಳಿ ವಿವಿಧ ಮುಖಗಳಲ್ಲಿ ಬೆಳೆದು ಇಂದು ಕೃಷಿಕರ ಸರ್ವತೋಮುಖವಾದ ಚಟುವಟಿಕೆಗಳಲ್ಲಿ ವೃದ್ಧಿಯಾಗಿದೆ. ಸಣ್ಣಪುಟ್ಟ ರೈತರು ದೊಡ್ಡ ರೈತರಷ್ಟು ಅನುಕೂಲಸ್ಥರಲ್ಲ. ಅವರು ತಮ್ಮ ಕಸುಬನ್ನು ಅಭಿವೃದ್ಧಿಪಡಿಸಿಕೊಂಡು ಸಾಕಷ್ಟು ಆದಾಯ ಪಡೆದು ತಮ್ಮ ಜೀವನಮಟ್ಟವನ್ನು ಹೆಚ್ಚಿಸಿಕೊಳ್ಳಲು ಶಕ್ತರಲ್ಲ. ಒಂದೇ ಹಳ್ಳಿಯ ಅಥವಾ ಅಕ್ಕಪಕ್ಕದ ಕೆಲವು ಗ್ರಾಮಗಳ ಇಂಥ ಸಣ್ಣಪುಟ್ಟ ರೈತರು ತಮ್ಮ ಸ್ವಸಹಾಯದಿಂದ ತಮ್ಮ ಆರ್ಥಿಕ ಸ್ಥಿತಿಯನ್ನು ಅಭಿವೃದ್ಧಿಪಡಿಸಿಕೊಳ್ಳಲು ಕೃಷಿ ಸಹಕಾರ ಸಂಘಗಳನ್ನು ರಚಿಸಿಕೊಳ್ಳಬಹುದು. ಇಂಥ ಸಹಕಾರ ಸಂಘಗಳು ಬೇಸಾಯ ಸಹಕಾರ ಅಂದರೆ ಕೃಷಿ ಉತ್ಪಾದನೆಯಿಂದ ಹಿಡಿದು ಉತ್ಪನ್ನವನ್ನು ಮಾರಾಟ ಮಾಡುವವರೆಗಿನ ಎಲ್ಲ ಹಂತಗಳಿಗೂ ವ್ಯಾಪಿಸಿವೆ. ಸಹಕಾರ ವ್ಯವಸ್ಥೆಗೊಳಪಟ್ಟ ದುರ್ಬಲ ರೈತರಿಗೆ ಹಣದ ಜೊತೆಗೆ ಅವರಿಗೆ ಬೇಕಾದ ಉತ್ಪಾದನ ಸಾಮಗ್ರಿಗಳನ್ನೊದಗಿಸುವುದು, ಅವರಿಗೆ ಬೇಕಾದ ತಾಂತ್ರಿಕ ಜ್ಞಾನವನ್ನು ದೊರಕಿಸಲು ಸಹಾಯ ಮಾಡುವುದು, ಬೆಳೆದ ಫಸಲನ್ನು ಅನುಕೂಲ ಧಾರಣೆಗೆ ಮಾರಾಟ ಮಾಡಲು ಸಹಾಯ ಮಾಡುವುದು-ಇವೇ ಮುಂತಾದ ಚಟುವಟಿಕೆಗಳಿಂದ ರೈತರ ಉದ್ಯೋಗ ಲಾಭದಾಯಕವಾಗಲು ಸಹಾಯ ಮಾಡಿದೆ. ಹಾಲು ಸಂಗ್ರಹಣೆ ಮತ್ತು ಮಾರಾಟ ಸಹಕಾರ ಸಂಘ, ಮೊಟ್ಟೆ ಮಾರಾಟ ಸಹಕಾರ ಸಂಘ-ಇವು ಈ ದಿಸೆಯಲ್ಲಿ ತಮ್ಮ ಸದಸ್ಯರಿಗೆ ಉತ್ಪಾದನಾಕಾರ್ಯಕ್ಕೆ ಅವಶ್ಯವಾದ ಸಾಮಗ್ರಿಗಳನ್ನು ನ್ಯಾಯಬೆಲೆಗೆ ಒದಗಿಸಿ, ಅವರ ಉತ್ಪಾದನೆಯನ್ನು ಸಂಗ್ರಹಿಸಿ ಮಾರುಕಟ್ಟೆಯಲ್ಲಿ ವಿತರಣೆಗೆ ತಕ್ಕ ಏರ್ಪಾಡು ಮಾಡಿ ಸದಸ್ಯರ ಆರ್ಥಿಕಸ್ಥಿತಿ ಉತ್ತಮಗೊಳ್ಳಲು ಬಹುಮಟ್ಟಿಗೆ ಸಹಕಾರಿಯಾಗಿವೆ. ಇದೇ ರೀತಿ ಅನೇಕ ಕಡೆ ನೀರಾವರಿ ಸಹಕಾರ ಸಂಘಗಳು, ಭೂಹಿಡುವಳಿಗಳನ್ನು ಒಂದುಗೂಡಿಸುವ ಸಹಕಾರ ಸಂಘಗಳು ಮುಂತಾದವು ತಲೆ ಎತ್ತಿ ಕೃಷಿಕರಿಗೆ ಬಹಳ ನೆರವಾಗುತ್ತಿವೆ.

ಪಂಚವಾರ್ಷಿಕ ಯೋಜನೆಗಳ ಅವಧಿ

ಬದಲಾಯಿಸಿ

ದೇಶದ ಸ್ವಾತಂತ್ರ್ಯದ ಅನಂತರ ಸಹಕಾರಕ್ಕೆ ಹೆಚ್ಚಿನ ಪ್ರಾಶಸ್ತ್ಯ ದೊರೆಯಿತು. ಪಂಚವಾರ್ಷಿಕ ಯೋಜನೆಗಳ ಅವಧಿಯಲ್ಲಿ ಸಹಕಾರ ಸಂಘಗಳು ಸರ್ಕಾರದ ಅಚ್ಚುಮೆಚ್ಚಿನ ರಂಗವಾಗಿ ವಿವಿಧ ರೀತಿಯಿಂದ ಕೃಷಿಯ ಉನ್ನತಿಗೆ ಕಾರಣವಾಗಿವೆ. ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳು ಸೇವಾ ಸಹಕಾರಿ ಸಂಘಗಳಾಗಿ ರೈತರಿಗೆ ಬೆಳೆಸಾಲ, ರಾಸಾಯನಿಕ ಗೊಬ್ಬರ, ಬೆಳೆಗಳ ರೋಗಾದಿಗಳಿಗೆ ಔಷಧ. ಸಲಕರಣೆಗಳು, ಉತ್ತಮ ಬೀಜ ಮುಂತಾದವನ್ನು ಪೂರೈಸಿ ಕೃಷಿಯಲ್ಲಿ ಕ್ರಾಂತಿಯನ್ನು ರೂಪಿಸುವುದರಲ್ಲಿ ಮುಖ್ಯಪಾತ್ರ ವಹಿಸಿವೆ. 1967-68ರಲ್ಲಿ 1,71,800 ಪ್ರಾಥಮಿಕ ಸಂಘಗಳು, 341 ಜಿಲ್ಲಾ ಮಧ್ಯವರ್ತಿ ಬ್ಯಾಂಕುಗಳು ಮತ್ತು 25 ರಾಜ್ಯ ಮಧ್ಯವರ್ತಿ ಬ್ಯಾಂಕುಗಳೇ ಇದಕ್ಕೆ ಕಾರಣವೆನ್ನಬಹುದು. ಈ ದಿಸೆಯಲ್ಲಿ ಇನ್ನೊಂದು ಮಹತ್ಸಾಧನೆಯೆಂದರೆ ಸಂಸ್ಕರಣ ಸಹಕಾರ ಸಂಘಗಳ ಸ್ಥಾಪನೆ. ಇವುಗಳಲ್ಲಿ ಸಕ್ಕರೆ ಉತ್ಪಾದನಾ ಸಹಕಾರ ಸಂಘಗಳು ಮುಖ್ಯವಾದವು. ಇವು ದೇಶದಲ್ಲಿಯ ಒಟ್ಟು ಉತ್ಪಾದನೆಯ 1/3 ರಷ್ಟು ಸಕ್ಕರೆಯನ್ನು ಉತ್ಪಾದಿಸುತ್ತವೆ. ಈಗ ದೇಶದಲ್ಲಿ ಸಹಕಾರ ಸಕ್ಕರೆ ಕಾರ್ಖಾನೆಗಳು, ಹತ್ತಿ ಗಿರಣಿಗಳು, ಬತ್ತ ಸಂಸ್ಕರಿಸುವ ಗಿರಣಿಗಳು, ಎಣ್ಣೆ ಗಿರಣಿಗಳು ಮತ್ತು ಹಣ್ಣು ತರಕಾರಿ ಸಂಸ್ಕರಣ ಸಂಘಗಳು ಸ್ಥಾಪಿತವಾಗಿವೆ. ಇದೇ ರೀತಿ ಹಾಲು, ಮೀನುಗಾರಿಕೆ, ನೀರಾವರಿ ಮುಂತಾದ ಸಂಘಗಳು ಆರಂಭವಾಗಿವೆ.ಕೃಷಿ ಸಹಕಾರದ ಇನ್ನೊಂದು ಮುಖ ಸಹಕಾರಿ ಬೇಸಾಯ. ಸಣ್ಣಪುಟ್ಟ ರೈತರು ತಮ್ಮ ಜಮೀನುಗಳನ್ನು ಒಂದುಗೂಡಿಸಿ ಒಟ್ಟಾಗಿ ಬೇಸಾಯ ಮಾಡಿ, ಬೃಹದ್ಗಾತ್ರ ಬೇಸಾಯದ ಅನುಕೂಲಗಳನ್ನೆಲ್ಲ ಪಡೆಯುವಂತೆ ಮಾಡುವುದು ಸಹಕಾರಿ ಬೇಸಾಯದ ಮೂಲತತ್ವ. ವ್ಯಕ್ತಿಗಳ ಆಸ್ತಿಯ ಹಕ್ಕುಗಳಿಗೆ ಧಕ್ಕೆ ಬಾರದಂತೆ, ಆದರೆ ಸಾಮೂಹಿಕ ಬೇಸಾಯದ ಫಲ ದೊರಕುವಂತೆ ಮಾಡುವುದು ಇದರಿಂದ ಸಾಧ್ಯವಾಗುತ್ತದೆ. ಇದಕ್ಕೆ ಪಂಚವಾರ್ಷಿಕ ಯೋಜನೆಗಳಲ್ಲಿ ಹೆಚ್ಚು ಪ್ರೋತ್ಸಾಹ ನೀಡಲಾಗಿದೆ. ಆಯ್ದ ಕೆಲವು ಪ್ರದೇಶಗಳಲ್ಲಿ ತಲಾ 10 ಸಹಕಾರ ಸಂಘಗಳಿರುವ ಪಥದರ್ಶಕ ಪರಿಯೋಜನೆಗಳನ್ನು (ಪೈಲಟ್ ಪ್ರಾಜೆಕ್ಟ್ಸ್) ಪ್ರಾರಂಭಿಸಲಾಯಿತು.

ಸಹಕಾರ ಬೇಸಾಯ ಪದ್ಧತಿ

ಬದಲಾಯಿಸಿ

ಭಾರತದಲ್ಲಿ ಸಹಕಾರ ಬೇಸಾಯ ಪದ್ಧತಿಯ ಬೆಳವಣಿಗೆ ಕುಂಠಿತವಾಗಿರುವುದಕ್ಕೆ ಹಲವಾರು ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾದವು: 1 ಸಹಕಾರಿ ಬೇಸಾಯ ಸಂಘಕ್ಕೆ ರೈತ ತನ್ನ ಹಿಡಿತದಲ್ಲಿರುವ ಜಮೀನನ್ನು ಒಪ್ಪಿಸಲು ಇಷ್ಟಪಡುವುದಿಲ್ಲ. ಇದಕ್ಕೆ ಕಾರಣವೆಂದರೆ, ಅವನ ಜೀವನದ ಯಾವ ತುರ್ತುಪರಿಸ್ಥಿತಿಯಲ್ಲಾದರೂ ಅವನಿಗೆ ಏಕಮಾತ್ರ ರಕ್ಷಣೆಯಾಗಿರುವ, ಅವನ ಜೀವನೋಪಾಯದ ಆಸರೆಯಾಗಿರುವ ಭೂಮಿಗೆ ಅವನು ತುಂಬ ಅಂಟಿಕೊಂಡಿದ್ದಾನೆ. 2 ಹೆಚ್ಚು ಇಳುವರಿ ಪಡೆಯುವುದರಲ್ಲಿ ಈಗ ಇರುವ ಸಹಕಾರಿ ಬೇಸಾಯ ಸಂಘಗಳು ವಿಫಲವಾಗಿವೆ. ಉತ್ತಮ ಬೇಸಾಯಕ್ಕೆ ಈ ಸಂಘಗಳನ್ನು ನಿದರ್ಶನವಾಗಿಸಲಾಗದು. ಇವುಗಳ ಕಾರ್ಯದಕ್ಷತೆಯ ವಿಚಾರವಾಗಿ ತನಗೆ ಸಂಪೂರ್ಣ ನಂಬಿಕೆ ಬಂದ ಹೊರತು ಒಬ್ಬ ರೈತ ತನ್ನ ಜಮೀನಿನ ಅಧಿಕಾರವನ್ನು ಅಂದರೆ ಅದರ ಭವಿಷ್ಯವನ್ನು ಸಹಕಾರಿ ಬೇಸಾಯ ಸಂಘಕ್ಕೆ ಬಿಟ್ಟುಕೊಡಲು ಒಪ್ಪಲಾರ. ಆದ್ದರಿಂದ ಒಬ್ಬ ರೈತ ತನ್ನ ಜಮೀನನ್ನು ಒಂದು ಸಹಕಾರಿ ಬೇಸಾಯ ಸಂಘಕ್ಕೆ ಒಪ್ಪಿಸುವಂತೆ ಅವನನ್ನು ಪ್ರೇರೇಪಿಸಬೇಕಿದ್ದರೆ ಸಣ್ಣ ಬೇಸಾಯಗಾರನ ಕೃಷಿಕಾರ್ಯಕ್ಕಿಂತ ಅದು ಹೆಚ್ಚು ದಕ್ಷವಾಗಿರಬೇಕು. 3 ಸಹಕಾರಿ ಬೇಸಾಯ ಸ್ವಪ್ರೇರಣೆಯಿಂದ ಕೂಡಿರಬೇಕು. ತಾತ್ತ್ವಿಕವಾಗಿಯೇನೂ ಇದು ಸರಿ. ಆದರೆ ಪ್ರಾಯೋಗಿಕ ಅಂಶವನ್ನು ಗಮನಿಸಿದಾಗ ಎಲ್ಲ ರೈತರೂ ಸ್ವಪ್ರೇರಣೆಯಿಂದ ಒಟ್ಟಿಗೆ ಸೇರುವುದಿಲ್ಲವಾದ ಕಾರಣ ಸಹಕಾರಿ ಬೇಸಾಯ ಸಂಘವನ್ನು ಸ್ಥಾಪಿಸುವುದು ಸುಲಭವಾಗುತ್ತಿಲ್ಲ. 4 ಸಹಕಾರಿ ಬೇಸಾಯ ಕ್ರಮ ಲಾಭದಾಯಕವಾಗಿಲ್ಲದ ಹಿಡುವಳಿಯ ಸಮಸ್ಯೆಗೆ ಏಕೈಕ ಪರಿಹಾರ ಮಾರ್ಗ-ಎನ್ನುವವರಿದ್ದಾರೆ. ಇದು ನಿಜವಾಗಬೇಕಾದರೆ ಆರ್ಥಿಕವಲ್ಲದ ಹಿಡುವಳಿಗಳು ಅಕ್ಕಪಕ್ಕದಲ್ಲೇ ಇರಬೇಕು. ಆದರೆ ಪರಿಸ್ಥಿತಿ ಹೀಗಿಲ್ಲ. ಇದಲ್ಲದೆ ಇಳುವರಿಯನ್ನು ಹಂಚಿಕೊಳ್ಳಲು ಯಾವ ತೃಪ್ತಿಕರವಾದ ಉಪಾಯವನ್ನೂ ಕಂಡು ಹಿಡಿದಿಲ್ಲ. ವ್ಯವಸಾಯ ಕ್ಷೇತ್ರದಲ್ಲಿ ಅನೇಕ ವೇಳೆಗಳಲ್ಲಿ ಭೂಮಿಯ ವಿಸ್ತಾರಕ್ಕೂ ಇಳುವರಿಗೂ ಪರಸ್ಪರ ಸಂಬಂಧವಿಲ್ಲವೆಂಬುದು ಗಮನಿಸಬೇಕಾದ ವಿಚಾರ. 5 ಈ ಎಲ್ಲ ಅಂಶಗಳಿಗಿಂತ ಹೆಚ್ಚಾಗಿ, ಸಹಕಾರ ಬೇಸಾಯವೆಂಬುದು ಅತ್ಯಂತ ದೊಡ್ಡ ಮಟ್ಟದ ಸಹಕಾರಕಾರ್ಯ. ಆದ್ದರಿಂದ ಸಹಕಾರ ಬೇಸಾಯ ಸಾಧ್ಯವಾಗಬೇಕಾದರೆ ಸಹಕಾರದ ಉಳಿದ ಅಂಶಗಳಾದ ಸಹಕಾರ ಉದ್ದರಿ, ಮಾರಾಟ ಸಹಕಾರ, ಸೇವಾ ಸಹಕಾರ ಮುಂತಾದುವು ಸಾಕಷ್ಟು ಅಭಿವೃದ್ಧಿ ಹೊಂದಬೇಕು.[]

ಸಹಕಾರ ಪದ್ಧತಿಯ ಬೆಳವಣಿಗೆ

ಬದಲಾಯಿಸಿ

ಈಗಿನ ಪರಿಸ್ಥಿತಿಯಲ್ಲಿ ಸಹಕಾರ ಪದ್ಧತಿಯ ಬೆಳವಣಿಗೆ ಅಷ್ಟೊಂದು ಆಶಾದಾಯಕವಾಗಿ ತೋರುವುದಿಲ್ಲ. ಇದನ್ನು ಆಚರಣೆಗೆ ತರುವಲ್ಲಿ ಇರುವ ವ್ಯಾವಹಾರಿಕ ಕಷ್ಟಗಳಿಂದಾಗಿ ಸಹಕಾರ ಬೇಸಾಯ ಪದ್ಧತಿ ಮಾತ್ರವಲ್ಲದೆ, ಉದ್ದರಿ, ಮಾರಾಟ ಮತ್ತು ಸೇವಾ ಸಹಕಾರ ಸಂಸ್ಥೆಗಳು ತಮ್ಮ ಪ್ರಯತ್ನಗಳಲ್ಲಿ ಸಾಫಲ್ಯ ಗಳಿಸಿಲ್ಲ. ಆದರೆ ಅವು ಸಫಲತೆಯನ್ನು ಸಾಧಿಸಬೇಕಾಗಿದೆ. ಏಕೆಂದರೆ ಸಹಕಾರ ಚಳವಳಿ ವಿಫಲವಾದರೆ ಹಳ್ಳಿಗಳಿಂದ ಕೂಡಿದ ಭಾರತದ ಭವಿಷ್ಯತ್ತಿನ ಆಶೆಯೇ ನಷ್ಟವಾದಂತೆ. ಕೃಷಿ ಅಭಿವೃದ್ಧಿ ಸಹಕಾರದಿಂದ ಸಾಧ್ಯ. ಅದರಿಂದ ರೈತನ ಏಳಿಗೆ ಮಾತ್ರವಲ್ಲದೆ ದೇಶದ ಅಭ್ಯುದಯಕ್ಕೆ ಭದ್ರ ತಳಹದಿಯನ್ನು ಹಾಕಿದಂತೆ ಆಗುತ್ತದೆ. ಕೃಷಿರಂಗದಲ್ಲಿ ಸಹಕಾರ ಪದ್ಧತಿಯ ಪೂರ್ಣ ಫಲ ದೊರೆಯಲು ದೀರ್ಘಕಾಲ ಬೇಕಾಗುತ್ತದೆ. ಆದರೂ ಅದು ಯಶಸ್ವಿಯಾಗುವಂತೆ ಪ್ರಯತ್ನಿಸುವುದು ಅಗತ್ಯ.ಇದು ಜನತೆಯ ಸಹಕಾರ ಆಂದೋಲನವಾಗದೆ ಬಹುಪಾಲು ಸರ್ಕಾರದ ಆಂದೋಲನವಾಗಿಯೇ ಇನ್ನೂ ಉಳಿದಿದೆ. ದೇಶದ ಪ್ರಜೆಗಳಲ್ಲಿ ಸ್ವಾವಲಂಬನೆ, ಸ್ವಯಂಪ್ರೇರಣೆ, ಸಮನ್ವಯ, ನಿಸ್ವಾರ್ಥತೆ, ಪ್ರಾಮಾಣಿಕತೆ, ಮುಂದಾಳುತನ ಇವುಗಳ ಕೊರತೆಯನ್ನು ನಿವಾರಿಸಿದಲ್ಲಿ ಕೃಷಿರಂಗದಲ್ಲಿ ಅಬಾಧಿತವಾಗಿ ಪ್ರಗತಿಪರ ರೀತಿಯಲ್ಲಿ ಗ್ರಾಮಾಂತರ ಜನರ ಏಳ್ಗೆಗೆ ಸಹಕಾರ ಸಹಾಯವಾಗಬಲ್ಲುದು.

ಉಲ್ಲೇಖಗಳು

ಬದಲಾಯಿಸಿ