ಕುಮಾರದೇವ ತಮಿಳು ನಾಡಿನಲ್ಲಿದ್ದು ಶೈವಪಂಥವನ್ನು ಪ್ರಬಲಗೊಳಿಸಿದ ಕನ್ನಡಿಗ. ಬೋಧಕನೂ ಲೇಖಕನೂ ಆಗಿ ಪ್ರಸಿದ್ಧನಾಗಿದ್ದಾನೆ. ಈತನ ಪೂರ್ಣ ಹೆಸರು ಕುಮಾರದೇವ ಶಿವಪ್ರಕಾಶ. ಪೂರ್ವಜನ್ಮ ಸುಕೃತದಿಂದ ಶಿವತತ್ತ್ವದ ಪರಮ ಅನುಭವವನ್ನು ಸಹಜವಾಗಿಯೇ ಪಡೆದ ಅನಂತರ ಔಪಚಾರಿಕ ರೀತಿಯಲ್ಲಿ ಶಿವದೀಕ್ಷೆಯನ್ನು ಸ್ವೀಕರಿಸಿ ಕುಮಾರದೇವ ಶಿವಪ್ರಕಾಶನೆಂದು ಲೋಕದಲ್ಲಿ ಪ್ರಸಿದ್ದನಾಗಿದ್ದಾನೆ. ತಮಿಳುನಾಡಿಗೆ ಮತ್ತು ತಮಿಳುನಾಡಿನ ಆಧ್ಯಾತ್ಮ ಪರಂಪರೆಗೆ ಕನ್ನಡ ನಾಡು ನೀಡಿದ ಮಹಾ ಕಾಣಿಕೆಯೇ ಕುಮಾರದೇವನೆನ್ನಬಹುದು. ಕನ್ನಡಿಗನಾದರೂ ಈತನ ಜೀವನ ವಿಚಾರ ಕನ್ನಡಿಗರಿಗೇ ಹೆಚ್ಚಾಗಿ ತಿಳಿದಿಲ್ಲ. ಈತನ ಕಾಲದ ವಿಚಾರವಾಗಿ ನಿರ್ದಿಷ್ಟವಾಗಿ ತಿಳಿದುಬರುವುದಿಲ್ಲವಾದರೂ ಕುಮಾರದೇವನಿಂದಲೇ ರಚಿತವಾದ ಮಹಾರಾಜ ತುರುವು (ಮಹಾರಾಜನ ಕಥೆ) ಎಂಬ ಗ್ರಂಥದಿಂದ ಈತ ಹದಿನೇಳನೆಯ ಶತಮಾನಕ್ಕೆ ಸೇರಿದವನೆಂದು ಗೊತ್ತು ಮಾಡಬಹುದು. ಈ ಗ್ರಂಥದ ಸಹಾಯದಿಂದಲೇ ಈತನ ಜೀವನ ವೃತ್ತಾಂತ ನಮಗೆ ತಿಳಿದು ಬರುತ್ತದೆ.

ಜೀವನ ಬದಲಾಯಿಸಿ

ಕನ್ನಡ ನಾಡಿನ ಪೂರ್ವ ಭಾರತದಲ್ಲಿ ಈತ ರಾಜನಾಗಿದ್ದವ. ಆದರೆ ವೈರಾಗ್ಯ ಪ್ರವೃತ್ತಿಯಿಂದ ತನ್ನ ರಾಜ್ಯ, ಜನ ಮತ್ತು ಆತ್ಮಬಂಧುಗಳು-ಎಲ್ಲರನ್ನೂ ಬಿಟ್ಟು ತಮಿಳು ದೇಶಕ್ಕೆ ಹೋಗಿ ಆಗ್ಗೆ ಪ್ರಖ್ಯಾತರಾಗಿದ್ದ ಪೆರೂರು ಮಠದ ಸ್ವಾಮಿಗಳ ಸನ್ನಿಧಿಗೆ ಅಧ್ಯಾತ್ಮ ಭಿಕ್ಷೆಗಾಗಿ ಹೋಗುತ್ತಾನೆ.[೧] ಮಠದ ಅಧಿಪತಿಗಳಾದ ಶಾಂತಲಿಂಗ ಸ್ವಾಮಿಗಳು ತತ್ತ್ವಾರ್ಜನೆಗಾಗಿ ತಮ್ಮಲ್ಲಿಗೆ ಬಂದವರನ್ನು ಸೂಕ್ಷ್ಮದೃಷ್ಟಿಯಿಂದ ಪರಿಶೀಲಿಸಿ ಅನಂತರ ಶಿಷ್ಯನನ್ನಾಗಿ ಪರಿಗ್ರಹಿಸತಕ್ಕವರಾದುದರಿಂದ ಬಹಿರಂಗವಾಗಿ ಕುಮಾರದೇವನನ್ನು ಅಲಕ್ಷಿಸಿದಂತೆ ಕಂಡುಬಂದರೂ ಈತನ ತತ್ತ್ವ ಮತ್ತು ಜ್ಞಾನ ನಿಷ್ಟೆಗಳನ್ನು ಅಳೆಯಲು ತೊಡಗಿದರು. ಶಿಷ್ಯ ಗುರುಸೇವಾವೃತ್ತಿಯಲ್ಲಿ ನಿಂತ. ಗುರುಕುಲದ ಗೋಸಂವರ್ಧನಕಾರ್ಯ ಈತನ ಪಾಲಿಗೆ ಬಂತು. ಹುಲ್ಲು ತರುವಲ್ಲಿ ಒಮ್ಮೆ ಕತ್ತಿಯಿಂದ ತನ್ನ ಕೈಯನ್ನು ಗಾಯಪಡಿಸಿಕೊಂಡನಾದರೂ ಕುಮಾರದೇವ ಕಾರ್ಯತತ್ಪರನಾಗಿ ಗುರುಶುಶ್ರೂಷೆಗೆ ಭಂಗತರದಂತೆ ನಡೆದುಕೊಂಡ. ಹೀಗೆ ಅನೇಕ ಕಷ್ಟಕರವಾದ ಪರೀಕ್ಷೆಗಳಿಗೆ ಒಳಪಟ್ಟು ಗುರುಗಳ ಪ್ರೇಮಕ್ಕೆ ಪಾತ್ರನಾದ.

ಮತ ಬದಲಾಯಿಸಿ

ತನ್ನ ಗುರುವಿನ ಆದೇಶದಂತೆ ಚಿದಂಬರನೆಂಬ ಭಕ್ತನಿಗೆ ಕುಮಾರದೇವ ಶೈವ ಮತವನ್ನು ಉಪದೇಶ ಮಾಡಿದ.[೨] ಚಿದಂಬರ ಕೆಲಕಾಲಾನಂತರ ಚಿದಂಬರ ಸ್ವಾಮಿಯಾಗಿ ಮದ್ರಾಸಿನ ಹತ್ತಿರವಿರುವ ತಿರಪ್ಪರೂರ್ ಮಠದ ಪೀಠಸ್ಥನಾಗಿ ಪ್ರಸಿದ್ಧನಾದ.

ಕುಮಾರದೇವ ತನ್ನ ಹೆಚ್ಚಿನ ಯೋಗಸಾಧನೆಯನ್ನು ವೃದ್ಧಾಚಲದಲ್ಲಿ ನಡೆಸಿದ. ದೇವಿ ಪೆರಿಯನಾಯಕಿ ಈತನ ಕನಸಿನಲ್ಲಿ ಕಾಣಿಸಿಕೊಂಡು ಶೈವಮತದ ಅನೇಕ ನಿಗೂಢ ತತ್ತ್ವಗಳನ್ನು ಬೋಧಿಸಿ ಅದನ್ನು ಪ್ರಕಟಿಸಲು ಪ್ರೇರೇಪಿಸಿದಳು. ಆಕೆ ಸ್ವತಃ ಭೋದಿಸಿದ ತತ್ವಗಳನ್ನು ಪ್ರಕಟಗೊಳಿಸಲು ತನ್ನ ಅಲ್ಪಮತಿಗೆ ಅಸಾಧ್ಯವಾಗುತ್ತದೆಂದು ಕುಮಾರ ಬಿನ್ನವಿಸಿಕೊಂಡಾಗ, ಸುಪ್ರಸನ್ನಳಾದ ದೇವಿ ಕುಮಾರನ ಕಾರ್ಯಮುಗಿಯುವವರೆಗೂ ಆತನ ನಾಲಗೆಯಲ್ಲೇ ನಿಲ್ಲುವೆನೆಂದು ಅಭಯ ನೀಡಿದಳು. ಹೀಗೆ ಆ ದೇವಿಯ ಪೂರ್ಣ ಅನುಗ್ರಹಕ್ಕೆ ಪಾತ್ರನಾದ ಈ ಶೈವಭಕ್ತ ಶಿಖಾಮಣಿ ಹದಿನಾಲ್ಕು ಶೈವತತ್ತ್ವ ಪರವಾದ ಶಾಸ್ತ್ರಗ್ರಂಥಗಳನ್ನು ತಮಿಳಿನಲ್ಲಿ ಅಭಿವ್ಯಕ್ತಗೊಳಿಸಿದ. ಜೊತೆಗೆ ಆ ನಿಗೂಢ ತತ್ತ್ವದಲ್ಲಿ ಶಿಷ್ಯರಿಗೆ ಉಪದೇಶ ಕೊಟ್ಟ.

ಕನ್ನಡ ನಾಡಿನ ವಿಶಿಷ್ಟ ಧರ್ಮವಾದ ವೀರಶೈವ ಮತವನ್ನು ತಮಿಳುನಾಡಿನಲ್ಲಿ ಎತ್ತಿಹಿಡಿದ ಸಂದರ್ಭವೊಂದೇ ಅಲ್ಲದೆ,[೩] ಅದಕ್ಕೆ ಕಾರಣಭೂತನಾದವನೂ ಕನ್ನಡಿಗನಾದ ಕುಮಾರದೇವನೇ ಆಗಿದ್ದಾನೆ ಎನ್ನುವ ಅಂಶ ಗಮನಾರ್ಹವಾದುದು. ಅಧ್ಯಾತ್ಮದ ಮೇರು ಶಿಖರವನ್ನು ಏರಿದ ಈ ಮಹಾಮಹಿಮನ ಶೈವಧರ್ಮ ಪ್ರಬೋಧಕ ಕೃತಿಗಳು ವ್ಯಾಸಂಗಾರ್ಹವೆನಿಸಿವೆ.

ಮಠ ಬದಲಾಯಿಸಿ

ಉಪದೇಶ ಪಡೆದ ಚಿದಂಬರ ಸ್ವಾಮಿ ಗುರುವಿನ ಸ್ಮರಣೆಗಾಗಿ ವೃದ್ಧಾಚಲದಲ್ಲಿ ಒಂದು ಮಠವನ್ನು ಸ್ಥಾಪಿಸಿದ. ಅದು ಈಗಲೂ ಕುಮಾರದೇವ ಮಠ ಎಂದು ಪ್ರಸಿದ್ಧವಾಗಿದೆ. ಈ ಮಠ ಅಲ್ಲಿನ ಪವಿಮಲೈನಾದರ್ ದೇವಸ್ಥಾನದ ಹತ್ತಿರವಿದೆ. ಕುಮಾರದೇವ ಆ ಮಠದಲ್ಲಿಯೇ ಬಹಳ ಕಾಲ ಯೋಗಸಮಾಧಿಯಲ್ಲಿದ್ದು ಅಲ್ಲಿಯೇ ಶಿವೈಕ್ಯನಾದ, ಆತನ ಸಮಾಧಿ ಇಂದಿಗೂ ಶ್ರದ್ಧಾಳುಗಳಿಗೆ ಶಿವಸ್ಫೂರ್ತಿಯನ್ನು ನೀಡುತ್ತ ಆಧ್ಯಾತ್ಮಿಕ ಸಾಧನೆಗಳಿಗೆ ಪೋಷಕವಾಗಿದೆ.

ಕುಮಾರದೇವ ಮದ್ರಾಸು ಪ್ರಾಂತ್ಯಕ್ಕೆ ಬಂದಾಗ ಮೈಲಾಪುರವೆಂಬಲ್ಲಿ ತನ್ನ ಮಠದ ಒಂದು ಕವಲನ್ನು ಸ್ಥಾಪಿಸಿದ. ಈ ಮಠದಲ್ಲಿ ಈಗ ಶ್ರೀಸುಬ್ರಹ್ಮಣ್ಯ ಶಿವಪ್ರಕಾಶ ಸ್ವಾಮಿಗಳು ಪರಂಪರೆಯಲ್ಲಿ ೨೧ ನೆಯ ಗುರುಗಳಾಗಿ ಪೀಠಸ್ಥರಾಗಿದ್ದಾರೆ (೧೯೪೨)

ಕೃತಿ ಮತ್ತು ಗ್ರಂಥಗಳು ಬದಲಾಯಿಸಿ

ಕುಮಾರದೇವನಿಂದ ರಚಿತವಾದ ಕೃತಿಗಳು ಹದಿನೈದು. ಅವುಗಳಲ್ಲಿ ಮುಖ್ಯವಾದವು ಶುದ್ಧ ಶತಕ ಮತ್ತು ಅದ್ವೈತ ಉನ್ಮೈ ಎನ್ನುವ ಗ್ರಂಥಗಳು. ಶ್ರೀಸುಬ್ರಹ್ಮಣ್ಯ ಶಿವಪ್ರಕಾಶ ಸ್ವಾಮಿಗಳು ಕುಮಾರದೇವನ ಶುದ್ಧ ಶತಕ ಮತ್ತು ವೃದ್ಧಾಚಲ ಪುರಾಣಗಳನ್ನು ಇಂಗ್ಲಿಷಿಗೆ ಭಾಷಾಂತರ ಮಾಡಿಸುತ್ತಿದ್ದಾರೆ. ಮದ್ರಾಸಿನ ತಮಿಳು ವಿದ್ವಾಂಸರೂ ಶೈವಸಿದ್ದಾಂತದಲ್ಲಿ ಉನ್ನತ ಪಾಂಡಿತ್ಯವನ್ನು ಪಡೆದಿರುವವರೂ ಆದ ರಾವ್ ಬಹದ್ದೂರ್ ಶ್ರೀ ಮುರುಗೇಶ ಮೊದಲಿಯಾರ್ ಎನ್ನುವವರು ಮೇಲಿನ ಗ್ರಂಥಗಳನ್ನು ಭಾಷಾಂತರಗೊಳಿಸಿ ಪ್ರಕಾಶಕ್ಕೆ ಸಿದ್ಧಗೊಳಿಸಿದ್ದಾರೆ.

ಕುಮಾರದೇವನ ಗ್ರಂಥಗಳ ವಿವರ ಹೀಗಿದೆ; ಮಹಾರಾಜ ತುರವು, ಶುದ್ದ ಶತಕಮ್, ವಿಜ್ಞಾನಸಾರಂ, ಅದ್ವೈತ ಉನ್ಮೈ, ಬ್ರಹ್ಮಾನುಭೂತಿ ವಿಲಕ್ಕಂ, ಜ್ಞಾನ ಅಮ್ಮಗೈ, ದಶಾವಸ್ಥೈ ಕಟ್ಟಳೈ, ದಶಾಕಾರ್ಯೈ ಕಟ್ಟಳೈ, ಸಿದ್ಧಾಂತ ಕಟ್ಟಳೈ, ಸಹಜನಿಷ್ಠೈ, ಬ್ರಹ್ಮಸಿದ್ಧಿ ಆಹವಳ್, ಶಿವದರ್ಶನ ಆಹವಳ್, ಆಗಮನೇರಿ ಆಹವಳ್, ವೇದನೇರಿ ಆಹವಳ್, ಬ್ರಹ್ಮಾನುಭವ ಆಹವಳ್, ಶಿವಸಮರಸವಾದ ಆಹವಳ್-ಮುಂತಾದವು ಮುಖ್ಯವಾದುವು. ಇವುಗಳಲ್ಲಿ ಮೊದಲನೆಯದು ಶ್ರೀ ಕುಮಾರದೇವನ ಆತ್ಮಕಥನ. ಮಹಾರಾಜನಾಗಿದ್ದವ ಇಹಜೀವನವನ್ನು ತೊರೆದು ಪಾರಮಾರ್ಥಿಕ ಸತ್ಯವನ್ನು ಅರಸುತ್ತ ಸಾರ್ಥಕ್ಯವನ್ನುಗಳಿಸಿ ಲೋಕಕ್ಕೆ ಆಧ್ಯಾತ್ಮ ಮಾರ್ಗದರ್ಶನ ನೀಡಿದ ಕುಮಾರದೇವನ ಕಥೆ ಇಲ್ಲಿದೆ. ಮಿಕ್ಕಿದ್ದೆಲ್ಲವೂ ಶೈವಮತಕ್ಕೆ ಸಂಬಂಧಪಟ್ಟಂತೆ ವೃದ್ಧಾಚಲದೇವಿಯ ಕೃಪೆಯಿಂದ ಬಂದ ಗ್ರಂಥಗಳು. ಕುಮಾರದೇವನಿಂದ ರಚಿತವಾದ ಆರು ಆಹವಳ್ ಗ್ರಂಥಗಳು ವೀರಶೈವ ಮತದ ವಿವಿಧ ಅಂಶಗಳನ್ನು ವಿವರಿಸುತ್ತವೆ. ಪಂಡಿತರ ಅಭಿಪ್ರಾಯದಲ್ಲಿ ಎಲ್ಲ ಗ್ರಂಥಗಳಿಗೂ ಮಕುಟಪ್ರಾಯವಾಗಿರುವುದೆಂದರೆ ಶುದ್ಧ ಶತಕ. ತತ್ತ್ವಜ್ಞಾನಿಯಾದ ಕುಮಾರದೇವ ಭಕ್ತಾಗ್ರೇಸರನೂ ಆಗಿದ್ದ. ಇದಕ್ಕೆ ನಿದರ್ಶನ ಪೆರಿಯ ನಾಯಕಿ ಆಮ್ಮನ್ ಪಾದುಕಂ ಎನ್ನುವ, ಭಕ್ತಿ ರಸಪೂರ್ಣ ಮತ್ತು ತಾತ್ತ್ವಿಕದರ್ಶನವನ್ನು ಒಳಗೊಂಡ, ದಶಶ್ಲೋಕಗಳು.


ಉಲ್ಲೇಖಗಳು ಬದಲಾಯಿಸಿ

  1. gk, mpsc. "ಗಂಗರು". https://mympsc.com (in ಇಂಗ್ಲಿಷ್). Retrieved 11 January 2020. {{cite web}}: External link in |website= (help)
  2. "Shaiva-siddhanta | Hindu philosophy". Encyclopedia Britannica (in ಇಂಗ್ಲಿಷ್). Retrieved 11 January 2020.
  3. "ವೀರಶೈವ, ಲಿಂಗಾಯತ ಬೇರೆಯಲ್ಲ : ಶಾಮನೂರು ಶಿವಶಂಕರಪ್ಪ". Prajavani (in ಇಂಗ್ಲಿಷ್). 16 August 2019. Retrieved 11 January 2020.